
ಯುವಜನರು, ಮರಮರದಲ್ಲು ಹಕ್ಕಿಗಳು
-ಎಲ್ಲ ಸಾವಕೊಂಬ ಸಂತಾನಗಳೆ-ತಂತಮ್ಮ ಹಾಡುಗಳಲ್ಲಿ
ಸಾಲ್ಮ್ ಪಾತಗಳು, ಮ್ಯಕರೆಲ್ ಗಿಜಿಗುಟ್ಟುವ ಸಮುದ್ರಗಳು
ಭೂ, ಜಲ, ಜಂತುಗಳು ಇಡೀ ಗ್ರೀಷ್ಮ ಸ್ತುತಿಸುವುದು ಮುದದಲ್ಲಿ
ಪಡುವುದನ್ನು, ಹುಟ್ಟುವುದನ್ನು, ಸಾಯುವುದನ್ನು...
ಹೀಗೆ ಅನುವಾದಗೊಂಡದ್ದು ಯೇಟ್ಸನ ಸೈಲಿಂಗ್ ಟು ಬೈಜಾಂಟಿಯಂ ಎಂಬ ಪದ್ಯ. ಅನುವಾದಿಸಿದವರು ಯು. ಆರ್. ಅನಂತಮೂರ್ತಿ. ಇಂಥ ಪದ್ಯಗಳು ಅರ್ಥವಾಗುವುದಿಲ್ಲ ಎಂದಾಗ ನವ್ಯದ ಎಲ್ಲ ಕವಿಗಳೂ ಒಕ್ಕೊರಲಿನಿಂದ ಹೇಳಿದ್ದಿಷ್ಟೇ. ಪದ್ಯ ಓದುವುದಕ್ಕೂ ಸಿದ್ಧತೆ ಬೇಕು. ಹೀಗಾಗಿ ಪದ್ಯ ಬಗೆಯುವ ಬಗೆ ಎಂಬ ಅಂಕಣ ಶುರುವಾಯಿತು. ಒಂದು ಪದ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಪುಸ್ತಕಗಳು ಬಂದವು. ಅಲ್ಲಿ ಅಂಡರ್ಸ್ಟಾಂಡಿಂಗ್ ಪೊಯೆಟ್ರಿ ಅಂತ ಬರೆದಾಗ ಇಲ್ಲೂ ಅಂಥದ್ದೇನೋ ಬಂತು.
ಮೇಲಿನ ಇಂಗ್ಲಿಷ್ ಪದ್ಯದ ಮೂಲ ಸಾಲುಗಳನ್ನೇ ಓದಿ;
That is no country for old men. The young
In one another's arms, birds in the trees
The salmon falls, the mackerel-crowded seas,
Fish, Flesh or fowl, commend all summer long
whatever is begotten, born and dies.
ಇಂಗ್ಲಿಷ್ ಬಲ್ಲವರಿಗೆ ಇವತ್ತಿಗೂ ಇಂಗ್ಲಿಷೇ ಸುಲಭ. ಇಂಗ್ಲಿಷ್ ತಿಳಿಯದವರಿಗೆ ಅದು ಕನ್ನಡ ಅನುವಾದದಲ್ಲೂ ತಿಳಿಯದು. ಹಾಗಿದ್ದೂ ಅಂಥ ಅನುವಾದದ ಪ್ರಯತ್ನಗಳು ತುಂಬ ಗಂಭೀರವಾಗಿಯೇ ನಡೆದವು.
ಕಾವ್ಯದ ಅನುವಾದ ಕಷ್ಟ ಅನ್ನುವುದಕ್ಕೆ ಅನೇಕ ಕಾರಣಗಳನ್ನು ಕೊಡಬಹುದು. ಎಕೆ ರಾಮಾನುಜ್ ಕೂಡ ಕೂಡಲ ಸಂಗಮ ಅನ್ನುವುದನ್ನು God of meeting rivers ಎಂದು ಅನುವಾದಿಸಿ ನಗೆಪಾಟಲು ಮಾಡಿದ್ದರು. ನಮ್ಮ ಭಾವಗೀತೆಗಳನ್ನು ಕೂಡ ಅನುವಾದಿಸುವುದು ಕಷ್ಟವೇ. ಯಾಕೆಂದರೆ ಕವಿತೆ ಒಂದು ಮಣ್ಣಿನ ಗುಣವನ್ನು ಮೈಗೂಡಿಸಿಕೊಂಡು ಅರಳಿರುತ್ತೆ. ನಮ್ಮ ಸಂಪ್ರದಾಯ, ತಿಳುವಳಿಕೆ, ನೆನಪು, ಗ್ರಹಿಕೆ ಮತ್ತು ಆಚಾರವಿಚಾರಗಳ ಜೊತೆಗೇ ಕವಿತೆ ಹುಟ್ಟುತ್ತದೆ. ತೀರಾ ಸರಳವಾದ `ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು, ಬಳೆಯ ತೊಡಿಸುವುದಿಲ್ಲ ನಿಮಗೆ' ಎಂಬ ಸಾಲನ್ನು ಇಂಗ್ಲಿಷಿಗೆ ಅನುವಾದಿಸಿದರೆ ಅವರಿಗೆ ಏನು ಅರ್ಥವಾಗುತ್ತದೆ. ಯಾವತ್ತೂ ಬಳೆಯನ್ನೇ ತೊಡದವರು, ಬಳೆಗಾರ ಗಂಡಸಿಗೆ ಬಳೆ ತೊಡಿಸುವುದಿಲ್ಲ ಎಂಬ ಸಾಲಿನ ಹಿಂದಿನ ಗೇಲಿಯನ್ನೋ ನವಿಲೂರ ಮನೆಯಿಂದ ತಂದ ನುಡಿಯನ್ನೋ ಹೇಗೆ ಗ್ರಹಿಸುತ್ತಾರೆ. ಹಾಗೇ ಯೇಟ್ಸ್ ಮತ್ತು ಕೀಟ್ಸ್ ಕೂಡ. ಅಲ್ಲಿಯ ಕಾವ್ಯವನ್ನು ಅಲ್ಲಿಗೆ ಒಪ್ಪುವಂತೆ ಸವಿಯಬೇಕು. ಅನುವಾದಿಸುವುದಕ್ಕೇ ಹೋಗಬಾರದು. ಎಲ್ಲೋ ಒಂದೆರಡು ಎಲ್ಲರಿಗೂ ಒಪ್ಪುವ ಸಾಲುಗಳು ಇಷ್ಟವಾದರೆ ಸಂತೋಷಪಡಬೇಕು.
ಅದರಲ್ಲೂ ಕನ್ನಡದಿಂದ ಬೇರೆ ಭಾಷೆಗೆ ಅನುವಾದಿಸುವುದಕ್ಕೆ ಕಷ್ಟವಾಗುವ ಪದ್ಯಗಳೆಂದರೆ ದಾಸರವು.
ಇದೊಂದು ಕೀರ್ತನೆಯನ್ನೇ ನೋಡಿ;
ಶೃಂಗಾರವಾಗಿಹುದು ಶ್ರೀಹರಿಯ ಮಂಚ
ಅಂಗನೆ ರುಕ್ಮಿಣಿಯರಸ ಮಲಗಿರುವ ಮಂಚ
ಬಡಗಿ ಮುಟ್ಟದ ಮಂಚ ಕಡಲಿನೊಳಗಿನ ಮಂಚ
ಮೃಡನ ತೋಳಿನಲಿ ಅಡಗಿರುವ ಮಂಚ
ಸಡಗರವುಳ್ಳ ಮಂಚ ಹೆಡೆಯುಳ್ಳ ಹೊಸ ಮಂಚ
... ಹೀಗೆ ಸಾಗುತ್ತದೆ ಈ ಗೀತೆ. ಇದನ್ನು ಯಾರಾದರೂ ಇಂಗ್ಲಿಷಿಗೆ ಫ್ರೆಂಚಿಗೂ ಅನುವಾದಿಸಿದರೆ ಅಲ್ಲಿಯ ಓದುಗನಿಗೆ ಏನಾದರೂ ದಕ್ಕುವುದಕ್ಕೆ ಸಾಧ್ಯವೇ? ಎಷ್ಟೇ ಟಿಪ್ಪಣಿಗಳನ್ನು ಕೊಟ್ಟರೂ ಈ ಕಲ್ಪನೆ ಮೂಡುವುದಕ್ಕೆ ಸಾಧ್ಯವೇ?
ಈ ಒಂದೇ ಒಂದು ಹಾಡು ಹತ್ತಾರು ಕತೆಗಳನ್ನು ಹೇಳುತ್ತದೆ ಅನ್ನುವುದನ್ನು ಗಮನಿಸಿ. ಪಲ್ಲವಿಯಲ್ಲೇ ಇದು ಅಂಗನೆ ರುಕ್ಮಿಣಿಯರಸ ಅನ್ನುವಲ್ಲಿ, ಶ್ರೀಹರಿಯ ಪತ್ನಿ ರುಕ್ಮಿಣಿ ಅನ್ನುತ್ತದೆ. ಅಲ್ಲಿಗೆ ಕೃಷ್ಣಾವತಾರದ ಕತೆ ಗೊತ್ತಿಲ್ಲದವರಿಗೆ ರುಕ್ಮಿಣಿಯೇ ಲಕ್ಪ್ಮಿ ಅನ್ನುವುದು ಗೊತ್ತಾಗುವುದು ಸಾಧ್ಯವಿಲ್ಲ. ಅಲ್ಲಿಂದ ಮುಂದೆ ಬಡಗಿ ಮುಟ್ಟದ ಮಂಚ ಎನ್ನುವುದನ್ನು ಅರ್ಥಮಾಡಿಕೊಂಡರೂ ಹಾಲಿನ ಸಮುದ್ರದಲ್ಲಿ ವಿಷ್ಣು ಮಲಗಿರುತ್ತಾನೆ ಎನ್ನುವ ಕಲ್ಪನೆ ಇಲ್ಲದವರಿಗೆ ಕಡಲಿನೊಳಗಿಹ ಮಂಚ ಎಂಬ ಸಾಲು ಗ್ರಹಿಕೆಗೆ ನಿಲುಕದ್ದು. ಶಿವ ತೋಳಿಗೆ ಹಾವನ್ನು ಸುತ್ತಿಕೊಂಡಿರುತ್ತಾನೆ ಅನ್ನೋದು ಗೊತ್ತಾಗದ ಹೊರತು ಮೃಡನ ತೋಳಿನಲಿ ಅಡಗಿರುವ ಮಂಚ ಎಂಬುದರ ಗೂಢಾರ್ಥ ಅರಿವಾಗದು. ಮತ್ತೆ ಈಶ್ವರನನ್ನು ಮೃಡ ಎಂದೇಕೆ ಕರೆಯುತ್ತಾರೆ ಅನ್ನುವುದಕ್ಕೆ ಮತ್ತೊಂದು ಕತೆ ಕೇಳಬೇಕಾಗುತ್ತದೆ.
ಇನ್ನೂ ಮುಂದಕ್ಕೆ ಓದುತ್ತಿದ್ದಂತೆ ಮತ್ತೊಂದೊಂದೇ ಕತೆಗಳು ಎದುರಾಗುತ್ತವೆ. ಕಾಳಗದೊಳರ್ಜುನನ ಮಕುಟ ಕೆಡಹಿದ ಮಂಚ ಎಂಬ ಸಾಲಿನಲ್ಲಿ ತಕ್ಪಕನ ಕತೆಯಿದೆ. ಅರ್ಜುನನ ಮಕುಟವನ್ನೇ ಅದ್ಯಾಕೆ ಕೆಡವಿತು ಅನ್ನುವುದು ಮತ್ತೊಂದು ಕತೆ.
ಕತೆಯನ್ನು ಅನುವಾದಿಸಬಹುದು. ನಾಟಕವನ್ನು ಮತ್ತೊಂದು ಭಾಷೆಗೆ ಅಳವಡಿಸಬಹುದು. ಕಷ್ಟಪಟ್ಟರೆ ಪ್ರಬಂಧವನ್ನೂ ನಮ್ಮದಲ್ಲದ ಭಾಷೆಯಿಂದ ತಂದು ಓದಿ ಸುಖಿಸಬಹುದು. ಆದರೆ ಕಾವ್ಯ ಮಾತ್ರ ಅದೇ ಭಾಷೆಯಲ್ಲಿ ಹುಟ್ಟಬೇಕು. ಅಷ್ಟೇ ಅಲ್ಲ, ಒಂದು ಭಾಷೆಯಲ್ಲಿ ಒಂದು ರೂಪದಲ್ಲಿ ಅರಳಿದ ಕವಿತೆಯನ್ನು ಮತ್ತೊಂದು ರೂಪದಲ್ಲಿ ಪ್ರಕಟಪಡಿಸುವುದೂ ಕಷ್ಟವೇ. ಮಂಕುತಿಮ್ಮನ ಕಗ್ಗವನ್ನೋ, ಅಂತಃಪುರಗೀತೆಯನ್ನೋ ಇನ್ನೊಂದು ಥರ ಬರೆಯಬಹುದಾ ಯೋಚಿಸಿ ನೋಡಿ!
ಸರ್ವಜ್ಞ ಬರೆದ ಮೂರು ಸಾಲಿನ ತ್ರಿಪದಿಗಳನ್ನು ಮತ್ತೊಂದು ಭಾಷೆಗೆ ಅನುವಾದಿಸಲಿಕ್ಕೆ ಹೊರಟರೆ ಎಂಥ ಅನಾಹುತವಾದೀತು ಯೋಚಿಸಿ;
ಬೆರೆವಂಗೆ ರೋಗವೂ ಮೊರೆವಂಗೆ ರಾಗವೂ
ಬರೆವಂಗೆ ಓದು- ಬರುವಂತೆ ಸಾಧಿಪಗೆ
ಬಾರದಿಹುದುಂಟೆ? ಸರ್ವಜ್ಞ.
ಉಂಡು ಕೆಂಡವ ಕಾಸಿ ಉಂಡು ಶತಪಥ ನಡೆದು
ಉಂಡೆಡದ ಮಗ್ಗುಲಲಿ ಮಲಗೆ ವೈದ್ಯನಾ
ಭಂಡಾಟವಿಲ್ಲ! ಸರ್ವಜ್ಞ.