Tuesday, May 8, 2007

ಕರಿಯವ್ವನ ಗುಡಿತಾವ ಅರಳ್ಯಾವೆ ಬಿಳಿಹೂವು..ದಾರೀಲಿ ನೆನೆದೆ ಕೈಹಿಡಿದೆ ನೀನು
ತಣ್ಣಗೆ ಅಂತ ನಾ ತಿಳಿದು
ಬಿಡಲೊಲ್ಲೆ ಇನ್ನೂನೂ ಬೂದಿ ಮುಚ್ಚೀದ
ಕೆಂಡ ಇದಂಥ ಹೊಳೆದು
ಮಗಿಲನ ಕತ್ತರಿಸಿ ನೆಲಕ ಬಿದ್ದರ
ನೆಲಕ ನೆಲಿ ಎಲ್ಲಿನ್ನ
ಆ ಗಾದಿ ಮಾತು ನಂಬಿ ನಾನು
ದೇವರಂಥ ತಿಳಿದಿಯೇನ ನೀ ನನ್ನ


ಆ ಹುಡುಗ ಉತ್ಸಾಹದಿಂದ ಹಾಡುತ್ತಿದ್ದ. ದನಿಯಲ್ಲಿ ಆರ್ದ್ರತೆಯೂ ಇತ್ತು, ವಿಷಾದವೂ ಇತ್ತು. ಅದನ್ನು ಮೀರಿದ ಅಬ್ಬರವಿತ್ತು. ಸತ್ತ ಮಗನನ್ನು ಎದುರಿಗೆ ಮಲಗಿಸಿಕೊಂಡು ಬೇಂದ್ರೆ ಬರೆದ ಪದ್ಯ ಅದು. ಅದನ್ನು ಅಷ್ಟೊಂದು ಅಬ್ಬರದಿಂದ ಹಾಡಬಾರದು ಅಂತ ಹೇಳಬೇಕೋ ಬೇಡವೋ ಗೊಂದಲವಾಯಿತು. ಪದ್ಯದ ಗುಣವೇ ಅದು. ಅದನ್ನು ಕವಿ ಯಾವ ಸ್ಥಿತಿಯಲ್ಲಿ ಬರೆದಿದ್ದಾನೆ ಅನ್ನೋದು ಓದುಗನಿಗೆ ಯಾಕೆ ಮುಖ್ಯವಾಗಬೇಕು. ಓದುಗ ತನ್ನ ಸ್ಥಿತಿಯ ಜೊತೆ ಅದನ್ನು ಹೋಲಿಸಿಕೊಂಡು, ತನ್ನ ಅವಸ್ಥೆಗೆ ಅದನ್ನು ಸಮೀಕರಿಸಿಕೊಂಡು ಹಾಡುತ್ತಾನೆ. ಹಾಗೆ ಹಾಡಿದ ತಕ್ಪಣವೇ ಅದು ನಮ್ಮ ಹಾಡಾಗುತ್ತದೆ. ಕಾಪಿರೈಟ್ ಕಾನೂನಿನ ಪ್ರಕಾರ ಅದರ ಹಕ್ಕು ಕವಿಯದ್ದೇ ನಿಜ. ಆದರೆ ಭಾವನಾತ್ಮಕವಾಗಿ ಅದು ನಮ್ಮ ಹಾಡೇ. ಹಾಗಾಗದೇ ಹೋದ ಎಷ್ಟೋ ಹಾಡುಗಳು ಕೇವಲ ಕವಿಯ ಹಾಡಷ್ಟೇ ಆಗಿ ಉಳಿದುಬಿಟ್ಟಿವೆ. ಲೋಕದ ಹಾಡಾಗದ ಹೊರತು ಏನು ಸುಖ?
ಮೇಲಿನ ಕವಿತೆಯಲ್ಲಿ ಬೇಂದ್ರೆ ಬರೆದ ಅರ್ಥವೇ ಬೇರೆ. ಆತ ಹಾಡುವಾಗ ಹೊಮ್ಮುತ್ತಿದ್ದ ಅರ್ಥವೇ ಬೇರೆ. ಬೇಂದ್ರೆ ಬರೆದದ್ದು ಹೀಗೆ;
ಧಾರೀಲೆ ನೆನೆದ ಕೈಹಿಡಿದೆ ನೀನು
ತಣ್ಣಗ ಅಂತನ ತಿಳಿದು
ಬಿಡವೊಲ್ಲಿ ಇನ್ನೂನು ಬೂದಿ ಮುಚ್ಚಿದ
ಕೆಂಡ ಇದಂತ ಹೊಳೆದು
ಮುಗಿಲನ ಕಪ್ಪರಿಸಿ ನೆಲಕ ಬಿದ್ದರ
ನೆಲಕ ನೆಲ ಎಲ್ಲನ್ನ

ಹಾಡುವ ಉತ್ಸಾಹದಲ್ಲಿ ಅರ್ಥ ಮಾಡಿಕೊಳ್ಳುವ ಆತುರದಲ್ಲಿ ಧಾರೆಯೆರೆದು ಕೊಡುವಾಗ ನೆನೆದ ಕೈ ಹಿಡಿದದ್ದು -ದಾರೀಲಿ ನೆನೆದೆ ಕೈ ಹಿಡಿದೆ ಆಗುತ್ತದೆ. ಅದು ತಪ್ಪೇನಲ್ಲ. ಈಗ ಧಾರೆಯಲ್ಲಿ ಏನೇನು ನಡೆಯುತ್ತದೆ ಅನ್ನುವುದೂ ಹೆಚ್ಚಿನವರಿಗೆ ಗೊತ್ತಿಲ್ಲ. ರಿಜಿಸ್ಟ್ರಾರ್ ಕಛೇರಿಯಲ್ಲೋ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡೋ ಮದುವೆ ಆಗುವವರ ಕೈ ಧಾರೆಯಲ್ಲಿ ನೆನೆಯುವುದೂ ಇಲ್ಲ. ಅವರು ನೆನೆಯುವುದು ದಾರಿಯಲ್ಲಿ, ಕೈ ಹಿಡಿಯುವುದು ದಾರಿಯಲ್ಲೇ. ಹಾಗೇ ಮುಗಿಲು ಕಪ್ಪರಿಸಿ ನೆಲಕ್ಕೆ ಬೀಳುವುದು ಅಂದರೆ ಮುಗಿಲು ಕತ್ತರಿಸಿ ಬೀಳುವುದಲ್ಲ!
ಆದರೆ ಹೇಗೆ ನಾವೆಲ್ಲ ನಮಗೆ ಬೇಕಾದಂತೆ ಕವಿತೆಗಳನ್ನು ಅರ್ಥಮಾಡಿಕೊಳ್ಳುತ್ತಾ ಖುಷಿ ಪಡುತ್ತಾ ಹೋಗುತ್ತೇವೆ ಅನ್ನುವುದು ಕುತೂಹಲಕಾರಿ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಥರ ಅರ್ಥವಾಗುವ, ಒಬ್ಬೊಬ್ಬರ ಮುಂದೆ ಒಂದೊಂದು ಅರ್ಥ ಹೊರಡಿಸುವ ಶಕ್ತಿ ಒಳ್ಳೆಯ ಪದ್ಯಕ್ಕೆ ಮಾತ್ರ ಇರುತ್ತದೆ. ಚಿತ್ರಗೀತೆಗೂ ಕವಿಗಳ ಹಾಡಿಗೂ ಏನು ವ್ಯತ್ಯಾಸ ಅಂತ ಗೆಳೆಯರೊಬ್ಬರು ಕೇಳಿದರು. ಎರಡೂ ಹಾಡೇ ತಾನೇ? ನೀವ್ಯಾಕೆ ಚಿತ್ರಗೀತೆಗಳ ಕುರಿತು ಬರೆಯಬಾರದು. ಬೇಂದ್ರೆಯಷ್ಟೇ ಚೆನ್ನಾಗಿ ಹಂಸಲೇಖ ಕೂಡ ಬರೆಯುತ್ತಾರೆ ಅಂದರು. ಕವಿ ಸಾಂದರ್ಬಿಕವನ್ನು ಸಾರ್ವತ್ರಿಕ ಆಗಿಸಬಲ್ಲ. ಸಿನಿಮಾ ಕವಿಗೆ ಆ ಶಕ್ತಿಯಿರುವುದಿಲ್ಲ. ಆ ಹಾಡುಗಳನ್ನು ಹಾಡಲು ಅಂಥದ್ದೇ ಸಂದರ್ಭಕ್ಕಾಗಿ ಹುಡುಕಾಡಬೇಕಾಗುತ್ತದೆ. ಕವಿಗಳು ಬರೆದ ಹಾಡು ಕೂಡ ಈ ಅಪಾಯದಿಂದ ಎಷ್ಟೋ ಸಲ ಪಾರಾಗುವುದಿಲ್ಲ. ಆದರೆ ಬೇಂದ್ರೆಯ ನೀ ಹೀಂಗ ನೋಡಬ್ಯಾಡ ನಿನ್ನ ದಿನೇ ದಿನೇ ಅರ್ಥವಾಗುತ್ತಾ ಹೋಗುವ, ಓದಿದಷ್ಟೂ ನಾವು ಬೆಳೆದಷ್ಟೂ ಬೆಳೆಯುತ್ತಾ ಹೋಗುವ ಕವಿತೆ. ಬೇಕಿದ್ದರೆ ಈ ಕೊನೆಯ ಸಾಲುಗಳನ್ನು ನೋಡಿ;
ಇಬ್ಬನಿ ತೊಳೆದರು ಹಾಲು ಮೆತ್ತಿದಾ ಕವಳಿ ಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣಿವೀ ಚಂದಿರನ ಹೆಣಾ ಬಂತೋ ಮುಗಿಲಾಗ ತೇಲತ ಹಗಲ


ಕವಳಿ ಕಂಟಿಯಾ ಹಣ್ಣನ್ನು ಇಬ್ಬನಿ ತೊಳೆದರೂ ಯಾಕೆ ಹಾಲು ಮೆತ್ತಿದಂತಿರುತ್ತದೆ. ದಿಗಿಲಾಗಿ ಜೀವ ಏನನ್ನುತ್ತದೆ? ಹುಣ್ಣಿವೀ ಚಂದಿರನ ಹೆಣಾ ಹಗಲೇ ಯಾಕೆ ಮುಗಿಲಾಗೆ ತೇಲಿ ಬರುತ್ತದೆ? ಹುಣ್ಣಿಮೆಯ ದಿನ ಸೂರ್ಯಾಸ್ತದೊಂದಿಗೆ ಚಂದ್ರೋದಯವಾಗಿ, ಸೂರ್ಯೋದಯದೊಂದಿಗೆ ಚಂದ್ರಾಸ್ತ ತಾನೇ?
ಇದೇ ಕವಿತೆಯ ಕೊನೆಯ ಸಾಲು ಕೇಳಿ;
ಎವೆಬಡಿಸಿ ಕೆಡವು. ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.
ಬಿರಿಗಣ್ಣು ಬೇಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ ಅನ್ನುವುದೆಲ್ಲ ಸರಿಯೆ. ಆದರೆ ಎವೆಬಡಿಸಿ ಕೆಡವು ಅನ್ನೋದು ಏನು? ಕೆಡವು ಅಂದರೆ ಕೆಡಹು ಅಂತಲಾ..
******
ಇಂಥ ಒಗಟಿನ ಸಾಲುಗಳ ಸೊಬಗು ಒಂದು ಕಡೆಯಾದರೆ ಅರ್ಥವಾದರೂ ಮತ್ತೆ ಮತ್ತೆ ಅರ್ಥಮಾಡಿಕೊಳ್ಳಬೇಕು ಅನ್ನಿಸುವಂಥ ಸಾಲುಗಳು ಮತ್ತೊಂದು ಕಡೆ. ಖರ್ಜೂರದ ಸವಿ ತುಂಬ ಹೊತ್ತು ನಾಲಗೆಯಲ್ಲೇ ನೆಲೆಯಾಗಿ ಸುಖ ಕೊಡುವ ಹಾಗೆ ಮಾಯಾಕಿನ್ನರಿಯ ಸಾಲುಗಳು ಕೂಡ ಘಮಘಮಿಸುತ್ತಿರುತ್ತವೆ;
ಆಡುತಾಡುತ ಬಂದು ಸಿಂಗಾರ ಸೊಳ್ಳಿ ಹಾಂಗ
ಹಾಡಿಲೆ ಕಿವಿಗಲ್ಲ ಕಡಿದ್ಯೇನ
ಹಾದಿ ತಪ್ಪಿಸಿಕೊಂಡ ಗುಂಗಿಯ ಹುಳಧಾಂಗ
ಗುಣುಗುಣು ಗೊಣಗುಟ್ಟಿ ನುಡಿದ್ಯೇನ
ತನ್ನೊಡೆಯನ ಕೂಡ ಚಿನ್ನಾಟ ನಡಿಸೀದ
ಕುನ್ನಿ ಕುಂಞಗುಡುವಾಟ ಹಿಡಿದ್ಯೇನ
ಮುಟ್ಟಿದರೆ ಮುರುಕುವ ವಯ್ಯಾರ ಕಲಿತೆಲ್ಲಿ
ಸುಳ್ಳೇನ ಸಿಡಿಮಿಡಿ ಸಿಡಿದ್ಯೇನ
ಮರುಳು ಸಿದ್ಧನನ್ನು ಮಯಾ ಕಿನ್ನರಿ ಮರುಳು ಮಾಡುವ ರೀತಿಯನ್ನು ನೋಡಿ. ಇದನ್ನು ಯಾರು ತಾನೇ ದೃಶ್ಯದಲ್ಲಿ ಹಿಡಿದಿಡಲು ಸಾಧ್ಯ. ಬಹುಶಃ ಎಲ್ಲಾ ಮಾಧ್ಯಮಗಳು ಅಕ್ಪರಕ್ಕೆ ಶರಣಾಗಬೇಕು ಅನ್ನುವುದಕ್ಕೆ ಇಂಥ ಕಲ್ಪನೆಗಳೇ ಕಾರಣ ಇರಬೇಕು. ಯಾಕೆಂದರೆ ಇವನ್ನು ಯಾರು ಕೂಡ visualise ಮಾಡಲಾರರು. ಹಾಗೆ ಕಣ್ಮುಂದೆ ತಂದೊಡನೆ ಅದು ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಹಾಡನ್ನು ನಾಗಾಭರಣ ಚಿತ್ರೀಕರಿಸಿದಷ್ಟೇ ಪೇಲವವಾಗಿ, ಸಪ್ಪೆಯಾಗಿ ಕಾಣುತ್ತದೆ. ಇದರ ಮುಂದಿನ ಸಾಲುಗಳಂತೂ ಇನ್ನೂ ಅದ್ಭುತ.
ಎದೆಗೊತ್ತಿ ಹಿಡಿದರು ಮುತ್ತಿಟ್ಟು ಮತ್ತಿಷ್ಟು
ಮುಳುಮುಳು ಸುಮ್ಮನೆ ಅತ್ತೇನ
ಕೈಯಾಡಿಸಿದಂತೆ ಮೈಕದ್ದು ನಡುಗುವಿ
ಇದು ಹೊಸ ಗಮಕದ ಗತ್ತೇನ
ಮೊದಲ ಭೆಟ್ಟಿಗೆ ಬಂದ ಮಳ್ಹೆಣ್ಣು ಮಾಡಿಧಾಂಗ
ತುಟಿ ಕಚ್ಚಿ ತಡವರಿಸಿ ತಡದೇನ..
ಈ ಸಾಲುಗಳಲ್ಲಿ ಸೊಗಸಾದ ಲಯವಿದೆ. ನಾಟ್ಯವಿದೆ. ಪದಗಳಲ್ಲೇ ಎಲ್ಲಾ ಕಲಾಮಾಧ್ಯಮದ ಸಾಧ್ಯತೆಗಳನ್ನು ಬೇಂದ್ರೆ ತಂದುಬಿಟ್ಟಿದ್ದಾರೆ. ಆಕೆ ತುಟಿ ಕಚ್ಚಿ ತಡೆಯುವ ನಾಟ್ಯವಿದೆ, ಗಮಕದ ಗತ್ತಿದೆ, ಮುತ್ತಿಟ್ಟು ಮತ್ತಿಷ್ಟು ಸುಮ್ಮನೆ ಅಳುವ ನಟನೆಯಿದೆ.ಮುಂದೆ ಆಕೆಯನ್ನು ಆತ ಕರೆಯುವ ರೀತಿ ಕೇಳಿ;
ಕರಗಿ ಬಾ, ಅರಗಿ ಬಾ, ಎರಗಿ ಬಾ ಸಣ್ಣಾಗಿ
ಸಕ್ಕರೆ ಬೆರೆಧಾಂಗ ಹಾಲಾಗ

ಅಲ್ಲಿಂದ ಮುಂದೆ ನಡೆಯುವುದೆಲ್ಲ ಎಲ್ಲ ಮಾತನ್ನೂ ಮೀರಿದ್ದು. ಕೇವಲ ಅನೂಹ್ಯ ಪದಗಳಷ್ಟೇ ಕಟ್ಟಿಕೊಡಬಹುದಾದಂಥದ್ದು. ಕೇವಲ ಅನುಭವದಿಂದ ಅರಿಯಬೇಕಾದ್ದು. ಆ ಅನುಭವವೂ ಎಂಥಾದ್ದು. ಜ್ಞಾನೋದಯದಂಥದ್ದು. ಅನುಭವಿಸಬೇಕಾದದ್ದೂ ಮನಸ್ಸಿನೊಳಗೆ.
ನಲ್ಲ ಮುಟ್ಟಿದ ಗಲ್ಲ, ನಲ್ಲೆಯ ಮೈಯೆಲ್ಲ
ಹಿಗ್ಗಿನ ಮುಳ್ಳಿಗೆ ಸಿಕ್ಕ್ಹಾಂಗ
ಜುಮುಜುಮು ರುಮುಜುಮು ಗಂಗುಣು ದುಮುದುಮು
ನಾದದ ನದಿಯೊಂದು ನಡೆಧಾಂಗ
ಗಲ್ಲ ಗಲ್ಲಕೆ ಹಚ್ಚಿ ನಲ್ಲನಲ್ಲೆಯರಿರುಳು
ಗುಜುಗುಜು ಗುಲುಗುಲು ನುಡಿಧಾಂಗ
ಅದಕ್ಕೇ ಹೇಳಿದ್ದು ಇದು ಐಹಿಕ, ದೈಹಿಕ ಅನುಭವಕ್ಕೆ ದಕ್ಕುವಂಥದ್ದು ಅಲ್ಲವೇ ಅಲ್ಲ ಅಂತ. ನಲ್ಲೆಯ ಮೈ ಹಿಗ್ಗಿನ ಮುಳ್ಳಿಗೆ ಸಿಕ್ಕ ರೋಮಾಂಚನ ಗಂಡಸಿನ ಅನುಭವಕ್ಕೆ ಬಾರದ ಸಂಗತಿ. ಎಷ್ಟೋ ದಾಂಪತ್ಯದಲ್ಲಿ ಗಲ್ಲಗಲ್ಲಕ್ಕೆ ಹಚ್ಚಿ ನಲ್ಲನಲ್ಲೆಯರು ಇರುಳಿಡೀ ಗುಜುಗುಜು ಗುಲುಗುಲು ನುಡಿಯುವುದೂ ಕಷ್ಟವೇ.
ಮುಂದೆ ಮತ್ತೊಂದು ಘಟ್ಟಕ್ಕೆ ಆ ಜಗತ್ತು ದಾಟಿಕೊಳ್ಳುತ್ತದೆ. ಅಲ್ಲಿ ಬೇಂದ್ರೆ ಬಳಸುವ ರೂಪಕವನ್ನು ಅಪೂರ್ವ.
ಆತನೀತನವಂತ ಯಾತನದ ಯಾತನೆಯ
ಯಾತ ಕಿರುಗುಟ್ಟೋದ ನಿಂಧಾಂಗ
ಈ ಸಾಲುಗಳನ್ನು ಇಡಿಯಾಗಿ ಅರ್ಥಮಾಡಿಕೊಳ್ಳುವುದು ಕೂಡ ಪ್ರಯಾಸವೇ. ಅದು ಎಷ್ಟು ದಕ್ಕುತ್ತದೋ ಅಷ್ಟೇ. ಅವರವರ ಬಾಯಿ ರುಚಿಗೆ ತಕ್ಕಂತೆ ಕಲ್ಲುಸಕ್ಕರೆ ತನ್ನ ರುಚಿಯನ್ನು ಬಿಟ್ಟುಕೊಡುವಂತೆ, ಬೇಂದ್ರೆ ಕಾವ್ಯ. ನಮ್ಮ ನಾಲಗೆಯ ರುಚಿ ಸರಿಯಾಗಿದ್ದರೆ ಕಾವ್ಯವೂ ಅರ್ಥವಾಗುತ್ತದೆ.
ಹಾಸಾದ ಹಾಡೀಗೆ ಹೊಕ್ಕಾತು ಕಿನ್ನರಿ
ನೇಯ್ಗಿಯೊಳಗೆ ನೂಲು ಹೋಧಾಂಗ
ಹಾಸು-ಹೊಕ್ಕು ಅನ್ನುವ ನುಡಿಗಟ್ಟನ್ನು ಇದಕ್ಕಿಂತ ಚೆನ್ನಾಗಿ ಹಿಡಿದಿಟ್ಟ ಸಾಲು ಕನ್ನಡದಲ್ಲಿದೆಯೇ?
ಜಗತ್ತಿನಲ್ಲೇ ಬೇಂದ್ರೆಗಿಂತ ಅರ್ಥಪೂರ್ಣವಾಗಿ ಬರೆದ ಕವಿ ಸಿಗುವುದಕ್ಕೆ ಸಾಧ್ಯವೇ?
*****
ಹಳೆಯ ಮಾತು;
ಪ್ರತಿಭೆಗೂ ಪ್ರಕೃತಿಗೂ ಸಂಬಂಧವೇ ಇಲ್ಲ. ಪ್ರಕೃತಿ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ. ಅತ್ಯಂತ ಪ್ರತಿಭಾವಂತನನ್ನೂ ಅತ್ಯಂತ ದಡ್ಡನನ್ನೂ ಕಾಲ ನಿರ್ದಯವಾಗಿ ಕೊಲ್ಲುತ್ತದೆ. ನಿಸರ್ಗಕ್ಕೆ ನಮ್ಮ ಹಾಡು, ಕತೆ, ಕವಿತೆ, ಅಭಿನಯ, ನಗು, ಉಲ್ಲಾಸ ಯಾವುದೂ ಬೇಕಾಗಿಲ್ಲ. ಅದನ್ನು ವಿಧಿಯೆನ್ನುತ್ತಾರೆ, ದೈವ ಅನ್ನುತ್ತಾರೆ. ನೂರೆಂಟು ಹೆಸರಿಟ್ಟು ಕರೆದು ಗೌರವಿಸಿ, ಭಕ್ತಿಯಿಂದ ನಮಿಸಿ, ಧಿಕ್ಕರಿಸಿ ಸಾಗುತ್ತಾರೆ.
ಕರಿಯವ್ವನ ಗುಡಿತಾವ ಪಣತೊಟ್ಟು ಗೆದ್ದವರು
ಇನ್ನೂ ಬದುಕೇ ಅವರೆ ಸರದಾರರು
ಕಥೆ ನಡೆದ ದಿನದಿಂದ ಕೆಂಪಾಗಿ ಹರಿದವಳೆ
ಕತೆಗಳ ಮಾರಾಣಿ ಐರಾವತಿ
ಅಂತ ಬರೆದ ಲಂಕೇಶ್, ಮತ್ತೊಂದು ಸಾಲು ಬರೆದರು;
ಯೌವನದಲ್ಲಿ ಹುಲಿಗಳ ಬೇಟೆಯಾಡಿದ
ಶೂರ
ಇಳಿವಯಸ್ಸಿನಲ್ಲಿ ತಾನು ಕೊಂದ
ಹುಲಿಯ ಚರ್ಮಗಳ ತೋರಿಸಿ
ನಿಮ್ಮನ್ನು ನಂಬಿಸಲು ಯತ್ನಿಸುತ್ತಾನೆ.


ಎಲ್ಲವೂ ಅಷ್ಟೇ!


5 comments:

raaghavam said...

ಚಿಕ್ಕವನಿದ್ದಾಗ ರೇಡಿಯೋದಲ್ಲಿ ಪದೆಪದೇ ಕೇಳಿಬರುತ್ತಿದ್ದ ಸಿನೆಮಾ ಹಾಡಾಗಿದ್ದ ಈ ಪದ್ಯ ಕಾಲ ಕಾಲಕ್ಕೆ ಬೇರೆ ಬೇರೆ ರೀತಿ ಅರ್ಥವಾಗುತ್ತ ಹೋಗಿದೆ. ಎಚ್ಚರವಾಗಿದ್ದರೂ ಕಣ್ಣುಬಿಟ್ಟುಕೊಂಡೇ ಮಲಗಿರುತ್ತಿದ್ದ ಸೂರ್ಯ ಮೇಲೆಬಂದ ಮುಂಜಾವುಗಳಲ್ಲಿ ಸುದ್ದಿ ಮುಗಿದು ಚಿತ್ರಗೀತೆ ಆರಂಭವಾಗುತ್ತಿತ್ತು, `ನೀ ಹಿಂಗ ನೋಡಬ್ಯಾಡ ನನ್ನ' ಹಾಡು ಬರುತ್ತಿತ್ತು. ಆ ಸಿನೆಮಾದ ಹೆಸರು ಪ್ರೇಮ ತರಂಗವೋ, ಪ್ರೇಮತ ರಂಗವೋ ಗೊತ್ತಾಗದಿದ್ದ, ಅದರ ಕುರಿತೇ ಯೋಚಿಸುತ್ತಿದ್ದ ವಯಸ್ಸದು. ಹಾಡಿದವರು ರಾಜ್ ಕುಮಾರ್ ಭಾರತಿ ಅಂತ ರೇಡಿಯೋದವರು ಹೇಳುತ್ತಿದ್ದರಾದರೂ ಭಾರತಿ ಹಾಡುವುದೇ ಇಲ್ಲವಲ್ಲ ಎನ್ನಿಸುತ್ತಿತ್ತು. ಇದು ರಾಜ್ ಕುಮಾರ್ ದನಿಯೇ ಹೌದೇ ಅಂತಲೂ ಅನುಮಾನವಾಗುತ್ತಿತ್ತು! ನಂತರದಲ್ಲಿ ಈ ಪದ್ಯ ಓದಿ, ಅದರ ಕುರಿತು ಲೇಖನಗಳನ್ನು ಓದುತ್ತ ಒಂದು ಚಿತ್ರ ಮನಸ್ಸಿನಲ್ಲಿಯೇ ರೂಪುಗೊಂಡಿತು.

ಆಸ್ಪತ್ರೆಯಿಂದಲೇ ಇರಬೇಕು, ಬದುಕಿಸಿಕೊಳ್ಳಲಾಗದ ಮಗನ ಶವದೊಡನೆ ಎತ್ತಿನಗಾಡಿಯಲ್ಲಿ ಮರಳಿ ಬರುತ್ತಿರುವ ದಂಪತಿಗಳ ಚಿತ್ರ. ಗಾಡಿ ನಡೆಸುವವ, ಮಡಿಲಲ್ಲಿ ಸತ್ತ ಮಗನ ತಲೆಯಿಟ್ಟುಕೊಂಡು ಗಾಡಿಯ ಮಧ್ಯದಲ್ಲಿ ಕುಳಿತ ತಾಯಿ, ಮತ್ತು ಗಾಡಿಯ ಹಿಂಬಾಗ ಅಂಚಿನಲ್ಲಿ ಒಂದು ಪಕ್ಕಕ್ಕೆ ಒರಗಿ ಕುಳಿತು ಬೇರೆಲ್ಲೋ ದಿಟ್ಟಿಸುತ್ತಿರುವ ಬೇಂದ್ರೆ. (ಗಾಡಿಯಲ್ಲಿ ಇನ್ನೂ ೨-೩ ಜನ ಇದ್ದಾರೆ, ಯಾರೆಂದು ಸ್ಪಷ್ಟವಾಗುವುದಿಲ್ಲ). ಮಡದಿಯ ಕಣ್ಣಲ್ಲಿನ ದುಃಖ ಮತ್ತು ಯಾತನೆಯ ನೋಟವನ್ನು ನೋಡಲಾಗದ ಬೇಂದ್ರೆಯವರಿಂದ ಹುಟ್ಟಿತು ಈ ಪದ್ಯ..
....
ನೀವು ಬರೆದದ್ದನ್ನು ಓದುವವರೆಗೂ ನಾನೂ ಅದು `ದಾರೀಲಿ ನೆನೆದೆ..' ಅಂತಲೇ ತಿಳಿದುಕೊಂಡಿದ್ದೆ. ದುಃಖಿಸುತ್ತಿದ್ದ ತಾಯಿ ಗಾಡಿಯಲ್ಲಿ ಹೋಗುತ್ತಿರುವಾಗ ಒಂದೆರೆಡು ಕ್ಷಣಗಳವರೆಗೆ ಯಾವುದೋ ಯೋಚನಾ ಲಹರಿಯಲ್ಲಿ ಕಳೆದುಹೋಗಿ ತನ್ನ ಹಾಗೂ ಮಗನ ಶವದ ಇರವನ್ನು ಮರೆತುಬಿಟ್ಟಿರುತ್ತಾಳೆ,. ನಂತರ ಒಮ್ಮೆಲೇ ವಾಸ್ತವಕ್ಕೆ ಬಂದು ಮಗನ ಕೈ ಹಿಡಿದುಕೊಳ್ಳುತ್ತಾಳೆ. ತಣ್ಣಗಿದೆ (ಜೀವ ಹೋಗಿದೆ) ಅಂತ ಗೊತ್ತಾದರೂ, ಇಲ್ಲ ಮಗ ನಿದ್ದೆ ಹೋಗಿದ್ದಾನೆ, ಜೀವ ಇದೆ ಎಂಬಂತೆ ತಡಕುತ್ತಾಳೆ..... ಎಂಬ ಚಿತ್ರವೇ ಇತ್ತು.
..........

ಕರ್ನಾಟಕ ವಿಶ್ವ ವಿದ್ಯಾಲಯದ ಶಾಲ್ಮಲಾ ಹಾಸ್ಟೆಲ್ ನ ಹಿಂಬಾಗದ ಬೋಳು ಗುಡ್ಡಗಳಲ್ಲಿ ಬೇಕಾದಷ್ಟು ಕವಳಿ ಕಂಟಿಗಳಿವೆ. ಅಲ್ಲಿ ಕವಳಿ ಹಣ್ಣಿಗಾಗಿಯೇ ಕಂಟಿಯಿಂದ ಕಂಟಿಗೆ (ನಮ್ಮಲ್ಲಿ ಕವಳಿ ಮಟ್ಟಿ ಎನ್ನುತ್ತೇವೆ) ತಿರುಗುವಾಗ, ಇಬ್ಬನಿಯಲ್ಲಿ ತೊಳೆದ, ಜಿನುಗಿದ ಹಾಲು (ಗಾಳಿಗೆ) ಒಣಗಿ (ಫೆವಿಕಾಲ್ ನಂತೆ) ಮೆತ್ತಿಕೊಂಡಿರುತ್ತಿದ್ದ ಕಪ್ಪು ಹಣ್ಣುಗಳನ್ನು ಕೊಯ್ಯುವಾಗಲೆಲ್ಲ ಬೇಂದ್ರೆಯವರು ಪಡೆದ ಈ ರೂಪಕ ನೆನಪಿಗೆ ಬರುತ್ತ, ಆ ಸಾಲುಗಳನ್ನೇ ಗುನುಗುತ್ತಿದ್ದುದು ನೆನಪಿಗೆ ಬರುತ್ತದೆ.
.........
ರಾಜ್ ಕುಮಾರ್ ಭಾರತಿಯವರು ಹಾಡಿದ ಈ ಹಾಡು ಆ ಯಾತನೆಯ ತಾರಕಕ್ಕೇರುವುದು ``ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ'' ಎಂಬ ಸಾಲಿನಲ್ಲಿ ಮತ್ತು ಅದೇ ಎತ್ತರದಲ್ಲಿ ``ಹುಣ್ಣಿವೀ ಚಂದಿರನ ಹೆಣಾ ಬಂತೋ ಮುಗಿಲಾಗೆ ತೇಲತ ಹಗಲ'' ಎಂಬ ರೂಪಕದಲ್ಲಿ ``ಸತ್ಯ''ದಂತಹ ಏನನ್ನೋ ಪಡೆದು ನಿಟ್ಟುಸಿರಿಡುವಂತೆ ಕಾಣುತ್ತದೆ.

ಮಗ ಬದುಕಿದ್ದಾನೆ ಎಂಬ ಕಲ್ಪನೆಯಲ್ಲಿಯೇ ಚಡಪಡಿಸುತ್ತಿದ್ದ ತಾಯಿಗೆ ಅವನ ಜೀವ ಹೋಗಿದೆ, ಮತ್ತವನು ಮರಳಿ ಬರುವುದಿಲ್ಲ ಎಂಬ ವಾಸ್ತವ ಅರಿವಾದ ಸ್ಥಿತಿ ಅದು. ಅಂತಹ ಸ್ಥಿತಿಯಲ್ಲಿ ಅವಳ ಪೂರ್ಣಚಂದ್ರನಂತಹ ಮೊಗ ಕಳಾಹೀನವಾಗಿದೆ, ಅದು ಸತ್ತ ಚಂದ್ರ ಆಗಸದಲ್ಲಿ ತೇಲುತ್ತಿರುವಂತೆ ಬೇಂದ್ರೆಯವರಿಗೆ ಕಂಡಿದೆ...

ಈ ಪದ್ಯದ ಅಥವಾ ಹಾಡಿನಲ್ಲಿ ತನ್ಮಯನಾದ ಓದುಗ\ಕೇಳುಗನಿಗೆ ಕವಿತೆಯ ಆ ತಾರಕ ಸ್ಥಿತಿಯಲ್ಲಿ ಕಣ್ತುಂಬಿ ಬಂದಿರುತ್ತದೆ. ಎಷ್ಟು ಹೊತ್ತು ಬಿರುಗಣ್ಣು ಬಿಟ್ಟು ಆ ಅನುಭವದಲ್ಲಿ ಕಳೆದುಹೋಗಿರಲು ಸಾಧ್ಯ?
ಕಣ್ಣವೆ ಬಡಿಸಬೇಕು.... ಕಂಬನಿ ಕೆಡವಬೇಕು......

ರ್‍ಆಘವೇಂದ್ರ

Anonymous said...

Swamy, Where is the Photo. Jai

Anonymous said...

RAGAVAM COMMENT JOGI LEKHANADASHTE SUPERB... CHIKKANDINALLI EE HAADU KELUTHIDDAGALU NANNALLOO INTHADE BHAVANEGALU SPURISUTHIDDAVU....

pradyumna said...

good one brother. but the sad part of the story is i culd nt understand evrything// bcoz contains complex issues...

pradyumna said...
This comment has been removed by the author.