Saturday, May 5, 2007

ಗೋಕುಲ ಎಂಬ ನಮ್ಮೂರು, ಮಧುರೆಯೆಂಬ ಬೆಂಗಳೂರು


ಬನ್ನಿರಿ ನಾವೆಲ್ಲ ಮಧುರೆಗೆ
ಬಿಲ್ಲ ಹಬ್ಬಕೆ ಹೋಗುವಾ...
ಹಾಗಂತ ಮಧುರೆಯಿಂದ ಬಂದ ಅಕ್ರೂರ ಕರೆಯುತ್ತಾನೆ. ಬಲರಾಮ ಹೊರಟು ನಿಲ್ಲುತ್ತಾನೆ. ಬೇರೆ ದಾರಿಯಿಲ್ಲದೆ ಕೃಷ್ಣ ಕೂಡ ಅವನ ಜೊತೆ ಹೊರಡಲೇ ಬೇಕಾಗುತ್ತದೆ. ಕೊಳಲ ಬಿಸುಟು ಕೃಷ್ಣ ಮಧುರಾನಗರಿಗೆ ಹೊರಡುತ್ತಾನೆ. ಮಧುರೆಯ ಕರೆ ಕೇಡಿನ ಕರೆ ಅಂತ ಗೊತ್ತಿದ್ದರೂ ಕೃಷ್ಣ ಅದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.
****
ಹೇಗಿತ್ತು ಗೋಕುಲ?
ಅಲ್ಲಿದೆ ಬೃಂದಾವನ, ಅದು ಆನಂದ ನಿಕೇತನ. ಯಮುನೆಯ ತೆರೆತೆರೆ ತಾಳ ಹಾಕುತ್ತದೆ. ತೀರದ ಗಿಡಮರ ಅಭಿನಯ ಮಾಡುತ್ತದೆ. ಲತೆಲತೆ ಬಳುಕಿ, ಗಾಳಿಗದರ ಸೊಂಟ ಉಳುಕಿ ಕೊಳಲಿನ ಗಾನಕ್ಕೆ ಯಮುನೆಗೆ ಮತ್ತೇರುತ್ತದೆ.
ಕೊಳಲು ಊದುತ್ತಿರುವವನು ಯಾರು? ಊದಿಯೇ ಊದುವ ಕೊಳಲ, ಯಾವನೋ ಮರುಳ. ನಾವು ಹೀಗೆಯೇ ಕೂತು ಕಳೆಯೋಣ ಇರುಳ ಅನ್ನಿಸುವಂಥ ಕೊಳಲಗಾನ ಅದು.
ಗೋಕುಲದಲ್ಲಿ ಕೃಷ್ಣನಿದ್ದಾನೆ. ಅವನ ಕೊಳಲಿನ ಕರೆ ಆಲಿಸಿದರೆ ಏನೇನಾಗುತ್ತದೆ;
ಕೃಷ್ಣನಾ ಕೊಳಲಿನ ಕರೆ
ತೊಟ್ಟಿಲಿನ ಹಸುಗೂಸ ಮರೆಮರೆ
ಪಕ್ಕದ ಗಂಡನ ತೊರೆ ತೊರೆ
ಬೃಂದಾವನಕೆ ತ್ವರೆ ತ್ವರೆ..
ಆ ಕೊಳಲ ಗಾನ ಕೇಳುತ್ತಾ ಮೈಮರೆತ ಗೋಪಿಯರ ಪಾಲಿಗೆ ಅವನು ಯೋಗೇಶ್ವರನಲ್ಲ, ಬಡಜೋಗಿ!
ಎಳ್ಳಿನ ಹೊಲವ ಬಿಟ್ಟೆ
ಒಳ್ಳೆಯ ಗಂಡನ ಬಿಟ್ಟೆ
ಕಳ್ಳಾಟದ ಜೋಗಿ ಕೂಡೆ ಹೋಗಬಹುದೇ ನಾರಿ..
ಅನ್ನುವಲ್ಲಿ ಬರುವ ಜೋಗಿಯೂ ಕೃಷ್ಣನೇ. ಅವನದು ಕೊಳಲು, ಇವನದು ಕಿನ್ನರಿ. ಕರೆಯ ಬೆರಗು ಒಂದೇ.
ಹೊತ್ತಾರೆ ಹೊರೆಗೆಲಸ ಮಿಕ್ಕರೆ ಮಿಗಲಿ
ಮಿಕ್ಕಾದ ನೆರೆಹೊರೆ ನಕ್ಕಾರೆ ನಗಲಿ

ಅನ್ನುತ್ತಾ ಅವರು ಹೊರಟು ನಿಲ್ಲುತ್ತಾರೆ ಬೃಂದಾವನಕ್ಕೆ.
ಅಲ್ಲಿ ಕೃಷ್ಣನಿದ್ದಾನೆ ರಂಜಿಸುವುದಕ್ಕೆ. ಯಾವ ಜಂಜಾಟವೂ ಇಲ್ಲದ, ಯಾವ ಕಾಟವನ್ನೂ ಕೊಡದ, ಯಾವ ಅಪ್ಪಣೆಯನ್ನೂ ಪಾಲಿಸಬೇಕಿಲ್ಲದ ಕೃಷ್ಣ. ಯಮುನೆಯಂಥ ಮನಕ್ಕೆ ಮನಯಮುನಾ ತೀರದಲ್ಲಿ ಯಾನ. ಕೃಷ್ಣನೆಂದರೆ ಕೊಳಲು. ಕೊಳಲೆಂದರೆ ಮೆಲ್ಲುಲಿ. ಯಾವ ರಾಗದ್ವೇಷಗಳೂ ಇಲ್ಲದೇ ಕೇಳಿ ಸುಖಿಸಬಹುದಾಗ ರಾಗಮಾಲಿಕೆ. ಮೇಲುಕೀಳಿಲ್ಲದ, ಹಂಗಿಲ್ಲದ, ಯಾವ ಲಜ್ಜೆಯೂ ಇಲ್ಲದ, ಒಜ್ಜೆಯೂ ಇಲ್ಲದ ನಿರಾತಂಕ ಸ್ಥಿತಿ ಅದು. ಕೊಳಲ ಗಾನ ಬೆಳದಿಂಗಳ ಹಾಗೆ ಹಬ್ಬುತ್ತದೆ, ಬಡವನ ಮೇಲೆ ಹೇಗೋ ಸಿರಿವಂತನ ಮೇಲೂ ಹಾಗೆ!
ಕೊಳಲ ಗಾನ ಕೇಳಿದವರು ಹಾಡುತ್ತಾರೆ ಕೇಳಿ;
ಸಕಲೇಂದ್ರಿಯಂಗಳಿಗು ನೇತ್ರವೇ ಮಿಗಿಲೆಂದು
ಲೋಕ ನುಡಿಯುವುದಿರಲಿ ಆದೊಡಿಂದು
ಈ ಹಳುವೊಳೀ ಗಾನವಾಲಿಸಲು ತೋರುವುದು
ಶ್ರೋತ್ರವೇ ಎಲ್ಲದಕೂ ಮಿಗಿಲು ಎಂದು.
ಕೃಷ್ಣ ಕೊಳಲನೂದಿ ಏನು ಮಾಡುತ್ತಾನೆ? ಮುಪ್ಪಿನ ಬೇಸರ ಹೋಗಲಾಡಿಸುತ್ತಾನೆ. ಯೌವನದ ದಿಗಿಲು ಕಳೆಯುತ್ತಾನೆ. ನಾಳೆಯ ಆತಂಕವನ್ನು ಅಳಿಸುತ್ತಾನೆ. ಭವದ ಮಾಯೆ ಕರಗುವಂತೆ, ಅಹಂಕಾರ ಅಳಿಯುವಂತೆ ಕೊಳಲನೂದುತ್ತಾನೆ. ನನ್ನದು ಎನ್ನುವುದೆಲ್ಲವೂ ನಿನ್ನದಾಗುವಂತೆ ಹಾಡುತ್ತಾನೆ. ಒಲಿದು ಹಾಡುತ್ತಾನೆ. ನನ್ನೊಳು ನಾ, ನಿನ್ನೊಳು ನೀ ಎಂಬ ಭಾವನೆ ಮಾಯವಾಗಿ, ನಿನ್ನೊಳು ನಾ, ನನ್ನೊಳು ನೀ- ಎನ್ನುವ ಅವಿನಾಭಾವ ಸಂಬಂಧಕ್ಕೆ ನೆಪವಾಗುತ್ತಾನೆ.
*******
ಎಲ್ಲ ಊರುಗಳಲ್ಲೂ ಒಬ್ಬೊಬ್ಬ ಕೃಷ್ಣನಿರುತ್ತಾನೆ. ಎಲ್ಲರಿಗೂ ಒಬ್ಬೊಬ್ಬ ಕೃಷ್ಣನಿರುತ್ತಾನೆ. ಅವನು ನಮ್ಮ ಬದುಕನ್ನು ಸಹ್ಯವಾಗಿಸುತ್ತಾ ಇರುತ್ತಾನೆ. ಅಪ್ಪನ ಹುರಿಮೀಸೆ, ಅಮ್ಮನ ಕಟ್ಟುಪಾಡು, ಅಣ್ಣನ ಗದರುನೋಟ, ತಮ್ಮನ ತುಂಟಾಟ, ಅತ್ತೆಯ ಬಿರುನೋಟ, ಮಾವನ ನಿರ್ಲಕ್ಪ್ಯಗಳನ್ನೆಲ್ಲ ಮೀರಬಲ್ಲ ಮಿತ್ರನೊಬ್ಬ ಇದ್ದರೆ ಅವನ ಹೆಸರು ಕೃಷ್ಣ, ಅಂಥ ಗೆಣೆಕಾರ ಬೇಕೆನ್ನಿಸಿದರೆ ಅವನೇ ಕೃಷ್ಣ.
ಕೃಷ್ಣನಿಗೆ ಜವಾಬ್ದಾರಿಯಿಲ್ಲ. ನೀತಿಯ ಹಂಗಿಲ್ಲ, ಕಟ್ಟು ಪಾಡುಗಳಿಲ್ಲ. ನಿನ್ನೆಯ ಹೊರೆಯಿಲ್ಲ, ನಾಳೆಯ ಕರೆಯಿಲ್ಲ. ಅವನು ಮಣ್ಣಿನಿಂದ ಮೊಳಕೆಯೊಡೆದ ಸೌಗಂಧಿಕಾ ಪುಷ್ಪದಂಥವನು, ಮಳೆಯ ಬರವಿಗೆ ನೆಲದಿಂದೆದ್ದ ಚಿಟ್ಟೆಯಂಥವನು. ಸುಮ್ಮನೆ ಸಂತೋಷ ಕೊಡುವುದಷ್ಟೇ ಅವನಿಗೆ ಗೊತ್ತು.
ನಿಮ್ಮೂರಲ್ಲೂ ಅಂಥವರಿದ್ದಾರೆ. ಹೊರಗೆ ಆಡಲು ಹೋಗಬೇಡ ಅಂತ ಅಮ್ಮ ಗದರುವ ಹೊತ್ತಿಗೆ ಅವನು ಸೈಕಲ್ ಬೆಲ್ಲಿನ ಸದ್ದಾಗಿ ಅವಳ ಕಿವಿಗೆ ತಲುಪುತ್ತಾನೆ. ಬಾಗಿಲ ಬಳಿ ನಿಲ್ಲಬೇಡ ಎಂದು ಅಪ್ಪ ಬುಸುಗುಡುವ ಹೊತ್ತಿಗೆ ಅವನು ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದಿರನಾಗಿ ಬೆಳಕು ಚೆಲ್ಲುತ್ತಾನೆ. ನಾಳೆ ಎಷ್ಟೊಂದು ಸುಂದರ, ಬದುಕು ಎಷ್ಟೊಂದು ಸರಳ ಅನ್ನಿಸುವಂತೆ ಬದುಕುತ್ತಾನೆ.
ಅಂಥ ಕೃಷ್ಣನ ಜೊತೆ ನಮಗೆ ಅವಿನಾಭಾವ ಸಂಬಂಧವೂ ಬೆಳೆಯುತ್ತದೆ. ಕುವೆಂಪು ಪದ್ಯದಲ್ಲಿ ಬರುವ ಗೋಪಾಲ ಅವನು;
ಸದ್ದಿರದ ಪಸರುಡೆಯ ಮಲೆನಾಡ ಬನಗಳಲಿ
ಹರಿವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
ದನಿಯು ದನ ಕಾಯುವನ ಕೊಳಲೊಡನೆ ಬರಲಿ
ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ
ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ
ಗೋಪಾಲನಾಗಿರುವ ತಿವ್ಮುನೆನಗಿರಲಿ.

ಅಂಥ ತಿಮ್ಮ ಪ್ರತಿಯೊಬ್ಬರಿಗೂ ಸಿಗುತ್ತಾನೆ. ಮರೆಯಲಾಗದಂತೆ ಕಾಡುತ್ತಾನೆ. ಅವನು ಗಂಡನಾಗಲಾರ, ತಂದೆಯಾಗಲಾರ, ತಮ್ಮನಾಗಲಾರ, ಅಣ್ಣನಾಗಲಾರ. ಬರೀ ದೂರದ ಗೆಳೆಯ ಅವನು. ಗುಟ್ಟಾಗಿ ಪಾರಿಜಾತ ತಂದುಕೊಡುವ, ಕೊಳಲೂದಿ ಖುಷಿಪಡಿಸುವ, ಸಂಜೆಯ ಎಳೆಬಿಸಿಲಲ್ಲಿ ಹೊಸಿಲ ಬಳಿ ನಿಂತು ನೋೋಡುವವಳ ಖುಷಿಗೆಂದೇ ಹಾಡುತ್ತಾ ಹೋಗುವ, ಹಾವು ಹಿಡಿದು ಆಟವಾಡುವ, ಕಾಡಲ್ಲಿ ಅಲೆಯುವ, ನವಿಲುಗರಿ ತಂದುಕೊಡುವ ಹುಡುಗ. ಅವನೇ ಒಂದು ಕೊಳಲು. ಅವಳ ನಿಟ್ಟುಸಿರಿಗೆ ಆ ಕೊಳಲು ದನಿಯಾಗುತ್ತದೆ!
******
ಅಂಥ ಕೃಷ್ಣ ಕೂಡ ಕೊಳಲನ್ನು ಬಿಸುಟು ಮಧುರೆಗೆ ಹೊರಡಬೇಕಾಗುತ್ತದೆ ಮಧುರೆಯೆಂಬುದು ಕರ್ಮಭೂಮಿ. ಗೋಕುಲವೆಂಬುದು ರಮ್ಯ ಭೂಮಿ. ಸಾಧಿಸಬೇಕಾದರೆ ಮಧುರೆಗೆ ಬಾ ಅನ್ನುತ್ತಾನೆ ಬಲರಾಮ. ಕೃಷ್ಣ ಹೊರಟು ನಿಂತನೆಂದರೆ;
ಅಕೋ ಶ್ಯಾಮ ಅವಳೆ ರಾಧೆ ನಲಿಯುತಿಹರು ಕಾಣಿರೇ
ನಾವೇ ರಾಧೆ ಅವನೆ ಶ್ಯಾಮ ಬೇರೆ ಬಗೆಯ ಮಾಣಿರೇ
ಅನ್ನುವುದೆಲ್ಲ ಬರಿ ನೆನಪು. ಆದರೆ ಅಕ್ರೂರ ತನ್ನ ಹೆಸರಿಗೇ ವಿರುದ್ಧ. ಅವನು ಹುಂಬ ಬಲರಾಮನ ಮನಸ್ಸು ಕೆಡಿಸಿದ್ದಾನೆ;
ಹಳುವ ಹಳ್ಳಿಯ ಬಿಡುತ ಸೊಗಸಿನ ಹೊಳಲ ಜಾತ್ರೆಗೆ ಹೋಗುವ ಎಂದು ಪ್ರಲೋಭನೆ ಒಡ್ಡಿದ್ದಾನೆ.
ಹೈ ಹಚಚ್ಚಾ ಎಂದು ತುರುಗಳ ಹಣ್ಣು ಮುದುಕರೆ ಕಾಯಲಿ
ಹಟ್ಟಿಯೊಳೆ ನಿಟ್ಟುಸಿರನಿಡುತ ಹೆಂಗಳುಳಿಯಲಿ ಊರಲಿ

ಎಂದು ಇನ್ನಿಲ್ಲದ ಕ್ರೌರ್ಯ ಪ್ರದರ್ಶಿಸುತ್ತಾ ಬಲರಾಮ ತರುಣರನ್ನೆಲ್ಲ ಮಧುರೆಗೆ ಹೋಗಲು ಪ್ರೇರೇಪಿಸುತ್ತಿದ್ದಾನೆ. ಕೃಷ್ಣ ಹೇಳುತ್ತಾನೆ; ಹೊರನಾಡಿನ ಕರೆ, ಕೇಡಿನ ಕರೆ. ಮಧುರೆಯ ಕರೆ ಕೇಡಿನ ಕರೆ.
ಆದರೆ ಅಕ್ರೂರ ಬಿಡುವುದಿಲ್ಲ. ಅವನು ಆಗಲೇ ಎಲ್ಲರನ್ನೂ ಭ್ರಷ್ಟಗೊಳಿಸಿದ್ದಾನೆ. ಅಣ್ಣ ಬಲರಾಮೇ ಅಕ್ರೂರನಿಗೆ ಒಲಿದಿದ್ದಾನೆ.
ಬಾಬಾ ಮಧುರೆಗೆ ಬಾ
ಹಳುವನುಳಿದು ಬಾ
ಕೊಳಲನೆಸೆದು ಬಾ
ಹೆಂಗಳ ಹಂಬಲ ತೊರೆಯುತ ಬಾರೈ
ಬಾಬಾ ಮಧುರೆಗೆ ಬಾ
ಹೊಸ ಮನದೊಳು ಬಾ
ಹೊಸ ಬಾಳಿಗೆ ಬಾ
ಎಂದು ಕರೆಯುತ್ತಾನೆ. ಅದು ಬೇಡಿಕೆಯೂ ಹೌದು, ಅಪ್ಪಣೆಯೂ ಹೌದು. ಬರದೇ ಹೋದರೆ ಹಾಳಾಗಿ ಹೋಗುತ್ತಿ ಅನ್ನೋ ಎಚ್ಚರಿಕೆಯೂ ಹೌದು.
ಕೃಷ್ಣ ಬೇರೆ ದಾರಿ ಕಾಣದೇ ಹೊರಡುತ್ತಾನೆ. ಕೊಳಲ ಬಿಸುಟು ಹೊರಡುತ್ತಾನೆ. ಹೊಳಲಿಗೆ ಕೊಳಲಿದು ತರವಲ್ಲ, ಮಧುರೆಗಿದರ ಸವಿ ಸಲ್ಲ ಅನ್ನುತ್ತಾನೆ. ಗೆಳತಿಯರು ಹಾಡುತ್ತಾರೆ; `ನಿಲ್ಲಿಸದಿರೋ ವನಮಾಲಿ ಕೊಳಲಗಾನವ..' ಅವನ ಕೊಳಲ ಗಾನ ಅವರಿಗೆ ಬೇಕು; ನೀರು ನಿಂತು ಕೊಳೆಯುವಂತೆ, ನಮಗಹುದೋ ನೂರು ಚಿಂತೆ, ಕೊಳಲುಲುಹಿನ ನೆರೆಯ ನುಗ್ಗಿ, ಜೀವ ಹರಿಯಲೆಂಥ ಸುಗ್ಗಿ. ನಿನ್ನ ಗಾನದನುರಾಗವು, ಬದುಕ ತುಂಬಲಿ ಅನುಗಾಲವೂ, ನಿಲ್ಲಿಸದಿರು ವನಮಾಲಿ ಕೊಳಲಗಾನವ..
*****
ಕೃಷ್ಣ ಕೊಳಲ ಬಿಸುಟು ಮಧುರೆಗೆ ಹೋಗುತ್ತಾನೆ. ಮತ್ತೆ ಬಂದು ಕೊಳಲನ್ನು ಎತ್ತಿಕೊಳ್ಳುತ್ತೇನೆ ಅಂದುಕೊಳ್ಳುತ್ತಾನೆ. ಮಧುರಾನಗರಿ ಅದಕ್ಕೆ ಅವಕಾಶ ಕೊಡುವುದೇ ಇಲ್ಲ. ಕೃಷ್ಣ ಮಧುರೆಯಲ್ಲಿ ಕಳೆದುಹೋಗುತ್ತಾನೆ.
ಕೊಳಲ ಬಿಸುಟವನು ಶಂಖ ಕೈಗೆತ್ತಿಕೊಳ್ಳುತ್ತಾನೆ. ಅನುರಾಗದ ಕೊಳಲು ಹೋಗಿ ಅನುವರದ ಶಂಖ ಕೈಗೆ ಬರುತ್ತದೆ. ರಾಧೆಯನ್ನು ಮತ್ತೆಂದೂ ಕೃಷ್ಣ ನೋಡುವುದಿಲ್ಲ. ಕೃಷ್ಣನನ್ನು ರಾಧೆ ಕೂಡ. ಗೋಕುಲದಲ್ಲಿ ಕಾಯುತ್ತಿರುವ ಗೆಳೆಯರು, ಮುಪ್ಪಿನ ಮುದುಕರು, ಹೆಂಗಳೆಯರ ಪಾಲಿಗೆ ಕೃಷ್ಣನಿಲ್ಲ. ಅವನು ಯಾರನ್ನೋ ಗೆಲಿಸಲು, ಯಾರನ್ನೋ ಕೊಲಿಸಲು ಹೊರಟ ಜಗನ್ನಾಟಕ ಸೂತ್ರಧಾರಿ.
*****
ನಾವೆಲ್ಲ ಗೋಕುಲ ಬಿಟ್ಟು ಬೆಂಗಳೂರೆಂಬ ಮಧುರಾನಗರಿಗೆ ಬಂದಿದ್ದೇವೆ. ಕೊಳಲ ಮರೆತಿದ್ದೇವೆ. ನಮ್ಮವರ ಮರೆತಿದ್ದೇವೆ. ಮತ್ತೆ ಹೋಗಿ ಕೊಳಲನ್ನು ಎತ್ತಿಕೊಳ್ಳುತ್ತೇವೆ ಅನ್ನುವ ನಂಬಿಕೆಯಿಂದಲೇ ಹೊರಟವರಿಗೆ ಮತ್ತೆ ಮರಳುತ್ತೇವೆ ಅನ್ನುವ ನಂಬಿಕೆಯಿಲ್ಲ. ನಮ್ಮ ಕೈಗೂ ಶಂಖ ಬಂದಿದೆ. ರಣೋತ್ಸಾಹದಲ್ಲಿ ಮುನ್ನುಗ್ಗುತ್ತಿದ್ದೇವೆ.
ಅಲ್ಲಿ ನಮ್ಮೂರಿನಲ್ಲಿ ತರುಣರಿಲ್ಲ. ಕೊಳಲನಾದವಿಲ್ಲ, ಹೋಗಿ ಮತ್ತೆ ಕೊಳಲೂದುವುದು ಕಷ್ಟವೇನಲ್ಲ, ಆದರೆ ಬಲರಾಮ ನಮ್ಮನ್ನೆಲ್ಲ ಬಲಿತೆಗೆದುಕೊಂಡಿದ್ದಾನೆ. ಕೃಷ್ಣನೊಳಗೆ ಬಲರಾಮ ಒಂದಾಗಿಬಿಟ್ಟಿದ್ದಾನೆ. ಮುದುಕರು ದನ ಕಾಯಲಿ, ಹೆಂಗಳೆಯರು ನಿಟ್ಟುಸಿರಡಲಿ ಊರಲಿ ಅನ್ನುವ ನಿರ್ಲಕ್ಪ್ಯಕ್ಕೆ ಕೊಳಲು ಒಡೆದು ಬಿದ್ದಿದೆ.
ಚಿಕ್ಕಪ್ಪನ ರೂಪದಲ್ಲೋ ಮೇಷ್ಟ್ರ ರೂಪದಲ್ಲೋ ನಗರ ಸೇರಿದ ಗೆಳೆಯನ ರೂಪದಲ್ಲೋ ಕೆಲಸದ ರೂಪದಲ್ಲೋ ಅಕ್ರೂರ ಬರುತ್ತಾನೆ. ನಮ್ಮನ್ನು ನಮ್ಮ ನೆಲ, ನಮ್ಮ ಗೆಳತಿಯರು, ನಮ್ಮ ಕಲೆ, ನಮ್ಮ ಅಲೆದಾಟ, ನಮ್ಮ ಸಂಭ್ರಮಗಳಿಂದ ಬಿಡಿಸಿ ರಾಜಧಾನಿಗೆ ತಂದು ಚೆಲ್ಲುತ್ತಾರೆ.
******
ಬನ್ನಿರಿ ನಾವೆಲ್ಲ ಮಧುರೆಗೆ
ಬಿಲ್ಲ ಹಬ್ಬಕೆ ಹೋಗುವಾ...

ಹಾಗಂತ ಕರೆಯುತ್ತಾ ಮಧುರೆಯಿಂದ ಅಕ್ರೂರ ಬರುತ್ತಾನೆ. ಯಾವ ಕ್ಷಣದಲ್ಲಿ ಬೇಕಾದರೂ ಬರಬಹುದು.
ಹುಷಾರಾಗಿರಿ.

ಚಿತ್ರ- ಕೆ ಎಂ ವೀರೇಶ್. ಈ ಗೋಕುಲದಂಥ ಊರು ಕಾಡಿನ ನಡುವೆ ಕಣ್ಣು ಮಿಟುಕಿಸುತ್ತಿದೆ. ಪಕ್ಕದಲ್ಲೇ ಗೋವರ್ಧನಗಿರಿಯಂಥ ಮೇರ್ತಿಗಿರಿ ಇದೆ. ಗಿರೀಶ್ ಕಾಸರವಳ್ಳಿ ತಮ್ಮೊಂದು ಸಿನಿಮಾವನ್ನು ಇದೇ ಪ್ರದೇಶದಲ್ಲಿ ಶೂಟಿಂಗು ಮಾಡಿದ್ದರು.

17 comments:

Anonymous said...

Ellara Kaige Shankha Bandilla.. Kelavara kaige Bandiddu baree Chippu..:-)

Anonymous said...

ಪು.ತಿ.ನ ರ ಗೋಕುಲ ನಿರ್ಗಮನ ನಾಟಕ ನೆನಪಾಗ್ತಾ ಇದೆ.. ಕಾರಂತರು ಅದನ್ನೆಷ್ಟು ಸಮರ್ಥವಾಗಿ ರಂಗದ ಮೇಲೆ ತಂದಿದ್ದರು?
ಸುಬ್ಬಣ್ಣನವರು ಕೂಡ ಗೋಕುಲ ನಿರ್ಗಮನ ದ ಕುರಿತು ಒಂದು ಅರ್ಥಪೂರ್ಣವಾದ ಲೇಖನ ಬರೆದಿದ್ದಾರೆ.

ಕಿರಣ್

ಗಿರೀಶ್ ರಾವ್, ಎಚ್ (ಜೋಗಿ) said...

ಕಿರಣ್
ನಾನಿದನ್ನು ಬರೆದದ್ದು ಗೋಕುಲ ನಿರ್ಗಮನ ನಾಟಕವನ್ನು ನೆನೆದು. ಅದೊಂದು ನಾಟಕ ತುಂಬ ದಿನದಿಂದ ಕಾಡುತ್ತಿತ್ತು. ಗೋಕುಲ ನಿರ್ಗಮನ ಎಂಬ ರೂಪಕವೇ ಎಷ್ಟೊಂದು ದಟ್ಟವಾಗಿದೆ. ಗಂಡಿಗೂ ಕೂಡ ತವರನ್ನು ತೊರೆಯುವುದರ ಸಂಕಟ ಅರ್ಥವಾಗುವಂತಿದೆ.

Anonymous said...

You see more and beyond what we the mortals can.

Very touched and humbled by this piece. My rootlessness haunts me more than ever today.

Nagaraj Vastarey

KUNTINI said...

ಕೃಷ್ಣ ಕೊಳಲು ಬಿಸಾಡಲಿಲ್ಲ.ರಾಧೆ ಕೈಗೆ ಕೊಟ್ಟ.ಇದು ನಿನಗೆ ಎಂದ.ರಾಧೆ ಮಾತೆತ್ತುವುದಿಲ್ಲ.ಮತ್ತೊಮ್ಮೆ ಬರುವೆಯಾ ಎಂದು ಕೇಳಿದರೆ ಕೃಷ್ಣ ಮೌನಿ.ಅವನಿಗೆ ಗೊತ್ತಿತ್ತು,ಬರಲಾಗುವುದಿಲ್ಲ ಎಂದು.
ರಾಧೆಗೆ ಬಾ ಎಂದು ಕರೆಯುತ್ತಾನೆ.ಅವಳು ಬರಲಾರೆ ಎನ್ನುತ್ತಾಳೆ.ನಿನ್ನನ್ನು ಇಲ್ಲಿ ಈ ವೃಂದಾವನದಲ್ಲಿ,ಗಿಡಮರಗಳಲ್ಲಿ ,ನೀರ ತೊರೆಯಲ್ಲಿ,ಹೂವು ಹಕ್ಕಿಗಳಲ್ಲಿ ಹುಡುಕುವೆ ಎನ್ನುತ್ತಾಳೆ...ಮತ್ತು ಆಕೆ ಹಾಗೇ ಅನವರತ ಹುಡುಕುತ್ತಾಳೆ...
ಕೃಷ್ಣ ರಾಧೆಯನ್ನು ಹುಡುಕಿದನೇ ಎಂದಾದರೂ..ಗೊತ್ತಿಲ್ಲ.

sritri said...

"ಅಕ್ಕಾ..ನಂದ ಗೋಪನರಮನೆಯೊಳಗೊಬ್ಬ ಅಕ್ರೂರ ಬಂದನಂತೆ. ಹೊಕ್ಕು ಬಳಸುವಳಲ್ಲ,ಹುಸಿಯಾಡುವನಳಲ್ಲ, ಇಕ್ಕೋ ಬಾಗಿಲ ಮುಂದೆ ಈಗ ರಥವ ಕಂಡೆ" (ದಾಸರ ಪದ) ವಿದಾಯದ ಕ್ಷಣಕ್ಕೆ ನಾಂದಿ ಹಾಡಲು ಈ ಕ್ರೂರಿ ಅಕ್ರೂರ ಬರಲೇ ಬೇಕೇ? ಕಾಡುವ ಮೋಹನ ಮುರಳಿಯಿಂದ ನಮಗಿಲ್ಲವೇ ಮುಕ್ತಿ?

"ಅಮೆರಿಕದಲ್ಲಿ ಬಿಲ್ಲು ಹಬ್ಬ"(HSV)ನನ್ನಿಂದ ಕಣ್ಣೀರ ಕಾಣಿಕೆ ಪಡೆವ ಇನ್ನೊಂದು ಕವಿತೆ.

ಹಾಲಸ್ವಾಮಿ ಆರ್.ಎಸ್. said...

ಪುತಿನಾ ಅವರ ಗೋಕುಲ ನಿರ್ಗಮನ ಬಹುಕಾಲ ಕಾಡಿದ ನಾಟಕ. ನಮ್ಮೆಲ್ಲರ ಬೇರು ನೆನಪಿಸುವ ಅದ್ಭುತ ಗೀತ ನಾಟಕ. ಕೃಷ್ಣ ಗೋಕುಲದಲ್ಲಿ ಕೊಳಲ ಬಿಸಟು ಹೊರಡುತ್ತಾನೆ. ಮತ್ತೆಂದೂ ಆತ ಬಾಲ್ಯದ ಮುರಳಿಯ ಲೋಕಕ್ಕೆ ಮರಳನು....ಯಮುನೆಯ ತಟ, ಗೋಪ, ಗೋಪಿಕೆಯರು ಎಲ್ಲವನ್ನೂ ತೊರೆದು ರಾಜಕೀಯಕ್ಕೆ ದುಮುಕುತ್ತಾನೆ.....ಶಿವಮೂಗ್ಗದಲ್ಲಿ ಮುಂಗಾರು ಆರಂಭವಾಗಿದೆ- ಮಳೆಗಿಂತ ಗಾಳಿ ಜೋರಿದೆ...ಮತ್ತೊಮ್ಮೆ ಗೋಕುಲ ನಿರ್ಗಮನ ಓದುವ ತವಕವಾಯ್ತು. ಎಲ್ಲವಳೆಲ್ಲವಳು..ಎಲ್ಲವಳೆಲ್ಲವಳು..ಎಲ್ಲವಳೆಲ್ಲವಳು ಹಾಡು ಕೇಳಿದೆ...ಇದಕ್ಕೆಲ್ಲಾ ಕಾರಣ- ಗೋಕುಲ ಎಂಬ ನಮ್ಮೂರು, ಮಧುರೆಯೆಂಬ ಬೆಂಗಳೂರು.

ಹಾಲಸ್ವಾಮಿ ಆರ್.ಎಸ್. said...

ಪುತಿನಾ ಅವರ ಗೋಕುಲ ನಿರ್ಗಮನ ಬಹುಕಾಲ ಕಾಡಿದ ನಾಟಕ. ನಮ್ಮೆಲ್ಲರ ಬೇರು ನೆನಪಿಸುವ ಅದ್ಭುತ ಗೀತ ನಾಟಕ. ಕೃಷ್ಣ ಗೋಕುಲದಲ್ಲಿ ಕೊಳಲ ಬಿಸಟು ಹೊರಡುತ್ತಾನೆ. ಮತ್ತೆಂದೂ ಆತ ಬಾಲ್ಯದ ಮುರಳಿಯ ಲೋಕಕ್ಕೆ ಮರಳನು....ಯಮುನೆಯ ತಟ, ಗೋಪ, ಗೋಪಿಕೆಯರು ಎಲ್ಲವನ್ನೂ ತೊರೆದು ರಾಜಕೀಯಕ್ಕೆ ದುಮುಕುತ್ತಾನೆ.....ಶಿವಮೂಗ್ಗದಲ್ಲಿ ಮುಂಗಾರು ಆರಂಭವಾಗಿದೆ- ಮಳೆಗಿಂತ ಗಾಳಿ ಜೋರಿದೆ...ಮತ್ತೊಮ್ಮೆ ಗೋಕುಲ ನಿರ್ಗಮನ ಓದುವ ತವಕವಾಯ್ತು. ಎಲ್ಲವಳೆಲ್ಲವಳು..ಎಲ್ಲವಳೆಲ್ಲವಳು..ಎಲ್ಲವಳೆಲ್ಲವಳು ಹಾಡು ಕೇಳಿದೆ...ಇದಕ್ಕೆಲ್ಲಾ ಕಾರಣ- ಗೋಕುಲ ಎಂಬ ನಮ್ಮೂರು, ಮಧುರೆಯೆಂಬ ಬೆಂಗಳೂರು.

suptadeepti said...

ಕವಿ-ಮಿತ್ರ ದತ್ತಾತ್ರಿ ಅವರ ಒಂದು ಲೇಖನವು ಕವಿ ಎಚ್.ಎಸ್.ವಿ.ಯವರ "ಬಿಲ್ಲುಹಬ್ಬ"ದ ಬಗ್ಗೆಯೇ ಇದೆ. ಹಾಗೆಯೇ ೨೦೦೫ರ ಸೆಪ್ಟೆಂಬರಿನಲ್ಲಿ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ನಡೆಸಿದ ಕನ್ನಡೋತ್ಸವದಲ್ಲಿ ಪುತಿನರ ಮಗಳು ಅಲಮೇಲು ತಮ್ಮ ನೇತೃತ್ವದಲ್ಲಿ "ಗೋಕುಲ ನಿರ್ಗಮನ" ಗೀತ ರೂಪಕ ನಡೆಸಿಕೊಟ್ಟಿದ್ದರು. ಎರಡನ್ನೂ ಆಪ್ತವಾಗಿ ನೆನಪಿಸಿ, ಅದಕ್ಕೂ ಮುಂದೆ ಒಂದು ಹೆಜ್ಜೆ ನಡೆಸಿತು ನಿಮ್ಮ ಲೇಖನ. ಧನ್ಯವಾದಗಳು.

Shiv said...

ಮನೋಜ್ಞವಾಗಿದೆ ಗಿರೀಶ್ ಅವರೇ,

>>ಮಧುರೆಯಿಂದ ಅಕ್ರೂರ ಬರುತ್ತಾನೆ. ಯಾವ ಕ್ಷಣದಲ್ಲಿ ಬೇಕಾದರೂ ಬರಬಹುದು.

ದಿಟ ಸತ್ಯ..ಮಧುರೆಗೆ ಹೋಗುವಾಗ ಮರಳಿ ಬರಲಾಗುವುದಿಲ್ಲ ಅಂತಾ ಗೊತ್ತಿದ್ದರೂ ಹೋಗುವುದಿದೆಯಲ್ಲಾ..ಅದು ಯಾತನಾಮಯ..

Anonymous said...

ಜೋಗಿಯವರೇ, ಕಷ್ಟಪಟ್ಟು ಊರಿನ ನೆನಪನ್ನು ಹೊರದೂಡುವ ನನ್ನಂಥವರಿಗೆ ಮತ್ತೆ ಒಂದು ವಾರ ಊರು ಕಾಡುವಂತೆ ಮಾಡಿಬಿಟ್ಟಿರಲ್ಲಾ...

ಮಹಾಬಲ ಸೀತಾಳಭಾವಿ

Sanath said...

ನಾನು ಮನೆಗೆ ಹೊಗಿ ತು೦ಬಾ ದಿನ ಆಯಿತು. ರಜೆಗೆ ಅರ್ಜಿ ಹಾಕಿ ಬ್ಲಾಗ್ ತೆಗೆದರೆ .......
"ಗೋಕುಲ ಎಂಬ ನಮ್ಮೂರು, ಮಧುರೆಯೆಂಬ ಬೆಂಗಳೂರು" ......ಅದನ್ನೊದಿದ ಮೇಲೆ ಯಾಕೊ..ಮನೆಗೆ ನೆನಪು ಜಾಸ್ತಿ ಯಾಗುತ್ತಾ ಇದೆ.
ಕನಿಷ್ಟ ಒ೦ದು ವಾರ ನಾನು ಮತ್ತೆ ಹೋಗಿ ಕೊಳಲನ್ನು ಎತ್ತಿಕೊಳ್ಳುವ೦ತಾಗಲಿ.

Anonymous said...

nice

pradyumna said...

brother,
shankha beda antane nanu nammuralli irodu..shankha uduvastu shakthi illa...kolala nadave saku..manasige...balukuttiruva lathe..yamuneya nruthya ella anubhavisuttiddene..

pradyumna said...

heart touching..

suptadeepti said...

@ಪ್ರದ್ಯುಮ್ನ: "shankha beda antane nanu nammuralli irodu..shankha uduvastu shakthi illa...kolala nadave saku..manasige...balukuttiruva lathe..yamuneya nruthya ella anubhavisuttiddene.."
ಶಂಖ ಬೇಡವೆಂದಾಗಲೀ, ಶಕ್ತಿಯಿಲ್ಲವೆಂದಾಗಲೀ, ಏನೇ ಕಾರಣವಿರಲಿ- ಯಮುನೆಯ ತಟದಲ್ಲಿ ಕೊಳಲನೂದುತ್ತಾ, ಲತಾಲಾಸ್ಯದೊಡನೆ, ನಿರ್ಮಲ ವಾಯು-ಜಲ-ನೆಲದೊಳಗೆ ನಲಿಯುವ ನೀವೇ ಧನ್ಯರು. ನಿಮ್ಮ ಅದೃಷ್ಟಕ್ಕೆ ವಂದನೆಗಳು.

Anonymous said...

Dear Jogi,
Wonderful article! It is felt by everyone who moves homes, it could be as simple as moving from Malleshwaram to HSR layout or as far as from Bangalore to London.
But I have found a solution, I try to create the kolalu and Madhure where ever I move. The harsh fact of life is, no point in thinking about what has been left behind..and you will be surprised, what is left behind is so beautiful in ones mind..but when you go back anticipating the same, you will be faced with the reality that the people would have moved on...it is just the Bhavajeevigalu like us who have forgotten to move on. Ofcourse I do enjoy reading such sentiments and trying to assure myself that I will not be touched, with a bleeding heart that cries to be back there to the kolalu gaana.
preetiyinda...