Friday, May 18, 2007

ಅಂಥ ಸುಂದರಿಯನ್ನೂ ಅವನು ಕಣ್ಣೆತ್ತಿ ನೋಡಲಿಲ್ಲ!

ಓದುತ್ತಾ ಕುಳಿತರೆ ಬೆರಗುಗೊಳಿಸುವುದು ಇವತ್ತಿಗೂ ಕುಮಾರವ್ಯಾಸನ ಭಾರತ. ಅದರಲ್ಲಿ ಬರುವ ಪ್ರತಿಯೊಂದು ಪ್ರಸಂಗದ ಕುರಿತೂ ಸುದೀರ್ಘವಾಗಿ ಬರೆಯಬಹುದು. ಬಿಡಿಸುತ್ತಾ ಹೋದಂತೆ ಅರಳಿಕೊಳ್ಳುತ್ತಾ ಹೋಗುವ ಪದ್ಯಗಳನ್ನು ಕುಮಾರವ್ಯಾಸ ಬರೆದಿದ್ದಾನೆ.
ಈ ಪ್ರಸಂಗದಲ್ಲಿ ರಸಿಕ ಶಿಖಾಮಣಿ ಎಂದು ಕರೆಸಿಕೊಂಡ ಅರ್ಜುನ ಕೂಡ ಸಂಯಮದಿಂದ ವರ್ತಿಸಿದ ಒಂದು ಸನ್ನಿವೇಶದ ಚಿತ್ರಣ ಇದೆ. ಅನೇಕ ಕಾರಣಗಳಿಗೆ ಇದು ನನಗಿಷ್ಟ. ಇದರಲ್ಲಿ ಅರ್ಜುನನಾಗಿ ರಾಜ್ ಕುಮಾರ್ , ಊರ್ವಶಿಯಾಗಿ ಜಯಪ್ರದ ನಟಿಸಿದ್ದರೆ ಹೇಗಿರುತ್ತಿತ್ತು ಅಂತ ಇದನ್ನು ಓದುವಾಗೆಲ್ಲ ಅನ್ನಿಸುತ್ತಿತ್ತು.ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೋ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿದೇವತೆಯೋ ವರ್ಣಿಸುವೊಡರಿದೆಂದ

ಕುಮಾರವ್ಯಾಸ ಶೃಂಗಾರರಸಕ್ಕೆ ಇಳಿದನೆಂದರೆ ಅವನದು ನಿಜಕ್ಕೂ ಕಂಠಪತ್ರದ ಉಲುಹುಗೆಡದಗ್ಗಳಿಕೆಯೇ! ಚೆಲುವೆಯರ ರೂಪವನ್ನು ಹಾಗೇ ಮನಸ್ಸಿನ ಮುಂದೆ ಸಾಕಾರಗೊಳ್ಳುವಂತೆ ವರ್ಣಿಸುತ್ತಾನೆ ಅವನು. ದ್ರೌಪದಿಯ ವರ್ಣನೆಯೇ ಇರಬಹುದು. ಅರಣ್ಯಪರ್ವದಲ್ಲಿ ಬರುವ ಊರ್ವಶಿಯ ಸೊಬಗಿನ ವರ್ಣನೆಯೇ ಇರಬಹುದು, ಅವನದ್ದು ಅಖಂಡ ರಸಿಕತೆ. ಶೃಂಗಾರಕ್ಕಿಳಿದರೆ ಅವನಿಗೆ ಅಲ್ಲಿ ಯಾವ ಸಂಕೋಚವೂ ಇಲ್ಲ. ಏನು ಮಾಡಿದರೂ ಮಾಫಿ. ಏನು ನೋಡಿದರೂ ಮಾಫಿ!
ಕುಮಾರವ್ಯಾಸನ ವರ್ಣನೆಗೆ ಊರ್ವಶಿಯೇ ಆಗಬೇಕು ಅಂತೇನಿಲ್ಲ. ಅದು ದ್ರೌಪದಿಯಾದರೂ ಸರಿಯೇ. ಕಥಾನಾಯಕಿಯನ್ನೂ ಕುಮಾರವ್ಯಾಸ ಅಪ್ಪಟ ರಸಿಕತೆಯಿಂದ ವರ್ಣಿಸುತ್ತಾನೆ;
ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ

ಇದನ್ನು ವಿವರಿಸುವ ಅಗತ್ಯವಿಲ್ಲ. ಇದರ ಮುಂದಿನ ಸಾಲಲ್ಲಿ ಕುಮಾರವ್ಯಾಸ ಮತ್ತೂ ರಸಿಕನಾಗುತ್ತಾನೆ; ಹೊಲಬುಗೆಡವೇ ಹೊಳೆವ ವಕ್ಪಸ್ಥಳದೊಳಗೆ ಜನದೃಷ್ಟಿ.. ಅವಳ ಹೊಳೆವ ಎದೆಯೊಳಗೆ ಸಿಲುಕಿದ ದೃಷ್ಟಿ ದಾರಿತಪ್ಪುತ್ತದಂತೆ. ಹೆಣ್ಣು ಹೇಗಿರಬೇಕು ಅನ್ನುವ ವಿವರವನ್ನೂ ಅವನು ಕೊಡುತ್ತಾನೆ;
ಅಸಿಯ ನಡುವಿನ ನಿಮ್ನನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಜಾನು ಜಂಘೆಯ ಚರಣ ಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪ...
ಸಪೂರ ಸೊಂಟ, ಗುಳಿಬಿದ್ದ ಹೊಕ್ಕಳು, ಎದೆಯ ನಡುವಿನಿಂದ ಹೊಕ್ಕಳಿನ ತನಕ ರೇಖಾಕೃತಿಯಲ್ಲಿರುವ ಕಂಡೂ ಕಾಣದಂತಿರುವ ತೆಳುಕೂದಲ ಸಾಲು, ತುಂಬುಸ್ತನ, ಹೊಳೆಯುವ ತೊಡೆ, ಮಿನುಗುವ ಮೀನಖಂಡ... ಹೀಗೆ ವರ್ಣನೆ ಸಾಗುತ್ತದೆ. ಸಣ್ಣ ಸಣ್ಣ ವಿವರಗಳನ್ನು ಕೂಡ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾನೆ ಅವನು. ಗಂಡಸಿನ ಸೌಂದರ್ಯವನ್ನು ಭರತೇಶವಭವದಲ್ಲಿ ವರ್ಣಿಸಿದಷ್ಟೇ ಸೊಗಸಾಗಿ ಇಲ್ಲಿ ಹೆಣ್ಣಿನ ಸೌಂದರ್ಯದ ವಿವರಗಳು ಬರುತ್ತವೆ.
ಆದರೆ ಊರ್ವಶಿ ಮತ್ತು ಅರ್ಜುನರ ಪ್ರೇಮ ಪ್ರಕರಣವನ್ನು ವರ್ಣಿಸುವ ರೀತಿಯೇ ಬೇರೆ.
ಬಂದಳೂರ್ವಶಿ ಬಳ್ಳಿ ಮಿಂಚಿನ
ಮಂದಿಯಲಿ ಮುರಿದಿಳಿವ ಮರಿ ಮುಗಿ
ಲಂದದಲಿ ದಂಡಿಗೆಯನಿಳಿದಳು ರಾಜ ಭವನದಲಿ
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಿಂಜಾರವದ ಸೊಗ
ಸಿಂದ ಶಬ್ದಬ್ರಹ್ಮ ಸೋತುದು ಸೊರಹಲೇನೆಂದ

ಸುಳಿ ಮಿಂಚ ಬಳ್ಳಿಯ ನಡುವೆ ಮರಿಮುಗಿಲೊಂದು ಇಳಿದ ಹಾಗೆ ಪಲ್ಲಕ್ಕಿಯಿಂದ ಊರ್ವಶಿ ಇಳಿದು ಬಂದಳು ಅನ್ನುತ್ತಾನೆ ಕುಮಾರವ್ಯಾಸ. ಹೆಣ್ಣನ್ನು ಹೋಲಿಸುವ ಹೊತ್ತಿಗೆ ಅವನು ಆಶ್ಚರ್ಯಕರವಾಗಿ ಮುಗಿಲನ್ನು ಹೋಲಿಕೆಯಾಗಿ ತೆಗೆದುಕೊಳ್ಳುತ್ತಾನೆ. ಸಾಮಾನ್ಯವಾಗಿ ಎಲ್ಲರೂ ಮುಗಿಲನ್ನು ಹೋಲಿಕೆಯಾಗಿ ತೆಗೆದುಕೊಳ್ಳುವುದು ಮುಂಗುರುಳಿಗೆ. ಕುಮಾರವ್ಯಾಸ ಅದಕ್ಕೇ ವಿಶಿಷ್ಟ.

ಈ ಕತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇವತೆಗಳ ಶತ್ರುಗಳನ್ನು ಗೆದ್ದ ಅರ್ಜುನನನ್ನು ಇಂದ್ರ ಕರೆಸಿಕೊಂಡಿದ್ದಾನೆ. ಅವನಿಗೆ ಸನ್ಮಾನ ಗೌರವ ನಡೆಯುತ್ತದೆ. ಇಂದ್ರನ ಮಗನೂ ಆಗಿದ್ದರಿಂದ ಅರ್ಜುನನಿಗೆ ವಿಶೇಷ ಮರ್ಯಾದೆಯಿದೆ.
ಆಮೇಲೆ ಅರ್ಜುನನಿಗೆ ಜೊತೆಯಾಗಲು ಊರ್ವಶಿಯನ್ನು ಕಳುಹಿಸಿಕೊಡುತ್ತಾನೆ ಇಂದ್ರ. ಊರ್ವಶಿ ಅತೀವ ಸಂತೋಷದಿಂದ ಅರ್ಜುನನನ್ನು ನೋಡಲು ಬರುತ್ತಾಳೆ. ಅರ್ಜುನ ಉಳಿದುಕೊಂಡಿದ್ದ ಮನೆಯ ಮುಂದೆ ಅವಳು ಮೇನೆಯಿಂದ ಇಳಿಯುವುದು ಹೀಗೆ;
ಬಾಗಿಲಲಿ ಬಾಗಿಲಲಿ ನಿಂದರು
ಸೋಗೆಗಣ್ಣಬಲೆಯರು ಸೆಜ್ಜೆಯ
ಬಾಗಿಲಲಿ ಚಾಮರದ ಹಡಪದ ಚಪಲೆಯರು ಸಹಿತ
ಆ ಗರುವೆ ಹೊಕ್ಕಳು ಮಹಾಹಿಯ
ಯೋಗತಲ್ಪದ ಹರಿಯೊಲಿಹ ಶತ
ಯಾಗ ಸುತನನು ಕಂಡಳಂಗನೆ ಮಣಿಯ ಮಂಚದಲಿ
ನವಿಲುಗಣ್ಣಿನ ಹೆಣ್ಣುಗಳು ಬಾಗಿಲು ಬಾಗಿಲಲ್ಲಿ ನಿಂತಿದ್ದರು. ಅಂತಃಪುರದ ಬಾಗಿಲಲ್ಲಿ ಚಾಮರದ ಜೊತೆ ಚಪಲೆಯರಿದ್ದರು, ಹೆಣ್ಣನ್ನು ಚಂಚಲೆ ಅನ್ನುವ ಬದಲು ಚಪಲೆ ಅನ್ನುತ್ತಾರೆ ಕುಮಾರವ್ಯಾಸ. ಅವರ ನಡುವೆ ಆ `ಗರುವೆ' ಶತಯಾಗ ಸುತನನ್ನು ಮಣಿಯ ಮಂಚದಲ್ಲಿ ನೋಡುತ್ತಾಳಂತೆ. ಶತಯಾಗ ಅಂದರೆ ಇಂದ್ರ. ನೂರು ಅಶ್ವಮೇಧ ಯಾಗಗಳನ್ನು ಮಾಡಿದವನು ಇಂದ್ರ, ಅರ್ಜುನ ಇಂದ್ರನ ಮಗ ಅನ್ನುವುದನ್ನು ಉದ್ದಕ್ಕೂ ಹೇಳುತ್ತಲೇ ಬರುತ್ತಾನೆ ಕವಿ. ಅದಕ್ಕೆ ಕಾರಣ ಮುಂದೆ ಸಿಗುತ್ತದೆ.
ಆಕೆ ಒಳಗೆ ಬರುತ್ತಾಳೆ. ಅವಳ ಕುಡಿನೋಟದಲ್ಲಿ ಬೆಳಕು ಸೂಸುತ್ತದೆ. ತನ್ನ ಗೆಳತಿಯರ ಕೊರಳಿನ ಸುತ್ತ ಕೈಹಾಕಿಕೊಂಡು ಆಕೆ ಅವನ ಮಂದೆ ನಿಲ್ಲುತ್ತಾಳೆ. ತರುಣಿ ನಿಂದಳು ನೃಪಕುಲತಿಲಕನ ಅಂಗೋಪಾಂಗದಲಿ ಹರಹಿದಳು ಕಣ್ಮನವಾ..
ಅಷ್ಟು ಹೊತ್ತಿಗೆ ಅರ್ಜುನ ಮಲಗಿದ್ದ. ಆಕೆಯ ಆಗಮನದಿಂದ ಮಲಗಿದ್ದವನ ಎದೆಯೊಳಗೂ ನದಿಯೊಂದು ಓಡಿದಂತಾಗುತ್ತದೆ. ಆತ ಎದ್ದು ನೋಡುತ್ತಾನೆ; ಮೈ ಮುರಿದು ಕಂಡನಪೂರ್ವ ಪರಿಮಳ ಸಾರ್ಥದಲಿ ಪಾರ್ಥ, ಕರಣ ಲಹರಿಯ ದಿವ್ಯ ರತ್ನಾಭರಣ ರುಚಿರತರ ಪ್ರಭಾ ಪಂಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ..
ಆಗ ಎಚ್ಚರಾಗುತ್ತದೆ ಅವನ ವಿವೇಕ. ಆ ಸೌಂದರ್ಯವನ್ನು ನೋಡಿಯೂ ಆತ ಸ್ಥಿಮಿತ ಕಳಕೊಳ್ಳುವುದಿಲ್ಲ ಅನ್ನುವುದನ್ನು ಸೂಚಿಸುತ್ತಾನೆ ಕುಮಾರವ್ಯಾಸ. ಬಂದವಳು ಊರ್ವಶಿ, ಇಂದ್ರನ ರಾಣಿ. ಇಂದ್ರ ತನಗೆ ತಂದೆ. ಅವನ ಅಂತಃಪುರದೊಳಗೆ ಇರುವ ಊರ್ವಶಿ ತನಗೆ ತಾಯಿ ಸಮಾನ. ಆತ ಥಟ್ಟನೆ ಯಾವ ತಪ್ಪು ಅಭಿಪ್ರಾಯಕ್ಕೂ ಅವಕಾಶ ಕೊಡದೇ ಕೇಳುತ್ತಾನೆ;
ಈ ಮಗನಿಂದ ಏನಾಗಬೇಕಿತ್ತು ಹೇಳಿ?
ಊರ್ವಶಿ ಅದನ್ನು ನಿರೀಕ್ಪಿಸಿರಲೇ ಇಲ್ಲ.
ನುಡಿಗೆ ಬೆರಗಾದಳು, ಮನೋಜನ ಸಡಗರಕೆ ತೆಕ್ಕಿದಳು, ಪಾರ್ಥನ ನಡವಳಿಗೆ ಮೆಚ್ಚಿದಳು, ಬೆಚ್ಚಿದಳಂಗಜಾಸ್ತ್ರದಲಿ. ಕಡುಗಿದಳು ಖಾತಿಯಲಿ ಲಜ್ಜೆಯ ಬಿಡೆಯದಲಿ ಭಯಗೊಂಡಳಂಗನೆ ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ.
ಅವಳಿಗೆ ಆಗ ಅನ್ನಿಸಿದ್ದಿಷ್ಟು; ಇವನು ವಿಕಲ ಮತಿಯೋ ನಪುಂಸಕನೋ ಜಡಭರತನೋ ಶ್ರೋತ್ರಿಯನೋ ರೋಗಗ್ರಸ್ತನೋ ಖಳನೋ ಖೂಳನೋ ಅಥವಾ ಇದೊಂದು ಮಾನವ ವಿಕಾರವೇ? ತನ್ನ ಎಡಗಾಲಿನಿಂದ ವಿಕಟ ತಪಸಿನ ದೇವ ದಾನವರ ಕಿರೀಟವನ್ನೇ ಒದ್ದಂಥ ಈ ಸುಂದರಿಗೆ ಇಂಥ ಅಪಮಾನವೇ..
ಅಲ್ಲಿ ಅವರಿಬ್ಬರ ಮಧ್ಯೆ ವಾಗ್ವಾದ ನಡೆಯುತ್ತದೆ. ಹೇಗಾದರೂ ಅರ್ಜುನನನ್ನು ಪಡೆದೇ ತೀರುತ್ತೇನೆ ಎಂಬಂತೆ ಊರ್ವಶಿ ಮುನ್ನುಗ್ಗುತ್ತಾಳೆ. ಆತನ ನಿರಾಕರಣೆ ತನ್ನ ಸೌಂದರ್ಯಕ್ಕೇ ಒಡ್ಡಿದ ಸವಾಲು ಎಂದು ನಿರ್ಧರಿಸುತ್ತಾಳೆ. ಅರ್ಜುನ ತರ್ಕಬದ್ಧವಾಗಿಯೇ ತನ್ನ ವಾದ ಮಂಡಿಸುತ್ತಾನೆ; ನೋಡಮ್ಮಾ ನೀನು ಬಹಳ ಹಿಂದೆ ನಮ್ಮ ಕುಲದ ಹಿರಿಯನಾದ ಪುರೂರವನ ಹೆಂಡತಿಯಾಗಿದ್ದೆ. ಅವನ ಮಗ ಆಯು. ಅವನ ಮಗ ನಹುಷ. ಆಮೇಲೆ ನಹುಷನಿಂದ ನಮ್ಮ ರಾಜಪರಂಪರೆ ಹುಟ್ಟಿತು. ಹೀಗಾಗಿ ನೀವು ನಮ್ಮ ಹಿರಿಯಜ್ಜಿ ಅನ್ನುತ್ತಾನೆ. ಅದಕ್ಕೆ ಆಕೆ ಹೇಳುತ್ತಾಳೆ; ಇಂಥ ಲೆಕ್ಕಾಚಾರವೆಲ್ಲ ಪಕ್ಕಕ್ಕಿಡು. ಅದೇನಿದ್ದರೂ ನಿಮ್ಮ ಜಗತ್ತಿನದು. ಇಲ್ಲಿ ಅದೆಲ್ಲ ಇಲ್ಲ. ತಾತಮುತ್ತಾತ ಮರಿತಾತ ಎಲ್ಲರಿಗೂ ನಾನೊಬ್ಬಳೇ. ಸುಮ್ಮನೆ ಬಂದು ನನ್ನನ್ನು ಸ್ವೀಕರಿಸು ಅಂತಾಳೆ ಆಕೆ.
ಅರ್ಜುನ ಅದಕ್ಕೊಂದು ವಾದ ಮಂಡಿಸುತ್ತಾನೆ; ನಿಮ್ಮ ರೀತಿನೀತಿ ಬೇರೆ ಅಂತೀರಿ ಒಪ್ಪಿಕೊಳ್ಳೋಣ. ಆದರೆ ನಾನು ಮನುಷ್ಯ. ಈ ಜನ್ಮದಲ್ಲಿ ಅದರ ಧರ್ಮ ಪಾಲಿಸುತ್ತೇನೆ. ಸತ್ತು ದೇವಲೋಕಕ್ಕೆ ಬಂದ ಮೇಲೆ ಮುಂದಿನ ಮಾತು. ಊರ್ವಶಿ ಅದಕ್ಕೆ ಗೇಲಿ ಮಾಡುತ್ತಾಳೆ;
ಅಹುದಹುದಲೇ ಶ್ರೌತಪಥದಲಿ
ಬಹಿರಿ ನೀವೇ ಸ್ಮಾರ್ತವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ..
ಒಂದು ಹೆಣ್ಣನ್ನು ಐದು ಮಂದಿ ಅನುಭವಿಸ್ತಾ ಇರೋ ನೀವು ಬಲು ಪ್ರಾಮಾಣಿಕರು ಬಿಡಿ ಅಂತ ಗೇಲಿ ಮಾಡುತ್ತಾಳೆ ಊರ್ವಶಿ. ಏನು ಹೇಳಿದರೂ ಆಕೆ ಒಪ್ಪದೇ ಇರುವಾಗ ಊರ್ವಶಿ ಸಿಟ್ಟಾಗುತ್ತಾಳೆ. ಅವಳು ಬೈಯುವ ಭಾಷೆ ಕೂಡ ಅಷ್ಟೇ ಕಟುವಾಗಿದೆ. ಅವಳ ಸೌಂದರ್ಯಕ್ಕೂ ಆ ಭಾಷೆಗೂ ಸಂಬಂಧವೇ ಇಲ್ಲವೇನೋ ಅನ್ನುವಂತಿದೆ;

ಎಲವೋ ಭಂಡರ ಭಾವ, ಖೂಳರ ನಿಳಯ, ಖಳರಧಿನಾಥ, ವಂಚಕ ತಿಲಕ, ಗಾವಿಲರೊಡೆಯ, ದುಷ್ಟನಾಯಕರ ಬಂಧು.. ಹಾಗಂತ ಬೈದು ಆಕೆ ಶಪಿಸುತ್ತಾಳೆ;
ನರಮೃಗಾಧಮ ನಿಮ್ಮ ಭಾರತ ವರುಷ ಭೂಮಿಯೊಳೊಂದು ವರುಷಾಂತರ ನಪುಂಸಕನಾಗಿ ಚರಿಸು. ಹೋಗಿ ಯಾರ ಹತ್ರ ಬೇಕಾದ್ರೂ ಹೇಳಿಕೋ ಆದರೆ ಈ ಶಿಕ್ಪೆ ನಿನಗೆ ತಪ್ಪದು.
ಅರ್ಜುನ ಅಂದುಕೊಳ್ಳುತ್ತಾನೆ;
ತಪಸ್ಸು ಮಾಡಿದಾಗ ಪಾಶುಪತ ಸಿಕ್ಕಿತು. ಧರ್ಮವೇ ತಪಸ್ಸು ಎಂದು ಆಚರಿಸಿದ್ದಕ್ಕೆ ಸಿಕ್ಕಿದ್ದು ಈ ಷಂಡತನದ ಶಾಪ!
ಇಂಥ ನಾಟಕೀಯ ಕತೆಯೊಳಗಿನ ರೋಚಕತೆ, ಶೃಂಗಾರ ಮತ್ತು ಊರ್ವಶಿಯ ವ್ಯಾಮೋಹವನ್ನೂ ಮೀರುವ ಅರ್ಜುನನ ನಿಲುವು ಗಮನಾರ್ಹ.


ಚಿತ್ರ- ರವಿವರ್ಮನ ಕಲಾಕೃತಿ. ದ್ರೌಪದಿ ಸೈರಂಧ್ರಿಯಾಗಿ ಸುದೇಷ್ಣೆಯ ಅಪ್ಪಣೆಯ ಮೇರೆಗೆ ಕೀಚಕನಿಗೆ ಹಾಲು-ಜೇನು ಕೊಂಡೊಯ್ಯುತ್ತಿದ್ದಾಳೆ.
ಚಿತ್ರಕೃಪೆ-http://commons.wikimedia.org/wiki/Raja_Ravi_Varma

6 comments:

Anonymous said...

thanks for the good work. keep it up. kannadadigarige hLatannu nenapisuvavarobbaru bEkAgittu.

rumbleramble said...

Modala bhetiyalle nimma ee Jogimaneyalli hita-mitavaada aadare sogasaada bhojana unabadisiddeeri, dhanyavaadagalu. Achchariya jotege hemmeyu aayitu-- biduvu maadikondu, namma gnaana sampattannu heege hanchutteerendu. Mattomme baruttene, namaskara

ಹಾಲಸ್ವಾಮಿ ಆರ್.ಎಸ್. said...

ಮಹಾಕಾವ್ಯದ ರಸವತ್ತಾದ ಕ್ಷಣಗಳು ಹೀಗೆ ಬ್ಲಾಗಿನಲ್ಲಿ ದೊರೆಯುವುದೇ ರೋಮಾಂಚನ...ಇಂಥ ರೋಚಕ ಬೆಳವಣಿಗೆಯ ಮಹಾಕಾವ್ಯಗಳು ನೆಟ್‌ನಲ್ಲಿ ಇನ್ನಷ್ಟು ಸಿಗಲಿ..

ಬಹುಶಃ ಪಂಪಭಾರತದಲ್ಲೂ ಇಂಥ ಒಂದು ಪ್ರಸಂಗ ಇದೆ..ಒಂದು ರಾತ್ರಿ ಯುದ್ಧ ಶಿಬಿರದಲ್ಲಿದ್ದ ಕರ್ಣನನ್ನು ಕುಂತಿ ಭೇಟಿ ಮಾಡುತ್ತಾಳೆ.
ಅಲ್ಲಿ ಕುಂತಿಗೆ ಕರ್ಣ ನಾನು ಪಾರ್ಥನನ್ನು ಕೊಲ್ಲುವುದಿಲ್ಲ ಎಂಬ ಮಾತು ಕೊಡುವುದಿಲ್ಲ. ಆದರೆ,‘ಅಮ್ಮ ನಾಳಿನ ಯುದ್ಧದಲ್ಲಿ ಪಂಚ ಪಾಂಡವರು ಉಳಿಯುತ್ತಾರೆ.. ನೀನಿನ್ನು ಹೊರಡು’ ಎನ್ನುತ್ತಾನೆ.
ನಂತರ ಸರದಿ ದ್ರೌಪದಿಯದ್ದು, ಅದೂವರೆಗೂ ಕರ್ಣನ ಬಗ್ಗೆ ಅಡಗಿಸಿಟ್ಟುಕೊಂಡಿದ್ದ ಪ್ರೀತಿಯನ್ನು ನಿವೇದಿಸಿಕೊಳ್ಳುತ್ತಾಳೆ. ಆಕೆಯೂ ದಾನಶೂರ ಕರ್ಣನಲ್ಲಿ ಒಂದು ಮಾತು ಬೇಡುತ್ತಾಳೆ. ಕುಂತಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎನ್ನುತ್ತಾಳೆ.
ನಾಳಿನ ಯುದ್ಧದಲ್ಲಿ ಪಾರ್ಥ ಇಲ್ಲವಾದರೆ ಕರ್ಣ ಪಂಚ ಪಾಂಡವರಲ್ಲಿ ಖಾಲಿ ಆಗುವ ಒಂದು ಸ್ಥಾನವನ್ನು ತುಂಬ ಬೇಕು. ಆ ಮೂಲಕ ದ್ರೌಪದಿಯ ಆಸೆಯನ್ನೂ ಪೂರೈಸಬೇಕು..ಈ ಸಂದಿಗ್ಧದಲ್ಲಿ ಕರ್ಣ ತೊಳಲಾಡುತ್ತಾನೆ. ಕೊನೆಗೆ ಆತ ಯುದ್ಧದಲ್ಲಿ ಗೆಲ್ಲುವ ಛಲವೇ ಇಂಗಿ ಹೋದಂತಾಗುತ್ತದೆ...ಮಹಾಕಾವ್ಯಗಳ ಸ್ವಾರಸ್ಯ ಇರುವುದೇ ಈ ರೀತಿಯ ಕಟ್ಟುವಿಕೆಯಲ್ಲಿ....

Anonymous said...

ಕುಮಾರವ್ಯಾಸನ ಭಾರತಕ್ಕೆ ಹೊಸ ಹೊಳಹು ಸಿಕ್ಕಂತಾಯಿತು. ಇಷ್ಟೇ, ಬಹುಶಃ ಇದಕ್ಕಿಂತ ಸುಂದರ ವರ್ಣನೆ ಚಂಪೂಭಾರತದಲ್ಲಿದೆ. ಅಲ್ಲಿನ ವಲ್ಗತ್ಕುಚೌ ಪರಿಜಹಾಸ ಸಭಾವಲೋಕೇ ಶ್ಲೋಕಕ್ಕೇ ಫುಲ್ ಮಾರ್ಕ್ಸ್!

- ಮಹಾಬಲ ಸೀತಾಳಭಾವಿ

Anonymous said...

ಶಾಲೆಯಲ್ಲಿ ಓದುತ್ತಿದ್ದಾಗ, ಆಗಾಗ ಪಠ್ಯದಲ್ಲಿ ಇರುತ್ತಿದ್ದ ಕಾವ್ಯಗಳು ತಲೆನೋವು ತಂದಿದ್ದು ಸುಳ್ಳಲ್ಲ. ಆದರೆ ಅಂಥವುಗಳನ್ನು ರುಚಿಕಟ್ಟಾಗಿ ಮಾರ್ಪಡಿಸಿದ `ಅಂಥ ಸುಂದರಿಯನ್ನು...' ಬರಹ ಫೈನ್. ಕುಮಾರವ್ಯಾಸ ಬರೆದಿದ್ದು ಕಬ್ಬಿಣದ ಕಡಲೆ ಅಂತ ಇವತ್ತಿಗೂ ಹೇಳುತ್ತಾರೆ. ಇನ್ನೊಂದಿಷ್ಟು ತುಣುಕುಗಳನ್ನು ನೀಡಬಾರದೇ?

-ಆತೀಪಿ

Shashikiran Mullur said...

Very interesting post, thanks!