ಪರಿಮಳದ ತಂಗಾಳಿ ಹರಿದಾಡಿತು;
ದುಂಬಿಗಳ ಸಂಗೀತ ಮೊದಲಾಯಿತು;
ಬಿರಿದರಳ ಬಣ್ಣಗಳ ಹೊಳೆ ಹರಿಯಿತು;
ಚೈತ್ರ, ವೈಶಾಖ -ವಸಂತ ಋತು.
ಸಿರಿವಸಂತದ ಚೆಲುವು ಕಳೆಗುಂದಿತು;
ಉರಿಬಿಸಿಲು ನಿಟ್ಟುಸಿರ ಕದ ತೆರೆಯಿತು;
ಬಿಸಿಗಾಳಿ ಬೀದಿಯಲಿ ಸಂಚರಿಸಿತು;
ಜ್ಯೇಷ್ಠ ಆಷಾಢ - ಗ್ರೀಷ್ಮ ಋತು.
(ಕೆಎಸ್ ನ)
ಉತ್ತರ ಕರ್ನಾಟಕದ ಎಷ್ಟೋ ಹಳ್ಳಿಗಳಲ್ಲಿ ಋತು ಬದಲಾದದ್ದೇ ಗೊತ್ತಾಗುವುದಿಲ್ಲ. ಆಕಾಶದ ಬಣ್ಣ ಬದಲಾಗುವುದು ಕಣ್ಣಿಗೆ ಕಾಣುವುದಿಲ್ಲ. ಅಪರೂಪಕ್ಕೊಮ್ಮೆ ಆಕಾಶ ನೋಡಿದರೆ ಅದು ಅದೇ ಹ್ಯಾಪಮೋರೆ ಹಾಕಿಕೊಂಡು ಸ್ವಸ್ಥ ಬಿದ್ದಿರುತ್ತದೆ. ಇನ್ನು ಮಳೆಯೂ ಕೈಕೊಟ್ಟರೆ ಮಳೆಗಾಲ ಮುಗಿದದ್ದೂ ಚಳಿಗಾಲ ಬಂದದ್ದೂ ಅರಿವಾಗುವುದೇ ಇಲ್ಲ. ಕಾಲ ಯಾವುದೇ ಬದಲಾವಣೆಯಿಲ್ಲದ ಹೆದ್ದಾರಿಯಂತೆ ಚಾಚಿಕೊಂಡಿದೆಯೇನೋ ಅನ್ನಿಸುತ್ತದೆ.
ಇದೀಗ ಮತ್ತೊಂದು ಬೇಸಗೆ. ಪ್ರತಿಬೇಸಗೆಗೂ ಎರಡು ಹಂತ. ಒಂದು ಹೂವರಳುವ ವಸಂತ. ಇನ್ನೊಂದು ಕಾಯಾಗುವ ಗ್ರೀಷ್ಮ. ಇವೆರಡೂ ಋತುಗಳ ಸೊಬಗು ಸವಿಯಬೇಕಾದರೆ ಮತ್ತೆ ಹಳ್ಳಿಗೇ ಹೋಗಬೇಕು. ಮಹಾನಗರಗಳಲ್ಲಿ ಕೂಡ ಋತುವೈಭವದ ಸೊಬಗು ಅಷ್ಟಕ್ಕಷ್ಟೇ. ಅದೇ ಆಕಾಶ, ಅದೇ ಭೂಮಿ, ಅದೇ ಧೂಳು.
ಮಲೆನಾಡಿಗೆ ಹೋದರೆ ಅಲ್ಲಿ ಮಾವು, ಹಲಸು, ನೇರಳೆ ಮರಗಳು ಫಲತೊಟ್ಟು ನಿಂತದ್ದು ಕಾಣುತ್ತದೆ. ಫಲತೊಟ್ಟ ಮರಗಳನ್ನು ನೋಡುತ್ತಿದ್ದರೆ ಮಲೆನಾಡಿನಿಂದ ಬಂದ ಯಾರಿಗೇ ಆದರೂ ಮತ್ತೆ ಮತ್ತೆ ನೆನಪಾಗುವುದು ಬಾಲ್ಯ. ನಿಜವಾಗಿಯೂ ಋತುವಿಲಾಸದ ಸೊಬಗು ತಟ್ಟುವುದು ಬಾಲ್ಯಕ್ಕೆ ಮಾತ್ರ. ಯೌವನದ ಆರಂಭದ ದಿನಗಳ ತನಕ ಈ ಖುಷಿ ಇದ್ದೀತು. ಆಮೇಲೆ ಎಲ್ಲ ಋತುಗಳೂ ಒಂದೇ.
ಈಗ ಚಾಲ್ತಿಯಲ್ಲಿರುವ ಋತು ಯಾವುದು? ವಸಂತ ಎನ್ನುತ್ತದೆ ಪಂಚಾಂಗ. ಗ್ರೀಷ್ಮ ಎನ್ನುತ್ತದೆ ಧಗೆ. ಎಲ್ಲ ಕಡೆಯೂ ವೈಭವೀಕರಣವನ್ನು ನೋಡಿ ನೋಡಿ ಕಾಲಕ್ಕೆ ಕೂಡ ಸ್ವಲ್ಪ ಓವರ್ ಆಕ್ಟಿಂಗ್ ಮಾಡೋಣ ಅನ್ನಿಸಿರಬೇಕು. ಹೀಗಾಗಿ ವಸಂತದಲ್ಲೇ ಗ್ರೀಷ್ಮದ ಬಿರುಸು.
ಈ ಬೇಸಗೆಯಲ್ಲಿ ನೀವೇನು ಮಾಡುತ್ತೀರಿ ಎಂಬುದಷ್ಟೇ ಪ್ರಶ್ನೆ. ಈ ಪ್ರಶ್ನೆ ಅನ್ವಯವಾಗುವುದು ಮಕ್ಕಳಿಗೆ ಮಾತ್ರ. ಮಕ್ಕಳು ಎಂದರೆ ವಿದ್ಯಾರ್ಥಿಗಳು. ವಿದ್ಯಾಭ್ಯಾಸ ಮುಗಿಸಿದವರಿಗೆ ಎಲ್ಲಾ ಕಾಲಗಳಲ್ಲೂ ಅದೇ ಕೆಲಸ. ಹೆಚ್ಚೆಂದರೆ ಒಂದೆರಡು ದಿನ ರಜೆ ಸಿಕ್ಕೀತು. ಆದರೆ ಓದುವ ಹುಡುಗರಿಗೆ ಸುದೀರ್ಘ ರಜೆ.
ನೇರಳೆಯ ಮರದಡಿಯಲ್ಲಿ ಕೂತು ಆಕಾಶದಲ್ಲಿ ಹಾರುವ ಗಿಡುಗನತ್ತ ದೃಷ್ಟಿ ಹಾಯಿಸುತ್ತಾ ಎಸ್ಸೆಲ್ ಭೈರಪ್ಪನವರ ಕಾದಂಬರಿಗಳನ್ನು ಓದುವ ಸುಖ ಬೇಕಿದ್ದರೆ ಅದಕ್ಕೆ ಮಲೆನಾಡಿಗೇ ಹೋಗಬೇಕು. ಪುಟ್ಟದೊಂದು ಅಳಿಲು, ಪೇರಲೆ ಮರಕ್ಕೆ ಬಂದು ಕೂರುವ ಪಂಚವರ್ಣದ ಗಿಳಿ, ಎಲ್ಲಿಂದಲೋ ಹೆಕ್ಕಿ ತಂದ ಮೀನನ್ನು ಗುಳಕ್ಕನೆ ನುಂಗುವ ಮಿಶ್ರವರ್ಣದ ಮಿಂಚುಳ್ಳಿ.. ಅವೆಲ್ಲ ಎಲ್ಲಿ ಹೋದವೋ ಗೊತ್ತಿಲ್ಲ. ಈಗ ಮಿಂಚುಳ್ಳಿಗಳು ಕಾಣಿಸುವುದು ಕಿಂಗ್ ಫಿಷರ್ ಬಾಟಲಿನ ಮೇಲೆ. ಪರಮಸುಖವೆಂದರೆ ಒಂದು ತಣ್ಣನೆಯ ಬಿಯರು. ಆಮೇಲೆ ತಕರಾರಿಲ್ಲದ ತಲೆನೋವು.
ಬೇಸಗೆಯಲ್ಲಿ ಏನೇನು ಓದಬೇಕು ಎಂದು ಪುಸ್ತಕಗಳನ್ನು ಒಟ್ಟುಮಾಡುವುದೂ ಒಂದು ಹವ್ಯಾಸ. ಸ್ಕೂಲಿದ್ದಾಗ ಓದಿದರೆ ಮನೆಯಲ್ಲಿ ಬೈಗಳು. ಕತೆ ಪುಸ್ತಕ ಓದುವುದಕ್ಕೆ ದೀಪ ಉರಿಸಿದರೆ ಮನೆಯಲ್ಲಿ ಕುರುಕ್ಪೇತ್ರ. ಹೀಗಾಗಿ ಕತೆ, ಕಾದಂಬರಿಗಳಿಗೆ ಬೇಸಗೆಯ ನಂಟು. ಒಂದು ಬೇಸಗೆಯಲ್ಲಿ ಓದಿದ ಹತ್ತಾರು ಕಾದಂಬರಿಗಳು, ನೂರೆಂಟು ಕತೆಗಳು, ಏಳೋ ಎಂಟೋ ಪ್ರಬಂಧಗಳು, ಅಷ್ಟಿಷ್ಟು ಕವಿತೆಗಳು ಮತ್ತೊಂದು ಬೇಸಗೆಯ ತನಕ ಬದುಕನ್ನು ಹಸನಾಗಿಸುತ್ತಿದ್ದವು. ಓದಿದ ಕತೆಗಳ ಗುಂಗಲ್ಲೇ ಮನಸ್ಸು ಒಂದು ವರುಷ ಇಡೀ ಮಾಗುತ್ತಿತ್ತು. ಏನು ನೋಡಿದರೂ ಓದಿದ್ದು ನೆನಪಾಗುತ್ತಿತ್ತು. ಅದು ಮಲೆನಾಡ ಹುಡುಗರ ಅನುಭವ.
ಈ ಬೇಸಗೆಯಲ್ಲಿ ಏನು ಓದುತ್ತೀರಿ? ಇದು ಈ ಕಾಲಕ್ಕೆ ಹಾಕಿದ ಪ್ರಶ್ನೆ. ಈ ಪ್ರಶ್ನೆಗೆ ಮಹಾನಗರದ ಹುಡುಗರ ಬಳಿ ಉತ್ತರ ಇಲ್ಲ. ಇಂಗ್ಲಿಷ್ ಓದಬಲ್ಲ ಹುಡುಗರಾದರೂ ಹ್ಯಾರಿ ಪಾಟರ್ ಓದುತ್ತಾರೆ. ಇಯಾನ್ ಫ್ಲೆಮಿಂಗಿನ ಕಾದಂಬರಿಗಳಿಗೆ ಈಗ ಉಳಿಗಾಲವಿಲ್ಲ. ಯಾಕೆಂದರೆ ಆತ ಬರೆದದ್ದೆಲ್ಲ ಟೀವಿಯಲ್ಲಿ ಪ್ರತ್ಯಕ್ಪವಾಗುತ್ತಿದೆ. ಉಳಿದಂತೆ ಓದಬೇಕು ಅನ್ನಿಸುವಂತೆ ಬರೆಯಬಲ್ಲ ಇಂಗ್ಲಿಷ್ ಲೇಖಕರಿಲ್ಲ. ಸ್ಟೀವನ್ ಸನ್ ಬರೆದದ್ದು ಈಗಿನ ಕಾಲಕ್ಕೆ ರುಚಿಸುವುದಿಲ್ಲ.
ಈಗ ಹುಡುಗರಿಗೆ ಏನನ್ನು ಓದಿಸಬೇಕು ಅನ್ನುವ ಪ್ರಶ್ನೆ ಹೆತ್ತವರದ್ದು. ಏನನ್ನಾದರೂ ಓದಿಸಿ, ಮೊದಲು ಓದಿಸಿ ಅನ್ನೋದು ಸರಿಯಾದ ಉತ್ತರ.
ನಗರದಲ್ಲಿರುವ ಮಕ್ಕಳು ಗ್ರಾಮೀಣ ಹಿನ್ನೆಲೆಯ ಕತೆಗಳನ್ನೂ ಗ್ರಾಮೀಣ ಹಿನ್ನೆಲೆಯ ಮಕ್ಕಳು ನಗರಪ್ರಜ್ಞೆಯ ಕತೆಗಳನ್ನೂ ಓದುವುದು ಒಳ್ಳೆಯದು. ಅಂಥ ಪುಸ್ತಕಗಳನ್ನು ಒದಗಿಸುವ ಕೆಲಸವನ್ನು ಹೆತ್ತವರು ಮಾಡಬೇಕು. ತನಗೆ ಅಪರಿಚಿತವಾದ ಒಂದು ಜಗತ್ತನ್ನು ಮಗು ಕಂಡುಕೊಳ್ಳುವುದಕ್ಕೆ ಓದು ನೆರವಾಗಬೇಕು ಅನ್ನುವುದು ಒಂದು ವಾದ.
ಆದರೆ ಮಕ್ಕಳು ನಿಜವಾಗಿಯೂ ಓದಬೇಕಾದದ್ದು ಮ್ಯಾಜಿಕರಿಯಲಿಸಮ್ಮಿನ ಕತೆಗಳನ್ನು. ಇವತ್ತು ಮ್ಯಾಜಿಕರಿಯಲಿಸಂ ಅನ್ನುವುದು ಒಂದು ಸಂಕೀರ್ಣ ಸಾಹಿತ್ಯ ಪ್ರಕಾರವೋ ಸಾಹಿತ್ಯಿಕ ಪರಿಭಾಷೆಯೋ ಆಗಿ ಬಳಕೆಯಾಗುತ್ತಿದೆ ನಿಜ. ಎಂಎಸ್ಕೆ ಪ್ರಭು ಮುಂತಾದವರ ಕತೆಗಳಲ್ಲಿ ಇದನ್ನು ಕಾಣಬಹುದು ಎನ್ನುವುದೂ ಸತ್ಯ.ಆದರೆ ಮಕ್ಕಳ ಕತೆಗಳಲ್ಲಿ ಈ ಮ್ಯಾಜಿಕರಿಯಲಿಸಂ ಎಷ್ಟು ಸರಳವಾಗಿ ಕಾಣಿಸಿಕೊಂಡಿವೆ ಅನ್ನುವುದು ಕುತೂಹಲ ಹುಟ್ಟಿಸುತ್ತದೆ. ಬೇತಾಳ ಕತೆಗಳೋ ವಿಕ್ರಮಾದಿತ್ಯನ ಕತೆಗಳೋ ಸಾವಿರದೊಂದು ಕತೆಗಳೋ ಪಂಚತಂತ್ರವೋ- ಹೀಗೆ ವಿಚಿತ್ರ ಖುಷಿ ಕೊಡುವ ಬದುಕಿನ ಪಾಠ ಹೇಳುವ ಆತ್ಮವಿಶ್ವಾಸ ತುಂಬುವ ಕತೆಗಳು. ಈ ಕತೆಗಳಲ್ಲಿ ಯಾರೂ ಹೀರೋಗಳಿಲ್ಲ;ಯಾರನ್ನೂ ವೈಭವೀಕರಿಸುವುದಿಲ್ಲ.
ಎಷ್ಟೆಲ್ಲ ಹೇಳಿಕೊಂಡರೂ ಕೇಳಿಕೊಂಡರೂ ಮತ್ತದೇ ಪ್ರಶ್ನೆ; ಈ ಬೇಸಗೆಯಲ್ಲಿ ಏನು ಓದಬೇಕು? ಉರಿಬೇಸಗೆಯಲ್ಲಿ ಭೆರಪ್ಪನವರ ಪರ್ವ, ಮಳೆಗಾಲದಲ್ಲಿ ತೇಜಸ್ವಿಯವರ ನಿಗೂಢ ಮನುಷ್ಯರು, ಚಳಿಗಾಲದಲ್ಲಿ ಮಾಸ್ತಿಯವರ ಚಿಕವೀರರಾಜೇಂದ್ರ ಓದಿದ್ದನ್ನು ಮರೆಯದವರಿದ್ದಾರೆ. ಎಪ್ಪತ್ತಾರರ ಬೇಸಗೆಯಲ್ಲಿ ತನ್ನ ಮನೆಯ ಗೇರುಹಣ್ಣಿನ ತೋಟದಲ್ಲಿ ಕುಳಿತು ಒಂದೇ ಏಟಿಗೆ ಕಾನೂರು ಹೆಗ್ಗಡಿತಿ ಓದಿ ಮುಗಿಸಿದ್ದನ್ನು ಇವತ್ತಿಗೂ ಮರೆಯದಂಥ ಓದುಗರಿದ್ದಾರೆ. ಇಪ್ಪತ್ತು ವರುಷಗಳ ಹಿಂದೆ ಓದಿದ ಮಾರ್ಕ್ವೆಸ್ ನ ಲವ್ ಇನ್ ದಿ ಟೈಮ್ ಆಫ್ ಕಾಲರಾದ ಮೊದಲ ಸಾಲುಗಳು It was inevitable; the scent of bitter almonds reminded him of the fate of unrequitted love ಮರೆಯುವಂಥದ್ದೇ ಅಲ್ಲ. ಅನಂತಮೂರ್ತಿಯವರ ಭಾರತೀಪುರದ ಮೊದಲ ಸಾಲುಗಳಾದ `ಜಗನ್ನಾಥ ನಡೆಯುವಾಗ ಹೊಂಡಗಳನ್ನು ಬಳಸುವುದಿಲ್ಲ, ಹಾರುತ್ತಾನೆ' ಅನ್ನುವುದು ಕೂಡ ಅದು ಹೇಗೋ ಒಂದು ರೂಪಕವಾಗಿ ಅಪ್ರತಿಮ ಚೈತನ್ಯ, ಜೀವಂತಿಕೆ ಮತ್ತು ಉತ್ಸಾಹದ ಸಂಕೇತವಾಗಿ ಮನಸ್ಸಿನಲ್ಲಿ ಉಳಿದುಬಿಡುತ್ತದೆ.
ಅದೆಲ್ಲ ಸರಿ, ಈ ಬೇಸಗೆಯಲ್ಲಿ ನೀವೇನು ಓದುತ್ತೀರಿ?
ನಿರ್ಧರಿಸಿ. ಅದು ಮೂವತ್ತು ಗ್ರೀಷ್ಮಗಳ ನಂತರವೂ ನೆನಪಿರುತ್ತದೆ. ನೆನಪಿಡಿ.
ನಾನಂತೂ ಈ ಬೇಸಗೆಗೆ ಅಂತಲೇ ಸುಮಾರು ಅರುವತ್ತರ ದಶಕದ ಚಂದಮಾಮ ತರಿಸಿಟ್ಟಿದ್ದೇನೆ. ಅವುಗಳ ಕತೆಗಳನ್ನು ಓದುವಾಗಿನ ಖುಷಿಯೇ ಬೇರೆ. ಬೇಸಗೆ, ಬಿಸಿಲು ಮತ್ತು ವಿರಾಮಕ್ಕೆ ಚಂದಮಾಮ ಕತೆಗಳಿಗಿಂತ ಸೊಗಸಾದ ಹೊರದಾಗಿ ಮತ್ತೊಂದಿಲ್ಲ.
Thursday, February 21, 2008
Subscribe to:
Post Comments (Atom)
12 comments:
`ಜಗನ್ನಾಥ ನಡೆಯುವಾಗ ಹೊಂಡಗಳನ್ನು ಬಳಸುವುದಿಲ್ಲ, ಹಾರುತ್ತಾನೆ'
It striked me too.
ಬೇಸಗೆ ಅಂದ್ರೆ ನೆನಪಾಗೋದು ಊರು. ಶಾಲೆ ಬಿಟ್ಟ ನಂತರ ಕೂಡ ವರ್ಷದಲ್ಲಿ ಒಂದು ತಿಂಗಳು ಊರಲ್ಲಿ ಕಾಲ ಕಳೀತಿದ್ದೆ. ವಾಪಸ್ ಬಂದ ಮೇಲೆ ಒಂದು ತಿಂಗಳು ರಜೆ ಕೇಳಿದ್ದೀನಿ. ನೋಡಬೇಕು.
Preetiya jogi,
can you please give me the address, where to get aravathara Chandamama?
ಹಳೇ ಚಂದಮಾಮಗಳು ಸಿಕ್ಕರೆ ನನಗೂ ಬೇಕು.
ಸರ್,
ಚಂದಮಾಮದ ಬಗ್ಗೆ ಚಂದವಾಗಿ ಬರೆದಿದ್ದು ಓದಿ ಮನಸ್ಸಿಗೆ ಹಿತವೆನಿಸಿತು ನಂಗೂ ಚಂದಮಾಮ ತುಂಬ ಇಷ್ಟ. ನೀವು ಅಷ್ಟೊಂದು ಚಂದಮಾಮಗಳನ್ನು ಕಲೆಹಾಕಿ ಓದಲು ಸಿಧ್ಧವಾಗಿದ್ದು ಕೇಳಿ ನನಗೂ ನಮ್ಮನೆಯ ಜಗುಲಿಯಲ್ಲೊಂದು ದಿಂಬು ಹಾಕಿಕೊಂಡು ಒರಗಿ ಕೂತು ಚಂದಮಾಮ ಓದಬೇಕು ಅನ್ನಿಸಿತು :)
ಮತ್ತೆ,
ನಿಮ್ಮ 'ನದಿಯ ನೆನಪಿನ ಹಂಗು' ಓದುತ್ತಿದ್ದೇನೆ, ತುಂಬ ಚೆನ್ನಾಗಿದೆ.
JOGI JOLIGEGE CHANADAMAMA BANDANANTTHE. CHANDAMAMANA BIMBA BLAGU BUTTIGU ASHTISHTU SURIYALI. HAPPY BESIGE READING. NANNA HATTIRAVU ONDHASTU APPA ETTITTA CHANDAMAMA EDHE. OORIGE OGI THARABEKU ANNISTHIDHE. THANKS JOGI BESIGE NENAPIGE - AVALU
ಜೋಗಿಯವರೇ,
ಕನ್ನಡ ಸಾಹಿತ್ಯ ಸಾಗರದ ಪರಿಚಯ
ನಿಮ್ಮ ಬರಹಗಳಲ್ಲಿ ಕಾಣಬಹುದು.
ವಿಶೇಷವಾಗಿ ಜಾನಕೀ ಕಾಲಂ ಪುಸ್ತಕದಿಂದ.
ಜೋಗಿ – ಜಾನಕಿಯ ನಂಟು ನನಗರಿವಾದದ್ದು
ಕೊನೆಯ ಎರಡು ಕಾಲಂಗಳಿಂದ.
ಆಗಾಗ ನಿಮ್ಮ ಮನೆಗೆ ಬರುವುದು ನನಗಾನಂದ.
ಕೊನೆಗೆ ನಿಮಗೊಂದು ಪ್ರಶ್ನೆ ಎಸೆಯುವೆ ಇಲ್ಲಿಂದ.
ಟಿ ಎನ್ ಸೀ ಅವರಿಗೆ “ ಮ” ಮಹದಾನಂದ
ನಿಮಗೆ “ಜ” ಜೋರು ಚಂದ
ಇದು ನಿಜವೇ, ತಿಳಿಸಿದರೇ ಚಂದ.
- ಚಂದಿನ
http://www.koogu.blogspot.com
ನಾನು ಸಣ್ಣವ್ಳಾಗಿದ್ದಾಗಿಂದ್ಲೂ ಕತೆ ಪುಸ್ತಕ ಕಾದಂಬರಿಗಳನ್ನ ಸಿಲಬಸ್ ಪುಸ್ತಕದೊಳಿಟ್ಟುಕೊಂಡು ಓದುತ್ತಿದ್ದೆ...(ಅಮ್ಮನಿಗೆ ಗೊತ್ತಾದ್ರೆ ಈಗ್ಲೂ ಬೈತಾಳೆ) ಈಗ ಹಾಸ್ಠಲ್ ವಾಸವದ್ದರಿಂದ ಅಮ್ಮನ ಭಯವಿಲ್ಲದೆ ರಾಜಾರೋಷವಾಗಿ ಸಿಲಬಸ್ ಪುಸ್ತಕಗಳನ್ನ ಬದಿಗೆಸೆದು ನನಗಿಷ್ಟವಾದ ಕಾದಂಬರಿಗಳನ್ನ ಓದುತ್ತಿರುತ್ತೇನೆ.. ನಿಮ್ಮ ಲೇಖನ ಓದುತ್ತಾ ಇದೆಲ್ಲಾ ನೆನಪಾಯಿತು ಓದಿ ಖುಶಿಯಾಯಿತು..... ಚಂದಾಮಾಮ ನಂಗೂ ಬೇಕೂಊಊಊಊಊಊ......
ಚಂದಮಾಮಾ ಪ್ರತಿಯೊಬ್ಬ ವ್ಯಕ್ತಿಯ ನೆನಪಿನ ಅಪೂರ್ವ ಭಾಗ.
ಲೇಖನ ಚನ್ನಾಗಿದೆ
ಪ್ರೀತಿಯ ಜೋಗಿಯವರೆ...
ಅಷ್ಟೊಂದು ಚಂದಮಾಮವಾ? ಪ್ಲೀಸ್ ಎಲ್ಲಿಟ್ಟಿದ್ದೀರಾ ಹೇಳಿ ಸರ್. "ನಂಗೆ ಈಗ್ಲೇ ಬೇಕು" ಅಂತ ನಾನ್ ಹಠ ಮಾಡ್ತಿಲ್ಲ ಸರ್, ನನ್ ಮಗ .
ಎಂತಹ ಸಂದಿಗ್ಧ ಪ್ರಶ್ನೆ!. ಒಳ್ಳೆಯ ಒಂದು ಪುಸ್ತಕ (ಪಠ್ಯ ಹೊರತುಪಡಿಸಿ) ಓದದೇ ಅದೆಷ್ಟೋ ಕಾಲವಾಯಿತು. ಅಸಲಿಗೆ ನನ್ನ ಬದುಕಿಗೆ ಸಂಬಂಧವೇ ಇಲ್ಲದಂಥಹ ರಿಸರ್ಚ್ನಲ್ಲಿ ಮುಳುಗಿ ಹೋಗಿದ್ದೇನೆ. ಸುಖಾ ಸುಮ್ಮನೆ ಓದುವ ಸುಖ ಹಾಗೂ ಅದು ತಂದುಕೊಡುತ್ತಿದ್ದ ಅರಿವು - ತುಂಬಾ ಎಂಜಾಯ್ ಮಾಡುತ್ತಿದ್ದ ಕಾಲ ಒಂದಿತ್ತು. ಫಕ್ಕನೆ ಅದ್ಯಾವುದೋ ಮುರಳಿಯ ಕರೆ ಕೇಳಿಸಿತು. ದಧಬಡಿಸಿ ಓಡಿದೆ!, ಕಡೆಗುಳಿದದ್ದು "ನಂದಗೋಕುಲದ" ನೆನಪು ಮಾತ್ರ.
Dr.D.M.Sagar
ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ತಂದುಕೊಡುವ ಗೆಳೆಯರೊಬ್ಬರಿದ್ದಾರೆ. ಅವರು ಇಂಥ ಹಳೆಯ ಚಂದಮಾಮಗಳನ್ನು ತಂದುಕೊಟ್ಟರು. ಆದರೆ ಅದು ಕೊಂಚ ದುಬಾರಿಯೇ. ಒಂದು ಚಂದಮಾಮಕ್ಕೆ ಇಪ್ಪತ್ತು ರುಪಾಯಿ ಕೊಡಬೇಕಾಗುತ್ತದೆ. ಆದರೂ ಅದು ವರ್ಥ್ ಅಂದುಕೊಳ್ಳುತ್ತೇನೆ.
-ಜೋಗಿ
Post a Comment