ಅದು ಕವಿತೆಯಾ? ಕಥನವಾ? ಕವಿತೆಯ ಮೂಲಕ ಹೇಳುವ ಕತೆಯಾ, ಕತೆಯೇ ಕವಿತೆಯಾದ ಬೆರಗಾ?
ಹೀಗೆ ಶುರುವಾಗುತ್ತದೆ ಅದು;
ಬೆಕ್ಕು ಬರುವುದಿಲ್ಲ ಮಗೂ, ಹಾಲು ಮಡಕೆ ಮುಚ್ಚಿಡು.
ಕತ್ತಲಲ್ಲಿ ಎಡವದಂತೆ ದೀಪವೊಂದು ಹಚ್ಚಿಡು.
ಬೆಕ್ಕು ಬರುವುದಿಲ್ಲ ಅನ್ನುತ್ತಲೇ ಹಾಲು ಮಡಕೆ ಮುಚ್ಚಿಡು ಅಂತ ಬರೆಯುತ್ತಾನೆ ಕವಿ. ಅಂದರೆ ಸಾಮಾನ್ಯ ತಿಳುವಳಿಕೆಗೆ ತದ್ವಿರುದ್ದ ಯೋಚನೆ. ಬೆಕ್ಕು ಬರುತ್ತದೆ ಹಾಲು ಮಡಕೆ ಮುಚ್ಚಿಡು ಅನ್ನುವುದು ಒಂದು ಥರ. ಅಧರ ಮುಂದಿನ ಸಾಲಲ್ಲೇ ಕತ್ತಲಲ್ಲಿ ಎಡವದಂತೆ ದೀಪವೊಂದು ಹಚ್ಚಿಡು ಅನ್ನುವ ಮತ್ತೊಂದು ಅಚ್ಚರಿ.
ಇದನ್ನು ಇಲ್ಲಿಗೇ ಬಿಟ್ಟು ಕವಿ ಮತ್ತೆಲ್ಲಿಗೋ ಜಿಗಿಯುತ್ತಾನೆ;
ಬೆಟ್ಟಗಳಿಗೆ ಹಗಲಿರುಳೂ ನೀಲ ನೀಲ ನಿದ್ದೆಯು
ಊರ ಸುತ್ತ ತೆನೆಗಳಿಂದ ತೊನೆವ ಹಸಿರು ಗದ್ದೆಯು
ಸಾಲು ಮರದ ನೆರಳಿನಲ್ಲಿ ಹಾವಿನಂಥ ಹಾದಿಯು
ಇಲ್ಲಿ ಹೆಜ್ಜೆಯಿಡುವ ಹೆಣ್ಣಿಗಿರುವ ಭಯ ಅನಾದಿಯು.
ಹೀಗೊಂದು ಚಿತ್ರಣ ಕೊಟ್ಟ ಕವಿ ಜಿಗಿಯುವುದು ಊರಿನ ವರ್ಣನೆಗೆ. ಆ ಊರಿನ ವರ್ಣನೆಯೋ ಮತ್ತೂ ವಿಚಿತ್ರ;
ಊರು ಉಡಿಯೊಳಿಟ್ಟುಕೊಂಡು ನಿಂತ ತೆಂಗು ಅಡಕೆಯು
ಸಾಲದಲ್ಲಿ ಸೋಲಿನಲ್ಲಿ ಬೇಯುವವರ ಮಡಕೆಯು
ಮುಗಿಲು ಹರಿದ ಹಾಗೆ ಸುರಿದುಬಿದ್ದ ಮಳೆಯ ನೀರಿಗೂ
ನೆಲದ ನೋವು ಎದೆಯ ಕಾವು ಆರಲಿಲ್ಲ ಯಾರಿಗೂ.
ಈ ಊರಿನ ಚಿತ್ರದಿಂದ ಒಂದು ಕ್ಲೋಸಪ್ಪಿಗೆ ಹೊರಳುತ್ತದೆ ಕವಿತೆ. ಅದೂ ಎಷ್ಟು ಚೆನ್ನಾಗಿದೆ ನೋಡಿ;
ಇಲ್ಲೆ ಇದ್ದ ಮಂಜುಗೌಡ ಕೆರೆಯ ಬಯಲಿನಂಚಿಗೆ
ಹೂವ ಹೊದಿಸುತಿತ್ತು ಬಳ್ಳಿ ಹೆಣೆದ ಮನೆಯ ಹೆಂಚಿಗೆ
ಅವನಿಗಿದ್ದಳೊಬ್ಬ ಮಗಳು, ನಾಗಿ ನಾಗವೇಣಿಯು
ಹಾವಿನಂಥ ಜಡೆಯ ತುಂಬ ಹೂವ ಮುಡಿವ ರಾಣಿಯು
ಇದು ಮತ್ತಷ್ಟು ಸಮೀಪ ಚಿತ್ರ. ಊರಿನಿಂದ ಮನೆಗೆ ಬಂದು, ಮನೆಯಿಂದ ನಾಗಿಯ ಕಡೆ ಹೊರಳಿ ಕವಿಕೆಮರಾ ನಿಲ್ಲುವುದು ಅವಳ ಮುಂದೆ;
ಬೊಗಸೆಗಣ್ಣು, ಗಲ್ಲದಲ್ಲಿ ಮೂಡಿ ನಗೆಯ ಮಲ್ಲಿಗೆ
ಕಂಪು ಸೂಸಿ ಕರೆಯುತಿತ್ತು ಕನಸುಗಳನು ಮೆಲ್ಲಗೆ
ಅವಳ ನುಡಿಯ ಮಿಂಚುಕಿಡಿಯ ಹೊತ್ತಿಸಿತ್ತು ಸುತ್ತಲೂ
ಅವಳ ನಗೆಯ ನೂರು ಬಗೆಯ ನೆನಪು ಬುಗ್ಗೆ ಎತ್ತಲೂ
ಅಲ್ಲಿಗೆ ನಾಗಿಯ ಸೌಂದರ್ಯದ ವರ್ಣನೆ ಕೊನೆಯಾಗುತ್ತದೆ. ಮತ್ತೆ ಶುರುವಾಗುವುದು ಅವಳ ದೈನಿಕ. ಕಷ್ಟದ ಬದುಕು. ಆ ಕಷ್ಟದಲ್ಲೂ ಒಂದು ಚೆಲುವಿದೆ ಅನ್ನುತ್ತಿದ್ದಾನಾ ಕವಿ;
ಹೊಳೆಯ ಅಲೆಗಳೆತ್ತಿಕೊಂಡು ಸಾಗುವಂತೆ ನಾವೆಗೆ
ಹಾಡು ಹರಿದು ಹೋಗುವಂತೆ ಮಾವಿನಿಂದ ಮಾವಿಗೆ
ಹುಲ್ಲು ಹೊರೆಯ ಹೊತ್ತುಕೊಂಡು ಅವಳು ಬರುವ ಹೊತ್ತಿಗೆ
ಸೂರ್ಯನೇಕೋ ತಣ್ಣಗಾದ ನಿಂತರೂನು ನೆತ್ತಿಗೆ.
*****
ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರ ಕಥನ ಗೀತ `ನಾಗಿಯ ಕತೆ' ಹೀಗೆ ಶುರುವಾಗುತ್ತದೆ. ಕೆ ಎ್ ನರಸಿಂಹ ಸ್ವಾಮಿಯ ಹಾಗೆ ಎಕ್ಕುಂಡಿ ಕೂಡ ಮೃದು ಮಧುರ ಪದಗಳನ್ನೇ ಬಳಸುತ್ತಾರೆ. ಪ್ರೀತಿಯೇ ಮೈವೆತ್ತಂತೆ ಬರೆಯುತ್ತಾರೆ. ಕತೆಗೆ ಕೂಡ ಕವಿತೆಯ ಸ್ಪರ್ಶ ಕೊಡಲೆತ್ನಿಸುತ್ತಾರೆ. ಅವಳ ಚೆಲುವನ್ನು ಬರೀ ಮಾತುಗಳಲ್ಲಿ ವರ್ಣಿಸಿದರೆ ಸಾಲದು ಅನ್ನಿಸಿ ಕವಿ ಮತ್ತೊಂದು ಹಂತಕ್ಕೆ ಜಿಗಿಯುತ್ತಾರೆ;
ಅವಳ ಹಗುರು ಹೆಜ್ಜೆಯಲ್ಲಿ ಚೆಲುವು ಹೆಜ್ಜೆ ಇಟ್ಟಿತು
ಗೇರು ಹೂವಿನಂತೆ ಪ್ರೀತಿ ಎದೆಗೆ ಲಗ್ಗೆ ಇಟ್ಟಿತು.
ಅವಳ ಕೈಯ ಕೊಡವ ಕಂಡು ನೀರು ಬೇಗ ತುಂಬದು
ನಿಲ್ಲು ನಾಗಿ ನಿಲ್ಲು ನೋಡಬೇಕು ನಿನ್ನನೆಂಬುದು.
ಈ ವರ್ಣನೆಯ ನಂತರ ಕತೆ ಶುರುವಾಗುತ್ತದೆ. ತನ್ನೂರಿನ ಜಾತ್ರೆಗೆ ನಾಗಿ ಹೋಗುತ್ತಾಳೆ. ದುಂಡು ಕುಂಕುಮ ಇಟ್ಟು, ಹಸಿರು ಸೀರೆಯುಟ್ಟು, ಹೊಳೆವ ರವಿಕೆ ತೊಟ್ಟು ತಾಯಿಯ ಜೊತೆ ರಥೋತ್ಸವ ನೋಡಲು ಹೋಗುತ್ತಾಳೆ. ಹಾದಿಯಲ್ಲಿ ಆಕೆಗೊಂದು ಬೆಕ್ಕು ಸಿಗುತ್ತದೆ. ಎಷ್ಟು ಚೆಂದ ಬೆಕ್ಕು ಅನ್ನುತ್ತಾ ಅದನ್ನು ಅಮ್ಮನಿಗೆ ತೋರಿಸುತ್ತಾಳೆ ಆಕೆ. ಅದನ್ನು ಎತ್ತಿ ಎದೆಗೊತ್ತಿಕೊಂಡು ಮುದ್ದಿಸುತ್ತಾಳೆ.
ತಾಯಿ ಮಗಳು ಅಲ್ಲಿಂದ ಸಂತೆಗೆ ಹೋಗುತ್ತಾರೆ. ಸಂತೆಯಲ್ಲಿ ಅವರಿಗೆ ಅನೇಕಾನೇಕ ಅನುಭವಗಳಾಗುತ್ತವೆ. ಅಲ್ಲಿ ಆಕೆ ಅವನನ್ನು ೇಟಿಯಾಗುತ್ತಾಳೆ.
ಯಾರವನು?
ಚಿಗುರು ಮೀಸೆ ಎಳೆಯ ನಗೆಯ ರೂಪವಂತ ಆತನು
ಎದೆಯ ಕದವ ತೆರೆದು ನುಡಿದ ಕಣ್ಣಿನಲ್ಲೆ ಮಾತನು
ಕಣ್ಣು ಕಣ್ಣಿನಲ್ಲಿ ಕೂಡಿ ಝಳಪಿಸಿತ್ತು ಮಿಂಚನು
ಪ್ರೀತಿಯೆಂಬ ಸಿಡಿಲು ಹೊಡೆಯುತಿತ್ತು ಹಾಕಿ ಹೊಂಚನು
ಪ್ರೀತಿಯನ್ನು ಸಿಡಿಲು ಅಂತ ಕರೆಯುತ್ತಾರೆ ಎಕ್ಕುಂಡಿ. ಆ ೇಟಿಯ ನಂತರ, ಕಣ್ಣುಕಣ್ಣುಗಳ ಸಮಾಗಮದ ನಂತರದ ಸ್ಥಿತಿಯನ್ನು ಅವರು ವರ್ಣಿಸುವುದು ಯಾವ ಪ್ರೇಮಗೀತೆಗೆ ಕಡಿಮೆ ಹೇಳಿ?
ಯಾರು ಹಾಕಿ ಹೋದರವಳ ಎದೆಗೆ ಗಂಧಧೂಪವ
ಯಾರು ಹೊತ್ತಿಸಿಟ್ಟರೊಳಗೆ ಬಂಗಾರದ ದೀಪವ
ಯಾವ ಕೆರೆಗೆ ಯಾವ ಕರೆಗೆ ಹಾರುತಿಹವು ಕೊಕ್ಕರೆ?
ಯಾವ ತಾರೆ ಇಲ್ಲಿ ಸೂರೆ ಮಾಡುತಿಹವು ಅಕ್ಕರೆ?
ಈ ನಾಲ್ಕು ಪ್ರಶ್ನೆಗಳಲ್ಲಿ ಪ್ರೇಮದ ಸಾರಸರ್ವಸ್ವವನ್ನೂ ಹೇಳುವ ರೀತಿ ನೋಡಿ. ಇದ್ದಕ್ಕಿದ್ದಂತೆ ಹಾಜರಾಗುವ ಕೊಕ್ಕರೆಯ ರೂಪಕವನ್ನು ಗಮನಿಸಿ. ಯಾವ ಕೆರೆಗೆ ಯಾರ ಕರೆಗೆ ಹಾರುತಿಹವು ಕೊಕ್ಕರೆ ಅನ್ನುವ ಸಾಲಿನಲ್ಲಿ ಸೆಳೆತವನ್ನು ಹೇಳಿರುವ ರೀತಿ ಬೆರಗುಗೊಳಿಸುತ್ತದೆ.
ಜೊತೆಗೇ ಬೆಕ್ಕನ್ನೂ ಪ್ರೀತಿಯ ರೂಪಕವಾಗಿ ತರುತ್ತಾರೆ ಅವರು. ಆದರೆ ಈ ಪ್ರೀತಿ ಉಳಿಯುತ್ತದಾ? ಅದನ್ನೂ ಮತ್ತೊಂದು ಸೊಗಸಾದ ಉಪಮೆಯ ಮೂಲಕ ಹೇಳಿಬಿಡುತ್ತಾರೆ ಅವರು;
ಪ್ರೀತಿ ಹೊತ್ತಿಸಿಟ್ಟ ದೀಪ ದಾರಿಯಲ್ಲಿ ಕತ್ತಲು
ದೀಪ ನಿಲ್ಲಬಹುದೆ ಇಲ್ಲಿ ಗಾಳಿ ಬಂದು ಮುತ್ತಲು
ಇದರ ಜೊತೆಗೇ ಪ್ರೀತಿಯ ತೀವ್ರತೆಯನ್ನು ಹೇಳುವ ಮತ್ತೊಂದು ಸಾಲು;
ಪ್ರೀತಿ ಪಂಜು ಹೊತ್ತಿಸಿತ್ತು ನಾಗವೇಣಿ ನಾಗಿಗೆ
ಆರಂಭದಲ್ಲಿ ಬರುವ ಬೆಕ್ಕಿನ ಪ್ರಸ್ತಾಪ ಹೀಗೆ ಕತೆಯಲ್ಲಿ ಮತ್ತೆ ಮರುಕಳಿಸುತ್ತದೆ. ಯಾಕೆ ಬೆಕ್ಕಿನ ಬಗ್ಗೆ ಕವಿತೆ ಶುರುವಾಗುತ್ತದೆ ಅನ್ನುವುದು ಗೊತ್ತಾಗಬೇಕಾದರೆ ನಾಗವೇಣಿ ಪ್ರೀತಿಯಲ್ಲಿ ಬಂಧಿಯಾಗುವ ತನಕ ಕಾಯಬೇಕು. ಆಕೆ ಬೆಕ್ಕನ್ನು ಎದೆಗವಚಿಕೊಂಡು ಅದರ ಸಂಸರ್ಗದಲ್ಲಿ ತನ್ನ ಪ್ರೀತಿಯನ್ನು ತೋಡಿಕೊಳ್ಳುವ ಹೊತ್ತಿಗೇ ಅವಳಿಗೆ ಮತ್ತೊಂದು ಅನುಭವವಾಗುತ್ತದೆ;
ಸಾಲುಮರದ ನೆರಳಿನಲ್ಲಿ ಹಾವಿನಂಥ ಹಾದಿಗೆ
ಕೈಯಳೊಂದು ದೀಪ ಹಿಡಿದು ಸಾಗುತಿರಲು ನಾಗಿಗೆ
ತೆರೆದ ಹಾಲು ಮಡಕೆ ನೋಡಿ ಬಿಳಿಯ ಬೆಕ್ಕು ಹಾರಿತು
ಕತ್ತಲಲ್ಲಿ ಎಡಹುವಂತೆ ಹಿಡಿದ ದೀಪ ಆರಿತು.
ನಾಗಿ ಪ್ರೀತಿಯ ಸೆಳೆತಕ್ಕೆ ಸಿಕ್ಕಿ ಮನೆಬಿಟ್ಟು ಹೋಗುತ್ತಾಳೆ. ಅವಳನ್ನು ಹಾವಿನಂಥ ಹಾದಿ ಅದೆಲ್ಲಿಗೋ ಕರೆದೊಯ್ಯುತ್ತದೆ. ಹಾಗೆ ಸಾಗಿಹೋದ ಹಾದಿಯಲ್ಲಿ ನಾಗವೇಣಿ ಕೊನೆಗೂ ಕಂಡದ್ದೇನು? ಅಲ್ಲಿ ಆಕೆಗೆ ಎದುರಾದದ್ದೇನು? ಬಿಳಿಯ ಬೆಕ್ಕು ಹಾರಿ, ದೀಪವಾರಿದ ಮೇಲೆ ಪ್ರೀತಿ ಅವಳನ್ನು ದಡ ಸೇರಿಸುತ್ತದಾ?
ಅದ್ಯಾವುದನ್ನೂ ಕವಿ ಹೇಳುವುದಿಲ್ಲ. ಅಲ್ಲಿಂದ ಫೋಕ್ ತಿರುಗುವುದು ಅವಳ ಮನೆಯ ಕಡೆಗೆ. ಮನೆಯಲ್ಲಿ ಅವಳಿಗಾಗಿ ಹುಡುಕಾಟ ನಡೆದಿದೆ.
ತಾಯಿ ಬಂದು ನಾಗಿ ಎಂದು ಅಲ್ಲಿ ಇಲ್ಲಿ ಕರೆದಳು
ಮಂಜು ಗೌಡ ಮಗಳ ಹುಡುಕಿ ಊರುಕೇರಿ ಅಲೆದನು
ಪ್ರೀತಿ ಹೆಜ್ಜೆಯಿಡುವ ಹಾದಿ ಹಿಂದೆ ಬರದ ಹಾದಿಯು
ಇಲ್ಲೆ ಅಲ್ಲವೇನು ಹೆಣ್ಣಿಗಿರುವ ಭಯ ಅನಾದಿಯು
ಅಲ್ಲಿಗೆ ಪದ್ಯ ಮುಗಿಯುತ್ತದೆ. ಪ್ರೀತಿಯ ಹಾದಿಯಲ್ಲಿ, ಆ ಅನಾದಿಯಲ್ಲಿ ಹೊರಟಾಕೆ ಎಲ್ಲಿಗೆ ತಲುಪುತ್ತಾಳೆ. ಅವಳ ಅನಾದಿ ಭಯವನ್ನು ಪ್ರೀತಿ ನಿವಾರಿಸಿ ಅಭಯ ಹಸ್ತ ನೀಡುತ್ತದಾ? ಅವಳು ಪ್ರೀತಿಯಲ್ಲಿ ಗೆಲ್ಲುತ್ತಾಳಾ? ಈ ಎಲ್ಲಾ ಪ್ರಶ್ನೆಗಳಿಗೆ ಕವಿತೆ ಉತ್ತರಿಸುವುದಿಲ್ಲ. ನಾಗಿ ಪ್ರೀತಿಯನ್ನು ಹುಡುಕಿಕೊಂಡು ಹೊರಟಲ್ಲಿದೆ ಕತೆ ಮುಗಿಯುತ್ತದೆ. ಮುಂದಿನದು ಮುಂದಿನ ಕತೆ. ಅದರ ಸುಳಿವು ಬೇಕಿದ್ದರೆ ಬೇರೆ ಪದ್ಯಗಳನ್ನು ಓದಬೇಕು.
ಅದರ ಮುಂದಿನ ಪದ್ಯದಲ್ಲೇ ಬರುವ ಎರಡು ಸಾಲುಗಳು ನಾಗಿಯ ಭವಿಷ್ಯದ ಕತೆಯೇನೋ ಎಂಬಂತೆ ಕಾಡುತ್ತದೆ. ಆ ಪದ್ಯದ ಹೆಸರು `ಹುಡುಗಿಯ ಕತೆ'.
ಮುರಿದುಹೋದ ಗುಡಿಸಲೊಂದು ಹರಿದುಹೋದ ಚಾಪೆಯು
ತೊಟ್ಟುಕೊಂಡ ಲಂಗದಲ್ಲಿ ಎಂಟೋ ಹತ್ತೋ ತೇಪೆಯು
ಸೊರಗಿಹೋದ ಕೊರಗಿಹೋದ ಮೈಯ ಕೆಂಡ ಕೆಂಡವು
ಪುಟ್ಟ ಹುಡುಗಿ ಅವಳ ಕಣ್ಣು ಏನೋ ಏನೋ ಕಂಡವು
ಯಾರಿವಳು? ನಾಗಿಯ ಮಗಳಾ? ನಾಗಿಯಾ? ಅಥವಾ ನಾಗಿಯಂಥ ಮತ್ಯಾವುದೋ ಹುಡುಗಿಯಾ? ಯಾವ ಸೂಚನೆಯೂ ಇಲ್ಲ. ಪ್ರೀತಿ ಕೂಡ ವಿಷಾದದಲ್ಲಿ, ಅಗಮ್ಯದಲ್ಲಿ, ನಿಗೂಢದಲ್ಲಿ ಕೊನೆಯಾಗುತ್ತದೆ. ಮತ್ತೊಂದು ಪದ್ಯಕ್ಕೆ ನಾವು ದಾಟಿಕೊಳ್ಳುವಂತೆ ಮಾಡುತ್ತದೆ.
*******
ಕವನ ಕತೆ ಹೇಳಬಾರದು ಅನ್ನುವುದು ನವ್ಯರ ನಿಯಮ. ಅದೇನಿದ್ದರೂ ಒಂದು ಭಾವವನ್ನು ಹಿಡಿದಿಡಬೇಕು. ಆ ಕ್ಪಣ ಮನಸ್ಸಿನಲ್ಲಿ ಮೂಡಿ ಮರೆಯಾದ ಒಂದು ಲಹರಿಯನ್ನಷ್ಟೇ ದಾಖಲಿಸಬೇಕು. ಒಂದು ಮುಂಜಾನೆ, ಒಂದು ಅಗಲಿಕೆ, ಒಂದು ಹಂಬಲ, ಒಂದು ಪ್ರತೀಕ್ಪೆಗಳನ್ನು ಹೇಳಿದರೆ ಅದು ಕವಿತೆ ಎಂದೇ ನವೋದಯದ ಮಂದಿ ನಂಬಿದಂತಿತ್ತು. ನವ್ಯರು ಅದನ್ನು ಕೊಂಚ ವಿಸ್ತರಿಸಿ, ಸುಪ್ತಮನಸ್ಸಿನ ಅತೃಪ್ತ ಆಶೆಗಳನ್ನು `ದೀಪವಿರದ ಹಾದಿಯಲ್ಲಿ ತಡವರಿಸುವ ನುಡಿ'ಗಳನ್ನು ಮಾತಾಡಿಸಲು ಯತ್ನಿಸಿದರು.
ಕಾವ್ಯ ನಿಜಕ್ಕೂ ತನ್ನ ಸ್ವರೂಪವನ್ನು ಬದಲಾಯಿಸಿದ್ದು ಅಮೇಲಾಮೇಲೆ. ಖಡ್ಗವಾಗಲಿ ಕಾವ್ಯ ಎಂದರು. ಅದು ಬಿಡುಗಡೆಯ ಹಾದಿ ಎಂದರು. ಅದು ಅಭಿವ್ಯಕ್ತಿ ಅಂದರು. ಅದನ್ನು ಅಸ್ತ್ರ ಎಂದು ಕರೆದು ಬೆನ್ತಟ್ಟಿಕೊಂಡರು. ಕವಿತೆ ಅಸ್ತ್ರವೂ ಅಲ್ಲ, ವಿಮೋಚನೆಯ ಹಾದಿಯೂ ಅಲ್ಲ. ಅದೊಂದು ಕತೆ ಹೇಳುವ ವಿಧಾನ ಮಾತ್ರ ಎಂದು ಅನಾದಿಕಾಲದಿಂದ ನಂಬಿಕೊಂಡು ಬಂದದ್ದು ಕ್ರಮೇಣ ಮರೆಯಾಯಿತು. ಇವತ್ತು ಕಥನ ಕವಿಗಳೇ ಇಲ್ಲ. ಕವನದೊಳಗೆ ಕತೆಗಳಿಲ್ಲ, ವ್ಯಥೆಗಳಷ್ಟೇ ಇವೆ.
ನಮ್ಮ ಮಹಾಕಾವ್ಯಗಳೆಲ್ಲ ಕಥನ ಕವನಗಳೇ. ತಿಳಿಯ ಹೇಳುವ ಕೃಷ್ಣ ಕತೆಯನು ಎಂದೇ ಕುಮಾರವ್ಯಾಸ ತನ್ನ ಕಾವ್ಯವನ್ನು ಆರಂಭಿಸುತ್ತಾನೆ. ಕಾವ್ಯ ಎಂದಾಕ್ಪಣ ಅದು ಯಾರ ಕತೆ ಎನ್ನುವುದು ಮೊದಲು ದಾಖಲಾಗಬೇಕು ಅನ್ನುತ್ತಿದ್ದರು ಆ ಕಾಲದ ವಿಮರ್ಶಕರು. ಜನಸಾಮಾನ್ಯರ ಕತೆ ಕಾವ್ಯವಾಗುವುದಕ್ಕೆ ಯೋಗ್ಯವಲ್ಲ. ಅದಕ್ಕೆ ರಾಜಾಧಿರಾಜರ, ಚಕ್ರವರ್ತಿಗಳ, ಶ್ರೇಷ್ಠ ವಂಶದಲ್ಲಿ ಹುಟ್ಟಿದವರ ಕತೆಯೇ ಬೇಕು ಎಂದು ಆದಿಕವಿಗಳೂ ಅವರ ನಂತರ ಬಂದ ಅನಾದಿಕವಿಗಳೂ ನಂಬಿದಂತಿತ್ತು.
ಕವಿತೆಯನ್ನು ಹೇಗೆ ಹೇಗೆಲ್ಲಾ ಬಳಸಬಹುದು ಎಂದು ತೋರಿಸಿಕೊಟ್ಟವರು ಬೇಂದ್ರೆ ಮತ್ತು ಅಡಿಗ. ಅವರಿಬ್ಬರ ಕವಿತೆಗಳಲ್ಲಿ ಕಾಣಿಸುವ ಭಾವ, ಕೇವಲ ಭಾವವಾಗಷ್ಟೇ ಉಳಿಯುವುದಿಲ್ಲ. ಅದು ಮಾತಲ್ಲಿ ಹೇಳಲಾಗದ್ದನ್ನು ಹೇಳುತ್ತದೆ. ನಮ್ಮ ಅನೂಹ್ಯ ಆಶೆಗಳಿಗೆ, ಅನಿಸಿಕೆಗಳಿಗೆ ದನಿಯಾಗುತ್ತದೆ. ಕೆಎಸ್ ನ ಕವಿತೆಗಳು ಕಥನ ಕವನದ ಧಾಟಿಯಲ್ಲೇ ಇದ್ದಂತೆ ಕಂಡರೂ- ಗಂಡು, ಹೆಣ್ಣು, ಪ್ರೀತಿ, ಮದುವೆ, ದಾಂಪತ್ಯ, ಬಳೆಗಾರ, ತಾಯ್ತನ, ಮಗು, ಕುಟುಂಬ- ಎಲ್ಲವೂ ಬಂದರೂ ಅದು ಕೇವಲ ಅಷ್ಟೇ ಆಗಿ ಉಳಿಯುವುದಿಲ್ಲ.
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಅಂಥ ಪುರುಷೋತ್ತಮನ ರೂಪರೇಷೆ
ಎಂದು ಕೇಳುತ್ತಾ ಅದ್ಯಂತ ರಹಿತ ಸ್ಥಿತಿಯನ್ನು ತಲುಪುತ್ತದೆ.
ಒಂದು ಆಹ್ವಾನ-
ಮುಂದಿನ ಭಾನುವಾರ, 27ನೇ ಜುಲೈ 2008, ಎಕ್ಕುಂಡಿಯವರ ಸಮಗ್ರ ಕಾವ್ಯ ಬೆಳ್ಳಕ್ಕಿ ಹಿಂಡು ಬಿಡುಗಡೆ. ಅನಂತಮೂರ್ತಿಯವರು ಕೃತಿಯನ್ನು ಬಿಡುಗಡೆ ಮಾಡುತ್ತಾರೆ, ಆನಂದ ಝಂಜರವಾಡ ಮತ್ತು ಜಿ ಎನ್ ಮೋಹನ್ ಮಾತಾಡುತ್ತಾರೆ. ಆನಂತರ ಎಕ್ಕುಂಡಿಯವರ ಕವಿತೆಗಳನ್ನು ಸಿ ಆರ್ ಸಿಂಹ, ಜಿಕೆ ಗೋವಿಂದರಾವ್, ಎಚ್ ಎಸ್ ವಿ, ಕಾಯ್ಕಿಣಿ, ದಿವಾಕರ್, ರವೀಂದ್ರಕುಮಾರ್, ಬಿಳಿಗೆರೆ, ಮಮತಾ ಜಿ ಸಾಗರ, ಬಿ ಸುರೇಶ, ರೋಸಿ ಡಿಸೋಜಾ ಮತ್ತು ರಘುನಂದನ ಓದುತ್ತಾರೆ.
ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಸೆನೆಟ್ ಹಾಲ್ ಗೆ ಬಂದರೆ ಎಕ್ಕುಂಡಿ ಕಾವ್ಯಲೋಕ ತೆರೆದುಕೊಳ್ಳುತ್ತದೆ.
ಅಂದ ಹಾಗೆ ಇದು ಸಂಚಯದ ಸಂಚು.
Sunday, July 20, 2008
Subscribe to:
Post Comments (Atom)
11 comments:
Jogi,
Another very good article. You are introducing new thoughts into how to read poetry.
Thanks,
Keshav
ಪ್ರಿಯ ಜೋಗಿ,
ನೀವಿಷ್ಟವಾಗುವುದೇ ಇದಕ್ಕೆ.. ತುಂಬ ಚೆನಾಗಿದೆ ಬರಹ. ವೈವಿಧ್ಯತೆ ಕಾಡಿನ ಮರಗಿಡಗಳಂತೆಯೇ ಇರುತ್ತದೆ ನಿಮ್ಮ ಯೋಚನೆ ಮತ್ತು ಅಭಿವ್ಯಕ್ತಿಗಳಲ್ಲಿ, ರಸ ಹೇಳುವುದೇ ಬೇಡ ಕಾಡ ಬೆಳದಿಂಗಳೇ ಹೊನಲಾಗಿ ಹರಿದಂತೆ, ನೋಡುವ ಕಣ್ಣು ಓದುವ ಮನವೂ ಎರಡೂ ನದಿದಂಡೆಯಲ್ಲಿ ಕೂತರೆ ಸಾಕು.
ಎಕ್ಕುಂಡಿಯವರದ್ದು ಜಗಮಗದ ಹಾದಿಯಲ್ಲ. ಹೊಳೆದಂಡೆಯ ತಂಪು ದಾರಿ. ಪಯಣದ ಕಶ್ಟ ಕಲ್ಲು ಮುಳ್ಳುಗಳನ್ನ ಹೂವು ಹರಿಣಗಳ ಜೊತೆಯಾಗಿಯೇ ಕಂಡವರು ಮತ್ತು ಕಾಣಿಸಿದವರು, ದಾರಿ ಹಗುರಾಗಿಸಿದವರು. ಇವರ ನಾಗಿಯ ಕತೆಯೊಂದಿಗೆ ನೆನಪು ಮಾಡಿಕೊಡುತ್ತಿರುವುದಕ್ಕೆ ತುಂಬ ಸಂತೋಷ. ಧನ್ಯವಾದಗಳು.
ಪ್ರೀತಿಯಿಂದ
ಸಿಂಧು
Your writings are interesting but too lenghty. While your target readers are part of online community - u seem to be restricitng ur writing to few people for whom reading blog is the main job!
ಆಹಾ... ಏನೆಂದು ಹೇಳಲಿ ? ಈ ನಿಮ್ಮ ಬರಹಕ್ಕೆ ! ಎಂಥಾ ಯೋಚನಾ ಲಹರಿ. ಕಾವ್ಯವೊಂದನ್ನು ಹೇಗೆಲ್ಲಾ ಓದಬಹುದೆಂದು ನೀವು ತೋರಿಸ್ಕೋಟಿದ್ದಕ್ಕೆ ಥ್ಯಾಂಕ್ಸ್. ಅಷ್ಟೇ ಅಲ್ಲ, ನೀವು ನವಿರಾಗಿ ವಿಷಯಗಳನ್ನು ಚಿತ್ರಿಸುತ್ತಾ ಹೋಗುವ ಪರಿ ಇದೆಯಲ್ಲಾ... ಅದು ಕಾಡು ಬೆಳದಿಂಗಳನ್ನು ಸಿಪ್ ಮೇಲೆ ಸಿಪ್ ಹೀರಿದಂತ ಅನುಭವ. ಸಾರ್, ನಿಮ್ಮ 'ಯಾಮಿನಿ' ಯನ್ನು ನಮ್ಮ ಬಳಿಗೆ ಯಾವಾಗ ಕಳುಹಿಸಿಕೊಡುತ್ತೀರಿ?
ಹ್ಹಾ ಹೇಳಲು ಮರೆತೆ, 'ಫಿಶ್ ಮಾರ್ಕೆಟ್‌ನಲ್ಲಿ' ವ್ಯಾಪಾರ ಭರ್ಜರಿಯಾಗಿತ್ತು ಸಾರ್... ತಡವಾಗಿ ಬಂದಿದ್ದುದರಿಂದ ಹೆಚ್ಚಿನ ಫಿಶ್ ಕೊಳ್ಳಲಾಗಲಿಲ್ಲ.
ನಿಮ್ಮ,
ಸಂತೋಷ ಅನಂತಪುರ
-ಥ್ಯಾಂಕ್ಯೂ ಕೇಶವ್,
ನಾನು ಓದುವ ರೀತಿಯನ್ನು ಕವಿತೆ ನನ್ನಲ್ಲಿ ಹುಟ್ಟಿಸುವ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟಿದ್ದೇನೆ ಅಷ್ಚೇ.
-ಪ್ರೀತಿಯ ಸಿಂಧು,
ಎಕ್ಕುಂಡಿ ಪುಸ್ತಕದ ಬಿಡುಗಡೆಗೆ ಬನ್ನಿ. ಆವತ್ತು ಅವರ ಒಂದಷ್ಟು ಒಳ್ಳೆಯ ಪದ್ಯಗಳನ್ನು ಕೇಳಬಹುದು.
-ನನ್ನ ಲೇಖನಗಳು ಸುದೀರ್ಘವಾಗಿದೆ ಎಂದು ನೆನಪಿಸಿದ್ದಕ್ಕೆ ಥ್ಯಾಂಕ್ಸ್. ಸ್ವಲ್ಪ ಚಿಕ್ಕದಾಗಿ ಬರೆಯಲು ಯತ್ನಿಸುತ್ತೇನೆ.
-ಡಿಯರ್ ಸಂತೋಷ್,
ಯಾಮಿನಿಯ ಕೊನೆಯ ಪುಟಗಳು ರೂಪುಗೊಳ್ಳುತ್ತಿವೆ. ಕೆಲವು ದಿನ ಕಾಯಬೇಕು, ನಾನೂ.
ತುಂಬ ಇಂಪ್ರೆಸ್ಸಿವ್ ಆದ ಲೇಖನ.ಎಕ್ಕುಂಡಿಯವರ ಕವಿತೆ ಓದಿ
ಯಾಕೋ "ಧರಣಿ ಮಂಡಲ ಮಧ್ಯದೊಳಗೆ.." ನೆನಪಾಯಿತು..
ಎರಡೂ ಪದ್ಯಗಳು ವಿಭಿನ್ನ ನೆಲೆಗಟ್ಟಿನಲ್ಲಿ ಬಿಂಬಿತಗೊಂಡಿದ್ದರೂ
ಕೂಡ ಅವು ಒಂದೇ ರೀತಿಯ ಗಾಢ ವಿಷಾದ ಹೊಮ್ಮಿಸುತ್ತಿವೆ ಅಂತ ಅನಿಸಿತು.
ಅದರಲ್ಲೂ ಇಂಥದೊಂದು ಪದ್ಯವನ್ನ ಗದ್ಯಕ್ಕೆ ಶೄಂಗರಿಸಿ
ಕೊಡುವ ನಿಮ್ಮ ಪರಿ-
ಜೋಗಿಯವರೇ,ಅದ್ಭುತವಾಗಿ ಮೇಸ್ಟ್ರ ಕೆಲಸ ಮಾಡಿದ್ದೀರಿ..
-ರಾಘವೇಂದ್ರ ಜೋಶಿ.
ನಾಗಿ ನೆರಳು ನಮ್ಮೆದೆ ಮೇಲೆ ಮೂಡಿಸಿದ್ದೀರಿ ಸಾರ್.
ಎಕ್ಕುಂಡಿ ಅವರ ಕವಿತೆಯನ್ನು ನಮಗೆ ದಾಟಿಸಿದ್ದಕ್ಕೆ, ಅವರ ಕವಿತೆಗಳ ಬಗ್ಗೆ ಕುತೂಹಲ ಕೆರಳಿಸಿದ್ದಕ್ಕೆ ಥ್ಯಾಂಕ್ಸ್..
-ಅಲೆಮಾರಿ
ಬಹಳ ಸಮಯಗಳ ನಂತರ ಪಕ್ಕಾ ಜೋಗಿ ಶೈಲಿಯ ಬರಹ ಪುನಃ ಬಂದಿದೆ..ಏನು ಹೇಳುವುದು ಓದಿದಷ್ಟು ಇನ್ನೊಮ್ಮೆ ಓದಬೇಕು ಅನ್ನಿಸುತ್ತದೆ..;)
ಒಂದು ತಪ್ಪಾಗಿದೆ.
ಬೆಕ್ಕು ಬರುವುದಿಲ್ಲ ಮಗೂ, ಹಾಲು ಮಡಕೆ ಮುಚ್ಚಿಡು ಎಂಬ ಸಾಲು ಮೂಲದಲ್ಲಿ ಬೆಕ್ಕು ಬರುವುದಲ್ಲ ಮಗೂ, ಎಂದಾಗಬೇಕು. ನಾನು ಓದಿದ ಪುಸ್ತಕದಲ್ಲಿ ಬೆಕ್ಕು ಬರುವುದಿಲ್ಲ ಅಂತಿತ್ತು. ಈಗ ತಾನೇ ಜಿ ಎನ್ ಮೋಹನ್ ಕಳುಹಿಸಿಕೊಟ್ಟ ಪ್ರತಿಯಲ್ಲಿ ಸರಿಯಾದ ಪಾಠ ಇದೆ.
ಕವಿತೆಯನ್ನು ಅಚ್ಚುಹಾಕುವಾಗ ಒಂದಕ್ಷರ ವ್ಯತ್ಯಾಸವಾದರೆ ಎಂಥಾ ಅರ್ಥಾಂತರ ಆಗುತ್ತದೆ ಅನ್ನುವುದಕ್ಕೆ ಈ ಬರುವುದಿಲ್ಲ, ಬರುವುದಲ್ಲ - ಸಾಕ್ಷಿ. ಹೀಗಾಗಿ ಕವಿತೆಗಳನ್ನು ಪ್ರಕಟಿಸುವವರು ಮತ್ತೆ ಮತ್ತೆ ಕರಡು ತಿದ್ದುವುದು ಕ್ಷೇಮ.
ತಪ್ಪಿಗೆ ಕ್ಷಮೆ ಇರಲಿ.
Jogi Sir,
I ve one private request. Can I have Nagaraj Vastare's contact.
Thanks
Mamta Parth
ಅನುಭೂತಿಗಳು ಕೆಲವೊಂದು ಕಾಲಘಟ್ಟದಲ್ಲಿ ತೀವ್ರವಾಗಿ ಕಾಡಿ ಕೈಬಿಟ್ಟು ಹೋಗುತ್ತವೆ. ಕಾಡುವ ಕಾಲದಲ್ಲಿ ಅನುಭುತಿಯೊಂದು ಕಾವ್ಯವಾದರೆ ಆಸ್ವಾದಿಸಲು ಚೆನ್ನ. ಅನುಭೂತಿ ಹುಟ್ಟುವುದು ಎದೆಯಲ್ಲಿ, ಹಾಗೆ ಹುಟ್ಟಿದ ಅನುಭೂತಿ ಮೇಲೇರಿ ಮಸ್ತಕಕ್ಕೆ ಬಂದರೆ ಅನುಭವವಾಗಿ ಬದಲಾಗುತ್ತದೆ. ಹಾಗೆ ಮೇಲೆ ಹರಿದು ಬರುವ ದಾರಿಯಲ್ಲಿ ಕೈ ಬೆರಳುಗಳ ಮೂಲಕ ಹರಿದರೆ, ಬಹುಷಃ ಕಾವ್ಯವಾಗುತ್ತದೆ!.
ನೀವು ಹೇಳಿದ - ಹಸಿರು ಸೀರೆ ಉಟ್ಟು ತುಂಬು ಕುಂಕುಮ ತೊಟ್ಟು ಮನಇಂದ ಹೊರಟ ಚಲುವೆ - ಈ ದೃಶ್ಯ ಇತ್ತೀಚಿನ ದಿನಗಳಲ್ಲಿ a taboo concept ಆಗಿಬಿಟ್ಟಿದೆ!.
ಈ ಸೈನ್ಸ್ ಓದುವುದರ ಸಮಸ್ಯೆ ಇದು!. ಅನುಭುತಿಗಳೆಲ್ಲ ಮಸ್ತಕಕ್ಕೆ ಏರಿ ಅನುಭವವಾಗುತ್ತವೆ ಬಿಟ್ಟರೆ, ಕಾವ್ಯವಾಗುವುದಿಲ್ಲ!. ಕಾವ್ಯವನ್ನು ಗದ್ಯದಂತೆ ವಿವರಿಸಿದರೆ ಅದೊಂದು ಬೌದ್ಧಿಕ ವ್ಯಾಯಾಮ ವಾಗುತ್ತದೆ ಎಂದು ನನ್ನ ಭಾವನೆ!.
ಬೆಕ್ಕು ಬರುವುದಲ್ಲ ಮಗೂ ಹಾಲು ಮಡಕೆ ಮುಚ್ಚಿಡು ಎನ್ನುವುದು ಅಪ್ಪಟ ಗದ್ಯ ಹಾಗು ತೀರ ವಾಚ್ಯ!, ಬೆಕ್ಕು ಬರುವುದಿಲ್ಲ ಮಗೂ , ಹಾಲು ಮಡಕೆ ಮುಚ್ಚಿಡು - ಇದು ಕಾವ್ಯಗುಣ ಹೊಂದಿದೆ ಹಾಗು ಕೆಲವು ವಿಸೆಷಾರ್ಥಗಳನ್ನೂ ಸೂಚಿಸುತ್ತದೆ ಎಂದು ನನ್ನ ಭಾವನೆ. ಕಾವ್ಯದಲ್ಲಿ ಶಭಾರ್ಥಕ್ಕಿಂಥ ಭಾವಾರ್ಥ, ಹಾಗು ಲಕ್ಷ್ಯಾರ್ಥಗಳಿಗೆ ಹೆಚ್ಚು ಪ್ರಾಮುಖ್ಯ ಎನ್ನುವುದು ನನ್ನ ವಿನಮ್ರ ಸೂಚನೆ!.
Dr.D.M.Sagar (Original)
Post a Comment