Friday, July 25, 2008

ಕಂಬನಿಯಲ್ಲಿ ನಿಮ್ಮದೆಷ್ಟು ನಮ್ಮದೆಷ್ಟು?

ಕವಿಯ ಕಂಬನಿಯಲ್ಲಿ ಕವಿಯದ್ದೆಷ್ಟು ಪರರದ್ದೆಷ್ಟು ಎಂದು ಲೆಕ್ಕ ಹಾಕುತ್ತ ಕೂರುವವನು ಒಳ್ಳೆಯ ವಿಮರ್ಶಕನೂ ಅಲ್ಲ, ಓದುಗನೂ ಆಗಲಾರ ಎಂಬ ನಂಬಿಕೆಯನ್ನು ಬಲಗೊಳಿಸಿದ್ದು ಚೇತನಾ ತೀರ್ಥಹಳ್ಳಿ ಅವರ ಭಾಮಿನಿ ಷಟ್ಪದಿ’. ಒಂದು ಕೃತಿ ಒಬ್ಬ ಓದುಗನನ್ನು ಎಷ್ಟರ ಮಟ್ಟಿಗೆ ಒಳಗೊಳ್ಳುತ್ತದೆ ಹಾಗೂ ಅವನ ಪಾಲಿಗೆ ಎಷ್ಟರ ಮಟ್ಟಿಗೆ ತೆರೆದುಕೊಳ್ಳುತ್ತದೆ ಅನ್ನುವುದು ಆಯಾ ಓದುಗನ ಅನುಭವ, ಆರ್ದ್ರತೆಗೆ ಸಂಬಂಧಿಸಿದ್ದು. ಹೀಗಾಗಿ ಪ್ರತಿಯೊಂದು ಕೃತಿಯೂ ಒಬ್ಬೊಬ್ಬನ ಪಾಲಿಗೂ ವಿಶಿಷ್ಟ, ವಿಭಿನ್ನ ಮತ್ತು ತನ್ನದೇ ಆದ ಅರ್ಥಗಳನ್ನು ಹೊರಡಿಸುತ್ತಾ ಹೋಗುತ್ತದೆ. ಅದು ಇರಬೇಕಾದದ್ದೂ ಹಾಗೆಯೇ.
ಇಂಗ್ಲಿಷಿನಲ್ಲಿ compassion ಎಂಬ ಪದವಿದೆ. ಕನ್ನಡದಲ್ಲಿ ಅದಕ್ಕೆ ಸಮಾನಾರ್ಥಕ ಪದ ಸಹಾನುಭೂತಿ. ಅದನ್ನು ನಾವು ಅನುಕಂಪ ಅನ್ನುವ ಅರ್ಥದಲ್ಲಿ ಬಳಸುತ್ತಿದ್ದರೂ ಅದರ ಮೂಲ ಅರ್ಥ ಸಹ-ಅನುಭೂತಿ. ಇಂಗ್ಲಿಷಿನಲ್ಲೂ ಅದೇ ಅರ್ಥ: com-passion. ಇನ್ನೊಬ್ಬರ ಭಾವನೆಯಲ್ಲಿ ಭಾಗಿಯಾಗುವುದು. ಬೇಡನ ಬಾಣಕ್ಕೆ ಪ್ರಾಣ ಕಳೆದುಕೊಂಡ ಕಾಮಮೋಹಿತ ಕ್ರೌಂಚದ ಸಾವಿಗೆ ಜೊತೆಗಾತಿ ಕ್ರೌಂಚ ಕಣ್ಣೀರಿಡುತ್ತಿದ್ದಾಗ ವಾಲ್ಮೀಕಿ ಅನುಭವಿಸಿದ್ದು ಅದನ್ನೇ ಇರಬೇಕು; ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ, ಯತ್ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಮ್. ಆ ಕ್ಷಣದ ಕೋಪ, ನೋವು, ದುಃಖ ಎಲ್ಲವೂ ಒಂದೇ ಮಾತಲ್ಲಿ ಹೊರಹೊಮ್ಮಿದ್ದು ಹಾಗೆ.
ತೀವ್ರತೆಯೇ ಬರಹಗಾರನ ಶಕ್ತಿ. ಅನುಭವಕ್ಕೆ ಬಂದದ್ದು ಮಾತುಗಳಲ್ಲಿ ಸೋರಿಹೋಗದ ಹಾಗೆ ದಾಟಿಸುವುದು ಸಾಧ್ಯವಾಗಲಿ ಎಂಬ ಆಶೆಯಿಂದಲೇ ಚೇತನಾ ತೀರ್ಥಹಳ್ಳಿ ಬರೆಯುತ್ತಾರೆ. ತನಗನ್ನಿಸಿದ್ದನ್ನು ಹೇಳುವುದಕ್ಕೆ ತನ್ನದೇ ಆದ ನಿರೂಪಣಾ ಶೈಲಿಯನ್ನೂ ಕಂಡುಕೊಂಡಿದ್ದಾರೆ. ಅವರು ಆಡುತ್ತಿರುವ ಮಾತುಗಳಲ್ಲಿರುವ ಪ್ರೀತಿ, ಆಕ್ರೋಶ ಮತ್ತು ತ್ಯಕ್ತಭಾವ ತನಗೆ ಬೇಕಾದಂಥ ಅಭಿವ್ಯಕ್ತಿ ಕ್ರಮವನ್ನು ತಾನಾಗೇ ಹುಡುಕಿಕೊಂಡಂತಿದೆ. ಈ ಸಾಲುಗಳನ್ನೊಮ್ಮೆ ಓದಿ:
ಮತ್ತೆ ಮತ್ತೆ ಕ್ಲಿಪ್ಪು ಟಪಟಪಾರೆನಿಸಿ ಜುಟ್ಟು ಬಿಗಿದಳು.
ಅವಳಿನ್ನೂ ಈಗ ತಾನೆ ಹದಿಹರೆಯ ಕಳೆದವಳಂತೆ ಇದ್ದಾಳೆ. ಪ್ರಪೋಸು ಮಾಡಬರುವ ಹುಡುಗರಿಗೆ ಎಂಟು ವರ್ಷದ ಮಗು ಫ್ರೀ’ ಅಂದು ಕೆಣಕುತ್ತಾ ಬೇಸ್ತುಬೀಳಿಸುತ್ತಾಳೆ. ಹೀಗೇ ಅಲೆಯುತ್ತಿರುತ್ತಾಳೆ ದಿನವೆಲ್ಲ. ದುಡಿತ ಮುಗಿದರೂ ಮನೆ ಸೇರದೆ, ನಾಟಕ, ಉಪನ್ಯಾಸ, ಸೆಮಿನಾರುಗಳಲ್ಲಿ ಕಳೆದುಹೋಗುತ್ತಾಳೆ. ಅವಳ ವ್ಯಾನಿಟಿ ಬ್ಯಾಗಲ್ಲಿ ಸೇಫ್ಟಿಪಿನ್ನಿನ ಗೊಂಚಲು. ಕಾಲಿಗೆ ಬೆಲ್ಟಿಲ್ಲದ ಚಪ್ಪಲಿ. ಒಂಟಿಹೆಣ್ಣಿನ ಬೆಲೆ’ ಗೊತ್ತಿದೆ ಅವಳಿಗೆ.
ಅವಳ ರಾತ್ರಿಗಳೆಲ್ಲ ಬಾಲ್ಕನಿಗಳಲ್ಲಿ ಕುಂತೇ ಕಳೆಯುತ್ತದೆ.’
ಕವಿ ಸುಡುಸುಡುವ ಹೋಳಿಗೆಯ ಹೆಂಚು ಇದ್ದ ಹಾಗೆ. ಅದು ತನ್ನನ್ನು ಬೆಂಕಿಗೆ ಒಡ್ಡಿಕೊಂಡು ಕಾದು ಕೆಂಡವಾಗಿರುತ್ತದೆ. ಆದರೆ ಹೋಳಿಗೆಯನ್ನು ಎಷ್ಟು ಬೇಕೋ ಅಷ್ಟು ಸುಟ್ಟು, ಹದವಾಗಿಸಿ, ಸವಿಯಾಗಿಸಿ ನಮ್ಮ ಕೈಗಿಡುತ್ತದೆ, ಕೈಗೆ ನಾಲಗೆಗೆ ಹಿತವಾದ ಬಿಸುಪಷ್ಟೇ ತಾಕುವಂತೆ.
ಚೇತನಾ ಬರಹಗಳೂ ಹಾಗೆ ನಮ್ಮನ್ನು ಸುಡದಂತೆ, ಬಿಸುಪು ಆರದಂತೆ, ನಮ್ಮೊಳಗಿನ ಸುಡುಕೆಂಡ ನೆನಪಾಗುವಂತೆ, ಕೆಂಡದ ಹಾದಿಯಲ್ಲಿ ನಡೆದವರ ಬಗ್ಗೆ ಪ್ರೀತಿ ಮೂಡುವಂತೆ ಮಾಡುತ್ತವೆ .
*****
ಅಂಕಣ ಬರಹಗಾರರ ಕಷ್ಟ ಸುಖ ಒಂದೆರಡಲ್ಲ. ಅನಿಸಿದ್ದು ಅಂಕಣದೊಳಗೆ ಪಡಿಮೂಡುವಂತೆ ಮಾಡುವುದು, ಆ ಕ್ಷಣದ ಭಾವವನ್ನು ಕವನಕ್ಕೆ ಒಗ್ಗಿಸಿದಷ್ಟೇ ಕಷ್ಟ.
ಇಂಥದ್ದರಲ್ಲಿ ಪದಗಳನ್ನು ದುಂದುವೆಚ್ಚ ಮಾಡದ ಚೇತನಾ, ಸಂಭಾಷಣೆಯ ರೂಪದಲ್ಲಿ, ತನ್ನ ವಿಶಿಷ್ಟ ಲಹರಿಯಲ್ಲಿ, ಕಾವ್ಯದ ಸಾಲುಗಳೇನೋ ಅನ್ನಿಸುವಂತೆ ಹೇಳಿಬಿಡುತ್ತಾರೆ. ಹೀಗಾಗಿ ಅವರ ಸಾಲುಗಳಿಗೆ ಕವಿತೆಯ ಸಂದಿಗ್ಧತೆ ಪ್ರಾಪ್ತವಾಗಿದೆ.
ತಂದೆ ಅವಮಾನಿಸಲಾರ ಮಗನನ್ನ, ಅವಮಾನಿಸಲಾರ ಹೆಂಡತಿಯನ್ನ.
ಹಾದಿ ಬೀದಿಯ ಮಾತಿಗೆ ಮಮತೆ ನೊಂದಿತು’.
ಚೇತನಾರ ಬಿಸಾಡು ಆ ಹಳೆಯ ನೋವುಗಳನ್ನು..’ ಓದುತ್ತಿದ್ದಂತೆ ಎಂದೋ ಓದಿದ ನ್ಯೂಜಿಲೆಂಡಿನ ಬರಹಗಾತಿ ಕೆಥರೀನ್ ಮ್ಯಾನ್ಸ್‌ಫೀಲ್ಡ್ ಬದುಕು ಬರಹದ ನೆನಪು. ಡಿ ಎಚ್ ಲಾರೆನ್ಸ್ ಸಹವರ್ತಿಯಾಗಿದ್ದ ಕೆಥರೀನ್, ಗಾಢ ಏಕಾಂತ, ಕಾಯಿಲೆ, ಮಾತ್ಸರ್ಯದ ನಡುವೆ ಬದುಕಿದವಳು. ಅವಳ ಬರಹಗಳಲ್ಲಿ ಮಧ್ಯಮ ವರ್ಗದ ವೈವಾಹಿಕ ಮತ್ತು ಸಾಂಸಾರಿಕ ಬದುಕಿನ ದುಗುಡಗಳು ಪ್ರಜ್ಞಾಪ್ರವಾಹವಾಗಿ ಹರಿದಿವೆ. ತನ್ನ ಪ್ರಜ್ಞೆಯ ಒಂದು ಭಾಗವಾಗಿರುವ ದುಮ್ಮಾನಗಳನ್ನು ಚೇತನಾ ದಾಟಿಸುವ ಕ್ರಮದಲ್ಲೇ ನಳನಳಿಸುವ ಹೊಸತನವಿದೆ. ಆದರೆ, ಶೈಲಿಯನ್ನು ಮೆಚ್ಚಿಕೊಳ್ಳುವ ಭರದಲ್ಲಿ ಸಂವೇದನೆಯನ್ನು ಕಡೆಗಣಿಸುವ ಅಪಾಯವೂ ಇದೆ ಎನ್ನುವುದನ್ನು ಮರೆಯಬಾರದು.
ಏಕಕಾಲಕ್ಕೇ ಭಾಮಿನಿ ಷಟ್ಪದಿ’ ಮೀರಲಾಗದವರ ಕಷ್ಟವೂ, ಮೀರಬೇಕು ಅಂದುಕೊಂಡವರ ಭರವಸೆಯೂ ಆಗಿ ನಮ್ಮನ್ನು ತಲುಪುತ್ತದೆ. ಅನುದಿನದ ಅಂತರಗಂಗೆಯನ್ನು ತಮ್ಮ ತೀವ್ರ ಜೀವನೋತ್ಸಾಹ, ಛಲ ಮತ್ತು ಶ್ರಮಜೀವನದ ಮೂಲಕ ದಾಟಲು ಹೊರಟವರನ್ನು ಹುರಿದುಂಬಿಸುತ್ತದೆ. ಸೀತೆ, ರಾಧೆ, ಯಶೋಧರೆ, ಅಹಲ್ಯೆಯರ ಕುರಿತು ಬರೆಯುವ ಹೊತ್ತಿಗೆ ಚೇತನಾರಲ್ಲಿ ಕಾಣಿಸುವ ಗೊಂದಲ ಕೂಡ ಸಹಜವಾದದ್ದೇ. ಅದನ್ನು ತನ್ನ ನಿಲುವು ಎಂಬಂತೆ ಅವರು ದಾಖಲಿಸುವುದಿಲ್ಲ. ಅದು ಕೂಡ ಜಂಗಮ ಭಾವವಾಗಿಯೇ ಹೊರಹೊಮ್ಮುತ್ತದೆ. ಹೀಗಾಗಿ ಗೊತ್ತಿರುವ ಗೌತಮನ ಕತೆಯಲ್ಲೂ ಚೇತನಾ ಚಿಂತನೆ ಹಣಿಕಿಹಾಕುತ್ತವೆ:
ಇಂದ್ರ ಮೈತುಂಬ ಕಣ್ಣು ಹೊತ್ತು ಕುರುಡನಂತೆ ಸ್ವರ್ಗದ ಹಾದಿ ಹಿಡಿದ. ಅಹಲ್ಯೆ ಮೈತುಂಬ ಸೆರಗು ಹೊದ್ದು ಗಂಡನೆದುರು ಬೆತ್ತಲಾದಳು’.
ದ್ರೌಪತಿಯ ಅಂತರಂಗವನ್ನು ಬಿಚ್ಚಿಡುವ ಹೊತ್ತಿಗೆ ಚೇತನಾ ಮತ್ತಷ್ಟು ಆಳಕ್ಕಿಳಿಯುತ್ತಾರೆ. ಐವರಿಗೂ ಪರ ಸತಿಯಾಗಿಯೇ ದೂರವಾಗುತ್ತಾ, ಪರಿಪೂರ್ಣ ಪ್ರೇಮಕ್ಕಾಗಿ ಹಂಬಲಿಸುತ್ತಾ, ನಡುನಡುವೆ ಕರ್ಣನ ಕೈ ಹಿಡಿದಿದ್ದರೆ ಅಂದುಕೊಳ್ಳುತ್ತಾ ಪತಿವ್ರತೆಯ ಪಟ್ಟ ನಿಭಾಯಿಸುತ್ತಾ ಉಳಿದುಹೋದಳು.’
ಇಂಥ ಸೂಕ್ಷ್ಮ ಗ್ರಹಿಕೆಗಳಲ್ಲಿ ಚೇತನಾ ಮುಖಾಮುಖಿಯಾಗುತ್ತಾರೆ. ಅಂಕಣ ಬರಹದ ಮಿತಿಗಳನ್ನು ಮೀರುತ್ತಾರೆ. ಅಲ್ಲಲ್ಲಿ ಕವಿಯಾಗುತ್ತಾರೆ. ಮಗುವಿನ ಹುಟ್ಟಿಗೆ ನಾವೊಂದು ಪಿಳ್ಳೆ’ ನೆವ ಮಾತ್ರ ಎಂದು ಬರೆದು ಬೆಚ್ಚಿಬೀಳಿಸುತ್ತಾರೆ. ಪಿಳ್ಳೆ’ ಅಂದರೂ ಮಗುವೇ.
ಒಮ್ಮೆ ಇಡಿಯಾಗಿ ಓದಿ, ಆಗೊಮ್ಮೆ ಈಗೊಮ್ಮೆ ಒಂದೊಂದೇ ಬರಹವನ್ನು ಓದುತ್ತಾ ನಮ್ಮ ಅನುಭವದ ಪರಿಧಿಯನ್ನು ವಿಸ್ತರಿಸಿಕೊಳ್ಳಬಹುದಾದ ಅನೇಕ ಬರಹಗಳು ಇಲ್ಲಿವೆ. ಇವನ್ನು ಅಂಕಣಬರಹಗಳೆಂದೋ, ಪ್ರಬಂಧಗಳೆಂದೋ, ಲಹರಿಗಳೆಂದೋ ಕರೆದರೆ ಈ ಬರಹಕ್ಕಿರುವ ಬಹುಮುಖೀ ಸಾಧ್ಯತೆಗಳನ್ನು ಸೀಮಿತಗೊಳಿಸಿದಂತಾಗುತ್ತದೆ.
ಷಟ್ಪದಿಯ ಪಂಜರದಿಂದ ಭಾಮಿನಿ ಆಚೆ ಬಂದಿದ್ದಾಳೆ; ಆ ನೆನಪೇ ಈಗ ಪಂಜರದಂತೆ ಕಾಣಿಸುತ್ತಿದೆ. ಬಿಡುಗಡೆಗಾಗಿ ಕಾತರಿಸುವ ವಿಷಣ್ಣ ಮನಸ್ಸಿನಿಗೆ ಅಕ್ಷರವೇ ಮುದ್ದಿಸುವ ತುಟಿಯಾಗುವ ಪವಾಡಕ್ಕೆ ಕಣ್ತುಂಬುತ್ತಿದೆ.
-ಚೇತನಾ ತೀರ್ಥಹಳ್ಳಿ ಅವರ ಭಾಮಿನಿ ಷಟ್ಪದಿ ಸಂಕಲನಕ್ಕೆ ಬರೆದ ಮುನ್ನುಡಿ.

7 comments:

krutavarma said...

ಅನಿಸಿದ್ದನ್ನು ಅಕ್ಷರಕ್ಕಿಳಿಸಿ ಅಭಿವ್ಯಕ್ತಿಸುವುದೇ ಅಸಾಮಾನ್ಯ ಅಚ್ಚರಿ. ಕೆಲವೇ ಶಬ್ದಗಳಲ್ಲಿ ಸೆರೆ ಹಿಡಿಯಬೇಕಾಗುವುದು, ಅನಿವಾರ್ಯ. ಅದಕ್ಕೇ ಇರಬೇಕು ಚೇತನಾರವರು, 'ಭಾಮಿನೀ'ಯನ್ನು ದೀರ್ಘಗೊಳಿಸದೆ 'ಭಾಮಿನಿ'ಯನ್ನಾಗಿ miniಗೊಳಿಸಿದ್ದಾರೆ.
ಚೇತನಾರಿಗೆ ಅಭಿನಂದನೆಗಳು. ಜೊತೆಗೆ ಚೆನ್ನಾಗಿ ಮುನ್ನುಡಿದ ನಿಮಗೂ..

mruganayanee said...

:-)ಚಂದದ ಪುಸ್ತಕ ಅದು. she disturbs the reader by her sarcastic tone, astonishes him by her way of seeing things, nd ruffels him by her true expressions. Many lines are so touchy, you cant afford to forget them.....

"ಅನುಭವಕ್ಕೆ ಬಂದದ್ದು ಮಾತುಗಳಲ್ಲಿ ಸೋರಿಹೋಗದ ಹಾಗೆ ದಾಟಿಸುವುದು ಸಾಧ್ಯವಾಗಲಿ ಎಂಬ ಆಶೆಯಿಂದಲೇ ಚೇತನಾ ತೀರ್ಥಹಳ್ಳಿ ಬರೆಯುತ್ತಾರೆ....."
I am with this opinion of urs...

avalu said...

matthe mane baglu yavaga thegidiri maaryre. bahala dinadha mele ee kade bandhe. Kushi aythu. thanx for again blogging

Sarathy said...

Chethana's writings represent the recent evolution of Kannada literature... I know her writings through her blog posts. Chethana beleyabeku. Avaranthiruva hatthaaru lekhakaru mannaNege kaadhiddaare. Blog has become a great medium from where able Kannada writers are emerging from different arena.

Anonymous said...

adella sari....book innu yaava kaalakke release ?

sudhakara said...

hai jogi,
adestu baritira sir,janaki kalam,saptahika,matte adra jote yamini anno kadambarinu barita idira.timena adege hondisikotiri,yavaga odotiro,nimmadu nijakku daitya pratibe maraya.nimma bara hige munduvareyali.thanx
by yours
SUDHAKARA,B HAMPI

raja said...

this s yogesh
i always keep watching jogimane.
i m a new bloger
rajayogi.wordpress.com
pls go thru it and guide me