ಹಾಳೂರಿನ ಕತೆ-2
ವೆಂಕಣ್ಣಯ್ಯನವರು ಸಂಜೆಗೆ ಹೊರಟು ರಾತ್ರಿ ಹೊತ್ತಿಗೆ ಸೇರಿದ್ದು ದೆವ್ವಗಳೇ ವಾಸವಾಗಿರುವ ಹಾಳೂರು ಅನ್ನುವುದನ್ನೂ, ದೆವ್ವಗಳ ಕೈಗೆ ಅವರು ಸರ್ಕಾರಕ್ಕೆ ಕಟ್ಟ ಬೇಕಾಗಿದ್ದ ನೂರೈವತ್ತು ರುಪಾಯಿಗಳ ಹಮ್ಮಿಣಿಯನ್ನು ಕೊಟ್ಟರು ಅನ್ನುವುದನ್ನೂ ಹಿಂದಿನ ಪುಟದಲ್ಲಿ ಓದಿದ್ದೀರಿ. ತ. ಸು. ಶಾಮರಾಯರು ಬರೆದ ತಳುಕಿನ ವೆಂಕಣ್ಣಯ್ಯನವರ ಜೀವನ ಚರಿತ್ರೆಯಲ್ಲಿ ಬರುವ ಹಾಳೂರಿನ ಅನುಭವ ಎಂಬ ಅಧ್ಯಾಯದ ಮುಂದಿನ ಹಾಗೂ ಕೊನೆಯ ಭಾಗ ಹೀಗಿದೆ;
ತಮ್ಮ ಅಧಿಕಾರದ ತೀರ ಕಡೆಯ ಭಾಗದಲ್ಲಿ ಇದೆಂಥ ಪ್ರಮಾದ ಸಂಭವಿಸಿತು. ಇದೆಂಥ ಅವಮಾನ, ಶ್ರೀರಾಮಚಂದ್ರಾ, ಈ ವಿಪತ್ತಿನಿಂದ ನನ್ನನ್ನು ಪಾರು ಮಾಡು. ನೀನೇ ಗತಿ ಎಂದು ಮಹತ್ತರವಾಗಿ ಚಿಂತಿಸುತ್ತಾ ಕುದುರೆಗೆ ಥಡಿ ಹಾಕಿ, ತಮ್ಮ ಬಂಧುಗಳಿದ್ದ ಚೆನ್ನಮ್ಮನಾಗತಿಹಳ್ಳಿಗೆ ಪ್ರಯಾಣ ಬೆಳೆಸಿದರು.
ಚೆನ್ನಮ್ಮ ನಾಗತಿಹಳ್ಳಿಯ ರಾಮಣ್ಣ ಜೋಯಿಸರ ತಂದೆ ಅಪ್ಪಣ್ಣ ಜೋಯಿಸರು ಸುಪ್ರಸಿದ್ದರಾದ ಮಂತ್ರವಾದಿಗಳು. ಭೂತ-ಪ್ರೇತಗಳನ್ನು ಅವರು ಮನಬಂದಂತೆ ಕುಣಿಸುವರೆಂದು ಪ್ರತೀತಿ ಇತ್ತು. ದೆವ್ವ ಹಿಡಿದವರನ್ನು ಅವರ ಬಳಿಗೆ ಕರೆತಂದು ಅದರ ಉಚ್ಛಾಟನೆಯನ್ನು ಮಾಡಿಸುತ್ತಿದ್ದುದುಂಟು. ಅಮಾವಾಸ್ಯೆಯ ರಾತ್ರಿಗಳಲ್ಲಿ ಅಪ್ಪಣ್ಣನವರು ಸ್ಮಶಾನದಲ್ಲಿ ಕುಳಿತು ಮಂತ್ರಸಾಧನೆ ಮಾಡುತ್ತಿದ್ದರಂತೆ. ಅವರು ಸುಪ್ರಸಿದ್ಧ ವೈದ್ಯರೂ ಆಗಿದ್ದರು. ಅವರು ಎಂದೂ ತಮ್ಮ ವಿದ್ಯೆಯನ್ನು ಮಾರಿಕೊಳ್ಳಹೊರಟವರಲ್ಲ. ಕೇವಲ ಧರ್ಮದೃಷ್ಟಿಯಿಂದ ಪರೋಪಕಾರ ಮಾಡಿ ಪರೋಪಕಾರಿ ಅಪ್ಪಣ್ಣ ಎಂದು ಹೆಸರು ಗಳಿಸಿದ್ದವರು. ಅವರಿಗೆ ಒಬ್ಬನೇ ಮಗ ರಾಮಣ್ಣ ಹದಿಹರೆಯದಲ್ಲಿದ್ದ. ಅವನಿಗೂ ತಕ್ಕಮಟ್ಟಿಗೆ ಆಯುರ್ವೇದ ಮತ್ತು ಭೂತವಿದ್ಯೆಗಳು ಕರಗತವಾಗಿದ್ದವು. ತಂದೆಮಕ್ಕಳಿಬ್ಬರೂ ಸುತ್ತಮುತ್ತಿನ ಹತ್ತಾರು ಹಳ್ಳಿಗಳಿಗೆ ಪುರೋಹಿತರಾಗಿದ್ದರು. ಅದೇ ಅವರ ಜೀವನವೃತ್ತಿ. ಅದರಿಂದ ಬಂದ ಉತ್ಪತ್ತಿಯಲ್ಲಿ ಬಡತನದ ಜೀವನ ನಡೆಸುತ್ತಿದ್ದರು.
ಒಮ್ಮೆ ನಮ್ಮೂರಿನ (ತಳುಕಿನ) ಮಹಿಳೆಯೊಬ್ಬಳು ಅಪ್ಪಣ್ಣನವರಿಂದ ಭೂತಬಾಧೆ ನಿವಾರಣೆ ಮಾಡಿಕೊಂಡದ್ದನ್ನು ನಾನೇ ಪ್ರತ್ಯಕ್ಪವಾಗಿ ಕಂಡಿದ್ದೇನೆ. ಅಲ್ಲೊಬ್ಬ ಬಡ ದಂಪತಿಗಳು. ಅವರಿಗೆ ಆದ ಮಕ್ಕಳೊಂದೂ ಉಳಿಯುತ್ತಿರಲಿಲ್ಲ. ಅಪ್ಪಣ್ಣನವರಿಂದ ಭೂತಬಾಧೆ ನಿವಾರಣೆಯಾದ ಮೇಲೆ ಹುಟ್ಟಿದ ಒಂದು ಗಂಡುಮಗು ಸುಖವಾಗಿ ಎಂಬಿಬಿಎಸ್ ಪರೀಕ್ಪೆಯಲ್ಲಿ ತೇರ್ಗಡೆ ಹೊಂದಿ ಪ್ರಸಿದ್ಧ ವೈದ್ಯನೆಂದು ಹೆಸರಾಗಿದ್ದಾನೆ. ಅತನ ಮನೆ ಹೆಣ್ಣು, ಗಂಡು ಮಕ್ಕಳಿಂದ ತುಂಬಿ ನಂದಗೋಕುಲದಂತಿದೆ.
ಅಪ್ಪಣ್ಣ ರಾಮಣ್ಣನವರ ಶಕ್ತಿ ಸಾಮರ್ಥ್ಯಗಳನ್ನು ಬಲ್ಲ ವೆಂಕಣ್ಣಯ್ಯನವರು ಹಾಳೂರಿನಿಂದ ನೇರವಾಗಿ ಚೆನ್ನಮ್ಮನಾಗತಿಹಳ್ಳಿಗೆ ಧಾವಿಸಿದರು. ಹಿರಿಯರಾದ ಅಪ್ಪಣ್ಣನವರ ಮುಂದೆ ತಮಗಾದ ಅನುಭವವನ್ನು ಆದ್ಯಂತವಾಗಿ ವಿವರಿಸಿ `ಮಾವಾ, ನನ್ನ ಗತಿ ಏನು?' ಎಂಗು ಕಣ್ಣೀರಿಟ್ಟರು. ಅಪ್ಪಣ್ಣನವರು ಅವರನ್ನು ಸಮಾಧಾನ ಪಡಿಸಿ ವೆಂಕಣ್ಣಯ್ಯ ಆ ಹಾಳೂರಿನ ವಿಷಯವೆಲ್ಲ ನನಗೆ ಚೆನ್ನಾಗಿ ಗೊತ್ತು. ಅದು ಸಂಪೂರ್ಣವಾಗಿ ನಾಶವಾಗುವ ಮೊದಲು ಕೆಲಸಜನ ವಾಸವಾಗಿದ್ದನ್ನು ಕಂಡಿದ್ದೆ. ಮಾರಮ್ಮನ ಬೇನೆಯಿಂದ ಆ ಊರು ನಿರ್ನಾಮವಾಯಿತು. ಈಗ ನೀನೊಂದು ಕೆಲಸ ಮಾಡು. ನಿನ್ನೆ ನೀನು ಅಲ್ಲಿಗೆ ಹೋದ ಹೊತ್ತಿಗೇ ಸರಿಯಾಗಿ ಅಲ್ಲಿಗೆ ಹೋಗು. ನಿನಗೆ ಯಾವುದೊಂದು ತೊಂದರೆಯೂ ಭಯವೂ ಆಗದಂತೆ ನಾನು ಮಂತ್ರಾಕ್ಪತೆಯನ್ನು ಮಂತ್ರಿಸಿಕೊಡುತ್ತೇನೆ. ನಿನ್ನೆಯಂತೆ ಇಂದೂ ಅದೇ ಶಾನುೋಗ ನಿನ್ನನ್ನು ಕಾಣಲೆಂದು ಬರುತ್ತಾನೆ. ನೀನು ಏನೂ ಅರಿಯದವನಂತೆ ಅವನೊಂದಿಗೆ ವ್ಯವಹರಿಸಿ. ಯಾವುದಾದರೊಂದು ನೆಪವೊಡ್ಡಿ ನಿನ್ನೆ ನೀನು ಕೊಟ್ಟ ಹಣವನ್ನು ಹಿಂದಕ್ಕೆ ಕೊಡುವಂತೆ ಕೇಳು. ಅವನು ಕೊಡುತ್ತಾನೆ. ಅದನ್ನು ತೆಗೆದುಕೊಂಡ ಒಡನೆಯೇ ಹಿಂದಿರುಗಿಬಿಡು. ನಿನ್ನ ರಕ್ಪಣೆಗೆ ಯಾರನ್ನಾದರೂ ಕಳುಹಿಸುವಂತೆ ಆ ಶಾನುೋಗನನ್ನು ಕೇಳು. ಅವನು ಕಳುಹಿಸುತ್ತಾನೆ'. ವೆಂಕಣ್ಣಯ್ಯನವರು ಮಾವನ ಮಾತಿನಂತೆ ಧೈರ್ಯವಾಗಿ ಆ ಸಾಹಸಕಾರ್ಯಕ್ಕೆ ಕೈ ಹಾಕಿದರು.
ವೆಂಕಣ್ಣಯ್ಯನವರು ಮಾವನ ಮಾತಿನಂತೆ ಕುದುರೆಗೆ ಥಡಿ ಹಾಕಿ ಪ್ರಯಾಣ ಬೆಳೆಸಿದವರೇ ಹಿಂದಿನ ದಿನ ಬಂದಿದ್ದ ಹೊತ್ತಿಗೆ ಸರಿಯಾಗಿ ಈ ದಿನವೂ ಹಾಳೂರಿಗೆ ಹೋದರು. ಎಲ್ಲವೂ ಹಿಂದಿನ ದಿನದಂತೆಯೇ ನಡೆಯಿತು. ಶಾನುಭೋಗನಿಂದ ಯೋಗಕ್ಪೇಮ, ಗರಣಿಯಲ್ಲಿ ಸಂಧ್ಯಾವಂದನೆ, ಶಾನುಭೋಗರ ಮನೆಯಿಂದ ಚಾಪೆ, ಜಮಖಾನೆ, ಶೇಕದಾರರ ಫಲಾಹಾರಕ್ಕಾಗಿ ಹಾಲು-ಹಣ್ಣು, ಅವುಗಳ ಸೇವನೆ- ಎಲ್ಲವೂ ನಿನ್ನೆಯಂತೆಯೇ ನಡೆಯಿತು. ಲೋಕಾಭಿರಾಮವಾಗಿ ಮಾತಾಡುತ್ತಾ ವೆಂಕಣ್ಣಯ್ಯನವರು `ತಿಮ್ಮಪ್ಪನವರೇ, ನಿನ್ನೆ ನಾನು ನಿಮ್ಮ ಕೈಯಲ್ಲಿ ಕೊಟ್ಟ ಹಣದ ಚೀಲವನ್ನು ಹಿಂದಕ್ಕೆ ಕೊಡುವಿರಾ? ಇಬ್ಬರು ಅಸಾಮಿಗಳ ಲೆಕ್ಕದಲ್ಲಿ ಪೊರಪಾಟಾಗಿದೆ. ಲೆಕ್ಕಕ್ಕೂ ಹಣಕ್ಕೂ ತಾಳೆ ನೋಡಬೇಕಾಗಿದೆ. ಇಂದು ರಾತ್ರಿಯೇ ಅದನ್ನು ಮುಗಿಸಿ ನಾಳೆಯ ದಿನ ಕಛೇರಿಗೆ ಹಣವನ್ನು ಇರಸಾಲು ಮಾಡಬೇಕು'ಎಂದು ಕೇಳಿದರು. ಆಗ ಶಾನುೋಗ `ಅದಕ್ಕೇನು ಮಹಾಸ್ವಾಮಿ, ಈಗಲೇ ತಂದುಕೊಡುತ್ತೇನೆ ಎಂದು ಹೇಳಿ ಮೇಲೆದ್ದು ಹೊರಟವನೇ ಎರಡೇ ನಿಮಿಷದಲ್ಲಿ ಆ ಹಣದ ಚೀಲವನ್ನು ಶೇಕದಾರರ ಕೈಲಿಟ್ಟು `ನೋಡಿಕೊಳ್ಳಿ ಸ್ವಾಮಿ, ತಮ್ಮ ಚೀಲವನ್ನು ಕೊಟ್ಟ ಹಾಗೆಯೇ ಮುಚ್ಚಿಟ್ಟಿದ್ದು ಹಿಂದಕ್ಕೆ ತಂದಿದ್ದೇನೆ' ಎಂದ. ವೆಂಕಣ್ಣಯ್ಯನವರು ಅದನ್ನು ಕೈಲಿ ಎತ್ತಿಕೊಳ್ಳುತ್ತಲೇ ಅದು ಸರಿಯಾಗಿದೆ ಎಂದು ತೂಕದಿಂದಲೇ ತಿಳಿದು, ಅವರನ್ನು ಬಾಯ್ತುಂಬಾ ಹೊಗಳಿ ` ಚೆನ್ನಮ್ಮನಾಗತಿಹಳ್ಳಿಯಲ್ಲಿ ಆಸಾಮಿಗಳು ನನಗಾಗಿ ಕಾಯುತ್ತಿದ್ದಾರೆ. ಅವರ ಲೆಕ್ಕಗಳಲ್ಲೇ ಪೊರಪಾಟಾಗಿರುವುದು. ಈಗಲೇ ನಾವು ಹೊರಡಬೇಕು. ದಯವಿಟ್ಟು ಕುದುರೆಗೆ ಥಡಿ ಹಾಕಿಸಿ, ಇಬ್ಬರು ಆಳುಗಳನ್ನು ರಕ್ಪಣೆಗೆ ಕಳುಹಿಸಿಕೊಡಿ. ತುಂಬ ಕತ್ತಲಾಗಿದೆ. ಅಲ್ಲದೇ ಕೈಲಿ ಭಾರೀ ಹಣವಿದೆ' ಅಂದರು. ಶಾನುಭೋಗ ತಿಮ್ಮಪ್ಪ `ಅಗತ್ಯವಾಗಿ ಆಗಲಿ ಮಹಾಸ್ವಾಮಿ' ಎಂದು ಹೇಳಿ ತಳವಾರನನ್ನು ಕರೆದು `ನಿಂಗ, ನಿನ್ನ ಜೊತೆಗೆ ಇನ್ನೊಬ್ಬನನ್ನು ಕರೆದುಕೊಂಡು , ಸುಡಿಗೆ ಹಿಡಿದು ಸ್ವಾಮಿಯವರ ಸಂಗಡ ಚೆನ್ನಮ್ಮನಾಗತಿಹಳ್ಳಿಯವರೆಗೆ ಹೋಗಿ, ಅವರನ್ನು ಕ್ಪೇಮವಾಗಿ ಅಲ್ಲಿಗೆ ಮುಟ್ಟಿಸಿ ಬಾ ಎಂದು ಅಪ್ಪಣೆ ಮಾಡಿದ.
ಒಡನೆಯೇ ಕುದುರೆ ಥಡಿಯೊಂದಿಗೆ ಸಿದ್ಧವಾಯಿತು. ಇಬ್ಬರು ಆಳುಗಳು ಗರಿಯಿಂದ ಮಾಡಿದ ಸುಡಿಗೆಯನ್ನು ಹಿಡಿದು ಸಿದ್ಧರಾದರು. ಶೇಕದಾರ ಸಾಹೇಬರು ಕುದುರೆಯನ್ನೇರಿ ಕುಳಿತರು. ತಿಮ್ಮಪ್ಪ ಎರಡೂ ಕೈಗಳನ್ನೂ ಜೋಡಿಸಿ ವಿನೀತಭಾವದಿಂದ `ಮಹಾಸ್ವಾಮಿ, ಮಹಾನುಭಾವರಾದ ತಮ್ಮ ಪಾದಧೂಳಿಯಿಂದ ನಮ್ಮ ಗ್ರಾಮ ಪುನೀತವಾಯಿತು. ತಮ್ಮನ್ನು ಆದರದಿಂದ ಕಂಡ ನನ್ನ ಜನ್ಮ ಸಾರ್ಥಕವಾಯಿತು. ನನ್ನ ಮೇಲೆ ಆಶೀರ್ವಾದ ಬಿದ್ದರೆ ನಾನು ಉದ್ದಾರವಾದ ಹಾಗೆ' ಎಂದು ಬಿನ್ನವಿಸಿದ.
ಶಾನುಭೋಗರು ಕಳುಹಿಸಿದ ಆಳುಗಳಿಬ್ಬರೂ ಆ ಕಡೆಯೊಬ್ಬ, ಈ ಕಡೆಯೊಬ್ಬ ದೀವಟಿಗೆ ಹಿಡಿದು ದಾರಿ ತೋರಿಸುತ್ತಾ ಮುಂದೆ ಮುಂದೆ ನಡೆದರು. ಸ್ವಲ್ಪ ದೂರ ಹೋಗುತ್ತಲೇ ಆ ಆಳುಗಳಿಬ್ಬರ ಮನುಷ್ಯಾಕಾರ ಮಾಯವಾಯಿತು. ಬರಿಯ ದೀವಟಿಗೆಗಳೇ ಮುಂದುವರಿಯುತ್ತಿದ್ದವು. ಅದನ್ನು ಕಂಡು ವೆಂಕಣ್ಣಯ್ಯನವರಿಗೆ ವಿಸ್ಮಯವಾಯಿತು, ಸ್ವಲ್ಪ ಭಯವೂ ಆಯಿತು. ಪಂಚೆಯ ಸೆರಗಿನಲ್ಲಿದ್ದ ಮಂತ್ರಾಕ್ಪತೆಯ ಧೈರ್ಯದಿಂದ ಅವರ ಪ್ರಯಾಣ ಮುಂದೆ ಸಾಗಿತು. ಊರ ಮುಂದಿನವರೆಗೆ ಅವರು ಸಾಗಿಬರುತ್ತಲೇ ದೀವಟಿಗೆಗಳು ಮಾಯವಾದವು. ವೆಂಕಣ್ಣಯ್ಯನವರು ತಮ್ಮ ಬಂಧುಗಳ ಮನೆಯನ್ನು ಸೇರಿದರು.
ಭಾರೀ ಗಂಡಾಂತರವೊಂದು ಶ್ರೀರಾಮಚಂದ್ರನ ಕೃಪೆಯಿಂದ ಕಳೆದಂತಾಯಿತು.
*****
ತ. ಸು. ಶಾಮರಾಯರು ಒಮ್ಮೆ ವೆಂಕಣ್ಣಯ್ಯನವರನ್ನು ಕೇಳಿದರು;
`ನೀವೇಕೆ ಶ್ರೀಕೃಷ್ಣನನ್ನು ಕುರಿತು ಒಂದು ಗ್ರಂಥ ಬರೆಯಬಾರದು. ಅವನನ್ನು ಕುರಿತು ನೀವು ಭಾಷಣ ಮಾಡುವುದನ್ನು ಕೇಳಿದ್ದೇನೆ. ಅದು ತುಂಬ ಬೋಧಪ್ರದವಾಗಿರುತ್ತದೆ'. ಅವರು ನಗುತ್ತಾ `ಏಕೆ ಬರೆಯಬೇಕು?' ಎಂದು ಕೇಳಿದರು. `you must leave the foot prints on the sand of time' ಅಂದರು ಶಾಮರಾಯರು. ಅವರು ಕ್ಪಣಕಾಲ ಅಂತರ್ಮುಖಿಗಳಾಗಿದ್ದು ಅನಂತರ ಮುಗುಳುನಗೆಯೊಂದನ್ನು ತುಟಿಗಳ ಮೇಲೆ ಕುಣಿಸುತ್ತ ಭವಿಷ್ಯದ ತೆರೆಯನ್ನು ಓರೆ ಮಾಡಿ ನೋಡಿದ ಕಾರಣಪುರುಷರಂತೆ `ಓಹೇ, ನಿನ್ನ ಅಣ್ಣ ಬಹುದೊಡ್ಡವನೆಂದು ನೀನು ಭಾವಿಸಿದ್ದಿಯಲ್ಲವೇ? ನೀನೊಬ್ಬ ಶುದ್ಧ ದಡ್ಡ. ಲೋಕದ ಜನ ನನ್ನನ್ನು ಎಂದೆಂದಿಗೂ ನೆನೆಯುವರೆಂದು, ನೆನೆಯಬೇಕೆಂದು ಭಾವಿಸುತ್ತಿರುವೆಯಲ್ಲವೇ? ಜನ ಶ್ರೀರಾಮ ಶ್ರೀಕೃಷ್ಣನಂತಹವರನ್ನೇ ನೆನೆಯುವುದು ಕಷ್ಟ. ಈ ಯಃಕಶ್ಚಿತ್ ವೆಂಕಣ್ಣಯ್ಯನನ್ನು ನೆನೆಯಬೇಕೇ? ವೇದದ್ರಷ್ಟಾರರಂಥವರೇ ತಮ್ಮನ್ನು ಜನ ನೆನೆಯಬೇಕು ಅಂದುಕೊಳ್ಳಲಿಲ್ಲ. ತಮ್ಮ ಹೆಸರನ್ನು ಹೇಳಿಕೊಳ್ಳಲಿಲ್ಲ. ನಾನು ಹೇಳಿಕೊಳ್ಳಬೇಕೇ?' ಎಂದರು.
ವೆಂಕಣ್ಣಯ್ಯನವರು ಕಾಲವಾದ ಕೆಲತಿಂಗಳ ನಂತರ ಈ ವಿಚಾರವನ್ನು ಶಾಮರಾಯರು ಕೆವಿ ಪುಟ್ಟಪ್ಪನವರಿಗೆ ಹೇಳಿದರು. ಅದಕ್ಕೆ ಕುವೆಂಪು ನಕ್ಕು `ನಿಜ, ಹೆಸರಿನ ಶಾಶ್ವತತೆಗಿಂತಲೂ ಹಿರಿದಾದುದು ಇದೆಯಯ್ಯಾ, ಬದುಕು ಸಾಧಿಸುವುದಕ್ಕೆ. ಅವರೊಬ್ಬ ಮಹಾಸಾಧಕರು' ಎಂದರು. ಆಗ ತಾವು ಬರೆಯುತ್ತಿದ್ದ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಅವರಿಗೆ ಅರ್ಪಿಸುವುದಾಗಿಯೂ , ಶ್ರೀರಾಮಾಯಣ ದರ್ಶನಂ ಇರುವಷ್ಟು ಕಾಲವೂ ಅವರ ಹೆಸರು ಉಳಿಯುವುದಾಗಿಯೂ ತಿಳಿಸಿದರು.
****
ತ.ಸು. ಶಾಮರಾಯರು ಬರೆದ `ಮೂರು ತಲೆಮಾರು' ಕೃತಿಯಲ್ಲಿ ಬರುವ ವೆಂಕಣ್ಣಯ್ಯನವರ ಜೀವನ ಚಿತ್ರ ನಮ್ಮನ್ನು ವಿನೀತರನ್ನಾಗಿಸುತ್ತದೆ, ಪುನೀತರನ್ನೂ ಆಗಿಸುತ್ತದೆ.
Thursday, May 3, 2007
Subscribe to:
Post Comments (Atom)
13 comments:
ತಿಳಿಗೊಳದಲ್ಲಿ ಮಿಂದು ಬಂದಂತೆ ನಿರ್ಮಲ ಅನುಭವ ನೀಡುವ ಬರಹ. ಧನ್ಯವಾದಗಳು. ಈ ಪುಸ್ತಕ ಎಲ್ಲಿ ಸಿಗುತ್ತದೆ?
ಜೋಗಿ ಸರ್..
ಇಂಥಹ ಒಳ್ಳೆಯ ಸಾಹಿತ್ಯವನ್ನು ಬ್ಲಾಗ್ ಸ್ಪಾಟಿನಲ್ಲಿ ಪ್ರಕಟಿಸುತ್ತಿರುವುದು ಯಾಕೋ ಸರಿ ಅನಿಸುತ್ತಿಲ್ಲ..
ಅಂದರೆ ಎರಡರ್ಥ. ಬ್ಲಾಗಿನಲ್ಲಿ ಒಳ್ಳೆಯ ಸಾಹಿತ್ಯಕ್ಕೆ ಜಾಗವಿಲ್ಲ ಅಥವಾ ಬೇರೆ ಮಾಧ್ಯಮದಲ್ಲಿ ಬರುವುದು ಮಾತ್ರ ಒಳ್ಳೆಯ ಸಾಹಿತ್ಯ..
ಸರಿಯಾ
ಎರಡೂ ಅಲ್ಲ.. ನಮ್ಮ ಉತ್ಕೃಷ್ಠ ಸಾಹಿತ್ಯ ಕೃತಿಗಳನ್ನೆಲ್ಲಾ ಇಷ್ಟು ಸುಲಭವಾಗಿ ಇಲ್ಲಿ ಪ್ರಕಟಿಸುವುದು ಯಾಕೋ ಬೇಕಾಬಿಟ್ಟಿಯೆನಿಸುವುದಿಲ್ಲವೇ?? .... ಉಚಿತವಾಗಿ ಪ್ರಕಟಿಸುವುದೇ ತಪ್ಪು, ಅಷ್ಟಕ್ಕೂ ಪ್ರಕಟಿಸಬೇಕೆಂದರೆ, ನಮ್ಮದೇ ಹುಡುಗರ ಸಂಪದ, ಕನ್ನಡಸಾಹಿತ್ಯ.ಕಾಂ ನಂತಹ ಜಾಗಗಳಲ್ಲಿ ಇಲ್ಲದಿದ್ದರೆ ನಮ್ಮದೇ ಸ್ವಂತ ತಾಣದಲ್ಲಿ ಪ್ರಕಟಿಸಿದರೆ ಚೆನ್ನ ..
ಅನಾಮಧೇಯರೇ, ನಿಮ್ಮ ಕೊರಗೇನೋ ನನಗೆ ಅರ್ಥವಾಗುತ್ತಿಲ್ಲ. ನಮಗೆ ಓದಲು ಸಿಗದ ಅಮೂಲ್ಯ ಪುಸ್ತಕಗಳ ಬಗ್ಗೆ ಹೀಗಾದರೂ ತಿಳಿಯುತ್ತಲ್ಲ ಎಂದು ನಾನು ಸಂತೋಷ ಪಡುತ್ತಿದ್ದರೆ ನೀವು ಹೀಗನ್ನುತ್ತಿದ್ದೀರಲ್ಲ?ಬ್ಲಾಗ್ ಅಂದರೆ ಕೆಟ್ಟದು ಎಂದು ನಿಮ್ಮ ಅಭಿಪ್ರಾಯವೇ?
ನಮ್ಮ ಉತ್ಕೃಷ್ಠ ಸಾಹಿತ್ಯ ಕೃತಿಗಳನ್ನೆಲ್ಲಾ ಯಾರ ಕೈಗೂ ಸಿಗದಂತೆ ಜೋಪಾನವಾಗಿಡಬೇಕೆನ್ನುತ್ತೀರಾ?
ಪುಸ್ತಕ ಪ್ರಕಟವಾಗಿ ಮೂವತ್ತು ವರುಷಗಳೇ ಕಳೆದಿವೆ. ಆ ಪುಸ್ತಕ ಎಲ್ಲೂ ಸಿಗುತ್ತಿಲ್ಲ. ಮರುಮುದ್ರಣ ಮಾಡುತ್ತೇವೆ ಎಂದು ಹೊರಟಿದ್ದಾರಂತೆ.
ನಾನು ಐದೇ ಐದು ಪುಟಗಳನ್ನು ಮಾತ್ರ ಪ್ರಕಟಿಸಿದ್ದೇನೆ. ಒಳ್ಳೆಯ ಕೃತಿಗಳು ಪುಸ್ತಕ ರೂಪದಲ್ಲೇ ಬರಬೇಕು ಅನ್ನುವ ಬಗ್ಗೆ ನನಗೇನೂ ನಂಬಿಕೆಯಿಲ್ಲ. ಒಳ್ಳೆಯ ಸಾಹಿತ್ಯ ಎಲ್ಲಿ ಹೇಗೆ ಸಿಕ್ಕಿದರೂ ಸಂತೋಷವೇ. ನಾವು ಅಕ್ಷರ ಮೋಹಿತರೇ ಹೊರತು ವ್ಯಾಪಾರಿಗಳಲ್ಲ. ಪುಸ್ತಕ, ಬೆಲೆ, ಉಚಿತ,ಔಚಿತ್ಯಗಳ ಪ್ರಶ್ನೆ ಓದುಗನಿಗೆ ಮುಖ್ಯವಾಗುವುದಿಲ್ಲ. ಚೆನ್ನಾಗಿದೆ ಅನ್ನಿಸಿದ್ದನ್ನು ಗೆಳೆಯನೊಂದಿಗೆ ಹಂಚಿಕೊಳ್ಳುವ ಹಾಗೆ ಹಂಚಿಕೊಂಡಿದ್ದೇನೆ.
ಅಕ್ಷರ ಪ್ರೀತಿಯುಳ್ಳವರೆಲ್ಲ ಇದನ್ನು ಒಪ್ಪುತ್ತಾರೆ ಅಂದುಕೊಂಡಿದ್ದೇನೆ. ಲೇಖಕರಿಗೆ ಸಂಭಾವನೆಯನ್ನೇ ಕೊಡದೇ ಪುಸ್ತಕ ಮುದ್ರಿಸುವ ಪ್ರಕಾಶಕರೂ ನಮ್ಮಲ್ಲಿದ್ದಾರೆ.ಪುಸ್ತಕ ಪ್ರಕಟಿಸುವುದೇ ಮಹಾ ಉಪಕಾರ ಎಂದು ಭಾವಿಸುವವರೂ ಇದ್ದಾರೆ.
ನನ್ನ ಪ್ರಕಾರ ಸಾಹಿತ್ಯ ಜಗತ್ತಿನಲ್ಲಿ ಲೇಖಕ-ಓದುಗ ಇಬ್ಬರೇ ಮುಖ್ಯ.
ಜೋಗಿ
ನನ್ನ ಸಮಸ್ಯೆ ಇದ್ಯಾವುದೂ ಅಲ್ಲ.. ಜೋಗಿ, ಶ್ರೀರಾಮ್ ಇವರೆಲ್ಲ ಅಂತರ್ಜಾಲದಲ್ಲಿ ಬರಿಯುತ್ತಿರುವುದು ಓದುಗನಾಗಿ ನನಗೂ ಖುಷಿಯ ವಿಚಾರ.. ಆದರೆ ಇವರ ಅಂಕಣಗಳನ್ನು ಓದಲು ನಾನು ಬ್ಲಾಗ್ ಸ್ಪಾಟ್ ಗೆ ಭೇಟಿ ಕೊಡುವುದಕ್ಕಿಂತ ಸಂಪದದಂತಹ (ಅಥವಾ ಅಂಥಹದ್ದೇ ಇನ್ಯಾವುದ್ದಾದರೂ) ಕನ್ನಡಿಗರೇ ನಡೆಸಿಕೊಂಡೇ ಬರುತ್ತಿರುವ ತಾಣದಲ್ಲಿ ಈ ಬರವಣಿಗೆಗಳೆಲ್ಲ ಸಿಕ್ಕರೆ ಕನ್ನಡ ಓದುಗನಾಗಿ ಹೆಚ್ಚು ಖುಷಿ ಪಡುತ್ತೇನೆ ಮತ್ತು ಅಂತಹ ತಾಣ ನಡೆಸುತ್ತಿರುವವರಿಗೂ ಬೆಂಬಲ ಸಿಕ್ಕ ಹಾಗಾಗುತ್ತದೆ. ಯಾವುದೇ ಕಿರಿಕಿರಿ ಹುಟ್ಟು ಹಾಕುವ ಉದ್ದೇಶ ನನ್ನದಲ್ಲ..
ಅಷ್ಟಕ್ಕೂ ಜೋಗಿಯವರ ಮನೆ ತುಂಬಾ ಖುಷಿ ಕೊಟ್ಟಿದೆ.. ಅವರ ಬರವಣಿಗೆಯ ಲವಲವಿಕೆ ಕೆಲಸದ ಧಾವಂತದ ಮಧ್ಯೆ ತುಸು ನಿರಾಳತೆ ತಂದುಕೊಡುತ್ತಿದೆ.
ತಪ್ಪಾಗಿ ಮಾತನಾಡಿದ್ದರೆ ಕ್ಷಮೆ ಇರಲಿ..
ಅನಾನಿಮಸರೇ, ನಿಮ್ಮ ತರ್ಕವೇನೋ ಕುತರ್ಕದ ಹಾಗೇ ಇದೆ. ನಾವು ಓದಿದ್ದನ್ನು, ನಮಗೆ ಹಿಡಿಸಿದ್ದನ್ನು ನಮ್ಮ ಬ್ಲಾಗಲ್ಲಿ ಪ್ರಕಟಿಸಲಿಕ್ಕೆ ಏನಾಗಬೇಕು? "ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೇ?"
ಸಂಪದ, ಕನ್ನಡಸಾಹಿತ್ಯ- ಅಲ್ಲೇ ಇಂಥ ಸಾಹಿತ್ಯ ಬರಬೇಕು, ವೈಯಕ್ತಿಕ ತಾಣಗಳಲ್ಲಿ ಬೇಡ ಅನ್ನೋದು ಯಾಕೇಂತ ನನಗೆ ಅರ್ಥ ಆಗ್ತಿಲ್ಲ.
ಒಳ್ಳೆಯ ಸಾಹಿತ್ಯ ಎಲ್ಲಿ ಓದಲು ಸಿಕ್ಕಿದರೆ ಏನಂತೆ? ಲಭ್ಯವಿರೋದು ಮತ್ತು ಓದುಗರು ಅದನ್ನು ಆಸ್ವಾದಿಸೋದು ಮುಖ್ಯ ತಾನೆ?
ಒ೦ದು ಸಣ್ಣ ವಿಷಯಕ್ಕೆ ಯಾಕೆ ಇಷ್ಟು ಚಚೆ೯?
ಸ೦ಪದ.ಕಾ೦ನಿ೦ದ ಒ೦ದು ಲಿ೦ಕ್ ಕೊಟ್ಟರೆ ಆಯ್ತಪ್ಪ!
ಜೋಗಿಮನೆಯೂ ಇರುತ್ತೆ. ಸ೦ಪದದಲ್ಲಿ ಒ೦ದೆಡೆ ಸ೦ಗ್ರಹವೂ ಆಗುತ್ತದೆ.
Dear Jogi sir Please upload daily one article. Jai
ಈ ಪುಟವನ್ನು ಈಗ ತಾನೆ ಪ್ಲಾನೆಟ್ ನಿಂದ ಓದಲು ತೆರೆದು ನೋಡಿದಾಗ ಆಶ್ಚರ್ಯವಾಯಿತು.
ಸುಪ್ತದೀಪ್ತಿ ಮತ್ತು ಉಳಿದವರು ಹೇಳುವುದು ನಿಜ. ಎಲ್ಲಿ ಪ್ರಕಟಿಸಬೇಕೆಂಬುದು ಅವರವರಿಗೆ ಬಿಟ್ಟದ್ದು. ಸಂಪದದಲ್ಲಾಗಲಿ, ಕನ್ನಡ ಸಾಹಿತ್ಯ ಡಾಟ್ ಕಾಮ್ ನಲ್ಲಾಗಲಿ ಹಾಕಿ ಎಂದು ಫೋರ್ಸ್ ಮಾಡೋದು ಚೆಂದವಲ್ಲ.
ಜೋಗಿಮನೆ ಪ್ಲಾನೆಟ್ ಕನ್ನಡದಲ್ಲಿ (http://planet.sampada.net) ಈಗಾಗಲೇ ಅಗ್ರಿಗೇಟ್ ಆಗುತ್ತಿದೆ.
ಸೂ: ಕಾಮೆಂಟು ಅನಾನಿಮಸ್ಸಾಗಿ ಹಾಕಬೇಡ್ರಿ. ಕೊನೆಗೆ ಗೂಬೆ ನನ್ನ ತಲೆ ಮೇಲೆನೆ ಕೂರಿಸಿಬಿಟ್ಟಾರು.
ಪ್ರೀತಿಯ ಜೋಗಿಯವರಿಗೆ,
ಇಂಟರ್ನೆಟ್ ನಲ್ಲಿ ನಿಮ್ಮ ಅಂಕಣ ನೋಡಿ ತುಂಬಾ ಸಂತೋಷವಾಯ್ತು. ಕನ್ನಡಪ್ರಭದಲ್ಲಿ ನಿಮ್ಮ ಸಿನೆಮಾ ವಿಮರ್ಶೆ ಅಂಕಣಕ್ಕಾಗೇ ಭಾನುವಾರ ಕಾಯುತ್ತಿದ್ದೆವು. ಬೆಂಗಳೂರಿನಲ್ಲಿದ್ದಾಗ ನೀವು ಚೆನ್ನಾಗಿದೆ ಅಂಥ ಬರೆದ ಸಿನೆಮಾಗಳನ್ನು ಮಾತ್ರ ನಾವೆಲ್ಲ ನೋಡುತ್ತಿದ್ದೇವು.
ಹಾಯ್ ನಲ್ಲಿ ಜಾನಕಿ ಕಾಲಂ ಯಾರು ಬರೆಯುತ್ತಿದ್ದುದು ಎಂದು ತಿಳಿಯದೇ ಇದ್ದ ಸಮಯದಲ್ಲಿ ನನ್ನ ಸ್ನೇಹಿತರಿಗೆಲ್ಲ " ಇದು ಆ ಜೋಗಿನೇ ಇರಬಹುದು ಅಂತ ಅನ್ನಿಸ್ತಿದೆ " ಎಂದು ತಮಾಷೆಗೆ ಹೇಳಿದ್ದೆ. ಅದು ನಿಜವೆಂದು ತಿಳಿದಾಗ ವಿನಾಕಾರಣ ಬೀಗಿದ್ದೆ.
ನಿಮಗೊಂದು ಸಣ್ಣ ಪ್ರಶ್ನೆ: ಕನ್ನಡಪ್ರಭದಲ್ಲಿ ಬರುತ್ತಿದ್ದ ನಿಮ್ಮ ಸಿನೆಮಾ ವಿಮರ್ಶೆ ಶೈಲಿ, ಜಾನಕಿ ಕಾಲಂ ಶೈಲಿ ಮತ್ತು ಈ ಬ್ಲಾಗ್ ಬರಹಗಳ ಶೈಲಿ ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ಒಬ್ಬ ಬರಹಗಾರನಾಗಿ ನೀವು ಇದನ್ನು ಹೇಗೆ ಸಾಧ್ಯವಾಗಿಸಿದ್ದೀರಿ??
ಕಿರಣ್, ಹೈದರಾಬಾದ್..
Ruchi torsi tindi sigalla antiralri swamy. Sakat mosa!!!
Post a Comment