ಪುರಾಣದಲ್ಲಿ ಬರುವ ಪ್ರತಿಯೊಂದು ಕತೆಯೊಳಗೂ ಇರುವ ಮ್ಯಾಜಿಕ್ ರಿಯಲಿಸಮ್ಮಿನ ಅಂಶಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಅಷ್ಟೇ ಅಲ್ಲ, ಒಂದು ಕತೆಗೂ ಅದಕ್ಕೆ ಸಂಬಂಧವೇ ಇಲ್ಲವೆಂದು ತೋರುವ ಮತ್ತೊಂದು ಕತೆಗೂ ಆಳದಲ್ಲೊಂದು ಸಂಬಂಧವಿರುವುದನ್ನು ಗಮನಿಸಿದರೆ ಮಹಾಭಾರತದಂಥ ಮಹಾಕಾವ್ಯವನ್ನು ಕವಿ ಎಷ್ಟು ಎಚ್ಚರದಿಂದ ಬರೆದಿದ್ದಾನೆ ಅನ್ನುವುದು ಅರ್ಥವಾಗುತ್ತದೆ. ಸಾವಿರಾರು ಪಾತ್ರಗಳು ಬಂದಿದ್ದರೂ ಅಲ್ಲಿ ಪಾತ್ರಗಳ ನಡುವಿನ ಸಂಬಂಧ ಮತ್ತು ವಯಸ್ಸು ಎಲ್ಲೂ ಏರುಪೇರಾಗಿಲ್ಲ. ಸಾಮಾನ್ಯವಾಗಿ ಮಹಾಕಾದಂಬರಿಗಳನ್ನು ಬರೆಯುವ ಹೊತ್ತಿಗೆ, ಅದರಲ್ಲೂ ಪೂರ್ವಜನ್ಮದ ಕತೆಗಳನ್ನು ಹೇಳುತ್ತಿರುವಾಗ ಇಂಥ ಏರುಪೇರುಗಳಿಗೆ ಅವಕಾಶವಿರುತ್ತದೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಕವಿ ಅದನ್ನೆಲ್ಲ ಹೆಣೆಯುತ್ತಾ ಹೋಗಿದ್ದು ಆತನ ಪ್ರತಿಭೆಗೆ ಸಾಕ್ಪಿ.
ಇನ್ನೊಂದು ಕುತೂಹಲಕರ ಸಂಗತಿಯೆಂದರೆ ಇಡೀ ಮಹಾಭಾರತವನ್ನು ಒಬ್ಬರು ಇನ್ನೊಬ್ಬರಿಗೆ ಹೇಳಿದಂತೆ ರಚಿತಗೊಂಡದ್ದು. ಅಲ್ಲಿ ಯಾವುದನ್ನೂ ಕವಿ ತನ್ನದೆಂದು ಹೇಳುವುದಿಲ್ಲ. ಭಾರತ ಮತ್ತು ಭಾಗವತ ಎರಡೂ ಕೂಡ ಯಾರೋ ಯಾರಿಗೋ ಹೇಳಿದ್ದನ್ನು ಕವಿ ಇಲ್ಲಿ ಹೇಳುತ್ತಿದ್ದಾನೆ ಅಷ್ಟೇ. ಹೀಗಾಗಿ ಕವಿಗೆ ಗೊತ್ತಿರುವುದೆಲ್ಲ ಕೇಳಿದ ಕತೆಗಳೇ.
ಉದಾಹರಣೆಗೆ ಪರೀಕ್ಪಿತರಾಜನಿಗೆ ಶುಕಮುನಿ ಹೇಳಿದ ಅಸಂಖ್ಯ ಕತೆಗಳ ಪೈಕಿ ಅಜಾಮಿಳನ ಕತೆಯೂ ಒಂದು. ಅದು ಹೀಗೆ ಆರಂಭವಾಗುತ್ತದೆ;
ಪರೀಕ್ಪಿದ್ರಾಜ; ಗುರುದೇವಾ, ಅರಿತೋ ಅರಿಯದೆಯೋ ಪಾಪ ಮಾಡಿದ ಮೇಲೆ ನರಕಶಿಕ್ಪೆಯನ್ನು ಅನುಭವಿಸಲೇಬೇಕಲ್ಲವೆ? ಅದರಿಂದ ತಪ್ಪಿಸಿಕೊಳ್ಳಲು ಉಪಾಯವೇನು?
ಶುಕಮುನಿ; ರೋಗಕ್ಕೆ ತಕ್ಕ ಚಿಕಿತ್ಸೆ ಮಾಡುವ ಹಾಗೆ, ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.
ಪರೀಕ್ಪಿದ್ರಾಜ; ಆನೆಯು ನೀರಿನಲ್ಲಿ ಮುಳುಗಿ, ಪುನಃ ಮಣ್ಣನ್ನು ಮೈಮೇಲೆ ಎರಚಿಕೊಳ್ಳುವ ಹಾಗೆ ಪ್ರಾಯಶ್ಚಿತ್ತ ಮಾಡಿಕೊಂಡು ಪುನಃ ಪಾಪ ಮಾಡಿದರೆ?
ಶುಕಮುನಿ;ಪ್ರಾಯಶ್ಚಿತ್ತವೆಂಬುದು ರೋಗದ ಉಪಶಮನಕ್ಕಾಗಿ ತೆಗೆದುಕೊಳ್ಳುವ ಔಷಧಿ ಇದ್ದಹಾಗೆ. ಅದರಿಂದ ರೋಗ ಪೂರ್ತಿ ವಾಸಿಯಾಗುವುದೇನೂ ಇಲ್ಲ. ಕರ್ಮದಿಂದ ಕರ್ಮಕ್ಕೆ ಪರಿಹಾರವೆಂದಿಗೂ ಆಗುವುದಿಲ್ಲ. ಪ್ರಾಯಶ್ಚಿತ್ತದಿಂದ ತಾತ್ಕಾಲಿಕವಾದ ಪಾಪ ನೀಗುತ್ತದೆಯೇ ಹೊರತು ಹಿಂದುಮುಂದಿನ ಕರ್ಮ ನಿವಾರಣೆಯಾಗದು.
ಪರೀಕ್ಪಿತ; ಹಾಗಿದ್ದರೆ ಕರ್ಮ ಬುಡಸಮೇತ ನಿರ್ಮೂಲ ಮಾಡುವುದು ಹೇಗೆ?
ಈ ಪ್ರಶ್ನೆಗೆ ಉತ್ತರವಾಗಿ ಶುಕಮುನಿ ಕತೆಯೊಂದನ್ನು ಹೇಳುತ್ತಾರೆ. ಅದು ಅಜಾಮಿಳ ಎಂಬ ಬ್ರಾಹ್ಮಣನ ಕತೆ. ಅದು ಹೀಗೆ;
ಅಜಾಮಿಳ ಕನ್ಯಾಕುಬ್ಜದ ಪ್ರಜೆ. ವೇದಪಾರಂಗತ. ಆಚಾರವಂತ. ಪರಸ್ತ್ರೀಯನ್ನು ಕಣ್ಣೆತ್ತಿಯೂ ನೋಡದವನು, ದಯಾಳು, ಪರೋಪಕಾರಿ.
ಈತ ಒಮ್ಮೆ ಕಾಡಿಗೆ ಹೋದಾಗ ಸುಂದರಿಯಾದ ಹೆಣ್ಣೊಬ್ಬಳನ್ನು ನೋಡುತ್ತಾನೆ. ಅವಳು ಕಂಠಪೂರ್ತಿ ಹೆಂಡ ಕುಡಿದು ಮತ್ತೇರಿದ್ದಾಳೆ. ಅವಳ ಜೊತೆಗೊಬ್ಬ ಹುಡುಗ ಅವಳಷ್ಟೇ ನಿರ್ಲಜ್ಜ ಸ್ಥಿತಿಯಲ್ಲಿ ಕುಡಿದು ಮತ್ತೇರಿದ್ದಾನೆ. ಇಬ್ಬರೂ ವಿನೋದ ವಿಹಾರದಲ್ಲಿ ಮಗ್ನರಾಗಿದ್ದಾರೆ.
ಅದನ್ನು ನೋಡಿದ ದಿನದಿಂದ ಅಜಾಮಿಳನ ಬಾಳಿನ ದಾರಿ ಬೇರೆಯಾಯಿತು. ಆತ ಆ ಹೆಣ್ಣಿನ ಚಿಂತೆಯಲ್ಲಿ ಮುಳುಗಿದ. ಅವಳನ್ನು ಒಲಿಸಿಕೊಳ್ಳುವ ಪ್ರಯತ್ನಕ್ಕೆ ಬಿದ್ದ. ತನ್ನ ಮಡದಿಯನ್ನು ಮರೆತು ಸಂಪಾದನೆಯನ್ನೆಲ್ಲ ಅವಳ ಕಾಲಡಿಗೆ ಸುರಿದ. ಮನೆ, ಆಸ್ತಿ ಎಲ್ಲರೂ ಕರಗಿಹೋಗಿ ನಿರ್ಗತಿಕನಾದ. ಕೊನೆಗೆ ಮೋಸ, ವಂಚನೆ, ಕಳ್ಳತನ ಮಾಡುವ ಮಟ್ಟಕ್ಕಿಳಿದ.
ಕ್ರಮೇಣ ಅದೇ ಅವನ ವೃತ್ತಿಯೂ ಆಗಿಹೋಯಿತು. ಹಣವಿಲ್ಲದ ದಿನ ಪ್ರಾಣಿಗಳನ್ನು ಕೊಂದು ಮಾಂಸ ತಿನ್ನುತ್ತಾ ಆತ ಕಾಲಕಳೆದ. ಹತ್ತು ಮಕ್ಕಳಿದ್ದ ಅವನ ಕೊನೆಯ ಮಗನ ಹೆಸರು ನಾರಾಯಣ. ಎಂಬತ್ತೆಂಟನೆ ವಯಸ್ಸಿಗೆ ಕಾಯಿಲೆ ಬಿದ್ದು ಬಸವಳಿದ ಆತ ಕೊನೆಯ ಮಗನಾದ ನಾರಾಯಣನ ಹೆಸರು ಕರೆಯುತ್ತಾ ಆತ ತನ್ನ ಬಳಿಯಲ್ಲೇ ಇರಬೇಕು ಅಂತ ಬಯಸುತ್ತಿದ್ದ. ಇಂತಿಪ್ಪ ಒಂದು ದಿನ ಅವನ ಮುಂದೆ ಯಮದೂತರು ಬಂದು ನಿಂತಾಗ ಅಜಾಮಿಳ `ನಾರಾಯಣಾ' ಎಂದು ಮಗನನ್ನು ಕೂಗಿ ಕರೆದ.
ತಕ್ಪಣ ಅಲ್ಲಿ ಯಮದೂತರ ಪಕ್ಕದಲ್ಲಿ ದೇವದೂತರೂ ಪ್ರತ್ಯಕ್ಪರಾದರು. ಯಮದೂತರಿಗೂ ದೇವದೂತರಿಗೂ ಜಗಳ ಶುರುವಾಯಿತು. ಅಜಾಮಿಳ ಮಹಾಪಾಪಿಯೆಂದೂ ಆತ ಯಮಲೋಕಕ್ಕೆ ಸಲ್ಲಬೇಕೆಂದೂ ಯಮದೂತರು ವಾದಿಸಿದರು. ಮರಣಕಾಲದಲ್ಲಿ ಅಜಾಮಿಳ ನಾರಾಯಣ ಸ್ಮರಣೆ ಮಾಡಿದ್ದರಿಂದ ಅವನು ಯಮಲೋಕಕ್ಕೆ ಹೋಗಕೂಡದೆಂದು ದೇವದೂತರು ವಾದಕ್ಕಿಳಿದರು. ಅವರಿಬ್ಬರ ನಡುವೆ ಹೀಗೆ ಮಾತಾಯಿತು;
ದೇವದೂತ; ಧರ್ಮಾಧರ್ಮದ ನಿರ್ಣಯ ಹೇಗೆ?
ಯಮದೂತ; ವೇದ ಒಪ್ಪಿದ್ದು ಧರ್ಮ. ಅದಕ್ಕೆ ವಿರೋಧವಾದದ್ದು ಅಧರ್ಮ. ಭಗವಂತ ವೇದಸ್ವರೂಪ. ಆದ್ದರಿಂದ ಅಧರ್ಮ ಮಾಡಿದವನು ಶಿಕ್ಪಾರ್ಹ.
ದೇವದೂತ; ಜಗತ್ತಿನ ಎಲ್ಲರೂ ಮಾಡುವ ಪಾಪಗಳನ್ನು ನೀವು ಕಣ್ಣಿಟ್ಟು ನೋಡುತ್ತೀರೋ?
ಯಮದೂತ; ನಾವು ನೋಡದಿದ್ದರೂ ಸೂರ್ಯ, ಅಗ್ನಿ, ಆಕಾಶ, ದೇವತೆಗಳು, ಗೋವುಗಳು, ಚಂದ್ರ, ಸಂಧ್ಯೆ, ಜಲ, ಭೂಮಿ, ಕಾಲ, ಯಮಧರ್ಮ ಎಂಬ ಹನ್ನೊಂದು ಮಂದಿ ಸದಾ ನೋಡುತ್ತಿರುತ್ತಾರೆ.
ದೇವದೂತ; ಹಾಗಿದ್ದರೆ ಮನುಷ್ಯರು ಒಳ್ಳೆಯ ಕೆಲಸಗಳನ್ನೇ ಮಾಡುತ್ತಾ ದೇವರ ಪ್ರೀತಿಗೆ ಪಾತ್ರರಾಗಿ ಸುಖವಾಗಿ ಇರುವುದಿಲ್ಲ ಯಾಕೆ?
ಯಮದೂತ; ಇರಬಹುದು, ಆದರೆ ಇರುವುದಿಲ್ಲವಲ್ಲ? ಅವರಿಗದು ಸಾಧ್ಯವಲ್ಲ. ಇಂದಿನ ದೇಹಪೋಷಣೆಗೆ ಅಗತ್ಯವಾದ ಕೆಲಸ ಮಾಡುತ್ತಾ ಪಾಪಗಳನ್ನೂ ಮಾಡುತ್ತಾರೆ.
ದೇವದೂತ; ಕೆಲಸ ಮಾಡುವುದು ದೇಹ, ಅದೇ ಬಿದ್ದು ಹೋದ ಮೇಲೆ ಶಿಕ್ಪೆ ಯಾರಿಗೆ?
ಯಮದೂತ; ಪಂಚಭೂತಗಳಿಂದಾದ ಈ ದೇಹದಲ್ಲಿ ಐದು ಕರ್ಮೇಂದ್ರಿಯಗಳಿವೆ. ಇವು ಮನಸ್ಸಿಗೆ ಅಧೀನ. ಸ್ಥೂಲದೇಹ ಬಿದ್ದು ಹೋದರೂ ಲಿಂಗದೇಹ ಅವನಿಗೆ ಅಂಟಿಕೊಂಡಿರುತ್ತದೆ. ಅದು ಈ ಜನ್ಮದ ಪಾಪಗಳನ್ನು ಹೊತ್ತುಕೊಂಡೇ ಮುಂದಿನ ಜನ್ಮಕ್ಕೆ ಹೋಗುತ್ತದೆ.
ದೇವದೂತ; ಅದೆಲ್ಲ ಸರಿ, ಆದರೆ ನೀವೊಂದು ತಪ್ಪು ಮಾಡಿದ್ದೀರಿ. ಅಜಾಮಿಳ ಸಾಯುವ ಕಾಲಕ್ಕೆ ನಾರಾಯಣ ಎಂದು ವಿಷ್ಣುವಿನ ಹೆಸರು ಕರೆದಿದ್ದಾನೆ. ಹೀಗಾಗಿ ಅವನ ಪಾಪಗಳೆಲ್ಲ ನಾಶವಾಗಿವೆ.
ಯಮದೂತ; ಆದರೆ ಅಜಾಮಿಳ ಕರೆದದ್ದು ಹರಿಯನ್ನಲ್ಲ, ತನ್ನ ಮಗನನ್ನು.
ದೇವದೂತ; ಆದರೇನಂತೆ. ತಿಳಿದೋ ತಿಳಿಯದೆಯೋ ದೇವರ ಹೆಸರು ಕೂಗಿದರೆ ಪಾಪ ನಾಶವಾಗುತ್ತದೆ. ತಿಳಿಯದೇ ಔಷಧಿ ಕುಡಿದರೆ ರೋಗ ಗುಣವಾಗುವುದಿಲ್ಲವೇ?
ಅಲ್ಲಿಗೆ ವಾದ ಮುಗಿಯುತ್ತದೆ. ಯಮದೂತರು ವಿಷ್ಣುದೂತರ ಮಾತಿಗೆ ಗೌರವ ಕೊಟ್ಟು ಅಜಾಮಿಳನನ್ನು ಬಿಡುತ್ತಾರೆ. ಅಜಾಮಿಳ ವಿಷ್ಣುಸನ್ನಿಧಿಯನ್ನು ಸೇರುತ್ತಾನೆ.
ತುಂಬ ಸರಳವಾದ ಉಪಾಯವೊಂದನ್ನು ಶುಕಮುನಿ, ಪರೀಕ್ಪಿತನಿಗೆ ಬೋಧಿಸಿದ್ದಾರೆ. ಪಾಪನಾಶಕ್ಕೆ ನಾಮಸ್ಮರಣೆಗಿಂತ ಒಳ್ಳೆಯ ಉಪಾಯ ಬೇರೊಂದಿಲ್ಲ. ಅದಕ್ಕೇ ಹಿಂದಿನ ಕಾಲದ ಮಂದಿ ಮಕ್ಕಳಿಗೆ ಶಂಕರ, ನಾರಾಯಣ ಎಂಬಿತ್ಯಾದಿ ಹೆಸರಿಡುತ್ತಿದ್ದರು.
ತಮಾಷೆಯೆಂದರೆ ಈಗಿನ ಕೆಲವು ಹೆಸರುಗಳು ಕೂಡ ಆ ಅರ್ಥದಲ್ಲಿ ಪಾಪೋಹಂ ಆಗಿವೆ. ಉದಾಹರಣೆಗೆ ಮಿಲನ್, ರತಿ, ಮಿಥುನ್!
Monday, May 21, 2007
Subscribe to:
Post Comments (Atom)
6 comments:
'naaraayaNa aMta maganannu karedaaga, bhagavaMta baMdare- avanigiMta bhraaMta mattobbanilla'
-Vyaasanakere Prabanjanacharya.
Ajamilana kate illi eDavaTTaagide. haage nODalu hOdare gaMgeyalliruva meenu-mosaLegaLigella, kaashiyalliruva kaagegaLigella mOkSha!.
ತಿಳಿಯದೇ ಒಳ್ಳೆಯದು ಮಾಡಿದರೆ ಒಳ್ಳೆಯದು ಆಗುವುದೇನೋ ಸರಿ, ಆದರೆ ತಿಳಿಯದೆ ಕೆಟ್ಟದ್ದು ಮಾಡಿದರೆ ಕೆಟ್ಟದ್ದೇ ಆಗುತ್ತದೆಯಲ್ಲಾ ಅದು ಬೇಸರದ ಸಂಗತಿ. ನನ್ನ ಪ್ರಕಾರ ತಿಳಿಯದೆ ಮಾಡುವ ಯಾವುದಕ್ಕೂ ಬೆಲೆಯಿಲ್ಲ. ಅಜಾಮಿಳ ಮಗನನ್ನು ಕರೆಯಲು ನಾರಾಯಣಾ ಎಂದಾಗ ದೇವದೂತರು ಬರಬಾರದಿತ್ತು. ಹಾಗೆ ಬಂದು ಅವರು ತಮ್ಮ ಘನತೆಯನ್ನು ತಾವೇ ಕೆಡಿಸಿಕೊಂಡರು. ಎಲ್ಲವೂ ತಿಳಿಯುವ ದೇವರಿಗೆ ಅಷ್ಟು ತಿಳಿಯಲಿಲ್ಲವೇ?
- ಸೀತಾಳಭಾವಿ
ರಾಮಕೃಷ್ಣಾಶ್ರಮದ ಸ್ವಾಮೀಜಿಯೊಬ್ಬರ ಪ್ರವಚನ ನೆನಪಾಗುತ್ತಿದೆ: `ಪಾಶ್ಚಾತ್ಯ ದೇಶಗಳಲ್ಲಿ ಪಾಪ ಎಸಗಿದರೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಚರ್ಚಿಗೆ ಭೇಟಿ ಕೊಡುತ್ತಾರೆ. ನಿಗದಿತ ಮೊತ್ತ ನೀಡಿ, ಅರ್ಜಿ ಪಡೆದು ಭರ್ತಿ ಮಾಡಿ, ಯೇಸುವಿನ ಮುಂದಿಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ.'
ಅಂದರೆ ಮತ್ತೆ ಮತ್ತೆ ಪಾಪ ಮಾಡೋದು; ಹಣ ಕೊಟ್ಟು ಪಾರಾಗೋದು. ಬಡಾವಣೆ ನಿವೇಶನಗಳ `ಅಕ್ರಮ- ಸಕ್ರಮ' ಯೋಜನೆ ಥರಾನೇ ಇದು ಕೂಡ ಅಲ್ವಾ?!
ಅಜಾಮಿಳ ತನ್ನ ಮಗನನ್ನು ಕರೆದಾಗ ಭಗವಂತ ಬರುವುದೆಂದರೆ, ಬಸ್ನಿಲ್ದಾಣದಲ್ಲಿ ಸ್ನೇಹಿತನ ಗಮನ ಸೆಳೆಯಲು ಚಪ್ಪಾಳೆ ಹೊಡೆದಾಗ ಇನ್ನಾರೋ ನೋಡಿದಂತೆ...!
- ಆತೀಪಿ
It is very difficult to stop myself from writing after sitalabhavi's response. What I can all say is, dont go by this article. Read the proper story properly.
ಮಕ್ಕಳಿಗೆ ಹೆಸರಿಡುವ ಬಗ್ಗೆ ಕೊನೆಗೊಳಿಸಿರುವುದು ಓದಿ ಸಂತಸವಾಯ್ತು. ಅಂದ್ ಹಾಗೆ ನನ್ನ ಮಗನ ಹೆಸರು 'ಓಂ' !!!
ಅಜಮಿಳನ ಕತೆಗಾಗಿ ಧನ್ಯವಾದ.
ಪುರಂದರ ದಾಸರು ನಾರಾಯಣ ನಾಮದ ಮಹಿಮೆಯನ್ನು ಹೇಳುವಾಗ ಅಜಮಿಳನನ್ನು ನಾಮ ವೃಕ್ಷದ ಫಲ ಅನುಭವಿಸಿದವನು ಎಂದು ಹೇಳಿದ್ದಾರೆ.
Post a Comment