Tuesday, October 30, 2007

ಆತ್ಮಕ್ಕೆ ಸಾವಿಲ್ಲ; ಆತ್ಮೀಯರಿಗೆ ಉಂಟಲ್ಲ!

ನಮ್ಮಲ್ಲಿ ಎರಡು ಥಿಯರಿಗಳಿವೆ. ಮನುಷ್ಯ ಸ್ಥಿತಪ್ರಜ್ಞನಾಗಿರಬೇಕು. ಯಾವುದಕ್ಕೂ ವಿಚಲಿತನಾಗಬಾರದು. ಕಷ್ಟ ಬಂದಾಗ ಕುಗ್ಗಬಾರದು;ಸುಖಬಂದಾಗ ಹಿಗ್ಗಬಾರದು. ಅವಮಾನವನ್ನೂ ಸನ್ಮಾನವನ್ನೂ ಒಂದೇ ಎಂಬಂತೆ ಸ್ವೀಕರಿಸಬೇಕು ಎನ್ನುವವರು ಒಂದು ಪಂಥಕ್ಕೆ ಸೇರಿದವರು.
ಅದೇ ಇನ್ನೊಂದು ಪಂಗಡಕ್ಕೆ ಸೇರಿದವರದ್ದು ಭಾವನಾತ್ಮಕ ಸಿದ್ಧಾಂತ. ಮನುಷ್ಯ ಭಾವನೆಗಳಿಗೆ ಬಂದಿ. ಸ್ಥಿತಪ್ರಜ್ಞನಾಗಿರುವುದು ಎಂದರೆ ಕಲ್ಲಾಗಿರುವುದು. ಕಲ್ಲಾಗಿರುವುದು ಒಳ್ಳೆಯ ಗುಣವೇನಲ್ಲ. ಅವನ ಹೃದಯ ಕಲ್ಲು ಎಂದು ನಾವು ಬೈಯುವುದಿಲ್ಲವೇ? ನೋಯಿಸಿದಾಗ ನೊಂದು, ಬೇಯಿಸಿದಾಗ ಬೆಂದು ಬದುಕುವುದೇ ಜೀವನ. ಸಾರ್ಥಕತೆ ಇರುವುದೇ ಅದರಲ್ಲಿ ಎಂದು ವಾದಿಸುವವರೂ ಸಿಗುತ್ತಾರೆ.
ಡಿ. ವಿ. ಜಿ. ಬರೆದದ್ದನ್ನೇ ಓದಿ;
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು...
ಈ ಮಾತುಗಳಿಗೂ ಗೀತೆಯ ಸ್ಥಿತಪ್ರಜ್ಞತೆಗೂ ಸಂಬಂಧವಿಲ್ಲ. ನೋವು ಮತ್ತು ನಲಿವು ಯಾರಿಗೆ ಒಂದೇ ಆಗಿರುತ್ತದೆಯೋ... ಎಂದು ಉಪದೇಶಿಸುತ್ತದೆ ಗೀತೆ. ಡಿವಿಜಿಯಾದರೋ ಒಂದೊಂದು ಭಾವಕ್ಕೆ ಒಂದೊಂದು ಪ್ರತಿಕ್ರಿಯೆ ಇರಲಿ ಅನ್ನುತ್ತಾರೆ. ಆದರೆ ಎಲ್ಲರೊಳಗೊಂದಾಗುವುದು ತುಂಬ ಪ್ರಜ್ಞಾಪೂರ್ವಕವಾಗಿ ಆದಾಗ ನಾವು ಸ್ಥಿತಪ್ರಜ್ಞರೇ ಆಗಿರುತ್ತೇವಷ್ಟೇ. ಅಂಥ ಸ್ಥಿತಪ್ರಜ್ಞತೆ ಕೇವಲ ನಾಟಕದಲ್ಲಷ್ಟೇ ಸಾಧ್ಯ. ರಂಗದ ಮೇಲೆ ನಿಂತು ನಗುವವನಿಗೆ ತಾನು ನಗುತ್ತಿರುವುದು ಸುಳ್ಳೆಂದು ಗೊತ್ತಿರುತ್ತದೆ. ಅಳುವವನಿಗೂ ತಾನು ಅಳುತ್ತಿರುವುದು ಸುಳ್ಳೆಂದು ಗೊತ್ತಿರುತ್ತದೆ. ಆದರೆ ಆ ಕ್ಪಣಕ್ಕೆ, ಆ ಪರಿಸರಕ್ಕೆ ಆ ಅಳು ಮತ್ತು ನಗು ಸುಳ್ಳಲ್ಲ. ಅಂಥ ಕ್ಪಣಿಕವಾದ ನೋವು ನಲಿವುಗಳನ್ನು ಜೀವನದಲ್ಲೂ ಮನುಷ್ಯ ಪ್ರಕಟಿಸಬಹುದೇ?
ನಾವು ಮಾಡುತ್ತಿರುವುದೂ ಅದನ್ನೇ ಅಲ್ಲವೇ ಎಂದು ಕೇಳುವವರಿದ್ದಾರೆ. ಯಾರೋ ಸತ್ತಾಗ ಅವರ ಮನೆ ಮುಂದೆ ನಿಂತು `ಹೋ' ಎಂದು ಅಳುತ್ತೇವೆ. ಇನ್ನಾರಿಗೋ ಪುತ್ರೋತ್ಸವವಾದಾಗ ಅವರ ಮನೆಗೆ ಹೋಗಿ `ಓಹೋ' ಎಂದು ನಗುತ್ತೇವೆ. ಆದರೆ ಅವೆರಡೂ ನಮಗೆ ಸಂತೋಷವನ್ನಾಗಲೀ ದುಃಖವನ್ನಾಗಲೀ ನೀಡಿರುತ್ತವೆಯೇ ಎಂದು ಯೋಚಿಸಿದರೆ ಉತ್ತರಿಸುವುದು ಕಷ್ಟವಾಗುತ್ತದೆ.
ಈ ಹೊತ್ತಿಗೆ ಷೇಕಪಿಯ್ ಹೇಳಿದ್ದನ್ನು ನೆನೆಯಬೇಕು;
All the world is a stage.
And all the men and women merely players:
They have their exits and entrances;
And one man in his time plays many parts,
His acts being seven ages.
ಮನುಷ್ಯ ಅಂಥ ಸ್ಥಿತಪ್ರಜ್ಞ ಹೌದಾದರೆ ಇಡೀ ಜಗತ್ತೇ ಒಂದು ನಾಟಕರಂಗ. ನಾವೆಲ್ಲ ಪಾತ್ರಧಾರಿಗಳು. ಪ್ರತಿಯೊಬ್ಬರಿಗೂ ಒಂದು ಪ್ರವೇಶ ಮತ್ತು ನಿರ್ಗಮನ ಇರುತ್ತದೆ. ಏಕಕಾಲಕ್ಕೆ ಒಬ್ಬ ವ್ಯಕ್ತಿ ಅನೇಕ ಪಾತ್ರಗಳನ್ನು ಮಾಡುತ್ತಿರುತ್ತಾನೆ...
ಹಾಗಿದ್ದರೆ ನಮಗೆ `ಅನ್ನಿಸುವುದಕ್ಕೆ' ಅರ್ಥವೇ ಇಲ್ಲವೇ?
ವಿಜ್ಞಾನ ಹೇಳುತ್ತದೆ. ಮನುಷ್ಯನ ದೇಹದಲ್ಲಿ ನಾಲ್ಕನೇ ಮೂರು ಭಾಗ ನೀರು. ಆ ನೀರು ಕುದಿಯುತ್ತದೆ. ಕಣ್ಣೀರಾಗಿ ಹರಿಯುತ್ತದೆ. ತಳಮಳಗೊಳಿಸುತ್ತದೆ. ಹೀಗಾಗಿ ನಾವು ಭಾವಬಿಂದುವಿಗೆ ಅಧೀನರು;ವೈಜ್ಞಾನಿಕವಾಗಿ ಕೂಡ.
ಆದರೆ ಶ್ರೀಕೃಷ್ಣ ಇದೇ ಸಂದರ್ಭದಲ್ಲಿ, ಆಮೇಲಿನ ದಿನಗಳಲ್ಲಿ, ಅತ್ಯಂತ ಪ್ರಸಿದ್ಧವಾದ ಶ್ಲೋಕವನ್ನು ಉಸುರುತ್ತಾನೆ;
ವಾಸಾಂಸಿ ಜೀರ್ಣಾನಿ ಯಥಾವಿಹಾಯ
ನವಾನಿ ಗೃಹ್ಣಾತಿ ನರೋಪರಾಣಿ

ಹಳೆಯ ಹರಿದುಹೋದ ಬಟ್ಟೆಗಳನ್ನು ತೆಗೆದೆಸೆದು ಹೊಸ ಬಟ್ಟೆಗಳನ್ನು ತೊಡುವಂತೆ ಅನುಪಯುಕ್ತವೂ ಹಳೆಯದೂ ಆದ ಶರೀರವನ್ನು ತ್ಯಜಿಸಿ....
ಹಾಗಿದ್ದರೆ ಆತ್ಮಕ್ಕೆ ಯಾವ ಪಾಪವೂ ಅಂಟುವುದಿಲ್ಲವೇ? ಆ ಪ್ರಶ್ನೆಗೂ ಗೀತೆಯಲ್ಲಿ ಉತ್ತರವಿದೆ. ಆತ್ಮವನ್ನು ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕ ಶಸ್ತ್ರಗಳು ಕತ್ತರಿಸಲಾರವು, ಅಗ್ನಿಯು ಸುಡಲಾರದು. ನೀರು ತೋಯಿಸಲಾರದು ಮತ್ತು ಗಾಳಿ ಒಣಗಿಸಲಾರದು.
ಇದಕ್ಕಿಂತ ತಮಾಷೆ ಮತ್ತೊಂದಿಲ್ಲ. ಆತ್ಮವನ್ನು ಪಂಚಭೂತಗಳು ಮುಟ್ಟುವುದಿಲ್ಲ, ತಟ್ಟುವುದಿಲ್ಲ ನಿಜ. ಆದರೆ ಪಂಚಮಹಾಪಾತಕಗಳು ಮುಟ್ಟಲಾರವೇ?
ಆತ್ಮನು ಕಣ್ಣಿಗೆ ಕಾಣುವುದಿಲ್ಲ; ಅದನ್ನು ಗ್ರಹಿಸುವುದಕ್ಕೂ ಸಾಧ್ಯವಿಲ್ಲ. ಆತ್ಮ ವಿಕಾರ ಹೊಂದುವುದಿಲ್ಲ; ಹೀಗಾಗಿ ನೀನು ದೇಹಕ್ಕಾಗಿ ದುಃಖಿಸಬಾರದು ಎನ್ನುತ್ತಲೇ ಭಗವದ್ಗೀತೆ ಮತ್ತೊಂದು ತುಂಬ ಸಹಜವೆಂದು ಕಾಣುವ ವಾದವನ್ನು ಮುಂದಿಡುತ್ತದೆ.
ಜಾತಸ್ಯ ಹಿ ಧ್ರುವೋ ಮೃತ್ಯುಧ್ರುವಂ ಜನ್ಮ ಮೃತಸ್ಯ ಚ
ಹುಟ್ಟಿದವರಿಗೆ ಸಾವು ತಪ್ಪದು; ಸತ್ತವರಿಗೆ ಮರುಹುಟ್ಟು ತಪ್ಪದು. ಹೀಗಾಗಿ ನೀನು ದುಃಖಿಸುವುದರಲ್ಲಿ ಅರ್ಥವಿಲ್ಲ. ಆದರೆ ಅರ್ಜುನನು ದುಃಖಿಸುತ್ತಿರುವುದು ತನ್ನ ಸಾವಿಗಾಗಿ ಅಲ್ಲ. ತನ್ನವರ ಸಾವಿಗಾಗಿ. ಅದೂ ತಪ್ಪು ಅನ್ನುತ್ತಾನೆ ಕೃಷ್ಣ.
ಹಾಗಿದ್ದರೆ ಆತ್ಮರೂಪಿಯಾಗಿ ಬದುಕಿರುವವರನ್ನು ನಮ್ಮವರು ಅನ್ನಲಾಗುತ್ತದೆಯೇ? ಆತ್ಮಕ್ಕೆ ಸಾವಿಲ್ಲ ಎಂಬ ಕಾರಣಕ್ಕೆ ನಮ್ಮ ಆತ್ಮೀಯರು ಸತ್ತಾಗ ಅಳದೇ ಕೂರುವುದು ಸರಿಯೇ?
ಇಂಥ ಪ್ರಶ್ನೆ ಮೂಡಿದಾಗ ಗೀತೆ ಮತ್ತೊಂದು ಅರ್ಥಪೂರ್ಣ ಎನ್ನಿಸುವ ಮಾತನ್ನು ಹೇಳುತ್ತದೆ;
ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ
ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ
ಸೃಷ್ಟಿಯಾದ ಎಲ್ಲಾ ಜೀವಿಗಳೂ ಮೊದಲು ಕಾಣಿಸುವುದಿಲ್ಲ, ಮಧ್ಯೆ ಕೆಲಕಾಲ ಕಾಣಿಸುತ್ತವೆ ಮತ್ತು ನಾಶವಾದ ಮೇಲೆ ಕಾಣಿಸುವುದಿಲ್ಲ. ಹೀಗಿರುವಾಗ ಶೋಕಕ್ಕೆ ಕಾರಣವೆಲ್ಲಿದೆ?
ಈ ಪ್ರಶ್ನೆಗೆ ಉತ್ತರವೆಲ್ಲಿದೆ!

Friday, October 26, 2007

ಬೆಂಕಿ-ಬೆರಳಲ್ಲಿ ಕೊಟ್ಟ ಕವಿತೆಗೆ ಸಂಧ್ಯಾ ವಂದನೆ!


ಗುಡ್ಡ ಕಡಿದು ರಸ್ತೆ ಮಾಡಿದ ರಸ್ತೆಯಂತಿರುವ ಈ ಮಾತುಗಳ ಮೂಲಕ ಹಾದು ಹೋಗುವುದೆಂದರೆ ನನಗೆ ಅಂತಹ ಉತ್ಸಾಹವೇನೂ ಇಲ್ಲ.
ದಾರಿಯಿಲ್ಲದ ದಟ್ಟ ಕಾಡಿನಲ್ಲಿ ಹಕ್ಕಿ ಕೂಗಿನಂತಿರುವ ಕವಿತೆಯ ಹಾದಿ ನನಗೆ ಯಾವತ್ತೂ ತುಂಬ ಕುತೂಹಲಕರ.
***
ಸ್ನಾನದಲ್ಲಿ ಕದ್ದು ಕಿವಿಯೊಳಗೆ ಹೊಕ್ಕಿದ
ನೀರಿನ ಬಿಂದು ಜೀವಗೊಂಡು.
ದುಂಬಿಗಾನದ ಹಾಗೆ
ಗುಂಗುಂ ಎಂಬ ನಾದ
ಈಗ ನನಗೆ ಬೇರೇನೂ ಕೇಳಿಸುವುದಿಲ್ಲ
ಕಿವುಡಿ ಎನ್ನುತ್ತಿದ್ದಾರೆ ಎಲ್ಲರೂ
ನಾದದ ಕಡಲಿನಲ್ಲಿ ತೇಲುವ
ನಾನು ಒಂದು ಹಡಗು.
***
ಇದು ಪುತ್ತೂರಿನ ಸಂಧ್ಯಾದೇವಿ ಬರೆದ ಪದ್ಯ ಮತ್ತು ಗದ್ಯ. ಹಾಗೂ ಇರಬಹುದು ಗದ್ಯ ಮತ್ತು ಪದ್ಯ. ಮೇಲಿನ ಕವಿತೆಯಲ್ಲಿ `ಕಿವುಡಿ ಎನ್ನುತ್ತಿದ್ದಾರೆ ಎಲ್ಲರೂ' ಎಂಬ ಸಾಲು ಇಲ್ಲದೇ ಹೋಗಿದ್ದರೆ ಎಂದು ಆಸೆಪಡುವ ಹೊತ್ತಿಗೇ ಮತ್ತೊಂದು ಕಪಟವಿಲ್ಲದ ಕವಿತೆ ಎದುರಾಗುತ್ತದೆ;
ಅವನಿಂದಲೇ ಕಲಿತ ಮಾತನ್ನು
ಅವನಿಗೊಪ್ಪಿಸುವಾಗ
ಹೊಚ್ಚ ಹೊಸತೆಂಬಂತೆ
ಆಶ್ಚರ್ಯದಿಂದ ಹಾಗೂ ಆನಂದದಿಂದ
ಆಲಿಸುವವನು ದೇವರೊಬ್ಬನೇ.
ಇನ್ನೊಬ್ಬನು ಇದ್ದರೆ
ದೇವರ ಹಾಗಿರುವನು.
ಆಶ್ಚರ್ಯ ಮತ್ತು ಆನಂದದಿಂದ ದೇವರ ಹಾಗೆ ಆಲಿಸಬಲ್ಲ ಸಾಲುಗಳು ಇಲ್ಲಿವೆ. ಆದರೆ ಸಂಧ್ಯಾದೇವಿ ಒಪ್ಪಿಸುತ್ತಿರುವುದು ಯಾರಿಂದಲೂ ಕಲಿತ ಸಾಲುಗಳನ್ನು ಅಲ್ಲ. ಕವಿತೆಯನ್ನು ಓದಿ ಮರೆತಂಥ ಸ್ಥಿತಿಯಲ್ಲಿ ಈ ಕವಿತೆಗಳನ್ನು ಸಂಧ್ಯಾ ಬರೆದಿದ್ದಾರೇನೋ ಅನ್ನಿಸುವಂತೆ, ಬೇರೆ ಕವಿತೆಯನ್ನು ಓದಲೇ ಇಲ್ಲವೇನೋ ಎಂಬಂತೆ, ಇವು ಕವಿತೆಗಳೇ ಅಲ್ಲವೆಂಬಂತೆ, ಇವನ್ನು ಬರೆಯದೇ ಹೋಗಿದ್ದರೆ ಸಂಧ್ಯಾದೇವಿ ಇರುತ್ತಿರಲೇ ಇಲ್ಲವೇನೋ ಎಂಬಂತೆ- ಈ ಸಾಲುಗಳು ನಮ್ಮೊಳಗೆ ಪ್ರವೇಶಿಸುತ್ತಾ ಹೋಗುತ್ತವೆ.
ಯಾರಾದರೂ
ನಮ್ಮ ಸಂಕಟಕ್ಕೊಂದು ಸಮಾನ ಪದ
ಕೊಡದಿದ್ದರೆ ಬಹುಶಃ ಅದು
ಹಾಗೇ ಉಳಿದುಬಿಡುತ್ತದೆ
ಕೊನೆಯವರೆಗೆ.
ಕೊಡುವಾಗ ಒಬ್ಬ ತೆಗೆದುಕೊಳ್ಳುವವನಿರಬೇಕು
ಕೈಯೊಡ್ಡಿ
ಬೇಡುವಾಗ ಒಬ್ಬ ಕೊಡುವವನಿರಬೇಕು
ಕೈ ನೀಡಿ.
*****
ಕ್ಪಮಿಸಿ. ಇವು ಕವಿತೆಗಳಲ್ಲ. ನಾವೆಲ್ಲೋ ಓದಿದ ಕವಿತೆಗಳಂತೂ ಅಲ್ಲವೇ ಅಲ್ಲ. ಕವಿತೆಗೆ ಇರಬೇಕಾದ ಗುಣಲಕ್ಪಣಗಳು ಈ ಸಾಲುಗಳಿಗೆ ಇಲ್ಲ. ಇವು ಏನನ್ನೂ ಹೇಳುವುದಿಲ್ಲ; ಏನನ್ನೂ ಹೇಳದೇ ಇರುವುದೇ ಕವಿತೆ. ಏನನ್ನೂ ಹೇಳುವುದಿಲ್ಲ ಅನ್ನುವುದನ್ನಾದರೂ ಅವು ಹೇಳಲೇಬೇಕಲ್ಲ. ಸಂಧ್ಯಾದೇವಿಯ ಸಾಲುಗಳು ಅದನ್ನೂ ಹೇಳುವುದಿಲ್ಲ. ಅವು ಕಾಡಿನಲ್ಲಿ ಅರಳಿದ ಹೂವಿನ ಹಾಗೆ ಸುಮ್ಮನೆ ಇವೆ. ಅವನ್ನು ನೋಡುತ್ತಿದ್ದ ಹಾಗೆ ನಿಮ್ಮೊಳಗೆ ಏನಾದರೂ ಹೊಳೆದರೆ ಅದು ನಿಮ್ಮ ಭಾಗ್ಯ.
ನೀನು ಲೇಖನಿ ಕೊಟ್ಟೆ
ನನ್ನ ಕೈಯಲ್ಲಿ
ನಾನು ನನ್ನ ಭಾಗ್ಯವನ್ನು ಬರೆದುಕೊಂಡೆ.
ಸೂರ್ಯ ಚಂದ್ರರು ನಕ್ಕುಬಿಟ್ಟವು.
ಬದುಕು ಸಹಕರಿಸಿತು
ಒಂದು ಖಾಲಿ ಹಾಳೆಯೆಂಬಂತೆ.
ಎಳೆದ ರೇಖೆಗಳೆಲ್ಲ ನಾಳೆ ನಾಳೆ ಎಂದವು
ನೀನದನ್ನು ಎಳೆದು ಇವತ್ತೇ ತಂದೆ.
****
ಮಾತು ಚಿಟ್ಟೆ ಬೆಂಕಿ-ಬೆರಳು ಮುರಿದ ಮುಳ್ಳಿನಂತೆ ಜ್ಞಾನ- ಎಂಬ ಹೆಸರಿನ ಕವಿತಾಗುಚ್ಛದ ಆರಂಭದಲ್ಲೇ ಸಂಧ್ಯಾ `ಚಿಕ್ಕ ಬೆಂಕಿಚೂರನ್ನು ನನ್ನ ಕೈಗೆ ಕೊಟ್ಟ ಜ್ಞಾನಾಗ್ನಿ'ಗೆ ಈ ಸಂಕಲನವನ್ನು ಅರ್ಪಿಸಿದ್ದಾರೆ. ಕವಿತೆಗಳಲ್ಲಿ ಬೆಳಕಿದೆ, ಬೆರಗೂ ಇದೆ. ಇದುವರೆಗೆ ನಾವು ಓದಿದ ಕವಿತೆಗಳನ್ನು ಮೀರಿದ ಸರಳತೆ ಇದೆ. ಎಷ್ಟೋ ಕವಿತೆಗಳನ್ನು ಓದಿದಾಗ ಏನೂ ಓದಿದ್ದೇವೆ ಅನ್ನಿಸುವುದಿಲ್ಲ. ಎಷ್ಟೋ ಕವಿತೆಗಳು ನೆನಪಲ್ಲಿ ಉಳಿಯುವುದಿಲ್ಲ. ನಮ್ಮನ್ನು ಯಾವುದು ಬದಲಿಸುವುದಿಲ್ಲವೋ ಅದು ಪದ್ಯ, ಬದಲಿಸಲು ಹೊರಟರೆ ಅದು ಪ್ರಾಪಗಂಡ, ಬದಲಾಯಿಸಿಯೇ ತೀರುತ್ತೇನೆ ಅಂತ ಹಠತೊಟ್ಟರೆ ಅದು ಮ್ಯಾನಿಫೆಸ್ಟೊ. ಸುಮ್ಮನಿರುವಂತೆ ಹೇಳಿದರೆ ಅದು ಆದೇಶ.
ಸಂಕೇತಗಳು ವಿದ್ಯುತ್ತಿನಂತೆ
ಮುಟ್ಟಿಸಿಕೊಂಡವರಿಗೆ ಮಾತ್ರವೇ ಮನದಟ್ಟಾಗುತ್ತದೆ
ಆ ಸಮಯ ಇನ್ನೂ
ನನ್ನೊಳಗಿನಿಂದ ಇಳಿದು ಹೋಗಲಿಲ್ಲವೆಂಬಂತೆ
ಅಲುಗಾಡುತ್ತಿದೆ ಸಣ್ಣ ಆಯಾಸ.
***
ಮುಟ್ಟಿದರೆ ನಲುಗುವ, ಜೋರಾಗಿ ಉಚ್ಚರಿಸಿದರೆ ಮುದುಡಿಕೊಳ್ಳುವ, ಮುಟ್ಟಿದರೆ ಮುನಿಯುವಂಥ ಸಾಲುಗಳನ್ನು ಸಂಧ್ಯಾ ಬರೆದಿದ್ದಾರೆ. ಸುಮಾರು ನೂರೆಂಬತ್ತು ಪುಟಗಳ ತುಂಬ ಚೆಲ್ಲಿಕೊಂಡಿರುವ ಇನ್ನೂರೂ ಚಿಲ್ಲರೆ ಕವಿತೆಗಳಿಗೆ ಒಟ್ಟಾರೆಯಾಗಿ ಒಂದು ಕೇಂದ್ರವಿಲ್ಲ, ವಲಯವಿದೆ. ಆ ವಲಯ ಎಲ್ಲವನ್ನೂ ಒಳಗೊಳ್ಳುತ್ತದೆ. ಒಂದು ಕವಿತೆಯ ನೆರಳು ಮತ್ತೊಂದರಲ್ಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯಾವುದರ ಮೇಲೂ ಚಿಂತನೆಗಳ ಭಾರವಿಲ್ಲ.ಕೆಲವೊಮ್ಮೆ ಕವಿತೆಯೇ ಒಂದು ರೂಪಕವಾಗಿದೆ ಅನ್ನುವುದನ್ನು ಬಿಟ್ಟರೆ ಚಿಟ್ಟೆಯಷ್ಟೇ ಹಗುರವಾದ ಕವಿತೆಗಳಿವು.
ಹಾಯ್ಕುಗಳನ್ನು ವಿಸ್ತರಿಸಿದಂತೆ, ಕೈಗೆ ಸಿಕ್ಕಿದ ವರ್ಣಗಳನ್ನೆತ್ತಿಕೊಂಡು ರಂಗೋಲಿ ಹಾಕಿದಂತೆ, ಬ್ರ್ನ ಬಿಡುಬೀಸು ಗೀಚಿನಂತೆ, ಗಾಳಿಗೆ ಬಾಳೆಯ ವನ ತೊನೆದಂತೆ ನಿರರ್ಥಕ ಸುಖ ಕೊಡುವ ಪದ್ಯಗಳ ಜೊತೆಗೇ, ಒಡಪಿನಂಥ ರಚನೆಗಳೂ ಇಲ್ಲಿವೆ. ಇದ್ದಕ್ಕಿದ್ದಂತೆ ಚೆರ್ರಿ ಮರದ ಹೆಸರು, `ನೋ' ನೆನಪು ಎದುರಾಗುತ್ತದೆ. ಕವಿತೆಗಳು ನವಿಲುಗಳಂತೆ ಗರಿಬಿಚ್ಚಿ ಕುಣಿಯಬೇಕು ಅನ್ನುತ್ತವೆ. ಕೊಂಚ ನೀತಿಬೋಧೆ ಮಾಡುತ್ತವೆ. ಉತ್ಕಟವಾಗುವ ಹೊತ್ತಲ್ಲೇ ನಿರಾಳವೂ ಆಗುತ್ತವೆ. ಪ್ರವಾದಿಯಂತೆ ಬೋಧಿಸುತ್ತವೆ:
ಈ ಲೋಕದಲ್ಲಿ ಸುಖ, ಸೌಭಾಗ್ಯ, ಸಂಪತ್ತು
ಮತ್ತು ಸ್ತುತಿಗಳು ಯಾರಿಗೆ ನಿಜಕ್ಕೂ
ಸ್ವಲ್ಪವೂ ಬೇಕಾಗಿಲ್ಲವೋ ಅವರಿಗೇ
ಎಲ್ಲವೂ ಸಲ್ಲುತ್ತವೆ.
***
ಸಂಧ್ಯಾದೇವಿ ಇವನ್ನೆಲ್ಲ ಪುತ್ತೂರಿನಂಥ ಪುಟ್ಟೂರಿನಲ್ಲಿ ಕೂತು ಬರೆದಿದ್ದಾರೆ. ತಮ್ಮ ಸಂತೋಷಕ್ಕೋ ದುಃಖಕ್ಕೋ ಏಕಾಂತಕ್ಕೋ ಸಾಂಗತ್ಯಕ್ಕೋ ಬರೆದುಕೊಂಡಿದ್ದಾರೆ. ಇದನ್ನು ಅವರು ಯಾಕಾದರೂ ಬರೆದರೋ ಅನ್ನಿಸುವಷ್ಟು ನೋವು, ಇನ್ನಷ್ಟು ಬರೆಯಲಿ ಅನ್ನುವ ಸಂತೋಷ- ಎರಡನ್ನೂ ಈ ಕವಿತೆಗಳು ಕೊಡುತ್ತವೆ. ಮತ್ತೆ ಮತ್ತೆ ಓದಿದಾಗ ಇವುಗಳು ಮತ್ತೊಂದು ಥರ ಪರಿಭಾವಿಸಿಕೊಳ್ಳುತ್ತವೆಯೋ ಅನ್ನುವುದನ್ನು ಕಾಲಕ್ರಮೇಣ ತಿಳಿದುಕೊಳ್ಳಬೇಕಿದೆ.
ಒಂದು ನೋವಿನ ಜೊತೆ ಮಲಗಿದೆ.
ಎಲ್ಲರಂತೆ. ನೋವೇ ಹುಟ್ಟಿತು
ಸಂಧ್ಯಾದೇವಿಗೆ ಕವಿತೆಯ ಕೂಗಿನಂತಿರುವ ಅಸ್ಪಷ್ಟ ಹಾದಿಯೇ ಇಷ್ಟ.

Wednesday, October 24, 2007

ಭವದ ಕೇಡಿಗೆ ಗೆಳೆಯರ ಪ್ರೀತಿಶಲಾಕೆ

ಛಂದ ಮಾಮ
ವಸುಧೇಂದ್ರ ಪ್ರಕಟಿಸಿರುವ
ಎಸ್ ಸುರೇಂದ್ರನಾಥ್
ಕಾದಂಬರಿ
ಎನ್ನ ಭವದ ಕೇಡು
ಅಕ್ಟೋಬರ್ 28ರ ಭಾನುವಾರ
ಬಿಡುಗಡೆಯಾಗುತ್ತಿದೆ.
ಇಂಡಿಯನ್ ಇನ್-ಸ್ಟಿಟ್ಯೂಟ್ ಆಫ್ ವರ್ಲ್ಡ್
ಕಲ್ಚರ್ ಸಭಾಂಗಣದಲ್ಲಿ
ಬೆಳಗ್ಗೆ ಹತ್ತು ಗಂಟೆಗೆ
ಸಮಾರಂಭ.
ರವಿ ಬೆಳಗೆರೆ
ಟಿಎನ್ ಸೀತಾರಾಮ್
ವಿವೇಕ ಶಾನಭಾಗ
ಹೀಗೆ
ಗೆಳೆಯರೆಲ್ಲ ಜೊತೆಗಿರುತ್ತಾರೆ.
ಎನ್ನ ಭವದ ಕೇಡು
ಸೂರಿಯವರ ಪ್ರಥಮ ಕಾದಂಬರಿ.
ನಾತಲೀಲೆ ಕಥಾಸಂಕಲನದಿಂದ
ಅಕ್ಷರ ಪ್ರಿಯರ ಅಚ್ಚುಮೆಚ್ಚಿನ ಸಂಗಾತಿಯಾದ
ಸೂರಿ ಕಾದಂಬರಿಯ ಪುಟಪುಟವೂ
ನವ್ಯ.
ಸೂರಿ ಕಾದಂಬರಿಯ ಒಂದು
ರಸವತ್ತಾದ ಅಧ್ಯಾಯ
ಇಲ್ಲಿದೆ.
ಕಾದಂಬರಿಯನ್ನು ಓದುವಂತೆ ಪ್ರೇರೇಪಿಸುವುದಕ್ಕೆ ಈ ಪುಟಗಳೇ ಸಾಕಲ್ಲ.

Tuesday, October 23, 2007

ಬಿಡುಗಡೆಯ ಮೋಡಿ


ಮಿತ್ರ ಜಿ ಎನ್ ಮೋಹನ್ ಅವರ ಕವನ ಸಂಕಲನ ಮಾರುಕಟ್ಟೆಯಲ್ಲಿದೆ. ಅದಕ್ಕೊಂದು ಬಿಡುಗಡೆ, ಸಮಾರಂಭ ಅಂತೇನೂ ಇಟ್ಟುಕೊಳ್ಳದೇ ಸರಳವಾಗಿ ಅದನ್ನು ಓದುಗರ ತೆಕ್ಕೆಗೆ ಒಪ್ಪಿಸಿದ್ದಾರೆ. ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು ಎಂಬ ಧನ್ಯತೆ, ಆತಂಕ, ನಿರಾಳ, ಬಿಡುಗಡೆಯ ಭಾವ ಇವನ್ನೆಲ್ಲ ಬದಿಗಿಟ್ಟು ಪದ್ಯ ಮುಂದಿಟ್ಟಿದ್ದಾರೆ.
ಪದ್ಯ ಓದಿ
ಸಂತೋಷಪಡುವುದಷ್ಟೇ
ನಮ್ಮ ಕೆಲಸ
ಸದ್ಯ.

Friday, October 19, 2007

ಕುಂಟಿನಿ ಎಂಬ ಒಳ್ಳೆಯ ಹುಡುಗ

ಗೆಳೆಯ ಗೋಪಾಲಕೃಷ್ಣ ಕುಂಟಿನಿ ಬರೆದ ನಾಲ್ಕು ಕಿರುಪದ್ಯಗಳು ಇಲ್ಲಿವೆ. ನಾನೂ ಕುಂಟಿನಿ ಒಂದಷ್ಟು ಕಾಲ ಜೊತೆಗೆ ಓದಿದವರು. ಕೆ ಎಸ್ ನ ಕವಿತೆಗಳನ್ನು ನಾವು ಜೊತೆಗೇ ಓದಿ ಮೆಚ್ಚಿಕೊಂಡದ್ದು. ಅಡಿಗರು ಅರ್ಥವಾಗದ ದಿನಗಳಲ್ಲಿ ನಮ್ಮಿಬ್ಬರಿಗೂ ಅಡಿಗರ ಕವಿತೆಗಳನ್ನು ಅರ್ಥಮಾಡಿಸಲು ಶತಪ್ರಯತ್ನಪಟ್ಟು ಸೋತವರು ವೆಂಕಟರಮಣ ಬಳ್ಳ, ನಮ್ಮ ಇಂಗ್ಲಿಷ್ ಲೆಕ್ಚರರ್.

ಕುಂಟಿನಿ ಕತೆ ಗಿತೆ ಬರೆಯುತ್ತಾ, ಜೋರಾಗಿ ಭಾಷಣ ಮಾಡುತ್ತಾ, ತಮಾಷೆಯಾಗಿ ಮಾತಾಡುತ್ತಾ, ಚುನಾವಣೆಗೆ ನಿಂತು, ಸೋತು, ಪತ್ರಕರ್ತನಾಗಿ ಮದುವೆಯಾಗಿ ಏನೆಲ್ಲ ಆಗಿಹೋಯಿತು. ನಾನು ಬೆಂಗಳೂರಿಗೆ ಬಂದೆ. ಅವನು ಊರಲ್ಲೇ ಉಳಿದ. ಅವನ ಕಥಾಸಂಕಲನವೊಂದು ಪ್ರಕಟವಾಗಿದೆ. ಇನ್ನೊಂದು ಇನ್ನೇನು ಬರುವುದರಲ್ಲಿದೆ.

ಅವನು ಪದ್ಯ ಬರೆಯುತ್ತಾನೆ ಅನ್ನುವುದು ನನಗೂ ಗೊತ್ತಿರಲಿಲ್ಲ. ಕವಿತೆಯನ್ನು ಅವನು ಅಷ್ಟಾಗಿ ಮೆಚ್ಚಿಕೊಂಡವನೇನೂ ಅಲ್ಲ. ನಾವಿಬ್ಬರೂ ಹೆಗ್ಗೋಡಿಗೆ ಹೋಗಿದ್ದಾಗ ಅಲ್ಲಿ ಮರುಳಾದ ಹುಡುಗಿಯ ಮುಂದೆ ಒಂದೆರಡು ಕವಿತೆ ಹೇಳಿ ಅವಳನ್ನು ಮೆಚ್ಚಿಸಿದ್ದನ್ನು ಬಿಟ್ಟರೆ ಅವನದೇನಿದ್ದರೂ ಗದ್ಯದ ಹಾದಿ.

ಆದರೆ, ಇತ್ತೀಚಿಗೆ ಇದ್ದಕ್ಕಿದ್ದ ಹಾಗೆ ಕಿರುಪದ್ಯಗಳತ್ತ ಹೊರಳಿಕೊಂಡಿದ್ದಾನೆ ಗೋಪಿ. ಫೊಟೋಗ್ರಫಿಯ ಹಾಗೆ ಇದು ಕೂಡ ಒಂದು ಭಂಗುರ ಕ್ಷಣವನ್ನು ಶಾಶ್ವತಕ್ಕೆ ಸೇರಿಸುವುದಕ್ಕೆ ತವಕಿಸುವಂತೆ ಕಾಣುತ್ತದೆ. ನಾಲ್ಕಾರು ಸಾಲುಗಳಲ್ಲಿ ಕುಂಟಿನಿ ಅಗಾಧವನ್ನು ಹೇಳಬಲ್ಲ ಅನ್ನುವುದಕ್ಕೆ ಸಾಕ್ಷಿ ಈ ಪದ್ಯಗಳು.

ನೀವೂ ಓದಿ ಖುಷಿಪಟ್ಟರೆ ನಮ್ಮ ಸ್ನೇಹ ಫಲಿಸಿತೆಂದು ಸಂತೋಷವಾಗುತ್ತದೆ.
-1-

ಆಕಾಶದ ಪ್ರೀತಿಗಾಗಿ
ಒಂದು ಪದ್ಯಬರೆದು
ಭೂಮಿಯ ಮೇಲಿಟ್ಟೆ.
ಗಾಳಿ ಅದನ್ನೆತ್ತಿ ಕೊಂಡೊಯ್ಯಿತು.
ಆಕಾಶಕ್ಕೆ ಆ ಪದ್ಯ ಸಿಗದಿದ್ದರೆ
ನನ್ನ ಪದ್ಯವ ಅಪ್ಪಿಕೊಳ್ಳುವೆಯಾ?

-2-
ಕಣಿವೆಯಲ್ಲಿ ಹುಲ್ಲು ತಿನ್ನುತ್ತಿದ್ದ
ಕಡವೆ
ಕಾನನದ ಬೆಂಕಿಯನ್ನು
ಕಣ್ಣಲ್ಲೇ ಆರಿಸಿತು.

-3-
ಒಂದು ಯುದ್ಧವನ್ನೂ
ಮಾಡದ ದೇಶದಲ್ಲಿ
ಪ್ರೀತಿ
ಎಂದರೇನೆಂದು
ಗೊತ್ತಿಲ್ಲದ ಪ್ರಜೆಗಳೇ
ಇರುವರು.
-4-
ಮುರುಕು ಕೋಟೆಯ
ಹಾದಿಯಲ್ಲಿ
ಕಲ್ಲು ಹಾಸಿನ ಮೇಲೆ
ಬೆಳೆದ ಪಾಚಿ
ನೂರಾರು ಯುದ್ಧ ಮುಗಿದ
ಮೇಲೆ ರಾಜನ ನೆನಪು
ಹೊತ್ತುಕುಳಿತಿತು.

Thursday, October 18, 2007

ನೀ ಮಾಯೆ­ಯೊ­ಳಗೋ ನಿನ್ನೊಳು ಮಾಯೆಯೋ...

ನಮ್ಮ ಅಭಿ­ಜಾತ ಸಾಹಿ­ತ್ಯ­ಕೃ­ತಿ­ಗಳ ಮುಖ್ಯ ಪ್ರೇರ­ಣೆ­ಗಳು ಎರಡು; ಮೇಲ್ನೋ­ಟಕ್ಕೆ ಸುವ್ಯ­ಕ್ತ­ವಾ­ಗುವ ದೈವ­ಚಿಂ­ತನೆ. ಒಳ­ನೋ­ಟ­ಕ್ಕಷ್ಟೇ ಕಾಣಿ­ಸುವ ಮಾನ­ವೀ­ಯತೆ. ಕೊನೆಗೂ ದೈವತ್ವ ಮಾನ­ವ­ತೆ­ಯನ್ನು ಗೆಲ್ಲು­ತ್ತ­ದೆಯೋ ಮನುಷ್ಯ ಎತ್ತ­ರೆ­ತ್ತ­ರಕ್ಕೆ ಬೆಳೆದು ದೇವ­ರಾ­ಗು­ತ್ತಾನೋ ಅನ್ನು­ವುದು ಆಯಾ ಓದು­ಗರ ತಿಳು­ವ­ಳಿ­ಕೆಗೆ ಬಿಟ್ಟದ್ದು. ಎಲ್ಲರ ಹಾಗೆ ಚಂದಿ­ರ­ನನ್ನು ಬೇಡುವ ಹಠ­ಮಾರಿ ಕಂದ­ನಾಗಿ ಹುಟ್ಟಿದ ರಾಮ ರಾಮಾ­ಯ­ಣ­ದೊ­ಳಗೇ ಬೆಳೆ­ಯುತ್ತಾ ಹೋಗು­ತ್ತಾನೆ. ತಪ್ಪು­ಗ­ಳನ್ನು ಮಾಡಿಯೂ ಕೊನೆಗೆ ಪುರು­ಷೋ­ತ್ತಮ ಅನ್ನಿ­ಸಿ­ಕೊ­ಳ್ಳು­ತ್ತಾನೆ. ಮಣ್ಣು ತಿನ್ನುವ ಮುಕುಂ­ದ­ನಾಗಿ ಹುಟ್ಟಿದ ಶ್ರೀಕೃಷ್ಣ ಅಂತಿ­ಮ­ವಾಗಿ ಯೋಗೇ­ಶ್ವ­ರ­ನಾ­ಗು­ತ್ತಾನೆ. ಹೀಗೆ ಹುಲು­ಮಾ­ನ­ವ­ರಂತೆ ಹುಟ್ಟಿ ದೇವ­ರಾ­ಗುವ ಪವಾಡ ಸಹ­ಜ­ವಾ­ಗಿಯೇ ಸಂಭ­ವಿ­ಸು­ವುದು ರಾಮಾ­ಯಣ, ಮಹಾ­ಭಾ­ರ­ತ­ಗಳ ಅಚ್ಚರಿ. ಕೃಷ್ಣ­ಕ­ತೆ­ಯಲ್ಲಿ ಒಂದಷ್ಟು ರೋಚ­ಕತೆ, ಉತ್ಪ್ರೇಕ್ಪೆ ಕಾಣಿ­ಸ­ಬ­ಹುದು. ಆದರೆ ರಾಮಾ­ಯ­ಣ­ದಲ್ಲಿ ಉತ್ಪ್ರೇ­ಕ್ಪೆಯೇ ಇಲ್ಲ. ರಾಮ ಎಲ್ಲ­ರಂತೆ ಒಬ್ಬ ಬಾಲಕ. ಎಲ್ಲ­ರಂತೆ ಕಾಡಿಗೆ ಹೋಗು­ತ್ತಾನೆ. ಹೆಂಗ­ಸನ್ನು ಕೊಲ್ಲು­ವು­ದಕ್ಕೆ ಹಿಂಜ­ರಿ­ಯು­ತ್ತಾನೆ. ಸೀತೆ­ಯನ್ನು ಮದು­ವೆ­ಯಾ­ಗಲೂ ಆತ­ನಿಗೆ ಹಿಂಜ­ರಿ­ಕೆಯೇ. ಕೊನೆಗೆ ಕಾಡಿಗೆ ನಡಿ ಅಂದಾಗ ಮೌನ­ವಾಗಿ ಕಾಡು­ಪಾ­ಲಾ­ಗು­ತ್ತಾನೆ. ಸೀತೆ ಕಳೆ­ದು­ಹೋ­ದಾಗ ಶೋಕಿ­ಸು­ತ್ತಾನೆ. ಕಪಿ­ಗಳ ಜೊತೆ ಸೇರಿ ಸೇತುವೆ ಕಟ್ಟು­ತ್ತಾನೆ. ಲಕ್ಪ್ಮಣ ಸತ್ತಾಗ ಮತ್ತೊಮ್ಮೆ ಅಳು­ತ್ತಾನೆ.
ಆದರೆ ಕೃಷ್ಣ ಇಡೀ ಮಹಾ­ಭಾ­ರ­ತ­ದಲ್ಲಿ ಒಮ್ಮೆಯೂ ಅಳು­ವು­ದಿಲ್ಲ. ಅವನು ಸದಾ ಮಂದ­ಸ್ಮಿತ. ಎದು­ರಿಗೆ ಮಾರ­ಣ­ಹೋಮ ನಡೆ­ಯು­ತ್ತಿ­ದ್ದರೂ ಅವನ ತುಟಿಯ ಕಿರು­ನಗೆ ಮಾಸು­ವು­ದಿಲ್ಲ. ಶಿಶು­ಪಾಲ ಇನ್ನಿ­ಲ್ಲ­ದಂತೆ ಬೈದರೂ ಆತ­ನಿಗೆ ಏನೂ ಅನ್ನಿ­ಸು­ವು­ದಿಲ್ಲ. ಆ ಅಳುವ ದೇವರು ಶ್ರೀರಾಮ ಮತ್ತು ಈ ಅಳದ ದೇವರು ಶ್ರೀಕೃಷ್ಣ-ಇ­ವ­ರಿ­ಬ್ಬರ ವ್ಯಕ್ತಿ­ತ್ವ­ದಲ್ಲಿ ಇಡೀ ಮನು­ಕು­ಲದ ವ್ಯಕ್ತಿ­ತ್ವವೂ ಅಡ­ಗಿ­ಕೊಂ­ಡಿದೆ.
ದೇವರು ಅಳು­ತ್ತಾನೆ ಅನ್ನುವ ಕಲ್ಪ­ನೆಯೇ ನಮಗೆ ಹೊಸದು. ರಾಮಾ­ಯ­ಣ­ವನ್ನು ನಾವು ಸಾವಿರ ಸಲ ಓದಿ­ದ್ದರೂ ರಾಮ ಅಳು­ವುದು ನಮಗೆ ವಿಚಿ­ತ್ರ­ವಾಗಿ ಕಂಡಿ­ರು­ವು­ದಿಲ್ಲ. ಆದರೆ ರಾಮ ದೇವರ ಅವ­ತಾರ ಎಂದು ನೋಡಿ­ದಾಗ ಆತನ ಅಳು ಕೊಂಚ ಅಸ­ಹಜ ಅನ್ನಿ­ಸು­ತ್ತದೆ. ಆತ ಅತ್ತಿ­ದ್ದ­ರಿಂದ ಅವ­ನಿಗೆ ಸೀತೆಯ ಮೇಲಿ­ರುವ ಪ್ರೀತಿ ಗೊತ್ತಾ­ಗು­ತ್ತದೆ ಎಂದು ನಾವು ಭಾವಿ­ಸ­ಬೇಕು. ಹೀಗಾಗಿ ಅದೊಂದು ಕವಿ­ಕ­ಲ್ಪನೆ ಎಂದು ತಳ್ಳಿ­ಹಾ­ಕು­ವಂ­ತಿಲ್ಲ.
ಹಾಗಿ­ದ್ದರೆ ಶ್ರೀರಾಮ ಅತ್ತಿ­ದ್ದೇಕೆ? ಅದೇ ಆತ ಸೀತೆ­ಯನ್ನು ಅನು­ಮಾ­ನಿಸಿ ಕಾಡಿಗೆ ಅಟ್ಟಿ­ದಾಗ ಅಳ­ಲಿಲ್ಲ ಯಾಕೆ? ಶ್ರೀರಾ­ಮ­ನನ್ನು ಪುರು­ಷೋ­ತ್ತಮ ಎಂದು ಕರೆ­ಯುತ್ತಾ ವಾಲ್ಮೀಕಿ ಪುರು­ಷೋ­ತ್ತಮ , the complete man, ಹೇಗಿ­ರ­ಬೇಕು ಎಂದು ಸೂಚಿ­ಸು­ತ್ತಿ­ರ­ಬ­ಹುದೇ? ಸಂಕ­ಟ­ವಾ­ದಾಗ ಅಳುವ, ಸಾಗ­ರದ ಮುಂದೆ ಅಸ­ಹಾ­ಯ­ಕ­ನಾ­ಗುವ, ಬಿಟ್ಟು ಕೊಡ­ಬೇ­ಕಾಗಿ ಬಂದಾಗ ಕಲ್ಲಾ­ಗುವ, ತೊರೆ­ಯ­ಬೇ­ಕಾಗಿ ಬಂದಾಗ ನಿಶ್ಟ­ಯ­ವಾ­ಗುವ ರಾಮನ ಈ ಎಲ್ಲ ಗುಣ­ಗಳೇ ನಮ್ಮನ್ನು ಅತ್ಯು­ತ್ತ­ಮ­ರ­ನ್ನಾ­ಗಿ­ಸು­ತ್ತದೆ ಎಂದು ಹೇಳು­ವುದು ವಾಲ್ಮೀ­ಕಿಯ ಪ್ರಯ­ತ್ನ­ವಿ­ರ­ಬ­ಹುದೇ?
ನಮ್ಮ ದೇವರ ಕಲ್ಪನೆ ಕಲಾ­ತ್ಮ­ಕ­ವಾ­ದದ್ದು. ಅಷ್ಟೇ ವಿರೋ­ಧಾ­ಭಾ­ಸ­ಗ­ಳಿಂದ ಕೂಡಿದ್ದು. ಏಕ­ಪ­ತ್ನಿ­ವ್ರ­ತಸ್ಥ ರಾಮ­ನನ್ನು ನಂಬು­ತ್ತಲೇ ನಾವು ಹದಿ­ನಾರು ಸಾವಿ­ರದ ಎಂಟು ಹೆಂಡಿರ ಕೃಷ್ಣ­ನನ್ನೂ ನಂಬು­ತ್ತೇವೆ. ರಾಮ­ನನ್ನು ಯಾವ ಕಾರ­ಣಕ್ಕೆ ಮೆಚ್ಚು­ತ್ತೇವೋ ಅದೇ ಕಾರ­ಣಕ್ಕೆ ಕೃಷ್ಣ­ನನ್ನೂ ಮೆಚ್ಚು­ತ್ತೇವೆ. ಭಕ್ತಿ­ಯಿಂದ ಕಣ್ಮುಚ್ಚಿ ನಿಂತಾಗ ಭಕ್ತ­ನಿಗೆ ಕೃಷ್ಣನ ಸಂಸಾರ ನೆನ­ಪಾ­ಗು­ವು­ದಿಲ್ಲ. ಹಾಗಂತ ರಾಮನ ಕಠೋರ ನಿಷ್ಠೆ ಕೂಡ ನೆನ­ಪಿಗೆ ಬರು­ವು­ದಿಲ್ಲ. ಈ ಎರಡೂ ವ್ಯಕ್ತಿ­ತ್ವ­ಗಳೂ ತಮ್ಮ ಐಹಿ­ಕದ ಕ್ರಿಯೆ­ಗ­ಳನ್ನು ಅದು ಹೇಗೋ ಮೀರಿ­ದ­ವರು.
ಹಾಗೆ ನೋಡಿ­ದರೆ ನಮ್ಮ ಜನಾಂ­ಗೀಯ ಸ್ಮೃತಿ­ಗಳು ಗಮನ ಸೆಳೆ­ಯು­ವಂ­ತಿವೆ. ನಮಗೆ ಅತ್ಯಂತ ಪುರಾ­ತ­ನ­ವಾಗಿ ನೆನ­ಪಿ­ರು­ವುದು ದೇವರು. ಆತ ಅನಾದಿ. ಆಲದ ಎಲೆಯ ಮೇಲೆ ಮಲ­ಗಿದ್ದ ಶಿಶು­ವಾಗಿ ದೇವ­ರನ್ನು ಕಾಣುವ ನಮಗೆ ಪ್ರಳ­ಯ­ಕಾ­ಲ­ದಲ್ಲಿ ದೋಣಿ­ಯೊಂ­ದಿಗೆ ಬರುವ ಮನುವೂ ದೇವ­ರಂ­ತೆಯೇ ಕಾಣಿ­ಸು­ತ್ತಾನೆ. ಇರುವ ಒಬ್ಬ ದೇವ­ನನ್ನೇ ಅವ­ತಾ­ರ­ಗ­ಳಲ್ಲಿ ನೋಡಲು ನಾವು ಹವ­ಣಿ­ಸು­ತ್ತೇವೆ. ದೇವರು ವಿಧ­ವಿಧ ಪುರಾ­ಣ­ಗ­ಳಲ್ಲಿ ಪ್ರಕ­ಟ­ಗೊ­ಳ್ಳುತ್ತಾ ಹೋಗು­ತ್ತಾರೆ. ಋಷಿ­ಗಳ ಸೇವೆ­ಯಲ್ಲಿ, ರಾಕ್ಪ­ಸರ ವೈರ­ದಲ್ಲಿ, ಮರ್ತ್ಯರ ಭಕ್ತಿ-ವಿ­ಭ­ಕ್ತಿ­ಯಲ್ಲಿ ನಾಸ್ತಿ­ಕನ ನಿರಾ­ಕ­ರ­ಣೆ­ಯಲ್ಲಿ ದೇವರು ಪ್ರಕ­ಟ­ಗೊ­ಳ್ಳು­ತ್ತಾನೆ. ದೇವರು ಇದ್ದಾನೋ ಇಲ್ಲವೋ ಎಂಬ ಚರ್ಚೆ ಇವ­ತ್ತಿಗೂ ನಡೆ­ಯು­ತ್ತಲೇ ಇದೆ. ಆದರೆ ದೇವರ ಮುಂದೆ ನಿಂತ ಭಕ್ತ­ನಿಗೆ ನಾಸ್ತಿ­ಕನ ವಾದ ನೆನ­ಪಿ­ನಲ್ಲಿ ಉಳಿ­ಯು­ವು­ದಿಲ್ಲ.
ಯಾವ ತಂತ್ರ­ಜ್ಞಾ­ನ­ವಾ­ಗಲೀ, ಉನ್ನ­ತಿ­ಕೆ­ಯಾ­ಗಲಿ, ಸ್ಥಾನ­ಮಾ­ನ­ವಾ­ಗಲೀ, ವಿದ್ಯೆ­ಯಾ­ಗಲೀ ಅಳಿ­ಸ­ಲಾ­ರದ ನೆನಪು ದೇವ­ರದ್ದು. ದೇವ­ರನ್ನು ನಿರಾ­ಕ­ರಿ­ಸು­ವ­ವನು ಅದನ್ನು ತನ್ನ ವಿದ್ಯೆ­ಯಿಂದ ಮಾಡಿ­ರು­ವು­ದಿಲ್ಲ, ವಿ್­ಡ­್­ನಿಂದ ಮಾಡಿ­ರು­ತ್ತಾನೆ. ಹಾಗೇ ದೇವ­ರನ್ನು ಒಪ್ಪಿ­ಕೊ­ಳ್ಳು­ವ­ವನೂ ಕೂಡ ತನ್ನ WISDOMನಿಂದಲೇ ದೇವ­ರನ್ನು ಕಂಡು­ಕೊಂಡೇ ಎಂದು ಭಾವಿ­ಸಿ­ಕೊಂ­ಡಿ­ರು­ತ್ತಾನೆ. ತಮಾ­ಷೆ­ಯೆಂ­ದರೆ ನಾಸ್ತಿ­ಕ­ನಿಗೆ ದೇವ­ರಿಲ್ಲ ಅನ್ನು­ವುದು ಜ್ಞಾನದ ಮೆಟ್ಟಿ­ಲಾ­ದರೆ, ಆಸ್ತಿ­ಕ­ನಿಗೆ ದೇವ­ರಿ­ದ್ದಾನೆ ಅನ್ನುವ ಅರಿವೇ ಜ್ಞಾನದ ಮೆಟ್ಟಿಲು. ಹೀಗಾಗಿ ನಾಸ್ತಿ­ಕರೂ ಆಸ್ತಿ­ಕರೂ ಅದೇ ಕಾರ­ಣಕ್ಕೆ ಪರ­ಸ್ಪ­ರ­ರನ್ನು ದೂಷಿ­ಸ­ಬ­ಲ್ಲರು. ಅವಿ­ವೇಕಿ ದೇವ­ರಿಲ್ಲ ಅನ್ನು­ತ್ತಾನೆ ಎಂದು ಹೀಯಾ­ಳಿ­ಸು­ವುದೂ ಅವಿ­ವೇಕಿ, ದೇವ­ರಿ­ದ್ದಾನೆ ಅಂತ ನಂಬಿ­ದ್ದಾನೆ ಎಂದು ಹಾಸ್ಯ­ಮಾ­ಡು­ವುದೂ ಮೂಲ­ದಲ್ಲಿ ಒಂದೇ ಅನ್ನು­ವು­ದನ್ನು ಗಮ­ನಿಸಿ. ಹಾಗೇ, ವೈಜ್ಞಾ­ನಿ­ಕ­ವಾಗಿ ತುಂಬ ಸಾಧನೆ ಮಾಡಿದ ವ್ಯಕ್ತಿ ಕೂಡ ತನ್ನ ಸಾಧನೆ ತನ್ನ ಕುಲ­ದೇ­ವ­ರಿಂದ ಸಾಧ್ಯ­ವಾಯ್ತು ಎಂದು ನಂಬ­ಬಲ್ಲ. ಅದು ದೇವ­ರಿ­ಗಿ­ರುವ ಶಕ್ತಿ. ಹೀಗಾಗಿ ದೇವರು ಎನ್ನು­ವುದು ವಿದ್ಯೆ ಅಪ­ಹ­ರಿ­ಸ­ಲಾ­ರದ ಭಾವ. ಅನು­ಭವ ನಮ್ಮ ಮುಗ­್ಧ­ತೆ­ಯನ್ನೂ, ಓದು ನಮ್ಮ ಅಜ್ಞಾ­ನ­ವನ್ನೂ, ಪ್ರವಾಸ ನಮ್ಮ ಸಂಕೋ­ಚ­ವನ್ನೂ ಕಡಿಮೆ ಮಾಡು­ತ್ತದೆ. ಆದರೆ ಇವ್ಯಾ­ವುವೂ ನಂಬಿ­ಕೆ­ಯನ್ನು ಕೆಣ­ಕ­ಲಾ­ರವು.
ಇಂಥ ದೇವರು ವಿಷ­ದ­ಗೊ­ಳ್ಳು­ವುದು ಮಂತ್ರ, ಕ್ರಿಯೆ ಮತ್ತು ಭಕ್ತಿಯ ಮೂಲಕ. ಇವು­ಗಳ ಪೈಕಿ ಮಂತ್ರ ಕೆಲ­ವರ ಸೊತ್ತು. ಶಬ್ದ­ಗಳ ಮೂಲಕ ದೇವ­ರನ್ನು ಕಾಣು­ವುದು ಕಷ್ಟ. ವೇದ­ಗಮ್ಯ ಎಂದು ದೇವ­ರನ್ನು ಕರೆ­ಯು­ವಾಗ ನಾವು ಊಹಿ­ಸುವ ಅರ್ಥ, ಭಗ­ವಂ­ತ­ನನ್ನು ನೋಡು­ವು­ದಕ್ಕೆ ವೇದ­ಗಳೇ ಕಣ್ಣು ಎಂದು. ತನ್ನ ಲಯ­ಬ­ದ­್ಧತೆ ಮತ್ತು ಸ್ಪಷ್ಟ­ತೆ­ಯಲ್ಲಿ ಮಂತ್ರ ದೇವರ ಸಾಕ್ಪಾ­ತ್ಕಾರ ಮಾಡುತ್ತಾ ಹೋಗು­ತ್ತದೆ ಎನ್ನು­ತ್ತಾರೆ. ಹಾಗೇ ಕ್ರಿಯೆಯ ಮೂಲಕ ದೇವ­ರಿಗೆ ಹತ್ತಿ­ರಾ­ಗು­ವು­ದಕ್ಕೆ ಸಾಧ್ಯ­ವಿದೆ ಅನ್ನು­ತ್ತವೆ ಶಾಸ್ತ್ರ­ಗಳು. ಕ್ರಿಯೆ­ಯೆಂ­ದರೆ ಪೂಜೆ, ಅಲಂ­ಕಾರ ಮತ್ತು ಆಚ­ರ­ಣೆ­ಗಳು. ಮಂತ್ರ­ಕ್ಕಿಂತ ಕ್ರಿಯೆ ಕಷ್ಟದ್ದು. ಆದರೆ ಇವತ್ತು ಉಳ­ಕೊಂ­ಡಿ­ರು­ವುದು ಕ್ರಿಯೆ ಮಾತ್ರ. ಅದೂ ಅಭ್ಯಾ­ಸ­ಬ­ಲ­ದಿಂದ.
ಮೂರ­ನೆ­ಯದು ಭಕ್ತಿ. ಭಕ್ತಿ­ಯೆಂ­ದರೆ ಶ್ರದ್ಧೆ. ಅದೊಂದು ರೀತಿ­ಯಲ್ಲಿ ಪ್ರೀತಿ­ಯಂತೆ, ಪರ­ಸ್ಪ­ರರ ನಡು­ವಿನ ನಂಬಿ­ಕೆ­ಯಂತೆ; ನಿನ್ನ ನಾನು ಬಿಡು­ವ­ನಲ್ಲ... ಎನ್ನ ನೀನು ಬಿಡಲು ಸಲ್ಲ ಎಂಬಂತೆ. ನಿನ್ನ ಬಿಟ್ಟು ಅನ್ಯರ ಭಜಿ­ಸಿ­ದ­ರೆ­ನಗೆ ಆಣೆ ರಂಗ, ಎನ್ನ ನೀ ಕೈಬಿಟ್ಟು ಹೋದರೆ ನಿನಗೆ ಆಣೆ.. ಎಂದು ಪ್ರಮಾಣ ಮಾಡಿ­ಕೊಂ­ಡಂತೆ. ದಾಸ­ರದು ಈ ಹಾದಿ. ಮಂತ್ರ­ಗ­ಳನ್ನು ನಂಬು­ವ­ವರು; ಋಷಿ­ಗಳು. ಕ್ರಿಯೆ­ಯನ್ನು ನಂಬು­ವ­ವರು; ಔಪಾ­ಸ­ಕರು. ಇವೆ­ರ­ಡನ್ನೂ ನಂಬದೆ ತಮ್ಮ ದೈನ್ಯ­ವ­ನ್ನಷ್ಟೇ ನಂಬು­ವ­ವರು ದಾಸರು.
**­*­**
ಬರ್ಬರಾ ಗ್ರೀ್ ಮತ್ತು ವಿಕ್ಟ್ ಗೊಲಾಂ್ ಎಂಬಿ­ಬ್ಬರು 1962ರಲ್ಲಿ God of a hundred names ಎಂಬ ಕೃತಿ­ಯನ್ನು ಸಂಪಾ­ದಿ­ಸಿ­ದ್ದಾರೆ. ಜಗ­ತ್ತಿನ ಎಲ್ಲಾ ಧರ್ಮ­ಗಳ, ಎಲ್ಲಾ ನಂಬಿ­ಕೆ­ಗಳ, ಎಲ್ಲಾ ಶ್ರದಾ­್ಧ­ಕೇಂ­ದ್ರ­ಗಳು ದೇವ­ರನ್ನು ಹೇಗೆ ಕಾಣು­ತ್ತಿವೆ, ಹೇಗೆ ತಿಳಿ­ಯು­ತ್ತವೆ ಅನ್ನು­ವು­ದನ್ನು ಆಯಾ ಸಂಸ್ಕೃ­ತಿಯ ಪ್ರಾರ್ಥ­ನೆ­ಗಳ ಮೂಲಕ ಕಾಣು­ವು­ದಕ್ಕೆ ಸಂಪಾ­ದ­ಕ­ರಿ­ಬ್ಬರೂ ಯತ್ನಿ­ಸಿ­ದ್ದಾರೆ. ಈಜಿ­ಪ್ಟಿನ ಒಂದು ಪ್ರಾರ್ಥನೆ ಆತ­ನನ್ನು ನಿರಾ­ಕಾರ ಅನ್ನು­ತ್ತದೆ. ನಮ್ಮ ಶ್ಲೋಕವೂ ನಿರಾ­ಕಾ­ರ­ಮೇಕಂ ಎನ್ನು­ತ್ತದೆ. ಈಜಿ­ಪ್ಟಿ­ನಲ್ಲಿ ಹೇಗೋ ಇಂಡಿ­ಯಾ­ದಲ್ಲೂ ಶಿವ­ನಿಗೆ ಆಕಾ­ರ­ವಿಲ್ಲ, ರೂಪ­ವಿಲ್ಲ.
ಕೆಲ­ವೊಂದು ಕುತೂ­ಹ­ಲ­ಕಾರಿ ಪ್ರಾರ್ಥ­ನೆ­ಗ­ಳನ್ನು ನೋಡಿ. ಅವು ನಿಜಕ್ಕೂ ರೋಮಾಂ­ಚ­ಗೊ­ಳಿ­ಸು­ತ್ತವೆ.
1900ರ ಆಸು­ಪಾ­ಸಿ­ನಲ್ಲಿ ಬದು­ಕಿದ್ದ ವಿನಿ­ಫ್ರೆ್ ಎಂಬಾತ ದೇವ­ರನ್ನು ಕೇಳಿ­ಕೊ­ಳ್ಳು­ವುದು ಇಷ್ಟು;
ಓ ದೇವರೇ,
ಸಾಯುವ ತನಕ
ಕೆಲಸ ಕೊಡು.
ಕೆಲಸ ಮುಗಿ­ಯುವ ತನಕ
ಬಾಳು ಕೊಡು.

ಒಂದು ಅನಾ­ಮಿಕ ಪ್ರಾರ್ಥನೆ ಹೀಗಿದೆ;
ಬದ­ಲಾ­ಯಿ­ಸ­ಲಾ­ಗ­ದ್ದನ್ನು ಒಪ್ಪಿ­ಕೊಳ್ಳೋ ಸ್ಥೈರ್ಯ
ಬದ­ಲಾ­ಯಿ­ಸ­ಬ­ಹು­ದಾ­ದ್ದನ್ನ ಬದ­ಲಾ­ಯಿಸೋ ಧೈರ್ಯ
ಇವೆ­ರ­ಡರ ವ್ಯತ್ಯಾಸ ಅರಿ­ಯುವ ಅರಿವ
ಕೊಡು ಓ ದೇವಾ.

ಇವೆ­ಲ್ಲ­ದರ ನಡುವೆ, ಮುಗ­್ಧತೆ ಹಾಗು ಧನ್ಯ­ತೆ­ಯನ್ನು ಕೊಡು ಅಂತ ಕೇಳಿ­ಕೊಂ­ಡ­ವ­ರಿ­ದ್ದಾರೆ. ಓ್‌ಡ ಬ್ರೆಟ್ `ಚಿ­ಕ್ಕದು ನನ್ನ ದೋಣಿ; ಅಗಾಧ ನಿನ್ನ ಕಡಲು; ಕಾಯೋ ಹಗ­ಲಿ­ರುಳು' ಎಂದು ಕೇಳಿ­ಕೊಂಡ. ಯಾವ ಅರ್ಥವೂ ಇರದ, ಉಪ­ಯೋ­ಗಕ್ಕೆ ಬರದ ಮಾತೊಂದೂ ಬರದ ಹಾಗೆ ವರವ ಕೊಡು ಗುರುವೆ ಎಂದ ಪೆರಿ­ಕ್ಲ್. ಎಲ್ಲ­ರನ್ನೂ ಸರಿ­ಮಾಡು; ನನ್ನಿಂ­ದಲೇ ಶುರು­ಮಾಡು ಎಂದು ಚೀನಾದ ವಿದ್ಯಾರ್ಥಿ ಬರ­ಕೊಂ­ಡಿದ್ದ.
ಕೆಲ­ವೊಂದು ತಮಾ­ಷೆಯ ಪ್ರಾರ್ಥ­ನೆ­ಗಳೂ ಇದ­ರಲ್ಲಿ ಸೇರಿವೆ;
ಇದೊಂದು ಉದಾ­ಹ­ರಣೆ ನೋಡಿ;
Some ha'e meat, and cann eat,
And some wad eat that want it;
But we ha'e meat, and we can eat
And sae the Lord be thankit.

ತಿಂಡಿ­ಯಿದೆ ತಿನ್ನ­ಲಾರ್ರು; ಅದು ಕೆಲ­ವರ ಪಾಡು.
ತಿನ್ನೊ ಆಸೆ ತಿಂಡಿ­ಯಿಲ್ಲ; ಅಂಥೋ­ರಿ­ದ್ದಾರೆ ನೋಡು;
ತಿಂಡಿ­ಯಿದೆ ತಿನ್ನ­ಬ­ಲ್ಲೆವು; ಊಟ ಶುರು­ಮಾಡು.
ಅದಕೂ ಮುಂಚೆ ತಿಂಡಿ­ಕೊಟ್ಟ ಅವ­ನಿ­ಗಾಗಿ ಹಾಡು

ಒಂದು ಪುಟ್ಟ ಕತೆಯೂ ಇಲ್ಲಿದೆ;
ಆತ ದೇವ­ರನ್ನು ಕೇಳಿ­ಕೊಂಡ; ಕಾಯೋ ಕರು­ಣಾ­ನಿಧಿ...
ಹಾಗಂತ ಮತ್ತೆ ಮತ್ತೆ ಹೇಳಿ­ಕೊಂಡ. ಎಲ್ಲ­ವನ್ನೂ ಕೇಳಿ­ಸಿ­ಕೊ­ಳ್ಳು­ತ್ತಿದ್ದ ದುಷ್ಟ­ಶಕ್ತಿ ಹೇಳಿತು. `ಅ­ಷ್ಟೆಲ್ಲಾ ಬಡ್ಕೋ­ತಿ­ದ್ದೀ­ಯಲ್ಲ. ಒಂದ್ಸಾ­ರಿ­ಯಾದ್ರೂ ಆ ದೇವರು ನಾನು ಇಲ್ಲಿ­ದ್ದೇನೆ ಅಂತ ಹೇಳಿ­ದ್ದಾನಾ?'
ಅವ­ನಿಗೆ ಯೋಚ­ನೆ­ಯಾ­ಯಿತು. ದುಃಖ­ದಿಂದ ಹೊದ್ದು ಮಲ­ಗಿದ. ಕನ­ಸಲ್ಲಿ ಭಗ­ವಂತ ಬಂದ; `ಯಾ­ಕಪ್ಪಾ. ಪ್ರಾರ್ಥನೆ ನಿಲ್ಲಿ­ಸಿ­ಬಿಟ್ಟೆ'.
`ಕ­ರೆ­ದರೂ ದನಿ ಕೇಳ­ಲಿ­ಲ್ಲವೇ ನಿನಗೆ. ಒಂದು ಸಲ­ವಾ­ದರೂ ನಾನಿ­ಲ್ಲಿ­ದ್ದೇನೆ ಅನ್ನ­ಬಾ­ರದಾ?'
ನೀನು ಕರೆ­ದಾಗ ನಾನು `ನೋ­ಡಿ­ಲ್ಲಿ­ದ್ದೇನೆ ನಾನು' ಅನ್ನ­ಬೇ­ಕಾ­ಗಿಲ್ಲ. ನಿನ್ನ ಪ್ರಾರ್ಥ­ನೆಯ ಮೂಲಕ `ನಾ­ನಿ­ಲ್ಲಿ­ದ್ದೇನೆ ಅಂತ ನೀನು ನನಗೆ ಹೇಳು­ತ್ತಿ­ರುತ್ತಿ ಅಷ್ಟೇ'.
**­*­**
ನಮ್ಮಲ್ಲೂ ಇಂಥ ಅಸಂ­ಖ್ಯಾತ ಪ್ರಾರ್ಥ­ನೆ­ಗ­ಳಿವೆ. ನಮ್ಮ ಪ್ರಾರ್ಥ­ನೆ­ಗಳು ಅನೇಕ ಸಲ ಆರ್ತ­ನಾ­ದ­ಗಳೂ ಆಗಿ­ರು­ತ್ತವೆ. ದೀಪವೂ ನಿನ್ನದೆ ಗಾಳಿಯೂ ನಿನ್ನದೆ ಆರ­ದಿ­ರಲಿ ಬೆಳಕು ಎಂಬ ಸಾಂಕೇ­ತಿಕ ಪ್ರಾರ್ಥ­ನೆ­ಯಿಂದ ಹಿಡಿದು `ನಾ ನಿನ್ನ ದಾಸ­ನಯ್ಯಾ... ನೀನೆಲ್ಲ ಕಾಯ­ಬೇಕೋ' ಎಂಬಂಥ ಸ್ಪಷ್ಟ ಪ್ರಾರ್ಥ­ನೆ­ಗಳ ತನಕ ಸಹ­ಸ್ರಾರು ಬೇಡಿ­ಕೆ­ಗಳು ನಮ್ಮ ಮುಂದಿವೆ ಅವು­ಗಳ ಪೈಕಿ ಇದೊಂದು ಅಪ­ರೂ­ಪದ ಪ್ರಾರ್ಥನೆ, ಕೇಳಿ;
ಅಂಥಿಂ­ಥ­ದೆ­ಲ್ಲವು ಏನೇ ಬರಲಿ
ಚಿಂತಿ ಎಂಬು­ದೊಂದು ದೂರ­ವಿ­ರಲಿ
ಅಂತು ಪಾರಿ­ಲ್ಲದ ಗುರು­ದೇ­ವ­ನೊ­ಬ್ಬನ
ಅಂತಃ­ಕ­ರ­ಣೆನ್ನ ಮೇಲಿ­ರಲಿ

ಬಡ­ತ­ನ­ವೆಂ­ಬುದು ಕಡೆ­ತ­ನ­ಕಿ­ರಲಿ
ಒಡವೆ ವಸ್ತು­ಗ­ಳೆಲ್ಲ ಹಾಳಾಗಿ ಹೋಗಲಿ
ನಡು­ವೆಯೆ ನಮಗೆ ದಾರಿಯು ತಪ್ಪಲಿ
ಗಿಡ­ಗಂ­ಟಿಯ ಆಸ್ರ ದೊರ­ಕ­ದ್ಹಂ­ಗಾ­ಗಲಿ

ಅಂಬಲಿ ಕೂಡ ಸಿಗ­ದ್ಹಂ­ಗಾ­ಗಲಿ
ನಂಬಿಗಿ ಎಳ್ಳಷ್ಟು ಇಲ್ಲ­ದ್ಹಂ­ಗಾ­ಗಲಿ
ಕಂಬ ಮುರಿದು ತಲೆ­ಮೇಲೇ ಬೀಳಲಿ
ಡಂಭ ಲೌಡಿ­ಮಗ ಇವ­ನೆಂ­ದೆ­ನಲಿ

ಗಂಡ­ಸು­ತ­ನ­ವಿದ್ದು ಇಲ್ಲ­ದ್ಹಂ­ಗಾ­ಗಲಿ
ಹೆಂಡತಿ ಮಕ್ಕಳು ಬಿಟ್ಟೋ­ಡಲಿ
ಕುಂಡಿ­ಕುಂಡಿ ಸಾಲ­ಗಾರ ಬಂದೊ­ದೆ­ಯಲಿ
ಬಂಡು ಮಾಡಿ ಜನ ನಗು­ವಂ­ತಾ­ಗಲಿ

ಉದ್ಯೋಗ ವ್ಯಾಪಾರ ನಡೆ­ಯ­ದ್ಹಂ­ಗಾ­ಗಲಿ
ಬುದ್ಧಿ ನನ್ನದು ನಶಿಸಿ ಮಾಸಿ ಹೋಗಲಿ
ಮದ್ದಿಟ್ಟು ಯಾರಾ­ದರೂ ನನ್ನ ಕೊಲ್ಲಲಿ
ಹದ್ದು ಕಾಗಿ ನರಿ ಹರ­ಕೊಂಡು ತಿನ್ನಲಿ

ದಾಸ­ಪಂ­ಥ­ವೊಂ­ದು­ಳಿ­ಯ­ದಂ­ತಾ­ಗಲಿ
ಆಸೆ­ಮೋ­ಹ­ವೆಲ್ಲ ಅಳಿ­ದು­ಹೋ­ಗಲಿ
ಲೇಸುಳ್ಳ ಕೂಡ­ಲೂ­ರೇ­ಶ­ನಲಿ ನನ್ನ
ಧ್ಯಾಸ­ವೊಂದು ಮಾತ್ರ ನಿಜ­ವಾ­ಗಿ­ರಲಿ.

ಇದರ ವಿರೋ­ಧಾ­ಭಾಸ ಗಮ­ನಿಸಿ. ಇಲ್ಲಿ ಕೊನೆಯ ಸಾಲಿನ ಬೇಡಿಕೆ ಈಡೇ­ರಿ­ದರೆ ಅದಕ್ಕೂ ಮೊದ­ಲಿನ ಇಪ್ಪ­ತ್ತ­ಮೂರು ಸಾಲು­ಗಳ ಬೇಡಿಕೆ ಸುಳ್ಳಾ­ಗು­ತ್ತದೆ. ಮೊದಲ ಇಪ್ಪ­ತ್ತ­ಮೂರು ಸಾಲು­ಗಳ ಬೇಡಿಕೆ ನಿಜ­ವಾ­ದರೆ ಕೊನೆಯ ಸಾಲಿನ ಬೇಡಿಕೆ ತಾನೇ ತಾನಾಗಿ ಈಡೇ­ರು­ತ್ತದೆ. ಕೊನೆಯ ಸಾಲಿನ ಬೇಡಿಕೆ ಈಡೇ­ರಿ­ದೊ­ಡನೆ ಉಳಿ­ದೆಲ್ಲ ಸಾಲು­ಗಳ ಕೋರಿಕೆ ನಶಿ­ಸಿ­ಹೋ­ಗು­ತ್ತದೆ.
ಹ್ಯಾಗಿದೆ ಭಕ್ತಿ ಮಾರ್ಗ!

Monday, October 15, 2007

ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ

ಎಷ್ಟೋ ವರುಷಗಳ ನಂತರ ಹುಟ್ಟಿದೂರಿಗೆ ಹೋದಾಗಲೂ ಕಣ್ಣು ಮತ್ತೆ ಮತ್ತೆ ಬಾಲ್ಯದ ಗೆಳತಿಯ ಮನೆಯತ್ತ ಹೊರಳುವಂತೆ ಕೆಲವೊಮ್ಮೆ ಏನು ಯೋಚಿಸಹೊರಟರೂ ಮನಸ್ಸು ನಮಗೆ ತುಂಬ ಇಷ್ಟವಾದ ಕವಿಯತ್ತ ಸುಳಿಯುತ್ತದೆ. ಬಹಳಷ್ಟು ಕವಿಗಳು ಕತೆಗಾರರು ನಾವು ಬೆಳೆಯುತ್ತಾ ಹೋದ ಹಾಗೆ ಹಳಬರಾಗುತ್ತಾರೆ; ಸವಕಲಾಗುತ್ತಾರೆ. ನಾವು ಅವರನ್ನು ಮೀರಿಯೋ ದಾಟಿಯೋ ಮುಂದೆ ಹೋಗುತ್ತೇವೆ. ಹಾಗೆ ದಾಟಿ ಮುನ್ನಡೆದ ದಿನ ಖುಷಿಯಾಗಿರುತ್ತದೆ. ಆದರೆ ತುಂಬ ದೂರ ಹೋಗಿ ಹಿಂತಿರುಗಿ ನೋಡಿದಾಗ ಬೇಸರವೂ ಆಗುತ್ತದೆ. ಯಾಕೆಂದರೆ ನಾವು ಅಷ್ಟೊಂದು ಇಷ್ಟಪಟ್ಟ ಕವಿಯನ್ನೋ ಹಾಡುಗಾರನನ್ನೋ ಲೇಖಕನನ್ನೋ ನಟನನ್ನೋ ಹಿಂದೆ ಬಿಟ್ಟು ಬಂದಿರುತ್ತೇವೆ. ಆ ನಂತರ ನಮಗೆ ಅಂಥ ಜೊತೆಗಾರನೊಬ್ಬ ಸಿಕ್ಕಿರುವುದೇ ಇಲ್ಲ.
ಈ ಕಾಲದವರ ಸಮಸ್ಯೆ ಅದು. ನಲುವತ್ತರ ಸುಮಾರಿಗೆ ಡೈವೋರ್ಸು ಮಾಡಿಕೊಂಡವನ ಕಷ್ಟಗಳು ಅವನವು. ಜೊತೆಗಿದ್ದವಳು ಸವಕಲಾಗಿರುತ್ತಾಳೆ ನಿಜ. ಆದರೆ ನಂತರ ಬರುವಾಕೆ ಒಂದೋ ಅವನಿಗೆ ಅರ್ಥವಾಗುವುದಿಲ್ಲ ಅಥವಾ ಅವನಿಗೆ ಏನು ಬೇಕೆಂಬುದೇ ಆಕೆಗೆ ಗೊತ್ತಿರುವುದಿಲ್ಲ. ನಾವೆಲ್ಲ ಅಂಥದ್ದೊಂದು ತೊಳಲಾಟದಲ್ಲೇ ಇದ್ದೇವೆ. ವೀಸೀ, ಡಿವಿಜಿ, ಮಾಸ್ತಿ ತುಂಬ ಹಳೆಯ ಶೈಲಿಯಲ್ಲಿ ಬರೆಯುತ್ತಾರೆ ಅಂತ ಅವರನ್ನು ಓದುವುದನ್ನು ಬಿಟ್ಟಿದ್ದೇವೆ. ನಂತರ ಬಂದವರನ್ನು ದಾಟಿ ಮುಂದೆ ಬಂದಿದ್ದೇವೆ. ಹಳೆಯ ಕಾದಂಬರಿಕಾರರಿಗೂ ಕವಿಗಳಿಗೂ ಬಹಳ ದಿನ ಅಂಟಿಕೊಂಡಿರುವುದು ಕಷ್ಟ. ಆದರೆ ಮುಂದೆ ಯಾರೂ ಕಾಣಿಸುತ್ತಲೇ ಇಲ್ಲ.
ಹೀಗನ್ನಿಸುವುದಕ್ಕೆ ಮತ್ತೊಂದು ನೆಪ ಮತ್ತದೇ ಕೆ. ಎ್.ನರಸಿಂಹಸ್ವಾಮಿ ಬರೆದ ಒಂದು ಕವನ. ಅದನ್ನು ಅನಂತಸ್ವಾಮಿ ಹಾಡಿದ್ದಾರೆ. ಆ ಹಾಡು ಕೇಳುತ್ತಿದ್ದಂತೆ ಮನಸ್ಸು ತಲ್ಲಣಿಸುತ್ತದೆ. ಯಾವುದೋ ಪತ್ರಿಕೆಯಲ್ಲೋ ಸಂಕಲನದಲ್ಲೋ ಸುಮ್ಮಗೆ ಬಿದ್ದಿರುವ ಒಂದು ಹಾಡು ಹೀಗೆ ಕಾಡತೊಡಗಿದರೆ ಭಯವಾಗುತ್ತದೆ. ಪದಗಳಿಗೆ ನಿಜಕ್ಕೂ ಅಂಥ ಶಕ್ತಿ ಇದೆಯಾ? ಇದನ್ನು ಯಾರನ್ನು ಆವಾಹಿಸಿಕೊಂಡು ಕವಿ ಬರೆದಿರಬಹುದು. ಸ್ವತಃ ಅವರಿಗೇ ಹೀಗೆ ಅನ್ನಿಸಿತ್ತೇ? ಅನ್ನಿಸಿದ್ದೇ ಅನುಭವಿಸಿದ್ದೇ ಕಂಡದ್ದೇ ಅಥವಾ ಕೇಳಿದ್ದೇ? ಕೇಳಿದ್ದನ್ನೋ ಕಂಡಿದ್ದನ್ನೋ ಹೀಗೆ ಬರೆಯುವುದು ಯಾರಿಗಾದರೂ ಸಾಧ್ಯವೇ?
-2-
ನಕ್ಕಹಾಗೆ ನಟಿಸಬೇಡ; ನಕ್ಕುಬಿಡು ಸುಮ್ಮನೆ
ಬೆಳಕಾಗಲಿ ನಿನ್ನೊಲವಿನ ಒಳಮನೆ.
ಎನ್ನುತ್ತಾ ಹಾಡು ಶುರುವಾಗುತ್ತದೆ. ಮೊದಲ ಸಾಲಲ್ಲೇ ಎಲ್ಲ ನಾಟಕೀಯತೆಯನ್ನೂ ತೋರಿಕೆಯನ್ನೂ ಕಿತ್ತೆಸೆಯುವ ಮಾತಿದೆ. ನಕ್ಕಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ.
ಹಾಗೆ ಸುಮ್ಮನೆ ನಗುವುದಕ್ಕೆ ಸಾಧ್ಯವೇ? ಅಷ್ಟಕ್ಕೂ ಆಕೆ ನಕ್ಕಹಾಗೆ ನಟಿಸಿದ್ದು ಯಾಕೆ? ಆ ನಟನೆಗೆ ಕಾರಣವಾದ ಘಟನೆ ಏನಿರಬಹುದು? ಹೀಗೆ ದಾಂಪತ್ಯದ ಪ್ರಶ್ನೆಗಳನ್ನೇ ಅದು ಅಲೆಯಲೆಯಾಗಿ ಎಬ್ಬಿಸುತ್ತಾ ಹೋಗುತ್ತದೆ. ನಾವು ಅಧೀರರಾಗುತ್ತಾ ಹೋಗುತ್ತೇವೆ. ಮತ್ತೊಂದು ಪ್ರಶ್ನೆ ಅಚಾನಕ ಕಣ್ಣಮುಂದೆ ಮೂಡಿಬಂದು ಕಂಪಿಸುತ್ತೇವೆ;
ಹಾಗಿದ್ದರೆ ಅವಳೂ ನಕ್ಕಹಾಗೆ ನಟಿಸಿದ್ದಳೇ? ಅವನ ನಗುವೂ ನಟನೆಯೇ?
ಅಲ್ಲಿಂದ ಮುಂದಕ್ಕೆ ಬಂದರೆ ಎರಡು ಸುರಳೀತ ಸಾಲುಗಳು. ಯಾವ ಅಪಾಯವನ್ನೂ ಮಾಡದ ಸುಲಲಿತ ದ್ವಿಪದಿ;
ನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ
ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ.

ಹೋಗಲಿ... ಯಾರು ಬೇಕಾದರೂ ಬರೆಯಬಹುದು ಇವನ್ನು. ಅಬ್ಬಬ್ಬಾ ಅಂದರೆ ಹಸಿರು ಕನಸಿನಲ್ಲಿ ಮಲ್ಲಿಗೆ ಅರಳಲಿ ಅಂದದ್ದನ್ನು ಮೆಚ್ಚಬಹುದು. ಹಸಿರಬಳ್ಳಿಯಲ್ಲಿ ಮಲ್ಲಿಗೆ ಅರಳುವುದಕ್ಕೆ ಸಂಕೇತ ಎಂದುಕೊಳ್ಳಬಹುದು. ಅದರ ಮುಂದಿನೆರಡು ಸಾಲುಗಳಲ್ಲೂ ಅಂಥದ್ದೇ ಹಾರೈಕೆ. ಆದರೆ ಅದರಾಚೆಗೆ ಮತ್ತೆರಡು ಮನಕದಡುವ ಸಾಲು;
ನೀನೆಲ್ಲೂ ನಿಲ್ಲಬೇಡ: ಹೆಜ್ಜೆ ಹಾಕು ಬೆಳಕಿಗೆ;
ಚಲಿಸು ನಲ್ಲೆ. ಸೆರಗ ಬೀಸಿ ಮೌನದಿಂದ ಮಾತಿಗೆ.
ಅಂದರೆ ಅವಳು ಮೌನವಾಗಿದ್ದಳು. ಅವರಿಬ್ಬರ ನಡುವೆ ಮಾತು ಮರೆಯಾಗಿದೆ. ಅಂಥದ್ದೇನೋ ನಡೆದಿದೆ. ಅಷ್ಟು ಗಾಢವಾದದ್ದೇನೋ ನಡೆಯದೇ ಹೋದರೆ ಅಲ್ಲಿ ಮೌನ ಹರಳುಗಟ್ಟುತ್ತಲೇ ಇರಲಿಲ್ಲ. ಯಾಕೆಂದರೆ ಅವನು ಹೇಳುವ ಪ್ರಕಾರ ಅವಳು ಭಾವಕಿ;
ನಿನ್ನ ಹಾಗೆ ನಿನ್ನೊಲವಿನ ಚಿಲುಮೆಯಂತೆ ಹನಿಗಳು;
ಹತ್ತಿರದಲೆ ಎತ್ತರದಲಿ ನನ್ನ ನಿನ್ನ ಮನೆಗಳು.
ನೀನು ಬಂದ ದಿಕ್ಕಿನಿಂದ ತಂಗಾಳಿಯ ಪರಿಮಳ;
ಹೂವರಳಿತು ಹಿಗ್ಗಿನಿಂದ ಹಾದಿಗುಂಟ ಎಡಬಲ.
ಈ ಸಾಲುಗಳನ್ನು ಓದುತ್ತಿದ್ದ ಹಾಗೆ ಅವರಿಬ್ಬರ ನಡುವೆ ಅಂಥದ್ದೇನೂ ನಡೆದಿರಲಾರದು ಅನ್ನಿಸುತ್ತದೆ. ಅಂಥ ಒಳ್ಳೆ ಮನಸ್ಸಿನ ಹುಡುಗಿ ಮುನಿಸಿಕೊಳ್ಳಬಾರದು!
ಆದರೆ ಮುಂದಿನ ಸಾಲುಗಳ ವೈರುದ್ಧ್ಯ ಬೆಚ್ಚಿಬೀಳಿಸುತ್ತದೆ;
ಜತೆಯಲಿದ್ದು ನೀನದೇಕೆ ಹಿಂದೆ ಬಿದ್ದೆ, ತಿಳಿಯದು:
ಮಲ್ಲಿಗೆಯನೆ ಮುಡಿದ ನೀನು ಉಟ್ಟ ಸೀರೆ ಬಿಳಿಯದು.
ಇಲ್ಲಿ ಶೋಕ ಢಾಳಾಗಿ ಕಾಣಿಸುತ್ತದೆ. ಅವನು ತಪ್ಪು ಮಾಡಿದ್ದಾನೆ. ಅವಳನ್ನು ದಾಟಿ ಮುಂದಕ್ಕೆ ಹೋಗಿದ್ದಾನೆ. ಆಕೆಯೂ ಜೊತೆಗೆ ಬರುತ್ತಿದ್ದಾನೆ ಅಂದುಕೊಂಡಿದ್ದಾನೆ. ಆದರೆ ಅವಳು ಯಾಕೋ ಹಿಂದಕ್ಕೆ ಬಿದ್ದಿದ್ದಾಳೆ. ಹಾಗೆ ಹಿಂದಕ್ಕೆ ಬಿದ್ದದ್ದು ಉದ್ದೇಶಪೂರ್ವಕವಾಗಿ ಅನ್ನುವುದಕ್ಕೆ ಸಾಕ್ಪಿ; ಅವಳು ಉಟ್ಟ ಬಿಳಿಯ ಸೀರೆ. ಮುಡಿದ ಮಲ್ಲಿಗೆ. ಆರಂಭದಲ್ಲಿ ಹಸಿರು ಕನಸಲ್ಲಿ ಮಲ್ಲಿಗೆ ಅರಳಲಿ ಅಂದಿದ್ದ ಕವಿ, ಇಲ್ಲಿ ಬಣ್ಣಗಳಲ್ಲೇ ವಿಷಾದದ ಸೂಚನೆ ಕೊಡುತ್ತಾನೆ.
ಇಲ್ಲಿ ಅರೆಕ್ಪಣ ನಿಲ್ಲಿ. ಒಬ್ಬ ಕವಿಯನ್ನು ಒಮ್ಮೆಯಾದರೂ ಸಮಗ್ರವಾಗಿ ಓದಿದಾಗಷ್ಟೇ ಅವನು ಪೂರ್ತಿ ಅರ್ಥವಾಗುತ್ತದೆ. ಜತೆಯಲಿದ್ದು ನೀನದೇಕೆ ಹಿಂದೆ ಬಿದ್ದೆ ತಿಳಿಯದು ಅನ್ನುವ ಕವಿ ತನ್ನ ಹಿಂದಿನ ಒಂದು ಪದ್ಯದಲ್ಲಿ ಹೇಳಿದ ಮಾತು ಗಮನಿಸಿ;
ಬೆಟ್ಟಗಳ ನಡುವೆ ಸಾಗುವ ದಾರಿ ಸುಖವಲ್ಲ;
ಸೀಗೆ ಮೆಳೆಯಲಿ ಸದ್ದು; ಹಾವು ಹರಿದು.
ಗೋಮೇಧಿಕದ ಕೆನ್ನೆ-ಬೆಳಕು ತಣ್ಣಗೆ ಹೊಳೆದು
ನನ್ನ ಹಿಡಿಯೊಳಗಿತ್ತು ನಿನ್ನ ಬೆರಳು.
ಹಾಗಿದ್ದರೆ ಆ ಬೆರಳನ್ನು ಅವನೆಲ್ಲಿ ಬಿಟ್ಟ. ಅವಳೇಕೆ ಹಿಂದಕ್ಕುಳಿದಳು. ಮತ್ತೆ ಅವರು ಒಂದಾಗುತ್ತಾರಾ? ಎಷ್ಟು ದಿನ ಈ ಒಂಟಿಪಯಣ? ಮುಂದಿನ ಸಾಲಲ್ಲೇ ಉತ್ತರವೂ ಇದೆ;
ಬಾ ಹತ್ತಿರ, ಬೆರಳ ಹಿಡಿದು, ಮುಂದೆ ಸಾಗು ಸುಮ್ಮನೆ.
ನಕ್ಕುಬಿಡು, ನೋಡುತ್ತಿದೆ ಲೋಕವೆಲ್ಲ ನಮ್ಮನೆ
.
ಹಾಗಿದ್ದರೆ ಒಂದು ಹಂತ ಕಳೆದ ನಂತರ ಒಂದಾಗುವುದು ಲೋಕದ ಕಣ್ಣಿಗೆ ಸುಖಿಗಳಾಗಿ ಕಾಣುವುದಕ್ಕಷ್ಟೇ ಇರಬಹುದಾ? ಇಲ್ಲದೇ ಹೋದರೆ ಕವಿ ಹಾಗೇಕೆ ಹೇಳಿದ. ಆರಂಭದಲ್ಲೇ ಹೇಳಿದ ಸಾಲಿಗೂ ಇದಕ್ಕೂ ಅದೆಂಥ ವಿರೋಧಾಬಾಸ. ನಕ್ಕಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ ಅಂದವನು ಈಗ ನಕ್ಕುಬಿಡು ಲೋಕವೆಲ್ಲ ನೋಡುತ್ತಿದೆ ನಮ್ಮನೆ ಅನ್ನುತ್ತಿದ್ದಾನಲ್ಲ. ಲೋಕದ ಕಣ್ಣಿಗಷ್ಟೇ ನಗುವುದಾಗಿದ್ದರೆ ನಕ್ಕಹಾಗೆ ನಟಿಸಿದರೆ ಸಾಕಲ್ಲ?
ಮತ್ತೆ ಹಿಂದಕ್ಕೆ ಹೋಗಬೇಕು;
ಕೆನ್ನೆಕೆನ್ನೆಯೊಂದು ಮಾಡಿ
ನಗುವ ನನ್ನ ನಿನ್ನ ನೋಡಿ
ಕನ್ನಡಿಯಲಿ ಒಂದು ಜೋಡಿ
ನಕ್ಕುಬಿಡಲಿ. ಒಮ್ಮೆ ನಗು

ಎಂದಿದ್ದ ಕವಿಯ ಭಾವ ಈಗ ಹೀಗೇಕೆ ಬದಲಾಯಿತು?
-3-
ಒಬ್ಬ ಕವಿಯನ್ನು ಇಟ್ಟುಕೊಂಡು ನಮ್ಮ ನಡವಳಿಕೆಗಳಿಗೆ ವರ್ತನೆಗಳಿಗೆ ಅರ್ಥ ಹುಡುಕುತ್ತಾ ಹೋಗಬಹುದು. ಅದು ಕಷ್ಟದ ಕೆಲಸವೇನಲ್ಲ. ಕನ್ನಡದಲ್ಲೂ ಇಂಗ್ಲಿಷಿನಲ್ಲೂ ಅಂಥ ಅನೇಕ ಕವಿಗಳು ಸಿಗುತ್ತಾರೆ. ಷೇಕಪಿಯ್ನ ಸಾನೆಟ್ಟುಗಳನ್ನೂ ವರ್‌‌ಸವರ್ತನ ಪದ್ಯಗಳನ್ನೂ ಇಟ್ಟುಕೊಂಡು ನೋಡಿದರೆ ಅವರ ಕವಿತೆಗಳು ಅವರ ಜೀವನಚರಿತ್ರೆಯ ಪುಟಗಳಂತೆ ಇರುವುದು ಗೋಚರವಾಗುತ್ತದೆ. ಶೆಲ್ಲಿ ಕೂಡ ಕೇಳುವುದು ಅದೇ ಪ್ರಶ್ನೆಯನ್ನು;
Nothing in the world is single
All things by a law devine
In one another's being mingle
Why not I with thine?
ಮತ್ತೆ ಕೆ. ಎಸ್.ನ. ಬರೆದ ಮೇಲಿನ ಪದ್ಯಕ್ಕೇ ವಾಪಸ್ಸು ಬಂದರೆ, ಅವರದೇ ಮತ್ತೊಂದು ಕವಿತೆ ಇದ್ದಕ್ಕಿದ್ದಂತೆ ನೆನಪಾಗುತ್ತದೆ. ಈ ನಕ್ಕಹಾಗೆ ನಟಿಸಿದ್ದಕ್ಕೆ ಕಾರಣ ಅದೇ ಇರಬಹುದಾ ಅನ್ನುವ ಅನುಮಾನ ಮೂಡುತ್ತದೆ. ಈ ಸಾಲುಗಳನ್ನು ನೋಡಿ;
ಹಾರಿತೆನ್ನ ಹೃದಯಭಂಗ ಬೇರೆ ಹೂವ ನೆರಳಿಗೆ.
ಜ್ವಲಿಸಿತೆನ್ನ ಅಂತರಂಗ ಬೇರೆ ಕಣ್ಣ ಹೊರಳಿಗೆ.
ಬೇರೆ ಹೂವೆ ಕಣ್ಣತುಂಬ ಭಾರವಾಗಿ ಅರಳಿದೆ
ಬೇರೆ ಬಾನ ಚಂದ್ರಬಿಂಬ ನನ್ನ ದಾರಿಗುರುಳಿದೆ.
ತೆಂಗುಗರಿಗಳ ನಡುವೆ ತುಂಬಚಂದಿರ ಬಂದು ಬೆಳ್ಳಿಹಸುಗಳ ಹಾಲ ಕರೆಯುವಂದು ಅಂಗಳದ ನಡುವೆ ೃಂದಾವನದ ಬಳಿ ನಿಂತು ಹಾಡಿದ ಜೋಡಿಗೆ ಇವತ್ತು ಇಬ್ಬರು ಚಂದ್ರಮರು. ಅವಳ ಚಂದಿರನೇ ಬೇರೆ; ಇವನದೇ ಬೇರೆ. ಅವನ ಒಳಪುಟದಲ್ಲಿ ಅವಳ ಸುದ್ದಿಯೇ ಇಲ್ಲ.
ಬೇರೆ ದನಿಯೇ ಓಗೊಡುತಿದೆ ನಿನ್ನ ಮಾತಿನ ಮರೆಯಲಿ
ನಿನ್ನ ಹೆಸರೇ ಅಳಿಸಿಹೋಗಿದೆ ಯಾವ ಪುಟವನೇ ತೆರೆಯಲಿ.

ಯಾಕೆ ಹೀಗಾಯಿತು? ಅದೇ ಪ್ರಶ್ನೆಯನ್ನು ಅವನು ಕೇಳಿಕೊಳ್ಳುತ್ತಾನೆ. ಇಡೀ ಪದ್ಯದಲ್ಲಿ ಗಮನಿಸಿ ನೋಡಿದರೂ ಆಕೆ ಒಂದು ಮಾತನ್ನೂ ಆಡುವುದಿಲ್ಲ. ಇಲ್ಲಿ ಮುನಿಸಿಕೊಳ್ಳುವವನೂ ಅವನೇ, ಒಲಿಸಿಕೊಳ್ಳುವವನೂ ಅವನೇ. ಬೆರಳ ಕೊಟ್ಟವನೂ ಅವನೇ, ಕೊರಳ ಕೊಯ್ದವನೂ ಅವನೆ? ಕೇಳುತ್ತಾನೆ; ನಗೆಯ ಬದಲು ನಾಳೆಯಿಂದ ಕಂಬನಿಯ ತರಂಗವೇ?
ಆಕೆಗೆ ಬೇಸರವಾಗಿದ್ದಕ್ಕೂ ಅವನಿಗೆ ಖುಷಿಯಾಗಿದೆಯೇ? ಕವಿತೆಯ ಸಾಲುಗಳಲ್ಲಿರುವ ಲವಲವಿಕೆ ಕಂಡಾಗ ಹಾಗನ್ನಿಸುತ್ತದೆ. ಬೇಂದ್ರೆಯ ವಿಷಾದಗೀತೆಗಳ ಆರ್ದ್ರತೆ ಇಲ್ಲಿಲ್ಲ. ಇಲ್ಲಿ ನೇರವಾಗಿಯೇ ಕೇಳುತ್ತಾನೆ ಆತ;
ಕುಡಿದು ಬಿಡುವೆಯ ಕಣ್ಣಿನಿಂದಲೆ?
ನಿನ್ನ ಪ್ರೀತಿಗೆ ದಾಹವೆ?
ನಕ್ಕು ಸರಿವೆಯ ಸ್ನೇಹದಿಂದಲೇ?
ನಕ್ಕು ವರುಷಗಳಾಗಿವೆ!
ಅಂದರೆ ಈ ಜಗಳ ತೀರ ಹಳೆಯದೇ. ನಕ್ಕು ವರುಷಗಳಾಗಿದೆ ಅನ್ನಬೇಕಿದ್ದರೆ ಅದಕ್ಕೊಂದು ಹಿನ್ನೆಲೆ ಇರಲೇಬೇಕು. ಅದಲ್ಲಿದೆ ಅಂತ ಹುಡುಕಿಕೊಂಡು ಹೊರಟರೆ ಮತ್ತೊಂದು ಕವಿತೆ ಸಿಕ್ಕೀತೇ?
ಅದನ್ನು ಇನ್ನೊಮ್ಮೆ ನೋಡಬೇಕು. ಅದಕ್ಕೂ ಮುಂಚೆ ಈ ಜಗಳ ಮುಗಿಸಬೇಕು.
ಆದರೆ ಅದು ಮುಗಿಯುವ ಹಾಗೆ ಕಾಣುತ್ತಿಲ್ಲ;

ನಿನ್ನ ಜೊತೆಗೂ ನಾನು ನಗಲೆ, ಯಾರೋ ಕರೆದಂತಾಗಿದೆ.
ಬೆರಳನಿಟ್ಟು ತುಟಿಯ ಮೇಲೆ ಯಾರೊ ತಡೆದಂತಾಗಿದೆ.
ನಗುವೆಯಲ್ಲೆ ನಲ್ಲೆ ನೀನು ಮುಡಿಯ ತುಂಬ ಮಲ್ಲಿಗೆ
ಹೋಗಿಬರಲೆ ಈಗ ನಾನು, ಕೇಳಬೇಡ, ಎಲ್ಲಿಗೆ?


-4-

ಸಮಗ್ರವಾಗಿ ಒಳಗೊಳ್ಳುವುದು ಒಂದು ಕ್ರಮ. ಅಷ್ಟಷ್ಟನ್ನೇ ಮೆಚ್ಚಿಕೊಳ್ಳುವುದು ಮತ್ತೊಂದು ಕ್ರಮ. ಕನ್ನಡದ್ದು ಸಮಗ್ರವಾಗಿ ಒಳಗೊಳ್ಳುವ ಮನಸ್ಸು. ಕುಮಾರವ್ಯಾಸನೇ ಇರಲಿ, ಪಂಪನೇ ಇರಲಿ ನಮಗೆ ಆತ ಇಷ್ಟವಾಗುವುದು ಸಮಗ್ರವಾಗಿಯೇ. ಒಬ್ಬ ಕವಿಯ ಬಗ್ಗೆ ಇಬ್ಬಗೆಯ ಅಭಿಪ್ರಾಯ ಹೊರಹೊಮ್ಮಿದ ಉದಾಹರಣೆ ಹಳೆಗನ್ನಡದಲ್ಲಂತೂ ಇಲ್ಲ.
ಹಾಗೆ ಒಬ್ಬ ಕವಿಯ ಜೀವನಕ್ರಮವನ್ನೂ ನಮ್ಮವರು ಗಮನಿಸಲಿಲ್ಲ. ಇವತ್ತಿಗೂ ಕುಮಾರವ್ಯಾಸ ಏನು ತಿನ್ನುತ್ತಿದ್ದ? ಅವನಿಗೆ ಎಷ್ಟು ಮಂದಿ ಹೆಂಡಿರಿದ್ದರು? ಅವನ ಶತ್ರುಗಳು ಯಾರಿದ್ದರು ಎಂಬುದು ನಮಗ್ಯಾರಿಗೂ ಗೊತ್ತಿಲ್ಲ. ಬಹುಶಃ ಸಂಶೋಧಕರಿಗೆ ಗೊತ್ತಿರಬಹುದು.
ಮೇಲಿನ ಎರಡು ಕವಿತೆಗಳಲ್ಲೂ ಅಷ್ಟೇ. ಅದನ್ನು ಕೆಎ್ನ ಅನುಭವಿಸಿ ಬರೆದರೋ ಅನ್ನುವುದು ಮುಖ್ಯವಾಗುವುದಿಲ್ಲ. ನಮಗೆ ಅಂಥದ್ದೊಂದು ಅನುಭವ ಎದುರಾದಾಗ ಆ ಕವಿತೆ ನೆನಪಾಗುತ್ತದೆ. ಮನಸ್ಸು ಹಗುರಾಗುತ್ತದೆ. ದಾಂಪತ್ಯದ ನಡುಹಗಲಿಗೆ ಒಡ್ಡಿಕೊಂಡಾಗ;
ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿತ್ತು ಅರ್ಧದಾರಿ
ಹೂಬಳ್ಳಿಯಿಂದ ಹೆಮ್ಮರನ ಎದೆಗೆ ಬಿಳಿಬಿಳಿಯ ಹಕ್ಕಿ ಹಾರಿ!
ಎಂಬ ಸಾಲು ಎಲ್ಲೋ ಕೇಳಿದ್ದು ಮನಸ್ಸಿಗಷ್ಟೇ ಮತ್ತೆ ಕೇಳಿಸುತ್ತದೆ. ನಡೆದ ದಾರಿಯ ತಿರುಗಿ ನೋಡಬಾರದು ಏಕೆ ಅನ್ನುವುದು ಹೊಳೆಯುತ್ತದೆ. ಲೋಕವೆಲ್ಲ ನೋಡುತ್ತಿದೆ ನಮ್ಮನೆ ಅಂತ ನಗುವುದಕ್ಕಿಂತ ಸುಮ್ಮನೆ ನಗುವುದೆ ಪ್ರೀತಿ ಅನ್ನುವುದು ತಿಳಿಯುತ್ತದೆ.

Saturday, October 13, 2007

ಅವನು ಮರ, ನಾನು ಕೋತಿ

ಈ ಪ್ರಸಂಗ ಬೆಳಗೆರೆ ಕೃಷ್ಣಶಾಸ್ತ್ರಿಯವರ ಹಾಸ್ಯಪ್ರಜ್ಞೆಗೆ, ವಿನಯವಂತಿಕೆಗೆ ಮತ್ತು ಪ್ರೀತಿಗೆ ಸಾಕ್ಪಿ. ಒಂದು ಅಭಿನಂದನಾ ಸಮಾರಂಭದಲ್ಲಿ ಮಾತಾಡುತ್ತಾ ಕೃಷ್ಣಶಾಸ್ತ್ರಿಯವರು ಹೇಳಿದ್ದರಂತೆ;
`ನಾನೂ ಸುಬ್ಬಣ್ಣಿ ಒಟ್ಟಿಗೇ ಎಸ್ಸೆಸ್ಸೆಲ್ಸಿ ಪರೀಕ್ಪೆ ಕಟ್ಟಿದ್ವಿ. ಒಟ್ಟಿಗೆ ರಿಸಲ್ಟು ನೋಡಲು ಹೋಗಿದ್ದೆವು. ನನಗೆ ಮ್ಯಾಥಮೆಟಿಕ್ಸ್ ನಲ್ಲಿ 38 ನಂಬ್ ಬಂದು ಜಸ್ಟ್ ಪಾಸಾಗಿದ್ದೆ. ಸುಬ್ಬಣ್ಣಿಗೆ 16 ಮಾರ್ಕ್ ಬಂದಿತ್ತು' ಎಂದು ಹೇಳುತ್ತಿದ್ದಂತೆ ಸುಬ್ಬಣ್ಣ ಎದ್ದು ನಿಂತು ಜನರಿಗೆ ಕೈ ತೋರಿಸಿ `ಇವನು ಸುಳ್ಳು ಹೇಳ್ತಿದ್ದಾನೆ' ಎಂದ.
`ಹಾಗಾದ್ರೆ ನಿಜವನ್ನು ನೀನೇ ಹೇಳು' ಎಂದೆ.
`ನನಗೆ ಸೊನ್ನೆ ಬಂದಿತ್ತು' ಎಂದ. ಜನರೆಲ್ಲ ಕೇಕೆ ಹೊಡೆದು ನಕ್ಕರು.
ಕೊನೆಯಲ್ಲಿ ` ನಾನು ಸುಬ್ಬಣ್ಣಿ ಚಿಕ್ಕಂದಿನಲ್ಲಿ ನಮ್ಮ ಜಮೀನಿನಲ್ಲಿದ್ದ ಹುಣಸೇ ಮರ ಹತ್ತಿ ಮರಕೋತಿ ಆಟವಾಡುತ್ತಿದ್ದೆವು. ಆ ನೆನಪು ಈಗಲೂ ನನ್ನ ಕಣ್ಣಮುಂದಿದೆ. ಆದರೆ ಸುಬ್ಬಣ್ಣಿ ಬರ್ತಾ ಬರ್ತಾ ಮರವೇ ಆಗಿ ಬೆಳೆದುಬಿಟ್ಟ. ನಾನು ಕೋತಿಯಾಗಿ ಮರದಲ್ಲೇ ಉಳಿದಿದ್ದೀನಿ' ಎಂದು ಮಾತು ಮುಗಿಸಿದೆ.
ಇಲ್ಲಿ ಸುಬ್ಬಣ್ಣಿ ಅಂದರೆ ತ.ರಾ.ಸು.

Friday, October 12, 2007

ನಿಜವಾದ ಜ್ಯೋತಿಷಿಗಳು ಇಲ್ಲಿದ್ದಾರೆ


ಎಸ್. ಸುರೇಂದ್ರನಾಥ್

ಅವನು ಬೀಡಿ ಸೇದುತ್ತಾ ನಿಂತಿದ್ದ
ಎಸ್ ಪಿ ಬಾಲಸುಬ್ರಮಣ್ಯಂಗೆ ರೆಕಾರ್ಡಿಂಗ್ ಇತ್ತು. ಮದ್ರಾಸಿನ ವಾಹಿನಿ ಸ್ಟುಡಿಯೋದಲ್ಲಿ. ಕೆ ಬಾಲಚಂದರ್ ಅವರ ಅವಳ್ ಒರು ತೊಡರ್ ಕತೈ ಸಿನೆಮಾ. ರೆಕಾರ್ಡಿಂಗ್ ಮಧ್ಯೆ ಬಿಡುವು ಇತ್ತೋ ಏನೋ, ಇಬ್ಬರೂ ಬಾಲುಗಳು ಹಾಗೇ ಹೊರಗೆ ಕೂತಿದ್ರು. ಒಂದನೇ ಬಾಲು ಅಲ್ಲೇ ಒಂದು ದಿಕ್ಕಿಗೆ ಕೈ ತೋರಿಸಿ, ಅಲ್ಲೊಬ್ಬ ನಿಂತಿದಾನೆ ನೋಡು ಅವನ್ನ. ಎರಡನೇ ಬಾಲು ಆ ಕಡೆ ನೋಡಿದ್ರು. ಅಲ್ಲಿ ಒಂದೈದಾರು ಹುಡುಗರು ನಿಂತಿದ್ರು. ಯಾರನ್ನ ನೋಡ್ಲೀ ಅಂದ್ರು ಎರಡನೇ ಬಾಲು. ಅಲ್ಲಿ ಬೀಡಿ ಸೇದ್ತಾಯಿದಾನಲ್ಲ ಅವನು ಅಂದ್ರು ಒಂದನೇ ಬಾಲು. ಎರಡನೇ ಬಾಲು ನೋಡಿದ್ರು. ನಿಂತಿದ್ದ ಅಲ್ಲೊಬ್ಬ. ಸ್ವಲ್ಪ, ಸ್ವಲ್ಪ ಏನು ಭಾಳಾ ಕಪ್ಪು, ಸಿನೆಮಾ ಜಗತ್ತಿನ ಅಳತೆಯ ಪ್ರಕಾರ ನೋಡೋದಾದ್ರೆ. ಬೀಡಿ ಸೇದ್ತಾ ಸುತ್ತ ನಿಂತಿದ್ದೋರ ಜತೆ ತಮಾಷೆ ಮಾಡ್ಕೊಂಡಿದ್ದ. ಯಾವುದೇ ರೀತಿಯಲ್ಲಿ ನೋಡಿದ್ರೂ ಸಿನೆಮಾಗೆ ಲಾಯಕ್ಕಾದ ವ್ಯಕ್ತಿ ಅಲ್ಲವೇ ಅಲ್ಲ. ಎರಡನೇ ಬಾಲು ಒಂದನೇ ಬಾಲು ಕಡೆ ನೋಡಿದ್ರು. ನನ್ನ ಸಿನೆಮಾದಲ್ಲಿ ಒಂದೈದೋ ಆರೋ ನಿಮಿಷದ ರೋಲ್ ಇದೆ. ಆದ್ರೆ ಇವತ್ತೇ ಹೇಳ್ತೀನಿ, ಇವತ್ತು ಹಿಂಗಿದಾನಲ್ಲ ಅವನು, ಒಂದು ಎರಡು ವರ್ಷ ಬಿಟ್ಟು ನೋಡು. ಇಡೀ ಸಿನೆಮಾ ಪ್ರಪಂಚವನ್ನೇ ಆಳ್ತಾನೆ ಅವನು. ಎರಡನೇ ಬಾಲು, ಅಂದರೆ ಸಿಂಗರ್ ಬಾಲೂಗೆ ಅರ್ಥಾನೇ ಆಗಲಿಲ್ಲ. ಆದ್ರೆ ಒಂದನೇ ಬಾಲು ಮಾತು ಅದು. ಎರಡೇ ವರ್ಷ. ಇಡೀ ತಮಿಳು ಸಿನೆಮಾ ಯಾಕೆ ಇಡೀ ದಕ್ಷಿಣ ಭಾರತದ ಸಿನೆಮಾ ಆಳಿದ ದೊರೆ ಆತ. ಇನ್ನೂ ಅದೇ ಉತ್ತುಂಗದಲ್ಲಿ ಮೆರೀತಾ ಇರೋ ಚಕ್ರವರ್ತಿ. ಇನ್ಯಾರು ರಜನೀಕಾಂತ. ಇದು ಕೆ ಬಾಲಚಂದರ್ ಖದರ್ರು. ಬೆಳೆಯೋ ಮೊಳಕೆಯಲ್ಲೇ ಗಿಡದ ಗುಣ ಕಂಡು ಹಿಡಿಯೋ ಪರಿ ಇದು.
ಇನ್ನೂ ನಲವತ್ತು ವರುಷ ಹಾಡ್ತೀಯ..
ಈ ಎರಡನೇ ಬಾಲೂ ಕಥೆಯೂ ಅದೇ. ಯಾವುದೋ ಒಂದು ಸಿನೆಮಾ ಹಾಡು ರೆಕಾರ್ಡ್ ಮಾಡಬೇಕಿತ್ತು. ಮೊದಲನೇ ಹಾಡು. ಕೋದಂಡಪಾಣಿ ಸಂಗೀತ ನಿರ್ದೇಶಕರು. ಬಾಲು ಹಾಡಿದ್ರು. ಯಾಕೋ ತಮಗೇ ಇಷ್ಟವಾಗಲಿಲ್ಲ. ಎಲ್ಲೋ ಸ್ವಲ್ಪ ಶ್ರುತಿ ತಪ್ಪಿದೀನಿ. ಎಲ್ಲೋ ಸ್ವಲ್ಪ ಭಾವನೆ ಕಮ್ಮಿಯಾಗಿದೆ ಅಂತ ಒದ್ದಾಡಿಕೋತಾನೇ ಇದ್ರು. ಆಗ ಕೋದಂಡಪಾಣಿ ಹೇಳಿದ್ರಂತೆ. ಅಯ್ಯಾ ಮರೀ, ಇನ್ನೂ ನಲವತ್ತು ವರ್ಷ ನೀನು ಹಾಡ್ತಾನೇ ಇರ್‍ತೀಯಾ. ಶ್ರದ್ಧೆಯಿಟ್ಕೋ ಅಷ್ಟೇ. ಬಾಲೂಗೆ ಆಗ್ಲೂ ಅರ್ಥವಾಗಿರಲಿಲ್ಲ. ತಮ್ಮಲ್ಲೇನು ಕಂಡ್ರು ಆ ಹೆಸರಾಂತ ಸಂಗೀತ ನಿರ್ದೇಶಕರು. ಶಾಸ್ತ್ರೀಯ ಸಂಗೀತದ ಅಭ್ಯಾಸವಿಲ್ಲ. ಅಪ್ಪನ ಹರಿಕತೆ ಕೇಳಿದ್ದು ಮಾತ್ರ ಗೊತ್ತು. ಸಂಗೀತ ಅಂದ್ರೆ ಹಾಡೋದು ಅಂತ ಮಾತ್ರ ಗೊತ್ತು. ದನಿಯೂ ಅಂಥಾದ್ದೇನಿಲ್ಲ. ಅದ್ಯಾಕೆ ಹೀಗೆ ಹೇಳಿದ್ರು..ಆದರೆ ಇವತ್ತಿಗೂ ಕೋದಂಡಪಾಣಿ ಹೇಳಿದ ಮಾತು ನಿಜ. ಸಾವಿರದ ಒಂಬೈನೂರಾ ಅರವತ್ತರ ಸುಮಾರಿನಿಂದ ಬಾಲು ಹಾಡ್ತಾನೇ ಇದಾರೆ. ಮನೆಮನೆಯಲ್ಲೂ ಬಾಲು ದನಿ ಕೇಳ್ತಾಯಿದೆ. ಬಾಲೂ ಸ್ಟುಡಿಯೋ ಹೆಸರು ಕೋದಂಡಪಾಣಿ ಸ್ಟುಡಿಯೋ. ಸ್ಟುಡಿಯೋಗೆ ಕಾಲಿಟ್ರೆ ಎದುರಾಗೋದು ಕೋದಂಡಪಾಣಿ ಭಾವಚಿತ್ರ. ಆಳೆತ್ತರದ್ದು. ಬಾಲೂ ಇವತ್ತಿಗೂ ಹಾಡೋ ಮುಂದೆ ಒಂದು ಸಾರಿ ಗುರುವನ್ನು ಸ್ಮರಿಸಿ ಹಾಡ್ತಾರೆ. ಅದು ಗುರುದಕ್ಷಿಣೆ.
ಮಮ್ಮುಟ್ಟಿಯ ಭವಿಷ್ಯ ನುಡಿದ ಬಾಲುಮಹೇಂದ್ರ


ಇನ್ನೊಬ್ಬ ಬಾಲು ಕತೆ ಕೇಳಿ. ಬಾಲು ಮಹೇಂದ್ರ. ಬಾಲೂಗೆ ಬೆಂಗಳೂರು ಅಂದ್ರೆ ಭಾಳಾ ಇಷ್ಟ. ಕಬ್ಬನ್‌ಪಾರ್ಕ್‌ನ ಬಾಲೂ ಹಾಗೆ ಚಿತ್ರೀಕರಣ ಮಾಡಿದೋರು ಯಾರೂ ಇಲ್ಲ. ಇದು ನಮ್ಮದೇ ಕಬ್ಬನ್‌ಪಾರ್ಕಾ ಅನ್ನೋ ಹಾಗೆ ತೋರಿಸಿದಾರೆ. ಆ ದಿನಗಳಲ್ಲಿ ಬೆಂಗಳೂರಿನ ಚಾಮುಂಡಿ ಸ್ಟುಡಿಯೋದಲ್ಲಿ ಸಿನೆಮಾ ಮಾಡ್ತಾಯಿದ್ರು. ಜಿ ವಿ ಶಿವಾನಂದ್ ಬಾಲು ಅವರ ಸಹ ನಿರ್ದೇಶಕರು. ಆಗಷ್ಟೇ ಮಗಳಿಗೆ ಮದುವೆ ಮಾಡಿದ್ರು. ಮಗಳ ಮದುವೆಗೆ ರಿಸೆಪ್ಷನ್‌ಗೆ ಬಾಲು ಬಂದಿದ್ರು. ಮಗಳು ಸುಂದರಶ್ರೀ. ಅಳಿಯ ಸೂರಿ. ಇಬ್ಬರನ್ನೂ ಬಾಲು ಚಿತ್ರೀಕರಣಕ್ಕೆ ಕರೆದ್ರು, ಸುಮ್ಮನೇ ಬನ್ನಿ ನೋಡೋಕೆ ಅಂತ. ಅಳಿಯ ಮಗಳನ್ನು ಕರಕೊಂಡು ಶಿವಾನಂದ್ ಚಿತ್ರೀಕರಣಕ್ಕೆ ಹೋದ್ರು. ಶಾಟ್ ಮಧ್ಯೆ ಬಾಲು ಬಿಡುವು ಮಾಡ್ಕೊಂಡು ಮಾತಿಗೆ ಕೂತ್ರು. ಅದೂ ಇದೂ ಮಾತಾಡ್ತಾ ಚಿತ್ರದ ಹೀರೋನ್ನ ಕರೆದು ಎಲ್ಲರಿಗೂ ಪರಿಚಯ ಮಾಡಿಕೊಟ್ರು. ಆತನೂ ಒಂದೈದು ನಿಮಿಷ ಜೊತೆಯಲ್ಲಿದ್ದು ಮತ್ತೆ ತನ್ನ ಜಾಗಕ್ಕೆ ಹೋದ. ಬಾಲು ಮಾತು ಮುಂದುವರೆಸಿದ್ರು. ಥಟ್ಟಂತ ಬಾಲು ಹೇಳಿದ್ರು, ಇವನ್ನ ನೋಡಿ. He will be one of the stars in South India. Just mark my words. He is a wonderful actor. A complete actor. ಚಿತ್ರ ಮುಗೀತು. ಚಿತ್ರ ಯಶಸ್ವಿಯಾಯಿತೋ ಇಲ್ವೋ ಗೊತ್ತಿಲ್ಲ. ಆದರೆ ಹೀರೋ ಮಾತ್ರ ಇಂದಿಗೂ ಒಬ್ಬ ಅದ್ಭುತ ನಟ. ಚಿತ್ರ ಯಾತ್ರಾ. ಭಾಷೆ ಮಲಯಾಳಂ. ನಟ ಮಮ್ಮೂಟಿ. ಚಿತ್ರ ಮುಗೀತು. ಚಿತ್ರ ಯಶಸ್ವಿಯಾಯಿತೋ ಇಲ್ವೋ ಗೊತ್ತಿಲ್ಲ. ಆದರೆ ಹೀರೋ ಮಾತ್ರ ಇಂದಿಗೂ ಒಬ್ಬ ಅದ್ಭುತ ನಟ. ಚಿತ್ರ ಯಾತ್ರಾ. ಭಾಷೆ ಮಲಯಾಳಂ. ನಟ ಮಮ್ಮೂಟಿ.

Thursday, October 11, 2007

ಇನ್ನಿಲ್ಲ


ತಮ್ಮ ಸುತ್ತಮುತ್ತಲ ಮಂದಿ ಸಾಯುತ್ತಿರುವುದನ್ನೂ ದಿನನಿತ್ಯ ಕಾಣುತ್ತಲೇ ಇದ್ದರೂ ತನಗೆ ಸಾವಿಲ್ಲ ಎಂಬಂತೆ ಮನುಷ್ಯ ಬದುಕುತ್ತಾನಲ್ಲ. ಅದೇ ನನ್ನನ್ನು ಅತ್ಯಂತ ಅಚ್ಚರಿಗೊಳಿಸುತ್ತದೆ.
ಯಕ್ಪನ ಪ್ರಶ್ನೆಗೆ ಧರ್ಮರಾಯ ಹೀಗೆ ಉತ್ತರಿಸಿದ ಅನ್ನುತ್ತದೆ ಮಹಾಭಾರತದ ಒಂದು ಆಖ್ಯಾನ. ಸಾವಿನ ಕುರಿತು ನಮ್ಮ ಪುರಾಣಗಳು ಸಾಪೇಕ್ಪವಾಗಿಯಾಗಲೀ ಸಾಂಕೇತಿಕವಾಗಿ ಆಗಲೀ ಸ್ಪಷ್ಟವಾಗಿ ಆಗಲೀ ಹೆಚ್ಚು ಮಾತಾಡಿಲ್ಲ. ಭಾರತೀಯ ಕಲ್ಪನೆಗಳ ಪ್ರಕಾರ ಸಾವು ಎನ್ನುವುದು ಪಾಶ್ಚಾತ್ಯರಷ್ಟು ಅಸ್ಪಷ್ಟವಾದ ಸಂಗತಿಯೇನಲ್ಲ. ನಮ್ಮಲ್ಲಿ ಮೃತ್ಯುವಿಗೂ ಒಬ್ಬ ದೇವತೆ ಇದ್ದಾನೆ. ಅವನನ್ನೂ ನಾವು ಪೂಜಿಸುತ್ತೇವೆ. ಅವನನ್ನು ಕಾಲ ಎಂದು ಕರೆಯುತ್ತೇವೆ. ಮನುಷ್ಯರು ಕಾಲವಾಗುತ್ತಾರೆ. ಸತ್ತ ನಂತರವೂ ಅಲ್ಲಿ ಮತ್ತೊಂದು ಲೋಕವಿದೆ. ಆ ಲೋಕದಲ್ಲಿ ಮತ್ತೆ ಇಂಥದ್ದೋ ಇದಕ್ಕಿಂತ ಸುಖಕರವಾದದ್ದೋ ಕಷ್ಟಕರವಾದದ್ದೋ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಹೀಗೆ ನಮ್ಮ ಕಲ್ಪನೆ ಸಾಗುತ್ತದೆ. ಆದ್ದರಿಂದ ಸಾವು ಅನ್ನುವುದು ಪ್ರತಿಯೊಬ್ಬ ಭಾರತೀಯನ ಪ್ರಜ್ಞೆಯಲ್ಲೂ ಒಂದಲ್ಲ ಒಂದು ರೂಪದಲ್ಲಿ ನೆಲೆಯೂರುತ್ತಲೇ ಇರುತ್ತದೆ. ಕಠೋಪನಿಷತ್ತಿನಲ್ಲಿ ಬರುವ ಕತೆಯಲ್ಲಿ ನಚಿಕೇತ ಎಂಬ ಬಾಲಕ ಯಮನಲ್ಲಿಗೆ ಹೋಗಿ ಅವನನ್ನು ಮೆಚ್ಚಿಸಿ ಮರಳಿ ಬಂದ ಪ್ರಸಂಗವೂ ಇದೆ.
ಹೀಗೆ ನೋಡುತ್ತಾ ಹೋದರೆ ಸಾವು ಪುರಾತನರನ್ನು ಕಂಗೆಡಿಸುವ ಸಂಗತಿಯೇನೂ ಆಗಿರಲಿಲ್ಲ. ಅದು ಅನೇಕರ ಜ್ಞಾನೋದಯಕ್ಕೆ ಕಾರಣವಾಗಿದೆ. ಬುದ್ಧನ ಕತೆಯಲ್ಲಿ ಸಾವಿಲ್ಲದ ಮನೆಯ ಸಾಸಿವೆ ತರುವುದಕ್ಕೆ ಹೇಳಿ ಸಾವು ಸರ್ವಾಂತರ್ಯಾಮಿ ಎಂದು ತೋರಿಸಿಕೊಟ್ಟ ಪ್ರಸಂಗ ಬರುತ್ತದೆ. ಸಾವಿತ್ರಿ ಸಾವಿನ ದವಡೆಯಿಂದ ಗಂಡ ಸತ್ಯವಾನನನ್ನು ಬಿಡಿಸಿಕೊಂಡ ಬಂದ ದಿಟ್ಟ ಹೆಣ್ಣುಮಗಳಾಗಿ ಕಾಣಿಸುತ್ತಾಳೆ.
ಸಾವಿನ ಬಗ್ಗೆ ಅನೇಕರು ಬರೆದಿದ್ದಾರೆ. ನವೋದಯ ಸಾಹಿತ್ಯದ ಧಾಟಿಗೆ ಸಾವು ಅಷ್ಟಾಗಿ ಹೊಂದಿಕೆಯಾಗುತ್ತಿರಲಿಲ್ಲ. ಹೀಗಾಗಿ ಅಲ್ಲಿ ಸಾವು ಕೇವಲ ಪ್ರಾಸಂಗಿಕವಾಗಿ ಬಂದಿದೆ ಅಷ್ಟೇ; ಸರಸ ಜನನ, ವಿರಸ ಮರಣ ಸಮರಸವೇ ಜೀವನ ಎಂಬ ಸಾಲುಗಳಲ್ಲಿ ಸಾವು ಕಾಣಿಸಿಕೊಂಡಾಗ ಅದರ ದುರಂತ ಮತ್ತು ನೋವು ತಟ್ಟುವುದಕ್ಕೆ ಸಾಧ್ಯವೇ ಇಲ್ಲ. ಅದೊಂದು ಸಹಜ ಕ್ರಿಯೆ ಎಂಬಂತೆ ದಾಖಲಾಗುತ್ತದೆಯೇ ಹೊರತು ಅದಕ್ಕೆ ಇಲ್ಲದ ಮಹತ್ವ ಸಿಗುವುದು ಅದೊಂದು ರೂಪಕವಾಗಿ ಆವರಿಸಿಕೊಂಡಾಗ. ಫ್ರಾನ್ಸಿಸ್ ಬೇಕನ್ ನಂಥ ಪ್ರಬಂಧಕಾರರು ಸಾವನ್ನು ಅತೀ ಕಡಿಮೆ ತೊಂದರೆ ಮಾಡುವ ಕೇಡು ಎಂದರೆ, ಇ. ಎಂ. ಫಾರ್ಸ್ಟ್ `ಸಾವು ಮನುಷ್ಯನನ್ನು ನಾಶ ಮಾಡುತ್ತದೆ. ಆದರೆ ಸಾವಿನ ಕುರಿತ ಚಿಂತನೆ ಅವನನ್ನು ಅಮರನನ್ನಾಗಿಸುತ್ತದೆ' ಎಂದು ಬರೆದ. ನಮ್ಮಲ್ಲಿ ಚಿತ್ತಾಲರಿಂದ ಹಿಡಿದು ಬಿಸಿ ದೇಸಾಯಿಯವರ ತನಕ ಪ್ರತಿಯೊಬ್ಬರನ್ನೂ ಸಾವು ಕಾಡಿದೆ. ಸಾವಿನ ಕುರಿತು ಬರೆದವರೆಲ್ಲರೂ ಅದನ್ನು ಮೀರುತ್ತೇವೆ ಎಂಬ ಹಮ್ಮಿನಲ್ಲೇ ಬರೆದಿದ್ದಾರೆ ಅನ್ನಿಸುತ್ತದೆ. ಸಾವಿನ ಎದುರು ವಿನೀತರಾದವರಿದ್ದಾರೆ. ಆದರೆ ಕನ್ನಡ ಸಾಹಿತ್ಯದಲ್ಲಿ ಸಾವು ರೂಪಕವಾಗಿ ಕಾಣಿಸಿಕೊಂಡದ್ದು ನವ್ಯ ಸಾಹಿತ್ಯದ ಹೊತ್ತಿಗೇ ಎಂದು ಕಾಣುತ್ತದೆ. ಅಲ್ಲಿಯ ತನಕ ಬದುಕೇ ಸಾಹಿತ್ಯಕ್ಕೆ ಮುಖ್ಯ ಪ್ರೇರಣೆಯಾಗಿತ್ತು. ಸಾವಿನ ಕುರಿತು ಹೇಳುತ್ತಲೇ ಬದುಕಿನ ಬೆರಗನ್ನು ಹೇಳುವುದಕ್ಕೆ ಯತ್ನಿಸಿದವರಿದ್ದರು.
ತಮಗೆ ಸಾವೇ ಇಲ್ಲ ಎಂಬಂತೆ ಬದುಕಿದವರೆಲ್ಲ ಅವರು ಹುಟ್ಟಿಯೇ ಇರಲಿಲ್ಲ ಎಂಬಂತೆ ಕಣ್ಮರೆಯಾಗಿ ಹೋಗಿದ್ದಾರೆ. ಸಾವು ದೇವರಿಗೆ ನಾವು ಕೊಡಬೇಕಾಗಿರೋ ಸಾಲ ಎಂಬಂತೆ ಬದುಕುವವರಿದ್ದಾರೆ. ದಾಸ ಸಾಹಿತ್ಯದಲ್ಲಿ ಭಕ್ತರು ಬೇಡುವುದು ಬದುಕನ್ನಲ್ಲ ಸಾವನ್ನು. ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ ಎನ್ನುವಾಗ ಕಾಣಿಸುವ ಭಾವವೂ ಅಲ್ಪಮಟ್ಟಿಗೆ ಅದೇ. ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ. ಮುಂದರಿತು ಹರಿಪಾದ ಸೇರುವುದು ಲೇಸು ಎಂಬ ದಾಸವಾಣಿಯಲ್ಲಿ ಈ ಬದುಕಿನ ಕುರಿತು ತುಂಬ ನಿಕೃಷ್ಟವಾದ ಭಾವನೆಯಿದ್ದಂತೆ ಸಾವಿನ ಕುರಿತು ಅಪಾರವಾದ ಗೌರವವೂ ಇದೆ.
ಭಾರತೀಯ ಕಲ್ಪನೆಗಳು ಬೆರಗುಗೊಳಿಸುವುದಕ್ಕೆ ಮತ್ತೊಂದು ಕಾರಣವೂ ಇದೆ. ಸಾವಿನ ನಂತರವೂ ಬದುಕಿದೆ ಅನ್ನುವ ಕಲ್ಪನೆ ಕೆಲವರಿಗೆ ವರ; ಮತ್ತೆ ಕೆಲವರಿಗೆ ಶಾಪ. ಮತ್ತೆ ಹುಟ್ಟದಂತೆ ಮಾಡೋ ತಂದೆ ಅನ್ನುವ ಪ್ರಾರ್ಥನೆಯನ್ನು ನಾವೆಲ್ಲ ಅಪ್ರಜ್ಞಾಪೂರ್ವಕವಾಗಿ ಹಾಡುತ್ತಲೇ ಇರುತ್ತೇವೆ. ಅದೇ ಹೊತ್ತಿಗೆ ಅಮರರಾಗಬೇಕು ಎಂದು ಆಶಿಸುತ್ತೇವೆ. ಈ ದ್ವಂದ್ವವಲ್ಲದ ದ್ವಂದ್ವದಲ್ಲಿ ಭಾರತೀಯ ತತ್ವಶಾಸ್ತ್ರ ಗೆಲ್ಲುತ್ತದೆ.
ಅಮರತ್ವ ಭಾರತೀಯ ಕಲ್ಪನೆ ಅಲ್ಲವೇ ಅಲ್ಲ. ಅದು ನಮ್ಮ ಪುರಾಣಗಳ ಪ್ರಕಾರ ರಾಕ್ಪಸ ಗುಣ. ಕೇವಲ ರಾಕ್ಪಸರು ಮಾತ್ರ ಪುರಾಣಗಳಲ್ಲಿ ಅಮರತ್ವ ಬಯಸುತ್ತಾರೆ. ಭೀಷ್ಮರಿಗೂ ಇಚ್ಛಾಮರಣಿಯಾಗುವ ವರವೂ ಸಪ್ತಚಿರಂಜೀವಿಗಳಿಗೆ ಅಮರತ್ವವೂ ಶಾಪವಾಗಿ ಪರಿಣಮಿಸಿದ್ದಕ್ಕೆ ಸಾಕ್ಪಿ ಮಹಾಭಾರತದಲ್ಲೇ ಸಿಗುತ್ತದೆ. ಇಚ್ಛಾಮರಣಿ ಎನ್ನುವ ಕಲ್ಪನೆಯೇ ಎಷ್ಟು ಪ್ರಖರವಾಗಿದೆ ನೋಡಿ. ಒಬ್ಬ ವ್ಯಕ್ತಿ ತನ್ನ ಸಾವು ಯಾವಾಗ ಘಟಿಸಬೇಕು ಎನ್ನುವುದು ನಿರ್ಧರಿಸಬಹುದಾದ ಶಕ್ತಿ ಅದು. ಇಚ್ಛಾಮರಣ ಆತ್ಮಹತ್ಯೆಯಲ್ಲ; ಅದೊಂದು ನೀಗಿಕೊಳ್ಳುವ ಕ್ರಮ. ನಿರ್ವಾಣಕ್ಕೆ ಹತ್ತಿರವಾದದ್ದು.
ಹಾಗೆ ನೋಡಿದರೆ ಬದುಕಿಗಿಂತ ಸಾರ್ವತ್ರಿಕವಾದದ್ದು ಸಾವು. ಯಾಕೆಂದರೆ ಹುಟ್ಟಿದವರೆಲ್ಲರೂ ಸಾಯುತ್ತಾರೆ. ಹುಟ್ಟಿದವರೆಲ್ಲರೂ ಜೀವಿಸಿರುವುದಿಲ್ಲ. ಸಾವಿನ ಭಯದಲ್ಲಿ ಬದುಕುವುದನ್ನೇ ಮರೆಯುವವರೂ ಇದ್ದಾರೆ. ಆದರೆ ಸಾವು ನಮ್ಮನ್ನು ಭಯವಾಗಿ ಕಾಡುವುದು ಮಧ್ಯವಯಸ್ಸಿನ ನಂತರವೇ. ಅಲ್ಲಿಯ ತನಕ ಅದೊಂದು ತಮಾಷೆಯ ಸಂಗತಿ. ಯಾವತ್ತೋ ಬರುವ ಅತಿಥಿ.
ನಾವು ಸಾಯುತ್ತಾ ಹೋಗುತ್ತೇವೆ. ಪ್ರತಿಯೊಂದು ಹೆಜ್ಜೆಯೂ ನಮ್ಮನ್ನು ಸ್ಮಶಾನದತ್ತ ಒಯ್ಯುತ್ತಿರುತ್ತದೆ. ಪ್ರತಿಯೊಂದು ನಿಮಿಷವೂ ನಮ್ಮನ್ನು ಬದುಕಿನಿಂದ ದೂರವಾಗಿಸುತ್ತಿರುತ್ತದೆ. ಹೀಗಾಗಿ ಪ್ರತಿಯೊಂದು ಕ್ಪಣವನ್ನೂ ನಮ್ಮದು ಎನ್ನುವಂತೆ ಬದುಕೋಣ ಅನ್ನುವುದು ಬದುಕನ್ನು ತೀವ್ರವಾಗಿ ಜೀವಿಸಬೇಕು ಅನ್ನುವವರ ಮತ. ಯಶವಂತ ಚಿತ್ತಾಲರ `ಪಯಣ' ಕತೆಯ ನಾಯಕ ಸಾವು ಬಂದು ಕರೆದಾಗ ಅದಕ್ಕಾಗಿಯೇ ಅಷ್ಟೂ ಹೊತ್ತು ಕಾದಿದ್ದವನಂತೆ ಹೊರಟು ಹೋಗುತ್ತಾನೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಮನಸ್ಸು ತುಡಿಯುತ್ತದೆ ಅನ್ನುವಲ್ಲಿಯೂ ಸಾವಿನ ಸೂಕ್ಪ್ಮವಾದ ಹೆಜ್ಜೆ ಸದ್ದು ಕೇಳಿಸುತ್ತದೆ.
ಅಮರತ್ವ ಮನುಷ್ಯನ ಆಶೆ. ಸಾವು ನಾವು ಯಮನಿಗೆ ಕೊಟ್ಟ ಭಾಷೆ. ಕೊಟ್ಟ ಭಾಷೆಗೆ ತಪ್ಪಲಾರೆವು. ಕನಿಷ್ಟ ಅದೊಂದು ವಿಚಾರದಲ್ಲಿ ನಾವು ನಿಯತ್ತಿನವರು. ಕರೆದಾಗ ನಾವು ತುಂಬ ಪ್ರೀತಿಸುವವರನ್ನೂ ಹಸಿಹಸಿಯಾಗಿ ದ್ವೇಷಿಸುವವರನ್ನೂ ಮೊನ್ನೆ ಮೊನ್ನೆ ಕೊಂಡುಕೊಂಡ ಹೊಸ ಮನೆಯನ್ನೂ ಪಕ್ಕದ ಮನೆಯ ಸುಂದರಿಯ ಮುಗುಳುನಗುವನ್ನೂ ಮಗುವಿನ ಕೆನ್ನೆಯ ಕಚಗುಳಿಯನ್ನೂ ಸಾಲವನ್ನೂ ಸಂಬಳವನ್ನೂ ಮರೆತು ಹೊರಟುಬಿಡುತ್ತೇವೆ.
ಅದು ಅನಿವಾರ್ಯ ಎಂದು ಸುಮ್ಮನಾಗೋಣ. ಆದರೆ ಸಾವು ಅಷ್ಟೊಂದು ಹಠಾತ್ತನೇ ಘಟಿಸುವ ಸಂಗತಿಯಲ್ಲ; ಆಕಸ್ಮಿಕಗಳನ್ನು ಹೊರತುಪಡಿಸಿದರೆ. ನಾವು ಕ್ರಮೇಣ ಸಾಯುತ್ತಾ ಹೋಗುತ್ತೇವೆ. ಅದನ್ನೇ ಅಕೌಂಟೆನ್ಸಿ ಡಿಪ್ರಿಸಿಯೇಷ್ ಅನ್ನುತ್ತದೆ. ಕನ್ನಡದಲ್ಲಿ ಅದು ಸವಕಳಿ. ಈ ಸವಕಳಿ ಕೇವಲ ದೇಹಕ್ಕಷ್ಟೇ ಸಂಬಂಧಿಸಿದ್ದಲ್ಲ. ಮಾನಸಿಕವಾಗಿಯೂ ನಾವು ನಮ್ಮ ಜೀವನ ಪ್ರೀತಿಯ ಒಂದು ಮಗ್ಗುಲಿಗೆ ಹೊರತಾಗುತ್ತಾ ಹೋಗುತ್ತೇವೆ. ನಮ್ಮನ್ನು ರೂಪಿಸಿದ ಒಬ್ಬೊಬ್ಬರೇ ತೀರಿಕೊಂಡಾಗ ನಮ್ಮೊಳಗಿನ ಒಂದು ಭಾಗ ಸಾಯುತ್ತದೆ. ನಮ್ಮ ಪ್ರೀತಿಯ ನಟ, ನಮ್ಮನ್ನು ತಿದ್ದಿದ ಮೇಷ್ಟ್ರು, ನಮ್ಮನ್ನು ಪೊರೆದ ಹೆತ್ತವರು, ನಮ್ಮ ಜೊತೆ ಬೆಳೆದ ಸೋದರ, ಸದಾಕಾಲ ಜೊತೆಗಿದ್ದ ಸಖ ತೀರಿಕೊಂಡಾಗ ಎಲ್ಲೋ ಒಂದು ಕಡೆ ನಾವೂ ತೀರಿಕೊಂಡೆವು ಅನ್ನಿಸುತ್ತದೆ. ತುಂಬ ಆತ್ಮೀಯರು ಸತ್ತಾಗ ನಮಗ್ಯಾರಿಗೂ ನಮ್ಮ ಸಾವನ್ನು ನೆನೆದು ಭಯವಾಗುವುದಿಲ್ಲ. ಬದಲಾಗಿ ಅವನನ್ನು ಕಳಕೊಂಡೆವಲ್ಲ ಎನ್ನಿಸಿ ಮನಸ್ಸು ಮರುಗುತ್ತದೆ.
ಈ ಸಾಲು ಬೇಡವೆಂದರೂ ನೆನಪಾಗುತ್ತದೆ;
Days and moments quickly flying
Blend the living with the dead;
Soon will I and You will be lying
Each within our narrow bed.
ಪ್ರತಿಯೊಂದು ಸಾವಲ್ಲೂ ಇದು ನೆನಪಾಗುತ್ತದೆ. ಅವರ ಬಗ್ಗೆ ಬರೆಯಲು ಕುಳಿತಾಗಲೆಲ್ಲ `ಬಾಕಿ ಮೊಕ್ತಾ' ಎಂದು ಬರೆಯಬೇಕು ಅನ್ನಿಸುತ್ತದೆ.

Sunday, October 7, 2007

ಜಿಎನ್ ಮೋಹನ್ ಅವರ ನಾಲ್ಕು ಪದ್ಯಗಳು


1.ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ

ಒಂದಿಷ್ಟು ಪ್ರಶ್ನೆ ಕೇಳಬೇಕಾಗಿದೆ
ಇನ್ನಾರಿಗೂ ಅಲ್ಲ ನೇರ ಷೇಕ್ಸ್‌ಪಿಯರನಿಗೇ:
ಏಕೆ ಹಾಗಾಯಿತು
ಒಬ್ಬೊಬ್ಬರದೂ ಒಂದೊಂದು ರೀತಿಯ ಅಂತ್ಯ?
ಕತ್ತಿ ಸೆಣಸಿ ರಾಜನಿಗಾಗಿ ಯುದ್ಧ
ಗೆಲ್ಲುವುದೊಂದೇ ಮುಖ್ಯ ಎಂದುಕೊಂಡಿದ್ದ
ಮ್ಯಾಕ್‌ಬೆತ್‌ನಿಗೆ ಏಕೆ ಮುಖಾಮುಖಿಯಾಗಿಸಿದೆ
ಆ ಮೂರು ಜಕ್ಕಣಿಯರನ್ನು?
ಜೋಡಿಯಾಗಿಸಿದೆ ಇನ್ನಷ್ಟು ಮತ್ತಷ್ಟು
ಆಕಾಂಕ್ಷೆಗಳ ನೀರೆರೆವ ಆ ಲೇಡಿ ಮ್ಯಾಕ್‌ಬೆತ್‌ಳನ್ನು?

ಒಥೆಲೊ ಡೆಸ್ಡಮೋನಾಳ ಮಧ್ಯೆ
ಬೇಕಿತ್ತೇ ಆ ಕರವಸ್ತ್ರ
ಸಂಶಯದ ಸುಳಿ ಬಿತ್ತಬೇಕಿತ್ತು
ಎಂಬುದೇ ನಿನ್ನ ಆಸೆಯಾಗಿದ್ದಿದ್ದರೆ
ನೇರ ಎರಡು ಸ್ವಗತದಲ್ಲೋ ಇಲ್ಲಾ
ಮೂರು ಅಂಕದಲ್ಲೋ ಇಬ್ಬರನ್ನೂ
ಎದುರು ಬದುರಾಗಿಸಿ ಮಾತಿಗೆ
ಮಾತು ಹೆಣೆದು ಸಲೀಸಾಗಿ
ಸೋಡಾಚೀಟಿ ಕೊಡಿಸಿಬಿಡಬಹುದಿತ್ತಲ್ಲ?

ಏಕೆ ಬೇಕಿತ್ತು ಸಂಶಯಗಳನ್ನು
ಬಿತ್ತುವ ಹಗಲಿರುಳೂ ನಿದ್ದೆ
ಇಲ್ಲದಂತೆ ಮಾಡುವ
ಕೊನೆಗೆ ಅವರೂ, ನೀನೂ ಜೊತೆಗೆ ನಾವೂ
ಹೊರಳಾಡುವಂತೆ ಮಾಡುವ
ಆ ಕರವಸ್ತ್ರದ ಕಥೆ?

ಪ್ರಶ್ನೆ ಇರುವುದು ಷೇಕ್ಸ್‌ಪಿಯರನಿಗೆ:
ಇರಲೇ ಇಲ್ಲದೇ ಇರಲೆ ಎನ್ನುವ
ರಾಜಕುಮಾರನನ್ನು ಸೃಷ್ಟಿ ಮಾಡಿದವನಿಗೆ
ಗತ್ತಿನಲ್ಲಿ ಹಾರುತ್ತಿದ್ದ ಹಕ್ಕಿಯನ್ನು
ಒಂದು ಸಾಮಾನ್ಯ ಗೂಗೆಯಿಂದ
ಹೊಡೆದು ಕೊಂದವನಿಗೆ
ಬರ್ನಂ ವನಕ್ಕೂ ಕೈಕಾಲು ಬರಿಸಿದವನಿಗೆ
ಊಟದ ಬಟ್ಟಲುಗಳ ನಡುವೆ
ಎದ್ದು ನಿಲ್ಲುವ ಪ್ರೇತಗಳನ್ನು ಸೃಷ್ಟಿಸಿದವನಿಗೆ
ಕಪ್ಪಿಗೂ ಬಿಳುಪಿಗೂ ನಡುವೆ
ಒಂದು ಗೋಡೆ ಎಬ್ಬಿಸಿದವನಿಗೆ
ಸುಂದರ ಕನಸುಗಳ ಮಧ್ಯೆಯೂ
ಒಂದೊಂದು ನಿಟ್ಟುಸಿರು ಹೆಣೆದವನಿಗೆ.



2.ಜಕ್ಕಿಣಿಯರ ಮುಂದೆ ಮ್ಯಾಕ್‌ಬೆತ್


ದಿಢೀರನೆ ಎದುರಾಗಿದ್ದಾರೆ
ಜಕ್ಕಿಣಿಯರು
ಭವಿಷ್ಯ ನುಡಿಯುತ್ತಿದ್ದಾರೆ
ಕೇಕೆ ಹಾಕಿ ಗಹಗಹಿಸುತ್ತಿದ್ದಾರೆ
ಗೊತ್ತಿಲ್ಲದ ಮಂತ್ರಗಳ
ಪಟಪಟ ಉದುರಿಸುತ್ತಿದ್ದಾರೆ
ಕಣ್ಣಲ್ಲಿ ಕಣ್ಣುನೆಟ್ಟು ಮನಕ್ಕೆ
ತಟ್ಟುವಂತೆ ಹೇಳುತ್ತಿದ್ದಾರೆ
ಮುನ್ನುಗ್ಗು ಒಂದಲ್ಲ ಎರಡಲ್ಲ
ಮೂರು ಹೆಜ್ಜೆ ಸಾಕು
ಗತ್ತು ಗಮ್ಮತ್ತು ನಿನ್ನದು
ರಾಜ್ಯ ಸಾಮ್ರಾಜ್ಯ ನಿನ್ನದು
ಕತ್ತಿ ಕಿರೀಟ ಎಂದೆಂದೂ ನಿನ್ನದು
ಬಗ್ಗಬೇಡ ನುಗ್ಗು.

ಕಾರಿರುಳಲ್ಲಿ ಕುದುರೆ ಏರಿ
ಹೊರಟ ನಾನು
ತಬ್ಬಿಬ್ಬಾಗಿ ನಿಂತಿದ್ದೇನೆ
ಮೂರು ಹೆಜ್ಜೆ ಮುಂದಿಡಲೆ
ಇಲ್ಲ ಒಂದು ಹೆಜ್ಜೆ ಹಿಂದಿಟ್ಟು
ಮೊಣಕಾಲೂರಿ ಬಿಡಲೆ
ಗೆಲ್ಲಬೇಕೆ ಮೂರು ಹೆಜ್ಜೆ
ಇಲ್ಲ ನಿಲ್ಲಬೇಕೆ ಇದ್ದಲ್ಲೆ.

ಜಕ್ಕಿಣಿಯರಿಗೆ ತಾಳ್ಮೆಯಿಲ್ಲ
ಗುಡ್ಡ ಜರುಗಿ ನಿನ್ನ ಬಳಿ
ಬರುವುದು ಸಾಧ್ಯವಿಲ್ಲ
ಅರಣ್ಯದ ಎಲೆಗಳಿಗೆ
ನಡೆದಾಡಲು ಬರುವುದಿಲ್ಲ
ನೀನೇ ನುಗ್ಗು
ಗೆಲ್ಲು ಸೂರ್ಯ ಮುಳುಗದ
ಸಾಮ್ರಾಜ್ಯವನ್ನು.

ಕುದುರೆಯ ಮೇಲೆ ಕುಳಿತಿದ್ದೇನೆ
ಹಿಡಿದ ಲಗಾಮು ಬಿಡಲೆ
ಇಲ್ಲಾ ಬಿಗಿ ಮಾಡಲೆ
ಕೈಯಲ್ಲಿ ಕತ್ತಿ ಹಿಡಿಯಲೆ
ಇಲ್ಲ ಒಂದೇ ಗುಕ್ಕಿಗೆ ಜೀವ ತೆಗೆಯುವ
ವಿಷದ ಬಟ್ಟಲು ಹಿಡಿಯಲೆ.
ಜನರ ಮನಸ್ಸು ಗೆಲ್ಲಲೆ
ಇಲ್ಲಾ ಅವರನ್ನು ತರಿದು ಕೊಲ್ಲಲೆ?

ಜಕ್ಕಿಣಿಯರಿಗೆ ಈಗ
ಅವಸರದ ಅಗತ್ಯವಿಲ್ಲ
ಏಕೆಂದರೆ ಹೇಳಬೇಕಾದದ್ದು
ಹೇಳಿ ಮುಗಿದಿದೆಯಲ್ಲ; ಬಟ್ಟಲು
ವಿಷದ ವಿಳಾಸ ಹುಡುಕುತ್ತಿದೆಯಲ್ಲ.

3.ಕೋಡಂಗಿಗೆ ಇನ್ನು ಕೆಲಸವಿಲ್ಲ

ಈಗ ಕಾಲ ಬದಲಾಗಿದೆ
ಮನಸ್ಸಿಗೆ ಒಂದಿಷ್ಟು ಬೇಸರವಾಯಿತೋ
ಸಿನೆಮಾ ಥಿಯೇಟರ್‌ಗಳಿವೆ
ತಿರುವಿ ಹಾಕಿದರೂ ಮುಗಿಯದಷ್ಟು ಚಾನಲ್‌ಗಳಿವೆ
ನಾಯಕಿಯರು ಬೇಕಾದಷ್ಟು ಹೊತ್ತು ಕುಣಿಯುತ್ತಾರೆ
ಖಳನಾಯಕ ರೇಪ್ ಮಾಡುತ್ತಲೇ ಇರುತ್ತಾನೆ,
ತಂಗಿಗೆ ಅಳುವುದೇ ಕೆಲಸ
ಇನ್ನೂ ಬೇಸರವಾಯಿತೇನು
ನೇರ ಹೊರಗೆ ಜಿಗಿದುಬಿಟ್ಟರೆ ಸಾಕು
ಚಹಾ ಅಂಗಡಿಯಲ್ಲಿ ಸಂತೆ ಮಧ್ಯದಲ್ಲಿ
ಮೀನು ಮಾರುಕಟ್ಟೆಯಲ್ಲಿ ಎಂ ಜಿ ರೋಡಿನಲ್ಲಿ
ಇಲ್ಲಾ ಎಲ್ಲಾ ರಸ್ತೆ ಕೂಡುವ ಸರ್ಕಲ್‌ನಲ್ಲಿ
ಕುಳಿತುಬಿಟ್ಟರೆ ಸಾಕು.

ಈಗ ಕಾಲ ಬದಲಾಗಿದೆ
ಕಡಲೆಕಾಯಿ ಬಿಡಿಸುತ್ತಾ ಗೊತ್ತಿಲ್ಲದವರ
ಜೊತೆಯೂ ಹರಟೆ ಹೊಡೆಯಬಹುದು
ಬಸ್‌ನಲ್ಲಿ ಕೂತು ಗೊರಕೆಗೆ ಸಿದ್ಧವಾಗಬಹುದು
ಟೇಪ್‌ರೆಕಾರ್ಡರ್ ಒತ್ತಿದರೆ
ಹಾಡುಗಳ ಸರಮಾಲೆ
ಪಾರ್ಕ್‌ನಲ್ಲಿ ಕೂತರೆ ಸಂಗೀತ ಕಚೇರಿ
ದನಿ ಏರಿಸಿದರೆ ಸಾಕು ಮನರಂಜನೆ.

ಈಗ ಕಾಲ ಬದಲಾಗಿದೆ
ನಗಿಸಲು ಎಲ್ಲರೂ ಸಿದ್ಧರಿದ್ದಾರೆ
ಒಂದು ಮಾತು ಹೇಳಿದರೂ
ನಗಬೇಕೆಂಬ ನಿಯಮವಿದೆ
ಮನಸ್ಸು ಹೇಗಾದರೂ ಇರಲಿ,
ಸದಾ ಮುಗುಳ್ನಗುವ ಸುಂದರಿಯರಿದ್ದಾರೆ.
ಮುಗುಳ್ನಗು ಉಕ್ಕಲೆಂದೇ ಟೂತ್‌ಪೇಸ್ಟ್‌ಗಳಿವೆ.

ಹಾಗಾದರೆ ಇನ್ನು ನಾನೇಕೆ
ಸ್ವಾಮಿ? ಅದಕ್ಕಾಗಿಯೇ ನಿಂತಿದ್ದೇನೆ
ನಿಮಗೆ ಹೇಳಿ ಹೋಗಲು
ಬಟ್ಟೆ ಬದಲಾಯಿಸಬೇಕು
ಟೋಪಿ ತೆಗೆದಿಡಬೇಕು ಬೇಗ ಬಣ್ಣ ಒರೆಸಬೇಕು
ಮೂಗಿನ ಮೇಲಿದೆಯಲ್ಲ ನಿಂಬೆಹಣ್ಣು
ಅದನ್ನು ಕಳಚಿಡಬೇಕು
ನೀವು ನಗಲೆಂದೇ ಮಾಡುತ್ತಿದ್ದ ಚೇಷ್ಟೆ
ಬದಿಗಿರಿಸಬೇಕು
ಈಗ ಕಾಲ ಬದಲಾಗಿದೆ
ಕೋಡಂಗಿಗೆ ಇನ್ನು ಕೆಲಸವಿಲ್ಲ.


4. ಸಣ್ಣ ಸಾಲಕ್ಕೆ ನಮಸ್ಕಾರ



ಕಣ್ಣು ಬಿಡಲು ಕಾತರವಾಗಿರುವ
ಮಗುವಿಗೆ ಗಟ್ಟಿ ಎಲುಬು
ನೀಡಿದ ಸಣ್ಣ ಸಾಲವೆ ನಿನಗೆ ನಮಸ್ಕಾರ

ಪುಟ್ಟ ಕಾಲ್ಗೆಜ್ಜೆಗಾಗಿ ಕಾತರಿಸಿದ
ಮನಕ್ಕೆ ಗಿಲಿಗಿಲಿ ಸದ್ದು ಒದಗಿಸಿದ
ಸಣ್ಣ ಸಾಲವೆ ನಿನಗೆ ನಮಸ್ಕಾರ

ಹಾಡ ಬೆನ್ನತ್ತಿ ಗುರುವಿಗಾಗಿ ಸುತ್ತು
ಸುಳಿದಾಡಿದ ಮನಕ್ಕೆ ಗುರುವ ಎಟುಕಿಸಿದ
ಸಣ್ಣ ಸಾಲವೆ ನಿನಗೆ ನಮಸ್ಕಾರ

ರಬ್ಬರ್ ತೋಟದ ಹಾಲು ಹಿಂಡುತ್ತಿದ್ದ ನನ್ನ
ಕೈಗೆ ಕಾನೂನು ಪುಸ್ತಕ ಕೊಡಿಸಿದ
ಸಣ್ಣ ಸಾಲವೆ ನಿನಗೆ ನಮಸ್ಕಾರ

ಇದ್ದ ನೀರು ಹಂಡೆಯನ್ನೇ
ಅಡವಿಡಲು ಹೊರಟಿದ್ದ ತಾಯಿಗೆ
ಸಾಂತ್ವನ ನೀಡಿದ ಸಣ್ಣ ಸಾಲವೇ ನಿನಗೆ ನಮಸ್ಕಾರ

ಕಟ್ಟಿಗೆ ಒಲೆಯ ಮುಂದೆ ನಿಟ್ಟುಸಿರನ್ನೇ
ಊದುತ್ತಿದ್ದ ಅಮ್ಮನಿಗೆ ಒಂದಿಷ್ಟು ವಿರಾಮ ನೀಡಿದ
ಸಣ್ಣ ಸಾಲವೇ ನಿನಗೆ ನಮಸ್ಕಾರ

ಗೆಳೆಯರು ಮನೆ ಬಾಗಿಲು ತಟ್ಟಿದ ದಿನ
ಒಂದಿಷ್ಟು ಅಕ್ಕಿ ನೀಡಿದ ಬೇಳೆ ಬೇಯಲು ಕಾವು ನೀಡಿದ
ಸಣ್ಣ ಸಾಲವೇ ನಿನಗೆ ನಮಸ್ಕಾರ

ಬೆಳಕ ನೀಡುವ ದೀಪದ ಸೊಡರೇ
ಉಸಿರು ಕಳೆದುಕೊಂಡಾಗ ನಿಗಿ ನಿಗಿ ಉರಿದ
ಸಣ್ಣ ಸಾಲವೇ ನಿನಗೆ ನಮಸ್ಕಾರ


ಗೆಳತಿಯ ಕೊರಳಿಗೆ ಒಂದು ಇನಿಮುತ್ತು
ಪಕ್ಷಿ ಕೊರಳಿಗೂ ಒಂದು ಕುಕಿಲು
ಕಾಣಲು ಕಣ್ಣಿಗೊಂದು ಕನಸು
ಗುನುಗುನಿಸಲು ಒಂದು ಹಾಡು ಇತ್ತ
ಸಣ್ಣ ಸಾಲವೇ ನಿನಗೆ
ಮತ್ತೆ ಮತ್ತೆ ನಮಸ್ಕಾರ

ಬಾಂಗ್ಲಾ ದೇಶದ ಮಹಮದ್ ಯೂನುಸ್ ನೀಡುವ
ಸಣ್ಣ ಸಾಲಕ್ಕೆ ನೊಬೆಲ್ ನೀಡಿದ ಕಾರಣಕ್ಕಾಗಿ

ಪದಪದವೂ ನವ ಮೋಹನ ರಾಗ


ಜಿ. ಎನ್. ಮೋಹನ್ ಹೊಸ ಕವನ ಸಂಕಲನದ ಮುಖಪುಟ ಇದು.
ಆ ಸಂಕಲನದ ಒಂದಷ್ಟು ಪದ್ಯ ಇಷ್ಟರಲ್ಲೇ ನಿಮ್ಮನ್ನು ಇದೇ ಅಂಗಳದಲ್ಲಿ ಎದುರುಗೊಳ್ಳಲಿದೆ.
ಅಲ್ಲಿಯ ತನಕ ಈ ಮುಖಪುಟದ ಸೊಬಗು ನಿಮ್ಮನ್ನು ಮುದಗೊಳಿಸಲಿ.
ಮಾಧ್ಯಮದಲ್ಲಿರುವ ಗೆಳೆಯರು ಸೃಜನಶೀಲತೆಯತ್ತ ಹೊರಳಿಕೊಂಡಾಗ ಆಗುವ
ಸಂತೋಷವೇ ಬೇರೆ.
ಅಂಥ ಸಂತೋಷವನ್ನು ಮೋಹನ್ ಹೆಚ್ಚಿಸಿದ್ದಾರೆ.
ಥ್ಯಾಂಕ್ಯೂ, ಮೋಹನ್

Wednesday, October 3, 2007

ಮ್ಯಾಜಿಕ್ ರಿಯಲಿಸಮ್ ಅಂದ್ರೆ ....




ಮಾರ್ಕೆಸ್ ಕಾದಂಬರಿಗಳ ಬಗ್ಗೆ ಮಾತಾಡುವಾಗ ಮ್ಯಾಜಿಕ್ ರಿಯಲಿಸಮ್ ಅನ್ನುವ ಪರಿಭಾಷೆಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಹಾಗಂದರೆ ಏನು?
ವಿವರಿಸುವ ಬದಲು ಅಕ್ಟೋಬರ್ 28ರಂದು ಬಿಡುಗಡೆಯಾಗಲಿರುವ ಸೂರಿಯವರ ಕಾದಂಬರಿಯ ಆಯ್ದ ಭಾಗವೊಂದನ್ನು ಕೊಡುತ್ತಿದ್ದೇನೆ. ಈ ಅರೆ ಅಧ್ಯಾಯ ಮ್ಯಾಜಿಕ್ ರಿಯಲಿಸಮ್- ಮಾಂತ್ರಿಕ ವಾಸ್ತವದ ರೂಪದರ್ಶನ ಮಾಡಿಸುತ್ತದೆ ಅನ್ನುವ ನಂಬಿಕೆಯೊಂದಿಗೆ.

ಕಾದಂಬರಿಯ ಹೆಸರು- ಎನ್ನ ಭವದ ಕೇಡು.
ಲೇಖಕ- ಎಸ್. ಸುರೇಂದ್ರನಾಥ್
ಪ್ರಕಾಶಕರು- ಛಂದ ಪುಸ್ತಕದ ವಸುಧೇಂದ್ರ.

ಎಲ್ಲರೊಡನೆ ಹರಟುತ್ತಿದ್ದ ಶಶಿಕಲಾಗೆ ಗಾಳಿ ತನ್ನನ್ನು ಎತ್ತಲೋ ಎಳೆಯುತ್ತಿರುವಂತೆ ಅನಿಸಿತು. ಸಿಹಿಯನ್ನು ಜಗಿಯುತ್ತಿದ್ದ ಕಲರವದ ಸಂಬಂಧಗಳನ್ನು ಬಿಟ್ಟು ಗಾಳಿ ತನ್ನನ್ನು ಎಳೆದತ್ತ ಜಾರಿದಳು. ಕಬ್ಬಿನ ಹೊಲ ಬೆನ್ನ ಹಿಂದೆ ಬಿತ್ತು. ಎದೆಯೆತ್ತರದ ಕಾಡುಪೊದೆಗಳ ಬಯಲು ಇದಿರಾಯಿತು. ಮುಸ್ಸಂಜೆಯ ಮಬ್ಬು ಜಾರುತ್ತಿತ್ತು. ಇನ್ನೂ ಬೆಳೆ ಕಾಣದ ಜಮೀನದು. ಇದ್ದಕ್ಕಿದ್ದಂತೆ ತನ್ನ ಪರಿಚಯದ ವಾಸನೆಯೊಂದು ಅಡರಿತು. ಕೈಯ್ಯಲ್ಲಿದ್ದ ಕಬ್ಬಿನ ದಂಟನ್ನು ಬಿಸಾಕಿ ದೌಡುಗಾಲಾದಳು. ವಾಸನೆ ದಟ್ಟವಾದಂತೆ ತುಳಸೀ ಬನದ ಕಪ್ಪು ಮೊತ್ತ ಕಣ್ಣೆದುರು ಹರಡಿಕೊಂಡಿತು. ಒಮ್ಮೆಲೇ ಭೂಮಿ ಕಡಿದು ಬಿದ್ದಂತಿದ್ದ ಚಚ್ಚೌಕ ಬಾವಿಯೊಂದರ ಪಶ್ಚಿಮ ದಡದ ಮೇಲೆ ನಿಂತಿದ್ದಳು. ಆಳೆತ್ತರದ ತುಳಸಿ ಮರಗಳು. ದಟ್ಟ ತುಳಸಿ ವಾಸನೆ. ವಿಸ್ತಾರವಾದ ಬಾವಿಯಲ್ಲಿ ಹೆಪ್ಪುಗಟ್ಟಿದ್ದ ಕತ್ತಲು. ತುಳಸೀ ಮರಗಳ ಹಿಂದೆ, ಅಲೆಅಲೆಯಾಗಿ ಜಾರುತ್ತಿದ್ದ ಕತ್ತಲಿನಲ್ಲಿ ಗೂಢವಾದದ್ದೇನನ್ನೋ ಹುಡುಕುತ್ತಾ ನಡೆದಳು. ಆ ಕತ್ತಲಲ್ಲೂ ಕಾಲುಗಳಿಗೆ ಯಾವುದೇ ಬೇರು ತಟ್ಟಲಿಲ್ಲ, ತಡೆದು ನಿಲ್ಲಿಸಲಿಲ್ಲ. ಮನೆಯ ಹಿಂದಿನ ಹಿತ್ತಲಿನಷ್ಟು ಪರಿಚಯವಾದಂತಿತ್ತು ಆ ನೆಲ. ಅದೊಂದು ತುಳಸಿ ಮರದ ಹಿಂದಿದ್ದ ಮುರಿದು ಬಿದ್ದ ಕಲ್ಲಿನ ಮಂಟಪವನ್ನೇ ಹುಡುಕುತ್ತಿದ್ದವಳಂತೆ ನೇರ ಅದರೆದುರು ಬಂದು ನಿಂತಳು.
’ನೀ ಬರ್ತೀಂತ ಕಾಯ್ತಿದ್ದೆ. ಬಂದ್ಯಲ್ಲಾ ಬಿಡು.’
ದನಿ ಬಂದತ್ತ ಶಶಿಕಲಾ ಮಬ್ಬುಗತ್ತಲಲ್ಲಿ ಹೆಜ್ಜೆ ಹೊರಳಿಸಿದಳು. ನೆಲವೇ ಅದಾಗಿತ್ತೋ, ಅದೇ ನೆಲವಾಗಿತ್ತೋ ಅಂತಹ ಮಾನವ ಜೀವದೊಂದು ನೆಲದ ಮೇಲೆ ಬರೆಬರೆಯಾಗಿ ಬಿದ್ದಿತ್ತು. ಅದರ ಮೈಯ್ಯ ಮೇಲಿನ ಸುಕ್ಕುಗಳು ನೆಲದ ಮೇಲಿನ ಬಿರುಕುಗಳಂತಿದ್ದವು. ವಯಸ್ಸೆಷ್ಟೋ ಗೊತ್ತಾಗುತ್ತಿರಲಿಲ್ಲ.
’ಕೂತ್ಗಾ’
ಅಪ್ಪಣೆಯಿತ್ತ ದನಿಗೆ ಮಾತ್ರ ಹದಿನೆಂಟರ ಕಸುವಿತ್ತು. ತಿದ್ದಿ ಬರೆದ ಸ್ಪಷ್ಟತೆಯಿತ್ತು. ಕಣ್ಣನ್ನು ಜೀವದ ಮೇಲೆ ಕೀಲಿಸಿ, ಮಂತ್ರ ಮುಗ್ಧಳಾದಂತೆ ಅದರ ಪಕ್ಕದಲ್ಲಿ ಕುಳಿತಳು. ನೆಲದ ಮೇಲೆ ಹರಡಿ ಬಿದ್ದಿದ್ದ ಆ ಜೀವದ ಕೈಯ್ಯನ್ನು ಕೈಗೆತ್ತಿಕೊಂಡಳು. ಸವರುತ್ತಾ ಕುಳಿತಳು.
’ನಾ ಬೇರೆಯಲ್ಲ, ನಿನ್ನವ್ವ ಬೇರೆಯಲ್ಲ. ಇನ್ನೇನು ತುಳಿಸೀ ಬುಡುಕ್ಕೆ ಗೊಬ್ಬರಾಗೋಗ್ತೀನಿ. ಇನ್ನೆರಡು ತಿಂಗಳಿಗೆ ಬರ್ತೀಯಲ್ಲಾ ಈ ಮನಿಗೆ, ಬಂದ ಮೇಲೆ ನನ್ನುಸಿರಿರಾತಂಕ ದಿನಾ ಬಂದು ಎರಡು ತಟುಕು ನೀರಾಕೋಗು. ಇಲ್ಲಿಗೆ ಬಂದಿದ್ದನ್ನ, ಬರಾದನ್ನ ಯಾರಿಗೂ ಹೇಳ್ಬೇಡ. ನೀ ಬರಾತಂಕ ಜೀವಾ ಹಿಡಿದಿರ್ತೀನಿ. ನೀ ಹೋಗೀಗ.’
’ನಿಮ್ಮೊಬ್ರನ್ನೇ ಬಿಟ್ಟು ಹೆಂಗೆ ಹೋಗಲಿ?’
’ಅಯ್ಯ ಮೂಳಿ, ಇಷ್ಟು ದಿನ ನೀನಿದ್ಯಾ ಇಲ್ಲಿ. ಇಷ್ಟು ದಿನ ಇದ್ದಂಗಿರ್ತೀನಿ ಬಿಡು. ನಿನ್ನ ಕೈಯ್ಯಿಂದ ಎರಡು ಹನಿ ನೀರು ಬೀಳಾತಂಕ ನಾನು ಉಸ್ರು ಬಿಗಿ ಹಿಡಿದಿರ್ತೀನಿ. ಹೋಗು. ’
ಅಷ್ಟರಲ್ಲಿ ಯಾರೋ ಶಶಿಕಲಾಳನ್ನು ಕರೆಯುತ್ತಿರುವ ಕೂಗು ಕೇಳಿಸಿತು.
’ಇನ್ನ ಇಲ್ಲಿಗೂ ಬರ್ತಾರೆ. ಅವ್ರು ಬರಾಕೆ ಮುಂಚೆ ನೀ ಹೋಗಿಬಿಡು ಇಲ್ಲಿಂದ.’
’ನಾ ದಿನಾ ಬರ್ತೀನಿ. ಯೋಚನೆ ಮಾಡಬೇಡಿ.’
ಅವಳ ಕೈಯ್ಯಿಂದ ತನ್ನ ಕೈಯ್ಯನ್ನು ಜಾರಿಸಿಕೊಂಡಿತು ಆ ಜೀವ. ಸ್ಪರ್‍ಶ ತಪ್ಪಿದ ಗಳಿಗೆ ನೆಲದೊಳಗೇ ಇಂಗಿಹೋಯಿತೇನೋ ಅನ್ನುವಂತೆ ಕತ್ತಲಲ್ಲಿ ಕಾಣದಾಯಿತು ಆ ಜೀವ. ತನ್ನನ್ನು ಹುಡುಕುತ್ತಿದ್ದವರ ಕೂಗು ಹತ್ತಿರ ಹತ್ತಿರ ಬರುತ್ತಿದೆ. ಥಟ್ಟನೆದ್ದು ಮುರುಕು ಮಂಟಪದಿಂದ ಹೊರಬಂದಳು. ಕೂಗು ಬರುತ್ತಿದ್ದ ದಿಕ್ಕಿಗೆ ವೇಗವಾಗಿ ನಡೆದಳು. ಹತ್ತು ಹದಿನೈದು ದಾಪುಗಾಲಿನಲ್ಲಿ ತುಳಸೀಬನದಿಂದ ಹೊರಬಂದಿದ್ದಳು ಶಶಿಕಲ. ಮತ್ತೆ ಭೂಮಿಗೆ, ಮನುಷ್ಯ ಸಂಪರ್ಕದ ಪರಿಧಿಯೊಳಗೆ ಬಂದುದರ ಕುರುಹಾಗಿ ಬ್ಯಾಟರಿ ಹಿಡಿದು ಚುಮುಚುಮು ಕತ್ತಲಲ್ಲಿ ತನ್ನನ್ನು ಹುಡುಕುತ್ತಿದ್ದ ತಂದೆ, ಒಂದಿಬ್ಬರು ಆಳು-ಕಾಳುಗಳು ಕಂಡರು. ತನ್ನನ್ನು ಕಂಡೊಡನೇ ತಂದೆ ಓಡಿ ಬಂದು ತಬ್ಬಿಕೊಂಡರು.
’ಇದ್ದಕ್ಕಿದ್ದಂತೇ ನೀ ಕಾಣ್ಲಿಲ್ಲ ನೋಡು, ಗಾಬರಿ ಆಗೋಗಿತ್ತು. ಎತ್ಲಾಗ್ಹೋದ್ಯೋ ಏನೋ ಅಂತ. ಎಲ್ಲಾರೂ ನಿನ್ನ ಹುಡುಕ್ಕೊಂಡು ಅಲೀತಿದಾರೆ. ಬಾ.’ ಅಂದವರೇ ಅಪ್ಪಿಕೊಂಡೇ ಶಶಿಕಲಾಳನ್ನು ಕರೆದೊಯ್ದರು. ತಂದೆಯ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಾ, ’ಇಲ್ಲಿ ನಂಗೇನೂ ಸುಖ ಸಿಗೋಮಟ್ಟಿಗೆ ಕಾಣೆ. ಆದರೆ ಈ ಮನೆ ಬಿಟ್ಟು ನಂಗೆ ಬೇರೆ ಮನೆಯಿಲ್ಲ. ಒಪ್ಪಿರೋ ಮಾತನ್ನು ಮುರೀಬೇಡ. ಇದು ನನ್ನ ಮನೆ. ಇಲ್ಲಿ ನನ್ನ ದಾರಿ ನಾನು ಮಾಡಿಕೋತೀನಿ. ನೀನೇನು ಯೋಚನೆ ಮಾಡಬೇಡ’ ಅಂದಳು. ಮಗಳ ಮಾತಿನಲ್ಲಿ ಅಖಂಡ ನಂಬಿಕೆಯಿದ್ದ ಪುಂಡರೀಕರಾಯರು ಬಾಯಿ ಬಿಡಲಿಲ್ಲ. ಮಬ್ಬುಗತ್ತಲಲ್ಲಿ ಅವರ ಕಣ್ಣಿಂದ ಹನಿ ಜಾರಿದ್ದು ಶಶಿಕಲಾಗೆ ಕಾಣಲಿಲ್ಲ.

ಮುಂದಿನ ಮೂರೇ ವಾರಗಳಲ್ಲಿ ಅದಷ್ಟೇ ಹದಿನಾರು ತುಂಬಿದ ಶಶಿಕಲಾ ಬಲಗಾಲನ್ನು ಮೊದಲಿಟ್ಟು ಬೃಂದಾವನವನ್ನು ಪ್ರವೇಶಿಸಿದಳು. ಬಂದ ದಿನದಿಂದಲೇ ಮನೆಯ ಆಳುಕಾಳಿಗಿರಲಿ, ಗೌರಕ್ಕನಿಗೂ ಆಕೆ ಮಾಮಿಯಾಗಿ ಬಿಟ್ಟಳು. ಒಂದು ರೀತಿಯ ದಿಟ್ಟ ಸೌಂದರ್ಯ ಆಕೆಯದು. ಗೋವರ್ಧನರಾಯರ ಆರೂಕಾಲಡಿ ವ್ಯಕ್ತಿತ್ವಕ್ಕೆ ಹೇಳಿ ಮಾಡಿಸಿದಂತಿದ್ದ ಹೆಣ್ಣು ರೂಪ ಅದು. ಹದಿನಾರು ವರ್ಷಕ್ಕೂ ಮೀರಿದ ಮೈಕಟ್ಟು. ಹೆಣ್ಣಿಗೆ ಸ್ವಲ್ಪ ಜಾಸ್ತಿಯಾಯಿತೇನೋ ಅನ್ನುವಷ್ಟು ಅಗಲ ಭುಜಗಳು, ಸೊಂಟದವರೆಗೂ ಇಳಿಬಿದ್ದ ದಟ್ಟ ಕಪ್ಪು ಕೂದಲು, ಒಂದಿನಿತೂ ನಿರಿಗೆಯಿರದ ಗೋಧಿ ಬಣ್ಣದ ಸಪೂರ ದೇಹ ಮಾಮಿಯ ಗುರುತಾಯಿತು. ಎಲ್ಲೂ ಯಾರೊಂದಿಗೂ ಸಲುಗೆಯಿಲ್ಲ. ಲೆಕ್ಕ ಹಾಕಿದಂತೆ ನಗು. ಪರಿಚಯದ ಸಲುಗೆಗೆ ತಕ್ಕಂತೆ ಕಣ್ಣಲ್ಲಿ ಆದರ. ಎಲ್ಲ ಕ್ಷಣ ಮಾತ್ರ. ಆ ನಗುವನ್ನು ಕಣ್ಣುಗಳಿಂದ ಅಳಿಸಿಬಿಟ್ಟರೆ ಎದುರಿದ್ದವರ ಎದೆಯನ್ನೂ, ಭಾವನೆಗಳನ್ನೂ ಸೀಳಿ ಬಿಡುವಂತಹ, ನೀರೊಳಗೆ ಕತ್ತಿ ಆಡಿಸಿದಂತಿರುವ ತಣ್ಣನೆಯ ಸರ್ಪದೃಷ್ಟಿ. ಈ ವಯಸ್ಸಿಗೇ ಅದೊಂದು ರೀತಿಯ ದಿವ್ಯತೆ. ವರ್‍ಚಸ್ಸು. ಗರ್ವ. ಒಂದು ಹಿರಿ ಮುತ್ತೈದೆಯನ್ನು ನೋಡಿದಂತೆ.

ಮಾಮಿ ಬೃಂದಾವನದಲ್ಲಿ ಕಾಲಿಟ್ಟ ಮಾರನೇದಿನವೇ ಪ್ರಸ್ತಕ್ಕೆ ಅಣಿಯಾಯಿತು. ಇಡೀ ಬೃಂದಾವನ ಸಜ್ಜಾಯಿತು. ಬೆಳಿಗ್ಗೆಯಿಂದ ದುಡಿದ ಇಡೀ ಮನೆ ರಾತ್ರಿಯ ಮುಹೂರ್ತಕ್ಕೆ ಅಣಿಯಾದಂತೆ ದಂಪತಿಗಳಿಬ್ಬರೂ ಕೋಣೆ ಹೊಕ್ಕೊಡನೇ ನಿಶ್ಶಬ್ದದಲ್ಲಿ ಕಾಯತೊಡಗಿತು. ಕೋಣೆಯ ಹೊಸ್ತಿಲಾಚೆಗಿನ ಕಲಕಲ ಸದ್ದು, ಹಿರಿಯರ ಪೋಲಿ ಮಾತುಗಳು, ಬೇಕೆಂದಾಗ ತೂರಿಬರುತ್ತಿದ್ದ ಒಂದಿಷ್ಟು ನಗೆಗಳು ಬಾಗಿಲು ಹಾಕಿದೊಡನೇ ಥಟ್ಟನೇ ನಿಂತು ಬಿಟ್ಟವು.

ಮಾಮಿ ಬಾಗಿಲಿನ ಚಿಲುಕ ಹಾಕಿ ಗೋವರ್ಧನರಾಯರು ಕುಳಿತಿದ್ದ ಮಂಚದ ಕಡೆ ತಿರುಗಿದಳು. ಕೋಣೆಯ ತುಂಬೆಲ್ಲಾ ಬರೆಬರೆಯಾಗಿ ಬಿದ್ದಿದ್ದ ಬೆಳಕಿನ ತುಂಡುಗಳಲ್ಲಿ ಗೋವರ್ಧನರಾಯರಿಗೆ ಮಾಮಿ ಈ ಲೋಕದ ಹೆಣ್ಣಾಗಿ ಕಂಡುಬರಲಿಲ್ಲ. ದಟ್ಟ ಕೆಂಪು ಬಣ್ಣದ ಸೀರೆ. ಹೆಗಲ ಮೇಲಿಂದ ಸೊಂಟದವರೆಗೂ ಇಳಿಬಿದ್ದಿದ್ದ
ಕಪ್ಪು ಕೂದಲ ಮೊತ್ತ. ಕತ್ತಲಲ್ಲೂ ಹೊಳೆಯುತ್ತಿದ್ದ ಕಣ್ಣುಗಳು. ಆಕೆ ತಮ್ಮೆಡೆಗೆ ಹೆಜ್ಜೆಯಿಟ್ಟಂತೆಲ್ಲಾ ಗೋವರ್ಧನರಾಯರು ನವಿರಾಗಿ ನಡುಗಿದರು. ಮಂಚದ ಮೇಲೆ ಗೋವರ್ಧನರಾಯರ ತೊಡೆಗೆ ತೊಡೆ ತಾಗಿಸಿ ಮಾಮಿ ಕುಳಿತಳು. ಮತ್ತೇರಿಸುವ ಅದೆಂತದೋ ಪರಿಮಳ ಗೋವರ್ಧನರಾಯರನ್ನು ಹಗುರವಾಗಿ ಅಲ್ಲಾಡಿಸಿಬಿಟ್ಟಿತು. ಹೆಣ್ಣಿನ ಪರಿಚಯದ ಹೊಸ ಅನುಭವ. ಮುಂದೇನು ಎಂಬುವುದರ ಬಗೆಗಿನ ಅಜ್ಞಾನ. ಉಸಿರು ಎದೆಯನ್ನೊತ್ತಿತು. ಘಕ್ಕನೆ ಆಕೆಯನ್ನು ತಬ್ಬಿಬಿಟ್ಟರು. ಅವಸರ ಅವಸರವಾಗಿ ಆಕೆಯ ಮುಖವನ್ನು ಚುಂಬಿಸತೊಡಗಿದರು. ಮಾಮಿಯ ಎದೆಯ ಮೇಲೆಲ್ಲಾ ಅವರ ಕೈ ದಿಕ್ಕು ತಪ್ಪಿದಂತೆ ಹರಿದಾಡತೊಡಗಿತು. ಮೆಲ್ಲನೆ ನಕ್ಕ ಮಾಮಿ ಹಗುರವಾಗಿ ಅವರಿಂದ ಬಿಡಿಸಿಕೊಂಡು ನಿಂತಳು. ಗೋವರ್ಧನರಾಯರು ಅದೇನು ತಪ್ಪಾಯಿತೋ ಎಂದು ವಿಹ್ವಲರಾದರು. ಮಾಮಿ ಗೋವರ್ಧನರಾಯರಿಗೆ ಬೆನ್ನು ಮಾಡಿ ನಿಂತು, ಹಿಂತಿರುಗಿ ಅವರತ್ತ ನೋಡಿದಳು. ಗೋವರ್ಧನರಾಯರಿಗೆ ಏನೊಂದೂ ಅರ್ಥವಾಗಲಿಲ್ಲ. ಮಾಮಿ ತಮ್ಮ ಕೈಯ್ಯಿಂದ ಬೆನ್ನ ಮೇಲಿದ್ದ ಕುಪ್ಪಸದ ಗುಂಡಿಗಳನ್ನು ಮುಟ್ಟಿ ತೋರಿಸಿ ’ತಗೀರಿ ಇವುನ್ನ’ ಅಂದಳು. ಮತ್ತೆ ಶುರುವಾಯಿತು ಗೋವರ್ಧನರಾಯರ ತೊಳಲಾಟ. ಎಷ್ಟು ಪ್ರಯತ್ನ ಪಟ್ಟರೂ ಗುಂಡಿ ಬಿಚ್ಚಿಕೊಳ್ಳಲೊಲ್ಲದು. ಮೊದಲ ಗುಂಡಿಯನ್ನು ಪ್ರಯತ್ನಿಸಿದರು. ಬರಲಿಲ್ಲ. ಅದು ಹಾಳಾಗಿ ಹೋಗಲಿ ಎಂದು ಮಧ್ಯದ ಗುಂಡಿಯನ್ನು ಪ್ರಯತ್ನಿಸಿದರು. ಅದೂ ಬರಲಿಲ್ಲ. ಕೊನೆಯದು...ಹಾಳಾದ್ದು ಅದೂ ಬರಲಿಲ್ಲ. ’ಇದಾಗದಿಲ್ಲ’ ಅಂದು ಕೈಚೆಲ್ಲಿಬಿಟ್ಟರು. ತಮ್ಮ ಏನೇ ಕಸರಿತ್ತಿಗೂ ಬಗ್ಗದಿದ್ದ ಆ ಗುಂಡಿಗಳು ಮಾಮಿಯ ಕೈಯ್ಯಲ್ಲಿ ಉಳ್ಳಾಗಡ್ಡೆ ಸಿಪ್ಪೆ ಸುಲಿದಷ್ಟು ಸರಾಗವಾಗಿ ಬಿಚ್ಚಿಕೊಳ್ಳತೊಡಗಿದವು. ಕುಪ್ಪಸವನ್ನು ಮೈಯ್ಯಿಂದ ಜಾರಿಸಿ, ಪೊರೆಪೊರೆಯಾಗಿ ತನ್ನ ಉಳಿದ ಬಟ್ಟೆಯನ್ನು ಕಳಚಿ ಗೋವರ್ಧನರಾಯರತ್ತ ತಿರುಗಿ ನಿಂತಳು. ಇದಾವುದೋ ಅದ್ಭುತವೆನ್ನುವಂತೆ ಗೋವರ್ಧನರಾಯರು ಆಕೆಯನ್ನೇ ದಿಟ್ಟಿಸತೊಡಗಿದರು. ಆಕೆ ಅದೊಂದು ಲಯದಲ್ಲಿ ತಮ್ಮತ್ತ ಸಾರಿಬಂದಂತೆಲ್ಲಾ ಅವರ ಎದೆಬಡಿತ ನೂರುಮಡಿಯಾಯಿತು. ಸಾವಿರಮಡಿಯಾಯಿತು. ಕೊನೆಗೊಮ್ಮೆ ತಾಳ ತಪ್ಪಿತು. ಶರೀರದ ರಕ್ತವೆಲ್ಲಾ ಸೊಂಟದಲ್ಲೇ ಮಡುಗಟ್ಟಿದಂತಾಯ್ತು. ಮಂಚದ ಬಳಿ ನಿಂತ ಮಾಮಿ, ಬೆವರುತ್ತಾ ಕುಳಿತಿದ್ದ ಗೋವರ್ಧನರಾಯರ ತಲೆಯನ್ನು ಗಟ್ಟಿಯಾಗಿ ಹಿಡಿದು ತನ್ನ ಕಿಪ್ಪೊಟ್ಟೆಗೆ ಅಪ್ಪಿಕೊಂಡಳು. ಮತ್ತದೇ ಮತ್ತೇರಿಸುವ ದೇಹಗಂಧ. ಉದ್ವೇಗದಿಂದ ಏದುಸಿರು ಬಿಡುತ್ತಿದ್ದ ಗೋವರ್ಧನರಾಯರನ್ನು ನಿಧಾನವಾಗಿ ಮಲಗಿಸಿದಳು. ಗೋವರ್ಧನರಾಯರ ದೇಹದುದ್ದಕ್ಕೂ ತನ್ನ ದೇಹವನ್ನು ಚಾಚಿ ಅವರನ್ನು ತಬ್ಬಿ ಮಲಗಿದಳು. ಬೊಗಸೆಗಳಲ್ಲಿ ಗೋವರ್ಧನರಾಯರ ಮುಖವನ್ನು ಹಿಡಿದು, ಕಿವಿಯನ್ನು ಹಗುರವಾಗಿ ಕಚ್ಚಿದಳು. ’ದೊರೆ’ ಎಂದು ಪಿಸುಗುಟ್ಟಿದಳು. ಅವರ ಮುಖಕ್ಕೆ ಮುಖ ತಂದಳು. ಆಗಲೇ ಗೋವರ್ಧನರಾಯರು ಆಕೆಯ ಕಣ್ಣುಗಳನ್ನು ನೋಡಿದ್ದು. ಸಾಗರ ನೀಲಿ ಕಣ್ಣುಗಳು. ಆಳದೊಳಕ್ಕೆ ಅದೇನೋ ನಿಗೂಢವನ್ನು ಅಡಗಿಸಿದಂತಿದ್ದ ಕಣ್ಣುಗಳು. ಆಕೆಯ ಕಣ್ಣೊಳಗೆ ಕಣ್ಣು ನಿರುಕಿಸಿ ನಿಧಾನವಾಗಿ ಗೋವರ್ಧನರಾಯರು ಸಾಗರದಾಳಕ್ಕೆ ಇಳಿದರು. ತುಟಿ ಹರಿದಂತೆಲ್ಲಾ ಮಾಮಿಯ ದೇಹ ಚಿಗುರತೊಡಗಿತು. ಅರಳತೊಡಗಿತು. ಗಮ್ಮೆನ್ನತೊಡಗಿತು. ಸಳಸಳ ನೀರಾಗತೊಡಗಿತು. ತೆಕ್ಕೆಹೊಯ್ದ ದೇಹಗಳು ಸಂದು ಸಂದುಗಳಲ್ಲಿ ಬೆವೆತವು. ಸ್ಪರ್‍ಶ ಸ್ಪರ್‍ಶಕ್ಕೂ ದೇಹಗಳು ಪುಳಕಗೊಂಡವು. ಬೆನ್ನುಗಳ ಮೇಲೆ ಬೆರಳುಗಳು ಬಗೆದಂತೆಲ್ಲಾ ಉಗುರ ಗೀರುಗಳು ಬೆನ್ನ ಮೇಲೆ ಚಿತ್ತಾರವನ್ನು ಬಿಡಿಸಿದವು. ಒಂದು ದೇಹ ಮತ್ತೊಂದನ್ನು ಅಪ್ಪಿತು. ಕ್ಷಣ ಹೊತ್ತು ದೂರವಾದವು. ಮತ್ತೆ ಹಂಗಿಸುವಂತೆ, ಅದೇನನ್ನೋ ಭಂಗಿಸುವಂತೆ ತನ್ನೆಲ್ಲಾ ರಭಸವನ್ನು ಅರ್ಭಟಿಸುವಂತೆ ಮತ್ತೆ ಮತ್ತೆ ಅಪ್ಪಳಿಸಿಕೊಂಡವು. ತಬ್ಬಿಕೊಂಡವು. ಗೋವರ್ಧನರಾಯರು ಆಕ್ರಮಿಸಿದಷ್ಟೂ ಮೈ ಬಿಚ್ಚಿದಳು ಮಾಮಿ. ಸೃಷ್ಟಿಗೆ ಆ ಕ್ಷಣದಲ್ಲಿದ್ದುದು ಒಂದೇ ಲಯ. ಒಂದೇ ತಾನ. ಒಂದೇ ತಾಡನ. ಗೋವರ್ಧನರಾಯರು ಆಕೆಯನ್ನು ಅಪ್ಪಿದರು, ಆವರಿಸಿದರು, ತಣಿಸಿದರು, ತಲ್ಲಣಿಸಿದರು.
ನನ್ನೊಳಗೇ ನನ್ನನ್ನು ಕರೆಯುತ್ತಿದ್ದೀಯೇ
ನಾನು ಬಂದೆ. ನಾನು ಬಂದೆ.
ಇನ್ನೇನು ಹುಟ್ಟೊಂದು ಸಿದ್ಧಿಸಬೇಕು, ತಮ್ಮ ಮೇಲೆ ದೇಹದುದ್ದಕ್ಕೂ ಚಾಚಿಕೊಂಡು ಏದುಸಿರು ಬಿಡುತ್ತಿದ್ದ ಗೋವರ್ಧನರಾಯರನ್ನು ಪಕ್ಕಕ್ಕೆ ನೂಕಿ, ಥಟ್ಟನೆ ಮಾಮಿ ಎದ್ದು ನಿಂತಳು. ಸರಸರನೆ ಬೀರುವಿನತ್ತ ನಡೆದು ಅದರಲ್ಲಿದ್ದ ಕಡುಗೆಂಪು ಬಣ್ಣದ ಲಂಗವೊಂದನ್ನು (ಪೆಟ್ಟಿಕೋಟೇ ಇರಬೇಕು) ಎಳೆದು ಅವಸರಸರವಾಗಿ ಧರಿಸುತ್ತಾ, ಮತ್ತದೇ ಬಣ್ಣದ ಶಾಲೊಂದರಿಂದ ಎದೆಯನ್ನು ಮುಚ್ಚಿಕೊಳ್ಳುತ್ತ, ’ಪುಟ್ಟಕ್ಕ ಕರೀತಿದಾಳೆ. ನಾನು ಅಲ್ಲಿರಬೇಕು.’ ಅಂದು ಗೋವರ್ಧನರಾಯರತ್ತ ತಿರುಗಿ ಕೂಡಾ ನೋಡದೆ ಬಾಗಿಲು ತೆರೆದು ಅದರಾಚೆಗಿನ ಕತ್ತಲಿಗೆ ಅಡಿಯಿಟ್ಟಳು. ಹೆಡೆಯೆತ್ತಿದ್ದ ಗೋವರ್ಧನರಾಯರ ಪೌರುಷಕ್ಕೆ ಅಪ್ಪಳಿಸಿದಂತಾಯ್ತು. ತೆರೆದ ಬಾಗಿಲಿನಿಂದ ಒಳನುಗ್ಗಿದ ಥಣ್ಣನೆಯ ಗಾಳಿ ಗೋವರ್ಧನರಾಯರ ಬೆತ್ತಲೆ ಮೈಯ್ಯನ್ನು ಅಲುಗಿಸಿತೋ ಇಲ್ಲವೋ, ಅವಮಾನ ಇಮ್ಮಡಿಸಿತು. ತಮ್ಮ ಬೆತ್ತಲೆ ಮೈ ತಮಗೇ ಮುಜುಗರವಾಯಿತು. ನಾಚಿಕೆಯಿಂದ ಆರೂವರೆ ಅಡಿ ದೇಹ ಕುಗ್ಗಿಬಿಟ್ಟಿತು. ಕಾಲಡಿ ಹೊರಳಿ ಬಿದ್ದಿದ್ದ ಕವುದಿಯನ್ನು ಕುತ್ತಿಗೆವರೆಗೂ ಹೊದ್ದು ಮಲಗಿಬಿಟ್ಟರು.

Monday, October 1, 2007

ಗಾಂಧಿ ಎಂಬ ಸವಾಲು


ಗೆಳೆಯರೇ,

ನಮ್ಮ ಪಾಲಿಗೆ ಗಾಂಧೀಜಿ ನಾವು ಮುಟ್ಟಲಾರದ ಒಂದು ಸ್ಥಿತಿ ಮತ್ತು ಗತಿ. ಹೀಗಾಗಿ ನಾವು ಗಾಂಧೀಜಿಯನ್ನು ಗೇಲಿ ಮಾಡುತ್ತಲೇ ಬಂದೆವು, ಕುಡುಕರ ಗುಂಪು ಕುಡಿಯದ ಗೆಳೆಯನನ್ನು ಛೇಡಿಸುವ ಹಾಗೆ. ಸಜ್ಜನ ಮಿತ್ರರನ್ನು ಹುರುಪಿನ ಪೋಲಿ ಗೆಳೆಯರು ರೇಗಿಸುವ ಹಾಗೆ. ಸಿಗರೇಟು ಸುಡುವವರು, ಕಾಫಿ ಕೂಡ ಕುಡಿಯದವನನ್ನು ತಮಾಷೆ ಮಾಡಿದ ಹಾಗೆ. ಆದರೆ ಒಳಗೊಳಗೇ ಎಲ್ಲರಿಗೂ ಗಾಂಧಿಯಂತಾಗುವ ಆಶೆ. ಆ ನಿಷ್ಠುರತೆಯನ್ನು ದೊರಕಿಸಿಕೊಳ್ಳುವ ಆಸೆ. ಅದು ಸಾಧ್ಯವಾಗುವ ಮಾತಲ್ಲ ಅಂತ ಗೊತ್ತಿದ್ದರೂ ಆ ಆಸೆ.


ಗೆಳೆಯ ಜಿ ಎನ್ ಮೋಹನ್ ಗಾಂಧಿ ಜಯಂತಿಯ ನೆನಪಿಗೊಂದು ಗಾಂಧೀ ಮಾತು ಕಳಿಸಿದ್ದಾರೆ. ಅದನ್ನು ನಿಮ್ಮೆಲ್ಲರಿಗೆ ದಾಟಿಸುತ್ತಿದ್ದೇನೆ.
ಗಾಂಧಿ ನಮ್ಮ ವಿದ್ಯೆಯಾಗಲಿ. ಸಜ್ಜನಿಕೆಯಾಗಲಿ, ದಿಟ್ಟತನವಾಗಲಿ.