ನಮ್ಮ ಅಭಿಜಾತ ಸಾಹಿತ್ಯಕೃತಿಗಳ ಮುಖ್ಯ ಪ್ರೇರಣೆಗಳು ಎರಡು; ಮೇಲ್ನೋಟಕ್ಕೆ ಸುವ್ಯಕ್ತವಾಗುವ ದೈವಚಿಂತನೆ. ಒಳನೋಟಕ್ಕಷ್ಟೇ ಕಾಣಿಸುವ ಮಾನವೀಯತೆ. ಕೊನೆಗೂ ದೈವತ್ವ ಮಾನವತೆಯನ್ನು ಗೆಲ್ಲುತ್ತದೆಯೋ ಮನುಷ್ಯ ಎತ್ತರೆತ್ತರಕ್ಕೆ ಬೆಳೆದು ದೇವರಾಗುತ್ತಾನೋ ಅನ್ನುವುದು ಆಯಾ ಓದುಗರ ತಿಳುವಳಿಕೆಗೆ ಬಿಟ್ಟದ್ದು. ಎಲ್ಲರ ಹಾಗೆ ಚಂದಿರನನ್ನು ಬೇಡುವ ಹಠಮಾರಿ ಕಂದನಾಗಿ ಹುಟ್ಟಿದ ರಾಮ ರಾಮಾಯಣದೊಳಗೇ ಬೆಳೆಯುತ್ತಾ ಹೋಗುತ್ತಾನೆ. ತಪ್ಪುಗಳನ್ನು ಮಾಡಿಯೂ ಕೊನೆಗೆ ಪುರುಷೋತ್ತಮ ಅನ್ನಿಸಿಕೊಳ್ಳುತ್ತಾನೆ. ಮಣ್ಣು ತಿನ್ನುವ ಮುಕುಂದನಾಗಿ ಹುಟ್ಟಿದ ಶ್ರೀಕೃಷ್ಣ ಅಂತಿಮವಾಗಿ ಯೋಗೇಶ್ವರನಾಗುತ್ತಾನೆ. ಹೀಗೆ ಹುಲುಮಾನವರಂತೆ ಹುಟ್ಟಿ ದೇವರಾಗುವ ಪವಾಡ ಸಹಜವಾಗಿಯೇ ಸಂಭವಿಸುವುದು ರಾಮಾಯಣ, ಮಹಾಭಾರತಗಳ ಅಚ್ಚರಿ. ಕೃಷ್ಣಕತೆಯಲ್ಲಿ ಒಂದಷ್ಟು ರೋಚಕತೆ, ಉತ್ಪ್ರೇಕ್ಪೆ ಕಾಣಿಸಬಹುದು. ಆದರೆ ರಾಮಾಯಣದಲ್ಲಿ ಉತ್ಪ್ರೇಕ್ಪೆಯೇ ಇಲ್ಲ. ರಾಮ ಎಲ್ಲರಂತೆ ಒಬ್ಬ ಬಾಲಕ. ಎಲ್ಲರಂತೆ ಕಾಡಿಗೆ ಹೋಗುತ್ತಾನೆ. ಹೆಂಗಸನ್ನು ಕೊಲ್ಲುವುದಕ್ಕೆ ಹಿಂಜರಿಯುತ್ತಾನೆ. ಸೀತೆಯನ್ನು ಮದುವೆಯಾಗಲೂ ಆತನಿಗೆ ಹಿಂಜರಿಕೆಯೇ. ಕೊನೆಗೆ ಕಾಡಿಗೆ ನಡಿ ಅಂದಾಗ ಮೌನವಾಗಿ ಕಾಡುಪಾಲಾಗುತ್ತಾನೆ. ಸೀತೆ ಕಳೆದುಹೋದಾಗ ಶೋಕಿಸುತ್ತಾನೆ. ಕಪಿಗಳ ಜೊತೆ ಸೇರಿ ಸೇತುವೆ ಕಟ್ಟುತ್ತಾನೆ. ಲಕ್ಪ್ಮಣ ಸತ್ತಾಗ ಮತ್ತೊಮ್ಮೆ ಅಳುತ್ತಾನೆ.
ಆದರೆ ಕೃಷ್ಣ ಇಡೀ ಮಹಾಭಾರತದಲ್ಲಿ ಒಮ್ಮೆಯೂ ಅಳುವುದಿಲ್ಲ. ಅವನು ಸದಾ ಮಂದಸ್ಮಿತ. ಎದುರಿಗೆ ಮಾರಣಹೋಮ ನಡೆಯುತ್ತಿದ್ದರೂ ಅವನ ತುಟಿಯ ಕಿರುನಗೆ ಮಾಸುವುದಿಲ್ಲ. ಶಿಶುಪಾಲ ಇನ್ನಿಲ್ಲದಂತೆ ಬೈದರೂ ಆತನಿಗೆ ಏನೂ ಅನ್ನಿಸುವುದಿಲ್ಲ. ಆ ಅಳುವ ದೇವರು ಶ್ರೀರಾಮ ಮತ್ತು ಈ ಅಳದ ದೇವರು ಶ್ರೀಕೃಷ್ಣ-ಇವರಿಬ್ಬರ ವ್ಯಕ್ತಿತ್ವದಲ್ಲಿ ಇಡೀ ಮನುಕುಲದ ವ್ಯಕ್ತಿತ್ವವೂ ಅಡಗಿಕೊಂಡಿದೆ.
ದೇವರು ಅಳುತ್ತಾನೆ ಅನ್ನುವ ಕಲ್ಪನೆಯೇ ನಮಗೆ ಹೊಸದು. ರಾಮಾಯಣವನ್ನು ನಾವು ಸಾವಿರ ಸಲ ಓದಿದ್ದರೂ ರಾಮ ಅಳುವುದು ನಮಗೆ ವಿಚಿತ್ರವಾಗಿ ಕಂಡಿರುವುದಿಲ್ಲ. ಆದರೆ ರಾಮ ದೇವರ ಅವತಾರ ಎಂದು ನೋಡಿದಾಗ ಆತನ ಅಳು ಕೊಂಚ ಅಸಹಜ ಅನ್ನಿಸುತ್ತದೆ. ಆತ ಅತ್ತಿದ್ದರಿಂದ ಅವನಿಗೆ ಸೀತೆಯ ಮೇಲಿರುವ ಪ್ರೀತಿ ಗೊತ್ತಾಗುತ್ತದೆ ಎಂದು ನಾವು ಭಾವಿಸಬೇಕು. ಹೀಗಾಗಿ ಅದೊಂದು ಕವಿಕಲ್ಪನೆ ಎಂದು ತಳ್ಳಿಹಾಕುವಂತಿಲ್ಲ.
ಹಾಗಿದ್ದರೆ ಶ್ರೀರಾಮ ಅತ್ತಿದ್ದೇಕೆ? ಅದೇ ಆತ ಸೀತೆಯನ್ನು ಅನುಮಾನಿಸಿ ಕಾಡಿಗೆ ಅಟ್ಟಿದಾಗ ಅಳಲಿಲ್ಲ ಯಾಕೆ? ಶ್ರೀರಾಮನನ್ನು ಪುರುಷೋತ್ತಮ ಎಂದು ಕರೆಯುತ್ತಾ ವಾಲ್ಮೀಕಿ ಪುರುಷೋತ್ತಮ , the complete man, ಹೇಗಿರಬೇಕು ಎಂದು ಸೂಚಿಸುತ್ತಿರಬಹುದೇ? ಸಂಕಟವಾದಾಗ ಅಳುವ, ಸಾಗರದ ಮುಂದೆ ಅಸಹಾಯಕನಾಗುವ, ಬಿಟ್ಟು ಕೊಡಬೇಕಾಗಿ ಬಂದಾಗ ಕಲ್ಲಾಗುವ, ತೊರೆಯಬೇಕಾಗಿ ಬಂದಾಗ ನಿಶ್ಟಯವಾಗುವ ರಾಮನ ಈ ಎಲ್ಲ ಗುಣಗಳೇ ನಮ್ಮನ್ನು ಅತ್ಯುತ್ತಮರನ್ನಾಗಿಸುತ್ತದೆ ಎಂದು ಹೇಳುವುದು ವಾಲ್ಮೀಕಿಯ ಪ್ರಯತ್ನವಿರಬಹುದೇ?
ನಮ್ಮ ದೇವರ ಕಲ್ಪನೆ ಕಲಾತ್ಮಕವಾದದ್ದು. ಅಷ್ಟೇ ವಿರೋಧಾಭಾಸಗಳಿಂದ ಕೂಡಿದ್ದು. ಏಕಪತ್ನಿವ್ರತಸ್ಥ ರಾಮನನ್ನು ನಂಬುತ್ತಲೇ ನಾವು ಹದಿನಾರು ಸಾವಿರದ ಎಂಟು ಹೆಂಡಿರ ಕೃಷ್ಣನನ್ನೂ ನಂಬುತ್ತೇವೆ. ರಾಮನನ್ನು ಯಾವ ಕಾರಣಕ್ಕೆ ಮೆಚ್ಚುತ್ತೇವೋ ಅದೇ ಕಾರಣಕ್ಕೆ ಕೃಷ್ಣನನ್ನೂ ಮೆಚ್ಚುತ್ತೇವೆ. ಭಕ್ತಿಯಿಂದ ಕಣ್ಮುಚ್ಚಿ ನಿಂತಾಗ ಭಕ್ತನಿಗೆ ಕೃಷ್ಣನ ಸಂಸಾರ ನೆನಪಾಗುವುದಿಲ್ಲ. ಹಾಗಂತ ರಾಮನ ಕಠೋರ ನಿಷ್ಠೆ ಕೂಡ ನೆನಪಿಗೆ ಬರುವುದಿಲ್ಲ. ಈ ಎರಡೂ ವ್ಯಕ್ತಿತ್ವಗಳೂ ತಮ್ಮ ಐಹಿಕದ ಕ್ರಿಯೆಗಳನ್ನು ಅದು ಹೇಗೋ ಮೀರಿದವರು.
ಹಾಗೆ ನೋಡಿದರೆ ನಮ್ಮ ಜನಾಂಗೀಯ ಸ್ಮೃತಿಗಳು ಗಮನ ಸೆಳೆಯುವಂತಿವೆ. ನಮಗೆ ಅತ್ಯಂತ ಪುರಾತನವಾಗಿ ನೆನಪಿರುವುದು ದೇವರು. ಆತ ಅನಾದಿ. ಆಲದ ಎಲೆಯ ಮೇಲೆ ಮಲಗಿದ್ದ ಶಿಶುವಾಗಿ ದೇವರನ್ನು ಕಾಣುವ ನಮಗೆ ಪ್ರಳಯಕಾಲದಲ್ಲಿ ದೋಣಿಯೊಂದಿಗೆ ಬರುವ ಮನುವೂ ದೇವರಂತೆಯೇ ಕಾಣಿಸುತ್ತಾನೆ. ಇರುವ ಒಬ್ಬ ದೇವನನ್ನೇ ಅವತಾರಗಳಲ್ಲಿ ನೋಡಲು ನಾವು ಹವಣಿಸುತ್ತೇವೆ. ದೇವರು ವಿಧವಿಧ ಪುರಾಣಗಳಲ್ಲಿ ಪ್ರಕಟಗೊಳ್ಳುತ್ತಾ ಹೋಗುತ್ತಾರೆ. ಋಷಿಗಳ ಸೇವೆಯಲ್ಲಿ, ರಾಕ್ಪಸರ ವೈರದಲ್ಲಿ, ಮರ್ತ್ಯರ ಭಕ್ತಿ-ವಿಭಕ್ತಿಯಲ್ಲಿ ನಾಸ್ತಿಕನ ನಿರಾಕರಣೆಯಲ್ಲಿ ದೇವರು ಪ್ರಕಟಗೊಳ್ಳುತ್ತಾನೆ. ದೇವರು ಇದ್ದಾನೋ ಇಲ್ಲವೋ ಎಂಬ ಚರ್ಚೆ ಇವತ್ತಿಗೂ ನಡೆಯುತ್ತಲೇ ಇದೆ. ಆದರೆ ದೇವರ ಮುಂದೆ ನಿಂತ ಭಕ್ತನಿಗೆ ನಾಸ್ತಿಕನ ವಾದ ನೆನಪಿನಲ್ಲಿ ಉಳಿಯುವುದಿಲ್ಲ.
ಯಾವ ತಂತ್ರಜ್ಞಾನವಾಗಲೀ, ಉನ್ನತಿಕೆಯಾಗಲಿ, ಸ್ಥಾನಮಾನವಾಗಲೀ, ವಿದ್ಯೆಯಾಗಲೀ ಅಳಿಸಲಾರದ ನೆನಪು ದೇವರದ್ದು. ದೇವರನ್ನು ನಿರಾಕರಿಸುವವನು ಅದನ್ನು ತನ್ನ ವಿದ್ಯೆಯಿಂದ ಮಾಡಿರುವುದಿಲ್ಲ, ವಿ್ಡ್ನಿಂದ ಮಾಡಿರುತ್ತಾನೆ. ಹಾಗೇ ದೇವರನ್ನು ಒಪ್ಪಿಕೊಳ್ಳುವವನೂ ಕೂಡ ತನ್ನ WISDOMನಿಂದಲೇ ದೇವರನ್ನು ಕಂಡುಕೊಂಡೇ ಎಂದು ಭಾವಿಸಿಕೊಂಡಿರುತ್ತಾನೆ. ತಮಾಷೆಯೆಂದರೆ ನಾಸ್ತಿಕನಿಗೆ ದೇವರಿಲ್ಲ ಅನ್ನುವುದು ಜ್ಞಾನದ ಮೆಟ್ಟಿಲಾದರೆ, ಆಸ್ತಿಕನಿಗೆ ದೇವರಿದ್ದಾನೆ ಅನ್ನುವ ಅರಿವೇ ಜ್ಞಾನದ ಮೆಟ್ಟಿಲು. ಹೀಗಾಗಿ ನಾಸ್ತಿಕರೂ ಆಸ್ತಿಕರೂ ಅದೇ ಕಾರಣಕ್ಕೆ ಪರಸ್ಪರರನ್ನು ದೂಷಿಸಬಲ್ಲರು. ಅವಿವೇಕಿ ದೇವರಿಲ್ಲ ಅನ್ನುತ್ತಾನೆ ಎಂದು ಹೀಯಾಳಿಸುವುದೂ ಅವಿವೇಕಿ, ದೇವರಿದ್ದಾನೆ ಅಂತ ನಂಬಿದ್ದಾನೆ ಎಂದು ಹಾಸ್ಯಮಾಡುವುದೂ ಮೂಲದಲ್ಲಿ ಒಂದೇ ಅನ್ನುವುದನ್ನು ಗಮನಿಸಿ. ಹಾಗೇ, ವೈಜ್ಞಾನಿಕವಾಗಿ ತುಂಬ ಸಾಧನೆ ಮಾಡಿದ ವ್ಯಕ್ತಿ ಕೂಡ ತನ್ನ ಸಾಧನೆ ತನ್ನ ಕುಲದೇವರಿಂದ ಸಾಧ್ಯವಾಯ್ತು ಎಂದು ನಂಬಬಲ್ಲ. ಅದು ದೇವರಿಗಿರುವ ಶಕ್ತಿ. ಹೀಗಾಗಿ ದೇವರು ಎನ್ನುವುದು ವಿದ್ಯೆ ಅಪಹರಿಸಲಾರದ ಭಾವ. ಅನುಭವ ನಮ್ಮ ಮುಗ್ಧತೆಯನ್ನೂ, ಓದು ನಮ್ಮ ಅಜ್ಞಾನವನ್ನೂ, ಪ್ರವಾಸ ನಮ್ಮ ಸಂಕೋಚವನ್ನೂ ಕಡಿಮೆ ಮಾಡುತ್ತದೆ. ಆದರೆ ಇವ್ಯಾವುವೂ ನಂಬಿಕೆಯನ್ನು ಕೆಣಕಲಾರವು.
ಇಂಥ ದೇವರು ವಿಷದಗೊಳ್ಳುವುದು ಮಂತ್ರ, ಕ್ರಿಯೆ ಮತ್ತು ಭಕ್ತಿಯ ಮೂಲಕ. ಇವುಗಳ ಪೈಕಿ ಮಂತ್ರ ಕೆಲವರ ಸೊತ್ತು. ಶಬ್ದಗಳ ಮೂಲಕ ದೇವರನ್ನು ಕಾಣುವುದು ಕಷ್ಟ. ವೇದಗಮ್ಯ ಎಂದು ದೇವರನ್ನು ಕರೆಯುವಾಗ ನಾವು ಊಹಿಸುವ ಅರ್ಥ, ಭಗವಂತನನ್ನು ನೋಡುವುದಕ್ಕೆ ವೇದಗಳೇ ಕಣ್ಣು ಎಂದು. ತನ್ನ ಲಯಬದ್ಧತೆ ಮತ್ತು ಸ್ಪಷ್ಟತೆಯಲ್ಲಿ ಮಂತ್ರ ದೇವರ ಸಾಕ್ಪಾತ್ಕಾರ ಮಾಡುತ್ತಾ ಹೋಗುತ್ತದೆ ಎನ್ನುತ್ತಾರೆ. ಹಾಗೇ ಕ್ರಿಯೆಯ ಮೂಲಕ ದೇವರಿಗೆ ಹತ್ತಿರಾಗುವುದಕ್ಕೆ ಸಾಧ್ಯವಿದೆ ಅನ್ನುತ್ತವೆ ಶಾಸ್ತ್ರಗಳು. ಕ್ರಿಯೆಯೆಂದರೆ ಪೂಜೆ, ಅಲಂಕಾರ ಮತ್ತು ಆಚರಣೆಗಳು. ಮಂತ್ರಕ್ಕಿಂತ ಕ್ರಿಯೆ ಕಷ್ಟದ್ದು. ಆದರೆ ಇವತ್ತು ಉಳಕೊಂಡಿರುವುದು ಕ್ರಿಯೆ ಮಾತ್ರ. ಅದೂ ಅಭ್ಯಾಸಬಲದಿಂದ.
ಮೂರನೆಯದು ಭಕ್ತಿ. ಭಕ್ತಿಯೆಂದರೆ ಶ್ರದ್ಧೆ. ಅದೊಂದು ರೀತಿಯಲ್ಲಿ ಪ್ರೀತಿಯಂತೆ, ಪರಸ್ಪರರ ನಡುವಿನ ನಂಬಿಕೆಯಂತೆ; ನಿನ್ನ ನಾನು ಬಿಡುವನಲ್ಲ... ಎನ್ನ ನೀನು ಬಿಡಲು ಸಲ್ಲ ಎಂಬಂತೆ. ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ, ಎನ್ನ ನೀ ಕೈಬಿಟ್ಟು ಹೋದರೆ ನಿನಗೆ ಆಣೆ.. ಎಂದು ಪ್ರಮಾಣ ಮಾಡಿಕೊಂಡಂತೆ. ದಾಸರದು ಈ ಹಾದಿ. ಮಂತ್ರಗಳನ್ನು ನಂಬುವವರು; ಋಷಿಗಳು. ಕ್ರಿಯೆಯನ್ನು ನಂಬುವವರು; ಔಪಾಸಕರು. ಇವೆರಡನ್ನೂ ನಂಬದೆ ತಮ್ಮ ದೈನ್ಯವನ್ನಷ್ಟೇ ನಂಬುವವರು ದಾಸರು.
*****
ಬರ್ಬರಾ ಗ್ರೀ್ ಮತ್ತು ವಿಕ್ಟ್ ಗೊಲಾಂ್ ಎಂಬಿಬ್ಬರು 1962ರಲ್ಲಿ God of a hundred names ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. ಜಗತ್ತಿನ ಎಲ್ಲಾ ಧರ್ಮಗಳ, ಎಲ್ಲಾ ನಂಬಿಕೆಗಳ, ಎಲ್ಲಾ ಶ್ರದಾ್ಧಕೇಂದ್ರಗಳು ದೇವರನ್ನು ಹೇಗೆ ಕಾಣುತ್ತಿವೆ, ಹೇಗೆ ತಿಳಿಯುತ್ತವೆ ಅನ್ನುವುದನ್ನು ಆಯಾ ಸಂಸ್ಕೃತಿಯ ಪ್ರಾರ್ಥನೆಗಳ ಮೂಲಕ ಕಾಣುವುದಕ್ಕೆ ಸಂಪಾದಕರಿಬ್ಬರೂ ಯತ್ನಿಸಿದ್ದಾರೆ. ಈಜಿಪ್ಟಿನ ಒಂದು ಪ್ರಾರ್ಥನೆ ಆತನನ್ನು ನಿರಾಕಾರ ಅನ್ನುತ್ತದೆ. ನಮ್ಮ ಶ್ಲೋಕವೂ ನಿರಾಕಾರಮೇಕಂ ಎನ್ನುತ್ತದೆ. ಈಜಿಪ್ಟಿನಲ್ಲಿ ಹೇಗೋ ಇಂಡಿಯಾದಲ್ಲೂ ಶಿವನಿಗೆ ಆಕಾರವಿಲ್ಲ, ರೂಪವಿಲ್ಲ.
ಕೆಲವೊಂದು ಕುತೂಹಲಕಾರಿ ಪ್ರಾರ್ಥನೆಗಳನ್ನು ನೋಡಿ. ಅವು ನಿಜಕ್ಕೂ ರೋಮಾಂಚಗೊಳಿಸುತ್ತವೆ.
1900ರ ಆಸುಪಾಸಿನಲ್ಲಿ ಬದುಕಿದ್ದ ವಿನಿಫ್ರೆ್ ಎಂಬಾತ ದೇವರನ್ನು ಕೇಳಿಕೊಳ್ಳುವುದು ಇಷ್ಟು;
ಓ ದೇವರೇ,
ಸಾಯುವ ತನಕ
ಕೆಲಸ ಕೊಡು.
ಕೆಲಸ ಮುಗಿಯುವ ತನಕ
ಬಾಳು ಕೊಡು.
ಒಂದು ಅನಾಮಿಕ ಪ್ರಾರ್ಥನೆ ಹೀಗಿದೆ;
ಬದಲಾಯಿಸಲಾಗದ್ದನ್ನು ಒಪ್ಪಿಕೊಳ್ಳೋ ಸ್ಥೈರ್ಯ
ಬದಲಾಯಿಸಬಹುದಾದ್ದನ್ನ ಬದಲಾಯಿಸೋ ಧೈರ್ಯ
ಇವೆರಡರ ವ್ಯತ್ಯಾಸ ಅರಿಯುವ ಅರಿವ
ಕೊಡು ಓ ದೇವಾ.
ಇವೆಲ್ಲದರ ನಡುವೆ, ಮುಗ್ಧತೆ ಹಾಗು ಧನ್ಯತೆಯನ್ನು ಕೊಡು ಅಂತ ಕೇಳಿಕೊಂಡವರಿದ್ದಾರೆ. ಓ್ಡ ಬ್ರೆಟ್ `ಚಿಕ್ಕದು ನನ್ನ ದೋಣಿ; ಅಗಾಧ ನಿನ್ನ ಕಡಲು; ಕಾಯೋ ಹಗಲಿರುಳು' ಎಂದು ಕೇಳಿಕೊಂಡ. ಯಾವ ಅರ್ಥವೂ ಇರದ, ಉಪಯೋಗಕ್ಕೆ ಬರದ ಮಾತೊಂದೂ ಬರದ ಹಾಗೆ ವರವ ಕೊಡು ಗುರುವೆ ಎಂದ ಪೆರಿಕ್ಲ್. ಎಲ್ಲರನ್ನೂ ಸರಿಮಾಡು; ನನ್ನಿಂದಲೇ ಶುರುಮಾಡು ಎಂದು ಚೀನಾದ ವಿದ್ಯಾರ್ಥಿ ಬರಕೊಂಡಿದ್ದ.
ಕೆಲವೊಂದು ತಮಾಷೆಯ ಪ್ರಾರ್ಥನೆಗಳೂ ಇದರಲ್ಲಿ ಸೇರಿವೆ;
ಇದೊಂದು ಉದಾಹರಣೆ ನೋಡಿ;
Some ha'e meat, and cann eat,
And some wad eat that want it;
But we ha'e meat, and we can eat
And sae the Lord be thankit.
ತಿಂಡಿಯಿದೆ ತಿನ್ನಲಾರ್ರು; ಅದು ಕೆಲವರ ಪಾಡು.
ತಿನ್ನೊ ಆಸೆ ತಿಂಡಿಯಿಲ್ಲ; ಅಂಥೋರಿದ್ದಾರೆ ನೋಡು;
ತಿಂಡಿಯಿದೆ ತಿನ್ನಬಲ್ಲೆವು; ಊಟ ಶುರುಮಾಡು.
ಅದಕೂ ಮುಂಚೆ ತಿಂಡಿಕೊಟ್ಟ ಅವನಿಗಾಗಿ ಹಾಡು
ಒಂದು ಪುಟ್ಟ ಕತೆಯೂ ಇಲ್ಲಿದೆ;
ಆತ ದೇವರನ್ನು ಕೇಳಿಕೊಂಡ; ಕಾಯೋ ಕರುಣಾನಿಧಿ...
ಹಾಗಂತ ಮತ್ತೆ ಮತ್ತೆ ಹೇಳಿಕೊಂಡ. ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ದುಷ್ಟಶಕ್ತಿ ಹೇಳಿತು. `ಅಷ್ಟೆಲ್ಲಾ ಬಡ್ಕೋತಿದ್ದೀಯಲ್ಲ. ಒಂದ್ಸಾರಿಯಾದ್ರೂ ಆ ದೇವರು ನಾನು ಇಲ್ಲಿದ್ದೇನೆ ಅಂತ ಹೇಳಿದ್ದಾನಾ?'
ಅವನಿಗೆ ಯೋಚನೆಯಾಯಿತು. ದುಃಖದಿಂದ ಹೊದ್ದು ಮಲಗಿದ. ಕನಸಲ್ಲಿ ಭಗವಂತ ಬಂದ; `ಯಾಕಪ್ಪಾ. ಪ್ರಾರ್ಥನೆ ನಿಲ್ಲಿಸಿಬಿಟ್ಟೆ'.
`ಕರೆದರೂ ದನಿ ಕೇಳಲಿಲ್ಲವೇ ನಿನಗೆ. ಒಂದು ಸಲವಾದರೂ ನಾನಿಲ್ಲಿದ್ದೇನೆ ಅನ್ನಬಾರದಾ?'
ನೀನು ಕರೆದಾಗ ನಾನು `ನೋಡಿಲ್ಲಿದ್ದೇನೆ ನಾನು' ಅನ್ನಬೇಕಾಗಿಲ್ಲ. ನಿನ್ನ ಪ್ರಾರ್ಥನೆಯ ಮೂಲಕ `ನಾನಿಲ್ಲಿದ್ದೇನೆ ಅಂತ ನೀನು ನನಗೆ ಹೇಳುತ್ತಿರುತ್ತಿ ಅಷ್ಟೇ'.
*****
ನಮ್ಮಲ್ಲೂ ಇಂಥ ಅಸಂಖ್ಯಾತ ಪ್ರಾರ್ಥನೆಗಳಿವೆ. ನಮ್ಮ ಪ್ರಾರ್ಥನೆಗಳು ಅನೇಕ ಸಲ ಆರ್ತನಾದಗಳೂ ಆಗಿರುತ್ತವೆ. ದೀಪವೂ ನಿನ್ನದೆ ಗಾಳಿಯೂ ನಿನ್ನದೆ ಆರದಿರಲಿ ಬೆಳಕು ಎಂಬ ಸಾಂಕೇತಿಕ ಪ್ರಾರ್ಥನೆಯಿಂದ ಹಿಡಿದು `ನಾ ನಿನ್ನ ದಾಸನಯ್ಯಾ... ನೀನೆಲ್ಲ ಕಾಯಬೇಕೋ' ಎಂಬಂಥ ಸ್ಪಷ್ಟ ಪ್ರಾರ್ಥನೆಗಳ ತನಕ ಸಹಸ್ರಾರು ಬೇಡಿಕೆಗಳು ನಮ್ಮ ಮುಂದಿವೆ ಅವುಗಳ ಪೈಕಿ ಇದೊಂದು ಅಪರೂಪದ ಪ್ರಾರ್ಥನೆ, ಕೇಳಿ;
ಅಂಥಿಂಥದೆಲ್ಲವು ಏನೇ ಬರಲಿ
ಚಿಂತಿ ಎಂಬುದೊಂದು ದೂರವಿರಲಿ
ಅಂತು ಪಾರಿಲ್ಲದ ಗುರುದೇವನೊಬ್ಬನ
ಅಂತಃಕರಣೆನ್ನ ಮೇಲಿರಲಿ
ಬಡತನವೆಂಬುದು ಕಡೆತನಕಿರಲಿ
ಒಡವೆ ವಸ್ತುಗಳೆಲ್ಲ ಹಾಳಾಗಿ ಹೋಗಲಿ
ನಡುವೆಯೆ ನಮಗೆ ದಾರಿಯು ತಪ್ಪಲಿ
ಗಿಡಗಂಟಿಯ ಆಸ್ರ ದೊರಕದ್ಹಂಗಾಗಲಿ
ಅಂಬಲಿ ಕೂಡ ಸಿಗದ್ಹಂಗಾಗಲಿ
ನಂಬಿಗಿ ಎಳ್ಳಷ್ಟು ಇಲ್ಲದ್ಹಂಗಾಗಲಿ
ಕಂಬ ಮುರಿದು ತಲೆಮೇಲೇ ಬೀಳಲಿ
ಡಂಭ ಲೌಡಿಮಗ ಇವನೆಂದೆನಲಿ
ಗಂಡಸುತನವಿದ್ದು ಇಲ್ಲದ್ಹಂಗಾಗಲಿ
ಹೆಂಡತಿ ಮಕ್ಕಳು ಬಿಟ್ಟೋಡಲಿ
ಕುಂಡಿಕುಂಡಿ ಸಾಲಗಾರ ಬಂದೊದೆಯಲಿ
ಬಂಡು ಮಾಡಿ ಜನ ನಗುವಂತಾಗಲಿ
ಉದ್ಯೋಗ ವ್ಯಾಪಾರ ನಡೆಯದ್ಹಂಗಾಗಲಿ
ಬುದ್ಧಿ ನನ್ನದು ನಶಿಸಿ ಮಾಸಿ ಹೋಗಲಿ
ಮದ್ದಿಟ್ಟು ಯಾರಾದರೂ ನನ್ನ ಕೊಲ್ಲಲಿ
ಹದ್ದು ಕಾಗಿ ನರಿ ಹರಕೊಂಡು ತಿನ್ನಲಿ
ದಾಸಪಂಥವೊಂದುಳಿಯದಂತಾಗಲಿ
ಆಸೆಮೋಹವೆಲ್ಲ ಅಳಿದುಹೋಗಲಿ
ಲೇಸುಳ್ಳ ಕೂಡಲೂರೇಶನಲಿ ನನ್ನ
ಧ್ಯಾಸವೊಂದು ಮಾತ್ರ ನಿಜವಾಗಿರಲಿ.
ಇದರ ವಿರೋಧಾಭಾಸ ಗಮನಿಸಿ. ಇಲ್ಲಿ ಕೊನೆಯ ಸಾಲಿನ ಬೇಡಿಕೆ ಈಡೇರಿದರೆ ಅದಕ್ಕೂ ಮೊದಲಿನ ಇಪ್ಪತ್ತಮೂರು ಸಾಲುಗಳ ಬೇಡಿಕೆ ಸುಳ್ಳಾಗುತ್ತದೆ. ಮೊದಲ ಇಪ್ಪತ್ತಮೂರು ಸಾಲುಗಳ ಬೇಡಿಕೆ ನಿಜವಾದರೆ ಕೊನೆಯ ಸಾಲಿನ ಬೇಡಿಕೆ ತಾನೇ ತಾನಾಗಿ ಈಡೇರುತ್ತದೆ. ಕೊನೆಯ ಸಾಲಿನ ಬೇಡಿಕೆ ಈಡೇರಿದೊಡನೆ ಉಳಿದೆಲ್ಲ ಸಾಲುಗಳ ಕೋರಿಕೆ ನಶಿಸಿಹೋಗುತ್ತದೆ.
ಹ್ಯಾಗಿದೆ ಭಕ್ತಿ ಮಾರ್ಗ!
Thursday, October 18, 2007
Subscribe to:
Post Comments (Atom)
4 comments:
nice sir.
ಜೋಗಿ,
ಒಂದು ಉತ್ತಮ ಪೀಸ್ ಗೆ ಧನ್ಯವಾದಗಳು. ಎ.ಎನ್. ಮೂರ್ತಿರಾಯರು ಹೇಳಿದ್ದಿರಬಹುದು- ಆಸ್ತಿಕನಿಗಿಂತ ನಾಸ್ತಿಕನಿಗೆ ಸಮಸ್ಯೆಗಳು ಜಾಸ್ತಿಯಂತೆ. ಆಸ್ತಿಕ ಯಾವ ಕಾರಣಗಳನ್ನೂ ನೀಡದೇ ದೇವರನ್ನು ನಂಬಬಹುದು. ಆದರೆ, ನಾಸ್ತಿಕ ತಾನು ದೇವರನ್ನು ಯಾಕೆ ನಂಬುವುದಿಲ್ಲ ಅನ್ನುವುದಕ್ಕೆ ಪ್ರತಿಯೊಬ್ಬರಿಗೂ ಕಾರಣಗಳನ್ನು ಕೊಡಬೇಕಾಗುತ್ತದಂತೆ. ಇದು, ಅವನ ಸಮಸ್ಯೆ. ಯಾರೂ ಏಕೆ ನೀನು ದೇವರನ್ನು ನಂಬುತ್ತೀ ಎಂದು ಕೇಳುವುದಿಲ್ಲ, ಆದರೆ, ನಾಸ್ತಿಕನಿಗೆ ಪ್ರತಿಯೊಬ್ಬರೂ ಯಾಕೆ ನೀನು ದೇವರನ್ನು ನಂಬುವುದಿಲ್ಲ ಎಂದು ಕೇಳುವವರೇ. ಮತ್ತಿನ್ನೊಂದು ಅಂದರೆ, ನಾಸ್ತಿಕ ಶರಣು ಹೋಗಬೇಕೆಂದರೆ ಆತನ ನೆರವಿಗೆ ಆತ ನಂಬದ ದೇವರೂ ಇರುವುದಿಲ್ಲ. ಆದರೆ, ಆಸ್ತಿಕನಿಗೆ ಇವ್ಯಾವ ಸಮಸ್ಯೆಯೂ ಇಲ್ಲ.
ಮೂರ್ತಿರಾಯರಿಗೆ ನೂರಾಗಿದ್ದಾಗ ಯಾವುದೋ ಪತ್ರಿಕೆಯವರು ಸಂದರ್ಶಿಸುತ್ತಾ ’ನಿಮಗೆ ದೇವರ ಅಸ್ತಿತ್ವದ ಬಗ್ಗೆ ಈಗೇನನಿಸುತ್ತದೆ?’ ಎಂದು ಕೇಳಿದ್ದರಂತೆ. ಮರೆವು ಜಾಸ್ತಿಯಾಗಿದ್ದ ಮೂರ್ತಿರಾಯರು ಅರಳುಮರಳಾಗಿ ’ದೇವರಿದ್ದಾನೆ’ ಎಂದು ಹೇಳಿಬಿಡಬಹುದು ಎಂದು ಹೇಳುತ್ತಾರೆಂದು ಯಾವನೋ ಒಬ್ಬ ಪತ್ರಕರ್ತನ ನಂಬಿಕೆಯೇನೋ? ಆದರೆ, ಮೂರ್ತಿರಾಯರು ಹೇಳಿದ್ದರಂತೆ ’ದೇವರು ನಿಜಕ್ಕೂ ನಮಗೆ ಬೇಕು. ಆದರೆ ಆತನಿಲ್ಲ ಅನ್ನುವುದೇ ನನ್ನ ದುಃಖ’ ಇದೇ ಮಾತನ್ನು ಅವರು ತಮ್ಮ ಪುಸ್ತಕದಲ್ಲಿಯೂ ಬರೆದಿದ್ದಾರೆ.
ದೇವರಿಲ್ಲ ಅನ್ನುವ ಅವರ ಆ ನಂಬಿಕೆಯೇ ಅವರನ್ನು ನೂರು ವರ್ಷ ಕಾಯಿತೇ? ಅಥವಾ ಅವನು ನಮಗೆ ಬೇಕು ಅನ್ನುವ ಹಂಬಲವೇ ಅವರನ್ನು ನೂರು ವರ್ಷ ಕಾಯುವಂತೆ ಮಾಡಿತೇ?
ಗುರು
Tumi tulukide adhyatma bhava...intha barahagalu jeevana payana nirantara niralavagalisuttave.
Dhanyavadagalu.
Geetanjali
ಸರ್, ಇನ್ನೂ ಹೆಚ್ಚೆಚ್ಚು ಇಂತಹ ಬರಹಗಳನ್ನು ನಿಮ್ಮಿಂದ ಅಪೇಕ್ಷಿಸುತ್ತೆವೆ.ಚಿಂತೆನೆಗೆ ಹಚ್ಚಿದ್ದಕ್ಕೆ ಥಾಂಕ್ಸ..
Post a Comment