Thursday, October 11, 2007

ಇನ್ನಿಲ್ಲ


ತಮ್ಮ ಸುತ್ತಮುತ್ತಲ ಮಂದಿ ಸಾಯುತ್ತಿರುವುದನ್ನೂ ದಿನನಿತ್ಯ ಕಾಣುತ್ತಲೇ ಇದ್ದರೂ ತನಗೆ ಸಾವಿಲ್ಲ ಎಂಬಂತೆ ಮನುಷ್ಯ ಬದುಕುತ್ತಾನಲ್ಲ. ಅದೇ ನನ್ನನ್ನು ಅತ್ಯಂತ ಅಚ್ಚರಿಗೊಳಿಸುತ್ತದೆ.
ಯಕ್ಪನ ಪ್ರಶ್ನೆಗೆ ಧರ್ಮರಾಯ ಹೀಗೆ ಉತ್ತರಿಸಿದ ಅನ್ನುತ್ತದೆ ಮಹಾಭಾರತದ ಒಂದು ಆಖ್ಯಾನ. ಸಾವಿನ ಕುರಿತು ನಮ್ಮ ಪುರಾಣಗಳು ಸಾಪೇಕ್ಪವಾಗಿಯಾಗಲೀ ಸಾಂಕೇತಿಕವಾಗಿ ಆಗಲೀ ಸ್ಪಷ್ಟವಾಗಿ ಆಗಲೀ ಹೆಚ್ಚು ಮಾತಾಡಿಲ್ಲ. ಭಾರತೀಯ ಕಲ್ಪನೆಗಳ ಪ್ರಕಾರ ಸಾವು ಎನ್ನುವುದು ಪಾಶ್ಚಾತ್ಯರಷ್ಟು ಅಸ್ಪಷ್ಟವಾದ ಸಂಗತಿಯೇನಲ್ಲ. ನಮ್ಮಲ್ಲಿ ಮೃತ್ಯುವಿಗೂ ಒಬ್ಬ ದೇವತೆ ಇದ್ದಾನೆ. ಅವನನ್ನೂ ನಾವು ಪೂಜಿಸುತ್ತೇವೆ. ಅವನನ್ನು ಕಾಲ ಎಂದು ಕರೆಯುತ್ತೇವೆ. ಮನುಷ್ಯರು ಕಾಲವಾಗುತ್ತಾರೆ. ಸತ್ತ ನಂತರವೂ ಅಲ್ಲಿ ಮತ್ತೊಂದು ಲೋಕವಿದೆ. ಆ ಲೋಕದಲ್ಲಿ ಮತ್ತೆ ಇಂಥದ್ದೋ ಇದಕ್ಕಿಂತ ಸುಖಕರವಾದದ್ದೋ ಕಷ್ಟಕರವಾದದ್ದೋ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಹೀಗೆ ನಮ್ಮ ಕಲ್ಪನೆ ಸಾಗುತ್ತದೆ. ಆದ್ದರಿಂದ ಸಾವು ಅನ್ನುವುದು ಪ್ರತಿಯೊಬ್ಬ ಭಾರತೀಯನ ಪ್ರಜ್ಞೆಯಲ್ಲೂ ಒಂದಲ್ಲ ಒಂದು ರೂಪದಲ್ಲಿ ನೆಲೆಯೂರುತ್ತಲೇ ಇರುತ್ತದೆ. ಕಠೋಪನಿಷತ್ತಿನಲ್ಲಿ ಬರುವ ಕತೆಯಲ್ಲಿ ನಚಿಕೇತ ಎಂಬ ಬಾಲಕ ಯಮನಲ್ಲಿಗೆ ಹೋಗಿ ಅವನನ್ನು ಮೆಚ್ಚಿಸಿ ಮರಳಿ ಬಂದ ಪ್ರಸಂಗವೂ ಇದೆ.
ಹೀಗೆ ನೋಡುತ್ತಾ ಹೋದರೆ ಸಾವು ಪುರಾತನರನ್ನು ಕಂಗೆಡಿಸುವ ಸಂಗತಿಯೇನೂ ಆಗಿರಲಿಲ್ಲ. ಅದು ಅನೇಕರ ಜ್ಞಾನೋದಯಕ್ಕೆ ಕಾರಣವಾಗಿದೆ. ಬುದ್ಧನ ಕತೆಯಲ್ಲಿ ಸಾವಿಲ್ಲದ ಮನೆಯ ಸಾಸಿವೆ ತರುವುದಕ್ಕೆ ಹೇಳಿ ಸಾವು ಸರ್ವಾಂತರ್ಯಾಮಿ ಎಂದು ತೋರಿಸಿಕೊಟ್ಟ ಪ್ರಸಂಗ ಬರುತ್ತದೆ. ಸಾವಿತ್ರಿ ಸಾವಿನ ದವಡೆಯಿಂದ ಗಂಡ ಸತ್ಯವಾನನನ್ನು ಬಿಡಿಸಿಕೊಂಡ ಬಂದ ದಿಟ್ಟ ಹೆಣ್ಣುಮಗಳಾಗಿ ಕಾಣಿಸುತ್ತಾಳೆ.
ಸಾವಿನ ಬಗ್ಗೆ ಅನೇಕರು ಬರೆದಿದ್ದಾರೆ. ನವೋದಯ ಸಾಹಿತ್ಯದ ಧಾಟಿಗೆ ಸಾವು ಅಷ್ಟಾಗಿ ಹೊಂದಿಕೆಯಾಗುತ್ತಿರಲಿಲ್ಲ. ಹೀಗಾಗಿ ಅಲ್ಲಿ ಸಾವು ಕೇವಲ ಪ್ರಾಸಂಗಿಕವಾಗಿ ಬಂದಿದೆ ಅಷ್ಟೇ; ಸರಸ ಜನನ, ವಿರಸ ಮರಣ ಸಮರಸವೇ ಜೀವನ ಎಂಬ ಸಾಲುಗಳಲ್ಲಿ ಸಾವು ಕಾಣಿಸಿಕೊಂಡಾಗ ಅದರ ದುರಂತ ಮತ್ತು ನೋವು ತಟ್ಟುವುದಕ್ಕೆ ಸಾಧ್ಯವೇ ಇಲ್ಲ. ಅದೊಂದು ಸಹಜ ಕ್ರಿಯೆ ಎಂಬಂತೆ ದಾಖಲಾಗುತ್ತದೆಯೇ ಹೊರತು ಅದಕ್ಕೆ ಇಲ್ಲದ ಮಹತ್ವ ಸಿಗುವುದು ಅದೊಂದು ರೂಪಕವಾಗಿ ಆವರಿಸಿಕೊಂಡಾಗ. ಫ್ರಾನ್ಸಿಸ್ ಬೇಕನ್ ನಂಥ ಪ್ರಬಂಧಕಾರರು ಸಾವನ್ನು ಅತೀ ಕಡಿಮೆ ತೊಂದರೆ ಮಾಡುವ ಕೇಡು ಎಂದರೆ, ಇ. ಎಂ. ಫಾರ್ಸ್ಟ್ `ಸಾವು ಮನುಷ್ಯನನ್ನು ನಾಶ ಮಾಡುತ್ತದೆ. ಆದರೆ ಸಾವಿನ ಕುರಿತ ಚಿಂತನೆ ಅವನನ್ನು ಅಮರನನ್ನಾಗಿಸುತ್ತದೆ' ಎಂದು ಬರೆದ. ನಮ್ಮಲ್ಲಿ ಚಿತ್ತಾಲರಿಂದ ಹಿಡಿದು ಬಿಸಿ ದೇಸಾಯಿಯವರ ತನಕ ಪ್ರತಿಯೊಬ್ಬರನ್ನೂ ಸಾವು ಕಾಡಿದೆ. ಸಾವಿನ ಕುರಿತು ಬರೆದವರೆಲ್ಲರೂ ಅದನ್ನು ಮೀರುತ್ತೇವೆ ಎಂಬ ಹಮ್ಮಿನಲ್ಲೇ ಬರೆದಿದ್ದಾರೆ ಅನ್ನಿಸುತ್ತದೆ. ಸಾವಿನ ಎದುರು ವಿನೀತರಾದವರಿದ್ದಾರೆ. ಆದರೆ ಕನ್ನಡ ಸಾಹಿತ್ಯದಲ್ಲಿ ಸಾವು ರೂಪಕವಾಗಿ ಕಾಣಿಸಿಕೊಂಡದ್ದು ನವ್ಯ ಸಾಹಿತ್ಯದ ಹೊತ್ತಿಗೇ ಎಂದು ಕಾಣುತ್ತದೆ. ಅಲ್ಲಿಯ ತನಕ ಬದುಕೇ ಸಾಹಿತ್ಯಕ್ಕೆ ಮುಖ್ಯ ಪ್ರೇರಣೆಯಾಗಿತ್ತು. ಸಾವಿನ ಕುರಿತು ಹೇಳುತ್ತಲೇ ಬದುಕಿನ ಬೆರಗನ್ನು ಹೇಳುವುದಕ್ಕೆ ಯತ್ನಿಸಿದವರಿದ್ದರು.
ತಮಗೆ ಸಾವೇ ಇಲ್ಲ ಎಂಬಂತೆ ಬದುಕಿದವರೆಲ್ಲ ಅವರು ಹುಟ್ಟಿಯೇ ಇರಲಿಲ್ಲ ಎಂಬಂತೆ ಕಣ್ಮರೆಯಾಗಿ ಹೋಗಿದ್ದಾರೆ. ಸಾವು ದೇವರಿಗೆ ನಾವು ಕೊಡಬೇಕಾಗಿರೋ ಸಾಲ ಎಂಬಂತೆ ಬದುಕುವವರಿದ್ದಾರೆ. ದಾಸ ಸಾಹಿತ್ಯದಲ್ಲಿ ಭಕ್ತರು ಬೇಡುವುದು ಬದುಕನ್ನಲ್ಲ ಸಾವನ್ನು. ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ ಎನ್ನುವಾಗ ಕಾಣಿಸುವ ಭಾವವೂ ಅಲ್ಪಮಟ್ಟಿಗೆ ಅದೇ. ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ. ಮುಂದರಿತು ಹರಿಪಾದ ಸೇರುವುದು ಲೇಸು ಎಂಬ ದಾಸವಾಣಿಯಲ್ಲಿ ಈ ಬದುಕಿನ ಕುರಿತು ತುಂಬ ನಿಕೃಷ್ಟವಾದ ಭಾವನೆಯಿದ್ದಂತೆ ಸಾವಿನ ಕುರಿತು ಅಪಾರವಾದ ಗೌರವವೂ ಇದೆ.
ಭಾರತೀಯ ಕಲ್ಪನೆಗಳು ಬೆರಗುಗೊಳಿಸುವುದಕ್ಕೆ ಮತ್ತೊಂದು ಕಾರಣವೂ ಇದೆ. ಸಾವಿನ ನಂತರವೂ ಬದುಕಿದೆ ಅನ್ನುವ ಕಲ್ಪನೆ ಕೆಲವರಿಗೆ ವರ; ಮತ್ತೆ ಕೆಲವರಿಗೆ ಶಾಪ. ಮತ್ತೆ ಹುಟ್ಟದಂತೆ ಮಾಡೋ ತಂದೆ ಅನ್ನುವ ಪ್ರಾರ್ಥನೆಯನ್ನು ನಾವೆಲ್ಲ ಅಪ್ರಜ್ಞಾಪೂರ್ವಕವಾಗಿ ಹಾಡುತ್ತಲೇ ಇರುತ್ತೇವೆ. ಅದೇ ಹೊತ್ತಿಗೆ ಅಮರರಾಗಬೇಕು ಎಂದು ಆಶಿಸುತ್ತೇವೆ. ಈ ದ್ವಂದ್ವವಲ್ಲದ ದ್ವಂದ್ವದಲ್ಲಿ ಭಾರತೀಯ ತತ್ವಶಾಸ್ತ್ರ ಗೆಲ್ಲುತ್ತದೆ.
ಅಮರತ್ವ ಭಾರತೀಯ ಕಲ್ಪನೆ ಅಲ್ಲವೇ ಅಲ್ಲ. ಅದು ನಮ್ಮ ಪುರಾಣಗಳ ಪ್ರಕಾರ ರಾಕ್ಪಸ ಗುಣ. ಕೇವಲ ರಾಕ್ಪಸರು ಮಾತ್ರ ಪುರಾಣಗಳಲ್ಲಿ ಅಮರತ್ವ ಬಯಸುತ್ತಾರೆ. ಭೀಷ್ಮರಿಗೂ ಇಚ್ಛಾಮರಣಿಯಾಗುವ ವರವೂ ಸಪ್ತಚಿರಂಜೀವಿಗಳಿಗೆ ಅಮರತ್ವವೂ ಶಾಪವಾಗಿ ಪರಿಣಮಿಸಿದ್ದಕ್ಕೆ ಸಾಕ್ಪಿ ಮಹಾಭಾರತದಲ್ಲೇ ಸಿಗುತ್ತದೆ. ಇಚ್ಛಾಮರಣಿ ಎನ್ನುವ ಕಲ್ಪನೆಯೇ ಎಷ್ಟು ಪ್ರಖರವಾಗಿದೆ ನೋಡಿ. ಒಬ್ಬ ವ್ಯಕ್ತಿ ತನ್ನ ಸಾವು ಯಾವಾಗ ಘಟಿಸಬೇಕು ಎನ್ನುವುದು ನಿರ್ಧರಿಸಬಹುದಾದ ಶಕ್ತಿ ಅದು. ಇಚ್ಛಾಮರಣ ಆತ್ಮಹತ್ಯೆಯಲ್ಲ; ಅದೊಂದು ನೀಗಿಕೊಳ್ಳುವ ಕ್ರಮ. ನಿರ್ವಾಣಕ್ಕೆ ಹತ್ತಿರವಾದದ್ದು.
ಹಾಗೆ ನೋಡಿದರೆ ಬದುಕಿಗಿಂತ ಸಾರ್ವತ್ರಿಕವಾದದ್ದು ಸಾವು. ಯಾಕೆಂದರೆ ಹುಟ್ಟಿದವರೆಲ್ಲರೂ ಸಾಯುತ್ತಾರೆ. ಹುಟ್ಟಿದವರೆಲ್ಲರೂ ಜೀವಿಸಿರುವುದಿಲ್ಲ. ಸಾವಿನ ಭಯದಲ್ಲಿ ಬದುಕುವುದನ್ನೇ ಮರೆಯುವವರೂ ಇದ್ದಾರೆ. ಆದರೆ ಸಾವು ನಮ್ಮನ್ನು ಭಯವಾಗಿ ಕಾಡುವುದು ಮಧ್ಯವಯಸ್ಸಿನ ನಂತರವೇ. ಅಲ್ಲಿಯ ತನಕ ಅದೊಂದು ತಮಾಷೆಯ ಸಂಗತಿ. ಯಾವತ್ತೋ ಬರುವ ಅತಿಥಿ.
ನಾವು ಸಾಯುತ್ತಾ ಹೋಗುತ್ತೇವೆ. ಪ್ರತಿಯೊಂದು ಹೆಜ್ಜೆಯೂ ನಮ್ಮನ್ನು ಸ್ಮಶಾನದತ್ತ ಒಯ್ಯುತ್ತಿರುತ್ತದೆ. ಪ್ರತಿಯೊಂದು ನಿಮಿಷವೂ ನಮ್ಮನ್ನು ಬದುಕಿನಿಂದ ದೂರವಾಗಿಸುತ್ತಿರುತ್ತದೆ. ಹೀಗಾಗಿ ಪ್ರತಿಯೊಂದು ಕ್ಪಣವನ್ನೂ ನಮ್ಮದು ಎನ್ನುವಂತೆ ಬದುಕೋಣ ಅನ್ನುವುದು ಬದುಕನ್ನು ತೀವ್ರವಾಗಿ ಜೀವಿಸಬೇಕು ಅನ್ನುವವರ ಮತ. ಯಶವಂತ ಚಿತ್ತಾಲರ `ಪಯಣ' ಕತೆಯ ನಾಯಕ ಸಾವು ಬಂದು ಕರೆದಾಗ ಅದಕ್ಕಾಗಿಯೇ ಅಷ್ಟೂ ಹೊತ್ತು ಕಾದಿದ್ದವನಂತೆ ಹೊರಟು ಹೋಗುತ್ತಾನೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಮನಸ್ಸು ತುಡಿಯುತ್ತದೆ ಅನ್ನುವಲ್ಲಿಯೂ ಸಾವಿನ ಸೂಕ್ಪ್ಮವಾದ ಹೆಜ್ಜೆ ಸದ್ದು ಕೇಳಿಸುತ್ತದೆ.
ಅಮರತ್ವ ಮನುಷ್ಯನ ಆಶೆ. ಸಾವು ನಾವು ಯಮನಿಗೆ ಕೊಟ್ಟ ಭಾಷೆ. ಕೊಟ್ಟ ಭಾಷೆಗೆ ತಪ್ಪಲಾರೆವು. ಕನಿಷ್ಟ ಅದೊಂದು ವಿಚಾರದಲ್ಲಿ ನಾವು ನಿಯತ್ತಿನವರು. ಕರೆದಾಗ ನಾವು ತುಂಬ ಪ್ರೀತಿಸುವವರನ್ನೂ ಹಸಿಹಸಿಯಾಗಿ ದ್ವೇಷಿಸುವವರನ್ನೂ ಮೊನ್ನೆ ಮೊನ್ನೆ ಕೊಂಡುಕೊಂಡ ಹೊಸ ಮನೆಯನ್ನೂ ಪಕ್ಕದ ಮನೆಯ ಸುಂದರಿಯ ಮುಗುಳುನಗುವನ್ನೂ ಮಗುವಿನ ಕೆನ್ನೆಯ ಕಚಗುಳಿಯನ್ನೂ ಸಾಲವನ್ನೂ ಸಂಬಳವನ್ನೂ ಮರೆತು ಹೊರಟುಬಿಡುತ್ತೇವೆ.
ಅದು ಅನಿವಾರ್ಯ ಎಂದು ಸುಮ್ಮನಾಗೋಣ. ಆದರೆ ಸಾವು ಅಷ್ಟೊಂದು ಹಠಾತ್ತನೇ ಘಟಿಸುವ ಸಂಗತಿಯಲ್ಲ; ಆಕಸ್ಮಿಕಗಳನ್ನು ಹೊರತುಪಡಿಸಿದರೆ. ನಾವು ಕ್ರಮೇಣ ಸಾಯುತ್ತಾ ಹೋಗುತ್ತೇವೆ. ಅದನ್ನೇ ಅಕೌಂಟೆನ್ಸಿ ಡಿಪ್ರಿಸಿಯೇಷ್ ಅನ್ನುತ್ತದೆ. ಕನ್ನಡದಲ್ಲಿ ಅದು ಸವಕಳಿ. ಈ ಸವಕಳಿ ಕೇವಲ ದೇಹಕ್ಕಷ್ಟೇ ಸಂಬಂಧಿಸಿದ್ದಲ್ಲ. ಮಾನಸಿಕವಾಗಿಯೂ ನಾವು ನಮ್ಮ ಜೀವನ ಪ್ರೀತಿಯ ಒಂದು ಮಗ್ಗುಲಿಗೆ ಹೊರತಾಗುತ್ತಾ ಹೋಗುತ್ತೇವೆ. ನಮ್ಮನ್ನು ರೂಪಿಸಿದ ಒಬ್ಬೊಬ್ಬರೇ ತೀರಿಕೊಂಡಾಗ ನಮ್ಮೊಳಗಿನ ಒಂದು ಭಾಗ ಸಾಯುತ್ತದೆ. ನಮ್ಮ ಪ್ರೀತಿಯ ನಟ, ನಮ್ಮನ್ನು ತಿದ್ದಿದ ಮೇಷ್ಟ್ರು, ನಮ್ಮನ್ನು ಪೊರೆದ ಹೆತ್ತವರು, ನಮ್ಮ ಜೊತೆ ಬೆಳೆದ ಸೋದರ, ಸದಾಕಾಲ ಜೊತೆಗಿದ್ದ ಸಖ ತೀರಿಕೊಂಡಾಗ ಎಲ್ಲೋ ಒಂದು ಕಡೆ ನಾವೂ ತೀರಿಕೊಂಡೆವು ಅನ್ನಿಸುತ್ತದೆ. ತುಂಬ ಆತ್ಮೀಯರು ಸತ್ತಾಗ ನಮಗ್ಯಾರಿಗೂ ನಮ್ಮ ಸಾವನ್ನು ನೆನೆದು ಭಯವಾಗುವುದಿಲ್ಲ. ಬದಲಾಗಿ ಅವನನ್ನು ಕಳಕೊಂಡೆವಲ್ಲ ಎನ್ನಿಸಿ ಮನಸ್ಸು ಮರುಗುತ್ತದೆ.
ಈ ಸಾಲು ಬೇಡವೆಂದರೂ ನೆನಪಾಗುತ್ತದೆ;
Days and moments quickly flying
Blend the living with the dead;
Soon will I and You will be lying
Each within our narrow bed.
ಪ್ರತಿಯೊಂದು ಸಾವಲ್ಲೂ ಇದು ನೆನಪಾಗುತ್ತದೆ. ಅವರ ಬಗ್ಗೆ ಬರೆಯಲು ಕುಳಿತಾಗಲೆಲ್ಲ `ಬಾಕಿ ಮೊಕ್ತಾ' ಎಂದು ಬರೆಯಬೇಕು ಅನ್ನಿಸುತ್ತದೆ.

3 comments:

Anonymous said...

ವ್ಯಕ್ತಿಯೊಬ್ಬ ಮೃತಪಟ್ಟರೆ, ಸೂತಕದ ದಿನಗಳಲ್ಲಿ ಗರುಡ ಪುರಾಣ ಹೇಳಿಸುವ ಪದ್ಧತಿ ಇದೆ. ಸತ್ತ ಮನುಷ್ಯ ಎಲ್ಲಿಗೆ ಹಾಗೂ ಹೇಗೆ ತನ್ನ ಪ್ರಯಾಣ ಮುಂದುವರಿಸುತ್ತಾನೆ ಎಂಬ ಮಾಹಿತಿ ಅದು. ಸಾವಿನ ಕುರಿತು ಬದುಕಿದವರು ಧೈರ್ಯ ತಾಳಲು ಈ ಕಥೆ ಹೇಳಿಸುತ್ತಾರಷ್ಟೇ. ಆದರೆ ಸಣ್ಣ ಮಕ್ಕಳನ್ನು ಆ ಕಥೆ ಕೇಳದಂತೆ ಮಾಡುವ `ಹುನ್ನಾರ'ವೂ ನಡೆಯುತ್ತದೆ!
ಮೃತಪಟ್ಟ ನಂತರ ಹತ್ತು ದಿನಗಳವರೆಗೆ (ನನಗೆ ತಿಳಿದ ಪ್ರಕಾರ) ಗೋಡೆ ಪಕ್ಕದಲ್ಲಿ ನೀರಿನ ಪಾತ್ರ ಇಟ್ಟು, ದಾರವೊಂದನ್ನು ಮೇಲಿನಿಂದ ಕೆಳಗೆ ಗೋಡೆಗುಂಟ ಇಳಿಬಿಟ್ಟಿರುತ್ತಾರೆ. ಅದರ ಮೂಲಕ ಆತ್ಮ ಕೆಳಗೆ ಬಂದು ನೀರು ಕುಡಿಯುತ್ತದೆ ಎಂಬ ನಂಬಿಕೆ. ನಮ್ಮ ಅಜ್ಜ ತೀರಿಕೊಂಡಾಗ ಈ ವಿಧಾನ ನೋಡಿ ಅಚ್ಚರಿಪಟ್ಟಿದ್ದೆ. ಹತ್ತನೇ ದಿನ ಅದನ್ನು ತೆಗೆಯುವಾಗ ನನ್ನ ಅಜ್ಜಿ `ಅವರನ್ನು (ಸತ್ತು ಹತ್ತು ದಿನವಾಗಿದ್ದರೂ!) ಕರೆದೊಯ್ಯಬೇಡಿ' ಅಂತ ಭೋರಿಟ್ಟು ಅತ್ತಿದ್ದು ನೋಡಿ ನಂಬಿಕೆಗಳ ಬಗ್ಗೆಯೇ ಇನ್ನಷ್ಟು ಬೆರಗು ಮೂಡಿತ್ತು.
'ಸಾವು' ಎಂದರೆ ಭಯಪಡಬೇಕಿಲ್ಲ. ಅದೊಂದು ದಿವ್ಯ ಪ್ರಕ್ರಿಯೆ- ಅಂತ ಎಲ್ಲೋ ಓದಿದ್ದ ನೆನಪು. ಈಗ ಮತ್ತೊಮ್ಮೆ ಅಂಥದೇ ಅದ್ಭುತ ಬರಹ ಕೊಟ್ಟಿದ್ದಕ್ಕೆ ಮೆನಿ ಮೆನಿ ಥ್ಯಾಂಕ್ಸ್...

- ಆತೀಪಿ, ಗುಲ್ಬರ್ಗ

Anonymous said...

Thanks Jogi. I remember D>V.G's saying..which says "There is no one who has come back from death...to tell us, as to what is waiting for us there..so instead of speculating live this life well" This made me rest in my philosophical serach for answers about death quite sometime ago...

Vikas said...

yentha tatvika takalatada baraha! sir, 'savu yamanige navu kotta bhashe' ennuvantha kade nimma bhashe, grahike nima kai meeruthade, kavithe thara. adu nange thumba khushi koduva nimma shaili.