Sunday, October 7, 2007

ಜಿಎನ್ ಮೋಹನ್ ಅವರ ನಾಲ್ಕು ಪದ್ಯಗಳು


1.ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ

ಒಂದಿಷ್ಟು ಪ್ರಶ್ನೆ ಕೇಳಬೇಕಾಗಿದೆ
ಇನ್ನಾರಿಗೂ ಅಲ್ಲ ನೇರ ಷೇಕ್ಸ್‌ಪಿಯರನಿಗೇ:
ಏಕೆ ಹಾಗಾಯಿತು
ಒಬ್ಬೊಬ್ಬರದೂ ಒಂದೊಂದು ರೀತಿಯ ಅಂತ್ಯ?
ಕತ್ತಿ ಸೆಣಸಿ ರಾಜನಿಗಾಗಿ ಯುದ್ಧ
ಗೆಲ್ಲುವುದೊಂದೇ ಮುಖ್ಯ ಎಂದುಕೊಂಡಿದ್ದ
ಮ್ಯಾಕ್‌ಬೆತ್‌ನಿಗೆ ಏಕೆ ಮುಖಾಮುಖಿಯಾಗಿಸಿದೆ
ಆ ಮೂರು ಜಕ್ಕಣಿಯರನ್ನು?
ಜೋಡಿಯಾಗಿಸಿದೆ ಇನ್ನಷ್ಟು ಮತ್ತಷ್ಟು
ಆಕಾಂಕ್ಷೆಗಳ ನೀರೆರೆವ ಆ ಲೇಡಿ ಮ್ಯಾಕ್‌ಬೆತ್‌ಳನ್ನು?

ಒಥೆಲೊ ಡೆಸ್ಡಮೋನಾಳ ಮಧ್ಯೆ
ಬೇಕಿತ್ತೇ ಆ ಕರವಸ್ತ್ರ
ಸಂಶಯದ ಸುಳಿ ಬಿತ್ತಬೇಕಿತ್ತು
ಎಂಬುದೇ ನಿನ್ನ ಆಸೆಯಾಗಿದ್ದಿದ್ದರೆ
ನೇರ ಎರಡು ಸ್ವಗತದಲ್ಲೋ ಇಲ್ಲಾ
ಮೂರು ಅಂಕದಲ್ಲೋ ಇಬ್ಬರನ್ನೂ
ಎದುರು ಬದುರಾಗಿಸಿ ಮಾತಿಗೆ
ಮಾತು ಹೆಣೆದು ಸಲೀಸಾಗಿ
ಸೋಡಾಚೀಟಿ ಕೊಡಿಸಿಬಿಡಬಹುದಿತ್ತಲ್ಲ?

ಏಕೆ ಬೇಕಿತ್ತು ಸಂಶಯಗಳನ್ನು
ಬಿತ್ತುವ ಹಗಲಿರುಳೂ ನಿದ್ದೆ
ಇಲ್ಲದಂತೆ ಮಾಡುವ
ಕೊನೆಗೆ ಅವರೂ, ನೀನೂ ಜೊತೆಗೆ ನಾವೂ
ಹೊರಳಾಡುವಂತೆ ಮಾಡುವ
ಆ ಕರವಸ್ತ್ರದ ಕಥೆ?

ಪ್ರಶ್ನೆ ಇರುವುದು ಷೇಕ್ಸ್‌ಪಿಯರನಿಗೆ:
ಇರಲೇ ಇಲ್ಲದೇ ಇರಲೆ ಎನ್ನುವ
ರಾಜಕುಮಾರನನ್ನು ಸೃಷ್ಟಿ ಮಾಡಿದವನಿಗೆ
ಗತ್ತಿನಲ್ಲಿ ಹಾರುತ್ತಿದ್ದ ಹಕ್ಕಿಯನ್ನು
ಒಂದು ಸಾಮಾನ್ಯ ಗೂಗೆಯಿಂದ
ಹೊಡೆದು ಕೊಂದವನಿಗೆ
ಬರ್ನಂ ವನಕ್ಕೂ ಕೈಕಾಲು ಬರಿಸಿದವನಿಗೆ
ಊಟದ ಬಟ್ಟಲುಗಳ ನಡುವೆ
ಎದ್ದು ನಿಲ್ಲುವ ಪ್ರೇತಗಳನ್ನು ಸೃಷ್ಟಿಸಿದವನಿಗೆ
ಕಪ್ಪಿಗೂ ಬಿಳುಪಿಗೂ ನಡುವೆ
ಒಂದು ಗೋಡೆ ಎಬ್ಬಿಸಿದವನಿಗೆ
ಸುಂದರ ಕನಸುಗಳ ಮಧ್ಯೆಯೂ
ಒಂದೊಂದು ನಿಟ್ಟುಸಿರು ಹೆಣೆದವನಿಗೆ.2.ಜಕ್ಕಿಣಿಯರ ಮುಂದೆ ಮ್ಯಾಕ್‌ಬೆತ್


ದಿಢೀರನೆ ಎದುರಾಗಿದ್ದಾರೆ
ಜಕ್ಕಿಣಿಯರು
ಭವಿಷ್ಯ ನುಡಿಯುತ್ತಿದ್ದಾರೆ
ಕೇಕೆ ಹಾಕಿ ಗಹಗಹಿಸುತ್ತಿದ್ದಾರೆ
ಗೊತ್ತಿಲ್ಲದ ಮಂತ್ರಗಳ
ಪಟಪಟ ಉದುರಿಸುತ್ತಿದ್ದಾರೆ
ಕಣ್ಣಲ್ಲಿ ಕಣ್ಣುನೆಟ್ಟು ಮನಕ್ಕೆ
ತಟ್ಟುವಂತೆ ಹೇಳುತ್ತಿದ್ದಾರೆ
ಮುನ್ನುಗ್ಗು ಒಂದಲ್ಲ ಎರಡಲ್ಲ
ಮೂರು ಹೆಜ್ಜೆ ಸಾಕು
ಗತ್ತು ಗಮ್ಮತ್ತು ನಿನ್ನದು
ರಾಜ್ಯ ಸಾಮ್ರಾಜ್ಯ ನಿನ್ನದು
ಕತ್ತಿ ಕಿರೀಟ ಎಂದೆಂದೂ ನಿನ್ನದು
ಬಗ್ಗಬೇಡ ನುಗ್ಗು.

ಕಾರಿರುಳಲ್ಲಿ ಕುದುರೆ ಏರಿ
ಹೊರಟ ನಾನು
ತಬ್ಬಿಬ್ಬಾಗಿ ನಿಂತಿದ್ದೇನೆ
ಮೂರು ಹೆಜ್ಜೆ ಮುಂದಿಡಲೆ
ಇಲ್ಲ ಒಂದು ಹೆಜ್ಜೆ ಹಿಂದಿಟ್ಟು
ಮೊಣಕಾಲೂರಿ ಬಿಡಲೆ
ಗೆಲ್ಲಬೇಕೆ ಮೂರು ಹೆಜ್ಜೆ
ಇಲ್ಲ ನಿಲ್ಲಬೇಕೆ ಇದ್ದಲ್ಲೆ.

ಜಕ್ಕಿಣಿಯರಿಗೆ ತಾಳ್ಮೆಯಿಲ್ಲ
ಗುಡ್ಡ ಜರುಗಿ ನಿನ್ನ ಬಳಿ
ಬರುವುದು ಸಾಧ್ಯವಿಲ್ಲ
ಅರಣ್ಯದ ಎಲೆಗಳಿಗೆ
ನಡೆದಾಡಲು ಬರುವುದಿಲ್ಲ
ನೀನೇ ನುಗ್ಗು
ಗೆಲ್ಲು ಸೂರ್ಯ ಮುಳುಗದ
ಸಾಮ್ರಾಜ್ಯವನ್ನು.

ಕುದುರೆಯ ಮೇಲೆ ಕುಳಿತಿದ್ದೇನೆ
ಹಿಡಿದ ಲಗಾಮು ಬಿಡಲೆ
ಇಲ್ಲಾ ಬಿಗಿ ಮಾಡಲೆ
ಕೈಯಲ್ಲಿ ಕತ್ತಿ ಹಿಡಿಯಲೆ
ಇಲ್ಲ ಒಂದೇ ಗುಕ್ಕಿಗೆ ಜೀವ ತೆಗೆಯುವ
ವಿಷದ ಬಟ್ಟಲು ಹಿಡಿಯಲೆ.
ಜನರ ಮನಸ್ಸು ಗೆಲ್ಲಲೆ
ಇಲ್ಲಾ ಅವರನ್ನು ತರಿದು ಕೊಲ್ಲಲೆ?

ಜಕ್ಕಿಣಿಯರಿಗೆ ಈಗ
ಅವಸರದ ಅಗತ್ಯವಿಲ್ಲ
ಏಕೆಂದರೆ ಹೇಳಬೇಕಾದದ್ದು
ಹೇಳಿ ಮುಗಿದಿದೆಯಲ್ಲ; ಬಟ್ಟಲು
ವಿಷದ ವಿಳಾಸ ಹುಡುಕುತ್ತಿದೆಯಲ್ಲ.

3.ಕೋಡಂಗಿಗೆ ಇನ್ನು ಕೆಲಸವಿಲ್ಲ

ಈಗ ಕಾಲ ಬದಲಾಗಿದೆ
ಮನಸ್ಸಿಗೆ ಒಂದಿಷ್ಟು ಬೇಸರವಾಯಿತೋ
ಸಿನೆಮಾ ಥಿಯೇಟರ್‌ಗಳಿವೆ
ತಿರುವಿ ಹಾಕಿದರೂ ಮುಗಿಯದಷ್ಟು ಚಾನಲ್‌ಗಳಿವೆ
ನಾಯಕಿಯರು ಬೇಕಾದಷ್ಟು ಹೊತ್ತು ಕುಣಿಯುತ್ತಾರೆ
ಖಳನಾಯಕ ರೇಪ್ ಮಾಡುತ್ತಲೇ ಇರುತ್ತಾನೆ,
ತಂಗಿಗೆ ಅಳುವುದೇ ಕೆಲಸ
ಇನ್ನೂ ಬೇಸರವಾಯಿತೇನು
ನೇರ ಹೊರಗೆ ಜಿಗಿದುಬಿಟ್ಟರೆ ಸಾಕು
ಚಹಾ ಅಂಗಡಿಯಲ್ಲಿ ಸಂತೆ ಮಧ್ಯದಲ್ಲಿ
ಮೀನು ಮಾರುಕಟ್ಟೆಯಲ್ಲಿ ಎಂ ಜಿ ರೋಡಿನಲ್ಲಿ
ಇಲ್ಲಾ ಎಲ್ಲಾ ರಸ್ತೆ ಕೂಡುವ ಸರ್ಕಲ್‌ನಲ್ಲಿ
ಕುಳಿತುಬಿಟ್ಟರೆ ಸಾಕು.

ಈಗ ಕಾಲ ಬದಲಾಗಿದೆ
ಕಡಲೆಕಾಯಿ ಬಿಡಿಸುತ್ತಾ ಗೊತ್ತಿಲ್ಲದವರ
ಜೊತೆಯೂ ಹರಟೆ ಹೊಡೆಯಬಹುದು
ಬಸ್‌ನಲ್ಲಿ ಕೂತು ಗೊರಕೆಗೆ ಸಿದ್ಧವಾಗಬಹುದು
ಟೇಪ್‌ರೆಕಾರ್ಡರ್ ಒತ್ತಿದರೆ
ಹಾಡುಗಳ ಸರಮಾಲೆ
ಪಾರ್ಕ್‌ನಲ್ಲಿ ಕೂತರೆ ಸಂಗೀತ ಕಚೇರಿ
ದನಿ ಏರಿಸಿದರೆ ಸಾಕು ಮನರಂಜನೆ.

ಈಗ ಕಾಲ ಬದಲಾಗಿದೆ
ನಗಿಸಲು ಎಲ್ಲರೂ ಸಿದ್ಧರಿದ್ದಾರೆ
ಒಂದು ಮಾತು ಹೇಳಿದರೂ
ನಗಬೇಕೆಂಬ ನಿಯಮವಿದೆ
ಮನಸ್ಸು ಹೇಗಾದರೂ ಇರಲಿ,
ಸದಾ ಮುಗುಳ್ನಗುವ ಸುಂದರಿಯರಿದ್ದಾರೆ.
ಮುಗುಳ್ನಗು ಉಕ್ಕಲೆಂದೇ ಟೂತ್‌ಪೇಸ್ಟ್‌ಗಳಿವೆ.

ಹಾಗಾದರೆ ಇನ್ನು ನಾನೇಕೆ
ಸ್ವಾಮಿ? ಅದಕ್ಕಾಗಿಯೇ ನಿಂತಿದ್ದೇನೆ
ನಿಮಗೆ ಹೇಳಿ ಹೋಗಲು
ಬಟ್ಟೆ ಬದಲಾಯಿಸಬೇಕು
ಟೋಪಿ ತೆಗೆದಿಡಬೇಕು ಬೇಗ ಬಣ್ಣ ಒರೆಸಬೇಕು
ಮೂಗಿನ ಮೇಲಿದೆಯಲ್ಲ ನಿಂಬೆಹಣ್ಣು
ಅದನ್ನು ಕಳಚಿಡಬೇಕು
ನೀವು ನಗಲೆಂದೇ ಮಾಡುತ್ತಿದ್ದ ಚೇಷ್ಟೆ
ಬದಿಗಿರಿಸಬೇಕು
ಈಗ ಕಾಲ ಬದಲಾಗಿದೆ
ಕೋಡಂಗಿಗೆ ಇನ್ನು ಕೆಲಸವಿಲ್ಲ.


4. ಸಣ್ಣ ಸಾಲಕ್ಕೆ ನಮಸ್ಕಾರಕಣ್ಣು ಬಿಡಲು ಕಾತರವಾಗಿರುವ
ಮಗುವಿಗೆ ಗಟ್ಟಿ ಎಲುಬು
ನೀಡಿದ ಸಣ್ಣ ಸಾಲವೆ ನಿನಗೆ ನಮಸ್ಕಾರ

ಪುಟ್ಟ ಕಾಲ್ಗೆಜ್ಜೆಗಾಗಿ ಕಾತರಿಸಿದ
ಮನಕ್ಕೆ ಗಿಲಿಗಿಲಿ ಸದ್ದು ಒದಗಿಸಿದ
ಸಣ್ಣ ಸಾಲವೆ ನಿನಗೆ ನಮಸ್ಕಾರ

ಹಾಡ ಬೆನ್ನತ್ತಿ ಗುರುವಿಗಾಗಿ ಸುತ್ತು
ಸುಳಿದಾಡಿದ ಮನಕ್ಕೆ ಗುರುವ ಎಟುಕಿಸಿದ
ಸಣ್ಣ ಸಾಲವೆ ನಿನಗೆ ನಮಸ್ಕಾರ

ರಬ್ಬರ್ ತೋಟದ ಹಾಲು ಹಿಂಡುತ್ತಿದ್ದ ನನ್ನ
ಕೈಗೆ ಕಾನೂನು ಪುಸ್ತಕ ಕೊಡಿಸಿದ
ಸಣ್ಣ ಸಾಲವೆ ನಿನಗೆ ನಮಸ್ಕಾರ

ಇದ್ದ ನೀರು ಹಂಡೆಯನ್ನೇ
ಅಡವಿಡಲು ಹೊರಟಿದ್ದ ತಾಯಿಗೆ
ಸಾಂತ್ವನ ನೀಡಿದ ಸಣ್ಣ ಸಾಲವೇ ನಿನಗೆ ನಮಸ್ಕಾರ

ಕಟ್ಟಿಗೆ ಒಲೆಯ ಮುಂದೆ ನಿಟ್ಟುಸಿರನ್ನೇ
ಊದುತ್ತಿದ್ದ ಅಮ್ಮನಿಗೆ ಒಂದಿಷ್ಟು ವಿರಾಮ ನೀಡಿದ
ಸಣ್ಣ ಸಾಲವೇ ನಿನಗೆ ನಮಸ್ಕಾರ

ಗೆಳೆಯರು ಮನೆ ಬಾಗಿಲು ತಟ್ಟಿದ ದಿನ
ಒಂದಿಷ್ಟು ಅಕ್ಕಿ ನೀಡಿದ ಬೇಳೆ ಬೇಯಲು ಕಾವು ನೀಡಿದ
ಸಣ್ಣ ಸಾಲವೇ ನಿನಗೆ ನಮಸ್ಕಾರ

ಬೆಳಕ ನೀಡುವ ದೀಪದ ಸೊಡರೇ
ಉಸಿರು ಕಳೆದುಕೊಂಡಾಗ ನಿಗಿ ನಿಗಿ ಉರಿದ
ಸಣ್ಣ ಸಾಲವೇ ನಿನಗೆ ನಮಸ್ಕಾರ


ಗೆಳತಿಯ ಕೊರಳಿಗೆ ಒಂದು ಇನಿಮುತ್ತು
ಪಕ್ಷಿ ಕೊರಳಿಗೂ ಒಂದು ಕುಕಿಲು
ಕಾಣಲು ಕಣ್ಣಿಗೊಂದು ಕನಸು
ಗುನುಗುನಿಸಲು ಒಂದು ಹಾಡು ಇತ್ತ
ಸಣ್ಣ ಸಾಲವೇ ನಿನಗೆ
ಮತ್ತೆ ಮತ್ತೆ ನಮಸ್ಕಾರ

ಬಾಂಗ್ಲಾ ದೇಶದ ಮಹಮದ್ ಯೂನುಸ್ ನೀಡುವ
ಸಣ್ಣ ಸಾಲಕ್ಕೆ ನೊಬೆಲ್ ನೀಡಿದ ಕಾರಣಕ್ಕಾಗಿ

5 comments:

Anonymous said...

MOHAN AVAR KAVITEGALU TUMBA ARTHVATTA AAGIVE ODAL AVAKASA MADIKOTTIDDAKKE DHANNEVADA.

Anu said...

G.N.Mohan’s four poetries are involved me in there strong content. kodangige innu Kelasavilla" and "Sanna Salakke Namskar" are really impressed me. Kodangi... shows me Mera naam Jokar’s Raj Kapoor. And by Sanna Salakke Namskar...I feel pain of common man.

Thanks for both you and Mohan sir.

Nagesh Hegade said...

Yes, I enjoyed all that especially 'sanna saala'. -Nagesh Hegade

vasudendra said...

Poems are good.
-Vasudendra

Vikas said...

mohan avara istu acchariya kavithegalannu odi ondu kshana vismayavayithu. pratikriyeya gunadallu avu kavitheyagibitta reethige nijakku namaskara!
yako kaduthide summane nannanu yavudo mohana raga...
-vikas