Wednesday, October 3, 2007

ಮ್ಯಾಜಿಕ್ ರಿಯಲಿಸಮ್ ಅಂದ್ರೆ ....
ಮಾರ್ಕೆಸ್ ಕಾದಂಬರಿಗಳ ಬಗ್ಗೆ ಮಾತಾಡುವಾಗ ಮ್ಯಾಜಿಕ್ ರಿಯಲಿಸಮ್ ಅನ್ನುವ ಪರಿಭಾಷೆಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಹಾಗಂದರೆ ಏನು?
ವಿವರಿಸುವ ಬದಲು ಅಕ್ಟೋಬರ್ 28ರಂದು ಬಿಡುಗಡೆಯಾಗಲಿರುವ ಸೂರಿಯವರ ಕಾದಂಬರಿಯ ಆಯ್ದ ಭಾಗವೊಂದನ್ನು ಕೊಡುತ್ತಿದ್ದೇನೆ. ಈ ಅರೆ ಅಧ್ಯಾಯ ಮ್ಯಾಜಿಕ್ ರಿಯಲಿಸಮ್- ಮಾಂತ್ರಿಕ ವಾಸ್ತವದ ರೂಪದರ್ಶನ ಮಾಡಿಸುತ್ತದೆ ಅನ್ನುವ ನಂಬಿಕೆಯೊಂದಿಗೆ.

ಕಾದಂಬರಿಯ ಹೆಸರು- ಎನ್ನ ಭವದ ಕೇಡು.
ಲೇಖಕ- ಎಸ್. ಸುರೇಂದ್ರನಾಥ್
ಪ್ರಕಾಶಕರು- ಛಂದ ಪುಸ್ತಕದ ವಸುಧೇಂದ್ರ.

ಎಲ್ಲರೊಡನೆ ಹರಟುತ್ತಿದ್ದ ಶಶಿಕಲಾಗೆ ಗಾಳಿ ತನ್ನನ್ನು ಎತ್ತಲೋ ಎಳೆಯುತ್ತಿರುವಂತೆ ಅನಿಸಿತು. ಸಿಹಿಯನ್ನು ಜಗಿಯುತ್ತಿದ್ದ ಕಲರವದ ಸಂಬಂಧಗಳನ್ನು ಬಿಟ್ಟು ಗಾಳಿ ತನ್ನನ್ನು ಎಳೆದತ್ತ ಜಾರಿದಳು. ಕಬ್ಬಿನ ಹೊಲ ಬೆನ್ನ ಹಿಂದೆ ಬಿತ್ತು. ಎದೆಯೆತ್ತರದ ಕಾಡುಪೊದೆಗಳ ಬಯಲು ಇದಿರಾಯಿತು. ಮುಸ್ಸಂಜೆಯ ಮಬ್ಬು ಜಾರುತ್ತಿತ್ತು. ಇನ್ನೂ ಬೆಳೆ ಕಾಣದ ಜಮೀನದು. ಇದ್ದಕ್ಕಿದ್ದಂತೆ ತನ್ನ ಪರಿಚಯದ ವಾಸನೆಯೊಂದು ಅಡರಿತು. ಕೈಯ್ಯಲ್ಲಿದ್ದ ಕಬ್ಬಿನ ದಂಟನ್ನು ಬಿಸಾಕಿ ದೌಡುಗಾಲಾದಳು. ವಾಸನೆ ದಟ್ಟವಾದಂತೆ ತುಳಸೀ ಬನದ ಕಪ್ಪು ಮೊತ್ತ ಕಣ್ಣೆದುರು ಹರಡಿಕೊಂಡಿತು. ಒಮ್ಮೆಲೇ ಭೂಮಿ ಕಡಿದು ಬಿದ್ದಂತಿದ್ದ ಚಚ್ಚೌಕ ಬಾವಿಯೊಂದರ ಪಶ್ಚಿಮ ದಡದ ಮೇಲೆ ನಿಂತಿದ್ದಳು. ಆಳೆತ್ತರದ ತುಳಸಿ ಮರಗಳು. ದಟ್ಟ ತುಳಸಿ ವಾಸನೆ. ವಿಸ್ತಾರವಾದ ಬಾವಿಯಲ್ಲಿ ಹೆಪ್ಪುಗಟ್ಟಿದ್ದ ಕತ್ತಲು. ತುಳಸೀ ಮರಗಳ ಹಿಂದೆ, ಅಲೆಅಲೆಯಾಗಿ ಜಾರುತ್ತಿದ್ದ ಕತ್ತಲಿನಲ್ಲಿ ಗೂಢವಾದದ್ದೇನನ್ನೋ ಹುಡುಕುತ್ತಾ ನಡೆದಳು. ಆ ಕತ್ತಲಲ್ಲೂ ಕಾಲುಗಳಿಗೆ ಯಾವುದೇ ಬೇರು ತಟ್ಟಲಿಲ್ಲ, ತಡೆದು ನಿಲ್ಲಿಸಲಿಲ್ಲ. ಮನೆಯ ಹಿಂದಿನ ಹಿತ್ತಲಿನಷ್ಟು ಪರಿಚಯವಾದಂತಿತ್ತು ಆ ನೆಲ. ಅದೊಂದು ತುಳಸಿ ಮರದ ಹಿಂದಿದ್ದ ಮುರಿದು ಬಿದ್ದ ಕಲ್ಲಿನ ಮಂಟಪವನ್ನೇ ಹುಡುಕುತ್ತಿದ್ದವಳಂತೆ ನೇರ ಅದರೆದುರು ಬಂದು ನಿಂತಳು.
’ನೀ ಬರ್ತೀಂತ ಕಾಯ್ತಿದ್ದೆ. ಬಂದ್ಯಲ್ಲಾ ಬಿಡು.’
ದನಿ ಬಂದತ್ತ ಶಶಿಕಲಾ ಮಬ್ಬುಗತ್ತಲಲ್ಲಿ ಹೆಜ್ಜೆ ಹೊರಳಿಸಿದಳು. ನೆಲವೇ ಅದಾಗಿತ್ತೋ, ಅದೇ ನೆಲವಾಗಿತ್ತೋ ಅಂತಹ ಮಾನವ ಜೀವದೊಂದು ನೆಲದ ಮೇಲೆ ಬರೆಬರೆಯಾಗಿ ಬಿದ್ದಿತ್ತು. ಅದರ ಮೈಯ್ಯ ಮೇಲಿನ ಸುಕ್ಕುಗಳು ನೆಲದ ಮೇಲಿನ ಬಿರುಕುಗಳಂತಿದ್ದವು. ವಯಸ್ಸೆಷ್ಟೋ ಗೊತ್ತಾಗುತ್ತಿರಲಿಲ್ಲ.
’ಕೂತ್ಗಾ’
ಅಪ್ಪಣೆಯಿತ್ತ ದನಿಗೆ ಮಾತ್ರ ಹದಿನೆಂಟರ ಕಸುವಿತ್ತು. ತಿದ್ದಿ ಬರೆದ ಸ್ಪಷ್ಟತೆಯಿತ್ತು. ಕಣ್ಣನ್ನು ಜೀವದ ಮೇಲೆ ಕೀಲಿಸಿ, ಮಂತ್ರ ಮುಗ್ಧಳಾದಂತೆ ಅದರ ಪಕ್ಕದಲ್ಲಿ ಕುಳಿತಳು. ನೆಲದ ಮೇಲೆ ಹರಡಿ ಬಿದ್ದಿದ್ದ ಆ ಜೀವದ ಕೈಯ್ಯನ್ನು ಕೈಗೆತ್ತಿಕೊಂಡಳು. ಸವರುತ್ತಾ ಕುಳಿತಳು.
’ನಾ ಬೇರೆಯಲ್ಲ, ನಿನ್ನವ್ವ ಬೇರೆಯಲ್ಲ. ಇನ್ನೇನು ತುಳಿಸೀ ಬುಡುಕ್ಕೆ ಗೊಬ್ಬರಾಗೋಗ್ತೀನಿ. ಇನ್ನೆರಡು ತಿಂಗಳಿಗೆ ಬರ್ತೀಯಲ್ಲಾ ಈ ಮನಿಗೆ, ಬಂದ ಮೇಲೆ ನನ್ನುಸಿರಿರಾತಂಕ ದಿನಾ ಬಂದು ಎರಡು ತಟುಕು ನೀರಾಕೋಗು. ಇಲ್ಲಿಗೆ ಬಂದಿದ್ದನ್ನ, ಬರಾದನ್ನ ಯಾರಿಗೂ ಹೇಳ್ಬೇಡ. ನೀ ಬರಾತಂಕ ಜೀವಾ ಹಿಡಿದಿರ್ತೀನಿ. ನೀ ಹೋಗೀಗ.’
’ನಿಮ್ಮೊಬ್ರನ್ನೇ ಬಿಟ್ಟು ಹೆಂಗೆ ಹೋಗಲಿ?’
’ಅಯ್ಯ ಮೂಳಿ, ಇಷ್ಟು ದಿನ ನೀನಿದ್ಯಾ ಇಲ್ಲಿ. ಇಷ್ಟು ದಿನ ಇದ್ದಂಗಿರ್ತೀನಿ ಬಿಡು. ನಿನ್ನ ಕೈಯ್ಯಿಂದ ಎರಡು ಹನಿ ನೀರು ಬೀಳಾತಂಕ ನಾನು ಉಸ್ರು ಬಿಗಿ ಹಿಡಿದಿರ್ತೀನಿ. ಹೋಗು. ’
ಅಷ್ಟರಲ್ಲಿ ಯಾರೋ ಶಶಿಕಲಾಳನ್ನು ಕರೆಯುತ್ತಿರುವ ಕೂಗು ಕೇಳಿಸಿತು.
’ಇನ್ನ ಇಲ್ಲಿಗೂ ಬರ್ತಾರೆ. ಅವ್ರು ಬರಾಕೆ ಮುಂಚೆ ನೀ ಹೋಗಿಬಿಡು ಇಲ್ಲಿಂದ.’
’ನಾ ದಿನಾ ಬರ್ತೀನಿ. ಯೋಚನೆ ಮಾಡಬೇಡಿ.’
ಅವಳ ಕೈಯ್ಯಿಂದ ತನ್ನ ಕೈಯ್ಯನ್ನು ಜಾರಿಸಿಕೊಂಡಿತು ಆ ಜೀವ. ಸ್ಪರ್‍ಶ ತಪ್ಪಿದ ಗಳಿಗೆ ನೆಲದೊಳಗೇ ಇಂಗಿಹೋಯಿತೇನೋ ಅನ್ನುವಂತೆ ಕತ್ತಲಲ್ಲಿ ಕಾಣದಾಯಿತು ಆ ಜೀವ. ತನ್ನನ್ನು ಹುಡುಕುತ್ತಿದ್ದವರ ಕೂಗು ಹತ್ತಿರ ಹತ್ತಿರ ಬರುತ್ತಿದೆ. ಥಟ್ಟನೆದ್ದು ಮುರುಕು ಮಂಟಪದಿಂದ ಹೊರಬಂದಳು. ಕೂಗು ಬರುತ್ತಿದ್ದ ದಿಕ್ಕಿಗೆ ವೇಗವಾಗಿ ನಡೆದಳು. ಹತ್ತು ಹದಿನೈದು ದಾಪುಗಾಲಿನಲ್ಲಿ ತುಳಸೀಬನದಿಂದ ಹೊರಬಂದಿದ್ದಳು ಶಶಿಕಲ. ಮತ್ತೆ ಭೂಮಿಗೆ, ಮನುಷ್ಯ ಸಂಪರ್ಕದ ಪರಿಧಿಯೊಳಗೆ ಬಂದುದರ ಕುರುಹಾಗಿ ಬ್ಯಾಟರಿ ಹಿಡಿದು ಚುಮುಚುಮು ಕತ್ತಲಲ್ಲಿ ತನ್ನನ್ನು ಹುಡುಕುತ್ತಿದ್ದ ತಂದೆ, ಒಂದಿಬ್ಬರು ಆಳು-ಕಾಳುಗಳು ಕಂಡರು. ತನ್ನನ್ನು ಕಂಡೊಡನೇ ತಂದೆ ಓಡಿ ಬಂದು ತಬ್ಬಿಕೊಂಡರು.
’ಇದ್ದಕ್ಕಿದ್ದಂತೇ ನೀ ಕಾಣ್ಲಿಲ್ಲ ನೋಡು, ಗಾಬರಿ ಆಗೋಗಿತ್ತು. ಎತ್ಲಾಗ್ಹೋದ್ಯೋ ಏನೋ ಅಂತ. ಎಲ್ಲಾರೂ ನಿನ್ನ ಹುಡುಕ್ಕೊಂಡು ಅಲೀತಿದಾರೆ. ಬಾ.’ ಅಂದವರೇ ಅಪ್ಪಿಕೊಂಡೇ ಶಶಿಕಲಾಳನ್ನು ಕರೆದೊಯ್ದರು. ತಂದೆಯ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಾ, ’ಇಲ್ಲಿ ನಂಗೇನೂ ಸುಖ ಸಿಗೋಮಟ್ಟಿಗೆ ಕಾಣೆ. ಆದರೆ ಈ ಮನೆ ಬಿಟ್ಟು ನಂಗೆ ಬೇರೆ ಮನೆಯಿಲ್ಲ. ಒಪ್ಪಿರೋ ಮಾತನ್ನು ಮುರೀಬೇಡ. ಇದು ನನ್ನ ಮನೆ. ಇಲ್ಲಿ ನನ್ನ ದಾರಿ ನಾನು ಮಾಡಿಕೋತೀನಿ. ನೀನೇನು ಯೋಚನೆ ಮಾಡಬೇಡ’ ಅಂದಳು. ಮಗಳ ಮಾತಿನಲ್ಲಿ ಅಖಂಡ ನಂಬಿಕೆಯಿದ್ದ ಪುಂಡರೀಕರಾಯರು ಬಾಯಿ ಬಿಡಲಿಲ್ಲ. ಮಬ್ಬುಗತ್ತಲಲ್ಲಿ ಅವರ ಕಣ್ಣಿಂದ ಹನಿ ಜಾರಿದ್ದು ಶಶಿಕಲಾಗೆ ಕಾಣಲಿಲ್ಲ.

ಮುಂದಿನ ಮೂರೇ ವಾರಗಳಲ್ಲಿ ಅದಷ್ಟೇ ಹದಿನಾರು ತುಂಬಿದ ಶಶಿಕಲಾ ಬಲಗಾಲನ್ನು ಮೊದಲಿಟ್ಟು ಬೃಂದಾವನವನ್ನು ಪ್ರವೇಶಿಸಿದಳು. ಬಂದ ದಿನದಿಂದಲೇ ಮನೆಯ ಆಳುಕಾಳಿಗಿರಲಿ, ಗೌರಕ್ಕನಿಗೂ ಆಕೆ ಮಾಮಿಯಾಗಿ ಬಿಟ್ಟಳು. ಒಂದು ರೀತಿಯ ದಿಟ್ಟ ಸೌಂದರ್ಯ ಆಕೆಯದು. ಗೋವರ್ಧನರಾಯರ ಆರೂಕಾಲಡಿ ವ್ಯಕ್ತಿತ್ವಕ್ಕೆ ಹೇಳಿ ಮಾಡಿಸಿದಂತಿದ್ದ ಹೆಣ್ಣು ರೂಪ ಅದು. ಹದಿನಾರು ವರ್ಷಕ್ಕೂ ಮೀರಿದ ಮೈಕಟ್ಟು. ಹೆಣ್ಣಿಗೆ ಸ್ವಲ್ಪ ಜಾಸ್ತಿಯಾಯಿತೇನೋ ಅನ್ನುವಷ್ಟು ಅಗಲ ಭುಜಗಳು, ಸೊಂಟದವರೆಗೂ ಇಳಿಬಿದ್ದ ದಟ್ಟ ಕಪ್ಪು ಕೂದಲು, ಒಂದಿನಿತೂ ನಿರಿಗೆಯಿರದ ಗೋಧಿ ಬಣ್ಣದ ಸಪೂರ ದೇಹ ಮಾಮಿಯ ಗುರುತಾಯಿತು. ಎಲ್ಲೂ ಯಾರೊಂದಿಗೂ ಸಲುಗೆಯಿಲ್ಲ. ಲೆಕ್ಕ ಹಾಕಿದಂತೆ ನಗು. ಪರಿಚಯದ ಸಲುಗೆಗೆ ತಕ್ಕಂತೆ ಕಣ್ಣಲ್ಲಿ ಆದರ. ಎಲ್ಲ ಕ್ಷಣ ಮಾತ್ರ. ಆ ನಗುವನ್ನು ಕಣ್ಣುಗಳಿಂದ ಅಳಿಸಿಬಿಟ್ಟರೆ ಎದುರಿದ್ದವರ ಎದೆಯನ್ನೂ, ಭಾವನೆಗಳನ್ನೂ ಸೀಳಿ ಬಿಡುವಂತಹ, ನೀರೊಳಗೆ ಕತ್ತಿ ಆಡಿಸಿದಂತಿರುವ ತಣ್ಣನೆಯ ಸರ್ಪದೃಷ್ಟಿ. ಈ ವಯಸ್ಸಿಗೇ ಅದೊಂದು ರೀತಿಯ ದಿವ್ಯತೆ. ವರ್‍ಚಸ್ಸು. ಗರ್ವ. ಒಂದು ಹಿರಿ ಮುತ್ತೈದೆಯನ್ನು ನೋಡಿದಂತೆ.

ಮಾಮಿ ಬೃಂದಾವನದಲ್ಲಿ ಕಾಲಿಟ್ಟ ಮಾರನೇದಿನವೇ ಪ್ರಸ್ತಕ್ಕೆ ಅಣಿಯಾಯಿತು. ಇಡೀ ಬೃಂದಾವನ ಸಜ್ಜಾಯಿತು. ಬೆಳಿಗ್ಗೆಯಿಂದ ದುಡಿದ ಇಡೀ ಮನೆ ರಾತ್ರಿಯ ಮುಹೂರ್ತಕ್ಕೆ ಅಣಿಯಾದಂತೆ ದಂಪತಿಗಳಿಬ್ಬರೂ ಕೋಣೆ ಹೊಕ್ಕೊಡನೇ ನಿಶ್ಶಬ್ದದಲ್ಲಿ ಕಾಯತೊಡಗಿತು. ಕೋಣೆಯ ಹೊಸ್ತಿಲಾಚೆಗಿನ ಕಲಕಲ ಸದ್ದು, ಹಿರಿಯರ ಪೋಲಿ ಮಾತುಗಳು, ಬೇಕೆಂದಾಗ ತೂರಿಬರುತ್ತಿದ್ದ ಒಂದಿಷ್ಟು ನಗೆಗಳು ಬಾಗಿಲು ಹಾಕಿದೊಡನೇ ಥಟ್ಟನೇ ನಿಂತು ಬಿಟ್ಟವು.

ಮಾಮಿ ಬಾಗಿಲಿನ ಚಿಲುಕ ಹಾಕಿ ಗೋವರ್ಧನರಾಯರು ಕುಳಿತಿದ್ದ ಮಂಚದ ಕಡೆ ತಿರುಗಿದಳು. ಕೋಣೆಯ ತುಂಬೆಲ್ಲಾ ಬರೆಬರೆಯಾಗಿ ಬಿದ್ದಿದ್ದ ಬೆಳಕಿನ ತುಂಡುಗಳಲ್ಲಿ ಗೋವರ್ಧನರಾಯರಿಗೆ ಮಾಮಿ ಈ ಲೋಕದ ಹೆಣ್ಣಾಗಿ ಕಂಡುಬರಲಿಲ್ಲ. ದಟ್ಟ ಕೆಂಪು ಬಣ್ಣದ ಸೀರೆ. ಹೆಗಲ ಮೇಲಿಂದ ಸೊಂಟದವರೆಗೂ ಇಳಿಬಿದ್ದಿದ್ದ
ಕಪ್ಪು ಕೂದಲ ಮೊತ್ತ. ಕತ್ತಲಲ್ಲೂ ಹೊಳೆಯುತ್ತಿದ್ದ ಕಣ್ಣುಗಳು. ಆಕೆ ತಮ್ಮೆಡೆಗೆ ಹೆಜ್ಜೆಯಿಟ್ಟಂತೆಲ್ಲಾ ಗೋವರ್ಧನರಾಯರು ನವಿರಾಗಿ ನಡುಗಿದರು. ಮಂಚದ ಮೇಲೆ ಗೋವರ್ಧನರಾಯರ ತೊಡೆಗೆ ತೊಡೆ ತಾಗಿಸಿ ಮಾಮಿ ಕುಳಿತಳು. ಮತ್ತೇರಿಸುವ ಅದೆಂತದೋ ಪರಿಮಳ ಗೋವರ್ಧನರಾಯರನ್ನು ಹಗುರವಾಗಿ ಅಲ್ಲಾಡಿಸಿಬಿಟ್ಟಿತು. ಹೆಣ್ಣಿನ ಪರಿಚಯದ ಹೊಸ ಅನುಭವ. ಮುಂದೇನು ಎಂಬುವುದರ ಬಗೆಗಿನ ಅಜ್ಞಾನ. ಉಸಿರು ಎದೆಯನ್ನೊತ್ತಿತು. ಘಕ್ಕನೆ ಆಕೆಯನ್ನು ತಬ್ಬಿಬಿಟ್ಟರು. ಅವಸರ ಅವಸರವಾಗಿ ಆಕೆಯ ಮುಖವನ್ನು ಚುಂಬಿಸತೊಡಗಿದರು. ಮಾಮಿಯ ಎದೆಯ ಮೇಲೆಲ್ಲಾ ಅವರ ಕೈ ದಿಕ್ಕು ತಪ್ಪಿದಂತೆ ಹರಿದಾಡತೊಡಗಿತು. ಮೆಲ್ಲನೆ ನಕ್ಕ ಮಾಮಿ ಹಗುರವಾಗಿ ಅವರಿಂದ ಬಿಡಿಸಿಕೊಂಡು ನಿಂತಳು. ಗೋವರ್ಧನರಾಯರು ಅದೇನು ತಪ್ಪಾಯಿತೋ ಎಂದು ವಿಹ್ವಲರಾದರು. ಮಾಮಿ ಗೋವರ್ಧನರಾಯರಿಗೆ ಬೆನ್ನು ಮಾಡಿ ನಿಂತು, ಹಿಂತಿರುಗಿ ಅವರತ್ತ ನೋಡಿದಳು. ಗೋವರ್ಧನರಾಯರಿಗೆ ಏನೊಂದೂ ಅರ್ಥವಾಗಲಿಲ್ಲ. ಮಾಮಿ ತಮ್ಮ ಕೈಯ್ಯಿಂದ ಬೆನ್ನ ಮೇಲಿದ್ದ ಕುಪ್ಪಸದ ಗುಂಡಿಗಳನ್ನು ಮುಟ್ಟಿ ತೋರಿಸಿ ’ತಗೀರಿ ಇವುನ್ನ’ ಅಂದಳು. ಮತ್ತೆ ಶುರುವಾಯಿತು ಗೋವರ್ಧನರಾಯರ ತೊಳಲಾಟ. ಎಷ್ಟು ಪ್ರಯತ್ನ ಪಟ್ಟರೂ ಗುಂಡಿ ಬಿಚ್ಚಿಕೊಳ್ಳಲೊಲ್ಲದು. ಮೊದಲ ಗುಂಡಿಯನ್ನು ಪ್ರಯತ್ನಿಸಿದರು. ಬರಲಿಲ್ಲ. ಅದು ಹಾಳಾಗಿ ಹೋಗಲಿ ಎಂದು ಮಧ್ಯದ ಗುಂಡಿಯನ್ನು ಪ್ರಯತ್ನಿಸಿದರು. ಅದೂ ಬರಲಿಲ್ಲ. ಕೊನೆಯದು...ಹಾಳಾದ್ದು ಅದೂ ಬರಲಿಲ್ಲ. ’ಇದಾಗದಿಲ್ಲ’ ಅಂದು ಕೈಚೆಲ್ಲಿಬಿಟ್ಟರು. ತಮ್ಮ ಏನೇ ಕಸರಿತ್ತಿಗೂ ಬಗ್ಗದಿದ್ದ ಆ ಗುಂಡಿಗಳು ಮಾಮಿಯ ಕೈಯ್ಯಲ್ಲಿ ಉಳ್ಳಾಗಡ್ಡೆ ಸಿಪ್ಪೆ ಸುಲಿದಷ್ಟು ಸರಾಗವಾಗಿ ಬಿಚ್ಚಿಕೊಳ್ಳತೊಡಗಿದವು. ಕುಪ್ಪಸವನ್ನು ಮೈಯ್ಯಿಂದ ಜಾರಿಸಿ, ಪೊರೆಪೊರೆಯಾಗಿ ತನ್ನ ಉಳಿದ ಬಟ್ಟೆಯನ್ನು ಕಳಚಿ ಗೋವರ್ಧನರಾಯರತ್ತ ತಿರುಗಿ ನಿಂತಳು. ಇದಾವುದೋ ಅದ್ಭುತವೆನ್ನುವಂತೆ ಗೋವರ್ಧನರಾಯರು ಆಕೆಯನ್ನೇ ದಿಟ್ಟಿಸತೊಡಗಿದರು. ಆಕೆ ಅದೊಂದು ಲಯದಲ್ಲಿ ತಮ್ಮತ್ತ ಸಾರಿಬಂದಂತೆಲ್ಲಾ ಅವರ ಎದೆಬಡಿತ ನೂರುಮಡಿಯಾಯಿತು. ಸಾವಿರಮಡಿಯಾಯಿತು. ಕೊನೆಗೊಮ್ಮೆ ತಾಳ ತಪ್ಪಿತು. ಶರೀರದ ರಕ್ತವೆಲ್ಲಾ ಸೊಂಟದಲ್ಲೇ ಮಡುಗಟ್ಟಿದಂತಾಯ್ತು. ಮಂಚದ ಬಳಿ ನಿಂತ ಮಾಮಿ, ಬೆವರುತ್ತಾ ಕುಳಿತಿದ್ದ ಗೋವರ್ಧನರಾಯರ ತಲೆಯನ್ನು ಗಟ್ಟಿಯಾಗಿ ಹಿಡಿದು ತನ್ನ ಕಿಪ್ಪೊಟ್ಟೆಗೆ ಅಪ್ಪಿಕೊಂಡಳು. ಮತ್ತದೇ ಮತ್ತೇರಿಸುವ ದೇಹಗಂಧ. ಉದ್ವೇಗದಿಂದ ಏದುಸಿರು ಬಿಡುತ್ತಿದ್ದ ಗೋವರ್ಧನರಾಯರನ್ನು ನಿಧಾನವಾಗಿ ಮಲಗಿಸಿದಳು. ಗೋವರ್ಧನರಾಯರ ದೇಹದುದ್ದಕ್ಕೂ ತನ್ನ ದೇಹವನ್ನು ಚಾಚಿ ಅವರನ್ನು ತಬ್ಬಿ ಮಲಗಿದಳು. ಬೊಗಸೆಗಳಲ್ಲಿ ಗೋವರ್ಧನರಾಯರ ಮುಖವನ್ನು ಹಿಡಿದು, ಕಿವಿಯನ್ನು ಹಗುರವಾಗಿ ಕಚ್ಚಿದಳು. ’ದೊರೆ’ ಎಂದು ಪಿಸುಗುಟ್ಟಿದಳು. ಅವರ ಮುಖಕ್ಕೆ ಮುಖ ತಂದಳು. ಆಗಲೇ ಗೋವರ್ಧನರಾಯರು ಆಕೆಯ ಕಣ್ಣುಗಳನ್ನು ನೋಡಿದ್ದು. ಸಾಗರ ನೀಲಿ ಕಣ್ಣುಗಳು. ಆಳದೊಳಕ್ಕೆ ಅದೇನೋ ನಿಗೂಢವನ್ನು ಅಡಗಿಸಿದಂತಿದ್ದ ಕಣ್ಣುಗಳು. ಆಕೆಯ ಕಣ್ಣೊಳಗೆ ಕಣ್ಣು ನಿರುಕಿಸಿ ನಿಧಾನವಾಗಿ ಗೋವರ್ಧನರಾಯರು ಸಾಗರದಾಳಕ್ಕೆ ಇಳಿದರು. ತುಟಿ ಹರಿದಂತೆಲ್ಲಾ ಮಾಮಿಯ ದೇಹ ಚಿಗುರತೊಡಗಿತು. ಅರಳತೊಡಗಿತು. ಗಮ್ಮೆನ್ನತೊಡಗಿತು. ಸಳಸಳ ನೀರಾಗತೊಡಗಿತು. ತೆಕ್ಕೆಹೊಯ್ದ ದೇಹಗಳು ಸಂದು ಸಂದುಗಳಲ್ಲಿ ಬೆವೆತವು. ಸ್ಪರ್‍ಶ ಸ್ಪರ್‍ಶಕ್ಕೂ ದೇಹಗಳು ಪುಳಕಗೊಂಡವು. ಬೆನ್ನುಗಳ ಮೇಲೆ ಬೆರಳುಗಳು ಬಗೆದಂತೆಲ್ಲಾ ಉಗುರ ಗೀರುಗಳು ಬೆನ್ನ ಮೇಲೆ ಚಿತ್ತಾರವನ್ನು ಬಿಡಿಸಿದವು. ಒಂದು ದೇಹ ಮತ್ತೊಂದನ್ನು ಅಪ್ಪಿತು. ಕ್ಷಣ ಹೊತ್ತು ದೂರವಾದವು. ಮತ್ತೆ ಹಂಗಿಸುವಂತೆ, ಅದೇನನ್ನೋ ಭಂಗಿಸುವಂತೆ ತನ್ನೆಲ್ಲಾ ರಭಸವನ್ನು ಅರ್ಭಟಿಸುವಂತೆ ಮತ್ತೆ ಮತ್ತೆ ಅಪ್ಪಳಿಸಿಕೊಂಡವು. ತಬ್ಬಿಕೊಂಡವು. ಗೋವರ್ಧನರಾಯರು ಆಕ್ರಮಿಸಿದಷ್ಟೂ ಮೈ ಬಿಚ್ಚಿದಳು ಮಾಮಿ. ಸೃಷ್ಟಿಗೆ ಆ ಕ್ಷಣದಲ್ಲಿದ್ದುದು ಒಂದೇ ಲಯ. ಒಂದೇ ತಾನ. ಒಂದೇ ತಾಡನ. ಗೋವರ್ಧನರಾಯರು ಆಕೆಯನ್ನು ಅಪ್ಪಿದರು, ಆವರಿಸಿದರು, ತಣಿಸಿದರು, ತಲ್ಲಣಿಸಿದರು.
ನನ್ನೊಳಗೇ ನನ್ನನ್ನು ಕರೆಯುತ್ತಿದ್ದೀಯೇ
ನಾನು ಬಂದೆ. ನಾನು ಬಂದೆ.
ಇನ್ನೇನು ಹುಟ್ಟೊಂದು ಸಿದ್ಧಿಸಬೇಕು, ತಮ್ಮ ಮೇಲೆ ದೇಹದುದ್ದಕ್ಕೂ ಚಾಚಿಕೊಂಡು ಏದುಸಿರು ಬಿಡುತ್ತಿದ್ದ ಗೋವರ್ಧನರಾಯರನ್ನು ಪಕ್ಕಕ್ಕೆ ನೂಕಿ, ಥಟ್ಟನೆ ಮಾಮಿ ಎದ್ದು ನಿಂತಳು. ಸರಸರನೆ ಬೀರುವಿನತ್ತ ನಡೆದು ಅದರಲ್ಲಿದ್ದ ಕಡುಗೆಂಪು ಬಣ್ಣದ ಲಂಗವೊಂದನ್ನು (ಪೆಟ್ಟಿಕೋಟೇ ಇರಬೇಕು) ಎಳೆದು ಅವಸರಸರವಾಗಿ ಧರಿಸುತ್ತಾ, ಮತ್ತದೇ ಬಣ್ಣದ ಶಾಲೊಂದರಿಂದ ಎದೆಯನ್ನು ಮುಚ್ಚಿಕೊಳ್ಳುತ್ತ, ’ಪುಟ್ಟಕ್ಕ ಕರೀತಿದಾಳೆ. ನಾನು ಅಲ್ಲಿರಬೇಕು.’ ಅಂದು ಗೋವರ್ಧನರಾಯರತ್ತ ತಿರುಗಿ ಕೂಡಾ ನೋಡದೆ ಬಾಗಿಲು ತೆರೆದು ಅದರಾಚೆಗಿನ ಕತ್ತಲಿಗೆ ಅಡಿಯಿಟ್ಟಳು. ಹೆಡೆಯೆತ್ತಿದ್ದ ಗೋವರ್ಧನರಾಯರ ಪೌರುಷಕ್ಕೆ ಅಪ್ಪಳಿಸಿದಂತಾಯ್ತು. ತೆರೆದ ಬಾಗಿಲಿನಿಂದ ಒಳನುಗ್ಗಿದ ಥಣ್ಣನೆಯ ಗಾಳಿ ಗೋವರ್ಧನರಾಯರ ಬೆತ್ತಲೆ ಮೈಯ್ಯನ್ನು ಅಲುಗಿಸಿತೋ ಇಲ್ಲವೋ, ಅವಮಾನ ಇಮ್ಮಡಿಸಿತು. ತಮ್ಮ ಬೆತ್ತಲೆ ಮೈ ತಮಗೇ ಮುಜುಗರವಾಯಿತು. ನಾಚಿಕೆಯಿಂದ ಆರೂವರೆ ಅಡಿ ದೇಹ ಕುಗ್ಗಿಬಿಟ್ಟಿತು. ಕಾಲಡಿ ಹೊರಳಿ ಬಿದ್ದಿದ್ದ ಕವುದಿಯನ್ನು ಕುತ್ತಿಗೆವರೆಗೂ ಹೊದ್ದು ಮಲಗಿಬಿಟ್ಟರು.

2 comments:

vee ಮನಸ್ಸಿನ ಮಾತು said...

when u get time to write thismuch sir....... i really jealous on u

suptadeepti said...

ಸೂರಿಯವರಿಗೆ ನನ್ನ ನಮಸ್ಕಾರಗಳನ್ನೂ ಅಭಿನಂದನೆಗಳನ್ನೂ ತಿಳಿಸಿ, ಪ್ಲೀಸ್.
ಸೊಗಸಾದ ಪರಿಚಯ. ಪುಸ್ತಕಕ್ಕಾಗಿ ಕಾಯುತ್ತೇನೆ, ನನಗಾಗಿ ಒಂದು ಪ್ರತಿ ಕಾದಿರಿಸುತ್ತೀರಾ?