Friday, June 6, 2008

ಮುಸ್ಸಂಜೆಗಳನ್ನು ಮನ್ನಾ ಮಾಡಲಾಗಿದೆ

ಕನ್ನಡಿಯಲ್ಲಿ ಕಂಡ
ಕೆಂಡ
ಸಂಪಿಗೆಗೆ
ವಾಸನೆಯಿಲ್ಲ, ಬರೀ ಬಣ್ಣ.

ವಯಸ್ಸಾಗುತ್ತಾ
ಉಡುಗುತ್ತದೆ ನಡು ಹೆಜ್ಜೆ
ಪಂಚೇದ್ರಿಯಗಳೂ
ಜೀವಕ್ಕೆ ಒಜ್ಜೆ

ಗರುಡಗಂಬಕ್ಕೆ
ಜೋತುಬಿದ್ದ ಹರೆಯದ
ತುಂಡುಲಂಗಕ್ಕೆ
ಕಾಸು ಕೈಲಾಸ, ಕಾಯಕ
ಮನೋವಿಲಾಸ.

ಅವಳ ಎಸ್ಸೆಮ್ಮೆಸ್ಸು ಬಂತೆಂದರೆ
ಸೆಲ್‌ಫೋನಿಗೆ ವೈಬ್ರೇಷನ್ನು.
ಚಿತ್ರದುರ್ಗದ ಬೆಟ್ಟದ ಮೇಲೆ
ಗಾಳಿಯಂತ್ರ.
ಗುಡ್ಡಕ್ಕೂ ಚಳಿ

ವಾರಕ್ಕೆರಡು ರಜೆ
ಭಾನುವಾರ ಮನೆಮಂದಿಗೆ
ಶನಿವಾರ ಸಂಜೆ
ಅವಳೊಂದಿಗೆ

ಪಡಪೋಶಿ ಕತೆಗಾರನಿಗೆ
ಕವಿತೆ ಅಲರ್ಜಿ.
ಶೃಂಗಾರಶಯ್ಯೆಯಲ್ಲಿ
ಮನೋರಮೆಯೊಂದಿಗೆ
ಮುದ್ದಣನಿಲ್ಲ.
ಸಲ್ಲಾಪಕ್ಕಂತೂ ಅಡ್ಡಿಯಿಲ್ಲ.

5 comments:

Anonymous said...

beautiful
-g n mohan

ಶಾಂತಲಾ ಭಂಡಿ (ಸನ್ನಿಧಿ) said...

ಪ್ರೀತಿಯ ಜೋಗಿ...

"ಕನ್ನಡಿಯಲ್ಲಿ ಕಂಡ
ಕೆಂಡ
ಸಂಪಿಗೆಗೆ
ವಾಸನೆಯಿಲ್ಲ, ಬರೀ ಬಣ್ಣ."

"ಅವಳ ಎಸ್ಸೆಮ್ಮೆಸ್ಸು ಬಂತೆಂದರೆ
ಸೆಲ್‌ಫೋನಿಗೆ ವೈಬ್ರೇಷನ್ನು.
ಚಿತ್ರದುರ್ಗದ ಬೆಟ್ಟದ ಮೇಲೆ
ಗಾಳಿಯಂತ್ರ.
ಗುಡ್ಡಕ್ಕೂ ಚಳಿ"

ಪ್ರತಿ ಬಾರಿ ಬೆಂಗಳೂರಿಂದ ಊರಿಗೆ ಹೋಗುವಾಗಲೂ ಮಾರ್ಗ ಮಧ್ಯೆ ಸಿಗುವ ಚಿತ್ರದುರ್ಗದ ಗುಡ್ಡದ ಮೇಲಿನ ಗಾಳಿಯಂತ್ರಗಳನ್ನು ಕಣ್ಮರೆಯಾಗುವತನಕ ಬಸ್ಸಲ್ಲಿ ಕುಳಿತೇ ನೋಡುವ ಗೀಳಿದೆ. ಅವನ್ನು ನೋಡಿ ಎಷ್ಟೋ ಕಲ್ಪನೆಗಳು ಸುಳಿದಿವೆ. ಆದರೆ ಗುಡ್ಡಕ್ಕೆ ಚಳಿಯಾಗಬಹುದೆನ್ನುವಷ್ಟು ಸೂಕ್ಷ್ಮ ಕಲ್ಪನೆ ಬಂದಿರಲೇ ಇಲ್ಲ.
ಎಲ್ಲ ಸಾಲುಗಳೂ ತುಂಬ ಇಷ್ಟವಾದ್ವು.

Sushrutha Dodderi said...

ವಾರೆವ್ಹಾ! ಹೀಗೆ ಹೋಗಿ ಹಾಗೆ ಬರುವಷ್ಟರಲ್ಲಿ ಜೋಗಿ ಸರ್ ಕವಿಯಾಗಿಬಿಟ್ಟಿದಾರಲ್ಲಾ!

ಸೂಪರ್ ಸರ್.. ತುಂಬಾ ಇಷ್ಟ ಆಯ್ತು..

Anonymous said...

saar,
Kannadaprabha bitra?

--Sukesh

Anonymous said...

chennagide!