Thursday, June 19, 2008

ಅಜಾತಶತ್ರು ಪ್ರೇಮಕ್ಕೊಂದು ಅಪರೂಪದ ಬಿನ್ನಹ!

ಥತ್, ಪ್ರೀತಿಗೆ ಶತ್ರುಗಳೇ ಇಲ್ಲ ಕಣ್ರೀ.
ಹಾಗಂತ ಅವರು ನಿಟ್ಟುಸಿರಿಟ್ಟರು. ಅವರೂ ಪ್ರೀತಿಸಿ ಮದುವೆ ಆದವರೇ. ಪ್ರೀತಿಗೆ ಶತ್ರುಗಳಿರಬೇಕು ಅಂತ ಬಯಸುವುದಕ್ಕೆ ಅವರಿಗೆ ಕಾರಣಗಳೇ ಇರಲಿಲ್ಲ. ಹಾಗಿದ್ದರೂ ಪ್ರೀತಿಗೆ ಶತ್ರುಗಳೇ ಇಲ್ಲ ಅಂತ ಅವರು ಬೇಜಾರು ಮಾಡಿಕೊಂಡದ್ದಕ್ಕೆ ಕಾರಣ ಏನಿರಬಹುದು?
ನನಗಂತೂ ಹೊಳೆಯಲಿಲ್ಲ. ನನ್ನ ಕತೆ ಕೇಳಿ’ ಅಂತ ಅವರು ಕತೆ ಶುರುಮಾಡಿದರು. ನಾನು ಮದುವೆ ಆದದ್ದು ಹದಿನಾರು ವರುಷದ ಹಿಂದೆ. ಅದಕ್ಕೆರಡು ವರುಷದ ಹಿಂದೆ ಅವಳನ್ನು ಪ್ರೀತಿಸಿದ್ದೆ. ಅದೂ ಎಂಥಾ ಪ್ರೀತಿ. ಅವಳು ಕಾಲೇಜಿಗೆ ಹೋಗುವಾಗ ತಿರುಗಿ ನೋಡಿ ನಕ್ಕರೆ ಆ ದಿನವೆಲ್ಲ ಧನ್ಯತೆ. ಅವಳ ಕೈಲಿ ಒಂದು ಪ್ರೇಮಪತ್ರ ಓದಿಸಿಕೊಳ್ಳಬೇಕಾದರೆ ಒಂದೂವರೆ ವರ್ಷ ಬೇಕಾಯಿತು. ಅವಳಿಗೆ ಕೊನಗೂ ಐ ಲವ್ ಯೂ ಅಂತ ಹೇಳಲಿಕ್ಕಾಗಲಿಲ್ಲ. ಐ ಲವ್ ಯೂ ಅಂತ ಬರೆಯಬೇಕಿದ್ದರೆ ಕೈ ನಡುಗೋದು. ಪೊಲೀಸರ ಕಣ್ತಪ್ಪಿಸಿ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಕೊಂಡವನು, ಸರ್ಕಾರಕ್ಕೆ ಧಿಕ್ಕಾರ ಅಂತ ರಾತ್ರೋರಾತ್ರಿ ಗೋಡೆಯಲ್ಲಿ ಬರೆದಷ್ಟು ಭಯ. ಕೊನೆಗೂ ಹಾಗೆ ಹೇಳದೇನೇ ಮದುವೆಯೂ ಆಗಿಹೋಯಿತು.
ಒಂದು ಪ್ರೇಮ ಪತ್ರಕ್ಕಾಗಿ ಎಷ್ಟೆಲ್ಲ ರಾದ್ಧಾಂತ. ಅವಳಿಗೋ ಅದನ್ನು ಎಲ್ಲಿ ಬಚ್ಚಿಡುವುದು ಎಂಬ ಕಳವಳ. ಆ ಕಾಲಕ್ಕೆ ಈಗಿನ ಹಾಗೆ ಅವಳಿಗೆ ಅವಳದ್ದೇ ಒಂದು ರೂಮು ಅಂತಿರಲಿಲ್ಲ. ರಹಸ್ಯಗಳೂ ಇರಲಿಲ್ಲ. ಎಲ್ಲವೂ ಎಲ್ಲರಿಗೂ ಗೊತ್ತಾಗುವಂತೆ ಇಟ್ಟುಕೊಳ್ಳಬೇಕಾಗಿತ್ತು. ಪುಸ್ತಕದ ನಡುವೆ ಅಡಗಿಸಿ ಇಡುವಂತಿಲ್ಲ. ಕಪಾಟಿನಲ್ಲಿಟ್ಟರೆ ತಮ್ಮಂದಿರು ನೋಡುತ್ತಾರೆಂಬ ಭಯ. ತಂಗಿಯೋ ಟ್ರೆಷರ್ ಹಂಟರ್. ಪಾತಾಳದಲ್ಲಿಟ್ಟರೂ ಹುಡುಕಿ ಓದುತ್ತಾಳೆ. ಮೊದಲೇ ಅವಳಿಗೆ ಅನುಮಾನ!
ಹರಿದು ಎಸೆಯೋದಕ್ಕೂ ಮನಸ್ಸಾಗುತ್ತಿಲ್ಲ. ಅವನು ಬರೆದ ಕಾಗದ. ಹರಿದರೆ ಅಪಶಕುನ, ಪ್ರೀತಿಯೂ ಹರಿದು ಹೋದರೆ? ಇಂಥ ತಲ್ಲಣಗಳಲ್ಲಿ ನಾನೂ ಅವಳೂ ಬದುಕುತ್ತಿದ್ದೆವು. ಸ್ನೇಹಿತರಿಗೆ ಗೊತ್ತಾಗದ ಹಾಗೆ, ಮನೆಯವರಿಗೆ ಸುಳಿವು ಸಿಗದ ಹಾಗೆ. ಒಂದು ನಗೆ ತುಟಿ ಬದಲಾಯಿಸುತ್ತಾ, ಕಣ್ಣೋಟದಲ್ಲಿ ಪಿಸುಮಾತಾಡುತ್ತಾ, ಬಂದೇ ಬರತಾವ ಕಾಲ, ಮಂದಾರ ಕನಸನು ಕಂಡಂಥ ಮನಸನು ಒಂದು ಮಾಡುವ ಸ್ನೇಹಜಾಲ ಅನ್ನುವ ಹಾಡನ್ನು ಕವಿ ತಮಗೋಸ್ಕರವೇ ಬರೆದಿದ್ದಾನೆ ಎಂದು ನಂಬುತ್ತಾ, ಸಿನಿಮಾ ಹಾಡುಗಳ ಮೂಲಕ ಬೆಳದಿಂಗಳ ಮೂಲಕ ಪ್ರೇಮತತ್ಪರರಾಗುತ್ತಾ ಜೀವಿಸುತ್ತಿದ್ದೆವು.
ಅದಕ್ಕೂ ಪ್ರೀತಿಯ ಶತ್ರುಗಳಿಗೂ ಏನು ಸಂಬಂಧ?
ಅವರು ಮತ್ತೊಂದು ನಿಟ್ಟುಸಿರಿಟ್ಟು ಮುಂದುವರಿಸಿದರು. ಆ ಕಾಲಕ್ಕೆ ಪ್ರೀತಿಯೆಂಬ ನದಿಗೆ ನೂರಾರು ಅಣೆಕಟ್ಟುಗಳು. ಅದರ ಸರಾಗ ಹರಿವು ಅಸಾಧ್ಯವೋ ಅಸಾಧ್ಯ. ಸಂಜೆ ಅವಳು ಒಂಚೂರು ಲೇಟಾಗಿ ಬಂದರೆ ಅಮ್ಮನಿಗೆ ಅನುಮಾನ, ಬಸ್ಟಾಪಿನಲ್ಲೋ ಹೂ ತೋಟದ ದಾರಿಯಲ್ಲೋ ಯಾರ ಜೊತೆಗಾದರೂ ಕಾಣಿಸಿಕೊಂಡರೆ ಸಾಕು ಆಂತಕ. ಅವನು ಅಪರಿಚಿತನೇ ಆಗಿದ್ದರೂ ಒಳಗೊಳಗೇ ಭಯ. ಅವನಿಂದ ಸಾಕಷ್ಟು ದೂರ ನಿಂತು ತನಗೂ ಅವನಿಗೂ ಸಂಬಂಧವಿಲ್ಲ ಎಂದು ತೋರಿಸಿಕೊಳ್ಳುವ ಆಸೆ. ಎಲ್ಲೋ ಒಂದು ಪ್ರೇಮ ವಿವಾಹ ನಡೆಯಿತೆಂದು ಗೊತ್ತಾದರೆ ಒಳಗೊಳಗೇ ಖುಷಿ. ಆ ಖುಷಿಗೆ ಮನೆಯಲ್ಲೇ ಎರಗಿ ಬರುವ ವಿರೋಧದ ನರಭಕ್ಷಕ ಹುಲಿ. ಅಲ್ಲಿಗೆ ಕನಸುಗಳು ಭಗ್ನ. ಅಷ್ಟೇ ಯಾಕೆ, ಸಿನಿಮಾದಲ್ಲಿ ಹೀರೋ ಅವಳ ಕೈ ಹಿಡಕೊಂಡು ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ’ ಎಂದು ಹಾಡುತ್ತಿದ್ದರೆ.....
ಯಾರಾದರೂ ನೋಡಿಯಾರೆಂಬ ಆತಂಕ ಸಿನಿಮಾ ನೋಡುವ ನಮಗೆ. ನೋಡಿದ ಮೇಲೆ ಏನಾಗತ್ತೆ ಎಂಬ ಕುತೂಹಲ. ಅವಳು ದಿಟ್ಟತನದಿಂದ ಎದುರಿಸಿ ನಿಂತರೆ ಆನಂದ.
ಅದೆಲ್ಲ ಸರಿ, ಅದಕ್ಕೂ ಪ್ರೀತಿಗೆ ಶತ್ರುಗಳಿಲ್ಲದೇ ಇರುವುದಕ್ಕೂ ಏನು ಸಂಬಂಧ?
*****
ಎಂಥಾ ಕತೆ ಬರೆಯಬೇಕು, ಎಂಥಾ ಸಿನಿಮಾ ಮಾಡಬೇಕು ಹೇಳಿ ಅಂದರು ಅವರು. ಒಂದು ಕಾಲದಲ್ಲಿ ಎಷ್ಟು ಬೇಕಾದರೂ ಪ್ರೇಮ ಚಿತ್ರಗಳನ್ನು ಮಾಡಬಹುದಾಗಿತ್ತು, ಪ್ರೇಮ ಕತೆಗಳನ್ನು ಬರೆಯಬಹುದಾಗಿತ್ತು. ಬಿ ಎಲ್ ವೇಣು ಪ್ರೇಮಪರ್ವ ಬರೆದಾಗ ಅದು ನಮಗೆ ಭೈರಪ್ಪನವರ ಪರ್ವ ಕಾದಂಬರಿಗಿಂತ ಶ್ರೇಷ್ಠ ಕೃತಿ ಅನ್ನಿಸಿತ್ತು. ಆ ಆತಂಕ, ತವಕ, ತಲ್ಲಣಗಳೆಲ್ಲ ಅಲ್ಲಿದ್ದವು. ಮರೋ ಚರಿತ್ರದಲ್ಲಿ ಅವಳು ಬಟ್ಟೆ ಒಗೆಯುವ ಸದ್ದಿಗೆ ಅವನು ಸ್ಪಂದಿಸಿದರೆ ಅದು ಮೇಘಸಂದೇಶ. ಅವಳ ರೂಮಿನ ಲೈಟು ಹತ್ತಿ ಆರಿದರೆ, ಅವನ ರೂಮಲ್ಲೂ ಕತ್ತಲೆ ಬೆಳಕಿನಾಟ. ಅದರಲ್ಲೇ ಪ್ರೀತಿ ಹಬ್ಬಿ ಅರಳಿ ಮನಸ್ಸಿಗೆ ಆನಂದ.
ಆದರೆ ಈಗೇನಾಗಿದೆ ನೋಡಿ. ಪ್ರೀತಿಗೆ ಶತ್ರುಗಳೇ ಇಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ ಅಂತ ನೇರವಾಗಿ ಹೇಳುತ್ತಾನೆ ಅವನು. ಅದನ್ನು ಪ್ರಪೋಸ್ ಮಾಡುವುದು ಅಂತಾರೆ. ಅವಳು ನೀನಿಷ್ಟ ಇಲ್ಲ ಅಂತ ಅಷ್ಟೇ ನೇರವಾಗಿ ಹೇಳುತ್ತಾಳೆ. ಇಲ್ಲ ಎಂದರೆ ಇದೆ ಎಂದರ್ಥ ಎಂಬ ಮಾತಿಗೆ ಅರ್ಥವಿಲ್ಲ. ಆಮೇಲೂ ಅಷ್ಟೇ ಅವರಿಬ್ಬರೂ ಜೊತೆಗೆ ಓಡಾಡುತ್ತಾರೆ.. ನಾನವನನ್ನು ಪ್ರೀತಿಸುತ್ತೇನೆ ಅಂತ ಆಕೆ ಅಷ್ಟೇ ನೇರವಾಗಿ ಅಪ್ಪನ ಹತ್ತಿರ ಹೇಳುತ್ತಾಳೆ. ಅಪ್ಪ ಅದನ್ನು ತೀವ್ರವಾಗಿ ವಿರೋಧಿಸುವಂತೆಯೂ ಇಲ್ಲ. ಆ ಸ್ವಾತಂತ್ರ್ಯವನ್ನು ಅವಳು ಅಪ್ಪನಿಗೋ ಅಮ್ಮನಿಗೋ ಕೊಟ್ಟಿಲ್ಲ. ಅವನೂ ಅಷ್ಟೇ.
ಅಲ್ಲಿಗೆ ಅಮ್ಮ ಅಪ್ಪ ಪ್ರೀತಿಗೆ ಶತ್ರುಗಳಲ್ಲ ಅಂದ ಹಾಗಾಯಿತು. ಆಮೇಲೆ ಬಂದ ಶತ್ರು, ಜಾತಿ. ಈಗ ಜಾತಿ, ಮತ, ಕುಲವೆಲ್ಲ ಕಿತ್ತುಕೊಂಡು ಹೋಗಿದೆ. ಹೀಗಾಗಿ ಜಾತಿಯ ಕಾರಣಕ್ಕೆ ಪ್ರೀತಿ ಸಾಯುವುದಿಲ್ಲ. ಅಂತಸ್ತಿನ ಪ್ರಶ್ನೆ ಅಷ್ಟಾಗಿ ಮುಖ್ಯವಾಗುವುದಿಲ್ಲ. ನಮ್ಮ ನಮ್ಮ ಬದುಕು ನಮ್ಮದು ಅಂತ ಅವರೂ ಹೊರಟುಬಿಟ್ಟಿರುತ್ತಾರೆ. ಅಲ್ಲಿಗೆ ಮೂರನೆ ಶತ್ರುವೂ ಕೊಲೆಯಾದ.
ಹಾಗಿದ್ಜರೆ ಪ್ರೀತಿಯ ಶತ್ರು ಯಾರು?
ಸಂಘರ್ಷವಿಲ್ಲದೆ ಕತೆ ಹುಟ್ಟುವುದಾದರೂ ಹೇಗೆ? ಆಸಕ್ತಿಪೂರ್ಣ ಆಗುವುದಾದರೂ ಹೇಗೆ? ಅದು ನಮ್ಮ ಕತೆ ಅಂತ ಓದುವವರಿಗೆ ನೋಡುವವರಿಗೆ ಅನ್ನಿಸುವುದಾದರೂ ಹೇಗೆ? ಹಾಗನ್ನಿಸದ ಕತೆಯನ್ನು ಅವರು ಯಾಕೆ ನೋಡುತ್ತಾರೆ. ಓದುತ್ತಾರೆ, ಇಷ್ಟಪಡುತ್ತಾರೆ.
ವಿರೋಧವಿಲ್ಲದ ಪ್ರೀತಿ ಯಾವತ್ತೂ ಕುತೂಹಲಕಾರಿ ಆಗಲಾರದು. ಅದು ವಿರೋಧದಲ್ಲಿಯೇ ಬೆಳೆಯಬೇಕು. ದಡಗಳು ಕಿರಿದಾದಾಗಲೇ ನದಿ ರಭಸವಾಗಿ ಹರಿಯುತ್ತದೆ. ಅಗವವಾಗಿ ಹರಿಯುವ ನದಿಗೆ ಆಳವೂ ಇರುವುದಿಲ್ಲ, ವೇಗವೂ ಇರುವುದಿಲ್ಲ.
ಅಷ್ಟು ಹೇಳಿ ಅವರು ಸುಮ್ಮನಾದರು. ಅವರಿಗೂ ಉತ್ತರ ಗೊತ್ತಿರಲಿಲ್ಲ. ನಮಗೂ ಗೊತ್ತಿರಲಿಲ್ಲ. ನಾವೂ ಹೌದಲ್ಲವಾ ಅಂತ ಯೋಚಿಸುವ ಹೊತ್ತಿಗೆ ನಮ್ಮಲ್ಲೊಬ್ಬನ ಮೊಬೈಲು ಥಕಥೈ ಕುಣಿದಾಡಿತು. ಅವನು ಸಂದೇಶ ಓದಿಕೊಂಡ:
ಲವ್ ಯೂ ಎ ಲಾಟ್ ಡಿಯರ್, ಮಿಸ್ಸಿಂಗ್ ಯೂ. ಬೇಗ ಬಾರೋ... ಉಮ್ಮಾ...’
ಅವರು ಮತ್ತೆ ನಿಟ್ಟುಸಿರಿಟ್ಟರು.
******
ಐ ಡ್ರಾಪ್‌ಡ್ ಹಿಮ್ ಅಂತ ಅವಳು ನಿರ್ಭಾವುಕಳಾಗಿ ಹೇಳಿದಳು. ಅವಳ ಕೈಯಲ್ಲಿ ಅವನೇ ಉಡುಗೊರೆ ಮಾಡಿದ್ದ ಉಂಗುರವಿತ್ತು. ಅದನ್ನು ತೆಗೆದು ಟೇಬಲ್ ಮೇಲಿಟ್ಟು ತಿರುಗಿಸಿದಳು. ಉಂಗುರು ತಿರುತಿರುಗಿ ಸುಸ್ತಾಗಿ ತಲೆತಿರುಗಿ ಟೇಬಲ್ಲಿನ ಮೇಲೆ ಸುಮ್ಮನಾಯಿತು. ಅವಳು ಸಿಗರೇಟು ಹಚ್ಚಿಕೊಂಡು ಆಕಾಶ ನೋಡಿದಳು.
ಅದೇ ಹೊತ್ತಿಗೆ,
ಅವಳು ಸರಿ ಇಲ್ಲ ಕಣೋ, ಅವಳ ಜೊತೆ ಬಾಳೋಕ್ಕಾಗಲ್ಲ’ ಅಂತ ಅವನು ಕಾಫಿ ಕುಡಿಯುತ್ತಾ ಹೇಳುತ್ತಿದ್ದ. ಅವಳಿಗೆ ಜವಾಬ್ದಾರಿಯಿಲ್ಲ, ಕಮಿಟ್‌ಮೆಂಟಿಲ್ಲ. ತುಂಬ ದಿನ ಜೊತೆಗೆ ಇರೋಕ್ಕಾಗಲ್ಲ ಅನ್ನಿಸಿತು. ಬಿಟ್ಟುಬಿಟ್ಟೆ.’
ಪ್ರೀತಿಗೆ ಶತ್ರುಗಳಿಲ್ಲ ಅನ್ನುವುದು ಸುಳ್ಳು, ಹೊರಗಿನ ಶತ್ರುಗಳಿಲ್ಲ ಅಂತ ತಿದ್ದುಪಡಿ ಮಾಡಿಕೊಳ್ಳಬೇಕು ಅಷ್ಟೇ. ಹೊರಗಿನ ಶತ್ರುಗಳನ್ನು ಎದುರಿಸುವುದು ಸುಲಭ. ಒಳಗಿನ ದಂಗೆಯನ್ನು ಹತ್ತಿಕ್ಕುವುದು ಕಷ್ಟ. ಎಲ್ಲಿ ಹೊರಗಿನ ಒತ್ತಡ,. ಒತ್ತಾಯ,. ಪ್ರತಿರೋಧ ಇಲ್ಲವೋ ಆಗ ಅದು ಒಳಗಿನಿಂದಲೇ ಹುಟ್ಟಿಕೊಳ್ಳುತ್ತದೆ. ಹರಿಯುವ ನದಿ ಹರಿದು ನಿಸೂರಾಗುತ್ತದೆ. ಹರಿಯದ ಸಮುದ್ರದ ಅಂತರಾಳದಲ್ಲಿ ಜ್ವಾಲಾಮುಖಿ ಹುಟ್ಟುಕೊಳ್ಳುತ್ತದೆ.
ಪ್ರೀತಿಯೂ ಹಾಗಾಗಿದೆಯಾ? ಪ್ರೇಮಿಗಳಿಗೆ ಪ್ರೇಮಿಗಳೇ ಶತ್ರುವಾ? ಪ್ರೀತಿಯೇ ಅವರ ಪಾಲಿಗೆ ಶತ್ರುವಾಗಿ ಪರಿಣಮಿಸಿದೆಯಾ? ಉದಾರವಾದದಲ್ಲಿ ಪ್ರೀತಿ ಬಂದಿಯಾಗಿದೆಯಾ?
ಇಲ್ಲದೇ ಹೋದರೆ ಯಾಕಿಷ್ಟು ಆತಂಕ. ಆಫೀಸಿನ ಕಿಟಕಿಯ ಬಳಿ ನಿಂತು ಆಕೆ ಕಣ್ಣೀರು ಹಾಕುತ್ತಾ ಯಾರೊಂದಿಗೋ ಫೋನಲ್ಲಿ ಮಾತಾಡುವುದೇಕೆ? ಅವನು ದೇವಸ್ಖಾನದ ಕಟ್ಟೆಯ ಮೇಲೆ ಕುಳಿತು ಮರುಗುವುದೇಕೆ? ಅವರಿಬ್ಬರೂ ಜಗಳಾಡಿ ದೂರಾಗಿ, ಮತ್ತೆಂದೂ ಹತ್ತಿರಾಗಬಾರದು ಅನ್ನಿಸುವಷ್ಟರ ಮಟ್ಟಿಗೆ ಬೇರೊಂದು ಲೋಕವನ್ನು ಕಂಡುಕೊಳ್ಳುವುದೇಕೆ?
ಪ್ರೇಮ ಕತೆಗಳಿಗೆ ಕೊನೆಯುಂಟೆ?
ರಾಧಾ ಮಾಧವರಿರೋ ತನಕ
ಪ್ರೇಮ ಪ್ರವಾಹಕೆ ಯಾವ ತಡೆ?
ಜಾತಿ ಅಂತಸ್ತು ಧನಕನಕ
ಎಂದು ಬರೆದ ಲಕ್ಷ್ಮಣರಾವ್ ಮುಂದುವರಿಯುತ್ತಾರೆ:
ಕೆಲವರ ಪ್ರೇಮ ಹುಚ್ಚುಹೊಳೆ, ಕೆಲವರಿಗೋ ಅದು ಮುಳ್ಳುಮೆಳೆ
ಎಲ್ಲೋ ಕೆಲವರ ಪಾಲಿಗೆ ಪ್ರೇಮ, ಬತ್ತದ ಒಳಸೆಲೆ..

ಕವಿಮಾತು ನಿಜ ಮತ್ತು ಸುಳ್ಳು. ಅದೇ ನಮ್ಮೆಲ್ಲರ ಕಷ್ಟ ಮತ್ತು ಸುಖ. ನೆನಪು ಮತ್ತು ನಿರಾಸೆ. ದುಗುಡ ಮತ್ತು ಉಲ್ಲಾಸ.

7 comments:

ಮೃಗನಯನೀ said...

its beautiful... true picture..

ಟೀನಾ said...

ಜೋಗಿಯವರೆ,
ಎಷ್ಟು ನಿಜ ಅಲ್ಲ? ಅಂದುಕೊಂಡೆ. ನಗರಗಳಲ್ಲಿ ಮೊದಲು ಯಾವದು ನಮ್ಮ ಅಮ್ಮ ಅಪ್ಪಂದಿರಿಗೆ ಎಟುಕುವದು ಕಷ್ಟವಾಗಿತ್ತೋ ಇವತ್ತು ನಮಗೆ ಅದೆಲ್ಲ ಕೈಚಾಚಿದ್ರೆ ಸಿಗತ್ತೆ. ನಮ್ಗೋ, ಕೈಚಾಚೋದಕ್ಕೇ ಬೇಜಾರು!! ಎಲ್ಲದಕ್ಕು ಸಬೂಬಿವೆ ನಮ್ ಹತ್ರ - ಪ್ರೀತಿ ಶುರುಮಾಡ್ಕೋಳೋಕೆ, ಅದನ್ನ ಇನ್ಯಾವುದೊ ಲೆವೆಲಿಗೆ ತೆಕ್ಕೊಂಡುಹೋಗೋಕೆ, ಮತ್ತೆ ಬೇಜಾರಾದಾಗ ಮುರಿಯೋಕೆ. ಮೊದಲು ಸಮಾಜದ ರೀತಿನೀತಿಗಳ ಬಗ್ಗೆ ಇದ್ದ ಅತೃಪ್ತಿ ಈಗ ನಮ್ಮ ಚಾಯ್ಸುಗಳ ಕಡೆ ತಿರುಗಿಕೊಂಡಿದೆ. ಇರುವುದನ್ನ ಮುರಿದುಕೊಂಡು ಹೊಸತು ಹುಡುಕಿ ಹೊರಡುವುದು ಅನಿವಾರ್ಯವೇನೋ ಅನ್ನುವಮಟ್ಟಿಗೆ ನಾವು ಹೋಗಿದ್ದೇವೆ.ಇಮ್ತಿಯಾಜ್ ಧಾರ್ಕರಳ ’ಚಾಯ್ಸ್’ ಕವಿತೆಯಲ್ಲಿ ತಾಯಿ ಮಗಳಿಗೆ ಹೇಳಿದ ಹಾಗೆ -
Some day your head won't find my lap
so easily. Trust is a habit you'll soon break.

Raghavendra Joshi said...

ಪ್ರೀತಿಯ ಕತೆಯೊಳಗೆ ದಿಢೀರ್ ಬದುಕಿನ ಸಂಕೀರ್ಣತೆಯನ್ನ ಬಿಡಿಸಿಟ್ಟಿದ್ದೀರ..
ಸಣ್ಣ ಸಣ್ಣ ತಮಾಷೆಗಳ ಮಧ್ಯೆ ಸಾಗುವ ಪ್ರೀತಿ ಗೊತ್ತಿಲ್ಲದಂತೆ ಗೋಜಲು ಗೋಜಲಾಗುವ ಪರಿ ಕಂಡು ಪಿಚ್ಚೆನ್ನಿಸಿತು.
ಎಂಭತ್ತು ವರುಷಗಳ ಸುದೀರ್ಘ ದಾಂಪತ್ಯ ಬಾಳಿದ ನಮ್ಮಜ್ಜ ಸಮುದ್ರದ ಕಿನಾರೆಯ
ಗೋಪುರದ ಬೆಳಕಿನಂತೆ ಗೋಚರಿಸಿದ...
-ರಾಘವೇಂದ್ರ ಜೋಶಿ.

ಸುಶ್ರುತ ದೊಡ್ಡೇರಿ said...

ಛೇ! ಪ್ರೀತಿ ಸಹ ಎಷ್ಟೊಂದು ಕಾಂಪ್ಲಿಕೇಟೆಡ್ ಸಬ್ಜೆಕ್ಟ್ ಆಗ್ಬಿಟ್ಟಿದೆ..! :(

Anonymous said...

Neevu tirugi bariyutiruvudu tumba santosha! Thanks!
-Thanks

Radhika said...

There is less struggle in life to make a living for the new generation. When living itself is a struggle we look for emotional support and put all the efforts to retain the support! When we feel we can do without that support - it doesn't take long to get away from it at the spur of a moment. So is the story of love - it starts and ends in a jiff as a 2 hour movie!

ಶಾಂತಲಾ ಭಂಡಿ said...

ಪ್ರೀತಿಯ ಜೋಗಿ...
ಲೇಖನ ತುಂಬ ಇಷ್ಟವಾಯ್ತು. ಯಾವತ್ತಿನಂತೆ ಮತ್ತೆ ಪ್ರಶ್ನೆಗಳ ಹುಟ್ಟಿಸಿಕೊಳ್ಳುತ್ತಾ ಇಷ್ಟವಾಗಿಬಿಡ್ತು.
ಪ್ರೇಮ ಅಜಾತಶತ್ರುವಾಗಿರುವ ಹೊತ್ತಿಗೆ ಅದಕ್ಕೀಗ ಎಲ್ಲೆಡೆ ನೆಲೆ ಅಲ್ಲವಾ? ಅದಕ್ಕೆ ಬೆಲೆ?
ಅದಕ್ಕೇ ಅಲ್ಲವಾ, ಸಿಕ್ಕಷ್ಟೇ ಸುಲಭವಾಗಿ ಕಳೆದುಹೋಗುತ್ತಿರುವುದು! ಪ್ರೀತಿ ಹುಟ್ಟಬಾರದಲ್ಲೆಲ್ಲ ಹುಟ್ಟಿ ಗೋಜಲಾಗುತ್ತಲಿರುವುದು!
"ಪ್ರೇಮ ಕತೆಗಳಿಗೆ ಕೊನೆಯುಂಟೆ?
ರಾಧಾ ಮಾಧವರಿರೋ ತನಕ
ಪ್ರೇಮ ಪ್ರವಾಹಕೆ ಯಾವ ತಡೆ?" ಕೊನೆಯಲ್ಲಿಯೂ ಮತ್ತೆ ಪ್ರಶ್ನಾರ್ಥಕ.
ಪ್ರೀತಿ ಪ್ರಶ್ನಾರ್ಥಕವಾ? ಅನಿಸಿಬಿಡುತ್ತದಲ್ಲವೆ?
ಚೆನ್ನಾಗಿ ಬರೆದಿದ್ದೀರಾ ಎಂದಿನಂತೆ.