Saturday, June 14, 2008

ಹಕ್ಕಿಗರಿಯಷ್ಟು ಹಗುರ ಬದುಕಿನ ಹೊರಲಾರದ ಭಾರ!

ಶ್ರೀಮಂತ ಹುಡುಗ ಬೇಕು ಅಂದಳು ಹುಡುಗಿ. ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ ಬಂಗಾರದಂಥ ಹುಡುಗಿ.... ಸಾಲುಗಳು ನೆನಪಾದವು. ಕೆ ಎಸ್ ನ ಬರೆಯುತ್ತಿದ್ದ ಕಾಲಕ್ಕೆ ಹಾಗಿತ್ತೋ ಏನೋ. ಅವರ ಹುಡುಗಿ, ಬಂಗಾರದೊಡವೆಗಳನ್ನು ಕೇಳುವುದಿರಲಿ ಮನಸ್ಸಿನಲ್ಲೂ ಬಯಸಿರಲಿಲ್ಲವಂತೆ. ಅವಳ ಮನಸ್ಸನ್ನೇ ಓದಿದವರ ಹಾಗೆ. ಮುಚ್ಚುಮರೆಯಿಲ್ಲದೆಯೇ ಅಚ್ಚಮಲ್ಲಿಗೆಯಂತೆ ಅರಳುತಿಹುದು ಅವಳ ಮನಸು ಎಂದೂ ಅವರಷ್ಟೇ ಬರೆಯಬಲ್ಲರು.
ಆಕೆಯ ಅನಿಸಿಕೆ ಸಹಜವೇ ಇರಬಹುದು. ಜೀವನೋತ್ಸಾಹಕ್ಕೆ ಎಲ್ಲಿಯ ಎಲ್ಲೆ? ಯಾಕೆ ಕಟ್ಟುಪಾಡು? ಒಂದು ಗಂಡಿಗೊಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು ಅನ್ನುವ ಸಾಲುಗಳನ್ನೂ ಬದಲಾಯಿಸಬೇಕಾ? ಒಂದು ಗಂಡಿಗೊಂದು ಹೆಣ್ಣು ಸೇರಿ ಹೇಗೋ ಹೊಂದಿಕೊಂಡು ಎನ್ನುವಂತಾಗಿದೆಯಾ? ಗೆಳತಿಯರೇ ವಾರಕ್ಕೋ ತಿಂಗಳಿಗೋ ಬೋರಾಗುತ್ತಾರೆ ಅನ್ನುವವರ ಮಧ್ಯೆ ದಾಂಪತ್ಯವೆಂಬ ಬಂಧನದೊಳಗೆ ವರುಷಾನುಗಟ್ಟಲೆ ಬದುಕುವುದು ಹೇಗೆ? ತುಂಬ ವರುಷ ಜೈಲಿನಲ್ಲಿ ಬಂಧಿಯಾಗಿದ್ದ ಒಬ್ಬನನ್ನು ಹೊರಗೆ ಬಿಟ್ಟಾಗ ಅವನಿಗೆ ಆ ಸ್ವಾತಂತ್ರ್ಯವೇ ಭಯಾನಕ ಅನ್ನಿಸಿತಂತೆ. ಮದುವೆಯ ಬಂಧನನದಲ್ಲಿ ತುಂಬ ವರುಷ ಕಳೆದವನಿಗೂ ಹಾಗೆ ಅನ್ನಿಸಬಹುದು. ಹೊರಗಿನ ಸ್ವಾತಂತ್ರ್ಯ ಕೂಡ ಭಯಂಕರ ಅನ್ನಿಸಬಹುದಾ?
ಡೈವೋರ್ಸಿಗಳು ಕೇಳಿಕೊಂಡ ನಾಲ್ಕೈದು ಪ್ರಶ್ನೆಗಳು ನೆನಪಾದವು. ಯಾವುದೋ ಪತ್ರಿಕೆ ಅದನ್ನು ಪ್ರಕಟಿಸಿತ್ತು. ನಮ್ಮ ಸುತ್ತಲಿನ ಸಮಾಜ ಏನನ್ನುತ್ತದೆ ಅನ್ನುವ ಪ್ರಶ್ನೆಯೇ ಅಲ್ಲಿರಲಿಲ್ಲ. ನನಗೆ ಬೇರೆ ಹುಡುಗ ಸಿಗುತ್ತಾನಾ, ನನ್ನ ಮಕ್ಕಳು ಏನನ್ನುತ್ತಾರೆ? ನಾನು ಮತ್ತೂ ಸಂತೋಷದಿಂದ ಇರಬಹುದಾ ಎಂಬಿತ್ಯಾದಿ ವೈಯಕ್ತಿಕ ಪ್ರಶ್ನೆಗಳೇ. ನಮ್ಮನಮ್ಮ ಸಂತೋಷವನ್ನು ನಮ್ಮೊಳಗೇ ಹುಡುಕುವ ಪ್ರಯತ್ನ. ಒಂದು ರೀತಿಯಲ್ಲಿ ಸರಿ, ಒಂದು ರೀತಿಯಲ್ಲಿ ಎಷ್ಟು ಸರಿ? ಎಲ್ಲಿದೆ ಬಂಧನ, ಎಲ್ಲಿದೆ ನಂದನ, ಎಲ್ಲಾ ಇದೆ ಈ ನಿನ್ನೊಳಗೆ, ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಿಗೆಗೆ!
ಬದುಕುವುದು ಅಷ್ಟು ಕಷ್ಟ ಅನ್ನಿಸಿರಲಿಲ್ಲ ಯಾವತ್ತೂ ಅನ್ನುತ್ತಾರೆ ಹಿರಿಯರು. ಅವರ ಬದುಕೊಂದು ಹಳಿಗೆ ಒಗ್ಗಿಕೊಂಡಿದೆ. ಅದರಿಂದಾಚೆಗೆ ಏನೂ ಇಲ್ಲ ಎಂದು ಗೊತ್ತಾಗಿಬಿಟ್ಟಿದೆ. ಆಕೆ ಭಾವಗೀತೆ ಕೇಳುತ್ತಿದ್ದರೆ, ಗಂಡ ಬಂದು ಕೃಷಿವಾರ್ತೆ ಹಾಕುತ್ತಾನೆ. ಮಗನಿಗೆ ಕ್ರಿಕೆಟ್ ಸುದ್ದಿ ಬೇಕು, ಮಗಳಿಗೆ ಅಭಿಷೇಕ್ ಬಚ್ಚನ್ ಹಾಡು, ಮೊಮ್ಮಗನಿಗೆ ಪೋಗೋ, ಅಜ್ಜಿಗೆ ಪೋಗಾದಿರೆಲೋ ರಂಗಾ! ಇಂಥ ಸಮೃದ್ಧ ಆಯ್ಕೆಗಳು ಆ ಕಾಲದಲ್ಲಿ ಎಲ್ಲಿದ್ದವು? ಆಗ ಎಲ್ಲರಿಗೂ ಒಬ್ಬನೇ ಹೀರೋ, ಒಬ್ಬನೇ ಹಿಟ್ಲರ್. ಒಂದೇ ದೈವ, ಒಂದೇ ದೆವ್ವ. ಎಲ್ಲರ ಬದುಕೂ ಕೂಡ ಒಂದೇ ಥರ ಇರುತ್ತಿತ್ತು. ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ!
ಮತ್ತೊಂದು ಪರ್ಯಾಯ ವ್ಯವಸ್ಥೆ ಏನಿತ್ತು ಅಂತ ಕೇಳುತ್ತಾಳೆ ಅಜ್ಜಿ. ಅವಳು ಸುಖಿ ಅಂತಲ್ಲ. ಆ ಸುಖ ನಟನೆಯೂ ಅಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂಬ ಹಳೆಯ ಉಕ್ತಿ, ಈ ಜನ್ಮದಲ್ಲಿ ಇಷ್ಟೇ ಎಂಬ ಅಲ್ಪತೃಪ್ತಿ, ಇದರೊಳಗೇ ಬದುಕಬೇಕು ಎಂಬ ಕಟ್ಟುಪಾಡು, ಇದೇ ಜೀವನ ಎನ್ನುವ ಹಳೆಯ ಹಾಡುಗಳಲ್ಲಿ ಬದುಕು ಸಾಗುತ್ತಿತ್ತು. ಪುನರ್ಜನ್ಮದಲ್ಲಿ ನಂಬಿಕೆ ಇರುವವರಂತೆ ಬದುಕುತಿದ್ದರಾ ಅವರೆಲ್ಲ?. ಮುಂದಿನ ಜನುಮದಲ್ಲಾದರೂ ಅನುಭವಿಸಿಯೇನು ಎಲ್ಲವನ್ನೂ ಎಂಬಂತೆ! ಅಷ್ಟಕ್ಕೂ ಅನುಭವಿಸುವುದು ಎಂದರೇನು?
ನಿಮ್ಮ ಜೀವನವನ್ನು ಪೂರ್ತಿಯಾಗಿ ಅನುಭವಿಸಿ ಅನ್ನುತ್ತದೆ ಜಾಹೀರಾತು. ನೋಡಿದರೆ, ಅದ್ಯಾವುದೋ ಬಟ್ಟೆಯನ್ನು ಕೊಳ್ಳುವಂತೆ ಪ್ರೇರೇಪಿಸುತ್ತಿರುತ್ತದೆ. ಆ ಬಟ್ಟೆ ತೊಟ್ಟರೆ, ಆ ತಿಂಡಿ ತಿಂದರೆ, ಆ ಹೊಟೇಲಲ್ಲಿ ತಂಗಿದರೆ, ಆ ಐಷಾರಾಮ ಅನುಭವಿಸಿದರೆ ಬದುಕನ್ನು ಪೂರ್ತಿ ಅನುಭವಿಸಿದ ಹಾಗೇನಾ? ಅನುಭವಿಸುವುದು ಎಂದರೇನು? ಏಕಾಂತ ಅರ್ಥ ಕಳಕೊಂಡಿದೆಯಾ?
ಗೆಳೆಯ ಹೇಳುತ್ತಿದ್ದ. ಇನ್ನೊಂದು ಮನೆ ಕಟ್ಟಿದರೆ ಇನ್‌ಕಮ್ ಟ್ಯಾಕ್ಸ್ ಉಳಿಸಬಹುದು. ಆದರೆ ಮನೆ ಕಟ್ಟಿ ಬಾಡಿಗೆಗೆ ಕೊಡುವುದು ಲಾಭದಾಯಕ ಅಲ್ಲ. ಅವನಿಗೀಗಾಗಲೇ, ತಿಂಗಳಿಗೊಂದು ಲಕ್ಷ ಆದಾಯ. ಅದಕ್ಕಿಂತ ಜಾಸ್ತಿ ಬಂದರೇನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಕೈತುಂಬ ದುಡ್ಡು ಬಂದರೆ ಏನು ಮಾಡಬಹುದು? ಒಂದಕ್ಕಿಂತ ಜಾಸ್ತಿ ಕಾರು ಕೊಂಡರೂ ಒಂದರಲ್ಲೇ ತಾನೇ ಓಡಾಡಲಿಕ್ಕಾಗುವುದು. ಬಡವನ ಹೊಟ್ಟೆಯಷ್ಟೇ ಶ್ರೀಮಂತರನ ಹೊಟ್ಟೆ. ಅದೇ ಗೇಣುದ್ಧ. ಏನು ತಿಂದರೂ ಅಷ್ಟೇ ತಿನ್ನಲಾದೀತಷ್ಟೇ. ಒಂದು ಟೇಪ್‌ರೆಕಾರ್ಡರ್ ಸಾಕು, ಮಲಗಲು ಅಷ್ಟೇ ಆರಡಿ ಮೂರಡಿ ಜಾಗ. ಹಾಗಿದ್ದರೂ ಮತ್ತಷ್ಟು ಸಂಪಾದಿಸುವ ಆಸೆ. ಆ ಸಂಪಾದನೆಯಲ್ಲೇ ಬದುಕು ಕಳೆದುಹೋಗುತ್ತಿದೆಯಾ?
ಅಚ್ಚರಿಗೊಳಿಸುತ್ತಾನೆ ಆ ಮುದುಕ. ಅವನನ್ನು ನೋಡಿದ್ದೆಲ್ಲಿ ಎಂದು ನೆನಪಾಗುತ್ತಿಲ್ಲ. ಎಷ್ಟೇ ಗಿರಾಕಿಗಳಿದ್ದರೂ. ಇನ್ನಷ್ಟು ಸಂಪಾದಿಸುವ ಅವಕಾಶ ಇದ್ದಾಗಲೂ ಆತನದು ಶಿಸ್ತೋ ಶಿಸ್ತು. ತನ್ನ ಪುಟ್ಟ ಹೊಟೆಲಿಲ್ಲಿ ಬೆಳಗ್ಗೆ ಮಾಡಿಟ್ಟ ಇಡ್ಲಿ ಮುಗಿಯುವ ತನಕ ಮಾತ್ರ ವ್ಯಾಪಾರ. ಮಧ್ಯಾಹ್ನ ಮನೆಯೂಟ, ಸುತ್ತಾಟ, ಓದು. ಸಂಜೆ ಒಂದೊ ಎರಡೋ ಗಂಟೆ ವ್ಯಾಪಾರ. ಆಮೇಲೆ ಜಪ್ಪಯ್ಯ ಅಂದರೂ ಅಂಗಡಿ ಬಂದ್. ಎಂಟು ಗಂಟೆಗೆಲ್ಲ ಮನೆಗೆ, ಮಕ್ಕಳೊಂದಿಗೆ ಊಟ. ಅದೇ ಹಳೆಯ ಅಂಗಡಿ. ಅದೇ ಹಳೆಯ ಮನೆ. ಆ ಹಳೇಮನೆಗೂ ಒಂದು ಘಮ!
ಅಂಥವರು ಅನೇಕರಿದ್ದಾರೆ. ಏನು ಸುಖಿಯೋ ತಾನು ಬದುಕಿನಲ್ಲಿ ತನ್ನಿಚ್ಛೆಯಂತೆ ದುಡಿಯುವವನು? ನಮ್ಮ ರೈತರು, ನಮ್ಮ ಬಡಗಿಗಳು, ನಮ್ಮ ಚಿನಿವಾರರು, ಹಳ್ಳಿಗಳಲ್ಲಿ ಮೈಮುರಿದು ದುಡಿಯುವವರು- ಅವರೆಲ್ಲ ಇರುವುದೇ ಹೀಗೆ. ಶ್ರೀಮಂತರು ಅಜ್ಞಾನ ಮತ್ತು ಬಡತನ ಸ್ವಯಂಕೃತಾಪರಾಧ ಅನ್ನುತ್ತಿದ್ದರೆ, ಅವರು ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ ಎಂಬಂತೆ ಇರುತ್ತಾರೆ. ಸೋಮಾರಿಕಟ್ಟೆ, ಈಜು, ಹರಟೆ, ಜಾತ್ರೆ, ಜೂಜು, ಕಳ್ಳಪ್ರೇಮ, ಸಣ್ಣದೊಂದು ಜಗಳ. ಏನೋ ಕುಸಿಯಾದಾಗ ಮತ್ಹೆಚ್ಚಿ ಹೋದಾಗ ಅಂಗಂಗೇ ಪರ್ಪಂಚದಂಚ ದಾಟಿದರೆ ಅದೇ ಸುಖ.
ನಮಗೆ ದಾಟುವುದಕ್ಕೆ ಭಯ. ದಾಟಿದರೆ ಎಡವುತ್ತೇವೆ ಎಂಬ ಆತಂಕ. ದಡಸೇರಿದ ಮಂದಿ ಮತ್ತೆ ಈಜುವುದಕ್ಕೆ ಹೋಗುವುದಿಲ್ಲ! ದಡ ಸೇರದ ಹೊರತು ಈಜುವುದಕ್ಕೆ ಅರ್ಥವೇ ಇಲ್ಲ. ಇಂಥ ದ್ವಂದ್ವದಲ್ಲಿ ಬದುಕು ವಿಚಿತ್ರವಾಗಿ ಮುಖಾಮುಖಿಯಾಗುತ್ತದೆ. ಯಾವುದು ಸತ್ಯ, ಯಾವುದು ಸುಳ್ಳು? ಬದುಕು ಮಾಯೆಯ ಮಾಟ, ಮಾತು ನೊರೆತೆರೆಯಾಟ!
ತುಂಬ ಜನಪ್ರಿಯ, ದೊಡ್ಡ ಶ್ರೀಮಂತ, ಅಸಹಾಯ ಶೂರ, ಮಹಾದಾನಿ, ತ್ಯಾಗಜೀವಿ- ಇಳಿವಯಸ್ಸಿನಲ್ಲಿ ಏನಾಗುತ್ತಾರೆ? ಹಿರಿಯ ಸಾಹಿತಿ, ಸಿನಿಮಾನಟ, ಸಂಗೀತಗಾರ,ರಾಜಕಾರಣಿ- ಮಾತಿಗೆ ಹಂಬಲಿಸುವುದನ್ನು ನೋಡಿದರೆ ಗಾಬರಿಯಾಗುತ್ತದೆ. ಇಡೀ ಜನ್ಮದಲ್ಲಿ ಮಾತೇ ಆಡಿಲ್ಲವೇನೋ ಎಂಬಂತೆ ಅವರು ಮಾತಾಡುತ್ತಾ ಹೋಗುತ್ತಾರೆ. ಮಾತಿನ ತುಂಬ ಭೂತಚೇಷ್ಟೆ. ಆ ಕಾಲದ ನೆರಳು. ಮಾತಾಡುವ ಮೂಲಕ, ನೆನಪಿಸಿಕೊಳ್ಳುವ ಮೂಲಕ ಮತ್ತೆ ಹರೆಯಕ್ಕೆ ಮರಳುವ ಆಸೆ. ಹರೆಯದಲ್ಲಿ ಹೆಕ್ಕಿದ ಕೆರೆಬದಿಯ ರೆಂಜೆ ಹೂವಿನ ಮರ ಇನ್ನೂ ಹಾಗೇ ಇದೆ ಎಂಬ ಗಾಢನಂಬಿಕೆ. ಆದರೆ, ಆ ಮರವಿದ್ದ ಜಾಗದಲ್ಲಿ ಮನೆಯೊಂದು ಎದ್ದು ಇಡೀ ಪರಿಸರದ ಚಹರೆಯೇ ಬದಲಾಗಿರುತ್ತದೆ. ಅವನ ಮಕ್ಕಳಿಗೋ ಮೊಮ್ಮಕ್ಕಳಿಗೋ ತಾತ ಹೇಳಿದ ಜಾಗದ ಗುರುತೂ ಸಿಗುವುದಿಲ್ಲ.
ಕಾಫಿಡೇಯಲ್ಲಿ ಅವಳು ಮಾತಾಡುತ್ತಿದ್ದಳು. ಕಾವ್ಯ, ನಾಟಕ, ಹೆನ್ರಿ ಜೇಮ್ಸ್, ಕುಂದೇರಾ ಎಲ್ಲಾ ಮುಗಿದ ಮೇಲೆ ಬದುಕು ಶುರುವಾಯಿತು. ನವಿಲೂರಿನೊಳಗೆಲ್ಲ ಇವಳೇ ಬಲು ಚೆಲುವೆ, ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ ಎಂಬ ಸಾಲಿಗೆ ಜೋತುಬಿದ್ದಿತು. ಅವಳು ಚೆಲುವೆ ಸರಿ, ಅವನು ಏನು? ಎತ್ತರದ ಮನೆಯವನೇ, ಹಳ್ಳಿಯಲ್ಲಿದ್ದಾನಾ? ಶ್ರೀಮಂತನಾ? ಓದಿಕೊಂಡಿದ್ದಾನಾ? ಪ್ರೀತಿಯಿಂದ ನೋಡಿಕೊಳ್ಳುತ್ತಾನಾ? ಅನುಮಾನಿಸುತ್ತಾನಾ? ಬದುಕಿಕೊಂದು ಕಾಂಪೌಂಡು ಹಾಕಿ, ಗೇಟು ಜಡಿದು, ಬೀಗ ಬಡಿದು ಹೊರಗೊಂದು ಡಾಬರ್‌ಮನ್ ಕಟ್ಟಿಹಾಕಿ ಒಳಗೆ ಕೂಡಿ ಹಾಕುತ್ತಾನಾ? ನಾಗಮಂಡಲ ನಡೆದೇ ಹೋಗುತ್ತದಾ?
ಇಂಥ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ? ಕಾಲಾಂತರದಲ್ಲಿ ಚಿಂತನೆ, ಯೋಚನೆ ರೂಪಾಂತರಗೊಳ್ಳುತ್ತದೆ. ಅಂತಿಮವಾದ ಆಸೆ ಅದೇ ಆದರೂ ದಾರಿ ಬೇರೆ. ಎಲ್ಲಾ ಕಿರುಹಾದಿಗಳೂ ನಮ್ಮನ್ನು ನಮ್ಮನಮ್ಮ ಮನೆಗೇ ಒಯ್ಯುತ್ತವೆ. ಮನೆಯಿಂದಾಚೆ ಹೋಗುವ, ಹೊಸಿಲು ದಾಟುವ ಬಗ್ಗೆ ನಮ್ಮ ಕಾಲದ ಮಂದಿಗೆ ನಂಬಿಕೆಯಿಲ್ಲ. ಧೈರ್ಯದ ಪ್ರಶ್ನೆ ಅದಲ್ಲ. ಮೀರಿದಾಗ ಏನಾಗುತ್ತದೆ ಎಂದು ಸ್ಪಷ್ಟವಾಗಿ ಗೊತ್ತಿರುತ್ತದೆ ಅಷ್ಟೇ. ನೀಲಾಂಬರದ ನಡುವೆ ಚಂದಿರನು ಬಂದಾಗ ರೋಹಿಣಿಯು ಬೆಳಗುವಳು ಸನ್ನಿಧಿಯಲಿ! ಅವಳು ಬೆಳಗದೇ ಹೋದರೆ ಬೃಂದಾವನದ ಹಣೆಗೆ ಕುಂಕುಮ ಇಟ್ಟದ್ದೇ ಸುಳ್ಳು, ಕೃಷ್ಣ ತುಲಸಿ ಕಂಡದ್ದೇ ಸುಳ್ಳು.
ಗೆಳೆಯನೊಬ್ಬ ಅನುಮಾನ ವ್ಯಕ್ತಪಡಿಸುತ್ತಿದ್ದ. ಮದುವೆ ಅಂದರೆ ನಮ್ಮ ಕಾಲದ ಎಲ್ಲರಿಗೂ ಭಯ. ಅದು ಕೇವಲ ಫಿಡೆಲಿಟಿಯ ಪ್ರಶ್ನೆ ಅಲ್ಲ, ಇನ್ನೇನೋ ಹೇಳಲಾಗದ್ದು ಅನ್ನುತ್ತಿದ್ದ. ಆ ಆಸೆಗೂ ಈ ಆಸೆಗೂ ತಳಕು ಹಾಕಿದರೆ ಎದುರಾದದ್ದು ಮತ್ತದೇ ಪ್ರಶ್ನೆ. ಈ ಕಾಲದ ಹುಡುಗರ ಆತಂಕ, ತರುಣಿಯರ ಆಸೆ, ಹಿರಿಯರ ಅಧೈರ್ಯ, ನಡುವಯಸ್ಕರ ದಿಗ್ಭ್ರಮೆ ಎಲ್ಲವನ್ನೂ ನೀಗಿಕೊಳ್ಳುವುದಕ್ಕೆ ಹಾದಿಗಳೇ ಕಾಣಿಸಲಿಲ್ಲ.
ದೇವರೆಡೆಗೆ ಹೊರಳುವುದು ಹುಂಬತನ, ತನ್ನ ಆತ್ಮವಿಶ್ವಾಸದ ಮೊರೆಹೋಗುವುದಕ್ಕೆ ಧೈರ್ಯ ಸಾಲದು, ಬೇರೆಯವರನ್ನು ನಂಬುವಂತಿಲ್ಲ, ನಾಳೆ ಹೇಗೋ ಗೊತ್ತಿಲ್ಲ!
ಅಂಥ ಸ್ಥಿತಿಯಲ್ಲಿ ಕಣ್ಮುಂದೆ ಕಾಣಿಸುತ್ತಿದೆ ತೋಡಾ ಪ್ಯಾರ್ ತೋಡಾ ಮ್ಯಾಜಿಕ್’ ಎಂಬ ಹಿಂದಿ ಚಿತ್ರದ ಪೋಸ್ಟರು. ಪ್ರೀತಿಯೆಷ್ಟು ಮಾಂತ್ರಿಕತೆ ಎಷ್ಟು ಅನ್ನುವುದು ಹೊಳೆಯುತ್ತಿಲ್ಲ.
ಅಂದಹಾಗೆ ನಮಗೆಲ್ಲ ಪ್ರೀತಿಯೇ ಮ್ಯಾಜಿಕ್ಕೂ ಆಗಿತ್ತಲ್ಲವೇ?

4 comments:

ಅಹರ್ನಿಶಿ said...

ಜೋಗಿ ಸಾರ್,

ಜೋಗಿಮನೆಯಲ್ಲಿ ಪ್ರತಿದಿನವು ಹಬ್ಬ.ಲೈಫಲ್ಲಿ ಇನ್ನೇನಿದೆ ಅಲ್ವಾ,ಇದೆ ಅ೦ದ್ರೆ ಎಲ್ಲಾ ಇದೆ,ಇಲ್ಲಾ ಅ೦ದ್ರೆ ಏನೂ ಇಲ್ಲ.ಲೈಫು "ಭಾರ"ತೀಯನಿಗೆ ಮಾತ್ರ ಭಾರೀ ಬೆಲೆ ಏರಿಕೆಯಿ೦ದ ಬಲು ಭಾರ.ಉಳ್ಲವರ ಬದುಕು ಉಳುವವನ ಬದುಕಿಗಿನ್ನ ಹಗುರವೇ......ಉತ್ತು ಬಿತ್ತು ಭಾರದ ಅರಿವನ್ನ ಅನುಭವಿಸಬೇಡವೇ.
ಹೀಗೇ ಬರಿತಾ ಇರಿ.

Raghavendra Joshi said...

ಜಗತ್ತಿನ ಎಲ್ಲಾ ಲಘು ಬರಹಗಳಿಗೆ ಒಂದು ನಿಶ್ಚಿತ ಉದ್ದೇಶ ಇರಬೇಕೆಂದೇನೂ ಇಲ್ಲ.
ಹಾಗೆಯೇ ಫಲಿತಾಂಶ ಕೂಡ ಅಲ್ಲಿ ಒಮ್ಮೊಮ್ಮೆ ಸ್ತಬ್ದ.
ಆದರೇನು,ಆನೆ ನಡೆದಿದ್ದೇ ದಾರಿ!
ಖಾನೆವಾಲೋಂಕಾ ನಾಮ್ ದಾನೆ ದಾನೆ ಪೆ..
ಸಿಕ್ಕಷ್ಟೆ.ದಕ್ಕಿಸಿಕೊಂಡಷ್ಟೆ!
-ರಾಘವೇಂದ್ರ ಜೋಶಿ.

Keshav Kulkarni said...

ಜೋಗಿ,

ಮತ್ತೆ ಬರೆಯುವ ಆಸೆ ಹುಟ್ಟಿಸಿದ್ದಕಾಗಿ ಥ್ಯಾಂಕ್ಸ್! ಈ ಬರಹಕ್ಕೂ ಇದಕ್ಕೂ ಏನು ಸಂಬಂಧ ಎನ್ನುತ್ತೀರಾ? ನಿಮ್ಮ ಬರಹದ ಮ್ಯಾಜಿಕ್ ಅದು, ಅದು ನಿಮಗೆ ಗೊತ್ತಾಗುವುದಿಲ್ಲ ಬಿಡಿ!

ಕೇಶವ

ಸಿಂಧು Sindhu said...

ಪ್ರಿಯ ಜೋಗಿ,

ತುಂಬ ಗಂಭೀರ ವಿಷಯವನ್ನು ಕಟ್ಟೆಯಲ್ಲಿ ಕೂತು ಗೆಳೆಯರು ಮಾತಾನಾಡಿಕೊಂಡಷ್ಟು ಸಾವಧಾನವಾಗಿ, ಹಗುರವಾಗಿ ಬರೆದಿದ್ದೀರಿ.
ನಿಜಕ್ಕೂ ಹಕ್ಕಿಗರಿಯಷ್ಟು ಹಗುರ ಬದುಕಿನ ಹೊರಲಾರದ ಭಾರವೇ ಇದು.
ಒಬ್ಬೊಬ್ಬರೂ ಒಂದೊಂದು ಗುಂಪಿನಂಷ್ಟು ಸಂಕೀರ್ಣವಾಗಿಬಿಟ್ಟಿದೀವಿ. ಯಾರು ಯಾಕೆ ಹೀಗೆ/ಹಾಗೆ ನಡೆದುಕೊಂಡರು ಅನ್ನುವುದನ್ನು ಒಂದು ಮಾಪನದಲ್ಲಿ ಅಳೆಯಲಾಗುವುದಿಲ್ಲ. ವಿಚಿತ್ರವೆಂದರೆ, ಒಬ್ಬನ ನಡವಳಿಕೆಯ ಮೂಲ ಹಂದರ ಸುತ್ತಲ ಸಮಾಜದಲ್ಲಿದೆ. ಅದನ್ನು ಆ ಒಬ್ಬನೂ ಮತ್ತು ಸಮಾಜವೂ ಒಪ್ಪುವುದೇ ಇಲ್ಲ.
ಹಿಂದೆ ಹೆಂಗಸರು ಅನುಭವಿಸುತ್ತಿದ್ದ ಅತಂತ್ರತೆಯನ್ನು ಇಂದು ಗಂಡಸರು ಅನುಭವಿಸುತ್ತ್ದಿದ್ದಾರೆ. ಆಗಲಿ ಬಿಡಿ ಇದೇ ಸರಿ ಎಂಬ ಮಾತಲ್ಲ. ಆದರೆ ದೂರದಿಂದ ನೋಡುವಾಗ ಅನಿಸುತ್ತೆ, ಹಿಂದೆ ಯಾವ ಆರ್ಥಿಕ ಸ್ವಾತಂತ್ರವೂ ಇಲ್ಲದೆಯೂ ಇಂತಹ ಒಂದು ಅತಂತ್ರತೆಯನ್ನು ಗಟ್ಟಿಮನದಲ್ಲಿ ಸಹಿಸಿದ ಆ ಮಹಿಳೆಯರ ಜೀವನಪ್ರೀತಿಯನ್ನು ಅದೇ ಸ್ಥಿತಿಗೆ ಹಾರಿಕೊಂಡಿರುವ ಇಂದಿನ ಗಂಡಸರಿಗೆ ನಿಭಾಯಿಸಲು ಕಷ್ಟ.

ನನಗಂತೂ ಪ್ರೀತಿ ಇಡಿಇಡಿಯಾದ ಬದುಕು ಮತ್ತು ನದಿಯಂತೆ ಹರಿವು. ಅದಕ್ಕೆ ಮ್ಯಾಜಿಕ್ಕಿನ ಪ್ರಭಾವಲಿ ಇದೆ.

ಪ್ರೀತಿಯಿಂದ
ಸಿಂಧು