ಕಾಡು
ಕುದುರೆ
ಮುಂಜಾವದ ಕನಸಲ್ಲಿ
ಕಾಣಿಸಿಕೊಂಡರೆ
ಫ್ರಾಯ್ಡ್
ಪ್ರಕಾರ ಕಾಮ.
ಕಂಬಾರರದ್ದೂ ಅದೇ ಅರ್ಥ.
ಧಾವಿಸುವ
ಎಲ್ಲಕ್ಕೂ ಅಶ್ವಶಕ್ತಿ.
ನಿಂತಲ್ಲೇ ಮೇಲೆ
ಕೆಳಗೆ
ಠಳಾಯಿಸುವ ಇಂಜಿನ್ನಿನ
ಪಿಸ್ಟನ್ನಿಗೂ
ಅದೇ ಹಾರ್ಸ್ ಪವರ್.
ಕಡಲ ತಡಿಯಲ್ಲಿ
ಕೆನೆಯುವ ಕುದುರೆ
ಕಂಡರೆ
ವಾತ್ಸಾಯನನಿಗೆ
ಅಮೃತ ಮಹೋತ್ಸವ.
ಅವಳಿಗೆ ಕುದುರೆ
ಸವಾರಿಯ ಗೀಳು.
ಮರದ ಕುದುರೆಗೆ ಕಾಲಿಲ್ಲ.
ಕಾಡು ಕುದುರೆಗೆ
ಲಗಾಮಿಲ್ಲ.
ಅದು ಗೊತ್ತಿದ್ದೂ
ಅಂಗಾಂಗ
ಸುಡುಗಾಡು.
ಆನೆಯ ಹೆಸರಲ್ಲಿ ಸತ್ತ
ಅಶ್ವತ್ಥಾಮ
ಚಿರಂಜೀವಿ.
Wednesday, July 9, 2008
Subscribe to:
Post Comments (Atom)
14 comments:
"ಆನೆಯ ಹೆಸರಲ್ಲಿ ಸತ್ತ
'ಅಶ್ವ'ತ್ಥಾಮ
ಚಿರಂಜೀವಿ"
ಅದ್ಭುತವಾಗಿದೆ.
ಒಂದು ಪ್ರಶ್ನೆ ಕೇಳ್ಲಾ?
ಏನು ಗೊತ್ತಾ?
ಏನು ಅಂದ್ರೆ...
ಇಲ್ಲಿ ಕಾಡುಕುದುರೆಯೇ ಬೇಕಿತ್ತಾ? ಸಾದಾ ಕುದುರೆ ಅಂದ್ರೆ ಆಗ್ತಿರಲಿಲ್ಲವಾ?
ಬೆಳ್ಳಿ ತೊಡಿಯ ಬಿಳಿಯ ಕುದುರಿ
ಬೆರಗ ಕಂಡಿನೇ..
ಬೆನ್ನನೇರಿ ಚಿನ್ನದುರಿಯ ಕಾಡಕಂಡಿನೇ..
ಸಾದಾಕುದುರೆ ಅಂದರೇನು? ಸ್ವಾಮೀಜಿಗಳೊಬ್ಬರು ಕುದುರೆಗೆ ಲಗಾಮು ಹಾಕಿ ಆಶ್ರಮದಲ್ಲಿ ಸಾಕಿಕೊಂಡಿದ್ದರು ಎಂದು ಎಲ್ಲೋ ಓದಿದ ನೆನಪು! ಅದಕ್ಕೇ ನೀವು ಕಾಡು ಕುದುರೆ ಅಂದಿರಲ್ಲವೇ??... ;-)
simply marvellous...
-ಅನಾಮಿಕೆ
ಉತ್ತಮೋತ್ತಮ.
ಇತ್ತೀಚೆಗೆ ನೀವು ಬರೆದ ಕವನಗಳಲ್ಲೇ ಅತ್ಯಂತ ಸರಳ ಸುಂದರ ಕವಿತೆಯಿದು.
ರೂಪಕಗಳ ನಡುವೆ ನಿಗಿನಿಗಿ ಕೆಂಡ ನಳನಳಿಸಿದೆ..ಬೆವರಿಳಿಸಿದೆ!
ಆನೆಯ ಹೆಸರಲ್ಲಿ ಸತ್ತ
ಅಶ್ವತ್ಥಾಮ
ಚಿರಂಜೀವಿ-
ಎಂಥ ಕ್ಲಾಸಿಕ್ ending ಮಾರಾಯ್ರೆ..
-ರಾಘವೇಂದ್ರ ಜೋಶಿ.
ಆಣ್ಣಾ~~~~~
ಎಷ್ಟು ಚೆನ್ನಾಗಿ ಬರೆದಿದ್ದೀರ. ನಿಮ್ಮ ಹಾಡಿಗೆ ಕೊಟ್ಟ ಹೆಡ್ಡಿಂಗ್ ಮತ್ತೂ ಸುಂದರ ಇದೆ. ಸಂಸ್ಕೃತದ್ದಾದ್ದರಿಂದ ಇಷ್ಟವಾಯಿತು.
ಮೇಲೆ ಒಬ್ಬರು ಸಾದಾ ಕುದುರೆಯ್ ಬಗ್ಗೆ ಹೇಳಿದ್ದಾರೆ. ಸಾದಾ ಕುದುರೆ ಅಂದ ತಕ್ಷಣ ನೆನಪಾಯಿತು. ನಮ್ಮ ತಾತ ಒಂದು ಕುದುರೆ ಸಾಕಿದ್ದರು ಜೋರು ಓಡುತ್ತಿತ್ತು.
ಇನ್ನೊಬ್ಬರು ಹೇಳಿದಂತೆ ಸಾದಾ ಕುದುರೆ ಎಂದರೆ ಆಶ್ರಮದ ಕುದುರೆಅಲ್ಲ. ಸುಮ್ಮನೆ ಓಡಾಡುತ್ತ ಇರುತ್ತದೆಯಲ್ಲ ಆ ಕುದುರೆ. ಕಾಡುಕುದುರೆ ಅಂದರೆ ಕಾಡಿನಲ್ಲಿ ಇರುತ್ತದೆ. ಸಾದಾ ಕುದುರೆ ಕಾಡಿಗೆ ಕರೆದುಕೊಂಡು ಹೋದರೆ ಮಾತ್ರ ಹೋಗುತ್ತದೆ.ನಮ್ಮ ಟೀಚರ್ ಒಂದುಸಲ ಕುದುರೆಯ ಬಗ್ಗೆ ಪ್ರಬಂಧ ಬರೆಸಿದ್ದರು. ಅಲ್ಲಿ ಹೀಗಂತ ಬರೆಸಿದ್ದರು ಆದ್ದರಿಂದ ನನಗೆ ಇವೆಲ್ಲ ಗೊತ್ತು.
ನಮ್ಮ ಮಾವ ಕುದುರೆ ಮತ್ತು ಕತ್ತೆಯ ಕತೆ ಹೇಳುತ್ತಿದ್ದರು. ಮಾವ ಈಗಿಲ್ಲ. ಅವರ ನೆನಪಾಗಿ ಕಣ್ಣೀರು ಬಂತು.
ನಮ್ಮಜ್ಜ ಸಾಕಿದ ಕುದುರೆಯನ್ನು ಕಟ್ಟಿಹಾಕಿದ ಸಮಯದಲ್ಲಿ ನಮ್ಮಜ್ಜಿ ನನ್ನನ್ನು ಅದರ ಮೇಲೆ ಕೂರಿಸಿ ಬಾರಯ್ಯ ಬಾರೋ ನಿನ್ನ ಎತ್ತಿ ಮುದ್ದಾಡುವೆ ಅಂತ ಹಾಡು ಹೇಳುತ್ತಿದ್ದರು. ಅವರೂ ಈಗ ಇಲ್ಲ. ಸತ್ತು ಹೋಗಿದ್ದಾರೆ. ಅವರ ನೆನಪೂ ಆಯಿತು. ಕಣ್ನೀರೂ ಬಂತು.
ನಿಮ್ಮ ಹಾಡನ್ನು ಓದುತ್ತ ಓದುತ್ತ ಕುದುರೇಯ ತಂದೀನಿ ಜೀನಾವ ಬಿಗದೀನಿ, ಬರಬೇಕು ತಂಗಿ ಮದವೀಗೆ ಅಂತ ನಮ್ಮಣ್ಣ ಹಾಡುತ್ತಿದ್ದ ಹಾಡು ನೆನಪಿಗೆ ಬಂತು. ಅವನ ಮದುವೆಯೊಂದಿಗೇ ನನ್ನ ಬಾಳಿನಲ್ಲಿ ಅಣ್ನನ ಈ ಹಾಡು ಮುಗಿಯಿತು.
ಕೊನೆಯಲ್ಲಿ ಹೇಳಬೇಕೆಂದರೆ ಹಾಡು ಚಲೊ ಇದೆ. ಸಾವಿರಾರು ವರ್ಷಗಳಿಂದ ಬರೆಯುತ್ತಿರುವ ಶೇಕ್ಸ್ ಪಿಯರನ ಹಾಡಿನ ಹಾಗೆಯೇ ಇದೆ. ನೀವೊಬ್ಬರೇ ಹೀಗೆ ಬರೆಯಲು ಸಾಧ್ಯ. ಸುಲಭವಾದ ವಾಕ್ಯಗಳಿವೆ ಈ ಹಾಡಿನಲ್ಲಿ. ಕುದುರೆ ಸವಾರಿಯ ಬಗ್ಗೆ ಚೆನ್ನಾಗಿ ವರ್ನಿಸಿದ್ದೀರಿ. ಕುದುರೆಯೇ ಹಾಗೆ ಎಲ್ಲವನ್ನೂ ನೆನಪಿಸುತ್ತದೆ ಪ್ರಪಂಚದಲ್ಲಿ. ಕಣ್ನೀರು ಬರಿಸುವ ಹಾಡು.
Ivella kavitheyalla anta nimage buddi heluvavaru yaroo illave Girish ?
Manasi Bhat
ಏನೋ ಕೇಳ್ಲಾ?
ಏನು ಗೊತ್ತಾ?
ಏನು ಅಂದ್ರೆ...
ಇಷ್ಟೊಳ್ಳೊಳ್ಳೆಯ ಕವಿತೆಗಳನ್ನ ಹೇಗೆ ಬರೀತೀರಾ ಅಂತ?
ನೀವು ಬರೆದ ಕವಿತೆಗಳನ್ನ ಅರ್ಥವಾದಷ್ಟನ್ನೆ ಇಷ್ಟಪಟ್ಟು ಓದೋಕೆ ನಾವಿದ್ದೇವೆ. ಇನ್ನಷ್ಟು ಕವಿತೆಗಳನ್ನ ಕೊಡಿ.
ಇವು ಕವಿತೆಗಳಲ್ಲ ಅಂತ ಹೇಳೋರು ನಮ್ಮ ಮುಂದೆ ಬರಲಿ, ವಿಚಾರಿಸ್ಕೊಳ್ಳೋಕೆ ನಾವೇ ಇದ್ದೇವೆ ಬೆಂಬಲಿಗರಾಗಿ, ಅಭಿಮಾನಿಗಳಾಗಿ.
ಕವಿತೆಯ ಜೊತೆಯಲ್ಲಿಯೇ ಮೇಲಿನ ಕಮೆಂಟುಗಳೆಲ್ಲ ಒಂಥರ ಇಷ್ಟವಾದ್ವು :) ಎಲ್ಲವನ್ನೂ ಸಮಾನವಾಗಿ ನೋಡುವ ಮನಸಿಗೆ .
ಪ್ರೀತಿಯ ಜೋಗಿ...
ಎಂತಹ ಕುದುರೆಗೂ ಲಗಾಮು ಹಾಕಿ ಇಲ್ಲಿಯೇ ಹಿಡಿದುನಿಲ್ಲಿಸುವ ಕವಿತೆ, ಇಷ್ಟವಾಯ್ತು.
ಕಾಡುಕುದುರೆಯ ಅರ್ಥ ಗೊತ್ತಿರಲಿಲ್ಲ(ಭಾಷಾಜ್ಞಾನವೇ ಅಷ್ಟಿರುವುದರಿಂದ). ಈಗ ಅರ್ಥವಾಯ್ತು.
ಅಶ್ವತ್ಥಾಮನ ಹೆಸರಲ್ಲಿ ಸತ್ತ ಆನೆಯ ಕತೆಯನ್ನೂ ಪರೋಕ್ಷವಾಗಿ ಇಲ್ಲಿ ಮಂಡಿಸಿದ ರೀತಿ ಖುಷಿಕೊಟ್ಟಿತು.
ಚಂದದ ಕವಿತೆಗಳ ಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು.
ಅಂದಹಾಗೆ ‘ನಮ್ಮೆಲ್ಲರೊಳಗೊಬ್ಬ ಯೂಲಿಸಿಸ್’ ಅಂತೇನೋ ಟೆನಿಸನ್ ಬರೆದ ಕವಿತೆಯನ್ನೊಳಗೊಂಡ ಲೇಖನ ಓದಿದ ನೆನಪು ನಿಮ್ಮ ಬ್ಲಾಗಲ್ಲಿ. ಮೊದಲೊಮ್ಮೆ ಅವಸರದಲ್ಲಿ ಓದಿದರೂ ಇಷ್ಟವಾಗಿತ್ತು. ಅದೇ ದಿನ ಸ್ಯಾಂಡಿಯಾಗೋ ಸೀವರ್ಲ್ಡ್ ಅಲ್ಲಿ ಯೂಲಿಸಿಸ್ ಎಂಬ ಹೆಸರಿನ ಕಿಲ್ಲರ್ ವ್ಹೇಲ್ ಆಡುವ ಆಟವನ್ನ ನೋಡುವಾಗ ಮತ್ತೆ ಲೇಖನದ ನೆನಪು ಬಂದಿತ್ತು. ಊರಿಗೆ ಮರಳಿದ ಮೇಲೆ ಇವತ್ತು ಮತ್ತೆ ಆ ಲೇಖನ ಓದೋಣ ಅಂತ ಹುಡುಕಿದರೆ ಸಿಗಲಿಲ್ಲ.
ಅಪಾರ ಅಭಿಮಾನದಿಂದ,
-ಶಾಂತಲಾ ಭಂಡಿ.
ಪ್ರಿಯರೇ,
ನಿಮ್ಮ ಕವಿತೆ/ಬರಹಗಳ ಜೊತೆಗೆ ಅವುಗಳ ಮೇಲೆ ಬರೆದಿರಬಹುದಾದ
ಕಮೆಂಟುಗಳನ್ನೂ ಓದುವದರಲ್ಲಿ ಒಂಥರಾ ಖುಶಿಯಿದೆ.
ಮೇಲಿನ ಕಮೆಂಟುಗಳಲ್ಲಿ ಕುದುರೆ,ಕಾಡುಕುದುರೆ,ಸಾದಾಕುದುರೆ ಅಂತ ಪದೇ ಪದೇ
ಪ್ರಸ್ತಾಪವಾಗುತ್ತಿರುವದರಿಂದ "ಹೀಗೂ" ಇರಬಹುದಾ ಅಂತ ಊಹಿಸುತ್ತಿದ್ದೇನೆ..
ಮುಂಚಿನಿಂದಲೂ ನಮ್ಮಲ್ಲಿ ಕುದುರೆ ಅಂದರೆ ಕಾಮದ ಸಂಕೇತ.ಈಗಿನ ಕ್ರಿಯೇಟಿವ್
ಕಲ್ಪನೆ/ಕೄತಿಗಳಲ್ಲಂತೂ ಕುದುರೆಯೆಂಬುದು ಲವಲವಿಕೆ,ಶಕ್ತಿ ಮತ್ತು ಕಾಮದ ಸಂಕೇತವಾಗಿದೆ.
ಇನ್ನು ಕುದುರೆಯೇ ಹೀಗಿರಬಹುದಾದರೆ ಕಾಡುಕುದುರೆ ಹೇಗಿರಬಹುದು?
ಹಾಗೆಯೇ ಕಂಬಾರರ ’ಕಾಡುಕುದುರೆ ಓಡಿ ಬಂದಿತ್ತಾ..’ಪದ್ಯಕ್ಕೆ supporting ಆಗಿಯೂ ನೀವು ಕಾಡುಕುದುರೆ ಬಳಸಿರಲಿಕ್ಕೆ ಸಾಕು.
ಒಟ್ಟಿನಲ್ಲಿ ಕವಿತೆ ಮನಸೂರೆಗೊಂಡಿದೆ.
ಅದು ಸರಿ,ನೀವ್ಯಾಕೆ ಓದುಗರ doubts ಗೆ ಉತ್ತರಿಸುವದಿಲ್ಲ?
-ರಾಘವೇಂದ್ರ ಜೋಶಿ.
ಪ್ರಿಯ ಜೋಶಿ,
ಉತ್ತರಿಸಬಾರದು ಅಂತೇನಿಲ್ಲ. ಆದರೆ ಉತ್ತರಿಸುವುದು ಎಷ್ಟು ಸರಿ ಎಂಬ ಕಾರಣಕ್ಕೆ ಸುಮ್ಮನಿರುತ್ತೇನೆ. ಕವಿತೆಯ ಕುರಿತು ಮಾತಾಡುವುದಕ್ಕೆ ನನಗೆ ಸಂಕೋಚ. ಅಷ್ಟೇ.
-ಜೋಗಿ
ಜೋಗಿ ಸಾರ್,
ನಿಮ್ಮ ಸಂಕೋಚ ನಿರೀಕ್ಷಿತ.
ಕವಿತೆಯೊಂದು ಹತ್ತು ಓದುಗರಲ್ಲಿ ನೂರು ಅರ್ಥ ಹೊರಡಿಸಿದರೆ
ಅದು ಕವಿಯ ಸಾರ್ಥಕತೆ.ನಿಮ್ಮ ಬರಹ ಓದಿದ ಓದುಗ
ಕಮೆಂಟು/ಕಾಂಪ್ಲಿಮೆಂಟು ಮಾಡುತ್ತಿದ್ದಾನೆಂದರೆ,ಅಷ್ಟರ ಮಟ್ಟಿಗೆ ನಿಮ್ಮ
ಬರಹ ತಟ್ಟಿದೆ ಅಂತಲೇ ಅರ್ಥ.ಆದರೆ ಕೆಲವೊಮ್ಮೆ ಕೆಲವೊಂದು ಪದಗುಚ್ಛ,ರೂಪಕ
ಅಥವಾ ಕವಿತಾ ಸಮಯದಲ್ಲಿ ಕವಿಯ ಮನದೊಳಗೆ ಮೂಡಿರಬಹುದಾದ
ಗೂಢಾರ್ಥ,ತುಂಟತನ-ಇವೆಲ್ಲವನ್ನೂ
ಓದುಗ ಕೂಡ ಎಂಜಾಯ್ ಮಾಡಬೇಕಲ್ಲವೇ..
-ರಾಘವೇಂದ್ರ ಜೋಶಿ.
ಏನು ಗೊತ್ತಾ?
ಏನೋ ಕೇಳ್ಲಾ?
ಏನು ಅಂದ್ರೆ...
ಹಳ್ಳಿಗಳಲ್ಲಿ ಕೆಲವು ಸಾಂಪ್ರದಾಯಿಕ ಹಾಡುಗಳನ್ನ ಹಾಡುತ್ತಾರಲ್ಲ, ಆ ಹಾಡುಗಳ ಶೀರ್ಷಿಕೆ ಸಾಮಾನ್ಯವಾಗಿ ‘ಆರತಿ ಮಾಡಿದ್ದು’ ‘ಮಂಗಳಾರತಿ ಹಾಡು’ ‘ಗಣಪತಿ ಪೂಜೆ ಹಾಡು’ ಹೀಗೆಲ್ಲ ಬರೆದಿರುತ್ತಾರೆ. ಹಾಗೆಯೇ ಕವಿಗಳು ಕವಿತೆಯ ಕೊನೆಯಲ್ಲಿ ‘ಕೋಪದಲ್ಲಿ ಬರೆದದ್ದು’, ‘ಕಡುಕೋಪದ ಕವಿತೆ’,‘ಮಧ್ಯರಾತ್ರಿಯಲ್ಲಿ ಟೀ ಮಾಡಿ ಕುಡಿದ ಹಾಡು’,‘ತುಂಟತನದಲ್ಲಿ ಬರೆದದ್ದು’, ‘ಪಾನಿಪೂರಿ ಕೊಡಿಸಿದ ಕವಿತೆ’, ‘ಕಾಫಿಡೇ ಹಾಡು’, ‘ರಮಿಸಿದ ಸಾಲು’ ಹೀಗೆಲ್ಲ ಬರೆದುಬಿಟ್ಟರೆ ಓದುಗರು ಯಾವರೀತಿಯಲ್ಲಿ ಓದಿಕೊಳ್ಳಬಹುದೆಂದು ನಿರ್ಧರಿಸಲು ಸಹಾಯವಾಗಬಹುದು. :)
ಜೋಗಿಯವರೆ,
ನಿಮ್ಮ ಕವಿತೆ ಹಾಗೂ ಅದರರ್ಥವನ್ನೆಲ್ಲ ಬಿಚ್ಚಿಡುವ ಕಮೆಂಟುಗಳು ಎಲ್ಲವೂ ಲಾಲಿತ್ಯಪೂರ್ಣವೂ, ಅರ್ಥಗರ್ಭಿತವೂ ಆಗಿವೆ.
@ರಾಘವೇಂದ್ರ ಜೋಶಿ,
ಕುದುರೆಯ ಬಗ್ಗೆ ವಿವರವಾಗಿ ಉತ್ತರಿಸಿದ್ದೀರ. ಕುದುರೆ ಅಂದರೆ ಕಾಮದ ಸಂಕೇತ ಅಂತ ಹೇಳಿದಿರಿ. ಹಾಗಾದರೆ ಕಾಮದ ಸಂಕೇತವಿಲ್ಲದೆ ಸಾಹಿತ್ಯದಲ್ಲಿ ಕುದುರೆಗೆ ಏನೆಂದು ಹೇಳುತ್ತಾರೆ ಅಂತ ದಯವಿಟ್ಟು ತಿಳಿಸಿ.
ಇಲ್ಲಿ ನೀವು ಕುದುರೆಯ ಅರ್ಥವನ್ನು ಸವಿವರವಾಗಿ ಹೇಳಿದ ಮೇಲೆ ನಗು ಬರ್ತಿದೆ.
ಒಮ್ಮೆ ‘ಕಾಡುಕುದುರೆಗಳನ್ನ ಕಟ್ಟಿದ ರಥಕ್ಕೆ ಹಾದಿಯ ಹಂಗಿಲ್ಲ’ ಅಂತ್ಯಾರೋ ಹೇಳಿದ್ದಕ್ಕೆ ‘ಹೌದೌದು’ ಅಂತ ಗೋಣಾಡಿಸಿ ಬಂದಿದ್ದೆ. ಹೌದು ಎನಿಸಿತ್ತು, ಯಾಕೆಂದರೆ ಕಾಡುಕುದುರೆ ಅಂದರೆ ಅದನ್ನ ಯಾರೂ ಪಳಗಿಸಿರದ ಕಾರಣ ಅದಕ್ಕೆ ರಸ್ತೆಯಲ್ಲಿಯೇ ನಡೆಯಬೇಕೆಂದು ಅರಿವಿರುವುದಿಲ್ಲ, ಅದಕ್ಕೆ ಎಲ್ಲಿ ಬೇಕೆಂದರೂ ಹೋಗಬಹುದು ಅಂತನಿಸಿ ‘ಅದೂ ಸರಿ’ ಅಂದಿದ್ದೆ. :) ನನಗೇ ಈಗ ನಗು ಬರ್ತಿದೆ, ನನ್ನ ಪೆದ್ದುತನಕ್ಕೆ ಅವರೆಷ್ಟು ನಕ್ಕಿರಬೇಕು ಅನಿಸಿತು :)
ಸಂಯಮದಿಂದ ನವಿರಾಗಿ ಅರ್ಥವಿವರಿಸಿ ಉತ್ತರಿಸುವ ನಿಮ್ಮ ರೀತಿಗೆ ವಂದನೆಗಳು.
Post a Comment