Thursday, July 17, 2008

ಬಾಕಿ ಮೊಕ್ತ

ಕಡಲನ್ನು ಸೇರುತ್ತೇನೆ ಎಂದು
ಗೊತ್ತಿಲ್ಲದ ನದಿ
ಕಡಲು ಸೇರಿದ ತಕ್ಷಣ ತನ್ನ ಅಸ್ತಿತ್ವವನ್ನೆ
ಕಳಕೊಳ್ಳುವ ಸೋಜಿಗವ
ಧ್ಯಾನಿಸುತ್ತೇನೆ.

ಧ್ಯಾನಿಸಿದರೆ ಕವಿ
ಋಷಿಯಾಗುತ್ತಾನಂತೆ
ಯೇಟ್ಸನಂತೆ
ನನಗೋ ಬೋಧಿಲೇರನ ಹಾಗೆ
ಸಂತನಾಗುವ ಆಸೆ;
ಅಕಾಲದಲ್ಲಿ ದಿವಂಗತನಾಗಿ.

ಮಾಡ್ ಗಾನ್ ಬೆನ್ನಿಗೆ ಬಿದ್ದ
ಯೇಟ್ಸ್‌ಗೆ ಕೊನೆಗೂ ದಕ್ಕಿದ್ದು ಎರಡೇ ಸಾಲು;
Why, what could she have done, being what she is?
Was there another Troy for her to burn?
ನಾನು ಪ್ರೀತಿಸಿ ಕವಿತೆ ಬರೆಯುತ್ತೇನೆ
ಎಂದು ಅವಳಿಗೆ ಹೊಟ್ಟೆಕಿಚ್ಚು
ನಾನು ಕವಿತೆ ಬರೆದು ಪ್ರೀತಿಸುತ್ತೇನೆ
ಎಂದು ಇವನಿಗೆ ಗುಮಾನಿ.

ತನ್ನನ್ನು ಕೂಡಿದ ನದಿಯ
ನೀರಿನ ರುಚಿ
ಕಡಲಿಗೆ ನೆನಪುಂಟೆ?
ನೆನಪನ್ನೂ ರುಚಿಯನ್ನೂ
ಕಡಲಲ್ಲಿ ಕಳಕೊಂಡಿದ್ದಕ್ಕೆ
ನದಿಗೆ ಕೊರಗುಂಟೆ?

ವರುಣಸೂಕ್ತ ಪಠಿಸುವ ಹೊತ್ತಿಗೇ
ಅಗ್ನಿಕಾರ್ಯ ಶುರು.
ಕಡಲೊಳಗೂ ಸುಡುಕೆಂಡ
ಬಡಬಾಗ್ನಿ;ಬಾಕಿ ಮೊಕ್ತ.

11 comments:

ಶ್ರೀನಿಧಿ.ಡಿ.ಎಸ್ said...

excellent!

Anonymous said...

tumbaa chennaagide
-g n m

Santhosh Ananthapura said...

"ನೆನಪನ್ನು ರುಚಿಯನ್ನೂ ಕಡಲಲ್ಲಿ ಕಳಕೊನ್ಡದಕ್ಕೆ ನದಿಗೆ ಕೊರಗುಂಟೆ?......ಕಡಲೊಳಗೂ ಸುಡುಕೆಂಡ
ಬಡಬಾಗ್ನಿ;ಬಾಕಿ ಮೊಕ್ತ."

"ಜೀ ಹುಜೂರ್.. ವ್ಹಾ ಜೋಗಿ ಬೊಲಿಯೆ" ಫ್ಯಾಂಟ್ಯಾಸ್ಟಿಕ್.

Santhosh Ananthapura

envy said...

nadi hennina hage..ammanante niswarti...adara kendra bindu kadalu...Adre kadalu self centred alwa jogi sir?chanda untu. Write about Love Song of Alfred J Prufrock pls

Anonymous said...

ಶಬ್ದಗಳೊಂದಿಗೆ ಆಟ
ಪ್ರತಿ ಪ್ಯಾರಾದಲ್ಲೂ ಮಂತ್ರ ಮಾಟ
ಬೆಕ್ಕಿಗೆ ಚೆಲ್ಲಾಟ
ಇಲಿಗೆ ಪ್ರಾಣಸಂಕಟ!
ಅಕಟಕಟಾ..
-ರಾಘವೇಂದ್ರ ಜೋಶಿ.

ಆಲಾಪಿನಿ said...

ಏನು ಹೇಳಬೇಕು ಗೊತ್ತಾಗ್ತಿಲ್ಲ. ಅಷ್ಟೊಂದು ಆಳಭಾವ ಥ್ಯಾಂಕ್ಸ್ ಫಾರ್‍ ಸಚ್ ಅ ನೈಸ್ ಪೋಯಮ್

ಸಿಂಧು sindhu said...

ಪ್ರಿಯ ಜೋಗಿ,

ತುಂಬ ಇಷ್ಟವಾದ ಮತ್ತೊಂದು ಕವಿತೆ. ನಿಮ್ಮ ಕವಿತೆ ಹರವಿಕೊಳ್ಳುವ ಪರಿಗೆ ಮನಸೋತಿದ್ದೇನೆ.

ಒಂದು ತುಂಟ ಪ್ರಶ್ನೆ, ಬೋದಿಲೇರ್ ಸಂತನೆ? !

ಪ್ರೀತಿಯಿಂದ
ಸಿಂಧು

mruganayanee said...

ತನ್ನನ್ನು ಕೂಡಿದ ನದಿಯ
ನೀರಿನ ರುಚಿ
ಕಡಲಿಗೆ ನೆನಪುಂಟೆ?
ನೆನಪನ್ನೂ ರುಚಿಯನ್ನೂ
ಕಡಲಲ್ಲಿ ಕಳಕೊಂಡಿದ್ದಕ್ಕೆ
ನದಿಗೆ ಕೊರಗುಂಟೆ?


ಕೂಡಿ ಕಳೆದು ಹೋಗಲು ಸಾಧ್ಯವಾದರೆ ಕೊರಗುವ ಪ್ರಶ್ನೆಯೇ ಇಲ್ಲ ಅಲ್ಲವೇ?

Anonymous said...

brilliant sir.

ಶಾಂತಲಾ ಭಂಡಿ (ಸನ್ನಿಧಿ) said...

ಪ್ರೀತಿಯ ಜೋಗಿ...

ಯಾವುದೋ ಪೊಳ್ಳು ಗಾಂಭೀರ್ಯದಲ್ಲಿ ಕಳೆದುಹೋಗುತ್ತಿರುವವರಿಗೂ ಕಚಗುಳಿಯಿಡುವ ತುಂಟ ಸಾಲುಗಳ ಹಾಗೆ. ಇಷ್ಟವಾಯ್ತು.

ಮಿದುಳಿನ ಎಡ ಹಾಗೂ ಬಲಭಾಗಗಳೆರಡಕ್ಕೂ ಕೆಲಸ ನೀಡುವ ಕವಿತೆ.
ತನ್ನನ್ನೂ ಓದಿಸಿಕೊಂಡು ಇನ್ನಷ್ಟನ್ನು ಓದಲು ಪ್ರೇರೇಪಿಸುವ ಕವಿತೆಯ ಪ್ರತಿ ಸಾಲುಗಳನ್ನೂ ಪ್ರೀತಿಸಬೇಕೆನ್ನಿಸಿತು.

ಅಭಿಮಾನದಿಂದ,
-ಶಾಂತಲಾ ಭಂಡಿ.

VENU VINOD said...

ತನ್ನನ್ನು ಕೂಡಿದ ನದಿಯ
ನೀರಿನ ರುಚಿ
ಕಡಲಿಗೆ ನೆನಪುಂಟೆ?
ನೆನಪನ್ನೂ ರುಚಿಯನ್ನೂ
ಕಡಲಲ್ಲಿ ಕಳಕೊಂಡಿದ್ದಕ್ಕೆ
ನದಿಗೆ ಕೊರಗುಂಟೆ?

ವ್ಹಾ ವ್ಹಾ