Tuesday, July 10, 2007

ಪೂರ್ಣವಿರಾಮ ಅಲ್ಲ, ಬರೀ ಕಾಮ


ಒಂದೆರಡು ತಿಂಗಳ ಮಟ್ಟಿಗೆ ಸತ್ತು ಹೋಗಬೇಕು. ಯಾರ ಕೈಗೂ ಸಿಗಬಾರದು. ಯಾರನ್ನೂ ಭೇಟಿಯಾಗಬಾರದು. ಯಾರ ಮಾತಿಗೂ ಬಲಿಬೀಳಬಾರದು. ಕಂಬಳಿಹುಳ ಕೋಶದೊಳಗೆ ಕೂತು ಧ್ಯಾನಸ್ಥವಾಗುವಂತೆ ಎಲ್ಲಾದರೂ ಕಣ್ಮರೆಯಾಗಿಬಿಡಬೇಕು.
ಹಾಗನ್ನಿಸುತ್ತದೆ ಎಷ್ಟೋ ಸಾರಿ.
ಸ್ವಾಮೀಜಿಗಳು ಇದನ್ನೇ ಚಾತುರ್ಮಾಸ ಅನ್ನುತ್ತಿದ್ದರು. ಅಷ್ಟೂ ದಿನ ಯಾರಿಗೂ ಸಿಗದಂತೆ ಏಕಾಂತದಲ್ಲಿರುತ್ತಿದ್ದರು. ಅವನ ಅನುಸಂಧಾನ ತಂತಮ್ಮ ಜೊತೆಗೋ ತಾವು ನಂಬಿದ ದೇವರ ಜೊತೆಗೋ ಇರುತ್ತಿತ್ತು. ಹೆಚ್ಚೆಂದರೆ ಅಕ್ಪರದ ಜೊತೆಗೆ, ಕಾವ್ಯದ ಜೊತೆಗೆ.
ಆದರೆ ನಾಲ್ಕು ನಿಮಿಷ ಸುಮ್ಮನಿರಲಾಗುವುದಿಲ್ಲ. ಮೊಬೈಲು ಬೇಡ ಅಂತ ಆಫ್ ಮಾಡಿಟ್ಟರೂ ಆಗಾಗ ಆನ್ ಮಾಡಿ ಮೆಸೇಜಿದೆಯಾ ಅಂತ ಹುಡುಕುತ್ತದೆ ಮನಸ್ಸು. ಫೋನು ಬರದಿದ್ದರೆ, ಯಾರದೋ ದನಿ ಕೇಳಿಸದೇ ಹೋದರೆ, ರೇಡಿಯೋ ಗುಣುಗುಣಿಸದೇ ಇದ್ದರೆ ಜೀವಕ್ಕೆ ಬೇಸರವಾಗುತ್ತದೆ. ಐದನೇ ಕ್ಲಾಸಿನ ಹುಡುಗ ಪ್ರಬಂಧ ಬರೆಯುತ್ತಾನೆ; ಮಾನವನು ಸಮಾಜಜೀವಿ. ಆತ ಸಮಾಜದಿಂದ ದೂರವಾಗಿ ಒಂಟಿಯಾಗಿ ಬಾಳಲಾರ. ಐವತ್ತು ವರುಷಗಳ ಹಿಂದೆಯೂ ಅದನ್ನೇ ಬರೆಯುತ್ತಿದ್ದ. ಇವತ್ತೂ ಅದನ್ನೇ ಬರೆಯುತ್ತಿದ್ದಾರೆ. ಅದನ್ನೇ ಜಿಎಸ್ಎಸ್ ಕವಿತೆ ಮಾಡುತ್ತಾರೆ; ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ. ಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸದಾದೆನು ನಮ್ಮೊಳಗೆ.
ಈ ಬೇಕು ಬೇಡಗಳ ನಡುವೆ ಬದುಕುವುದು ಹೇಗೆ? ನಿಜಕ್ಕೂ ಮನಸ್ಸಿಗೇನು ಬೇಕು? ಪ್ರೀತಿಯ, ಆಸರೆಯಾ, ನೌಕರಿಯಾ, ವಿರಾಮವಿರದ ದುಡಿಮೆಯಾ, ಒತ್ತಡವಾ, ಒಸಗೆಯಾ? ಎಲ್ಲವೂ ಬೇಕೆನಿಸುತ್ತದೆ. ಎಲ್ಲವೂ ಸಾಕೆನಿಸುತ್ತದೆ. ಸಾಕಪ್ಪ ಈ ದುಡಿತ, ಇದರಿಂದೆಲ್ಲ ಏನು ಸಾಸುವುದಕ್ಕಿದೆ. ಮೊಬೈಲು, ಸೈಟು, ಮನೆ, ಐಪಾಡು, ಲೆನೋವಾ, ಇನ್ನೋವಾ, ಕ್ಲಬ್ಬು ಮೆಂಬರ್ ಶಿಪ್ಪು, ಸ್ಕಾಚು, ಗೋಡಂಬಿ, ಗೆಳತಿ, ಎಸ್ಸೆಮ್ಮೆಸ್ಸು, ಗೆಳೆಯ, ಎಮ್ಮೆಮ್ಮೆಸ್ಸು, ಮೊಬೈಲಿನಲ್ಲಿ ಕೆಮರಾ, ಅದಕ್ಕೆ ಇಷ್ಟೆಲ್ಲ ಇದ್ದರೂ ಬೋರಾಗುತ್ತದಲ್ಲ ಬದುಕು? ಎಷ್ಟಿರಬೇಕು ದುರಹಂಕಾರ ಈ ಬದುಕಿಗೆ? ಎಷ್ಟಿರಬೇಡ ದುರಾಸೆ ಈ ಜೀವಕ್ಕೆ?
ಸಾಕು ಅಂತ ಕಾರೆತ್ತಿಕೊಂಡು ಕಾಡಿಗೆ ಹೊರಟರೆ ಕಾಡೂ ಕಾಡುತ್ತದೆ, ನಾಡಿಗಿಂತ ಭೀಕರವಾಗಿ. ಇಲ್ಲಿದ್ದರೆ ಕಾಡು ಬಾ ಅನ್ನುತ್ತದೆ. ಅಲ್ಲಿಗೆ ಹೋದರೆ ನಾಡು ಕರೆಯುತ್ತದೆ. ಒಂದು ಕ್ಪಣ ಸುಮ್ಮನೆ ಕುಳಿತರೆ ಅಪರಾಧೀ ಪ್ರಜ್ಞೆ. ಏನು ಮಾಡ್ತಾನೇ ಇಲ್ಲವಲ್ಲ ಎಂಬ ವಿಷಾದ, ಪಾಪಪ್ರಜ್ಞೆ. ದುಡಿಯುವುದೇ ಜೀವನ, ಬಿಡುವಾಗಿರುವುದೇ ಮರಣ ಅಂತ ನಂಬಿದವರ ಹಾಗೆ ನಮಗೆ ದುಡಿಯುವುದನ್ನು ಕಲಿಸಿದೆ ಬದುಕು. ಪ್ರಕೃತಿಯ ಕಣ್ಣಲ್ಲಿ ದುಡಿಯುವವರೂ ಒಂದೇ ದುಡಿಯದೇ ಇರುವವರೂ ಒಂದೆ. ದುಡಿಮೆ ಎನ್ನುವುದು ನಮ್ಮೊಳಗಿನ ಸ್ವಾರ್ಥ, ಗೆಲ್ಲುವ ಛಲ, ಮೀರುವ ದಾಹ, ಏರುವ ಮೋಹ ಕಲಿಸಿಕೊಟ್ಟ ವಿದ್ಯೆ. ಹಾಗೆ ನೋಡಿದರೆ ದುಡಿಯದಿರುವವನು ಬರೀ ಸೋಮಾರಿ. ದುಡಿಮೆಗಾರ ಅಪಾಯಕಾರಿ. ಯಾವುದೋ ಸಂಸ್ಥೆಯಲ್ಲಿ ಒಬ್ಬ ನೌಕರ ಕಷ್ಟಪಟ್ಟು ಹಗಲಿರುಳೂ ದುಡಿಯುತ್ತಿದ್ದಾನೆ ಅಂದರೆ ಹುಷಾರಾಗಿರಿ, ಅವನು ಒಂದಲ್ಲ ಒಂದು ದಿನ ಯಜಮಾನನಾಗೇ ಆಗುತ್ತಾನೆ.
ಮೊನ್ನೆ ಹೀಗೇ ಮಾತು; ಎಷ್ಟು ದುಡಿಯೋದು ದಿನಾ? ಯಾರಿಗೋಸ್ಕರ? ಯಾಕೆ ದುಡಿಯಬೇಕು? ಬರೀ ಬೋರು, ಬೇಜಾರು. ಹಾಗಂತ ಎಲ್ಲರಿಗೂ ಅನ್ನಿಸೋದಕ್ಕೆ ಶುರುವಾಗಿದೆ. ಅದೇನು ಸೀಸನ್ನಾ, ಟೆನ್ಷನ್ನಾ? ಅದೇ ಕೆಲಸ ಮಾಡುತ್ತಾ ಬಂದಿದ್ದೇವೆ ವರುಷಗಳಿಂದ. ಆದರೂ ಕೆಲಕಾಲ ಇದ್ದಕ್ಕಿದ್ದಂತೆ ಬೇಸರ ಕಾಡುತ್ತದೆ. ಎಲ್ಲಾದರೂ ಹೊರಟೇ ಬಿಡೋಣ ಅನ್ನಿಸುತ್ತದೆ. ಐ ನೀಡ್ ಎ ಬ್ರೇಕ್.
ವಿರಾಮ, ವಿಶ್ರಾಂತಿ ತೆಗೆದುಕೊಂಡು ಎಲ್ಲಿಗೆ ಹೋಗೋಣ. ಮಾನವನು ಸಂಘಜೀವಿ, ಆತ ಒಂಟಿಯಾಗಿ ಬಾಳಲಾರ! ಎಲ್ಲಿಗೆ ಹೋದರೂ ಇದೇ ಮಂದಿ ಹಿಂಬಾಲಿಸುತ್ತಾರೆ. ಬನ್ನಿ, ದುಡೀರಿ, ಕೊಡಿ, ಕೆಲಸ ಮಾಡಿ, ಸಾಸಿ, ಚೆನ್ನಾಗಿ ಬರೀರಿ, ಇನ್ನೂ ದುಡೀರಿ, ಬ್ಯಾಲೆನ್ಸ್ ಶೀಟ್ ಮುಗಿಸಿ, ವೆರಿಗುಡ್. ಕೀಪಿಟ್ ಅಪ್. ಮೆಚ್ಚುಗೆಯ ನುಡಿ. ದುಡಿಮೆಗೆ ಬೆಲೆ; ಸಂಬಳ, ಮೆಚ್ಚುಗೆ ಮತ್ತು ಮತ್ತಷ್ಟು ದುಡಿಮೆ.
The Grave Yard is full of inevitable people ಅಂತ ಯಾರೋ ಅಂದರು. ಸ್ಮಶಾನದ ತುಂಬ ನಾನು ತುಂಬ ಅನಿವಾರ್ಯ ಅಂದುಕೊಂಡವರ ಸಮಾಧಿ. ನಾವು ದುಡಿಯದೇ ಹೋದರೆ ಏನೇನೋ ಆಗುತ್ತದೆ ಅಂದುಕೊಳ್ಳುತ್ತೇವೆ. ತಾನು ನಟಿಸದೇ ಹೋದರೆ ಜನರಿಗೆ ಮನರಂಜನೆಯೇ ಸಿಗುವುದಿಲ್ಲ ಅಂತ ಸೂಪರ್ ಸ್ಟಾರ್ ಭಾವಿಸುತ್ತಾನೆ. ತಾನು ಹಾಡದೇ ಹೋದರೆ ಜನಗಣಮನ ಮೌನವಾಗುತ್ತದೆ ಎಂದು ಭಾವಿಸುತ್ತಾರೆ. ಹಾಗೆ ಏನೇನೋ ಅಂದುಕೊಂಡು ದುಡಿಯುತ್ತೇವೆ. ಹಣಕ್ಕೆ, ಹೆಸರಿಗೆ, ಸುಮ್ಮನಿರಲಾಗದ್ದಕ್ಕೆ. ಯಾವ ಪುರುಷಾರ್ಥಕ್ಕೆ ಅಂತ ಕೇಳಿದರೆ ಸಾಕು ಭಗವದ್ಗೀತೆ ಹಾಜರಾಗುತ್ತದೆ;
ಕರ್ಮಣ್ಯೇವಾಕಾರಸ್ತೇ. ಇದ್ಯಾವ ಕರ್ಮದ ರಸ್ತೆ!
*****
ಜೀವನ ಕೂಡ ಟರ್ನೋವರ್. ವ್ಯಾಪಾರಸ್ತರು ಬಳಸುವ ಪದ ಅದು. ಏನೂ ಸಂಪಾದನೆ ಇಲ್ಲ ಜಸ್ಟ್ ಟರ್ನೋವರ್ ಅಷ್ಟೇ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ. ಅದು ಇವರದೂ ಅಲ್ಲ, ಅವರದೂ ಅಲ್ಲ. ಅವರು ಏನನ್ನೂ ತಂದಿಲ್ಲ, ಏನನ್ನು ಒಯ್ಯುವುದೂ ಇಲ್ಲ. ತಂದಿದ್ದೆಲ್ಲವನ್ನು ಇಲ್ಲಿಂದಲೇ ತಂದಿದ್ದಾರೆ, ಕೊಟ್ಟದ್ದೆಲ್ಲ ಇಲ್ಲಿಗೇ ಕೊಟ್ಟಿದ್ದಾರೆ. ಕೊಡುವುದಕ್ಕೆ ಏನು ತಂದಿದ್ದೀಯಾ, ಹೋಗುವಾಗ ಏನು ಕೊಂಡೊಯ್ಯುತ್ತೀಯಾ? ಯಾರೂ ಸಂಗಡ ಬಾಹೋರಿಲ್ಲ! ಒಂಬತ್ತು ಬಾಗಿಲ ಮನೆಯೊಳಗೆ, ತುಂಬಿದ ಸಂದಣಿ ಇರಲು, ಕಂಬ ಮುರಿದು ಡಿಂಬ ಬಿದ್ದು, ಅಂಬರಕ್ಕೆ ಹಾರಿತಯ್ಯೋ..
ಗಿಣಿಯು ಪಂಜರದೊಳಿಲ್ಲ!
ಪ್ರಕೃತಿಗೆ ಗಿಳಿಯ ಚಿಂತೆಯಿಲ್ಲ. ಅಳಿವ ಚಿಂತೆಯಿಲ್ಲ. ಮುಂಜಾನೆ ಹೂವರಳಿ, ಸಂಜೆಗೆ ಬಾಡಿ ಉರುಳಿ, ಮತ್ತೆ ನಡುರಾತ್ರಿಯಿಂದ ನಸುಕಿನ ತನಕ ಮೊಗ್ಗೊಡೆದು ಬಿರಿದು.. ಕತ್ತಲಲ್ಲಿ ಬೆಳೆವುದೊಂದೆ ಕೆಲಸ. ನಸುಕು ಹರಿಯೆ ಮೃದುಹಾಸ. ಹಣ್ಣಿಗಿಲ್ಲ, ಚಿಗುರಿಗಿಲ್ಲ, ಮಳೆಗಿಲ್ಲ, ಗಾಳಿಗಿಲ್ಲ, ಗಾಳಿ ಸವರುವ ಮೋಡಕ್ಕೂ ಇಲ್ಲ ನಶ್ವರತೆಯ ಚಿಂತೆ, ಅಮರತ್ವದ ಆಶೆ. ಅದೇನಿದ್ದರೂ ನಮ್ಮ ಚಿಂತೆ. ಪ್ರಕೃತಿ ಮಾಡುವ ಯಾವ ಕೆಲಸವೂ ದುಡಿಮೆಯಲ್ಲ. ಹೂವಿಗೆ ಅರಳುವುದು ದುಡಿಮೆ ಅಲ್ಲ. ಬೀಜಕ್ಕೆ ಮೊಳಕೆ ಒಡೆಯುವುದು ದುಡಿಮೆ ಅಲ್ಲ. ಮೋಡ ಮಳೆಯಾಗುವುದು ದುಡಿಮೆಯಲ್ಲ. ಅವೆಲ್ಲ ಸಹಜ ಕ್ರಿಯೆಗಳು. ನಮಗೆ ಅಂಥ ಸಹಜ ಕ್ರಿಯೆಗಳೇ ಇಲ್ಲ. ಮುಂಜಾನೆದ್ದರೆ ಶುರುವಾಗುತ್ತದೆ ಕೆಲಸ. ನಿದ್ದೆ ಕೂಡ ದುಡಿಮೆ ಹೆಚ್ಚಿಸುವ ಕೆಲಸ.
****
ಒಂದು ದಿನ ಇದ್ಯಾವುದನ್ನೂ ಮಾಡದೇ ಕಳೆಯಬೇಕು. ದೈನಿಕದ ಎಲ್ಲ ವ್ಯವಹಾರ ಆವತ್ತು ಬಂದ್. ಆ ದಿನ ಪ್ರಕೃತಿಗೆ ಅರ್ಪಣೆ. ಎಚ್ಚರವಾದಾಗ ಎದ್ದು, ಇಷ್ಟಬಂದಲ್ಲಿ ನಡೆದಾಡಿ, ಸಿಕ್ಕಿದ್ದನ್ನು ತಿಂದು, ಸುಸ್ತಾದಾಗ ಮಲಗಿ, ಮನಸ್ಸನ್ನು ಅಂಡಲೆಯಲು ಬಿಟ್ಟು, ಕಂಡದ್ದನ್ನು ಕಣ್ತುಂಬಿಸಿಕೊಳ್ಳುತ್ತಾ, ನಾಳೆಯನ್ನು ಮರೆತು, ನಿನ್ನೆಯ ಜಗಳಗಳ ನೆನಪಿಸಿಕೊಳ್ಳದೆ, ಪ್ರಜ್ಞೆ ಮತ್ತು ಪರಿಸರದ ನಡುವಿನ ಸಂಬಂ`ವನ್ನು ಮರೆತು ಬದುಕುತ್ತಿರಬೇಕು.
ಒಂದು ಪ್ರಖ್ಯಾತ ಝೆನ್ ಹೇಳಿಕೆಯಿದೆ;Sitting quietly doing nothing and the grass grows by itself. ಸುಮ್ಮನಿರು, ಏನೂ ಮಾಡದಿರು. ಗರಿಕೆ ಹುಲ್ಲು ತಾನಾಗೇ ಬೆಳೆಯುತ್ತದೆ.
ಇದನ್ನು ನಂಬಿಕೊಂಡು ಕೂರುವ ಹೊತ್ತಿಗೇ ಮತ್ತೊಂದು ಝೆನ್ ಹೇಳಿಕೆ ನೆನಪಾಗುತ್ತದೆ; ವರುಷಗಳಿಂದ ಮನೆ ಸೋರುತ್ತಿತ್ತು, ಒಂದು ಹೆಂಚು ಸರಿಪಡಿಸಿ, ರಿಪೇರಿ ಮಾಡಿದೆ.
ಎಲ್ಲಿ ನಿಷ್ಕ್ರಿಯನಾಗಿರಬೇಕೋ ಅಲ್ಲಿ ನಿಷ್ಕ್ರಿಯನಾಗಿರು, ಎಲ್ಲಿ ಕಾರ್ಯೋನ್ಮುಖನಾಗಬೇಕೋ ಅಲ್ಲಿ ಕಾರ್ಯೋನ್ಮುಖನಾಗು. ಆದರೆ ಇವೆರಡರ ನಡುವಿನ ವ್ಯತ್ಯಾಸ ಕಂಡುಕೊಳ್ಳುವುದು ಹೇಗೆ?
ಮುದುಕಿಯೊಬ್ಬಳು ನಡುರಾತ್ರಿ ಕೊಡದಲ್ಲಿ ನೀರು ತರುತ್ತಿದ್ದಳು. ಚಂದ್ರ ತನ್ನ ಕೊಡದೊಳಗಿದ್ದಾನೆ ಎಂದು ಬೀಗುತ್ತಿದ್ದಳು. ಬಿದ್ದು ಕೊಡ ಒಡೆಯಿತು. ಒಳಗಿದ್ದ ಚಂದ್ರಬಿಂಬವೂ ಮಾಯವಾಯಿತು.
No Water, No Moon
ಅಷ್ಟೇ. ಎಷ್ಟೇ ಮಾಡಿದರೂ ಕೊನೆಗೆ ನೋ ವಾಟರ್, ನೋ ಮೂನ್. ಮಾಡದೇ ಹೋದರೆ ಮಾಡು ಸೋರುತ್ತದೆ. ಮಾಡು ಸೋರಿದರೆ ಮನೆಯೊಳಗೆ ಹುಲ್ಲು ಮೊಳೆಯುತ್ತದೆ. ಹುಲ್ಲು ಮೊಳೆಯುವುದನ್ನು ನೋಡುತ್ತಾ ಕೂತರೆ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎಂದು ಅನುಮಾನವಾಗುತ್ತದೆ.

11 comments:

sritri said...

ನನ್ನದೇ ಮನಸ್ಸಿಗೆ ಕನ್ನಡಿ ಹಿಡಿದಂತಿದೆ! ಅಥವಾ ಎಲ್ಲರ ಮನಸ್ಸಿನಲ್ಲೂ ಇದೇ ಮಾತುಗಳು ಇರುತ್ತವಾ?

ಸಿಂಧು Sindhu said...

ಪ್ರಿಯ ಜೋಗಿ..

ಬೆಳಗ್ಗೆ ಕೆಲಸ ಶುರು ಮಾಡೋದಕ್ಕೂ ಮುಂಚೆ, ಇದನ್ನು ಓದಿ ..ಕೊಡ ಒಡೆದು. No water, No moon..!
ಸೋರುವ ಬದುಕಿಗೆ ತೇಪೆ ಹಚ್ಚಲು ಕಷ್ಟಸಾಧ್ಯ, ಮನಸ್ಸಿರಬೇಕಲ್ಲಾ.. ಹೊಲಿಯುವ ದಾರ ಕೈಗೆತ್ತಿಕೊಳ್ಳುವಾಗ No water, No moon, ನೆನಪಾದರೆ, ದಾರ ಸೂಜಿಯೊಳ ತೂರುವುದೇ ಇಲ್ಲ..

,,,,,

Anonymous said...

channagide sir............

Anonymous said...

I gone throu your essay. it is very impressive sir.
Govind madiwalar
Belgaum.

jai said...

For want of these type of articles only, I like your blog. Jaishankar

pradyumna said...

good one brother

Keshav Kulkarni said...

Jogi,

One more wonderful post from you. You made my day

Keshav (www.kannada-nudi.blogspot.com)

dinesh said...

ಜೋಗಿ ಸರ್, ನೀವು ಬರಹ ಪೋಸ್ಟ್ ಮಾಡಿರುವ ಸಮಯ ನೋಡಿದ್ರೆ ನಿಮಗೆ ಏಕಾಂತದ ಅಗತ್ಯ ತುಂಬಾ ಇದೆ ಅನಿಸುತ್ತಿದೆ. Sitting quietly doing nothing and the grass grows by itself. ಏಕಾಂತ ನಿಮ್ಮಿಂದ ಇನ್ನೊಂದಿಷ್ಟು ಉತ್ತಮ ಕಥೆಗಳನ್ನು ಬರೆಸಬಹುದು..

Anonymous said...

ELLOOO JOGAPPA NINNARAMAANE!?!?!?!?!?!?!?!!!!

SHREE said...

ಜೋಗಿ - ಎನ್ನುವ ಕಾವ್ಯನಾಮಕ್ಕೆ ವಿರುದ್ಧವೆನಿಸುವ ಬರಹ ಬರೆದಿದ್ದೀರ... ಹೀಗೆ ಅವಾಗಾವಾಗ ಆಗ್ತಿರತ್ತೆ, ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಂಡ ಮೇಲೆ ಬಿಡದ ಇಹಲೋಕದ ಮಾಯೆ ಮತ್ತೆ ರಿಚಾರ್ಜ್ ಮಾಡತ್ತೆ, ಏನೂ ಹೆದರ್ಕೋಬೇಡಿ ಸಾರ್ :) :) :) :) :)ನಿಮಗೋಸ್ಕರ ಒಂದಷ್ಟು ನಗೆಬೀಜ (ಸಿಂಧು ಕೈಯಿಂದ ಎರವಲು ತಗೊಂಡಿರೋದು)ಬಿತ್ತಿ ಶಾಂತಿಯ ನೀರೆರೆದರೆ ಮರವಾಗ್ತವೆ, ನೆರಳುಕೊಡ್ತವೆ... :)

vithal said...

Tubma chennagide....