Sunday, July 15, 2007

ತಾಯೆ ಬಾರ, ಮೊಗವ ತೋರ, ಕನ್ನ­ಡಿ­ಗರ ಮಾತೆಯೆ!


ಬಣ್ಣದ ತಗ­ಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿ­ಗಮ ಪದ­ನಿಸ ಊದಿ­ದನು
ಸನಿ­ದಪ ಮಗ­ರಿಸ ಊದಿ­ದನು

ಇದನ್ನು ನಾಲ್ಕೈದು ರಾಗ­ಗ­ಳಲ್ಲಿ ಹಾಡಿ ತೋರಿಸಿ ಅವರು ಕೇಳಿ­ದರು; ಹ್ಯಾಗಿದೆ ಹಾಡು? ಎಷ್ಟೊಂದು ಚೆನ್ನಾ­ಗಿ­ದೆ­ಯ­ಲ್ಲವೇ? ಆದರೂ ನಮ್ಮ ಹುಡು­ಗ­ರಿಗೆ ಇದು ಬೇಡ. ಅವರು ಬಾಯಿ­ತೆ­ರೆ­ದರೆ ಹಾಡು­ವುದು ಇಂಗ್ಲಿಷ್ ರೈಮು­ಗ­ಳನ್ನೇ. ಜಾನಿ ಜಾನಿ ಯೆಸ್ ಪಪ್ಪಾ... ಈಟಿಂಗ್ ಶುಗರ್ ನೋ ಪಪ್ಪಾ.. ಅದ­ಕ್ಕೊಂದು ಅರ್ಥ­ವಾ­ದರೂ ಇದೆಯಾ? ಅದ­ಕ್ಕಿಂತ ನಮ್ಮ `ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?' ಹಾಡನ್ನು ಅದೇ ರಾಗ­ದಲ್ಲಿ ಹಾಡೋ­ಕ್ಕಾ­ಗ­ಲ್ಲವಾ? ಯಾಕೆ ಇಂಗ್ಲಿಷ್ ಹಾಡೇ ಬೇಕು?
ಉತ್ತ­ರಿ­ಸು­ವುದು ಕಷ್ಟ. ಮಕ್ಕ­ಳಿಗೆ ಇಂಗ್ಲಿಶ್ ಹಾಡೇ ಯಾಕೆ ಇಷ್ಟ­ವಾ­ಗು­ತ್ತದೆ. ಅವ­ರಿ­ಗೇನೂ ಭಾಷೆಯ ಬಗ್ಗೆ ಮೇಲು ಕೀಳು ಭಾವನೆ ಇರು­ವು­ದಕ್ಕೆ ಸಾಧ್ಯ­ವಿ­ಲ್ಲ­ವಲ್ಲ. ಒಂದು ಇಂಗ್ಲಿಶ್ ಹಾಡನ್ನೂ ಒಂದು ಕನ್ನಡ ಹಾಡನ್ನೂ ಒಟ್ಟಿಗೇ ಕಲಿ­ಸಿ­ದರೆ ಮಗು ಯಾಕೆ ಇಂಗ್ಲಿಶ್ ಹಾಡನ್ನೇ ಬೇಗ ಕಲಿ­ತು­ಬಿ­ಡು­ತ್ತದೆ?
ಉತ್ತ­ರಿ­ಸು­ವುದು ಇನ್ನೂ ಕಷ್ಟ. ಯೋಚಿ­ಸಿ­ದಾಗ ಅನೇ­ಕಾ­ನೇಕ ಕಾರ­ಣ­ಗಳು ಹೊಳೆ­ಯುತ್ತಾ ಹೋದವು. ಬಣ್ಣದ ತಗ­ಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ ಎಂದು ಈಗಿನ ಮಗು ಯಾಕೆ ಹಾಡ­ಬೇಕು? ಆ ಮಗು ಯಾವ­ತ್ತಾ­ದರೂ ಬಣ್ಣದ ತಗ­ಡಿನ ತುತ್ತೂ­ರಿ­ಯನ್ನು ನೋಡಿ­ರೋ­ದಕ್ಕೆ ಸಾಧ್ಯವೇ? ತಾನು ನೋಡದೇ ಇರುವ ತುತ್ತೂ­ರಿಯ ಬಗ್ಗೆ ಅದಕ್ಕೆ ಯಾವ ಪ್ರೀತಿ ಇರ­ಲಿಕ್ಕೆ ಸಾಧ್ಯ?
ತುತ್ತೂ­ರಿ­ಯೂ­ದುತ ಕೊಳದ ಬಳಿ, ಕಸ್ತೂರಿ ನಡೆ­ದನು ಸಂಜೆ­ಯಲಿ ಎಂಬ ಸಾಲು­ಗಳು ಇವತ್ತು ಯಾವ ಮಗು­ವಿ­ಗಾ­ದರೂ ಅನು­ಭ­ವಕ್ಕೆ ಬರೋ­ದಕ್ಕೆ ಸಾಧ್ಯವೇ? ಬೆಂಗ­ಳೂ­ರಿ­ನಂಥ ನಗ­ರ­ದಲ್ಲಿ ಸಂಜೆ­ಯೆ­ಲ್ಲಿದೆ? ಕೊಳ­ವೆ­ಲ್ಲಿದೆ? ಇದ್ದರೂ ಕೊಳದ ಬಳಿಗೆ ಹೋಗು­ವು­ದಕ್ಕೆ ಕಸ್ತೂರಿ ಕಂದ­ಮ್ಮ­ಗ­ಳಿಗೆ ಪುರು­ಸೊ­ತ್ತೆ­ಲ್ಲಿದೆ?
ನೋಡುತ್ತಾ ಹೋದರೆ ನಮ್ಮ ಬಹ­ಳಷ್ಟು ಮಕ್ಕಳ ಗೀತೆ­ಗಳು ಹೀಗೇ ಸವ­ಕ­ಲಾ­ಗಿವೆ ಅನ್ನಿ­ಸಿತು. ಕೆಲವು ಉದಾ­ಹ­ರ­ಣೆ­ಗ­ಳನ್ನು ನೋಡೋಣ;
ರೊಟ್ಟಿ ಅಂಗಡಿ ಕಿಟ್ಟಪ್ಪ!
ನಂಗೊಂದು ರೊಟ್ಟಿ ತಟ್ಟಪ್ಪ!
ಪುಟಾಣಿ ರೊಟ್ಟಿ!
ಕೆಂಪಗೆ ಸುಟ್ಟು!
ಒಂಬತ್ತು ಕಾಸಿಗೆ ಕಟ್ಟಪ್ಪ!

ಈಗ ರೊಟ್ಟಿ ಅಂಗಡಿ ಎಲ್ಲಿದೆ? ಅಲ್ಲಿ ಕಿಟ್ಟ­ಪ್ಪ­ನೆ­ಲ್ಲಿ­ದ್ದಾನೆ? ಈಗಿ­ರು­ವುದು ರೋಟಿ ಘರ್. ಅಲ್ಲಿ ರೊಟ್ಟಿ­ಯನ್ನು ತಟ್ಟು­ವು­ದಿಲ್ಲ. ಒಂಬತ್ತು ಕಾಸು ಎಂದರೆ ಕಿಟ್ಟ­ಪ್ಪ­ನಿಗೆ ಅರ್ಥವೇ ಆಗು­ವು­ದಿಲ್ಲ. ಇನ್ನು ಇದನ್ನು ರಾಗ­ವಾಗಿ ಹಾಡುವ ಪುಟ್ಟ­ಪ್ಪ­ನಿಗೆ ಎಲ್ಲಿಂದ ಅರ್ಥ­ವಾ­ಗ­ಬೇಕು?

ಗಂಟೆಯ ನೆಂಟನೆ ಓ ಗಡಿ­ಯಾರ
ಬೆಳ್ಳಿಯ ಬಣ್ಣದ ಗೋಳಾ­ಕಾರ
ಕಿವಿ­ಯನು ಹಿಂಡಲು ನಿನ­ಗದು ಕೂಳು
ಟಿಕ್ ಟಿಕ್ ಗೆಳೆಯಾ.. ಟಿಕ್ ಟಿಕ್ ಟಿಕ್

ಈಗಂತೂ ಕಿವಿ­ಯನು ಹಿಂಡುವ ಗಡಿ­ಯಾ­ರ­ಗಳೇ ಇಲ್ಲ. ಅವು ಟಿಕ್ ಟಿಕ್ ಸದ್ದು ಮಾಡು­ವುದೂ ಇಲ್ಲ. ಹಾಗೇ ಅಜ್ಜನ ಕೋಲಿದು ನನ್ನಯ ಕುದುರೆ ಎಂದು ಹಾಡು­ವು­ದಕ್ಕೆ ಮನೆ­ಯಲ್ಲಿ ಅಜ್ಜನೇ ಇರು­ವು­ದಿಲ್ಲ. ಅಜ್ಜ­ನಿ­ದ್ದರೂ ಅವನು ಕೋಲೂರಿ ನಡೆ­ಯು­ವು­ದಿಲ್ಲ.
ಕುವೆಂಪು ಅಂತೂ ಕನ್ನ­ಡ­ದಲ್ಲಿ ಹರಿ ಬರೆ­ಯು­ವನು; ಕನ್ನ­ಡ­ದಲಿ ಹರ ತಿರಿ­ಯು­ವನು ಎಂದು ಕನ್ನ­ಡದ ಕುರಿ­ತೊಂದು ಪದ್ಯ ಬರೆ­ದರು. ಇವ­ತ್ತಿನ ಮಕ್ಕಳು ಕನ್ನ­ಡವೂ ಬೇಡ, ತಿರಿದು ತಿನ್ನುವ ಸ್ಥಿತಿಯೂ ಬೇಡ ಎಂದು ಇಂಗ್ಲಿಶ್ ಹಾಡಿಗೆ ಮೊರೆ ಹೋಗಿ­ರ­ಲಿಕ್ಕೂ ಸಾಕು.
ಹಾಗಂತ ಇಂಗ್ಲಿಶ್ ನರ್ಸರಿ ರೈಮು­ಗಳ ಪುಸ್ತಕ ತೆಗೆದು ನೋಡಿ­ದರೆ ಅವೇನೂ ಅಷ್ಟು ಖುಷಿ­ಕೊ­ಡು­ವಂತೆ ಏನಿಲ್ಲ. ಹಾಟ್ ಕ್ರಾಸ್ ಬನ್ಸ್.. ಹಾಟ್ ಕ್ರಾಸ್ ಬನ್ಸ್... ಎಂಬ ಹಾಡು ರೊಟ್ಟಿ ಅಂಗಡಿ ಕಿಟ್ಟ­ಪ್ಪ­ನಿ­ಗಿಂತ ಉತ್ತ­ಮ­ವಾ­ದ­ದ್ದೇ­ನಲ್ಲ. ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಗಿಂತ ಮಿನು­ಗೆಲೆ ಮಿನು­ಗೆಲೆ ನಕ್ಪತ್ರ ಎಂಬ ಸಾಲೇ ಆಪ್ತ ಎನಿ­ಸು­ತ್ತದೆ. ಜಾಕ್ ಅಂಡ್ ಜಿಲ್ ವೆಂಟ್ ಅಪ್ ದಿ ಹಿಲ್ ಎಂಬು­ದ­ಕ್ಕಿಂತ ತಿಂಗಳ ಬೆಳ­ಕಿನ ಇರು­ಳಿ­ನೊ­ಳಂ­ದು ಅಮ್ಮನು ಕೆಲ­ಸ­ದೊ­ಳಿ­ರು­ವುದ ಕಂಡು ಗೋಪಿಯೂ ಪುಟ್ಟೂ ಹೊರ­ಗಡೆ ಬಂದು ಬಾವಿಗೆ ಇಣು­ಕಿ­ದ­ರು­ ಎಂಬ ಕಲ್ಪ­ನೆಯೇ ರೋಚ­ಕ­ವಾ­ಗಿದೆ.
ಹಾಗಿ­ದ್ದರೂ ಇಂಗ್ಲಿಶ್ ಹಾಡೇ ಯಾಕೆ ಜನ­ಪ್ರಿಯ.
ಉತ್ತ­ರಿ­ಸು­ವುದು ಕಷ್ಟ.
-2-
ಒಂದು ಭಾಷೆ ಆಡುತ್ತಾ ಆಡುತ್ತಾ ಸವ­ಕ­ಲಾ­ಗು­ತ್ತದೆ. ಆ ಭಾಷೆಯ ಮೂಲಕ ಹೊಸ­ತೇ­ನನ್ನೂ ಹೇಳು­ವು­ದಕ್ಕೆ ಸಾಧ್ಯ­ವಿಲ್ಲ ಎನ್ನಿ­ಸು­ತ್ತದೆ. ಹೊಸ­ದನ್ನು ಹೇಳಿ­ದರೂ ಹಳೆ­ಯ­ದ­ರಂತೆ ಕೇಳಿ­ಸುವ ಜಡತ್ವ ಒಂದು ಭಾಷೆ­ಯನ್ನು ಒಂದು ಹಂತ­ದಲ್ಲಿ ಅಮ­ರಿ­ಕೊ­ಳ್ಳು­ತ್ತದೆ. ಆಗ ಆ ಭಾಷೆಯೇ ತನ್ನನ್ನು ತಿದ್ದಿ ತೀಡಿ­ಕೊಂಡು ಕಾಯ­ಕಲ್ಪ ಮಾಡಿ­ಕೊ­ಳ್ಳ­ಬೇ­ಕಾ­ಗು­ತ್ತದೆ.
ಆದರೆ ಆ ಶಕ್ತಿ ಪ್ರಾದೇ­ಶಕ ಭಾಷೆ­ಗ­ಳಿಗೆ ಅಷ್ಟು ಸುಲ­ಭ­ವಾಗಿ ದೊರ­ಕು­ವು­ದಿಲ್ಲ. ಅದಕ್ಕೆ ಕಾರಣ ಅದನ್ನು ಬಲ್ಲ­ವರ ಸಂಖ್ಯಾ­ಮಿತಿ. ಸಂಸ್ಕೃತ ಮೃತ­ಭಾ­ಷೆ­ಯಾ­ದದ್ದು ಇದೇ ಕಾರ­ಣಕ್ಕೆ. ತನ್ನ ವಿಪ­ರೀತ ಮಡಿ­ವಂ­ತಿ­ಕೆ­ಯಿಂ­ದಾಗಿ ಸಂಸ್ಕೃತ ಮತ್ತು ಕನ್ನಡ ಪದ­ಗಳ ಸಂಧಿ ಕೂಡ ಅಕ್ಪಮ್ಯ ಅಪ­ರಾ­ಧ­ವಾ­ಗಿತ್ತು. ಸಂಸ್ಕೃತ ಭಾಷೆ ತನ್ನನ್ನು ಒಂದಿಷ್ಟೂ ಬಿಟ್ಟು ಕೊಡಲು ಒಪ್ಪ­ಲಿಲ್ಲ. ಹೀಗಾಗಿ ಅದು ಕ್ರಮೇಣ ಬಳ­ಕೆ­ಯಿಂ­ದಲೇ ಮಾಯ­ವಾ­ಯಿತು. ಲ್ಯಾಟಿನ್ ಭಾಷೆಗೆ ಆದದ್ದೂ ಅದೇ. ಆದರೆ ಕನ್ನ­ಡವು ಸಂಸ್ಕೃ­ತ­ದಿಂದ ಪದ­ಗ­ಳನ್ನು ಕಡ ತಂದು­ಕೊಂ­ಡಂತೆ ಇಂಗ್ಲಿಶ್ ಲ್ಯಾಟಿನ್ ಪದ­ಗ­ಳನ್ನು ಹೇಗೆಂ­ದರೆ ಹಾಗೆ ತೆಗೆ­ದು­ಕೊಂ­ಡಿತು. ಹೇಗೆ ಬೇಕೋ ಹಾಗೆ ಬಳ­ಸಿ­ಕೊಂ­ಡಿತು. ಇವತ್ತು ಇಂಗ್ಲಿ­ಷಿಗೆ ಮಡಿ­ವಂ­ತಿ­ಕೆಯೇ ಇಲ್ಲ. ಅದು ಕಂಗ್ಲಿಶ್ ಎಂಬ ಪದ­ವನ್ನು ಯಾವ ಮುಜು­ಗ­ರವೂ ಇಲ್ಲದೆ ಸ್ವೀಕ­ರಿ­ಸ­ಬ­ಲ್ಲದು. ಬಂಗಾ­ಲಿ­ಗಳು ಮಾತಾ­ಡುವ ಇಂಗ್ಲಿ­ಷನ್ನು ಬಿಂಗ್ಲಿಶ್ ಎಂದು ಕರೆ­ಯ­ಬ­ಲ್ಲದು.
ಆ ಮಟ್ಟಿ­ಗಿನ ಔದಾರ್ಯ ಕನ್ನ­ಡಕ್ಕೆ ಸಾಧ್ಯ­ವಾ­ಗಲೇ ಇಲ್ಲ. ಇವತ್ತು ಹಿಂದಿ­ಯಲ್ಲಿ ಬೆರೆ­ತಷ್ಟು ಸಲೀ­ಸಾಗಿ ಕನ್ನ­ಡದ ಜೊತೆ ಇಂಗ್ಲಿಶ್ ಬೆರೆ­ತರೆ ಕನ್ನ­ಡಿ­ಗರು ಸಂಕಟ ಪಡು­ತ್ತಾರೆ. ಸಿಂಪ್ಲಿ ಟಾಕಮಾಡಿ ಅನ್ನುವ ಬೆರಕಿ ಕನ್ನ­ಡ­ವನ್ನು ಬೈಯು­ತ್ತಾರೆ. ಆದರೆ ಸಿಂಪ್ಲಿ ಟಾಕಮಾಡಿ ಅಂತ ಮಾತಾ­ಡು­ವುದೂ ಕನ್ನ­ಡವೇ ಅನ್ನು­ವು­ದಾ­ಗಲೀ, ಅದನ್ನು ನಿರಾ­ಕ­ರಿ­ಸಿ­ದರೆ ತಿರ­ಸ್ಕ­ರಿ­ಸಿ­ದರೆ ಅವರು ಪೂರ್ತಿ ಇಂಗ್ಲಿ­್ಗೆ ಮೊರೆ­ಹೋ­ಗು­ತ್ತಾರೆ ಎನ್ನು­ವು­ದಾ­ಗಲೀ ನಮಗೆ ಹೊಳೆ­ಯು­ವುದೇ ಇಲ್ಲ.
ಇದಕ್ಕೆ ಬಹು­ತೇಕ ನಮ್ಮ ಪತ್ರಿ­ಕೆ­ಗಳ ಭಾಷೆ ಕಾರಣ. ಇಡೀ ಕನ್ನ­ಡ­ನಾ­ಡಲ್ಲಿ ಯಾರೂ ಕೂಡ ರಸ್ತೆ ಅಪ­ಘಾ­ತ­ದಲ್ಲಿ ಮೂವರು ಸ್ಥಳ­ದಲ್ಲೇ ತೀರಿ­ಕೊಂ­ಡರು ಎನ್ನು­ವು­ದಿಲ್ಲ. ರೋಡ್ ಆಕ್ಸಿ­ಡೆಂ­ಟಲ್ಲಿ ಮೂರು ಜನ ಸತ್ತ­ರಂತೆ ಅಂತಾರೆ. ಆದರೆ ಪತ್ರಿಕೆ ಇವ­ತ್ತಿಗೂ ರಸ್ತೆ ಅಪ­ಘಾತ ಎಂದೇ ಬಳ­ಸು­ತ್ತದೆ. ಆಕ್ಸಿ­ಡೆಂ­ಟಲ್ಲಿ ಅನ್ನು­ವು­ದನ್ನು ಕೇಳುತ್ತಾ ಬೆಳೆದ ಮಗು ಪತ್ರಿಕೆ ಓದಲು ಆರಂ­ಭಿ­ಸಿ­ದಾಗ ಅದಕ್ಕೆ ಇಂಗ್ಲಿಶ್ ಪತ್ರಿ­ಕೆಯೇ ಹೆಚ್ಚು ಸುಲಭ ಮತ್ತು ಸಲೀ­ಸಾಗಿ ಕಾಣು­ತ್ತ­ದೆಯೇ ಹೊರತು ಕನ್ನಡ ಪತ್ರಿಕೆ ಅಲ್ಲ.
ಇಂಥ ಅನೇಕ ಉದಾ­ಹ­ರಣೆ ಕೊಡ­ಬ­ಹುದು. ಎಲ್ಲರೂ ನಾಳೆ ಕರೆಂ­ಟಿ­ಲ್ಲ­ವಂತೆ ಎಂದು ಮಾತಾ­ಡಿ­ಕೊ­ಳ್ಳು­ತ್ತಿ­ದ್ದರೆ ನಾಳೆ ವಿದ್ಯುತ್ ಪೂರೈಕೆ ಸ್ಥಗಿತ ಎಂದು ಪತ್ರಿ­ಕೆ­ಗಳು ಬರೆ­ಯು­ತ್ತವೆ.ರೋಡ್ ರಿಪೇರಿ ನಡೀ­ತಿದೆ ಅನ್ನು­ವು­ದನ್ನು ರಸ್ತೆ ದುರ­ಸ್ತಿ­ಕಾರ್ಯ ಎಂದು ಬರೆ­ದರೆ ಹೊಸ­ಗ­ನ್ನ­ಡದ ಹುಡು­ಗ­ರಿಗೆ ಹೇಗೆ ಅರ್ಥ­ವಾ­ಗ­ಬೇಕು?
ಅದು ಅರ್ಥ­ವಾ­ಗ­ಬೇ­ಕಾ­ದರೆ ಇಡೀ ನಾಡಿನ ಭಾಷೆಯೇ ಬದ­ಲಾ­ಗ­ಬೇಕು. ಹಾಗಾ­ಗು­ವು­ದಂತೂ ಸಾಧ್ಯ­ವಿಲ್ಲ. ಕನಿಷ್ಠ ಹಳ್ಳಿ­ಗ­ಳ­ಲ್ಲಾ­ದರೂ ಅದು ಸಾಧ್ಯ ಎನ್ನು­ವುದು ಕೂಡ ಇವತ್ತು ಭ್ರಮೆ. ಯಾಕೆಂ­ದರೆ ಎಲ್ಲಾ ಟೀವಿ ಚಾನ­ಲ್ಲು­ಗ­ಳಲ್ಲಿ ಪ್ರಸಾ­ರ­ವಾ­ಗುವ ಧಾರಾ­ವಾ­ಹಿ­ಗ­ಳದ್ದು ಬೆಂಗ­ಳೂ­ರಿನ ಭಾಷೆಯೇ. ಎಲ್ಲರೂ ಸೀರಿ­ಯ­ಲ್ಲು­ಗ­ಳನ್ನು ನೋಡು­ತ್ತಿ­ದ್ದರೆ ಪತ್ರಿ­ಕೆ­ಗ­ಳಲ್ಲಿ ಆವತ್ತು ಪ್ರಸಾ­ರ­ವಾ­ಗುವ ಧಾರಾ­ವಾ­ಹಿ­ಗಳ ಪ್ರಸ್ತಾಪ ಇರು­ತ್ತದೆ. ಧಾರಾ­ವಾ­ಹಿಯೇ ಸೀರಿ­ಯಲ್ಲು ಅನ್ನು­ವುದು ಮಗು­ವಿಗೆ ಹೇಗೆ ಅರ್ಥ­ವಾ­ಗ­ಬೇಕು?
ಇಂಥದ್ದೇ ಇನ್ನೊಂದು ಹಠ­ಮಾ­ರಿ­ತನ ಕನ್ನಡ ಅಂಕಿ­ಗ­ಳಿಗೆ ಸಂಬಂ­ಧಿ­ಸಿದ್ದು. 639 ಎಂಬು­ದನ್ನು ಕನ್ನಡ ಅಂಕಿ­ಯಲ್ಲಿ ಬರೆದ ಪತ್ರ ಬಂದಾಗ ಅದ­ಕ್ಕಾಗಿ ಕೊರಿ­ಯ್ ಹುಡುಗ ಪಡುವ ಕಷ್ಟ ಅವ­ನಿಗೇ ಗೊತ್ತು. ಆತ ಒಂದು ದಿನ­ವಿಡೀ ಬೀದಿ ಬೀದಿ ಅಲೆದು ಆ ಸಂಖ್ಯೆ ಎಷ್ಟೆಂದು ತಿಳಿ­ಯದೇ ಒದ್ದಾಡಿ ಹಲ­ವಾರು ಮಂದಿ­ಯಿಂದ ಅದನ್ನು ಇಂಗ್ಲಿಶ್ ಅಂಕಿಗೆ ಅನು­ವಾ­ದಿ­ಸಿ­ಕೊಂಡು ಸಂಕ­ಟ­ಪ­ಟ್ಟಿದ್ದ.
ಇವೆಲ್ಲ ಕನ್ನ­ಡದ ಕಷ್ಟ­ಗಳು. ಕನ್ನಡ ಸಿನಿ­ಮಾ­ಗ­ಳಂತೆ ಕನ್ನಡ ಸಾಹಿತ್ಯ ಕೂಡ ಕಷ್ಟ­ದ­ಲ್ಲಿದೆ. ಕಾರಣ ತುಂಬ ಸರ­ಳ­ವಾ­ಗಿದೆ. ಇವತ್ತು ನಾವು ನೋಡುವ ಜಾಹೀ­ರಾ­ತು­ಗ­ಳಲ್ಲಿ ಬರುವ ಮಾಡೆ­ಲ್­ಗ­ಳೆಲ್ಲ ಹಿಂದಿ ಸಿನಿಮಾ ನಟ­ನ­ಟಿ­ಯರು. ನಮಗೆ ಲಕಹಾಕಿ­ಕೊಂಡು ಸ್ನಾನ ಮಾಡಿ ಎಂದು ಉಪ­ದೇ­ಶಿ­ಸು­ವುದು ಐಶ್ವರ್ಯ ರೈ ಅಂದ ಮೇಲೆ ನಾವು ಅವಳ ಸಿನಿ­ಮಾ­ವನ್ನೇ ನೋಡು­ವು­ದಕ್ಕೆ ಹೋಗು­ತ್ತೇವೆ. ನಮ್ಮ ಕನ್ನ­ಡದ ನಟ­ನ­ಟಿ­ಯರು ಯಾವ ಜಾಹೀ­ರಾ­ತ­ಲ್ಲಾ­ದರೂ ಕಾಣಿ­ಸಿ­ಕೊಂ­ಡ­ದ್ದನ್ನು ನೀವು ನೋಡಿ­ದ್ದೀರಾ? `ಆ­ರೋಕ್ಯ' ಹಾಲು ಬಿಟ್ಟರೆ!
ಹಾಗೆ ಟೀವಿ ಧಾರಾ­ವಾ­ಹಿ­ಗ­ಳಲ್ಲಿ ಯಾವ ಪಾತ್ರ­ವಾ­ದರೂ ಕನ್ನ­ಡದ ಕಾದಂ­ಬ­ರಿ­ಗ­ಳನ್ನೋ ಪತ್ರಿ­ಕೆ­ಗ­ಳನ್ನೋ ಓದು­ವು­ದನ್ನು ನೋಡಿ­ದ್ದೀರಾ? ಯಾವು­ದಾ­ದರೂ ಟೀವಿ ಸೀರಿ­ಯ­ಲ್ಲಿನ ಪಾತ್ರ ಎಸ್ ಎಲ್ ಭೆರ­ಪ್ಪ­ನ­ವರ `ಮಂದ್ರ' ಓದಿದೆ ಎಂದಿದ್ದು ನಿಮಗೆ ಗೊತ್ತಾ? ಅವರು ಓದು­ವುದು ಸಿಡ್ನಿ ಶೆಲ್ಡ­ನ್­ನನ್ನೋ, ಹ್ಯಾರಿ ಪಾಟ­ರನ್ನೋ. ಅಂದ ಮೇಲೆ ಅದನ್ನು ನೋಡು­ವ­ವರು ಯಾಕೆ `ಮಂದ್ರ' ಓದು­ತ್ತಾರೆ?
-3-
ಇವೆಲ್ಲ ಪ್ರಶ್ನೆ­ಗ­ಳಲ್ಲ. ಇವ­ತ್ತಿನ ಸ್ಥಿತಿ­ಯನ್ನು ವಿವ­ರಿ­ಸು­ವು­ದಕ್ಕೆ ಇಷ್ಟೆಲ್ಲ ಹೇಳ­ಬೇ­ಕಾ­ಯಿತು. ಕನ್ನ­ಡದ ಓದು­ಗರು ಕಡಿ­ಮೆ­ಯಾ­ಗಿ­ದ್ದಾರೆ. ಕಾವ್ಯ­ವನ್ನೂ ಸಣ್ಣ­ಕ­ತೆ­ಯನ್ನೂ ಕಾದಂ­ಬ­ರಿ­ಗ­ಳನ್ನೂ ಅವರು ಓದು­ತ್ತಿಲ್ಲ ಎಂಬ ಚರ್ಚೆ ಇತ್ತೀ­ಚೆಗೆ ಮುನ್ನೂರ ಹದಿ­ನಾ­ರನೇ ಸಾರಿ ನಡೆ­ಯಿತು. ಪುಸ್ತ­ಕ­ಗಳ ಬೆಲೆ ಗಗ­ನ­ಕ್ಕೇ­ರಿದೆ. ಹೀಗಾಗಿ ಕೊಂಡು ಓದು­ವ­ವ­ರಿಲ್ಲ ಎಂಬ ವಾದ­ವನ್ನು ಹಲವು ಲೇಖ­ಕರು ಮುಂದಿ­ಟ್ಟರು. ಅದೂ ಒಂದು ಅರ್ಥ­ದಲ್ಲಿ ನಿಜವೇ? ರಾಘ­ವೇಂದ್ರ ಪಾಟೀ­ಲರ 141 ಪುಟದ ಕಾದಂ­ಬ­ರಿಯ ಬೆಲೆ 120 ರುಪಾಯಿ.
ಹಾಗಂತ ಬೆಲೆ ಕಡಿಮೆ ಇಟ್ಟರೆ ಪುಸ್ತ­ಕ­ಗಳು ಖರ್ಚಾ­ಗಿ­ಬಿ­ಡು­ತ್ತವೆ ಅನ್ನು­ವುದೂ ಸರಿ­ಯಲ್ಲ. ಕುವೆಂಪು ಬರೆದ `ರಾ­ಮಾ­ಯಣ ದರ್ಶನಂ' ಅವೆನ್ಯೂ ರಸ್ತೆ­ಯಲ್ಲಿ ಹತ್ತು ರುಪಾ­ಯಿಗೆ ಸಿಗು­ತ್ತದೆ. ಕಾರಂ­ತರ ಮೂಕ­ಜ್ಜಿಯ ಕನ­ಸು­ಗಳು ಕಾದಂ­ಬ­ರಿಯ ಇಪ್ಪತ್ತೋ ಇಪ್ಪ­ತ್ತೈದೋ ಪ್ರತಿ­ಗಳು ಮಲ್ಲೇ­ಶ್ವ­ರಂನ ಸೆಕೆಂಡ್ ಹ್ಯಾಂಡ್ ಪುಸ್ತ­ಕ­ದಂ­ಗ­ಡಿ­ಯಲ್ಲಿ ನಾಲ್ಕಾರು ವರು­ಷ­ಗ­ಳಿಂದ ಬಿದ್ದಿದೆ. ಜನ ಎತ್ತಿ ನೋಡಿ ಆಘ್ರಾ­ಣಿಸಿ ಹಾಗೆ ಬಿಟ್ಟು ಹೋಗು­ತ್ತಾರೆ. ಐದು ರುಪಾ­ಯಿಗೆ ಕಾರಂ­ತರ ಜ್ಞಾನ­ಪೀಠ ಪ್ರಶಸ್ತಿ ವಿಜೇತ ಕೃತಿ ಸಿಗು­ತ್ತದೆ ಎಂಬ ಕಾರ­ಣ­ಕ್ಕಾ­ದರೂ ಅದನ್ನು ಮನೆಗೆ ಒಯ್ಯು­ವು­ದಿಲ್ಲ.
ಕಾರಣ ಇಷ್ಟೇ; ಸಹೃ­ದಯ ಓದುವ ವರ್ಗ ಮೂರು ಸೀಳಾ­ಗಿದೆ. ಹಿಂದೆ ಓದದೇ ಇದ್ದ­ವರು ಇಂದೂ ಓದು­ತ್ತಿಲ್ಲ. ಹಿಂದೆ ಓದು­ತ್ತಿ­ದ್ದ­ವ­ರಲ್ಲಿ ಅರ್ಧ­ದಷ್ಟು ಮಂದಿ ಟೀವಿಯ ಮುಂದೆ ಪ್ರತಿ­ಷ್ಠಾ­ಪನೆ ಆಗಿ­ದ್ದಾರೆ. ಇನ್ನರ್ಧ ಮಂದಿ ಇಂಗ್ಲಿಶ್ ಕೃತಿ­ಗ­ಳನ್ನು ಓದು­ವು­ದಕ್ಕೆ ಶುರು­ಮಾ­ಡಿ­ದ್ದಾರೆ. ಮತ್ತೊಂ­ದಷ್ಟು ಕಟ್ಟಾ ಓದು­ಗರು ತೀರಿ­ಕೊಂ­ಡಿ­ದ್ದಾರೆ.
ಇವೆ­ಲ್ಲ­ವನ್ನೂ ಅರ್ಥ­ಮಾ­ಡಿ­ಕೊ­ಳ್ಳದೇ ಓದು­ಗರು ಕಡಿಮೆ ಆಗಿ­ದ್ದಾರೆ ಅನ್ನು­ವುದು ತಪ್ಪಾ­ಗು­ತ್ತದೆ. ಅಂದ ಹಾಗೆ ಸರ್ಕಾರಿ ಅಂಕಿ­ಅಂ­ಶ­ಗಳ ಪ್ರಕಾರ ಓದು­ಗರ ಸಂಖ್ಯೆ ಅತೀವ ಹೆಚ್ಚಾ­ಗಿದೆ. ಯಾಕೆಂ­ದರೆ ಸರ್ಕಾರ ತನ್ನ ಗ್ರಂಥಾ­ಲ­ಯ­ಗ­ಳಿ­ಗಾಗಿ ಕೊಳ್ಳುವ ಪುಸ್ತ­ಕ­ಗಳ ಸಂಖ್ಯೆ ಆರು ಪಟ್ಟು ಹೆಚ್ಚಿದೆ.
ಆದರೆ ಗ್ರಂಥಾ­ಲ­ಯ­ಗಳ ಜಾಗ ಅಷ್ಟೇ ಇದೆ.
-4-
ಮತ್ತೊಂದು ಮಕ್ಕಳ ಗೀತೆ­ಯೊಂ­ದಿಗೆ ಮುಗಿ­ಸೋಣ. ಪಂಜೆ ಮಂಗೇ­ಶರಾಯರು ಬರೆದ ಈ ಸಾಲು­ಗ­ಳನ್ನು ಓದು­ತ್ತಿ­ದ್ದರೆ ಬಾಲ್ಯ­ದಲ್ಲೂ ರೋಮಾಂ­ಚ­ನ­ವಾ­ಗು­ತ್ತಿತ್ತು. ಕಾರಣ; ಅದು ಅರ್ಥ­ವಾ­ಗು­ತ್ತಿತ್ತು. ಅರ್ಥ­ವಾ­ಗು­ವಂತೆ ತಿಳಿಸಿ ಹೇಳು­ವು­ದಕ್ಕೆ ಹೆತ್ತ­ವ­ರಿಗೂ ಮೇಷ್ಟ­ರಿಗೂ ಗೊತ್ತಿತ್ತು.
ಆದರೆ ಇವತ್ತು ಈ ಸಾಲು­ಗಳ ಅರ್ಥ ಹೇಳ­ಬಲ್ಲ ಮೇಷ್ಟ­ರು­ಗಳು ಎಷ್ಟು ಸಿಗು­ತ್ತಾರೆ ಹೇಳಿ­ರಣ್ಣ?

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು
ಕವಣೆ ತಿರಿ­ಕ­ಲ್ಲಾಟ ಹಗ್ಗಕೆ ಸೆಳೆ­ದರೋ ಹೆಬ್ಬಾ­ವನು
ಸವರಿ ಆನೆಯ ಸೊಂಡಿ­ಲಿನ ರಣ­ಕೊಂ­ಬ­ನಾರ್ ಭೋರ್ಗ­ರೆ­ದರೋ
ಸವಿದು ಸವೆ­ಯದ ಸಾಹ­ಸ­ತ್ವದ ಕ್ಪಾತ್ರ ಬೇಟೆಯ ಮೆರೆ­ದರೋ
ಅವರು ಸೋಲ್ ಸಾವ­ರಿ­ಯರು
ಅವರೆ ಕಡು­ಗಲಿ ಗರಿ­ಯರು
ಅವರು ಕೊಡ­ಗಿನ ಹಿರಿ­ಯರು!

ಇದನ್ನು ಓದಿದ ನಂತರ ಭಾರ­ತೀ­ಸುತ ಬರೆದ ಹುಲಿಯ ಹಾಲಿನ ಮೇವು ಕಾದಂ­ಬರಿ ಓದಿ­ದರೆ ಆಗುವ ರೋಮಾಂ­ಚ­ನದ ಬಗ್ಗೆ ಹೇಳು­ವುದು ವ್ಯರ್ಥ.
ನಾವು ಮತ್ತೆ ಬೊಮ್ಮನ ಹಳ್ಳಿಯ ಕಿಂದ­ರಿ­ಜೋ­ಗಿ­ಯಿಂದ ಆರಂ­ಭಿ­ಸ­ಬೇಕು ಅನ್ನಿ­ಸು­ವು­ದಿ­ಲ್ಲವೇ?

12 comments:

Anonymous said...

Preetiya Jogi,
On the lighter side...I thoroughly enjoyed singing all the old times poems and remembered all of them and also the ones like 'Panjarada Pakshi' and 'Neerologirdum Bemarthan UragaPathakam' to the dot..thank you.
We were taught to sing all the poems rather than just narrate in my school and so...even if I want to I will never forget the poems. My all time favourites Ancheya Anna, Thirukana Kanasu, mandyada Sakkare Karkane, Haraku Batteya Thitukananthe...I think these poems are relevant to any age and time...
Now the serious part...yes...it is sad that the kannada poems have been forgotten..and seems to have lost their charm in the present way of life...but let us also make a reality check..how many young mothers have heard the songs themselves to be able to pass it on to the next generation? BTW, "hot cross buns" still makes sense in Europe, as it is prepared and sold to this day.
But my POV is ..if we modify our kannada to incorporate the daily used Kanglish, we would be better off speaking English.

ಗಿರೀಶ್ ರಾವ್, ಎಚ್ (ಜೋಗಿ) said...

ನಿಮ್ಮ ಮಾತು ನಿಜ.
ಆದರೆ ನಿಮ್ಮ ಹೆಸರು ಹೇಳೋದು ಮರೆತಿದ್ದೀರಿ
-ಜೋಗಿ

balcony said...

Jogi,
I enjoyed reading it. It is a good piece. Continue good work. Thank you.
-Parameshwar Gundkal

Anonymous said...

ಥ್ಯಾಂಕ್ಯೂ ಸರ್,
ಎಲ್ಲಿದ್ದೀರಿ, ಹೇಗಿದ್ದೀರಿ. ಸಿನಿಮಾ ಕೆಲಸ ಎಲ್ಲಿಗೆ ಬಂತು.
ಎಲ್ಲೂ ಕಾಣಿಸ್ಕೋತಿಲ್ಲವಲ್ಲ ಸಾಹೇಬರು.
-ಜೋಗಿ

Vikram Hathwar said...

ಬಳಕೆಯಲ್ಲಿರುವ ಭಾಷೆಯ ಸ್ವರೂಪದ ಕುರಿತಾದ ನಿಮ್ಮದೇ ಚಿಂತನೆಯ ಮತ್ತೊಂದು ಮುಖ, ಮತ್ತೊಂದು ಲೇಖನ.

I enjoyed this :-)

Anonymous said...

ಭಾಷೆ ಹಾಗೂ ಓದುಗರ ಬಗ್ಗೆ ವಿಶ್ಲೇಷಣೆ ಚೆನ್ನಾಗಿದೆ.
ಕೆಲವು ಪತ್ರಿಕೆಗಳು ಈಗಲೂ ಹಳೇ ಶಬ್ದಗಳಿಗೆ ಅಂಟಿಕೊಂಡಿದ್ದು ಯಾಕೆ? ಅಂತ ಗೊತ್ತಾಗುತ್ತಿಲ್ಲ. ಪ್ರಮುಖ ದಿನಪತ್ರಿಕೆಯೊಂದರಲ್ಲಿ `ಅಸು ನೀಗಿದವರು' ಎಂಬುದನ್ನು ಬಳಸೋದಿಲ್ಲ. ಅದು ಭಾಷೆಯ ದೃಷ್ಟಿಯಿಂದ ಸರಿ ಅಲ್ಲವಂತೆ. ಆದರೆ ಅದೇ ಪತ್ರಿಕೆಯಲ್ಲಿ ಪ್ರಕಟವಾಗುವ `ವೈಫಲ್ಯತೆ' (ಸರಿಯಾದ ಶಬ್ದ- ವೈಫಲ್ಯ ಅಥವಾ ವಿಫಲತೆ), ಕೌಶಲ್ಯತೆ (ಸರಿ ಶಬ್ದ- ಕುಶಲತೆ ಅಥವಾ ಕೌಶಲ) ಎಂಬೆಲ್ಲ ಪದಗಳನ್ನು ಕಂಡಾಗ ಓದುಗರು ಏನು ಮಾಡಬೇಕು? ಇಂಥ (ಉದಾ: ಇಂಥದ್ದೇ...) ಹಾಗೂ ಇಂತ (ಉದಾ: ಅದಕ್ಕಿಂತ...) ಶಬ್ದಗಳ ಮಧ್ಯೆ ವ್ಯತ್ಯಾಸ ಗೊತ್ತಿಲ್ಲದ ಪತ್ರಕರ್ತರು ಸುದ್ದಿ ಬರೆದಾಗ, ಈ ಗೊಂದಲ ಇನ್ನಷ್ಟು ಹೆಚ್ಚಾಗುತ್ತದೆ!
- ಆತೀಪಿ

ಅನಂತ said...

ಒಂದು ಒಳ್ಳೆಯ ಚಿಂತನೆ ಸರ್..

ನಿಮ್ಮ ಈ ಬರಹ ಓದಿದ ತಕ್ಷಣ ನನಗೆ ನೆನಪಾದದ್ದು, ಕೆಲವು ತಿಂಗಳುಗಳ ಹಿಂದೆ ನಾನು ನೋಡಿದಂತ ಒಂದು ಘಟನೆ. ಜಯನಗರದ ಹೋಟೆಲ್ ಒಂದರಲ್ಲಿ ನನ್ನ ಎದುರುಗಡೆ ಒಂದು ಪುಟ್ಟ ಸಂಸಾರ ಕುತ್ಕೊಂಡಿತ್ತು. ಗಂಡ,ಹೆಂಡತಿ,ಪುಟ್ಟ ಮಗು. ಎನೋ ಕಾರಣಕ್ಕೆ ಆ ಮಗು ಅಳುತಿತ್ತು, "ಅಮ್ಮಾ, ನನಗೆ ಅದು ಬೇಕು...." ಅಂತ.. ಅದಕ್ಕೆ ಅದರ ತಾಯಿ, "what chinnu..? u should not touch those things. we'll take something else outside..!"
ಪಾಪ ಆ ಮಗು ಕನ್ನಡದಲ್ಲಿ ಎನೊ ಕೇಳ್ತ ಇದ್ರೆ, ಕನ್ನಡನೇ ಗೊತ್ತಿಲ್ವೇನೋ ಅನ್ನೋ ಹಾಗೆ ತಾಯಿ ಇಂಗ್ಲಿಷ್ ಅಲ್ಲಿ ಉತ್ತರಿಸುತಿದ್ದಳು. ಇಷ್ಟೊತ್ತಿಗೆ ಆ ಮಗುಗೆ ಬರ್ತಿದ್ದ ಅಲ್ಪ ಸ್ವಲ್ಪ ಕನ್ನಡನೂ ಮರೆತ್ಹೊಗಿರಬಹುದು. ಹೀಗೆ ಕನ್ನಡ ಮಾತಾಡ್ಲಿಕ್ಕೆನೇ ಬಿಡ್ಲಿಲ ಅಂದ ಮೇಲೆ ಇನ್ನು ಆ ಸುಂದರ ಪದ್ಯಗಳೆಲ್ಲಾ ಅವುಗಳ ಕಲ್ಪನೆಗೆ ಸಿಗಲಿಕ್ಕೆ ಹೇಗೆ ಸಾಧ್ಯ??

Anonymous said...

ಜೋಗಿ, `ಪುಣ್ಯಕೋಟಿ'ಯ ಹಾಡು ಕೂಡ ಎಷ್ಟೊಂದು ಮೌಲ್ಯಗಳನ್ನು ಪ್ರತಿಪಾದಿಸುತ್ತಿತ್ತಲ್ಲವೇ? ನನಗಿನ್ನೂ ನೆನಪಿದೆ, ಪುಣ್ಯಕೋಟಿಯ ಹಾಡಿನ ಅರ್ಥವನ್ನು ತಿಳಿ ತಿಳಿಯಾಗಿ ಬಿಡಿಸಿಟ್ಟ ಮೇಷ್ಟ್ರ ಎದುರು ನಾವೆಲ್ಲ ಗಳಗಳನೆ ಅತ್ತಿದ್ದೆವು. ಒಂದರ್ಥದಲ್ಲಿ, ಆಟಕ್ಕಿಂತ ಪಾಠ, ಪ್ರವಚನಗಳೆಲ್ಲ ಯಾಕೆ ಬೇಕು ಎಂದುಕೊಂಡಿದ್ದ ಆ ಪುಟ್ಟ ವಯಸ್ಸಿನಲ್ಲಿ ಪುಣ್ಯಕೋಟಿಯ ಹಾಡು ಬಿರುಗಾಳಿಯನ್ನೆಬ್ಬಿಸಿತ್ತು; ಪಾಠದ ಕುರಿತು ಮಕ್ಕಳಲ್ಲಿ ಆಸಕ್ತಿಯನ್ನೂ ಬೆಳೆಸುವಂಥ ಶಕ್ತಿ ಅಂಥ ಹಾಡುಗಳಲ್ಲಿತ್ತು. ಆದರೆ ಈಗ ಪುಣ್ಯಕೋಟಿಯ ಹಾಡು ಎಲ್ಲಿದೆ? ಸರ್ಕಾರಿ ಕೃಪಾಪೋಷಿತ ಕನ್ನಡ ಶಾಲೆಗಳಿಂದಲೂ ಪುಣ್ಯಕೋಟಿಯ ಹಾಡು ಮಾಯವಾದಂತಿದೆ.
-suresh K.

Anonymous said...

ಗ್ರೇಟ್!
ನಿನ್ನ ಬ್ಲಾಗು ನೊಡುತ್ತಾ ನೋಡುತ್ತಾ ನಾನೂ ನಿನ್ನ ಫಾನ್ ಆಗಿಬಿಟ್ಟೆ ಕಣೋ.
ಮಾರಾಯಾ ಆ ದಿನ ನಾವು ಸ್ಕೂಲಿOದ ಬರುತ್ತಾ ಕೂಟೇಲು ಸಂಕದ ಬಳಿ ಕೂತು ಕತೆ, ಕವನ,ವಿಮರ್ಶೆ ಪತ್ರಿಕೆ ಎಂದೆಲ್ಲಾ ಗಂಟೆಗಟ್ಟಲೆ ಮಾತಾಡುತ್ತಿದ್ದುದು,ನಾನೂ ನೀನೂ ಹಠಕ್ಕೆ ಬಿದ್ದಂತೆ ಎಂದು ಕತೆ ಬರೆದು ಒಬ್ಬರಿಗೊಬ್ಬರು ತೋರಿಸಿ ಪರಸ್ಪರ ವಿಮರ್ಶೆ ಬರೆದು ಹೊಗಳಿಸಿಕೊಂಡು ಪರಮಾನಂದಿತರಾಗುತ್ತಿದ್ದುದು.. ಈಗ ಭರ್ಜರಿ ನೆನಪಾಗುತ್ತಾ ಇದೆ. ಆಗಲೇ ನಾನು ಅಂದುಕೊಂಡಿದ್ದೆ, ನೀನು ಗ್ರೇಟ್ ಆಗುತ್ತೀ ಅಂತ..
ನೀನು ಕೊನೆಗೂ ಅದನ್ನು ನಿಜ ಮಾಡಿದೆ.ಬಡ್ಡ !
-ಕುಂಟಿನಿ

Anonymous said...

Sir,

i remebered an old Kannada rhyme which runs like this:
tiruviri takali
hiriyiri hinji
tiruviri takali
giri giri giri

is the padya correct?? anybody who knows full version?

Anonymous said...

Ittichege marete hoguttiruva keluvu kannada rhymegalannu nenapisikottiddakke thanx. english balasikollade naavenu madalu sadhyavillave? Aa bagge enadru yochisi sir

Anonymous said...

If
Hot cross buns
Hot cross buns
One a penny
Two a penny
Hot cross buns
....
could be murmured by our nursery kids what is wrong with

ರೊಟ್ಟಿ ಅಂಗಡಿ ಕಿಟ್ಟಪ್ಪ
ನನಗೊಂದ್ ರೊಟ್ಟಿ ತಟ್ಟಪ್ಪ
ಪುಟಾಣಿ ರೊಟ್ಟಿ
ಕೆಂಪಗೆ ಸುಟ್ಟಿ

etc....

If penny can be understood, why not ಕಾಸು?