Thursday, July 26, 2007

ಕಾಡ ಬೆಳದಿಂಗಳು


ಸುದೇಷ್ಣೆ ಸ್ಪಾಟಿಗೆ ಬರುವ ಹೊತ್ತಿಗೆ ಆಕೆಯ ಪತ್ರಿಕೆಯ ಫೋಟೋಗ್ರಾಫರು ಫೋಟೋ ತೆಗೆದದ್ದು ಮುಗಿಸಿ ಕೆಮರಾವನ್ನು ಬ್ಯಾಗಿಗೆ ತುರುಕುತ್ತಿದ್ದ. ಅವಳನ್ನು ನೋಡಿದ್ದೇ ತಡ, ಆಗಲೇ ಬರಬೇಕಾಗಿತ್ತು ಅಂತ ಗೊಣಗಿದ. ಅವನು ಮಾತಾಡುವುದೇ ಹಾಗೆ, ಗೊಣಗಿದಂತೆ ಕೇಳಿಸುತ್ತದೆ.

ಸುದೇಷ್ಣೆ ತನ್ನ ಮುಂದೆ ಕರಕಲಾಗಿ ಬಿದ್ದಿದ್ದ ದೇಹಗಳನ್ನೊಮ್ಮೆ ನೋಡಿದಳು. ಯಾವುದನ್ನೂ ಗುರುತು ಹಿಡಿಯುವ ಹಾಗಿರಲಿಲ್ಲ. ಹತ್ತೋ ಇಪ್ಪತ್ತೋ ಹರೆಯದ ಜೀವಗಳು ಕಮರಿ ಹೋಗಿದ್ದವು. ಕೈಕಾಲು ಕಳೆದುಕೊಂಡು ವಿರೂಪಗೊಂಡು ಬಿದ್ದಿದ್ದವು. ಕಣ್ಣಲ್ಲೇ ಎಣಿಸಲು ಯತ್ನಿಸಿದಳು. ಏನು ಮಾಡಿದರೂ ಲೆಕ್ಕ ಸಿಗಲಿಲ್ಲ. ಅಗಾಧ ರಾಕ್ಪಸನೊಬ್ಬ ಅಂಗೈಯಲ್ಲಿ ತಿಕ್ಕಿ ಎಸೆದಂತೆ ದೇಹ ಮಾಂಸದ ಉಂಡೆಯಾಗಿ ಬಿದ್ದದ್ದು ನೋಡಿ ಸುದೇಷ್ಣೆಗೆ ಕರುಳು ಒತ್ತರಿಸಿ ಬಂತು. ಕಣ್ಮುಚ್ಚಿ ಅಲ್ಲಿಂದ ಕಾಲ್ತೆಗೆದಳು.

ನಕ್ಸಲೀಯರ ಬಾಂಬು ತಯಾರಿಕಾ ಕೇಂದ್ರ ಸ್ಪೋಟ. ಮೂವತ್ತಮೂರು ಸಾವು ಎಂದು ಹೆಡ್ಡಿಂಗು ಬರೆದು ತನ್ನ ವರದಿಯನ್ನು ಕಂಪೋಸಿಂಗ್ ಸೆಕ್ಪನ್ನಿಗೆ ಕಳಿಸಿಕೊಡುವ ಹೊತ್ತಿಗೆ ಗಂಟೆ ಹನ್ನೊಂದು ದಾಟಿತ್ತು. ಬ್ಯಾಗು ಜೋಡಿಸಿಕೊಂಡು ಇನ್ನೇನು ರೂಮಿಗೆ ವಾಪಸ್ಸಾಗಬೇಕು ಅನ್ನುವಷ್ಟರಲ್ಲಿ ಸಂಪಾದಕ ಹಿಡಿದುಕೊಂಡ. ಮೂವತ್ತಮೂರು ಸಾವು ಅಂತ ಹೇಳಿದರೆ ಏನು ಹೇಳಿದ ಹಾಗಾಯಿತು. ಆ ಮೂವತ್ತ ಮೂರು ಮಂದಿ ಯಾರ್ಯಾರು, ಎಲ್ಲಿಯವರು ಅನ್ನುವ ವಿವರ ಮುಖ್ಯ. ವಾಟ್ ಆರ್ ಯೂ ಟ್ರೈಯಿಂಗ್ ಟು ಪ್ರೂವ್. ಘಟನೆಯ ಅಗಾಧತೆ ಹೇಳೋಕೆ ಹೊರಟಿದ್ದೀಯಾ ಅಥವಾ ಜನರಿಗೆ ಸಹಾಯ ಮಾಡೋದಕ್ಕೆ ಹೊರಟಿದ್ದೀಯಾ ಅಂತ ದಬಾಯಿಸಿದ. ನಥಿಂಗ್ ಡೂಯಿಂಗ್, ಈ ವರದಿ ನನಗೆ ಬೇಕಾಗಿಲ್ಲ. ಸತ್ತವರ ಪಟ್ಟಿ ಜೊತೆಗೆ ಹೋಗಬೇಕು ಅಂತ ಪಟ್ಟುಹಿಡಿದ.

ಮತ್ತೆ ಸೀಟಿಗೆ ಬಂದು ಕುಳಿತು ಸುದೇಷ್ಣೆ ಇನ್‌ಸಪೆಕ್ಟರ್ ಆಲಿಯನ್ನು ಲೈನಿಗೆ ತೆಗೆದುಕೊಂಡಳು. ಹೇಗಾದರೂ ಮಾಡಿ ಸತ್ತವರ ಹೆಸರು ಕೊಡಿ ಅಂತ ಗೋಗರೆದಳು. ಅವನು ಫೋನನ್ನು ಹೆಡ್ ಕಾನ್ ಸ್ಟೇಬಲ್ ಕುಮಾರಪ್ಪನಿಗೆ ದಾಟಿಸಿದ. ಲಿಸ್ಟೇ ಬಂದಿಲ್ಲ ಅಂತ ಗೊಣಗುತ್ತಾ ಕುಮಾರಪ್ಪ ಕೊನೆಗೊಂದು ಪಟ್ಟಿ ಓದಿ ಹೇಳಿದ. ಆತ ನಿಧಾನವಾಗಿ ಓದಿ ಹೇಳಿದ್ದನ್ನು ಗ್ರಹಿಸುತ್ತಾ ಹನ್ನೆರಡು ನಿಮಿಷದ ಕೊನೆಗೆ ಮೂವತ್ತಮೂರನೇ ಹೆಸರನ್ನು ಸುದೇಷ್ಣೆ ಬರೆದುಕೊಂಡಳು; ಚಂದ್ರಹಾಸ, ಸನ್ನಾಫ್ ಶಿವರಾಮಯ್ಯ,32, ಕೊಪ್ಪ ವಿಲೇಜ್ ಮತ್ತು ಪೋಸ್ಟ್, ಬಾಳೆಹೊನ್ನೂರು ತಾಲೂಕು.

ಕೊಪ್ಪ ಮೂಡಿಗೆರೆ ತಾಲೂಕಲ್ಲಿದೆಯೋ, ನರಸಿಂಹರಾಜಪುರದಲ್ಲಿದೆಯೋ ಚಿಕ್ಕಮಗಳೂರಲ್ಲಿದೆಯೋ ಬಾಳೆ ಹೊನ್ನೂರಲ್ಲಿದೆಯೋ ಅಥವಾ ಬಾಳೆಹೊನ್ನೂರು ತಾಲೂಕು ಕೇಂದ್ರ ಹೌದೋ ಅಲ್ಲವೋ ಅನ್ನುವುದು ಸುದೇಷ್ಣೆಗೂ ಹೊಳೆಯಲಿಲ್ಲ, ಆ ಹೆಡ್ ಕಾನ್ ಸ್ಟೇಬಲ್ ಯೋಚಿಸುವುದಕ್ಕೂ ಹೋಗಲಿಲ್ಲ.******

ಶಿವರಾಮಯ್ಯನಿಗೆ ಸುದ್ದಿ ತಿಳಿದದ್ದು ಮಾರನೆಯ ದಿನ ಮಧ್ಯಾಹ್ನದ ಹೊತ್ತಿಗೆ. ಆ ಊರಿಗೆ ಹೋಗುವ ಪತ್ರಿಕೆಯಲ್ಲಿ ಸತ್ತವರ ಹೆಸರು ಪ್ರಕಟವಾಗಿರಲಿಲ್ಲ. ತಾವು ತೋಡಿದ ಹಳ್ಳಕ್ಕೆ ತಾವೇ ಬಿದ್ದ ದುಷ್ಕರ್ಮಿಗಳು ಅಂತ ಕೆಟ್ಟದಾಗಿ ಹೆಡ್ಡಿಂಗು ಕೊಟ್ಟು, ಮೂವತ್ತೆಂಟು ಮಂದಿ ಕ್ರಿಮಿನ್ ಹಿನ್ನೆಲೆಯ ನರಹಂತಕರು ಸತ್ತಿದ್ದಾರೆ ಅನ್ನುವಂತೆ ಆ ಸುದ್ದಿಯನ್ನು ಆ ಪತ್ರಿಕೆ ಪ್ರಕಟಿಸಿತ್ತು.

ಅದನ್ನು ಓದುವ ಹೊತ್ತಿಗೆ ಶಿವರಾಮಯ್ಯ, ಗೆಳೆಯ ಚಂದ್ರಶೇಖರಯ್ಯನ ಮನೆಯಲ್ಲಿದ್ದರು.

ಚಂದ್ರಶೇಖರಯ್ಯ ನಿವೃತ್ತ ಮೇಷ್ಟರು. ಶಿವರಾಮಯ್ಯ ಕೃಷಿಕ. ಎಂಟು ವರುಷದ ಹಿಂದೆ ಒಂದೆಕರೆ ಹೊಲದಲ್ಲಿ ಅದೆಷ್ಟೋ ಕ್ವಿಂಟಾಲ್ ಬತ್ತ ಬೆಳೆದು ಮಾದರಿ ಕೃಷಿಕ ಅನ್ನಿಸಿಕೊಂಡಿದ್ದರು. ಹನ್ನೆರಡೆಕರೆ ಗದ್ದೆ, ಎಂಟೆಕರೆ ತೆಂಗಿನ ತೋಟವಿತ್ತು. ಆದರೆ ದುಡಿಯುವ ತ್ರಾಣ ಇರಲಿಲ್ಲ. ಆಗಲೇ ಎಪ್ಪತ್ತೆಂಟು ದಾಟಿ, ಎಂಬತ್ತಕ್ಕೆ ಕಾಲಿಟ್ಟಿದ್ದರು ಶಿವರಾಮಯ್ಯ.

ಚಂದ್ರಶೇಖರಯ್ಯನ ವಯಸ್ಸೂ ಹೆಚ್ಚೂ ಕಡಿಮೆ ಅಷ್ಟೇ ಇತ್ತು. ಆದರೆ ಸರ್ವೀಸಿನಲ್ಲಿದ್ದಾಗ ಮೇಲಧಿಕಾರಿಗಳು ಅವರನ್ನು ಕನಿಷ್ಠ ಹದಿನೈದು ಬಾರಿ ಎಲ್ಲೆಲ್ಲಿಗೋ ವರ್ಗಾ ಮಾಡಿದ್ದರು. ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮಕ್ಕೆ ವರ್ಗಾ ಆಗಿ ಹೋದ ವರುಷ ಅವರನ್ನೊಂದು ವಿಚಿತ್ರ ಕಾಯಿಲೆ ಅಮರಿಕೊಂಡಿತು. ಅದನ್ನು ಮಂಗನ ಕಾಯಿಲೆ ಅಂತಲೂ ಮೆದುಳುಜ್ವರ ಅಂತಲೂ ಕರೆದು ವೈದ್ಯರು ತಮ್ಮ ಪರಿಣತಿ ಹೆಚ್ಚಿಸಿಕೊಂಡರು. ಮೂರು ತಿಂಗಳ ಕಾಲ ಎಡೆಬಿಡದೆ ಕಾಡಿದ ದ್ವರ ನಿಂತಾಗ ಚಂದ್ರಶೇಖರಯ್ಯ ಎಲುಬಿನ ಗೂಡಾಗಿದ್ದರು. ಆಮೇಲೆ ಅವರ ದೇಹವನ್ನು ಯಾವ ಆರೈಕೆ ಕೂಡ ಮುಟ್ಟಲಿಲ್ಲ.

ಹಾದಿ ತಪ್ಪುತ್ತಿರುವ ಯುವಕರ ಬಗ್ಗೆ, ಹೆಚ್ಚುತ್ತಿರುವ ನಕ್ಸಲೀಯ ಚಟುವಟಿಕೆಗಳ ಬಗ್ಗೆ, ತೋಟದಲ್ಲಿ ಅತಿಯಾಗುತ್ತಿರುವ ಕಳ್ಳತನಗಳ ಬಗ್ಗೆ ಹರಟುತ್ತಾ ಕುಳಿತಾಗಲೇ ಶಿವರಾಮಯ್ಯನವರನ್ನು ಆ ಸುದ್ದಿ ತಲುಪಿದ್ದು. ಅವರ ಮಗ ಚಂದ್ರಹಾಸ ಬಾಂಬ್ ಬ್ಲಾಸ್ಟ್ ಆಗಿ ಸತ್ತ ಸುದ್ದಿ. ಅಲ್ಲಿಯ ತನಕ ಕೇವಲ ಸುದ್ದಿಯಷ್ಟೇ ಆಗಿದ್ದ ಮಾಹಿತಿ, ಇದೀಗ ಅವರನ್ನು ಅಲ್ಲಾಡಿಸುವ ಸತ್ಯವಾಗಿ ಪರಿಣಮಿಸಿತು. ಒಂದೂ ಮಾತಾಡದೇ ಶಿವರಾಮಯ್ಯ ಎದ್ದು ಮನೆಗೆ ಹೋದರು. ಆಗಷ್ಟೇ ತಿಂಡಿ ತಿನ್ನುತ್ತಿದ್ದ ಹೆಂಡತಿ ವಿಶಾಲಾಕ್ಪಿ ತಿಂಡಿ ತಿನ್ನುವ ತನಕ ಕಾದಿದ್ದು ಅವಳನ್ನು ಹೊರಡಿಸಿಕೊಂಡು ಮಂಗಳೂರಿಗೆ ಹೊರಟರು. ಕೊಪ್ಪದಿಂದ ಮಂಗಳೂರಿಗೆ ಆರು ಗಂಟೆಯ ಹಾದಿ.

*****

ಸತ್ತಿದ್ದು ತನ್ನ ಮಗ ಚಂದ್ರಹಾಸ ಅಲ್ಲ, ಚಂದ್ರಶೇಖರಯ್ಯನ ಮಗ ಸುಮತೀಂದ್ರ ಅನ್ನುವುದು ಮೂರು ದಿನಗಳ ನಂತರ ಶಿವರಾಮಯ್ಯನವರಿಗೆ ಗೊತ್ತಾಯಿತು. ಹಾಗೆ ಗೊತ್ತಾಗುವ ಹೊತ್ತಿಗಾಗಲೇ ಅವರು ಮಗನನ್ನು ಕಳೆದುಕೊಂಡ ದುಃಖ ಅನುಭವಿಸಿ ಆಗಿತ್ತು. ಪೊಲೀಸರು ತಾವು ಆ ರೆಕಾರ್ಡ್ ಬದಲಿ ಮಾಡಿಕೊಳ್ಳುತ್ತೇವೆ ಅಂತ ಹೇಳಿ ಶಿವರಾಮಯ್ಯನವರ ಕೈಯಿಂದ ಸ್ವಲ್ಪ ದುಡ್ಡು ಕೀಳಲಿಕ್ಕೆ ನೋಡಿದರು. ಅದಕ್ಕೆ ಶಿವರಾಮಯ್ಯ ಮಣಿಯಲಿಲ್ಲ. ಯಾರಿಗೂ ಚಿಕ್ಕಾಸೂ ಕೊಡದೇ, ಚಂದ್ರಶೇಖರಯ್ಯನವರಿಗೆ ವಿಷಯ ತಿಳಿಸಿ ಅವರನ್ನೇ ಕಳಿಸುವುದಾಗಿ ಹೇಳಿ ಹೊರಟುಬಿಟ್ಟರು.

ದಾರಿಯಲ್ಲಿ ಬರುವಾಗ ಯೋಚನೆಯಾಯಿತು. ಈ ವಿಚಾರವನ್ನು ಚಂದ್ರಶೇಖರಯ್ಯನಿಗೆ ಹೇಳುವುದಾದರೂ ಹೇಗೆ? ಅವರು ಇದನ್ನು ಹೇಗೆ ಸ್ವೀಕರಿಸಬಹುದು. ತನ್ನಂಥವನಿಗೆ, ಹೆಂಡತಿ ಇರುವ ತನ್ನಂಥವನಿಗೇ ಒಂದು ಕ್ಪಣ ತಡೆದುಕೊಳ್ಳಲಾಗದೇ ಹೋದ ಸಂಗತಿಯನ್ನು ಆತ ಹೇಳಿ ತಾಳಿಕೊಂಡಾನು. ಅಷ್ಟಕ್ಕೂ ಅವನ ಮಗ ಮನೆಗೆ ಬರದೇ ವರುಷಗಳೇ ಕಳೆದಿವೆ. ಅವನು ಎಲ್ಲಿದ್ದಾನೆ ಅನ್ನುವುದೂ ಅಪ್ಪ ಅನ್ನಿಸಿಕೊಂಡವನಿಗೆ ಗೊತ್ತಿಲ್ಲ. ಆ ಅನೂಹ್ಯದಲ್ಲಿ ಅವನು ಇದ್ದುಬಿಡಲಿ. ಮಗ ಎಲ್ಲೋ ಬದುಕಿದ್ದಾನೆ ಅನ್ನುವ ಸಣ್ಣ ಸಂತೋಷವಾದರೂ ಅವನಿಗಿರಲಿ. ಸತ್ತಿದ್ದು ಯಾರೋ ಏನೋ ಅಂತ ಹೇಳಿದರಾಯಿತು ಅಂದುಕೊಂಡರು ಶಿವರಾಮಯ್ಯ. ಮಗ ಬಂದು ಪಿಂಡ ಇಡ್ತಾನೆ ಅಂತ ಕಾಯ್ತಿರುತ್ತೆ ಜೀವ. ಇಂಥ ಸುದ್ದಿ ಮುಚ್ಚಿಡೋದು ನ್ಯಾಯವೇ ಅಂತ ವಿಶಾಲಾಕ್ಪಿ ಆತಂಕದಲ್ಲಿ ಕೇಳಿದ್ದಕ್ಕೆ ಶಿವರಾಮಯ್ಯ ಉತ್ತರ ಕೊಡಲಿಲ್ಲ. ಆದರೆ ಊರಿಗೆ ಬಂದವರು ಸತ್ತದ್ದು ನನ್ನ ಮಗ ಅಲ್ಲ ಅಂತಷ್ಟೇ ಹೇಳಿ ಸುಮ್ಮನಾದರು. ಮತ್ಯಾರು ಅಂತ ಚಂದ್ರಶೇಖರಯ್ಯ ಕೇಳಿದ್ದರೆ ಖಂಡಿತಾ ಸಮಸ್ಯೆ ಆಗುತ್ತಿತ್ತು ಶಿವರಾಮಯ್ಯನಿಗೆ. ಆದರೆ ಚಂದ್ರಶೇಖರಯ್ಯ ಕೇಳಲಿಲ್ಲ.

*****

ಆದರೆ ಆಮೇಲೆ ಚಂದ್ರಶೇಖರಯ್ಯನವರನ್ನು ಭೇಟಿ ಆದಾಗಲೆಲ್ಲ ಶಿವರಾಮಯ್ಯನವರನ್ನು ಒಂಥರದ ಪಾಪಪ್ರಜ್ಞೆ ಕಾಡತೊಡಗಿತು. ಅದಕ್ಕೆ ತಕ್ಕಂತೆ ಚಂದ್ರಶೇಖರಯ್ಯ ಆಗಾಗ ತನ್ನ ಮಗನ ಬಗ್ಗೆ ಹೇಳುತ್ತಿದ್ದರು. ಎಲ್ಲಿದ್ದಾನೋ ಏನೋ, ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ, ಸಂಬಂಧ ದೊಡ್ಡದು ಅನ್ನುತ್ತಿದ್ದರು. ಆಗೆಲ್ಲ ಶಿವರಾಮಯ್ಯ ಆಕಾಶ ನೋಡುತ್ತಾ ಕೂತು ಬಿಡುತ್ತಿದ್ದರು, ನೆಲ ನೋಡಿದರೆ ಎಲ್ಲಿ ಕಣ್ಣಿಂದ ಒಂದು ಹನಿ ಜಾರೀತೊ ಅನ್ನುವ ಭಯಕ್ಕೆಂಬಂತೆ ಅವರು ಆಕಾಶ ನೋಡುತ್ತಿದ್ದರು.

ಶಿವರಾಮಯ್ಯನವರನ್ನು ಜೀವನದ ನಶ್ವರತೆ ಕಾಡಲಾರಂಭಿಸಿದ್ದು ಆಗಲೇ. ತನ್ನ ಮಗ ಸತ್ತದ್ದೇ ಆ ಮನುಷ್ಯನಿಗೆ ಗೊತ್ತಿಲ್ಲ. ಮಗ ಮರಳುತ್ತಾನೆ ಅನ್ನುವ ಭರವಸೆಯಲ್ಲಿ ಅವನು ಬದುಕುತ್ತಿದ್ದಾನೆ. ಅಷ್ಟು ಭರವಸೆ ಅವನಿಗೆ ಸಾಕು. ಮಗ ಒಂದು ವೇಳೆ ಬದುಕಿದ್ದರೂ ವಾಪಸ್ಸು ಬರುತ್ತಿರಲಿಲ್ಲ. ಈಗ ಸತ್ತಿದ್ದರಿಂದ ವಾಪಸ್ಸು ಬರುತ್ತಿಲ್ಲ ಅಷ್ಟೇ. ಆದರೆ ತನ್ನ ಮಗ ಎಲ್ಲೋ ಇದ್ದಾನೆ ಅನ್ನುವ ನಂಬಿಕೆ ಅವನಲ್ಲಿ ವಿಚಿತ್ರ ಜೀವನೋತ್ಸಾಹ ಹುಟ್ಟುಹಾಕಿದೆ.

ತನ್ನ ಮಗನೂ ಅಷ್ಟೇ ತಾನೇ. ಈ ಅಪಾರ ಆಸ್ತಿಯನ್ನು ತನಗೇ ಬಿಟ್ಟು ಹೋಗಿದ್ದಾನೆ. ತೀರ ವೈಫಲ್ಯ ಕಾಡಿದರೆ ಊರಲ್ಲಿ ಆಸ್ತಿಯಿದೆ ಅನ್ನುವ ಭರವಸೆ ಅವನ ಬೆನ್ನಿಗಿದೆ. ಆದರೆ ಅಪ್ಪ ಇದ್ದಾರೆ ಅನ್ನುವ ನೆನಪೂ ಅವನಿಗೆ ಇದ್ದಂತಿಲ್ಲ. ಅವನೂ ತನ್ನ ಪಾಲಿಗೆ ಸತ್ತಂತೆಯೇ. ಮಗ ಬದುಕಿದ್ದಾನೆ ಅನ್ನುವುದು ಕೇವಲ ಸುದ್ದಿ ಮಾತ್ರ. ಅದಕ್ಕಿಂತ ಹೆಚ್ಚಿನ ಮಹತ್ವ ಅದಕ್ಕಿಲ್ಲ.

ಹೀಗೆ ಯೋಚಿಸುತ್ತಿದ್ದಂತೆ ಅವರನ್ನು ಅನಾಥಭಾವ ಕಾಡತೊಡಗಿತು. ಅಂಥದ್ದೇ ಅನಾಥಪ್ರಜ್ಞೆ ಚಂದ್ರಶೇಖರಯ್ಯನನ್ನೂ ಕಾಡುತ್ತದೆ ಅಂತ ಅವರಿಗೆ ಗೊತ್ತಿತ್ತು.ಹೀಗಾಗಿ ಬಿಡುವಿದ್ದಾಗೆಲ್ಲ ಹೋಗಿ ಚಂದ್ರಶೇಖರಯ್ಯನವರ ಜೊತೆ ಮಾತಾಡುತ್ತಿದ್ದರು. ಹಾಗೆ ಮಾತಾಡಲು ಅವರು ಹೋದ ಗುರುವಾರದಂದೇ ಚಂದ್ರಶೇಖರಯ್ಯ ಹಾಗೆ ವರ್ತಿಸಿದ್ದು.

*******

ಚಂದ್ರಹಾಸ ಸತ್ತ ಸುದ್ದಿ ಅದು ಹೇಗೋ ಚಂದ್ರಶೇಖರಯ್ಯನಿಗೆ ಗೊತ್ತಾಗಿಬಿಟ್ಟಿದೆ ಅನ್ನುವುದು ಶಿವರಾಮಯ್ಯನವರಿಗೆ ಗೊತ್ತಾಯಿತು. ಸುಳ್ಳು ಹೇಳಿದ್ದಕ್ಕೆ ಚಂದ್ರಶೇಖರಯ್ಯ ತರಾಟೆಗೆ ತಗೋತಾನೆ ಅಂತ ಖಾತ್ರಿಯಾಗಿ ಗೊತ್ತಿದ್ದ ಶಿವರಾಮಯ್ಯನಿಗೇ ಆಶ್ಚರ್ಯವಾಗುವಂತೆ ಚಂದ್ರಶೇಖರಯ್ಯ ಹೇಳಿದರು;

ಸತ್ತಿದ್ದು ನನ್ನ ಮಗ ನಿಜ. ಆದರೆ ಸಂಕಟ ಪಟ್ಟದ್ದು ನೀನು. ನೀನು ನನ್ನ ಪರವಾಗಿ ನನ್ನ ಮಗನಿಗಾಗಿ ಸಂಕಟಪಟ್ಟೆಯೋ ಅಥವಾ ನಿನ್ನ ಮಗನ ನೆನಪು ಬಂದು ನೋವು ಅನುಭವಿಸಿದೆಯೋ ನನಗೆ ಗೊತ್ತಿಲ್ಲ. ಒಂದು ವಯಸ್ಸು ದಾಟಿದ ನಂತರ ಸತ್ತವನು ನನ್ನ ಮಗನೋ ನಿನ್ನ ಮಗನೋ ಅನ್ನೋದು ಮುಖ್ಯ ಆಗುವುದಿಲ್ಲ. ನಮ್ಮಂಥ ಮುದುಕರ ಪಾಲಿಗೆ ನಮ್ಮ ಮಕ್ಕಳು ಎಂದೋ ಸತ್ತು ಹೋಗಿರುತ್ತಾರೆ. ಅಥವಾ ನಾವು ಅವರ ಪಾಲಿಗೆ ಸತ್ತಿರುತ್ತೇವೆ. ನಾವು ಸತ್ತರೆ ಅವರಿಗೆ ನಿರಾಳ, ಮಕ್ಕಳು ಸತ್ತರೆ ನಮಗೆ ಆತಂಕ. ಪರಸ್ಪರ ಒಬ್ಬರು ಇನ್ನೊಬ್ಬರ ಹಂಗಿನಲ್ಲೋ ಆಧಾರದಲ್ಲೋ ಇಲ್ಲದಿದ್ದರೂ ಸಂಕಟ.

ಇದನ್ನು ಯೋಚಿಸುತ್ತಿದ್ದಾಗ ಒಂದು ವಿಲಕ್ಪಣ ಸಂಗತಿ ಹೊಳೆಯಿತು. ನಾವು ಮಕ್ಕಳನ್ನು ನಮ್ಮ ಮತ್ತೊಂದು ಬಾಲ್ಯ, ಮತ್ತೊಂದು ಯೌವನ ಎಂಬಂತೆ ನೋಡುತ್ತಿರುತ್ತೇವೆ. ಅದೇ ಮಕ್ಕಳ ಪಾಲಿಗೆ ನಾವು ಮುಂದೆಂದೋ ಬರಬಹುದಾಗ ವೃದ್ಧಾಪ್ಯ ಮತ್ತು ಸಾವಿನ ಥರ ಕಾಣಿಸುತ್ತೇವೆ. ನಾವು ಬಾಲ್ಯಕ್ಕೆ ಹಂಬಲಿಸಿದ ಹಾಗೇ, ಅವರು ಸಾವಿನಿಂದ ವೃದ್ದಾಪ್ಯದಿಂದ ನೀಗಿಕೊಳ್ಳಲು ಹೆಣಗುತ್ತಾರೆ.

ನಾನೂ ಆ ವಯಸ್ಸಿನಲ್ಲಿ ಹಾಗೇ ಇದ್ದೆ. ಆದರೆ ಅಪ್ಪ ಸತ್ತ ತಕ್ಪಣ ಅವರ ವಯಸ್ಸು ಮತ್ತು ಆತಂಕ ನನ್ನ ತಲೆಯೊಳಗೆ ಬಂದು ಕೂತುಬಿಟ್ಟಿತು. ಅದನ್ನು ನಾನು ಕಳಚಿಕೊಂಡದ್ದು ನನ್ನ ಮಗನ ಸಾವಿನ ಮೂಲಕ.

******

ಚಂದ್ರಶೇಖರಯ್ಯ ಏನು ಹೇಳುತ್ತಿದ್ದಾರೆ ಅನ್ನುವುದು ಶಿವರಾಮಯ್ಯನಿಗೆ ಅರ್ಥವೇ ಆಗಲಿಲ್ಲ. ಅರ್ಥ ಆಗಲಿಲ್ಲ ಯಾಕೆಂದರೆ ಅವರು ಮಾತಾಡುವುದೇನನ್ನೂ ಇವರು ಕೇಳಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಅಂತ ಇವರು ಮಾತಾಡುತ್ತಿದ್ದರು. ತನಗಲ್ಲ ಅಂತ ಅವರು ಕೂತಿದ್ದರು.

ಮಾತು ಇಬ್ಬರ ಮಧ್ಯೆ ಸಾಯುತ್ತಾ ಬದುಕುತ್ತಾ ಸಾಯುತ್ತಾ ಬದುಕುತ್ತಾ ಸಾಯುತ್ತಾ ಬದುಕುತ್ತಾ...


(ನನ್ನ ಜೋಗಿಕತೆಗಳು ಸಂಕಲನದ ಚಂದ್ರಹಾಸ, 32 ಕತೆ ಇದು. ಇದನ್ನೇ ಲಿಂಗದೇವರು ಸಿನಿಮಾ ಮಾಡಿದ್ದು. ನಾನು ಮತ್ತು ಉದಯ ಮರಕಿಣಿ ಇದನ್ನು ಚಿತ್ರಕತೆ ಮಾಡಿ ಸಂಭಾಷಣೆ ಬರೆದೆವು. ಕಾಡ ಬೆಳದಿಂಗಳು ಈ ವಾರ ಓಷಿಯಾನೋ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಈ ಸಂದರ್ಭದಲ್ಲಿ ಈ ಕತೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ)

12 comments:

Sahana -ಸವೀ said...

ಜೋಗಿ ಸರ್,

ನಿಮ್ಮ ಕಥಾಸಂಕಲನದ ಕತೆಯ ಜೊತೆಗೆ ಇಲ್ಲಿ ಸಿನೆಮಾದ ಸ್ಕ್ರಿಪ್ಟಿನ ಒಂದು ಸಣ್ಣ ಭಾಗವನ್ನಾದರೂ ಹಾಕಿದ್ದರೆ ಚೆನ್ನಾಗಿರುತ್ತಿತ್ತು.

ಗಿರೀಶ್ ರಾವ್, ಎಚ್ (ಜೋಗಿ) said...

ಖಂಡಿತ.
ಸದ್ಯದಲ್ಲೇ ಹಾಕುತ್ತೇನೆ.
ಅದೆಲ್ಲಿದೆಯೋ ಹೇಗಿದೆಯೋ ಹುಡುಕಬೇಕು.
-ಜೋಗಿ

amara said...

ಪಶ್ಚಿಮ ಘಟ್ಟಗಳ ನೈಜ ಬದುಕನ್ನ ಹೆಣೆದಿದ್ದಿರಿ ...... ಇವತ್ತಿನ ಪರಿಸ್ಥಿಯಲ್ಲಿ ತುಂಬಾ ಒಗ್ಗುವ ಸನ್ನಿವೆಸಗಳನ್ನು ಇವು ........ ಇಂಥಾ ಕತೆಗಳನ್ನು ಸೇರಿಸಿ ಸಿನಿಮಾ ಮಾಡಿರೊದು ಒಳ್ಳೆಯ ಪ್ರಯತ್ನ ಖಂಡಿತ ನೋಡುತ್ತೆವೆ.

ಶ್ರೀನಿಧಿ.ಡಿ.ಎಸ್ said...

ಜೋಗೀ ಸಾರ್,
"ಚಂದ್ರಹಾಸ,೩೨" ನ "ಕಾಡ ಬೆಳದಿಂಗಳು" ಮಾಡಿದ್ದು ಯಾಕೆ? ಹೆಸರಲ್ಲೇನಿದೆ ಅಂದು ಬಿಡಬೇಡೀ ಮತ್ತೆ!:)

Anonymous said...

ಜೋಗಿ ಸರ್, ಈ ಸಿನಿಮಾ ನೋಡ್ಬೇಕು ನಾವು, ಯಾವಾಗ, ಎಲ್ಲಿ ಶೋ?
- ಶ್ರೀ

Anonymous said...

ಕಾಡಬೆಳದಿಂಗಳು ಸದ್ಯದಲ್ಲೇ ಬಿಡುಗಡೆ ಆಗಲಿದೆ. ಅದರ ಡಿವಿಡಿ ಹಕ್ಕಿನ ಕುರಿತು ಮಾತುಕತೆ ಕೊನೆಯ ಹಂತದಲ್ಲಿದೆ. ಸದ್ಯದಲ್ಲೇ ಈ ಸಿನಿಮಾ ನೋಡಲು ಲಭ್ಯ ಎಂಬ ಭರವಸೆಯನ್ನು ವೀರೇಶ್ ಮತ್ತು ಲಿಂಗದೇವರು ಕೊಟ್ಟಿದ್ದಾರೆ.
-ಜೋಗಿ

Mallikarjuna said...

Congratulations Sir.ನಿಮ್ಮ ಜೋಗಿ ಕತೆಗಳು ಪುಸ್ತಕ ನಿಮ್ಮ autograph ನೊಂದಿಗೆ ಅಂಕಿತ ದ ಪ್ರಕಾಶ್ ಕಳಿಸಿಕೊಟ್ಟರು ಅದಕ್ಕೂthanks.

krutavarma said...

ನಿಮ್ಮ ಕಥಾಸಂಕಲನ ಓದಿದೆ. ಹಾಯ್ ಬೆಂಗಳೂರಿನಲ್ಲಿ ಬಂದಾಗಲೂ ಓದಿದ್ದೆ. ಒಂದೊಂದು ಬಾರಿ ಓದಿದಾಗಲೂ ಹೊಸ ಅನುಭವ. ಹೆಚ್ಚಿನ ಕಥೆಗಳಲ್ಲಿ ಸಾವೇ ಪ್ರಧಾನ ವಸ್ತು. ಆದರೂ ಭಿನ್ನ. ಸಾವಿಗೆ ಬದುಕಿಗಿಂತಲೂ ಹೆಚ್ಚು ಮುಖಗಳಿವೆಯೇನೋ?
ನಿಮ್ಮ ಕಥೆಗಳನ್ನು ಓದುವಾಗ ಸುಖ, ಸಂತೋಷ, ನೆಮ್ಮದಿ, ಕಾತರ, ದುಗುಡ.. ಹೀಗೇ ಅನೇಕ ಭಾವನೆಗಳ ಕೊಲಾಜ್. ಇದಕ್ಕಿಂತ ಏನು ಬೇಕು.
ಈ ವಾರದ i love u ಕಥೆಯೂ fantastic.
ಹೀಗೇ ಬರಿತಾ ಇರಿ. ನಾವೂ ಓದುತ್ತಾ ಇರ್ತೀವಿ.

Natesh Vitla said...

ತುಂಬಾ ಚೆನ್ನಾಗಿದೆ.ಜನ ಹೆಚ್ಚು ಗಮನಿಸದ ವಿಷಯದ ಬಗ್ಗೆ...ಬರೆದದ್ದು ಚೆನ್ನಾಗಿದೆ. ಒದ್ತಾ ಇದ್ರೆ ನನ್ಗೆ.....ಸಿನೆಮ ನೋಡ್ಬೇಕು ಅಂತಾ ಅನ್ನಿಸ್ತಾ ಇದೆ....!

Sanath said...

ಜೋಗಿ ಸಾರ್,
"ಜೋಗಿ ಕಥೆಗಳು" ಕೊಟ್ಟದ್ದಕ್ಕೆ. thanx.
ಪುಸ್ತಕ ಬಹಳ ಚೆನ್ನಾಗಿದೆ.

ಕಾಡ ಬೆಳದಿಂಗಳಿಗಾಗಿ ಕಾಯುತ್ತಿದ್ದೇನೆ.

hari prasad said...

kathe tumba chennagide.chalana chitra yaavaga thorisuthiri

Harsha said...

geLeyare,
kannaDada para chintane, charche, hot discussions
ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !