Thursday, June 26, 2008

ಬೆಳಗುಜಾವದಿ ಬಾರೋ... ಹರಿಯೆ!

ಅವಳ ಅಡಗುತಾಣದಲ್ಲಿ
ಕುಳಿತ
ಅವನ ಆಶೆಗಳಿಗೆ
ಕ್ಷಣ ಚಿತ್ತ, ಕ್ಷಣ ಪಿತ್ತ.

ಅವಳ ತೋಳಬಂದಿಯಾಗಿ
ಕಳೆದ
ಕ್ಷಣಗಳಿಗೆ
ಚಿಕೂನ್ ಗುನ್ಯಾ.

ಕಾಫಿ ಡೇಯಲ್ಲಿ
ಅವಳನ್ನು ಒಪ್ಪಿಸುವ
ರಮಿಸುವ ಓಲೈಸುವ ಸಾಲುಗಳಿಗಾಗಿ
ತಡಕಾಟ. ಮಾತು ಬಲೆ ಬೀಸಿ
ಪ್ರೀತಿ ಮೀನು
ಹಿಡಿವ ಏಕಾಂತದ ಚಟಕ್ಕೆ
ಕವಿತೆ ದಿವಂಗತ.

ವಿರಹದುರಿಗೆ
ಮಾನಿಟರ್ ಜೋಡಿಸಿ ಕಣ್ಣಿಟ್ಟು
ನೋಡಿದರೆ
ರೇಖೆ ಆರಕ್ಕೇರಿ ಮೂರಕ್ಕಿಳಿದು
ಥಕಥೈ ಕುಣಿದು
ಬದುಕು ಜಟಕಾಬಂಡಿ.

ಹಳೆಯ ಫೋಟೋಗಳಲ್ಲಿ
ಉಳಿದುಹೋದ
ಚೂರುಪಾರು ತಾರುಣ್ಯಕ್ಕೆ
ಗರ್ಭ
ಗುಡಿಯೊಳಗೆ
ಮಂಗಳಾರತಿ.

8 comments:

Anonymous said...

ಕೆನ್ನೆಗುಂಟ ಧುಮ್ಮಿಕ್ಕುತ್ತದೆ
ಕಣ್ಣೀರ ಮಳೆ
ಋತುವಲ್ಲದ ಋತುವಿನಲ್ಲಿ
ಬೀಳುವ ಈ ಮಳೆಗೆ
ಮಳೆಗಾಲದ ಹಂಗಿಲ್ಲ..
ಯಾವತ್ತೋ ಅನುವಾದಿಸಿದ್ದ ಗಾಲಿಬ್ ನ ಈ ಕವಿತೆ ನೆನಪಾಯಿತು..
ಪ್ರೀತಿಯ ರೂಪಕಗಳು ಎಷ್ಟೊಂದು ಅಗಾಧ ಮತ್ತು ಎಷ್ಟೊಂದು ಆಳ!
-ರಾಘವೇಂದ್ರ ಜೋಶಿ.

Anonymous said...

ಹಳೆಯ ಫೋಟೋಗಳಲ್ಲಿ
ಉಳಿದುಹೋದ
ಚೂರುಪಾರು ತಾರುಣ್ಯಕ್ಕೆ
ಗರ್ಭ
ಗುಡಿಯೊಳಗೆ
ಮಂಗಳಾರತಿ.

ಮತ್ತೆ ಮತ್ತೆ ಓದಿಕೊಂಡು ನಗುತ್ತಿದ್ದೇನೆ. ಇಷ್ಟೆಲ್ಲಾ ತುಂಟತನ ಇರೋಕ್ಕೆ ಹೇಗೆ ಸಾಧ್ಯ ಅಂತ ಆಶ್ಚರ್ಯ ಆಗತ್ತೆ. ತೇಜಸ್ವಿ ಹೀಗೆ ಇದ್ರೂ ಅಂತ ಕೇಳಿದ್ದೆ....

ಹಳ್ಳಿಕನ್ನಡ said...

ಮತ್ತೆ ಮಳೆ ಹೊಯ್ಯಲಿದೆ..
ಎಲ್ಲ ನೆನಪಾಗಲಿದೆ,
ಸುಖ ದುಃಖ... ಬಯಕೆ ಭಯ..
ಒಂದೆ.. ಎರಡೆ..
ಜೋಗಿಜೀ, ಯುಆರ್ಎ ಸಾಲುಗಳು ನಿಮಗೆ, ನಿಮ್ಮ ಪದ್ಯಕ್ಕೆ.
-ಸ್ವಾಮಿ

ಮಲ್ಲಿಕಾಜು೯ನ ತಿಪ್ಪಾರ said...

Sir matte nivu blog bareyalu prambisddu gottiralilla... Sumne hage nodatta hodag nim blog matte endinanante ididdu kandu santosh vayitu. Kavite tumba chennagid sir.. ಕಾಫಿ ಡೇಯಲ್ಲಿ
ಅವಳನ್ನು ಒಪ್ಪಿಸುವ
ರಮಿಸುವ ಓಲೈಸುವ ಸಾಲುಗಳಿಗಾಗಿ
ತಡಕಾಟ. ಮಾತು ಬಲೆ ಬೀಸಿ
ಪ್ರೀತಿ ಮೀನು
ಹಿಡಿವ ಏಕಾಂತದ ಚಟಕ್ಕೆ
ಕವಿತೆ ದಿವಂಗತ.

E linegalu tmba hidisitu

ಕಾರ್ತಿಕ್ ಪರಾಡ್ಕರ್ said...

ಸೂಪರ್ ಸರ್...


ಮಾತು ಬಲೆ ಬೀಸಿ
ಪ್ರೀತಿ ಮೀನು
ಹಿಡಿವ ಏಕಾಂತದ ಚಟಕ್ಕೆ
ಕವಿತೆ ದಿವಂಗತ.

ತುಂಬಾ ಇಷ್ಟ ಆಯಿತು

ಆಲಾಪಿನಿ said...

ಏಯ್‌ ಸಕತ್ತಾಗಿದೆ ಕಣ್ರಿ.... ಎಲ್ಲೆಲ್ಲೋ ಏರಿ, ಇಳಿದು, ಹೊಕ್ಕು ಹೊರಗೆ ಬರತ್ವೆ ಸಾಲುಗಳು....

ಶಾಂತಲಾ ಭಂಡಿ (ಸನ್ನಿಧಿ) said...

ಪ್ರೀತಿಯ ಜೋಗಿ...
ಸೊಗಸಾದ ಸಾಲುಗಳು.
"ಪ್ರೀತಿ ಇಲ್ಲದ ಮೇಲೆ" "ಬಂದೇ ಬರತಾವ ಕಾಲ" ಅಂದುಕೊಳ್ಳುತ್ತಾ ಕಾಫಿ ಡೇ ಯಲ್ಲಿ "ಗುಪ್ತಗಾಮಿನಿ"ಯಂತೆ ಹರಿಯುವ ಸಾಲುಗಳು. ಸುಂದರ.

ಅಮರ said...

ಜೋಗಿ ಸಾರ್ "ಕಾಫಿ ಡೇ ಸಾಲು" ಸುದ್ದಿ ತಿಳ್ದು ಖುಷಿ ಆಯ್ತು... ಮುಖಪುಟ ವೈನಾಗೈತೆ... ಯಾವಗ ನಮ್ಮ ಕೈಯ್ಲಿಡುತ್ತಿರಾ ಕಾಯ್ತಿದ್ದೇವೆ... :)

-ಅಮರ