ಅವ್ಯಕ್ತಾದೀನಿ ಭೂತಾನಿ
ವ್ಯಕ್ತಮಧ್ಯಾನಿ ಭಾರತ
ಅವ್ಯಕ್ತನಿಧನಾನ್ಯೇವ
ತತ್ರ ಕಾ ಪರಿದೇವನಾ
ತುಂಬ ಬಳಕೆಯಾದ, ನಮ್ಮ ಜೀವನದ ನಶ್ವರತೆಯನ್ನು ಅತ್ಯಂತ ಗಾಢವಾಗಿ ಹೇಳುವ ಶ್ಲೋಕ ಇದು. ಇದು ಅನೇಕ ಲೇಖಕರ ಕೃತಿಗಳಲ್ಲಿ ಬಂದು ಹೋಗಿವೆ. ಅಡಿಗರ `ಶ್ರೀರಾಮ ನವಮಿಯ ದಿವಸ' ಕವಿತೆಯಲ್ಲಿ ಇದೊಂದು ದಟ್ಟ ರೂಪಕವಾಗಿ ಬರುತ್ತದೆ;
ಶ್ರೀರಾಮನವಮಿಯ ದಿವಸ ರಾಮನಾಮಾಮೃತವೆ
ಪಾನಕ, ಪನಿವಾರ, ಕೋಸಂಬರಿ;
ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ:
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ.
ಇಲ್ಲಿ ಬರುವ ವ್ಯಕ್ತಮಧ್ಯವನ್ನು ಅಡಿಗರು ಭಗವದ್ಗೀತೆಯಿಂದಲೇ ಎತ್ತಿಕೊಂಡದ್ದು. ಆದರೆ,ಉಮರ್ ಖಯ್ಯಾಮ ಭಗವದ್ಗೀತೆಯನ್ನು ಓದಿದ್ದಾನೆ ಅನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ. 1048ರಲ್ಲಿ ಆತ ಪರ್ಶಿಯಾದಲ್ಲಿ ಹುಟ್ಟಿದವನು. ಅವನು ತನ್ನ ರುಬಾಯಿಯೊಂದರಲ್ಲಿ ಹೀಗೆ ಬರೆದಿದ್ದಾನೆ;
There was the door to which I found no key;
There was a veil through which I might not see:
Some little talk awhile of me and Thee
There was- and then no more of Thee and Me.
ಇದನ್ನು ಡಿವಿಜಿ ಅನುವಾದಿಸಿರುವುದು ಹೀಗೆ;
ಹಿಂದೊಂದು ಬಾಗಿಲ್, ಆ ಬೀಗಕ್ಕೆ ಕೈಯಿಲ್ಲ;
ಮುಂದೊಂದು ತೆರೆ. ಅದನೆತ್ತಿ ನೋಡಲಳವಲ್ಲ:
ಈ ಎಡೆಯೊಳೊಂದೆರೆಡು ದಿನ ನೀನು ನಾನೆಂದು
ಹರಟುವೆವು; ಬಳಿಕಿಲ್ಲ ನೀನು ನಾನುಗಳು.
ಅವ್ಯಕ್ತ ಆದ್ಯಂತದ ಮತ್ತು ವ್ಯಕ್ತಮಧ್ಯದ ಕಲ್ಪನೆ ಹಾಗಿದ್ದರೆ ಭರತಖಂಡಕ್ಕಷ್ಟೇ ಸೀಮಿತವಲ್ಲ ಎಂದಂತಾಯಿತಲ್ಲ. ಮತ್ತೀಗ ಕೃಷ್ಣ ಏನನ್ನುತ್ತಾನೆ ಕೇಳೋಣ.
ಆತ್ಮನು ಅವಿನಾಶಿ. ಆದ್ದರಿಂದ ಯಾವ ಪ್ರಾಣಿಗಳ ವಿಚಾರದಲ್ಲೂ ಶೋಕಿಸುವುದು ಸರಿಯಲ್ಲ ಎಂದು ಉಪದೇಶಿಸುತ್ತಲೇ ಕೃಷ್ಣ ಮತ್ತೊಂದು ಮಾತನ್ನೂ ಆಡುತ್ತಾನೆ;
ಕ್ಪತ್ರಿಯನಿಗೆ ಧರ್ಮಯುದ್ಧಕ್ಕಿಂತ ಉತ್ತಮವಾದದ್ದು ಬೇರೊಂದಿಲ್ಲ. ಈ ಯುದ್ಧ ತಾನಾಗಿಯೇ ಬಂದಿದೆ. ಇಚ್ಛಿಸದೇ ಬಂದಿದೆ. ನಿನಗಾಗಿ ಸ್ವರ್ಗ ಬಾಗಿಲನ್ನು ತೆರೆಯುವ ಈ ಯುದ್ಧ ಕೇವಲ ಭಾಗ್ಯಶಾಲಿಗಳಿಗಷ್ಟೇ ಒದಗಿಬರುತ್ತದೆ. ಈ ಧರ್ಮಯುದ್ಧವನ್ನು ನೀನು ಮಾಡದಿದ್ದರೆ ನಿನ್ನ ಸ್ವಧರ್ಮ ಮತ್ತು ಕೀರ್ತಿ ಹಾಳಾಗುತ್ತದೆ. ನೀನು ಪಾಪವನ್ನು ಗಳಿಸುತ್ತೀಯ. ಜನರು ನಿನ್ನನ್ನು ಹೇಡಿ ಎಂದು ಕರೆಯುತ್ತಾರೆ. ಆಗ, ಸಂಭಾವಿತಸ್ಯ ಚಾಕೀರ್ತಿಃ ಮರಣಾದತಿರಿಚ್ಯತೇ- ಸಂಭಾವಿತರಿಗೆ ಅವಮಾನಕ್ಕಿಂತ ಸಾವೇ ಮೇಲು. ನೀನು ಹೆದರಿ ಯುದ್ಧಸ್ಥಾನದಿಂದ ಓಡಿಹೋದೆ ಎಂದು ಶೂರರು ಎಣಿಸುತ್ತಾರೆ ಮತ್ತು ನಿನ್ನ ಶೌರ್ಯವನ್ನು ಮೆಚ್ಚಿದವರೇ ನಿನ್ನನ್ನು ಲಘುವಾಗಿ ಕಾಣುತ್ತಾರೆ.
ಭಗವದ್ಗೀತೆ ಹತ್ತಿರವಾಗುವುದು ಇಲ್ಲೇ. ಅದು ಎರಡು ನೆಲೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಏಕಕಾಲಕ್ಕೆ ಐಹಿಕವನ್ನೂ ಪಾರಮಾರ್ಥಿಕವನ್ನೂ ಬೋಸುತ್ತದೆ. ಹಾಗಲ್ಲದಿದ್ದರೆ ಹೀಗೆ ನಿಮ್ಮನ್ನು ಒಲಿಸಿಕೊಳ್ಳುತ್ತೇನೆ ಎಂದು ಹೊರಡುತ್ತದೆ. ಆತ್ಮದ ಅವಿನಾಶಿತ್ವದಿಂದ ಅರ್ಜುನನಿಗೆ ಕನ್ವಿನ್ಸ್ ಆಗಲಿಲ್ಲ ಎಂದು ಗೊತ್ತಾದವನಂತೆ ಕೃಷ್ಣ ಅಲ್ಲಿಂದ ಥಟ್ಟನೆ ಜನಸಾಮಾನ್ಯರಂತೆ ಮಾತಿಗೆ ತೊಡಗುತ್ತಾನೆ.
ನಿನ್ನ ಸಾಮರ್ಥ್ಯವನ್ನು ಹಳಿಯುತ್ತಾ ಜನ ಆಡಬಾರದ ಮಾತಾಡುತ್ತಾರೆ. ಇದಕ್ಕಿಂದ ಹೆಚ್ಚಿಗೆ ವೇದನೆಯುಂಟು ಮಾಡುವಂಥದ್ದು ಮತ್ತೇನಿದೆ? ಯುದ್ಧದಲ್ಲಿ ಸತ್ತರೆ ವೀರಸ್ವರ್ಗ ಸೇರುತ್ತಿ, ಗೆದ್ದರೆ ರಾಜ್ಯಯೋಗ ನಿನ್ನದಾಗುತ್ತದೆ. ಆದ್ದರಿಂದ ; ಯುದ್ಧಾಯ ಕೃತನಿಶ್ಚಯಃ.
`ಏನಾಗುತ್ತೋ ಆಗ್ಲಿ. ನಾನಿದ್ದೀನಿ ಕಣೋ..ಜಮಾಯಿಸೋ ಮಚ್ಚಾ' ಎನ್ನುವ ಗೆಳೆಯನಂತೆ ಕೃಷ್ಣ ಪುಸಲಾಯಿಸುವುದನ್ನು ಕಂಡಾಗ ನಗು ಬರುತ್ತದೆ. ಹೇಗಾದರೂ ಮಾಡಿ ಯುದ್ಧಕ್ಕೆ ಅರ್ಜುನನನ್ನು ಎಳೆದು ತರಬೇಕು ಎಂಬ ಏಕೈಕ ಉದ್ದೇಶದಿಂದ ಅರ್ಥವಿಲ್ಲದ ಸಾಮಾನ್ಯ ವಾದಗಳನ್ನೂ ಕೃಷ್ಣ ಮುಂದಿಡುತ್ತಾನೆ.
ಸುಖದುಃಖೇ ಸಮೇ ಕೃತ್ವಾ
ಲಾಭಾಲಾಭೌ ಜಯಾಜಯೌ
ತತೋ ಯುದ್ಧಾಯ ಯುಜ್ಯಸ್ವ
ನೈವಂ ಪಾಪಮವಾಪ್ಸಸಿ
ಸುಖದುಃಖ, ಲಾಭನಷ್ಟ ಮತ್ತು ಸೋಲುಗೆಲುವುಗಳನ್ನು ಸಮನಾಗಿ ಕಂಡು ಯುದ್ಧಕ್ಕೆ ಸಿದ್ಧನಾಗು. ಆಗ ನಿನ್ನನ್ನು ಪಾಪ ಮೆತ್ತಿಕೊಳ್ಳುವುದಿಲ್ಲ ಅನ್ನುತ್ತಾನೆ ಕೃಷ್ಣ. ಸೋಲುಗೆಲುವು ಮುಖ್ಯವಲ್ಲ, ಭಾಗವಹಿಸುವುದಷ್ಟೇ ಮುಖ್ಯ ಎಂಬ ತೀರಾ ಸವಕಲಾದ ಹೇಳಿಕೆಯಂತೆ ಇದು ಇವತ್ತು ಕಾಣಿಸುತ್ತದೆ. ಆದರೆ ಒಮ್ಮೆ ಯುದ್ಧಕ್ಕೆ ಒಪ್ಪಿಕೊಂಡರೆ ಅರ್ಜುನನನ್ನು ಹೇಗೆ ಗೆಲ್ಲುವಂತೆ ಮಾಡಬೇಕು ಅನ್ನುವುದು ತನಗೆ ಗೊತ್ತಿದೆ ಎಂಬ ಆತ್ಮವಿಶ್ವಾಸದಿಂದಲೇ ಈ ಮಾತುಗಳನ್ನು ಕೃಷ್ಣ ಆಡುತ್ತಾನೆ.
ಇವಿಷ್ಟೂ ಮಾತು ಸಾಂಖ್ಯಯೋಗದಲ್ಲಿ ಬರುತ್ತವೆ. ಇಲ್ಲಿಂದಾಚೆಗೆ ಕೃಷ್ಣ ಅರ್ಜುನ ಕಂಡು ಕೇಳರಿಯದ ಮಾತುಗಳ ಮೂಲಕ ಅವನನ್ನು ಬದಲಾಯಿಸುವುದಕ್ಕೆ ಯತ್ನಿಸುತ್ತಾನೆ. ಆತ ಹೇಳುತ್ತಾನೆ. ಇದುವರೆಗೆ ನಾನು ಬೋಧಿಸಿರುವುದು ಸಾಂಖ್ಯವನ್ನು ಕುರಿತ ವಿವೇಕ. ಈಗ ಯೋಗದ ಕುರಿತು ಹೇಳುತ್ತೇನೆ. ಈ ರಹಸ್ಯವನ್ನು ತಿಳಿಯುವ ಮೂಲಕ ನೀನು ಕರ್ಮದ ಕಟ್ಟನ್ನು ಕಳಚಿಕೊಳ್ಳುತ್ತಿ. ಈ ಯೋಗಭ್ಯಾಸದಿಂದ ನಷ್ಟವೇನೂ ಆಗುವುದಿಲ್ಲ. ಅದರಲ್ಲಿ ಏನೊಂದು ಹಾನಿಯೂ ಇಲ್ಲ. ಸ್ವಲ್ಪ ಅಭ್ಯಾಸ ಮಾಡಿದರೂ ಅದು ದೊಡ್ಡ ಭಯದಿಂದ ನಿನ್ನನ್ನು ಪಾರು ಮಾಡುತ್ತದೆ ಎಂದು ಕೃಷ್ಣ ಕಸ್ತೂರಿ ಮಾತ್ರೆ ಮಾರುವವನ ಧಾಟಿಯಲ್ಲಿ ಹೇಳುತ್ತಾನೆ. ಭಗವದ್ಗೀತೆಗೆ ಈ ಓಲೈಸುವ ಧಾಟಿ ಬೇಕಿತ್ತೇ ಎಂದು ಅನೇಕ ಸಾರಿ ಅನುಮಾನ ಮೂಡುತ್ತದೆ.
ಇದ್ದಕ್ಕಿದ್ದಂತೆ ವೇದಾಚರಣೆಗಳ ಕುರಿತ ಟೀಕೆಯೂ ಇಲ್ಲಿ ಕಾಣಿಸಿಕೊಳ್ಳುತ್ತದೆ. ಅವಿವೇಕಿಗಳು ವೇದಗಳಲ್ಲಿನ ಕರ್ಮಭಾಗವನ್ನೇ ಶ್ರೇಷ್ಠ ಎಂದು ಪ್ರಶಂಸಿಸುತ್ತಾರೆ. ಸ್ವರ್ಗವನ್ನು ಗುರಿಯಾಗಿಟ್ಟುಕೊಂಡು ಆಶೆಗಳಿಂದ ತುಂಬಿದವರಾಗಿ ಕರ್ಮಗಳಿಗೆ ಪ್ರತಿಫಲ ಅಪೇಕ್ಪಿಸುತ್ತಾ ವಿವಿಧ ಕಾರ್ಯಗಳನ್ನು ಮಾಡುತ್ತಾರೆ. ಅವರ ಆಸಕ್ತಿಯೇನಿದ್ದರೂ ಯೋಗ ಮತ್ತು ಸಂಪತ್ತಿನಲ್ಲಿ. ಆದ್ದರಿಂದ ಅವರ ಮನಸ್ಸು ಸ್ಥಿರವಾಗಿರುವುದಿಲ್ಲ. ಹೀಗಾಗಿ ಅವರಿಗೆ ತೃಪ್ತಿಯೂ ಇಲ್ಲ.
ಇಲ್ಲಿ ಸ್ವರ್ಗದ ಆಶೆಯಿಂದ ಕರ್ಮಾಸಕ್ತರಾಗುತ್ತಾರೆ ಎಂದು ಜರೆಯುವ ಕೃಷ್ಣ, ಇದಕ್ಕೂ ಮೊದಲು ಅರ್ಜುನನಿಗೇ ಸ್ವರ್ಗದ ಆಮಿಷ ಒಡ್ಡಿರುತ್ತಾನೆ ಅನ್ನುವುದನ್ನು ಗಮನಿಸಿ;
ಹತೋ ವಾ ಪ್ರಾಪ್ಸ್ಯಸಿ ಸ್ವರ್ಗ್.. ಸತ್ತರೆ ಸ್ವರ್ಗ ಸೇರುತ್ತೀಯೆ ಎಂದವನ ಬಾಯಲ್ಲೇ ಕಾಮಾತ್ಮಾನಃ ಸ್ವರ್ಗಪರಾ ಜನ್ಮಕರ್ಮಫಲಪ್ರದಾ್.. ಎಂಬ ಮಾತೂ ಬರುತ್ತದೆ ಅಂದ ಮೇಲೆ ಯಾವುದು ಸತ್ಯ? ಯಾವುದು ಮಿಥ್ಯ?
ಅಥವಾ ಎರಡೂ ಮಾತುಗಳನ್ನೂ ಬೇರೆ ಬೇರೆ contextನಲ್ಲಿಟ್ಟುಕೊಂಡು ನೋಡಬೇಕೇ?
Friday, July 13, 2007
Subscribe to:
Post Comments (Atom)
11 comments:
ರಾಮಾಯಣ ಬಲು ಬೋರು. ಆದರೆ ಮಹಾಭಾರತ ವರ್ಣರಂಜಿತ. ರಾಮಾಯಣದಲ್ಲಾದರೋ ಎಲ್ಲರೂ `ದೇವತೆ'ಗಳ ಥರ. ಅದರೆ ಮಹಾಭಾರತದಲ್ಲಿನ ಪಾತ್ರಗಳು ನಮ್ಮ ಸುತ್ತಲಿನ ಜನರಂತೆ...!
ಕೃಷ್ಣನ ವ್ಯಾವಹಾರಿಕ ಮಾತನ್ನು ಕಸ್ತೂರಿ ಮಾತ್ರೆ ಮಾರುವವನಿಗೆ ಹೋಲಿಸಿದ್ದು ಖುಷಿ ಕೊಟ್ಟಿತು. ಹಾಗೆ ನೋಡಿದರೆ, ದೇವರು ಇರೋದೇ ನಮ್ಮ ಥರ. ಸುಮ್ ಸುಮ್ಮನೇ ಆತನಿಗೆ ದೈವೀ ಹಾಗೂ ಪಾಶವೀ ಶಕ್ತಿ ಕೊಟ್ಟಿದ್ದಾರೆ ಅಷ್ಟೇ.
ಅದೇನೇ ಇರಲಿ, `ಭಗವದ್ಗೀತೆ'ಯನ್ನು ಇಷ್ಟು ಸರಳವಾಗಿ ತಿಳಿಸಿದ್ದಕ್ಕೆ ಥ್ಯಾಂಕ್ಸ್.
- ಆತೀಪಿ
I am sorry to say that Jogi wrote this piece with out "Hutta Kattade chitta".
It brings together all the impressive quotes from various sources (easy to do) and presents it trying to make a "chamak" out of it. The subject and the surfacial thoughts pretends deep thinking. Adga's poem is quoted with out applying poetic understanding.
"Vyaktha Madhya" is qualitfied by "Uriva Shabhari" in the poem and it is suggesting the passionate involvement in living for a cause. Jogi is missing that part of passionate involvement suggested by Adiga which ultimately in the poems creates stregth to do the penance of involvement to reach that level of concentration.... which is Huttakattuva Chitta as a passion to pursuit knolwdge and Jnana and creative process as part of mission of life.
S.R.Vijayshankar
ವಿಜಯಶಂಕರ್ ಮಾತು ನಿಜ,
ಆದರೆ, ನಾನು ಅಡಿಗರ ಕಾವ್ಯವನ್ನು ವಿಮರ್ಶಿಸಲು ಹೊರಟಿರಲಿಲ್ಲ. ಭಗವದ್ಗೀತೆಯ ವಿಮರ್ಶೆಯೂ ಇದಲ್ಲ. ವ್ಯಕ್ತಮಧ್ಯ ಅನ್ನುವುದು ನಮ್ಮನ್ನು ಹೇಗೆ ಕಾಡುತ್ತದೆ ಅನ್ನುವುದು ಸುಮ್ಮನೆ ಹೊಳೆಯಿತು. ಅದನ್ನು ಒಂದು ಲಹರಿಯಲ್ಲಿ ಹಿಡಿಯಲು ಯತ್ನಿಸಿದ್ದೇನೆ ಅಷ್ಟೇ.
ನಿಮ್ಮ ವಿವರಣೆ ಮತ್ತು ವಿಶ್ಲೇಷಣೆ ಚೆನ್ನಾಗಿದೆ. ಅಡಿಗರ ರಾಮನವಮಿಯ ದಿವಸ ಕವಿತೆಯ ಬಗ್ಗೆ ಇನ್ನಷ್ಟು ವಿವರವಾಗಿ ಬರೆದುಕೊಡುತ್ತೀರಾ, ಪ್ಲೀಸ್. ನನಗೂ ಆ ಕವಿತೆಯ ಆಳ ಅಗಲಗಳನ್ನು ಸ್ಪರ್ಶಿಸುವ ಆಶೆ.
ಪ್ಲೀಸ್, ವಿಜಯಶಂಕರ್.
-ಜೋಗಿ
Jogi,
Sorry for using English. I will learn the use of Kannada software soon.
You are really good in throwing the ball back to my court.
I was trying to provoke you to write more and in depth on Adiga.
Now you have tempted me to write on Adiga.
I am working on my next book "Odanaata" a collection of 26 pen pictures.
Soon after that I will take this assignment given by you.
S.R.Vijayashankar
ಹುತ್ತ ಕಟ್ಟದೆಯು ಕೆತ್ತಬೇಕಾದ ಅನಿವಾರ್ಯತೆ ಚಿತ್ತಕ್ಕೆ ಬಂದಾಗ ಅರ್ಜುನ ಯುದ್ಧಭೂಮಿಗೆ ಇಳಿಯಲೇಬೇಕಾಯಿತು... ಅದು ಜೀವನ.
- ಶ್ರೀ
ಗೆಳೆಯರೇ,
ನಾವೇಕೆ ಜಗಳಗಂಟರಾಗುತ್ತಿದ್ದೇವೆ? ವೈಯಕ್ತಿಕ ನಿಂದನೆ, ಟೀಕೆ, ಟಿಪ್ಪಣಿ ಬೇಡ. ಅಂಥದ್ದೇ ನಡೆಯುವುದಾದರೆ ಕಾಮೆಂಟ್ ಸೆಕ್ಷನ್ನನ್ನೇ ನಿಲ್ಲಿಸಿಬಿಡುವುದು ಒಳ್ಳೆಯದು. ಅದೂ ತಪ್ಪೆನಿಸಿದರೆ ಬ್ಲಾಗ್ ಮುಚ್ಚಿಬಿಡೋಣ. ಯಾರನ್ನೋ ಬೈಯುವುದಕ್ಕೆ ಯಾರ ಮೇಲಿನ ಸಿಟ್ಟನ್ನೋ ತೋರಿಸಿಕೊಳ್ಳುವುದಕ್ಕೆ ಯಾರದೋ ಮಾನಹಾನಿಗೆ ಗೋಡೆ ಬರಹ ಆಗುವುದಕ್ಕೆ ಈ ಬ್ಲಾಗ್ ಗೆ ಇಷ್ಟವಿಲ್ಲ, ಕ್ಷಮಿಸಿ. ಅಂಥ 3 ಕಾಮೆಂಟುಗಳು ಕಸದಬುಟ್ಟಿ ಸೇರಿವೆ.
-ಜೋಗಿ
ಸರ್,
ವೈಯಕ್ತಿಕ ನಿಂದನೆಯ ಅಭಿಪ್ರಾಯಗಳನ್ನು ಮುಲಾಜಿಲ್ಲದೆ ಕಿತ್ತುಹಾಕಿ. ಆದರೆ ಬ್ಲಾಗ್ ನಿಲ್ಲಿಸುವ, ಪ್ರತಿಕ್ರಿಯೆಗಳನ್ನು ನಿಲ್ಲಿಸುವ ಮಾತನಾಡಬೇಡಿ... ಪ್ಲೀಸ್
edeega nijavaada sanskrathika samvaada.....
Post a Comment