Thursday, April 5, 2007

ಬೇಂದ್ರೆಯ ಕೀರ್ತಿ ಮತ್ತು ಕನ್ನ­ಡದ ಪುಣ್ಯ-ಕೋಟಿ

ಕುರ್ತ­ಕೋಟಿ
ಕುರಿತು
ಪದ್ಯ ಬರೆ­ಯಲು
ನನ್ನ ಷರತು;
ಕುಮಾ­ರ­ವ್ಯಾ­ಸನ
ಹೊರತು
ಇತರ ಕವಿ­ಗಳ
ಅವರು
ಮರೆತು
ಬಿಡಲಿ.
ಕುಕಾ­ವ್ಯ­ವೃ­ಕ್ಷಕ್ಕೆ
ಅವ­ರಾ­ಗಲಿ
ಕೊಡಲಿ

ಕುರ್ತ­ಕೋಟಿ
ಎಂಥ ಮೆಮರಿ!
ಟೇಪ್ ­ರಿ­ಕಾ­ರ್ಡ್
ಅನ್ ­ನೆ­ಸ­ಸರಿ

ಕುರ್ತ­ಕೋಟಿ
ನಿಮ­ಗಾರು ಸಾಟಿ?


ಕುರ್ತ­ಕೋ­ಟಿ­ಯ­ವರ `ಉ­ರಿಯ ನಾಲಗೆ' ಸಂಕ­ಲ­ನಕ್ಕೆ ಕೇಂದ್ರ ಸಾಹಿತ್ಯ ಅಕಾ­ಡೆಮಿ ಪ್ರಶಸ್ತಿ ಬಂದಾಗ ವೈಯನ್ಕೆ ಹೀಗೆ ಬರೆ­ದಿ­ದ್ದರು. ವೈಯ­ನ್ಕೆ­ಯ­ವರ ಪ್ರಕಾರ ಕೀರ್ತಿ­ಮನಿ ಅಂದರೆ ಲೇಖ­ಕನ ಎರಡು ಬಹು­ಮುಖ್ಯ ಅಗ­ತ್ಯ­ಗಳು; ಕೀರ್ತಿ ಮತ್ತು ಮನಿ ಅಂದರೆ ಕ್ರೆಡಿಟ್ ಮತ್ತು ಕ್ಯಾಶ್. ಕೀರ್ತಿ­ನಾಥ ಕುರ್ತ­ಕೋ­ಟಿ­ಯ­ವರು `ಆ ಮನಿ' ಬರೆದ ನಂತರ ವೈಯನ್ಕೆ ಅವ­ರನ್ನು ಕೀರ್ತಿ­ಮನಿ ಎಂದೇ ಕರೆ­ಯು­ತ್ತಿ­ದ್ದರು.
-2-
ಕೀರ್ತಿ­ನಾಥ ಕುರ್ತ­ಕೋ­ಟಿ­ಯ­ವ­ರನ್ನು ಪದ­ಗ­ಳಲ್ಲಿ ಹಿಡಿ­ದಿ­ಡು­ವುದು ಕಷ್ಟ. ಅವರು ಬರೆದ ಕೃತಿ­ಗಳ ಮೂಲ­ಕವೇ ಪ್ರಕ­ಟ­ವಾ­ಗ­ಬೇ­ಕಾ­ದ­ವರು ಅವರು. ಯಾಕೆಂ­ದರೆ ಕುರ್ತ­ಕೋ­ಟಿ­ಯ­ವ­ರನ್ನು ಹತ್ತಿ­ರ­ದಿಂದ ಕಂಡ­ವರು ಕಡಿಮೆ. ಗೆಳೆ­ಯರ ಗುಂಪಿ­ನಲ್ಲಿ ಅವರು ಒಬ್ಬ­ರಾ­ಗಿ­ದ್ದರೂ ಗುಂಪಿ­ನಿಂದ ಹೊರಗೇ ಉಳಿ­ಯು­ವು­ದ­ರಲ್ಲೇ ಅವರ ಸಂತೋ­ಷ­ವಿತ್ತು. ಅವರ ಹತ್ತಿರ ಮಾತಾ­ಡು­ವು­ದ­ಕ್ಕಾ­ಗಲೀ ಹಂಚಿ­ಕೊ­ಳ್ಳು­ವು­ದ­ಕ್ಕಾ­ಗಲೀ ಸಾಹಿ­ತ್ಯೇ­ತರ ಸಂಗ­ತಿ­ಗಳೇ ಇರ­ಲಿಲ್ಲ ಎಂಬ ಭಯ ಅವರ ಓರ­ಗೆಯ ಅನೇ­ಕ­ರನ್ನು ಕಾಡಿ­ದಂ­ತಿತ್ತು. ಅದ­ಕ್ಕಿಂತ ಹೆಚ್ಚಾಗಿ ಕುರ್ತ­ಕೋ­ಟಿ­ಯ­ವ­ರಿ­ಗಿದ್ದ ಪಾಂಡಿತ್ಯ ಎಲ್ಲ­ರನ್ನು ಮೌನ­ವಾ­ಗಿ­ಸು­ತ್ತಿತ್ತೋ ಏನೋ? ಯಾವ ಬರ­ಹ­ಗಾ­ರರೂ ಅವರ ಹತ್ತಿರ ಉಡಾ­ಫೆ­ಯಿಂದ ಮಾತಾ­ಡು­ವುದು ಸಾಧ್ಯ­ವಿ­ರ­ಲಿಲ್ಲ. ಕಾರಂ­ತರ ಜೊತೆ ಮಾತಾ­ಡು­ವ­ವನ ಅಜ್ಞಾನ ಹೇಗೆ ಬಹು­ಬೇಗ ಬಯ­ಲಾ­ಗು­ತ್ತಿತ್ತೋ, ಕುರ್ತ­ಕೋಟಿ ವಿಚಾ­ರ­ದಲ್ಲೂ ಅಷ್ಟೇ. ಹೀಗಾಗಿ ಅವ­ರನ್ನು ತುಂಬ ಮೆಚ್ಚು­ತ್ತಿ­ದ್ದ­ವರೂ ಅವ­ರನ್ನು ದೂರ­ದ­ಲ್ಲಿ­ಟ್ಟಿ­ದ್ದರು.
ಸಾಹಿ­ತ್ಯದ ಎಲ್ಲ ಪ್ರಕಾ­ರ­ಗಳ ಬಗ್ಗೆ ಯಾವ ಪೂರ್ವ­ಗ್ರ­ಹ­ಗ­ಳನ್ನೂ ಇಟ್ಟು­ಕೊ­ಳ್ಳದೇ ಬರೆದ ಕುರ್ತ­ಕೋ­ಟಿ­ಯ­ವರ ಬಗ್ಗೆ ಬಹು­ತೇಕ ಸಾಹಿ­ತಿ­ಗ­ಳಿ­ಗೊಂದು ಪೂರ್ವ­ಗ್ರ­ಹ­ವಿತ್ತು. ಅದೆಂ­ದರೆ; ಕುರ್ತ­ಕೋಟಿ ಎಷ್ಟೇ ಉದಾ­ರ­ವಾ­ಗಿ­ದ್ದರೂ ಆಳ­ದಲ್ಲಿ ಅವರು ಬೇಂದ್ರೆಗೆ ನಿಷ್ಠ. ಅದ­ಕ್ಕಿಂತ ಆಳ­ದಲ್ಲಿ ಕುಮಾ­ರ­ವ್ಯಾ­ಸ­ನಿಗೆ ನಿಷ್ಠ. ಹೀಗಾಗಿ ಕುರ್ತ­ಕೋಟಿ ಅವ­ರದ್ದು ಪತಿ­ವ್ರತಾ ಪ್ರತಿಭೆ; ಒಬ್ಬನೇ ಒಬ್ಬ ಕವಿಗೆ ಅದು ನಿಷ್ಠ­ವಾ­ಗಿತ್ತು ಎಂದ­ವ­ರಿ­ದ್ದರು. ಕುರ್ತ­ಕೋ­ಟಿ­ಯ­ವರ ಈ ಏಕ­ನಿ­ಷ್ಠೆಯ ಕುರಿತು ಸಾಹಿತ್ಯ ವಲ­ಯದ ಅನೇ­ಕ­ರಲ್ಲಿ ಅಸ­ಮಾ­ಧಾ­ನ­ಗ­ಳಿ­ದ್ದವು. ಹೀಗಾ­ಗಿಯೇ ಕುರ್ತ­ಕೋ­ಟಿ­ಯ­ವ­ರಷ್ಟು ವಿಸ್ತಾ­ರ­ವಾದ ಓದಾ­ಗಲೀ, ವಿಮ­ರ್ಶಾ­ಪ್ರ­ತಿ­ಭೆ­ಯಾ­ಗಲೀ ಇಲ್ಲದ ಜಿ. ಎಸ್. ಆಮೂ­ರ­ರನ್ನು ನವ್ಯ ಮತ್ತು ನವೋ­ದ­ಯದ ಸಾಹಿ­ತ್ಯ­ವ­ಲಯ ಅಪಾ­ರ­ವಾಗಿ ಮೆಚ್ಚಿ­ಕೊಂ­ಡಿತು.
ಕುರ್ತ­ಕೋಟಿ ಬರೆದ ವಿಮ­ರ್ಶೆ­ಗ­ಳನ್ನು ಸಾಹಿತ್ಯ ಕೃತಿ­ಯಷ್ಟೇ ಪ್ರೀತಿ­ಯಿಂದ ಓದು­ವುದು ಸಾಧ್ಯ­ವಿತ್ತು. ಒಂದು ಕೃತಿ­ಯನ್ನು ಓದಿ ಅದ­ಕ್ಕೊಂದು ಪರ್ಯಾ­ವ­ರ­ಣ­ವನ್ನು ದಕ್ಕಿ­ಸಿ­ಕೊ­ಡುವ ಶಕ್ತಿ ಅವರ ಬರ­ಹ­ಗ­ಳಿ­ಗಿತ್ತು. ಕೆ. ಎಸ್. ನರ­ಸಿಂ­ಹ­ಸ್ವಾ­ಮಿ­ಯ­ವರ ಮೈಸೂರ ಮಲ್ಲಿಗೆ ಕವಿ­ತೆ­ಗ­ಳನ್ನು ಓದಿದ ನಂತರ ಇಲ್ಲಿಯ ಯಾವ ಅನು­ಭ­ವ­ಗಳೂ ರೂಪ­ಕ­ವಾ­ಗಲು ಬಯ­ಸು­ವು­ದಿಲ್ಲ ಎಂದು ಹೇಳು­ತ್ತಲೇ ಅದೇ ಲೋಕ­ಪ್ರಿ­ಯ­ತೆಗೆ ಕಾರ­ಣವೂ ಇರ­ಬ­ಹುದು ಎಂದು ಊಹಿ­ಸು­ತ್ತದೆ ಕುರ್ತ­ಕೋಟಿ ಪ್ರತಿಭೆ. ಅಂಥ ವಿಶ್ಲೇ­ಷಣೆ ಅವ­ರಿ­ಗಷ್ಟೇ ಸಾಧ್ಯ. ಕಣ­ವಿ­ಯ­ವರ ಕಾವ್ಯ­ದಲ್ಲಿ ನಿಸರ್ಗ ಎಂದೂ ನಿರ್ಜ­ನ­ವಾ­ಗು­ವು­ದಿಲ್ಲ ಎನ್ನು­ವು­ದನ್ನು ಗುರು­ತಿ­ಸಿ­ದ­ವರೂ ಅವರೇ. ಸು. ರಂ. ಎಕ್ಕುಂ­ಡಿ­ಯ­ವರ ಬಕು­ಲದ ಹೂವು­ಗಳ ಬಗ್ಗೆ ಬರೆ­ಯುತ್ತಾ ಕವಿ­ತೆಯ ವಿವ­ರ­ಗಳ ಕಾರ್ಯ­ವಿ­ಧಾನ ಬಹು­ಮು­ಖಿ­ಯಾ­ಗು­ವು­ದನ್ನೂ ಬಹು­ಮು­ಖಿ­ಯಾ­ದದ್ದು ಓಮ್ಮು­ಖ­ವಾ­ಗು­ವು­ದನ್ನೂ ಕುರ್ತ­ಕೋಟಿ ತೋರಿ­ಸಿ­ದ್ದಾರೆ.
ಹಾಗೇ, ಅನಂ­ತ­ಮೂ­ರ್ತಿ­ಯ­ವರ ಕತೆಯ ಶಿಲ್ಪ ಅವು ಹೇಳುವ ಸಂಗ­ತಿ­ಗಳ ಸಂವ­ಹ­ನದ ಅನು­ಕೂ­ಲ­ತೆ­ಗಾ­ಗಿಯೇ ನಿರ್ಮಾ­ಣ­ವಾ­ದಂ­ತಿ­ರು­ತ್ತವೆ, ಆದರೆ ಕಲೆ­ಗಾ­ರಿ­ಕೆ­ಯಲ್ಲಿ ಅವು ಸಹ­ಜ­ವಾ­ಗಿ­ರು­ವಂತೆ ಕಾಣು­ತ್ತವೆ ಎಂದಿ­ದ್ದಾರೆ ಕುರ್ತ­ಕೋಟಿ. ಈ ನಿಲು­ವನ್ನು ಅವರು ಶಂಕರ ಮೊಕಾಶಿ ಪುಣೇ­ಕ­ರರ ಕಾದಂ­ಬ­ರಿಯ ಬಗ್ಗೆ ಬರೆ­ಯು­ವಾಗ ಮತ್ತೊಂದು ಅರ್ಥ­ದಲ್ಲಿ ಬಳ­ಸು­ತ್ತಾರೆ. ಬೇಂದ್ರೆಯ ಒಂದು ಕವಿ­ತೆ­ಯ­ನ್ನಿ­ಟ್ಟು­ಕೊಂಡು ಕನ­ಕ­ದಾ­ಸ­ನಿಗೂ ಬೇಂದ್ರೆಗೂ ಇರುವ ಬೌದ್ಧಿಕ ಕೊಂಡಿ­ಯನ್ನು ಕುರ್ತ­ಕೋಟಿ ಕಂಡು­ಹಿ­ಡಿ­ಯು­ತ್ತಾರೆ.
-3-
ಕುರ್ತ­ಕೋಟಿ ಧಾರ­ವಾ­ಡದ ಗೆಳೆ­ಯರ ಗುಂಪಿನ ಬಗ್ಗೆ ಬರೆ­ದಿ­ದ್ದಾರೆ. ಯಾವು­ದನ್ನೂ ಬರೆ­ದಿ­ಟ್ಟು­ಕೊ­ಳ್ಳದೇ ಎಲ್ಲ­ವನ್ನೂ ನೆನ­ಪಿ­ಸಿ­ಕೊಂಡು ಬರೆ­ಯ­ಬಲ್ಲ ಶಕ್ತಿ ಅವ­ರಿ­ಗಿತ್ತು. ಎಂಕೆ ಇಂದಿ­ರಾರ ತುಂಗ­ಭದ್ರಾ ಕಾದಂ­ಬ­ರಿ­ಯನ್ನು ಅವರು ಪೂರ್ತಿ­ಯಾಗಿ ಮರು­ಸೃ­ಷ್ಟಿ­ಸಿ­ದ­ವರು ಅನ್ನು­ವುದು ಅವರ ಬಗ್ಗೆ ಇರುವ ಅಸಂ­ಖ್ಯಾತ ಪ್ರತೀ­ತಿ­ಗ­ಳಲ್ಲಿ ಒಂದು. ರಾವ್ ­ಬ­ಹ­ದ್ದೂ­ರರ ಗ್ರಾಮಾ­ಯ­ಣ­ವನ್ನೂ ಕುರ್ತ­ಕೋಟಿ ತಿದ್ದಿ ಬರೆ­ದ­ದ್ದ­ರಿಂ­ದಲೇ ಅಷ್ಟು ಸೊಗ­ಸಾಗಿ ಮೂಡಿ ಬಂದಿದೆ ಅನ್ನು­ವುದು ಅಂಥದ್ದೆ ಇನ್ನೊಂದು ಕತೆ. ಅವ­ನ್ನೆಲ್ಲ ಕುರ್ತ­ಕೋಟಿ ಎಂದೂ ಹೇಳಿ­ಕೊಂ­ಡ­ದ್ದಿಲ್ಲ. ಇನ್ನೊ­ಬ್ಬರ ಖ್ಯಾತಿ­ಯಲ್ಲಿ ಅವ­ರೆಂದೂ ಪಾಲು ಬೇಡಿ­ದ­ವರೂ ಅಲ್ಲ.
ಬೇಂದ್ರೆ­ಯ­ವರೂ ಅವರ ಖಾಸಾ ಗೆಳೆ­ಯರೂ ಇದ್ದ ಗೆಳೆ­ಯರ ಗುಂಪಿನ ಬಗ್ಗೆ, ಅಲ್ಲಿ ನಡೆದ ಚರ್ಚೆ­ಗಳ ಬಗ್ಗೆ ಕುರ್ತ­ಕೋಟಿ ಬರೆ­ದಿ­ದ್ದಾರೆ. ಮನೋ­ಹರ ಗ್ರಂಥ­ಮಾ­ಲೆ­ಗಾಗಿ ಅವರು ಸಂಪಾ­ದಿ­ಸಿದ ನಡೆದು ಬಂದ ದಾರಿ ಮತ್ತು ಅದಕ್ಕೆ ಬರೆದ ಪ್ರಸ್ತಾ­ವ­ನೆ­ಗಳು, ಪುಟ­ಬಂ­ಗಾ­ರಕ್ಕೆ ಬರೆದ ಮುನ್ನು­ಡಿ­ಗಳೂ ಸಾಕಷ್ಟು ವಿದ್ವ­ತ್ಪೂ­ರ್ಣ­ವಾ­ಗಿವೆ.
ಕುರ್ತ­ಕೋ­ಟಿ­ಯ­ವ­ರನ್ನು ನಾವು ಇಷ್ಟ­ಪ­ಡ­ಬೇ­ಕಾ­ದದ್ದು ಕೃತಿ­ವಿ­ಮ­ರ್ಶೆ­ಗಿಂತ ಹೆಚ್ಚಾಗಿ ಸಂಸ್ಕೃತಿ ವಿಮ­ರ್ಶೆಗೆ. ಇವತ್ತು ಕೃತಿ ವಿಮ­ರ್ಶೆಯ ಹೆಸ­ರಲ್ಲಿ ಪ್ರಬಂ­ಧ­ಗಳೂ ಸೋಷಿ­ಯಾ­ಲ­ಜಿಯ ಪಾಠ­ಗಳೂ, ಸಂವಾ­ದ­ಗಳೂ ಪ್ರಕ­ಟ­ವಾ­ಗು­ತ್ತಿವೆ. ಡಿ. ಆರ್. ನಾಗರಾಜರ ಸಂಸ್ಕೃತಿ ವಿಮ­ರ್ಶೆ­ಯನ್ನು ಹೊರತು ಪಡಿ­ಸಿ­ದರೆ ಅಷ್ಟು ಒಳ­ನೋ­ಟ­ಗ­ಳುಳ್ಳ ಟಿಪ್ಪ­ಣಿ­ಗ­ಳನ್ನು ಮತ್ಯಾರೂ ಬರೆ­ದಿಲ್ಲ. ಉಳಿ­ದ­ವರು ಬರೆ­ಯು­ತ್ತಿ­ರುವ ನೆಲೆ­ಗ­ಟ್ಟನ್ನೂ ಅವರು ಕಂಡು­ಕೊಂಡ ಸ್ಪೂರ್ತಿಯ ಮೂಲ­ವನ್ನೂ ನಾವು ಸುಲ­ಭ­ವಾಗಿ ಹುಡು­ಕಿ­ಬಿ­ಡ­ಬ­ಹುದು. ಎಡ್ವರ್ಡ್‌ ಸೇಡ್ ನ ಓರಿ­ಯಂ­ಟ­ಲಿ­ಸ­ಮ್ಮಿ­ನಿಂದ ಹಿಡಿದು ಕೀಥ್ ಥಾಮ­ಸ್ಸನ ರಿಲಿ­ಜಿ­ಯ್ ಅಂಡ್ ಡಿಕ್ಲೈನ್ ಆಫ್ ಮ್ಯಾಜಿ­ಕ್ ತನಕ ಪಾಶ್ಚಾ­ತ್ಯ­ರಿಂದ ಪ್ರತಿ­ಯೊ­ಬ್ಬರೂ ಎಷ್ಟೆಷ್ಟು ಪ್ರೇರಣೆ ಪಡೆ­ದು­ಕೊಂ­ಡಿ­ದ್ದಾರೆ ಅನ್ನು­ವು­ದನ್ನು ತೋರಿ­ಸ­ಬ­ಹುದು. ಹಾಗೆ ನೋಡಿ­ದರೆ ನಲು­ವತ್ತು ವರು­ಷ­ಗಳ ಹಿಂದೆ ಅನಂ­ತ­ಮೂರ್ತಿ ಬರೆದ ` ಇಂಗ್ಲಿಶ್ ಬ್ರಾಹ್ಮಣ ಕನ್ನಡ ಶೂದ್ರ' ಕೂಡ ಪರೋ­ಕ್ಪ­ವಾಗಿ ಪ್ರೇರಣೆ ಪಡ­ಕೊಂಡ ಬರ­ಹವೇ ಆಗಿದೆ.
ಆದರೆ, ಕುರ್ತ­ಕೋ­ಟಿ­ಯ­ವರ `ಮ­ಜ್ಜಿಗೆ ರಾಮಾ­ಯಣ'ದಂಥ ಲೇಖ­ನ­ಗಳು ಸ್ವಭಾ­ವತಃ ಇಂಥ ಯಾವ ಬಾಹ್ಯ­ಪ್ರೇ­ರ­ಣೆ­ಗಳೂ ಇಲ್ಲದ ಬರಹ. ಅದು ಹೀಗೆ ಶುರು­ವಾ­ಗು­ತ್ತದೆ;


ಆ ದೌ ರಾಮ­ತ­ಪೋ­ವ­ನಾ­ಭಿ­ಗ­ಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾ­ಷಣಂ
ವಾಲೀ ನಿರ್ದ­ಲನಂ ಸಮುದ್ರ ತರಣಂ ಲಂಕಾ­ಪುರೇ ದಾಹನಂ
ಪಶ್ಚಾ­ದ್ರಾ­ವಣ ಕುಂಭ­ಕರ್ಣ ಹನನಂ ಏತ­ದ್ಧಿ ರಾಮಾ­ಯಣಂ.


ಇದು ರಾಮಾ­ಯ­ಣದ ಕತೆ­ಯನ್ನು ಸಂಗ್ರ­ಹ­ವಾಗಿ ಹೇಳುವ ಪದ್ಯ ಎನ್ನು­ತ್ತಲೇ ಕುರ್ತ­ಕೋಟಿ ಇದರ ಹಿಂದಿ­ರುವ ಒಂದು ಕತೆ­ಯನ್ನೂ ವಿವ­ರಿ­ಸು­ತ್ತಾರೆ.


ಅದು ಹೀಗಿದೆ;
ಒಬ್ಬ ಬ್ರಾಹ್ಮಣ ಒಬ್ಬ ಮುದು­ಕಿಯ ಮನೆಗೆ ಹೋಗಿ ಮಜ್ಜಿ­ಗೆ­ಯನ್ನು ಕೇಳಿ­ದ­ನಂತೆ. ಅವ­ಳಲ್ಲಿ ಮಜ್ಜಿಗೆ ಇತ್ತು. ಆದರೆ ಯಾರೋ ಕೇಳಿ­ದ­ರೆಂದು ಹಾಗೆಯೇ ಕೊಡಲು ಮನ­ಸ್ಸಿ­ರ­ಲಿಲ್ಲ. ಅವ­ನಿಂದ ಏನಾ­ದರೂ ಕೆಲ­ಸ­ವಾ­ದರೆ ಕೊಡು­ತ್ತೇನೆ ಎಂದು­ಕೊಂಡು ರಾಮಾ­ಯ­ಣದ ಕತೆ ಹೇಳು­ವಂತೆ ಹೇಳಿ­ದ­ಳಂತೆ. ಅವನು ಈ ಪದ್ಯ­ವನ್ನು ಹೇಳಿ­ದ­ನಂತೆ. ರಾಮಾ­ಯ­ಣದ ಕತೆ ತುಂಬ ಚಿಕ್ಕ­ದಾ­ಯಿತು ಎಂದಿ­ದ್ದಕ್ಕೆ ಅವನು ಮಜ್ಜಿ­ಗೆಗೆ ತಕ್ಕ ರಾಮಾ­ಯಣ ಎಂದ­ನಂತೆ.


ಕುರ್ತ­ಕೋಟಿ ಬರೆ­ಯು­ತ್ತಾರೆ;


`ಒಂದು ಕಾವ್ಯ­ಕೃತಿ ಮತ್ತು ಅದು ಹುಟ್ಟಿ­ಬಂದು ಪ್ರಯೋ­ಜ­ನ­ವಾ­ಗ­ಬೇ­ಕಾದ ಸಮಾಜ- ಇವು­ಗಳ ಸಂಬಂ­ಧ­ವನ್ನು ಈ ಸಂಗ­ತಿಯ ಮೂಲಕ ಅರಿ­ಯ­ಬ­ಹು­ದಾ­ಗಿದೆ. ಆರು­ಕಾಂ­ಡ­ಗ­ಳಲ್ಲಿ ವಿಸ್ತಾ­ರ­ವಾಗಿ ಹಬ್ಬಿದ್ದ ರಾಮಾ­ಯಣ ಮಹಾ­ಕಾ­ವ್ಯದ ಪ್ರಯೋ­ಜ­ನ­ವನ್ನು ಸಮ­ಕಾ­ಲೀನ ಸಮಾಜ ಯಾವ ರೀತಿ­ಯಲ್ಲಿ ಪಡ­ಕೊಂ­ಡಿತು ಎಂಬು­ದರ ಬಗ್ಗೆ ದಾಖ­ಲೆ­ಗಳು ನಮಗೆ ದೊರೆ­ತಿಲ್ಲ. ಉತ್ತ­ರ­ಕಾಂ­ಡ­ದಲ್ಲಿ ಸ್ವತಃ ರಾಮನೇ ರಾಮಾ­ಯ­ಣ­ವನ್ನು ಲವ­ಕು­ಶರ ಬಾಯಿ­ಯಿಂದ ಕೇಳು­ತ್ತಾನೆ. ರಾಮ ತನ್ನ ಮಕ್ಕ­ಳೊಂ­ದಿಗೆ ಪುನ­ರ್ಮಿ­ಲ­ನ­ವನ್ನು ಪಡೆ­ದದ್ದು ರಾಮಾ­ಯಣ ಕಾವ್ಯದ ಮೂಲ­ಕ­ವಾ­ಗಿಯೇ ಎಂಬುದು ನಮಗೆ ಅದೇ ಕಾವ್ಯ­ದಿಂದ ಗೊತ್ತಾ­ಗು­ತ್ತದೆ. ರಾಮಾ­ಯ­ಣದ ಕತೆ­ಯನ್ನು ಸ್ವತಃ ರಾಮನೇ ಕೇಳುವ ಪ್ರಸಂಗ ಅನೇಕ ರೀತಿ­ಯಲ್ಲಿ ಅರ್ಥ­ಪೂ­ರ್ಣ­ವಾ­ಗಿದೆ. ರಾಮಾ­ಯ­ಣದ ಕತೆ­ಗಾ­ರ­ನಂತೆ ರಾಮಾ­ಯ­ಣದ ಶ್ರೋತೃವೂ ಕತೆಯ ಮಹ­ತ್ವದ ಅಂಗ­ವಾ­ಗು­ತ್ತಾನೆ. ವಾಲ್ಮೀಕಿ ಮತ್ತು ರಾಮರ ನಡುವೆ ರಾಮಾ­ಯ­ಣದ ಕತೆ ಇದೆ. ರಾಮ ರಾಮ­ಯ­ಣದ ನಾಯ­ಕನೂ ಹೌದು, ಆ ಕತೆಯ ಮೊದಲ ಶ್ರೋತಾ­ರನೂ ಹೌದು.'

ಮೇಲೆ ಹೇಳಿ­ದಂ­ತೆಯೇ ನಾಲ್ಕು ಚರ­ಣ­ಗಳ ಒಂದು ಶ್ಲೋಕ­ದಲ್ಲಿ ಮಹಾ­ಭಾ­ರ­ತ­ವನ್ನೂ ಹೇಳು­ವು­ದುಂಟು. ಕುರ್ತ­ಕೋ­ಟಿ­ಯ­ವರ ಮಜ್ಜಿಗೆ ರಾಮಾ­ಯ­ಣದ ವಿಶ್ಲೇ­ಷ­ಣೆ­ಯನ್ನು ಇದಕ್ಕೂ ವಿಸ್ತ­ರಿ­ಸ­ಬ­ಹು­ದಾ­ಗಿದೆ. ಹೀಗೆ ರಾಮಾ­ಯ­ಣದ ಬಗ್ಗೆ ಅವರು ಬರೆ­ದಿ­ದ್ದನ್ನು ಓದಿ­ದಾಗ ಮಹಾ­ಭಾ­ರ­ತದ ಒಂದು ಶ್ಲೋಕ ನೆನ­ಪಾ­ಗು­ವಂತೆ ಮಾಡ­ಬಲ್ಲ ಶಕ್ತಿ ಕುರ್ತ­ಕೋ­ಟಿ­ಯ­ವರ ಬರ­ಹ­ಗ­ಳಿ­ಗಿತ್ತು.
ಈಗ ಆ ಮಹಾ­ಭಾ­ರ­ತದ ಕುರಿತ ಶ್ಲೋಕ ನೋಡಿ. ಎರ­ಡಕ್ಕೂ ಇರುವ ಸಾಮ್ಯ ಗಮ­ನಿಸಿ;


ಆ ದೌ ದೇವ­ಕಿ­ದೇವಿ ಗರ್ಭ ಜನನಂ ಗೋಪಿ ಗೃಹೇ ವರ್ಧನಂ
ಮಾಯಾ­ಪೂ­ತನೀ ಜೀವಿ­ತಾ­ಪ­ಹಾ­ರಣಂ ಗೋವ­ರ್ಧ­ನೋ­ದ್ಧಾ­ರಣಂ
ಕಂಸ­ಕ್ಷೇ­ಧನ ಕೌರ­ವಾದಿ ಹನನಂ ಕುಂತೀ­ಸುತ ಪಾಲನಂ
ಏತ­ದ್ಧಿ ಮಹಾ­ಭಾ­ಗ­ವತ ಪುರಾಣ ಪುಣ್ಯ ಖಚಿತಂ ಶ್ರೀಕೃಷ್ಣ ಲೀಲಾ­ಮೃತಂ.


-4-
ಕುರ್ತ­ಕೋ­ಟಿ­ಯ­ವರ ಖಾಸಗಿ ಜೀವ­ನದ ವಿವ­ರ­ಗಳು ಬಹ­ಳಷ್ಟು ಮಂದಿಗೆ ಗೊತ್ತಿಲ್ಲ. ಅವ­ರೊ­ಬ್ಬರೇ ಅಲ್ಲ, ನಮ್ಮ ಬಹು­ತೇಕ ವಿಮ­ರ್ಶ­ಕರು ಏನಾ­ಗಿ­ದ್ದರು, ಹೇಗೆ ಜೀವ­ನೋ­ಪಾಯ ಸಾಗು­ತ್ತಿತ್ತು. ಅವರ ಗೆಳೆ­ಯರು ಯಾರಿ­ದ್ದರು? ಮುಂತಾದ ಪ್ರಶ್ನೆ­ಗಳು ಹಾಗೇ ಉಳ­ಕೊಂ­ಡಿವೆ. ವರುಷಗಳ ಕೆಳಗೆ ಕುರ್ತ­ಕೋ­ಟಿ­ಯ­ವರು ಪತ್ನಿ­ಸ­ಮೇತ ನಿರ್ಗ­ಮಿ­ಸಿ­ದಾಗ, ಶಂಬಾ­ಜೋ­ಷಿ­ಯ­ವರೂ ಹೀಗೆಯೇ ದಂಪ­ತಿ­ಸ­ಮೇ­ತ­ರಾಗಿ ನಡೆ­ದು­ಹೋ­ಗಿ­ದ್ದನ್ನು ಅನೇ­ಕರು ಜ್ಞಾಪಿ­ಸಿ­ಕೊಂ­ಡಿ­ದ್ದರು. ಶಂಬಾ ತೀರಿ­ಕೊಂ­ಡಾಗ ಕುರ್ತ­ಕೋ­ಟಿ­ಯ­ವರೇ ಒಂದು ಲೇಖನ ಬರೆ­ದಿ­ದ್ದರು ಅನ್ನು­ವುದು ಅನೇ­ಕ­ರಿಗೆ ಗೊತ್ತಿ­ರ­ಲಿ­ಕ್ಕಿಲ್ಲ.


ಅದು ಹೀಗೆ ಕೊನೆ­ಯಾ­ಗು­ತ್ತದೆ;


`ಶಂಬಾ ಒಬ್ಬರೇ ತೀರಿ­ಕೊ­ಳ್ಳ­ಲಿಲ್ಲ. ಅವರ ಧರ್ಮ­ಪತ್ನಿ ಪಾರ್ವ­ತೀ­ಬಾಯಿ 10 ದಿನ ಮೊದಲೇ ಕೋಮಾದ ಸ್ಥಿತಿ­ಯ­ಲ್ಲಿ­ದ್ದರು. ಶಂಬಾ ತೀರಿ­ಕೊಂಡು ಹನ್ನೆ­ರಡು ತಾಸು­ಗಳು ಕಳೆದ ಮೇಲೆ ಅವರೂ ತೀರಿ­ಕೊಂ­ಡರು. ಶಂಬಾ ಈ ವಿಷ­ಯ­ದಲ್ಲಿ ಬಹಳ ಪುಣ್ಯ­ವಂ­ತರು. ಹೆಂಡತಿ, ಅವರು ಸತ್ತ ಮೇಲೂ ಅವರ ಕೈ ಬಿಡ­ಲಿಲ್ಲ. ಇದೂ ಒಂದು ಪುರಾ­ಣ­ಕತೆ.'


ಕುರ್ತ­ಕೋ­ಟಿ­ಯ­ವರ ಧರ್ಮ­ಪತ್ನಿ ಸರ­ಸ್ವ­ತಿ­ಯ­ವರೂ ಪುಣ್ಯ­ವಂ­ತರು. ಅವರು ತೀರಿ­ಕೊಂಡ ಮೇಲೂ ಕುರ್ತ­ಕೋ­ಟಿ­ಯ­ವರು ಅವರ ಕೈಬಿ­ಡ­ಲಿಲ್ಲ.
-5-
ಬೇಂದ್ರೆ­ಯ­ವ­ರನ್ನು ಬಹು­ವಾಗಿ ಮೆಚ್ಚಿ­ಕೊಂಡ ಕುರ್ತ­ಕೋ­ಟಿ­ಯ­ವ­ರಿಗೆ ಕುವೆಂಪು ಕಾವ್ಯ ರುಚಿ­ಸಿ­ರ­ಲಿಲ್ಲ. ಅದ­ರಲ್ಲಿ ಆಶ್ಚ­ರ್ಯ­ವೇನೂ ಇಲ್ಲ. ಆದರೆ ಕುವೆಂಪು ಅವ­ರನ್ನು ಇದು ಸಾಕಷ್ಟು ಬಾಧಿ­ಸಿತ್ತು. ಕುವೆಂಪು ಕವಿ­ತೆ­ಗ­ಳ­ಲ್ಲಿಯ ವಿರೋ­ಧಾ­ಭಾ­ಸ­ವನ್ನು ಕುರ್ತ­ಕೋಟಿ ಗುರು­ತಿ­ಸು­ತ್ತಿ­ದ್ದುದು ಹೀಗೆ;
ಕುವೆಂಪು ಕಾವ್ಯ­ದಲ್ಲಿ ಉಪ­ಮಾನ ಮತ್ತು ಉಪ­ಮೇ­ಯ­ಗಳ ಬೆರ­ಕೆ­ಯಿಂ­ದಾಗಿ ವೈಚಾ­ರಿಕ ಗೊಂದ­ಲವೂ ಉಂಟಾ­ಗು­ತ್ತದೆ. ಕುವೆಂಪು ಅವರ ಎಷ್ಟೋ ಕವಿ­ತೆ­ಗ­ಳಲ್ಲಿ ಕವಿತೆ ಹೇಳು­ವುದು ಒಂದಿ­ದ್ದರೆ ಕವಿ ಹೇಳು­ವುದು ಇನ್ನೊಂ­ದಾ­ಗು­ತ್ತದೆ. ಅವರ ಕವಿ­ತೆ­ಗ­ಳ­ಲ್ಲಿಯ ವಿರೋ­ಧ­ವೆಂ­ದರೆ ಕವಿ­ತೆಯ ಮಾತಿ­ನಲ್ಲಿ ಕವಿಯ ಮಾತು ಸೇರಿ­ಕೊಂಡು ಇಲ್ಲದ ಗೊಂದ­ಲ­ವೆ­ಬ್ಬಿ­ಸು­ವುದು;


ವಿಶ್ವದ ಕೇಂದ್ರದ ವೃಂದಾ­ವ­ನ­ದಲಿ
ಜೀವ­ನ­ಯ­ಮು­ನೆಯ ತೀರ­ದಲಿ
ರಾಗದ ಯೋಗದ ಮಧು­ಸಂ­ಸಾ­ರದ
ಕದಂಬ ತರು­ವರ ಮೂಲ­ದಲಿ


ಈ ಕುವೆಂಪು ಕವಿ­ತೆಯ ಕುರಿತು ಕುರ್ತ­ಕೋಟಿ ಹೇಳು­ತ್ತಾರೆ;


ರಾಸ­ಕ್ರೀ­ಡೆ­ಯನ್ನು ಬಣ್ಣಿ­ಸುವ ಕವಿ­ತೆಯ ಮೊದ­ಲಿನ ನಾಲ್ಕು ಸಾಲು­ಗ­ಳಿವು. ವೃಂದಾ­ವನ, ಯಮುನೆ, ಕದಂ­ಬ­ವೃಕ್ಷ ಇವು­ಗ­ಳಿಗೆ ಇಲ್ಲಿ ಸ್ವತಂ­ತ್ರ­ವಾದ ಅಸ್ತಿ­ತ್ವ­ವಿಲ್ಲ. ಅವು­ಗ­ಳಿ­ಗಿ­ರು­ವುದು ಅಲಂ­ಕಾ­ರಿಕ ಅಸ್ತಿತ್ವ. ಕವಿ ಕವಿ­ತೆಯ ಮೇಲೆ ಅಲಂ­ಕಾ­ರಿ­ಕತೆ ಹೇರಿ­ರು­ವು­ದ­ರಿಂದ ಈ ಪ್ರತಿ­ಮೆ­ಗ­ಳಿಗೆ ಬಿಡು­ಗಡೆ ಇಲ್ಲ. ಪುಣ್ಯಕ್ಕೆ ಗೋಪಿ­ಯರು ತಾತ್ಪೂ­ರ್ತಿ­ಕ­ವಾಗಿ ಇದ­ರಿಂದ ತಪ್ಪಿ­ಸಿ­ಕೊಂಡು ಕುಣಿ­ಯು­ತ್ತಾರೆ.
ಹಿಮ­ಮಣಿ ಎಂಬ ಕವಿ­ತೆ­ಯಲ್ಲಿ ಕುವೆಂಪು ನಿಂತು ಸುಮ್ಮನೆ ನೋಡಿ ಮರೆ, ಅಲೋ­ಚ­ನೆ­ಯ­ನತ್ತ ಕಡೆ ತಳ್ಳಿ ಎಂದು ಕವಿ ಕವಿ­ತೆಗೆ ಗದ­ರಿ­ಸು­ತ್ತಾನೆ. ಹಿಮ­ಮ­ಣಿ­ಗಳ ಚೆಲು­ವನ್ನು `ನಿಂತು ಸುಮ್ಮನೆ ನೋಡಿ ಮರೆ'ಯ­ಬೇ­ಕಾ­ಗಿ­ದ್ದರೆ ಕವಿ­ತೆ­ಯನ್ನು ಬರೆ­ಯುವ ಕಾರ­ಣವೂ ಇರ­ಲಿಲ್ಲ. ಇಲ್ಲಿ ಇನ್ನೂ ಒಂದು ಮಾತನ್ನು ಹೇಳ­ಬ­ಹುದು. ಕವಿ ಕವಿ­ತೆ­ಗಿಂತ ಜಾಣ­ನಲ್ಲ. ಜಾಣ­ನಾ­ಗಲು ಹೋಗ­ಬಾ­ರದು.
ಕುವೆಂಪು ಅವರ ಭಾವ­ಗೀ­ತ­ಗ­ಳೆಲ್ಲ ಬಹುಶಃ ಇದೇ ರೀತಿ­ಯ­ಲ್ಲಿ­ರು­ವಂ­ಥವು.
ಇವ­ನ್ನೆಲ್ಲ ನೋಡಿ­ದ­ವರು ಕುರ್ತ­ಕೋ­ಟಿ­ಯ­ವರ ಸಮ­ಸ್ಯೆ­ಯೆಂ­ದರೆ ಬೇಂದ್ರೆ ಕಾವ್ಯ­ವನ್ನು ಕಾವ್ಯದ ಮಾನ­ದಂ­ಡ­ವ­ನ್ನಾಗಿ ಮಾಡಿ­ಕೊಂ­ಡದ್ದು ಎಂದರು. ಕುವೆಂಪು ಸಾಹಿ­ತ್ಯದ ಮೇಲೆ ಅಸ­ಹಾ­ನು­ಭೂತಿ ವಿಮರ್ಶೆ ಮತ್ತು ಬೇಂದ್ರೆ ವಿಚಾ­ರ­ದಲ್ಲಿ ಟೀಕೆಯೇ ಇಲ್ಲದ ಆರಾ­ಧ­ನೆಯ ವಿಮ­ರ್ಶಕ ಎಂದು ಕರೆ­ದರು. ಅವ­ರಿಗೆ ಪುಣೇ­ಕ­ರ­ರಂತೆ ನವ್ಯ­ಸಾ­ಹಿ­ತ್ಯದ ಬಗ್ಗೆ ಪೂರ್ವ­ಗ್ರ­ಹ­ವಿದೆ ಎಂಬ ಟೀಕೆಯೂ ಕೇಳಿ­ಬಂತು.
ಕುವೆಂಪು ಅವರ ಕಾವ್ಯ­ವನ್ನು ಕುರ್ತ­ಕೋಟಿ ಒಪ್ಪಿ­ಕೊ­ಳ್ಳಲೇ ಇಲ್ಲ. ಹೀಗಾಗಿ ಕುವೆಂಪು ಈ ಕೆಳ­ಗಿನ ಪದ್ಯ­ವನ್ನು ಕೀರ್ತಿ­ನಾಥ ಕುರ್ತ­ಕೋ­ಟಿ­ಯ­ವರ ಕುರಿತೇ ಬರೆ­ದಿ­ದ್ದಾರೆ ಎಂದು ಛೇಡಿ­ಸು­ವ­ವ­ರಿ­ದ್ದಾರೆ;


ಪೀಡಿ­ಸು­ತ್ತಿಹೆ ಏಕೆ? ತೊಲ­ಗಾಚೆ, ಕೀರ್ತಿ­ಶನಿ;
ಸಾಕೆ­ನಗೆ ನಿನ್ನ ಸಹ­ವಾಸ ವಿಭ­ವ­ಭ್ರಾಂತಿ!
.......
ಕೀರ್ತಿ ಸಪ್ತಮ ವೈರಿ; ಏಕೆನೆ, ತಿರೆ­ವೊ­ಗಳ್ಕೆ
ಮಾಲೆ­ಯಿ­ಕ್ಕಿದೆ ತನ್ನ ಮೆಚ್ಚ್; ಆ ಕ್ಷುದ್ರತಾ
ಭೂತಕ್ಕೆ ನಿತ್ಯ­ಬಲಿ;


ಆದರೆ ಕೀರ್ತಿ­ನಾಥ ಕುರ್ತ­ಕೋಟಿ ಹುಟ್ಟಿದ್ದು ಅಕ್ಟೋ­ಬ್ 10, 1928. ಕುವೆಂಪು `ಕೀ­ರ್ತಿ­ಶನಿ' ಕವಿತೆ ಬರೆ­ದದ್ದು ಜನ­ವರಿ 3, 1941.
ಆಗಿನ್ನೂ ಕುರ್ತ­ಕೋ­ಟಿ­ಯ­ವ­ರಿಗೆ ಹದಿ­ಮೂರೇ ವರ್ಷ.

7 comments:

suptadeepti said...

ನಮಸ್ಕಾರ ಜೋಗಿ, ಇಷ್ಟುದ್ದದ ಲೇಖನಗಳನ್ನು ಬರೆದು ನಮಗೆ ಅರಿಯದ ವಿವರಗಳನ್ನು ಬಡಿಸುತ್ತಿರುವುದಕ್ಕಾಗಿ.

ಕುರ್ತಕೋಟಿಯವರು ಬೇಂದ್ರೆ ಕಾವ್ಯಾರಾಧಕರು ಎನ್ನುವ ಮಾತು ತಿಳಿದಿತ್ತು. ಅದಕ್ಕಿಂತ ಹೆಚ್ಚಿನ ಮಾಹಿತಿ ಇಲ್ಲಿ ತಿಳಿಯಿತು. ಅವರ ಜ್ಞಾನದ ಬಗ್ಗೆಯೂ ಕೇಳಿದ್ದೆ, ನೆನಪಿನ ಬಗ್ಗೆ ಹೇಳಿದಿರಿ. ವಂದನೆಗಳು, ಧನ್ಯವಾದಗಳು.

Haldodderi Sudhindra said...

ಅತ್ಯಂತ ಖುಷಿ ಕೊಟ್ಟ ಲೇಖನ. ಇದನ್ನು ಒಂದೇ ಉಸಿರಿಗೆ ಓದಿ ಮುಗಿಸಿದ ನಂತರ ನಿಜವಾದ ಆತಂಕ ಶುರುವಾಗಿದೆ! ಈ ಆತಂಕವು ಥೇಟ್, ಕುರ್ತುಕೋಟಿಯವರ ಓರಿಗೆಯವರಿಗಿದ್ದಷ್ಟು, ಅಥವಾ ಅದಕ್ಕಿಂತಲೂ ಕೊಂಚ ಹೆಚ್ಚಿನದು. ನಿಮ್ಮ ಹತ್ತಿರ ಮಾತನಾಡುವುದಕ್ಕಾಗಲೀ ಹಂಚಿಕೊಳ್ಳುವುದಕ್ಕಾಗಲೀ ಸಾಹಿತ್ಯೇತರ ಸಂಗತಿಗಳು ಬಹಳಷ್ಟು ಇದ್ದರೂ, ಪಾಂಡಿತ್ಯದ ಅಂತರ ನನ್ನನ್ನು ನಡಗಿಸ ಹತ್ತಿದೆ. ಇನ್ನು ಮುಂದೆ ಮುಖಾಮುಖಿಯ ಅಥವಾ ದೂರವಾಣಿಯ ಮಾತುಕತೆಗಳಿಗಿಂತ ನಿಮ್ಮೊಂದಿಗೆ ಬ್ಲಾಗ್ ಮೂಲಕವಷ್ಟೇ ಮಾತನಾಡ ಬಯಸುತ್ತೇನೆ!!

Jogimane said...

ನಿಮ್ಮ ವಿಜ್ಞಾನದ ಬರಹಗಳನ್ನು ಓದಿ ನಾನೂ ಬೆರಗಾಗಿದ್ದೇನೆ. ವಾರವಾರ ಅದೆಲ್ಲಿಂದ ಅಷ್ಟೊಂದು ವೈಜ್ಞಾನಿಕ ಸಂಗತಿಗಳನ್ನು ಹುಡುಕುತ್ತೀರಿ ಮಾರಾಯ್ರೇ.
ಸಾಹಿತ್ಯವಾದರೆ ಬರೆಯುವುದು ಸುಲಭ. ಇದು ಭಾವಕ್ಕೆ ಸಂಬಂಧಿಸಿದ್ದು. ಆದರೆ ವಿಜ್ಞಾನ ಅದರ ಕರಾರುವಾಕ್ಕು, ನಿಖರತೆ ಮತ್ತು ಸ್ಪಷ್ಟತೆಗಳಿಂದ ನನ್ನನ್ನು ಸದಾ ಬೆಚ್ಚಿಬೀಳಿಸುತ್ತದೆ.
ಆಗಾಗ ಫೋನಿನಲ್ಲೂ ಮಾತಾಡುತ್ತಿರೋಣ.

ಜೋಗಿ

ವಿಚಿತ್ರಾನ್ನ ಭಟ್ಟ said...

ಜೋಗಿ, ನಮಸ್ಕಾರ. ವಿಮರ್ಶಕರನ್ನೇ ವಿಮರ್ಶಿಸಿ "ವಿವಿಮರ್ಶಕ" ಎನಿಸಿಕೊಂಡಿದ್ದೀರಿ!

ಕೆಲವು ಟಿಪ್ಪಣಿಗಳು:

೧. "ಆದೌ ದೇವಕಿ ದೇವಿಗರ್ಭ ಜನನಂ..." ಶ್ಲೋಕವು ಏಕಶ್ಲೋಕಿ ಮಹಾಭಾರತ ಅಲ್ಲ, ಬದಲಿಗೆ ಏಕಶ್ಲೋಕಿ ಭಾಗವತ.

೨. ಏಕಶ್ಲೋಕಿ ಮಹಾಭಾರತವು ಇಂತಿದೆ:

ಆದೌ ಪಾಂಡವ ಧಾರ್ತರಾಷ್ಟ್ರ ಜನನಂ ಲಾಕ್ಷ್ಯಾಗೃಹೆ ದಾಹನಂ
ದ್ಯೂತೇ ಶ್ರೀಹರಣಂ ವನೇ ವಿಹರಣಂ ಮತ್ಸ್ಯಾಲಯೇ ವರ್ಧನಂ
ಲೀಲಾಗೋಗ್ರಹಣಂ ರಣೇ ವಿತರಣಂ ಸಂಧಿಕ್ರಿಯಾ ಜೃಂಭಣಂ
ಭೀಷ್ಮದ್ರೋಣಸುಯೋಧನಾದಿ ಮಥನಂ ಏತನ್ಮಹಾಭಾರತಂ ||

೩. ನೀವು ಉಲ್ಲೇಖಿಸಿರುವ ಏಕಶ್ಲೋಕಿ ರಾಮಾಯಣ ಸರಿಯಾಗಿಯೇ ಇದೆ. ರಾಮಾಯಣವನ್ನು ಇನ್ನೂ ಸಂಕ್ಷಿಪ್ತವಾಗಿ - ನಾಲ್ಕೇ ನಾಲ್ಕು ಕ್ರಿಯಾಪದಗಳ ರೂಪದಲ್ಲಿ - ಹೇಳುವ ಕ್ರಮವೊಂದಿದೆ: "ಹುಟ್ಟಿ ಕಟ್ಟಿ ಕುಟ್ಟಿ ಮುಟ್ಟಿ" ಎಂದು. ಅಂದರೆ, ಶ್ರೀರಾಮಚಂದ್ರನು ಹುಟ್ಟಿ, ವಾನರಸೇನೆಯನ್ನು ಕಟ್ಟಿ, ದಶಶಿರನನ್ನು ಕುಟ್ಟಿ, ವಾಪಸ್ ಅಯೋಧ್ಯೆಗೆ ಮುಟ್ಟಿದಾಗ ರಾಮಾಯಣ ಮುಗಿಯಿತು!

Jogimane said...

ವಿಚಿತ್ರಾನ್ನ ಭಟ್ಟರಿಗೆ ಸಚಿತ್ರ ವಂದನೆ,
ನೀವು ಉದಾಹರಿಸಿದ ಏಕಶ್ಲೋಕವನ್ನು ನಾನು ಕೇಳಿರಲೇ ಇಲ್ಲ. ನಮ್ಮೂರಲ್ಲಿ ಊಟಕ್ಕೆ ಕುಳಿತಾಗ ಚೂರ್ಣಿಕೆ ಹೇಳುತ್ತಾರೆ. ಅಲ್ಲೆಲ್ಲೂ ಇದನ್ನು ಹೇಳಿದ್ದನ್ನು ನಾನು ಕಾಣಲಿಲ್ಲ. ಹೊಸದನ್ನು ತಿಳಿಸಿಕೊಟ್ಟಿದ್ದಕ್ಕೆ, ತಪ್ಪನ್ನು ತೋರಿಸಿಕೊಟ್ಟದ್ದಕ್ಕೆ ಥ್ಯಾಂಕ್ಸ್.

ಅದು ಕೃಷ್ಣಕತೆಯಾದ್ದರಿಂದ ಭಾಗವತ ಅನ್ನೋದು ಹೊಳೆಯಲೇ ಇಲ್ಲ ನೋಡಿ, ಛೇ.

ಜೋಗಿ

Haldodderi Sudhindra said...

ಬೇಂದ್ರೆಯವರನ್ನು ವಿಮರ್ಶಿಸುತ್ತಿದ್ದ ಕುರ್ತುಕೋಟಿಯವರು ’ವಿಮರ್ಶಕ’ರಾದರೆ, ಕುರ್ತುಕೋಟಿಯವರನ್ನು ವಿಮರ್ಶಿಸಿದ ಜೋಗಿ ’ವಿವಿಮರ್ಶಕ’ ಅಂತಾರೆ ವಿಚಿತ್ರಾನ್ನದ ಭಟ್ಟರು. ಹಾಗಿದ್ದರೆ ಭಟ್ಟರನ್ನು ’ವಿವಿವಿಮರ್ಶಕ’ರು ಅನ್ನಬಹುದೆ? ಅರ್ಥಾತ್ ವೀಕ್ಯೂಬ್‍ಮರ್ಶಕರಾಗಿಬಿಟ್ಟರು ಭಟ್ಟರು. But ಜೋಶಿಯವರು ಭಟ್ಟರಾಗಿದ್ದು ಎಂದು?

raaghavam said...

``ಎಲ್ಲೆಲ್ಲೂ ಇರುವುದು ಅವನ ಮನೆಯೇ ಎಂದಾಗ
ನಮ್ಮ ನಿಮ್ಮ ಮನೆಗಳ ಭೇದ ಅರ್ಥಹೀನವಾಗುತ್ತದೆ''- ಕೀರ್ತಿನಾಥ ಕುರ್ತಕೋಟಿ.

ಜೋಗಿ ಸರ್ ಗೆ ನಮಸ್ಕಾರ,
ಮೊನ್ನೆಯಷ್ಟೇ ಮೊದಲಬಾರಿಗೆ ನಿಮ್ಮ ಬ್ಲೊಗ್ ವಿಸಿಟ್ ಮಾಡಿದೆ. ಕೀರ್ತಿನಾಥರ ಕುರಿತ ಲೇಖನ ಓದುತ್ತ ಇದನ್ನು ಬರೆಯಬೇಕೆನ್ನಿಸಿತು.
ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಎಂಎ ಪತ್ರಿಕೋದ್ಯಮ ಓದಲು ಹೋಗಿ ಒಂದು ವಾರವಾಗಿತ್ತಷ್ಟೆ. ಒಂದು ಸಂಜೆ ಕುರ್ತಕೋಟಿ ದಂಪತಿಗಳು ತೀರಿಕೊಂಡ ಸುದ್ದಿ ಟಿವಿಯಲ್ಲಿ ಬಿತ್ತರವಾಯಿತು.
ಆ ದಿನಗಳಲ್ಲೆ ಕೀರ್ತಿನಾಥರ ಬರಹದ ಪರಿಚಯವಾಗಿದ್ದು, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ ಲೇಖನಗಳಿಂದ. ಅವರು ಭಾರತದ ಅತ್ಯಂತ ಶ್ರೇಷ್ಟ ವಿಮರ್ಶಕರಲ್ಲಿ ಒಬ್ಬರು ಎಂಬುದನ್ನು ಡಾ. ಯು. ಆರ್. ಅನಂತಮೂರ್ತಿಯವರು, ಮತ್ತಿತರರ ಲೇಖನಗಳಿಂದ ತಿಳಿದು ಹೆಮ್ಮೆ ಪಟ್ಟಿದ್ದು ಹೌದಾದರೂ ಅವರ ವಿಮರ್ಶೆಯ ಆಳ, ಶ್ರೇಷ್ಟತೆಯನ್ನು ಸ್ವತಃ ಅರಿಯಲು ಕನ್ನಡ,ಇಂಗ್ಲೀಶ್, ಸಂಸ್ಕ್ರತ ಸಾಹಿತ್ಯವನ್ನು ತುಂಬಾ ಆಳವಾಗಿ ಅಭ್ಯಸಿಸಬೇಕು ಎಂಬುದು ಅರಿವಾಗಿತ್ತು.

ಅವರ ಮರಣವೂ ನನಗೆ ಒಂದು ದೊಡ್ಡ ಅಚ್ಚರಿ ಹಾಗೂ ಮಹತ್ತರ ಪಾಠವಾಗಿ ಕಂಡಿದೆ. ಪತಿ ತೀರಿಕೊಂಡ ಸುದ್ದಿ ತಿಳಿದು ಪತ್ನಿ ದೇಹತ್ಯಾಗ ಮಡುವುದು ಈ ದೇಶದಲ್ಲಿ ಸಹಜವಾಗಿ ಆಗಿರುವಂತದ್ದು. ಆದರೆ ಪತ್ನಿ ತೀರಿಕೊಂಡ ಸ್ವಲ್ಪ ಹೊತ್ತಿನಲ್ಲೇ ಕೀರ್ತಿನಾಥರೂ ದೇಹ ತ್ಯಾಗ ಮಾಡಿದರಲ್ಲ, ಅವರ ದಾಂಪತ್ಯ ಎಂತಹ ಶ್ರೇಷ್ಠವಾದದ್ದಿರಬಹುದು ಎಂತಲೇ ಅನೇಕ ಬಾರಿ ಯೊಚಿಸಿದ್ದೇನೆ.

ವಿಶ್ವವಿದ್ಯಾಲಯದ ಆ ದಿನಗಳಲ್ಲಿ ಜೇಬಿನಲ್ಲೊಂದು "ಸ್ಕ್ರಾಪ್ ಬುಕ್" ಇರುತ್ತಿತ್ತು (ಈಗಲೂ); ಅನ್ನಿಸಿದ್ದನ್ನು, ಓದಿ ಆನಂದಿಸಿದ ಸಾಲುಗಳನ್ನು ಬರೆದುಕೊಳ್ಳುವುದ್ದಕ್ಕೆ. ಆಗೆಲ್ಲಾ ಕೀರ್ತಿನಾಥರ "ಹೊರಗಿನಿಂದ ಬಂದ ಬೆಳಕು ನಮ್ಮ ಕಂಗಳಿಗೆ ನೋಡಲು ಜಾಗರಿಸುವಂತೆ ಹೊರಗಿನಿಂದ ಬಂದ ಶಕ್ತಿಯೊಂದು ಮನಸ್ಸಿಗೂ ಪ್ರೆರಣೆಯನ್ನು ಕೊಡುತ್ತಿರಬೇಕು", "ಪ್ರಕೃತಿ ಸಂಸ್ಕೃತಿಯಗುವುದು ದಿನನಿತ್ಯದ ವ್ಯಾಪಾರ, ಸಂಸ್ಕೃತಿ ಪ್ರಕೃತಿಯಾಗುವುದಕ್ಕೆ ಜನ್ಮಾಂತರದ ದುಡಿತ ಬೇಕು" ಎಂಬಂತಹ ಸಾಲುಗಳನ್ನು ಬರೆದಿಟ್ಟುಕೊಂಡು ಮರಗಳ ನಡುವಿನ ದಾರಿಯಲ್ಲಿ ಒಂಟಿ ನಡೆಯುವಾಗ ತೆಗೆದು ಓದುತ್ತ, ಸಂಭ್ರಮಿಸುತ್ತ, ಅವರ ಬರಹಗಳ ಲೋಕದಲ್ಲಿಯೇ ತೇಲುತ್ತಿದ್ದುದು ನೆನಪಾಗುತ್ತದೆ.

ಆಗೆಲ್ಲ ಅನ್ನಿಸುತ್ತಿತ್ತು ಕೀರ್ತಿನಾಥ ಕುರ್ತಕೋಟಿಯವರು ನಡೆದದ್ದೇ ದಾರಿ, ಅವರು ಒಂಟಿಸಲಗದಂತೆ ಎಂದು. ನಮ್ಮ ಅನೇಕ ವಿಮರ್ಶಕರ ಬರಹಗಳನ್ನು ನೋಡಿದರೆ ಅವುಗಳ ತುಂಬ "ಕೊಟೇಶನ್ಸ್" ಕಾಣಿಸುತ್ತಿವೆ. ಅವರೆಲ್ಲ ಮತ್ಯಾರದ್ದೋ ಮಾತುಗಳನ್ನು ಉದ್ದರಿಸುತ್ತ ಆ ಕುರಿತು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತ ಹೋಗುತ್ತಾರೆ. ಆದರೆ ಕೀರ್ತಿನಾಥರಲ್ಲಿ ಅಂತಹ "ಕೊಟೇಶನ್ಸ್" ತೀರ ಕಡಿಮೆ. ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅವರು ಯಾರಿಗೋ ಉತ್ತರ ಕೊಡುತ್ತಿದ್ದಾರೆ ಎಂಬುದು ಕಾಣಿಸುತ್ತದೆ. ಅವರನ್ನು ಓದಲಾಗುವುದಿಲ್ಲ, ಅಧ್ಯಯನ ಮಾಡಬೇಕಾಗುತ್ತದೆ ಎಂದು ನನಗನ್ನಿಸುತ್ತದೆ.

ಧಾರವಾಡದಲ್ಲಿದ್ದಾಗಲೇ ಅವರ "ನೂರುಮರ ನೂರುಸ್ವರ", "ಉರಿಯ ನಾಲಿಗೆ" ಮುಂತಾದ ಪುಸ್ತಕಗಳನ್ನು ಓದಿದ್ದು. ಧಾರವಾಡದ ಸೆಕೆಂಡ್ ಹ್ಯಾಂಡ್ ಬುಕ್ ಸ್ಟಾಲ್ ಒಂದರಲ್ಲಿ ಅವರ "ಕನ್ನಡ ಸಾಹಿತ್ಯ ಸಂಗಾತಿ" ಕೇವಲ ೩೦ ರೂಗೆ ಸಿಕ್ಕಿದ್ದೂ ಸಂಭ್ರಮವೇ ಆಗಿತ್ತು. ಧಾರವಾಡದ ಕುರಿತ ಲೇಖನವೊಂದರಲ್ಲಿ ಕೀರ್ತಿನಾಥರು ಬರೆಯುತ್ತಾರೆ, "ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ಸ್ಥಳಾಂತರಿಸುವಾಗ ಕರ್ಜನ್ ಸಮಿತಿ ಧಾರವಾಡವನ್ನೂ ಒಂದೆಂದು ಆರಿಸಿತ್ತು. ಆದರೆ ಭಾರತದ ಇತಿಹಾಸ ದೆಹಲಿಯನ್ನು ಆಯ್ದುಕೊಂಡಿತು. ಇತಿಹಾಸದ ದೈವ ಧಾರವಾಡವನ್ನು ಸಾಂಸ್ಕೃತಿಕ ರಾಜಧಾನಿಯನ್ನಾಗಿ ಆಯ್ಕೆ ಮಾಡಿಕೊಂಡಿರಬೇಕು."
[ಉದ್ಧರಿಸಿದ ವಾಕ್ಯಗಳು ಹಳೆಯ "ಸ್ಕ್ರ್ಯಾಪ್ ಬುಕ್" ನಿಂದ ಆರಿಸಿ ಬರೆದದ್ದು. ಅಕ್ಷರಶಃ ಕೀರ್ತಿನಾಥರದೇ ಸಾಲುಗಳೋ, ಬದಲಾಯಿಸಿದ್ದೆನೋ ನೆನಪಿಲ್ಲ. ಭಾವಾರ್ಥವಂತೂ ಅವರದ್ದೇ.]

ರಾಘವೇಂದ್ರ ಎಂ.
ಶಿವಮೊಗ್ಗ.
http://raaghava-haagesummane.blogspot.com/
_