
ಕ್ರೀ.......ಚ್!
ಆಕೆ ಚೀರಿಕೊಂಡ ಸದ್ದು ಸಾಕಷ್ಟು ಸ್ಪಷ್ಟವಾಗಿಯೇ ಕೇಳಿಸಿತು!
ನಾನು ಮಲಗಿದ್ದ ಆ ಪುಟ್ಟ ಗುಡಿಸಲಿನಿಂದ ಹೊರಗೆ ಬಂದು ನೋಡಿದೆ. ಮಾದೇವನ ಗುಡಾರದಿಂದ ನೀಲಿ ಹೊಗೆ ಏಳುತ್ತಿತ್ತು. ಆಗಷ್ಟೇ ಹುಣ್ಣಿಮೆಯ ಚಂದ್ರ ಮೂಡಿದ್ದ. ಇಡೀ ಪ್ರದೇಶ ಹಗಲೂ ಅಲ್ಲದ ರಾತ್ರಿಯೂ ಅಲ್ಲದ ವಿಚಿತ್ರ ಬಣ್ಣದಲ್ಲಿ ಮೀಯುತ್ತಿತ್ತು. ದೂರದ ಮಸಕು ಬೆಟ್ಟಗಳ ಮೇಲೆ ಬೆಳುದಿಂಗಳ ಚಾದರ ಹೊದ್ದುಕೊಂಡು ನಿಂತಿದ್ದ ಹೆಸರಿಲ್ಲದ ಮರಗಳ ಗುಂಪು ಕ್ಪಣಕ್ಕೊಂದು ರೂಪು ತಳೆಯುತ್ತಿತ್ತು. ಕಡ್ಡಿಗೀರಿ ಗಡಿಯಾರ ನೋಡಿದೆ. ನಡುರಾತ್ರಿ ದಾಟಿ ಇಪ್ಪತ್ತು ನಿಮಿಷಗಳು. ಮತ್ತೊಮ್ಮೆ ಚೀರಿದ ಸದ್ದು ಕೇಳಿಸುತ್ತದೋ ಏನೋ ಎಂದುಕೊಂಡು ಅಲುಗಾಡದೆ ನಿಂತಿದ್ದೆ. ಸರಿಯಾಗಿ ನಲುವತ್ತು ಸೆಕೆಂಡುಗಳ ನಂತರ ಮತ್ತೆ ಮೈನವಿರೇಳಿಸುವ, ಬೆನ್ನು ಹುರಿಯುದ್ಧಕ್ಕೂ ಭಯದ ಛಳುಕೊಂದನ್ನು ಮೂಡಿಸುವ ಸದ್ದೊಂದು ಮತ್ತೆ ಕೇಳಿಸಿತು. ಆ ಸದ್ದು ಮೊದಲು ಕೇಳಿದ ಆರ್ತನಾದದಂತಿರಲಿಲ್ಲ. ಯಾರೋ ಚೀರಿಕೊಂಡಂತೆಯೂ ಇರಲಿಲ್ಲ. ಗಮನವಿಟ್ಟು ಕೇಳಿದೆ.
ಜೋರಾಗಿ ನಕ್ಕು ಬಿಟ್ಟೆ. ಅದು ರೈಲು ಇಂಜಿನ್ನಿನ ಸದ್ದು. ಅಂದರೆ ಮಂಗಳಾ ಎಕಪ್ರೆಸ್ ಮಾದೇವನ ಗುಡಾರವನ್ನು ದಾಟಿ ಹೋಗುತ್ತಿದೆ. ಕ್ರಮೇಣ ಸುರಂಗದಿಂದ ರೈಲು ಹೊರಗೆ ಬಂದ ಸದ್ದೂ, ಅದು ಬಾಗಿದಂತಿರುವ ರೇಲು ಹಳಿಗಳ ಮೇಲೆ ಚಲಿಸುವಾಗ ಘರ್ಷಣೆಯಿಂದಾದ ಕ್ರೀಚ್ ಕ್ರೀಚ್ ಸದ್ದುಗಳೂ ಕಿವಿಗೆ ಬಿದ್ದವು. ಹೊರಗೆ ಬಂದು ನಿಂತೆ. ಕಂಬಳಿ ಹುಳುವಿನ ಹಾಗೆ ಕಪ್ಪಗಿನ ರೇಲು ನಿರಾತಂಕ ಸಾಗುತ್ತಿತ್ತು.
ಆಗ ಇದ್ದಕ್ಕಿದ್ದಂತೆ ಕಾಣಿಸಿತು ಆ ಆಕೃತಿ!
ಅದು ಅಸ್ಪಷ್ಟವಾಗಿ ರೇಲಿನ ಹಿಂದೆ ಓಡಿಹೋಗುತ್ತಿತ್ತು. ನನಗೆ ಮಾದೇವನ ಕತೆ ನೆನಪಾಯಿತು.
-ಮಾದೇವನ ಕತೆ-
ನಾನು ಮಾದೇವನನ್ನು ಹುಡುಕಿಕೊಂಡು ಬರುವುದಕ್ಕೆ ಬೇರೆ ಕಾರಣಗಳೇ ಇರಲಿಲ್ಲ. ಎಡಕುಮೇರಿಯ ಆಸುಪಾಸಿನಲ್ಲೆಲ್ಲ ರಾತ್ರಿಹೊತ್ತು ಭೀಕರ ಆರ್ತನಾದ ಕೇಳಿ ಬರುತ್ತದೆಂದೂ ಜನರೆಲ್ಲ ಹೆದರಿಹೋಗಿದ್ದಾರೆಂದೂ ನೆಟ್ಟಣ ಎಂಬಲ್ಲಿರುವ ಭಾರತೀಯ ರಬ್ಬರ್ ಸಂಶೋಧನಾ ಕೇಂದ್ರದಲ್ಲಿ ಅಧಿಕಾರಿಯಾಗಿರುವ ಗೆಳೆಯ ಕೃಷ್ಣಪ್ರಸಾದ ಪತ್ರ ಬರೆದಿದ್ದ. ಇಂಥ ವಿಚಾರಗಳಲ್ಲಿ ನಮಗಿಬ್ಬರಿಗೂ ಆಸಕ್ತಿ. ಇಬ್ಬರೂ ನಾಸ್ತಿಕರಾಗಿದ್ದರೂ ರಾತ್ರಿಯ ನಿಗೂಢತೆಯಲ್ಲಿ ನಂಬಿಕೆ ಇಟ್ಟವರು. ದೇವರಿಲ್ಲದೆ ಇದ್ದರೂ ದೆವ್ವಗಳಿಗೆ ಎಂದು ನಂಬುವುದಕ್ಕೆ ಯತ್ನಿಸುತ್ತಿದ್ದವರು. ನಮಗೆ ದೆವ್ವ ಕಾಣುವುದು ಬೇಕಿತ್ತು. ಅದರ ರೋಚಕತೆ ಬೇಕಿತ್ತು. ಕಪ್ಪುಕಾಡಿನ ಕತ್ತಲಲ್ಲಿ ಒಂಟಿಯಾಗಿ ನಡೆಯುತ್ತಾ ಬೆನ್ನ ಹಿಂದೆ ದೆವ್ವವೊಂದು ಹಿಂಬಾಲಿಸಿಕೊಂಡು ಬರುತ್ತಿದೆ, ಯಾವ ಹೊತ್ತಿಗೆ ಬೇಕಾದರೂ ನಿಮ್ಮ ಬೆನ್ನ ಮೇಲೆ ಕೈ ಹಾಕುತ್ತದೆ ಎಂಬ ರೋಮಾಂಚ ಯಾರಿಗೆ ತಾನೆ ಬೇಕಿರುವುದಿಲ್ಲ ಹೇಳಿ? ಅಂಥ ಪುಳಕಕ್ಕಾಗಿಯೇ ನಾವು ಸುತ್ತಾಡದ ಕಾಡಿಲ್ಲ, ಓಡಾಡದ ಸ್ಥಳಗಳಿಲ್ಲ. ಆದರೆ ದುರದೃಷ್ಟವಶಾ್ ನಮ್ಮ ಕಣ್ಣಿಗಂತೂ ದೆವ್ವ ಬಿದ್ದಿರಲಿಲ್ಲ. ಅದು ದೇವಗಣದ ಮನುಷ್ಯರಿಗೆ ಕಾಣಿಸುವುದಿಲ್ಲ ಎಂದು ಚಂದ್ರಜೋಯಿಸರು ಹೇಳಿ ನಮ್ಮನ್ನು ನಿರಾಶೆಗೊಳಿಸಲು ಯತ್ನಿಸಿದ್ದರು. ಆದರೂ ನಮ್ಮದು ದೇವಗಣ ಎನ್ನುವುದು ದೆವ್ವಗಳಿಗೆ ಗೊತ್ತಾಗಲಿಕ್ಕಿಲ್ಲ ಎಂಬ ಭರವಸೆಯಲ್ಲಿ ನಮ್ಮ ಹುಡುಕಾಟ ಮುಂದುವರಿಸಿದ್ದೆವು.
ಕೃಷ್ಣಪ್ರಸಾದನ ಪತ್ರ ಬಂದ ಮೂರು ವಾರಗಳ ನಂತರ ನಾನು ನೆಟ್ಟಣಕ್ಕೆ ಹೋದೆ. ಅವನ ಮನೆಯಿರುವುದು ಕಾಡಿನ ನಡುವೆ. ಅಲ್ಲಿ ರಬ್ಬರು ತೋಟ ಮಾಡಿಕೊಂಡಿದ್ದ. ಒಂದು ಫೋನು ಕೂಡ ಇಲ್ಲದ ಕುಗ್ರಾಮ ಅದು. ಅಲ್ಲಿಗೆ ನಾನು ಹೋಗುವ ಹೊತ್ತಿಗೆ ಆತ ಯಾವುದೋ ಸಂಶೋಧನಾ ಸಮ್ಮೇಳನಕ್ಕೆಂದು ಕೊಟ್ಟಾಯಂಗೆ ಹೋಗಿದ್ದ. ಬರುವುದು ಒಂದು ವಾರವಾಗುತ್ತೆ ಅಂತ ಅವನ ಮನೆಯ ಕೆಲಸದಾಳು ಹೇಳಿದ. ಹೀಗಾಗಿ ಅವನು ಪತ್ರದಲ್ಲಿ ಕೊಟ್ಟ ಸೂಚನೆಗಳನ್ನು ಕಣ್ಣಮುಂದಿಟ್ಟುಕೊಂಡು ನಾನೊಬ್ಬನೇ ಮಾದೇವನನ್ನು ಹುಡುಕಿಕೊಂಡು ಹೊರಟೆ.
ಅದಕ್ಕೆ ಕೆಲವೇ ವರುಷಗಳ ಹಿಂದಷ್ಟೇ ಬೆಂಗಳೂರು-ಮಂಗಳೂರು ನಡುವೆ ರೇಲು ಸಂಚಾರ ಆರಂಭವಾಗಿತ್ತು. ಮಂಗಳೂರಿನಿಂದ ಬೆಂಗಳೂರಿಗೆ ಮುನ್ನೂರು ಕಿಲೋಮೀಟರು ಅಂತರವಿದ್ದರೂ, ರೇಲು ಮೂವತ್ತಾರು ಸುರಂಗಗಳನ್ನೂ ಕಡಿದಾದ ಬೆಟ್ಟಗಳ ತಪ್ಪಲನ್ನೂ ಆಳವಾದ ಕಣಿವೆಗಳ ಹಾದಿಯನ್ನೂ ಕ್ರಮಿಸಬೇಕಾಗಿತ್ತು. ಅದರಲ್ಲೂ ಅರಸೀಕೆರೆಯಿಂದ ಮುಂದೆ ಸುಬ್ರಹ್ಮಣ್ಯದ ತನಕ ತೀರಾ ಕಡಿದಾದ ರಸ್ತೆ. ಅಲ್ಲಿ ರೇಲು ತೆವಳಿಕೊಂಡು ಚಲಿಸಬೇಕಿತ್ತು. ಒಂದೊಂದು ಬಾರಿ ತೀರಾ ಮಳೆಬಿದ್ದರೆ ರೇಲು ಅಲ್ಲೇ ದಿನಗಟ್ಟಲೆ ನಿಂತುಬಿಡುವುದೂ ಇತ್ತು. ಅಲ್ಲದೆ, ಅಕ್ಕಪಕ್ಕದ ಗುಡ್ಡ ಜರಿದು ಕಲ್ಲೂ ಮಣ್ಣೂ ಹಳಿಗಳ ಮೇಲೆ ಸಂಗ್ರಹವಾಗುತ್ತಿತ್ತು. ಹೀಗಾಗಿ ಎಷ್ಟೋ ದಿನ ರೇಲು ಸಂಚಾರವೇ ಇರುತ್ತಿರಲಿಲ್ಲ. ಅದರಿಂದಾಗಿ ಯಾರೂ ರೇಲು ಹತ್ತುವ ಧೈರ್ಯ ಮಾಡುತ್ತಿರಲೇ ಇಲ್ಲ. ಬಸ್ಸೇ ಆರಾಮ ಎಂದುಕೊಂಡು ಬಸ್ಸಲ್ಲೇ ಹೋಗಿಬರುತ್ತಿದ್ದರು.
ಈ ರೇಲುರಸ್ತೆಯಲ್ಲಿರುವ ಒಂದು ಪುಟ್ಟ ಸ್ಟೇಶನ್ನಿನ ಹೆಸರು ಯಡಕುಮೇರಿ. ಅಲ್ಲಿ ಟ್ರೇನು ಸ್ವಲ್ಪ ಹೊತ್ತು ನಿಂತು ಹೋಗುವುದು ಪದ್ಧತಿ. ಒಂದು ವೇಳೆ ರಸ್ತೆಯಲ್ಲಿ ಅಡೆತಡೆಗಳಿದ್ದು ರೇಲು ಹೋಗುವುದು ದಿನಗಟ್ಟಲೆ ತಡವಾಗುತ್ತಿದ್ದರೆ ರೇಲಿನಲ್ಲಿರುವವರಿಗೆ ತಿಂಡಿತೀರ್ಥ ಸರಬರಾಜು ಮಾಡುವುದಕ್ಕೆ ಅಲ್ಲೊಂದು ಹೊಟೆಲೂ ಇತ್ತು.
ಅದನ್ನು ನಡೆಸುತ್ತಿದ್ದವನು ಕೃಷ್ಣಪ್ರಸಾದನ ಗೆಳೆಯ. ಅವನೇ ಆ ಜಾಗದಲ್ಲಿರುವ ವಿಚಿತ್ರ ಸದ್ದಿನ ಬಗ್ಗೆ ಕೃಷ್ಣಪ್ರಸಾದನಿಗೆ ಹೇಳಿದ್ದು.ಯಡಕುಮೇರಿಯಿಂದ ಆರು ಮೈಲಿ ದೂರದಲ್ಲೊಂದು ಒಂದೂವರೆ ಫರ್ಲಾಂಗು ಉದ್ದದ ಸುರಂಗವಿದೆ. ಆ ರೇಲ್ವೆ ಹಳಿಯಲ್ಲಿರುವ ಸುರಂಗಳ ಪೈಕಿ ಅದೇ ದೀರ್ಘವಾದದ್ದು. ಆದರೆ ಆ ಸುರಂಗ ಎಷ್ಟು ಕಿರಿದಾಗಿತ್ತೆಂದರೆ ರೇಲು ಬಂದರೆ ಬದಿಗೊತ್ತಿ ನಿಲ್ಲುವುದಕ್ಕೆ ಅಲ್ಲಿ ಜಾಗವೇ ಇರಲಿಲ್ಲ.ಸಾಮಾನ್ಯವಾಗಿ ಓಡಾಡುವವರಿಗೆ ತೊಂದರೆಯಾಗದಿರಲಿ ಎಂದು ಸುರಂಗದೊಳಗೆ ಅಲ್ಲಲ್ಲಿ ನಿಲ್ಲುವುದಕ್ಕೆ ಜಾಗ ಮಾಡಿರುತ್ತಾರೆ. ಅದೆಲ್ಲ ಮಣ್ಣು ಕುಸಿದು, ಪೊದೆಗಳು ಬೆಳೆದು ಮುಚ್ಚಿಹೋಗಿತ್ತು.
ಆ ಸುರಂಗದಿಂದ ಆ ಪ್ರದೇಶದ ಜನರಿಗೊಂದು ಉಪಕಾರವಾಗಿತ್ತು. ಅದನ್ನು ದಾಟಿ ಅವರು ನಡೆದುಕೊಂಡೇ ಸುಬ್ರಹ್ಮಣ್ಯಕ್ಕೋ ಶಿರಾಡಿಗೋ ಹೋಗಿ ಬರಬಹುದಾಗಿತ್ತು.ಹೀಗಾಗಿ ಅವರೆಲ್ಲ ಆ ಮಾರ್ಗವಾಗಿಯೇ ನಡೆದುಕೊಂಡು ಹೋಗುತ್ತಿದ್ದರು. ಆ ದಾರಿಯಲ್ಲಿ ಬರುವ ರೈಲಿಗೆ ಹೊತ್ತುಗೊತ್ತುಗಳೇ ಇರಲಿಲ್ಲ. ಮಳೆ ಮತ್ತು ಡ್ರೈವರನ ಮರ್ಜಿಗೆ ಅನುಸಾರವಾಗಿ ಅದು ನಡೆಯುತ್ತಿತ್ತೇ ವಿನಾ, ವೇಳಾಪಟ್ಟಿಯೆಂಬುದೇ ಅದಕ್ಕಿರಲಿಲ್ಲ. ಹೀಗಾಗಿ ಸುರಂಗದೊಳಗೆ ಕಾಲಿಡುವವರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಕಾಗುತ್ತಿರಲಿಲ್ಲ. ತಿಂಗಳಿಗೆ ಒಬ್ಬರೋ ಇಬ್ಬರೋ ಸಾಯುತ್ತಲೇ ಇದ್ದರು.
ಈ ಮಧ್ಯೆ ಇನ್ನೊಂದು ರಗಳೆಯೂ ಎದುರಾಯಿತು. ಪಕ್ಕದ ರಬ್ಬರು ತೋಟಕ್ಕೆ ಬರುವ ಕೂಲಿ ಹೆಂಗಸರ ಜೊತೆ ಮಲಗುವುದಕ್ಕೆ ಆ ಸುರಂಗವನ್ನು ತೋಟದವರ ಮಕ್ಕಳು ಬಳಸತೊಡಗಿದರು. ಇದು ಯಾವ ಮಟ್ಟಕ್ಕೆ ಹೋಗಿಯಿತೆಂದರೆ ಅರೆಬೆತ್ತಲೆಯಾಗಿದ್ದ ಜೋಡಿಶವವೊಂದು ರಕ್ತಸಿಕ್ತ ಸ್ಥಿತಿಯಲ್ಲಿ ಸುರಂಗದ ಮಧ್ಯಭಾಗದಲ್ಲಿ ಒಮ್ಮೆ ಪತ್ತೆಯಾಯಿತು. ಆ ಶವ ಗುರುತು ಕೂಡ ಹಿಡಿಯಲಾಗದ ಸ್ಥಿತಿಯಲ್ಲಿತ್ತು. ಆ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಬಂದವು. ಜನ ರೊಚ್ಚಿಗೆದ್ದರು. ಸುರಂಗದೊಳಗೆ ಲೈಟು ಹಾಕಿಸಬೇಕು ಎಂಬ ಅವಿವೇಕಿ ಉಪಾಯಗಳನ್ನು ಕೆಲವರು ಕೊಟ್ಟರು. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವ ಕೊನೆಯ ಪ್ರಯತ್ನವಾಗಿ ಸುರಂಗ ಎರಡೂ ಬದಿಯಲ್ಲಿ ಒಬ್ಬ ಕಾವಲುಗಾರನನ್ನು ರೇಲ್ವೆ ಇಲಾಖೆ ನೇಮಿಸಿತು. ಹಾಗೆ ನೇಮಕವಾದವನು ನಮ್ಮ ಕಥಾನಾಯಕ ಮಾದೇವ.
ಮಾದೇವ ಬೆಳಗಾವಿಯವನು. ಬಯಸು ಸೀಮೆಯಲ್ಲಿದ್ದ ಅವನಿಗೆ ಕಾಡು ಕಂಡೇ ಗೊತ್ತಿರಲಿಲ್ಲ. ಹೀಗಾಗಿ ಧುತ್ತೆಂದು ಕಾಡಿನ ನಡುವೆ ಕೆಲಸ ಮಾಡಬೇಕಾಗಿ ಬಂದಾಗ ಅವನು ಕೆಲಸ ಬಿಡುವುದೆಂದೇ ತೀರ್ಮಾನಿಸಿದ್ದ. ಆದರೆ ಅವನ ಮನೆಯ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಬೆಳಗಾಂನ ತನ್ನ ಹಳ್ಳಿಗೆ ಹೋಗಿ ಬದುಕುವ ಸ್ಥಿತಿಯಲ್ಲೂ ಅವನು ಇರಲಿಲ್ಲ. ಹೀಗಾಗಿ ಆತ ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡಬೇಕಾಯ್ತು.
ಅಲ್ಲಿ ಮಾಡುವುದಕ್ಕೇನೂ ಇರಲಿಲ್ಲ. ದಿನಕ್ಕೊಮ್ಮೆ ಬಂದು ಹೋಗುವ ಒಂದೇ ಒಂದು ರೈಲಿಗಾಗಿ ಕಾಯುವುದು ಬಿಟ್ಟರೆ ಬೇರೆ ಕೆಲಸವೇ ಇರಲಿಲ್ಲ. ಒಮ್ಮೆ ರೈಲು ಬಂದು ಹೋದರೆ ಮತ್ತೆ ಇಪ್ಪತ್ತು ಗಂಟೆಗಳ ಕಾಲ ಬರೋದಿಲ್ಲ ಅನ್ನೋದು ಅವನಿಗೆ ಖಾತ್ರಿಯಾಗಿತ್ತು. ಕ್ರಮೇಣ ಅವನು ಸುರಂಗದಾಟಿ ಹೋಗುವವರ ಕೈಲಿ ಒಂದು ರುಪಾಯಿಯೋ ಐವತ್ತು ಪೈಸೆಯೋ ಲಂಚ ತೆಗೆದುಕೊಂಡು ಅವರನ್ನು ಹೋಗಲು ಬಿಡುತ್ತಿದ್ದ. ಗುಡ್ಡ ಬಳಸಿಕೊಂಡು ಜೀಪಿನಲ್ಲಿ ಹೋದರೆ ಐದಾರು ರುಪಾಯಿ ಖರ್ಚಾಗುತ್ತಿದ್ದುದರಿಂದ ಅವರು ಒಂದು ರುಪಾಯಿ ಲಂಚ ಕೊಟ್ಟು ಹೋಗುವುದೇ ಲಾಭ ಎಂದುಕೊಂಡಿದ್ದರು. ಅದರಿಂದ ಮಾದೇವನಿಗೆ ಕಾಫಿ ಖರ್ಚು ಗಿಟ್ಟುತ್ತಿತ್ತು.
ಆಗಲೇ ಆತನಿಗೆ ಜಲಜಳ ಪರಿಚಯವಾದದ್ದು. ಆಕೆ ರಬ್ಬರು ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ಧಾರವಾಡದ ಹುಡುಗಿ. ಅವಳ ಕುಟುಂಬ ಬರ ತಾಳಲಾರದೆ ಯಡಕುಮೇರಿಗೆ ಬಂದಿತ್ತು. ಅಲ್ಲಿ ರಬ್ಬರು ತೋಟದಲ್ಲಿ ಕೆಲಸ ಮಾಡಿಕೊಂಡಿತ್ತು. ಎಲ್ಲ ಹುಡುಗಿಯರ ಹಾಗೆ ಜಲಜ ರಬ್ಬರು ತೋಟಕ್ಕೆ ಹೋಗದೇ ಬೀಡಿ ಕಟ್ಟುವುದನ್ನು ಆರಂಭಿಸಿದಳು. ಅದರಿಂದ ತಿಂಗಳಿಗೆ ಐನೂರೋ ಸಾವಿರವೋ ಸಂಪಾದನೆ ಮಾಡುತ್ತಿದ್ದಳು. ಕಟ್ಟಿದ ಬೀಡಿಯನ್ನು ಕೊಂಡುಹೋಗಿ ಬೀಡಿಬ್ರಾಂಚಿಗೆ ಕೊಡಬೇಕಾದರೆ ಆಕೆ ಸುರಂಗ ದಾಟಿ ಹೋಗಬೇಕಾಗಿತ್ತು. ದಿನಕ್ಕೊಂದು ಬಾರಿ ಸುರಂಗ ದಾಟಿ ಹೋಗುತ್ತಿದ್ದ ಆಕೆ ಮಾದೇವನನ್ನು ಸೆಳೆದಳು. ಮಾದೇವನಿಗೂ ಮದುವೆ ಆಗಿರಲಿಲ್ಲ. ಹೀಗಾಗಿ ಅವನೂ ಆಕೆಯನ್ನು ಮದುವೆಯಾಗುವ ಆಮಿಷವೊಡ್ಡಿ ತನ್ನ ಬಲೆಗೆ ಕೆಡವಿಕೊಂಡ.
ಬಲೆಗೆ ಕೆಡವಿಕೊಂಡ ಎನ್ನುವುದಕ್ಕಿಂತ ಪ್ರೀತಿಸಿದ ಎನ್ನುವುದೇ ವಾಸಿ. ಅವನ ಉದ್ದೇಶ ಕೆಟ್ಟದಾಗಿರಲಿಲ್ಲ. ಆತ ಆಕೆಗೆ ಮೋಸ ಮಾಡುವ ಉದ್ದೇಶ ಹೊಂದಿರಲಿಲ್ಲ.ಹದಿಹರೆಯದ ಗುರಿಯಿಲ್ಲದ ಪ್ರೀತಿಯಂತೆ ಅವನ ಪ್ರೀತಿಯೂ ಇತ್ತು. ಆಕೆಗೂ ಅದು ಬೇಕಾಗಿತ್ತು.
ಆದರೆ ಅದು ಕೊನೆಯಾದದ್ದು ದುರಂತದಲ್ಲಿ. ಆಗಸ್ಟ್ ತಿಂಗಳ ಒಂದು ಭಾನುವಾರ ಮಧ್ಯಾಹ್ನ ಜಲಜ ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಸುರಂಗದ ಒಳಗೆ ಸಾಗಿಹೋದ ಆಕೆ ಹೊರಗೆ ಬರಲಿಲ್ಲ. ಊರಿನವರಿಗೂ ಆಕೆಯ ತಂದೆಗೂ ಅನುಮಾನ ಬಂದದ್ದು ಮಾದೇವನ ಮೇಲೆ. ಅವನೇ ಏನೋ ಮಾಡಿರಬೇಕು ಎಂದುಕೊಂಡು ಅವರೆಲ್ಲ ಮಾದೇವನ ಮೇಲೆ ಏರಿಬಂದರು. ಈ ಮಧ್ಯೆ ಪೊಲೀಸರಿಗೂ ಸುದ್ದಿ ತಲುಪಿ ಅವರು ಹುಡುಕಾಟ ಆರಂಭಿಸಿದರು. ಕೊನೆಗೆ ಸುರಂಗದ ಮಧ್ಯಭಾಗದಲ್ಲಿ ಗೋಡೆಯ ಪಕ್ಕ ಬೆಳೆದಿದ್ದ ಪೊದೆಯೊಳಗೆ ಜಲಜಳ ಬಟ್ಟೆಗಳು ಸಿಕ್ಕಿದವು. ಅವುಗಳು ರಕ್ತಸಿಕ್ತವಾಗಿದ್ದವು. ಮಾದೇವನನ್ನು ಪೋಲಿಸರು ಒಯ್ದರು. ಶವ ಸಿಗದೇ ಇದ್ದಕಾರಣ, ಯಾವುದೇ ಸಾಕ್ಪಿಯಿಲ್ಲದ ಕಾರಣ ಮಾದೇವನಿಗೆ ಶಿಕ್ಪೆಯಾಗಲಿಲ್ಲ. ಜಲಜ ರೇಲಿಗೆ ಸಿಕ್ಕಿ ಸತ್ತಿದ್ದಾಳೆ ಎಂದು ಕೋರ್ಟಿನಲ್ಲಿ ತೀರ್ಮಾನವಾಯಿತು.
ಅಲ್ಲಿಗೆ ಒಂದು ಅಧ್ಯಾಯ ಮುಕ್ತಾಯವಾಯಿತು ಅಂತ ಎಲ್ಲರೂ ಅಂದುಕೊಂಡರು. ಆದರೆ ಹಾಗಾಗಲಿಲ್ಲ. ಸುರಂಗದೊಳಗಿನಿಂದ ಹೋಗುವವರಿಗೆ ಮಧ್ಯಭಾಗದಲ್ಲಿ ಯಾವುದೋ ಆಕೃತಿ ಕಣ್ಣಿಗೆ ಬೀಳುತ್ತದೆ ಎಂಬ ವದಂತಿಗಳು ಹಬ್ಬಿದವು. ಗುಂಪಾಗಿ ಹೋದವರು ಕೂಡ ಅದನ್ನೇ ಹೇಳುತ್ತಾ ಭಯಪಟ್ಟು ಓಡಿಬಂದು ಜ್ವರ ಹಿಡಿದು ತಿಂಗಳುಗಟ್ಟಲೆ ಮಲಗಿದರು. ಅಂತೂ ಆ ಸುರಂಗದೊಳಗೆ ಜಲಜಳ ಪ್ರೇತ ಓಡಾಡುತ್ತದೆ ಎಂಬ ಪ್ರತೀತಿ ಎಲ್ಲ ಕಡೆಯಲ್ಲೂ ಹಬ್ಬಿತು.
ಅದೇ ದೆವ್ವ ಒಂದು ದಿನ ಮಾದೇವನಿಗೂ ಕಣ್ಣಿಗೆ ಬಿತ್ತು. ಆ ದೆವ್ವ ಜಲಜಳದೇ ಅನ್ನುವುದು ಮಾದೇವನಿಗೆ ತಕ್ಪಣವೇ ಗುರುತು ಹತ್ತಿತು. ಗುರುತು ಹತ್ತಿದ್ದೇ ತಡ ಆತ ಆ ಜಲಜಳ ಪ್ರೇಮದಲ್ಲಿ ಮತ್ತೆ ಬಿದ್ದ. ಆ ದೆವ್ವವನ್ನೇ ಜಲಜಳೆಂಬಂತೆ ಪ್ರೀತಿಸತೊಡಗಿದ. ಶೂನ್ಯದ ಜೊತೆ ಮಾತಾಡತೊಡಗಿದ. ತನ್ನ ಕೆಲಸ ಮಾಡುವುದನ್ನೇ ಮರೆತ. ಅದೇ ಅವಧಿಯಲ್ಲಿ ಅಲ್ಲೊಂದು ರೇಲು ಅಪಘಾತವೂ ಘಟಿಸಿತು. ಆ ಅಪಘಾತದಲ್ಲಿ ಹದಿನಾರು ಮಂದಿ ತೀರಿಕೊಂಡರು. ಆ ಅಪಘಾತಕ್ಕೆ ಮಾದೇವನ ಬೇಜವಾಬ್ದಾರಿಯೇ ಕಾರಣ ಎಂದು ಹೇಳಿ ಇಲಾಖೆ ಅವನನ್ನು ಸಸ್ಪೆಂಡು ಮಾಡಿತು. ಆದರೆ ಅಮೇಲೆ ಕೂಡ ಮಾದೇವ ಆ ಜಾಗ ಬಿಟ್ಟು ಕದಲಲಿಲ್ಲ. ಅಲ್ಲೇ ಕುಳಿತುಕೊಂಡು ಜಲಜಳಿಗಾಗಿ ಕಾಯುತ್ತಿದ್ದ. ಆತ ಜಲಜಳ ಜೊತೆ ಮಾತಾಡುವುದನ್ನು ಕಂಡಿದ್ದೇವೆ ಎಂದು ತೀರಾ ನಂಬಿಕಸ್ತರೂ ಕೃಷ್ಣಪ್ರಸಾದನಿಗೆ ಹೇಳಿದ ನಂತರವೇ ಆತ ನನಗೆ ಕಾಗದ ಬರೆದಿದ್ದು. ನಾನು ಬೆಂಗಳೂರಿನಿಂದ ಒಬ್ಬನೇ ಬಂದು ಕೃಷ್ಣಪ್ರಸಾದನ ಗೈರು ಹಾಜರಿಯಲ್ಲಿ ಮಾದೇವನನ್ನು ಹುಡುಕಿಕೊಂಡು ಹೊರಟಿದ್ದು.
ನಾನು ಆ ಜಾಗ ತಲುಪುವ ಹೊತ್ತಿಗೆ ಸಂಜೆ ಇಳಿದಿತ್ತು. ಸುರಂಗದ ಕೊನೆ ಕಣಿವೆಯ ಕೆಳಭಾಗದಲ್ಲಿದ್ದು ಎರಡೂ ಬದಿಯಲ್ಲಿ ಗುಡ್ಡಗಳಿದ್ದವು. ಗುಡ್ಡದ ಒಂದು ತುದಿಯಲ್ಲಿ ಖಾಲಿ ಗುಡಿಸಲು ಒಂದಿತ್ತು. ಅದು ಜಲಜಳಿದ್ದ ಮನೆಯಂತೆ. ಸುರಂಗದ ಬಾಯಿಯ ಹತ್ತಿರ ಮಾದೇವ ಗುಡಾರ ಇತ್ತು. ನಾನು ಆ ಇಳಿಸಂಜೆಯಲ್ಲಿ ಮಾದೇವನ ಗುಡಾರದ ಹತ್ತಿರ ಹೋಗಿ ಅವನಿಗಾಗಿ ಹುಡುಕಾಡಿದೆ. ಅವನು ಕಾಣಿಸಲಿಲ್ಲ. ಎಲ್ಲೋ ಹೋಗಿರಬಹುದು, ಬೆಳಗ್ಗೆ ನೋಡೋಣ ಎಂದುಕೊಂಡು ಗುಡ್ಡ ಹತ್ತುತ್ತಿದ್ದಂತೆ ಕೆಳಗಡೆಯಿಂದ ಯಾರೋ ನಕ್ಕ ಸದ್ದು ಕೇಳಿಸಿತು. ತಿರುಗಿ ನೋಡಿದರೆ ಸಂಜೆಗಪ್ಪಿನಲ್ಲಿ ಮಾದೇವನ ಆಕೃತಿ ಅಸ್ಪಷ್ಟ ಕಂಡಿತು. ಅವನೇ ಮಾದೇವ ಇರಬೇಕು ಎಂದು ನಾನಂದುಕೊಂಡೆ. ನಿನ್ನ ಹತ್ತಿರ ಮಾತಾಡಬೇಕು, ಬೆಳಗ್ಗೆ ಬರುತ್ತೇನೆ ಎಂದು ಹೇಳಿದೆ. ಆ ಆಕೃತಿ ಮತ್ತೆ ನಕ್ಕು ಕ ಬೀಸಿತು.
ಅದೇ ರಾತ್ರಿ ನನಗೆ ಆ ಕ್ರೀ..ಚ್ ಸದ್ದು ಕೇಳಿಸಿದ್ದು. ಅದಾದ ನಂತರ ರೇಲು ಭೀಕರ ಸದ್ದು ಮಾಡುತ್ತಾ ಹಾದು ಹೋದದ್ದು.
-2-
ಬೆಳಗ್ಗೆ ಯಥಾಪ್ರಕಾರ ಎದ್ದು ನಾನು ಮಾದೇವನ ಗುಡಾರದ ಹತ್ತಿರ ಹೋದೆ. ಅಲ್ಲಿ ಕೆಲಸ ಮಾಡುವುದು ನಿಜಕ್ಕೂ ಸ್ವರ್ಗಸಮಾನ ಎನ್ನಿಸಿತು. ಹಸಿರು ನಳನಳಿಸುವ ಬೆಟ್ಟಗಳು, ಜುಳುಜುಳು ಹರಿಯುವ ನೀರಝರಿ, ಬಣ್ಣಬಣ್ಣದಹಕ್ಕಿಗಳು, ಎಂತೆಂಥದೋ ಹೂವುಗಳು.. ಇಡೀ ಪ್ರಕೃತಿ ಕಣ್ಣುತಣಿಸುವಂತಿತ್ತು.
ಮಾದೇವನ ಗುಡಾರದ ಬಳಿಗೆ ಹೋಗಿ ನಾನು ಅವನನ್ನು ಒಂದೆರಡು ಸಾರಿ ಕರೆದೆ. ಯಾರೂ ಬಾಗಿಲು ತೆರೆಯಲಿಲ್ಲ. ಎಲ್ಲಿಗೋ ಹೋಗಿರಬಹುದು ಅಂದುಕೊಂಡು ಮೆತ್ತಗೆ ಬಾಗಿಲು ತಳ್ಳಿದೆ. ಒಳಗೆ ಕತ್ತಲು ತುಂಬಿತ್ತು. ಜೇಡರ ಬಲೆ ಮುತ್ತಿಕೊಂಡು ಆ ಗುಡಾರದೊಳಗೆ ಇತ್ತೀಚೆಗೆ ಯಾರೂ ಕಾಲಿಡಲೇ ಇಲ್ಲವೇನೋ ಎಂಬಂತಿತ್ತು. ಹಾಗಿದ್ದರೆ ಮಾದೇವ ಎಲ್ಲಿ ಮಲಗುತ್ತಾನೆ, ನಿನ್ನೆ ಅವನನ್ನು ನಾನು ಇಲ್ಲೇ ತಾನೇ ನೋಡಿದ್ದು. ಆವನು ಬೇರೆ ಮನೆ ಮಾಡಿಕೊಂಡಿದ್ದಾನಾ ಎಂದು ಯೋಚಿಸುತ್ತಾ ಆ ಗುಡಾರದಂಥ ಮನೆಯ ಕಿಟಕಿ ತೆರೆದೆ.
ಆ ಬೆಳಕಿನಲ್ಲಿ ನನಗೆ ಕಂಡದ್ದುಮನೆಯ ಚಾವಣಿಯಿಂದ ನೇತಾಡುತ್ತಿದ್ದ ಒಂದು ಅಸ್ಥಿಪಂಜರ ಮಾತ್ರ. ನಾನು ಒಂದೇ ಉಸಿರಿಗೆ ಹೊರಗೆ ಓಡಿದೆ. ಅದೇ ಉಸಿರಲ್ಲಿ ಬೆಂಗಳೂರಿಗೆ ಕಂಬಿಕಿತ್ತೆ. ಈಗಲೂ ಒಮ್ಮೊಮ್ಮೆ ರಾತ್ರಿ ಕನಸಲ್ಲಿ ಆ ಅಸ್ಥಿಪಂಜರ ಬರುತ್ತದೆ. ನಾನು ವಿಹ್ವಲನಾಗುತ್ತೇನೆ. ಮತ್ತೆ ಆ ಜಾಗಕ್ಕೆ ಹೋಗೋಣ ಅನ್ನುತ್ತದೆ ಮನಸ್ಸು.
ನಾನು ಬೆಂಗಳೂರಿಗೆ ಬಂದು ಒಂದು ತಿಂಗಳಾದ ನಂತರ ಕೃಷ್ಣಪ್ರಸಾದನ ಕಾಗದ ಬಂತು. ನೀನು ಊರಿಗೆ ಬರುವ ಹೊತ್ತಿಗೆ ನಾನು ಇರಲಾಗಲಿಲ್ಲ.ಅರ್ಜೆಂಟಾಗಿ ಕೇರಳಕ್ಕೆ ಹೋಗಬೇಕಾಗಿ ಬಂತು. ನೀನು ಬಂದು ಹೋಗಿದ್ದು ಗೊತ್ತಾಯಿತು. ಆದರೆ ಈಗ ಬಂದು ಏನೂ ಉಪಯೋಗವಿಲ್ಲ. ಮಾದೇವ ಆವತ್ತೇ ತನ್ನೂರಿಗೆ ಹೊರಟು ಹೋದ ಅಂತ ಕಾಣುತ್ತದೆ. ಇತ್ತೀಚೆಗೆ ನಾನು ಅವನನ್ನು ನೋಡಲೇ ಇಲ್ಲ ಎಂದು ಆತ ಬರೆದಿದ್ದ. ಅದನ್ನು ನಾನು ಈಗಲೂ ಜೋಪಾನವಾಗಿಟ್ಟುಕೊಂಡಿದ್ದೇನೆ. ಆ ನೆನಪುಗಳ ಅಸ್ಥಿಪಂಜರದ ಜೊತೆಗೆ.
(ಪುತ್ತೂರಿನಿಂದ ಬೆಂಗಳೂರಿಗೆ ಮಂಗಳಾ ಎಕ್ಸ್ ಪ್ರೆಸ್ ಟ್ರೇನಿನಲ್ಲಿ ಬರುತ್ತಾ ಒಮ್ಮೆ ಎಡಕುಮೇರಿಯಲ್ಲಿ ಟ್ರೇನು ಎರಡೂವರೆ ದಿನ ನಿಂತೇ ಬಿಟ್ಟಿತ್ತು. ಅಲ್ಲಿರುವ ಪುಟ್ಟ ಹೊಟೆಲಿನ ತಿಂಡಿ ಖಾಲಿಯಾಗಿ, ಅಂಗಡಿಯ ಬಿಸ್ಕತ್ತುಗಳು ಅಷ್ಟೂ ಖರ್ಚಾಗಿ ಆಮೇಲೆ ನಾವು ಹಸಿ ಈರುಳ್ಳಿ ಮತ್ತು ಅಲಸಂದೆ ತಿನ್ನುತ್ತಾ ಕಾಲಕಳೆದದ್ದು ಮರೆಯದ ನೆನಪು. ಆ ನೆನಪಿಗೆ ಹುಟ್ಟಿದ್ದು ಈ ಕತೆ)
11 comments:
ಪ್ಯಾಸೆಂಜರ್ ರೈಲಿನ ಪಯಣದಷ್ಟೇ ಸ್ವಾರಸ್ಯಕರವಾಗಿತ್ತು,ಕತೆ. ಸಸ್ಪೆನ್ಸ್ ಚೆನ್ನಾಗಿದೆಯಾದರೂ, ಕತೆಗಳಲ್ಲಿ ಕೊಲಿಸುವ ಬಗ್ಗೆ ನಿಮ್ಮ ಪ್ರೀತಿ ಅತಿಯಾಯಿತೇನೊ?
Story is really goood...
Why is it all your stories ends with a tragedy?
ಗೊತ್ತಿಲ್ಲ ಕಣ್ರೀ. ಇಂಥ ಒಂದಷ್ಟು ಕತೆಗಳನ್ನು ಕೇಳಿ, ಅನುಭನಿಸಿ, ಹುಡುಕಾಡಿ ಬರೆದೆ. ಅವೆಲ್ಲವೂ ಹೀಗೆ ದುರಂತದಲ್ಲೇ ಕೊನೆಯಾಗುತ್ತವೆ. ಸಾಯದೇ ದೆವ್ವವಾಗಲಾರರು. ದೆವ್ವವಾಗದೇ ಕತೆ ಹುಟ್ಟದು ಅಲ್ಲವೇ?
-ಜೋಗಿ
Good story...It was one of my favorite places! I used to catch this train at the end of every semester. Even when I wasn’t hungry, I would get down at Edakumeri and eat at the restaurant. The valley was just an amaznig sight. The regular water in the tap used to be so cold as if it was from a refrigerator. We (me and my friends) even once trekked along this stretch and those tunnels and bridges were truly a great experience. As soon as I got my engineering degree, the railway service was shut down for a conversion project. It must be Madeva’s ‘devva’ haunting the project even after 10 years!! :)
monne paernalli railu maargakke safty certificate sikkirodu Odi santhosha vaayitu. adashtu bega bangalore -mangalore railu oDidre naanu oorige (puttur) train alli hogabahudu ;).
kathe chennagide .phots nodi naanu hostel time nalli edakumerige trek hogidvi .avaaginnu kelsa shuru aagittu ashte so tumba kade surangadalli podehabbittu. aa 2 dina da trek innu mariyoke sadhyane illa
kathe oduvaga "MOODE ILLADA MELE?" andukondidde."KATHE ODIDA MELE" 'Matte male hoyyutide ella nenapagutide' Thank u for the nice story.
sir ,one humble request.Im a friend&admirer of BALLA VENKATRAMANA BHAT .He was everything for me i lost a great friend.I came to know about u by him.Will u right some words about him in ur blog sir
hello brother...
nice blog
Pradyumna
ಅಣಾ,
ಹೋದ್ವರ್ಷ ಜುಗಾರಿ ಕ್ರಾಸ್ ಓದ್ದಾಗಿಂದ ಈ ಎಡಕುಮೇರಿ ಕಾಡ್ತಿದೆ. ಈಗ ಇನ್ನೊಂದ್ ಕತೆ, ಚಂದ ಇದೆ. ಈ ಕಳ್ ನನ್ಮಕ್ಳು ಗೌರ್ಮೆಂಟೋರು ಯಾವಾಗ ರೈಲ್ ಓಡಸ್ತಾರೋ! ವಂದಲ್ಲಾ ವಂದ್ ದಿನ ಅಲ್ಲಿಗೆ ಹೋಗ್ತೇನೆ.
Post a Comment