Thursday, April 12, 2007

ನಮ್ಮೂರ ಬಂಡಿ­ಯಲಿ ನಿಮ್ಮೂರ ಬಿಟ್ಟಾಗ....

ಬಂಡಿ­ಹೊ­ಳೆಯು ಸಣ್ಣ ಹಳ್ಳಿ; ನೂರೈ­ವ­ತ್ತೆ­ರಡು ಮನೆ­ಗಳು ಇರು­ತ್ತವೆ. ಜನ­ಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಒಂಬೈ­ನೂರು. ಪೂರ್ವ­ದಿ­ಕ್ಕಿಗೆ ಬೆಟ್ಟದ ಸಾಲು. ಉಳಿದ ದಿಕ್ಕು­ಗ­ಳಲ್ಲಿ ಹೇಮಾ­ವತಿ ನದಿ ಈ ಊರಿನ ಎಲ್ಲೆ­ಯೆಂದು ಹೇಳ­ಬ­ಹುದು. ಊರಿನ ಸುತ್ತಲೂ ಪೈರು­ಪ­ಚ್ಚೆ­ಗ­ಳಿಂದ ತುಂಬಿದ ಹೊಲ­ಗ­ದ್ದೆ­ಗಳೂ ಹಸುರು ಹುಲ್ಲಿನ ಗೋಮಾ­ಳ­ಗಳೂ ಪ್ರಕೃ­ತಿಯ ದಿನ­ಕ್ಕೊಂದು ವಿಧ­ವಾದ ಸೊಬ­ಗಿನ ನೋಟವೂ ನಮ್ಮೂ­ರಿನ ಕಳೆ­ಯನ್ನು ಹೆಚ್ಚಿ­ಸಿ­ದ್ದವು. ಊರಿನ ಸುತ್ತಲೂ ಕಳ್ಳಿ­ಬೂ­ತಾ­ಳೆ­ಗಳ ಬಲ­ವಾದ ಬೇಲಿ­ಗ­ಳಿ­ದ್ದವು. ಇತ್ತೀ­ಚೆಗೆ ಅದು ಕಮ್ಮಿ­ಯಾ­ಗು­ತ್ತಿದೆ. ಹೊರ ಊರು­ಗ­ಳಿಂದ ಬರುವ ದಾರಿ­ಗ­ಳಲ್ಲಿ ಹೇಮ­ಗಿ­ರಿ­ಯಿಂದ ಬರುವ ದಾರಿಯೇ ಸ್ವಲ್ಪ ಸುಮಾ­ರಾ­ಗಿತ್ತು. ಇದೇ ಹೆದ್ದಾರಿ. ಈ ಮಾರ್ಗ­ವಾಗಿ ಬರು­ವಾಗ ಬಲ­ಗಡೆ ಶ್ರೀಕಂ­ಠೇ­ಶ್ವರ ಸ್ವಾಮಿ ದೇವ­ಸ್ಥಾ­ನವು ಸಿಕ್ಕು­ವುದು. ಇದನ್ನು ಕಟ್ಟಿ ನೂರಾರು ವರ್ಷ­ಗ­ಳಾ­ದವು. ಆಳಿದ ಮಹಾ­ಸ್ವಾ­ಮಿ­ಯ­ವ­ರ­ರಾದ ಮುಮ್ಮಡಿ ಕೃಷ್ಣ­ರಾಜ ಒಡೆ­ಯ­ರ­ವರ ತಾಯಿ­ಯ­ವ­ರಾದ ಮಾತೃಶ್ರೀ ದೇವ­ರಾ­ಜ­ಮ್ಮ­ಣ್ಣಿ­ಯ­ವರು ಈ ದೇವ­ಸ್ಥಾ­ನ­ವನ್ನು ಕಟ್ಟಿಸಿ ಇದರ ಸೇವೆ­ಗಾಗಿ ವೃತ್ತಿ­ಗ­ಳನ್ನು ಬಿಟ್ಟಿ­ರು­ವರು. ಈ ಪುಣ್ಯಾ­ತ್ಮರ ವಿಗ್ರ­ಹವೂ ಅವರ ಜ್ಞಾಪ­ಕಾ­ರ್ಥ­ವಾಗಿ ಇದೇ ದೇವ­ಸ್ಥಾ­ನ­ದಲ್ಲಿ ಪ್ರತಿ­ಷ್ಠಾ­ಪಿ­ಸ­ಲ್ಪ­ಟ್ಟಿ­ರು­ವುದು.
ಊರಿನ ದಕ್ಪಿಣ ಭಾಗ­ದಲ್ಲಿ ಸ್ವಲ್ಪ ದೂರ­ವಾಗಿ ಏಳೂ­ರ­ಮ್ಮನ ತೋಪು ಮತ್ತು ಗುಡಿ­ಗ­ಳಿವೆ. ಪೂರ್ವ­ಕಾ­ಲ­ದಲ್ಲಿ ಇಲ್ಲಿಗೆ ಸುತ್ತು­ಮು­ತ್ತ­ಲಿನ ಏಳೂರು ಶಿಡಿ ತೇರು­ಗಳು ಬಂದು ದೊಡ್ಡ ಜಾತ್ರೆ­ಯಾಗಿ ಕುಸ್ತಿ ದೊಂಬ­ರಾಟ ಎಲ್ಲ ಆಗು­ತ್ತಿ­ದ್ದ­ವಂತೆ. ಈಗ ಏನೂ ಇಲ್ಲ. ಗುಡಿಯ ಮುಂದೆ ಏಳು ಕಲ್ಲು­ಗ­ಳಿವೆ. ಒಳಗೆ ಏಳು ದೇವ­ರು­ಗ­ಳಿವೆ. ನಮ್ಮೂ­ರಿ­ನಲ್ಲಿ ಐದಾರು ಮನೆ­ಗಳು ಬ್ರಾಹ್ಮ­ಣ­ರದು. ಉಳಿ­ದ­ದ್ದೆಲ್ಲಾ ಒಕ್ಕಲು ಮಕ್ಕ­ಳದು. ಬಡ­ಗಿ­ಗಳು ಅಕ್ಕ­ಸಾ­ಲಿ­ಗಳು, ವಾದ್ಯ­ದ­ವರು, ಅಗ­ಸರು, ಕುಂಬಾ­ರರ ಒಂದೆ­ರಡು ಮನೆ­ಗ­ಳಿ­ದ್ದವು.ಊರ ಹೊರಗೆ ದಕ್ಪಿಣ ದಿಕ್ಕಿ­ನಲ್ಲಿ ಹದಿ­ನಾರು ಗುಡಿ­ಸ­ಲು­ಗ­ಳಿ­ದ್ದ­ವಲ್ಲ ಅವೆಲ್ಲಾ ಹೊಲೆ­ಯ­ರದು. ಇವರು ತಮ್ಮ ಗುಡಿ­ಸ­ಲು­ಗಳ ಮಧ್ಯೆ ಒಂದು ಹೆಂಚಿನ ಮನೆ­ಯನ್ನು ಕಟ್ಟಿ ಅದ­ರಲ್ಲಿ ಮಾಯಮ್ಮ ದೇವ­ರ­ನ್ನಿಟ್ಟು ಪೂಜಿ­ಸು­ತ್ತಿ­ದ್ದರು.
ಊರಿನ ಹವಾ­ಗು­ಣವು ಆರೋ­ಗ್ಯ­ವಾ­ಗಿ­ದ್ದಿತು. ವ್ಯವ­ಸಾ­ಯವೇ ಮುಖ್ಯ­ವಾ­ಗಿ­ದ್ದು­ದ­ರಿಂದ ತಿಪ್ಪೇ­ಗುಂ­ಡಿ­ಗಳು ಊರಿಗೆ ಸಮೀ­ಪ­ವಾ­ಗಿ­ದ್ದವು. ಹಳೇ ಸಂಪ್ರ­ದಾ­ಯದ ಬೀದಿ­ಗಳೂ ಕೆಲ­ವಿ­ದ್ದವು. ಬೆಳ­ಕಿಗೆ ಅನು­ಕೂಲ ಕಮ್ಮಿ. ದನ­ಕ­ರು­ಗ­ಳನ್ನು ಮನೆ­ಯೊ­ಳಗೆ ಕಟ್ಟು­ತ್ತಿ­ದ್ದರು. ಇತ್ತೀ­ಚೆಗೆ ಗ್ರಾಮ­ಪಂ­ಚಾಯ್ತಿ ಏರ್ಪಾ­ಡಾಗಿ ಮೇಲಿನ ಕಷ್ಟ­ಗ­ಳೆಲ್ಲ ನಿವಾ­ರ­ಣೆ­ಯಾ­ಗು­ತ್ತ­ಲಿವೆ. ಬಾಲ್ಯ­ದಲ್ಲಿ ನೋಡಿದ ಬಂಡಿ­ಹೊ­ಳೆಯು ಈಗೀಗ ಗುಣ­ಮು­ಖ­ನಾದ ರೋಗಿಯು ಹಾಸಿ­ಗೆ­ಯಿಂ­ದೆದ್ದು ತಿರು­ಗಾ­ಡು­ವಂತೆ ಕಾಣು­ತ್ತಿ­ದ್ದಿತು. ಊರೊ­ಳಗೆ ಕಾಹಿಲೆ ಹರ­ಡಿ­ದಾಗ ಆರು ಮೈಲಿ ಆಚೆ­ಗಿ­ರುವ ವೈದ್ಯರು ಬಂದು ಔಷ­ಧಿ­ಗ­ಳನ್ನು ಕೊಡು­ತ್ತಿ­ದ್ದರು. ರೈತರು ವ್ಯವ­ಸಾ­ಯ­ಕ್ಕಾಗಿ ಊರಿಗೆ ದೂರ­ವಾದ ಬೈಲು­ಗ­ಳಲ್ಲೇ ಹೆಚ್ಚಾಗಿ ಕೆಲಸ ಮಾಡು­ತ್ತಿ­ದ್ದು­ದ­ರಿಂದ ಅನಾ­ರೋ­ಗ್ಯಕ್ಕೆ ಅವ­ಕಾ­ಶವು ಕಮ್ಮಿ­ಯಾ­ಗಿತ್ತು.


**­*­**

ಅರ್ಚಕ ಬಿ. ರಂಗ­ಸ್ವಾಮಿ ಯಾರು? ಈ ವ್ಯಕ್ತಿಯ ಬಗ್ಗೆ ಯಾಕೆ ಯಾರೂ ಬರೆ­ದಿ­ರ­ಲಿಲ್ಲ. 1933ರಲ್ಲಿ ಪ್ರಕ­ಟ­ವಾದ ಈ ಕೃತಿಯ ಬಗ್ಗೆ ಯಾವ ವಿಮ­ರ್ಶೆಯೂ ಯಾಕೆ ಬಂದಿಲ್ಲ. ಇದು ಬೇರೆ ಬೇರೆ ವಿಶ್ವ­ವಿ­ದ್ಯಾ­ಲ­ಯ­ಗಳ ಜಾನ­ಪದ ವಿದ್ಯಾ­ರ್ಥಿ­ಗ­ಳಿಗೆ ಆಕ­ರ­ಗ್ರಂ­ಥ­ವಾ­ಗಿದೆ ಎನ್ನುವ ಮಾತು ಮುನ್ನು­ಡಿ­ಯ­ಲ್ಲಿದೆ. ಆದಕೆ ಕೇವಲ ಆಕ­ರ­ಗ್ರಂ­ಥ­ವಾಗಿ ಉಳಿ­ಯು­ವಂಥ ಕೃತಿಯೇ ಇದು. ನವ­ರ­ತ್ನ­ರಾ್ ಅವರ ಕೆಲವು ನೆನ­ಪು­ಗಳು, ಎಂ. ಆರ್. ಶ್ರೀಯ­ವರ ರಂಗ­ಣ್ಣನ ಕನ­ಸಿನ ದಿನ­ಗಳು, ಬಿಜಿ­ಎಲ್ ಸ್ವಾಮಿ ಬರೆದ ಹಸು­ರು­ಹೊನ್ನು ಕೃತಿ­ಗ­ಳಂತೆ ಇದೂ ಕೂಡ ಯಾಕೆ ಪ್ರಸಿ­­ದ್ಧ­ವಾ­ಗ­ಲಿಲ್ಲ.

ಉತ್ತ­ರ­ಗ­ಳನ್ನು ಮರೆ­ತು­ಬಿ­ಡೋಣ. ಕೆ. ಆರ್. ಪೇಟೆ ತಾಲೂ­ಕಿನ ಬಂಡಿ­ಹೊಳೆ ಎಂಬ ಗ್ರಾಮದ ಕುರಿತು ಅರ್ಚಕ ಬಿ. ರಂಗ­ಸ್ವಾಮಿ ಬರೆ­ದಿ­ರುವ ಈ 200 ಪುಟ­ಗಳ ಪುಸ್ತ­ಕ­ವನ್ನು ತೀನಂಶ್ರೀ, ಗೊರೂರು ರಾಮ­ಸ್ವಾಮಿ ಅಯ್ಯಂ­ಗಾರ್, ಜೀಶಂಪ ಮುಂತಾ­ದ­ವರು ಮೆಚ್ಚಿ­ಕೊಂ­ಡಿ­ದ್ದರು ಅನ್ನು­ವುದು ಅವರು ಬರೆದ ಪತ್ರ­ದಿಂದ ಗೊತ್ತಾ­ಗು­ತ್ತದೆ. ಗೊರೂರು 1933ರಲ್ಲೇ ಇದನ್ನು ಆಕ­ಸ್ಮಿ­ಕ­ವಾಗಿ ಓದಿ ಸಂತೋ­ಷ­ಪ­ಟ್ಟ­ದ್ದನ್ನು ಲೇಖ­ಕ­ರಿಗೆ ಬರೆದು ತಿಳಿ­ಸಿದ್ದೂ ಪುಸ್ತ­ಕದ ಕೊನೆ­ಯ­ಲ್ಲಿದೆ. ಅವೆಲ್ಲ ಶಿಫಾ­ರ­ಸು­ಗ­ಳನ್ನು ಮರೆತು ಕೂಡ ಸುಖ­ವಾಗಿ ಓದಿ­ಸಿ­ಕೊಂಡು ಹೋಗುವ ವಿಚಿತ್ರ ಗುಣ ಈ ಪುಸ್ತ­ಕಕ್ಕೇ ಅದು ಹೇಗೋ ದಕ್ಕಿ­ಬಿ­ಟ್ಟಿದೆ.

**­*­*­*­**

ನಮ್ಮೂ­ರಿನ ವಾರ್ಷಿಕ ಉತ್ಪ­ನ್ನವು ನಾಲ್ಕು ತಿಂಗ­ಳಿಗೆ ಸಾಕಾ­ಗು­ವಂ­ತಿತ್ತು. ಮೂರು ತಿಂಗಳು ಕೂಲಿ­ಯಿಂದ ಜೀವನ. ಇನ್ನು­ಳಿದ ತಿಂಗ­ಳಲ್ಲಿ ಇದ್ದ ಗದ್ದೆ ಹೊಲ ಮಾರಿ ಜೀವನ. ಬೆಳೆಯು ಕಮ್ಮಿ­ಯಾದ ವರ್ಷ ನಮ್ಮೂ­ರಿನ ಪಾಡು ದೇವ­ರಿಗೇ ಪ್ರೀತಿ. ಹರಕು ಬಟ್ಟೆಯು ಸಾರ್ವ­ತ್ರಿ­ಕ­ವಾ­ಗಿತ್ತು. ತಲೆಗೆ ಎಣ್ಣೆ ಕಾಣ­ದ­ವರೂ ಎರಡು ಹೊತ್ತು ಊಟ­ವಿ­ಲ್ಲದೇ ಇರು­ವ­ವರೂ ಅನೇ­ಕ­ರಿ­ದ್ದರು. ಇನ್ನೇನೂ ಉಳಿ­ದಿ­ಲ್ಲ­ವೆಂದು ತಿಳಿದ ಮೇಲೆ ಕಾಫಿ­ತೋ­ಟಕ್ಕೆ ಹೋಗಿ ಸೇರುವ ವಾಡಿಕೆ. ಒಟ್ಟಿನ ಮೇಲೆ ಬಡ­ತ­ನವು ಅಸಾ­ಧ್ಯ­ವಾಗಿ ಸಂತೋ­ಷ­ದಿಂದ ನಗು­ವುದೂ ಮಾಮೂಲು ಮೀರ­ಲಾ­ಗದೇ ವಿನಾ­ನಿ­ಜ­ವಾದ ಸನ್ನಿ­ವೇ­ಶ­ದಿಂದ ಇರ­ಲಿಲ್ಲ. ಕೊಟ್ಟ ಕಾಳು­ಗ­ಳನ್ನು ಕಟ್ಟಿ­ಕೊ­ಳ್ಳಲು ತಮಗೆ ಬಟ್ಟೆ­ಯಿ­ಲ್ಲ­ದು­ದ­ರಿಂದ ಕಷ್ಟ­ಪ­ಡು­ವ­ವ­ರನ್ನೂ ನಾಚಿ­ಕೊ­ಳ್ಳು­ವ­ವ­ರನ್ನೂ ನೋಡಿತು ಈ ಕಣ್ಣು, ಮರು­ಗಿತು ಈ ಮನವು.

**­*­*­**

ಇದು ಮತ್ತೊಂದು ಚಿತ್ರ. ಹಳ್ಳಿಯ ಜೀವ­ನದ ಎರಡೂ ಮುಖ­ಗ­ಳನ್ನೂ ರಂಗ­ಸ್ವಾಮಿ ಕಂಡಂತೆ ತುಂಡ­ರಿಸಿ ನಮ್ಮ ಮುಂದಿ­ಟ್ಟಿ­ದ್ದಾರೆ. ಆದಷ್ಟೂ ತಮ್ಮ ಸಹಾ­ನು­ಭೂತಿ, ಮರುಕ ಮತ್ತು ಭಾವು­ಕ­ತೆ­ಗ­ಳನ್ನು ಬದಿ­ಗಿಟ್ಟು ಬರೆ­ದಿ­ದ್ದಾರೆ. ಇಂಥ ಪ್ರಬಂ­ಧ­ಗ­ಳನ್ನು ಬರೆ­ಯುವ ಹೊತ್ತಿಗೆ ಒಂದೋ ಅಹಂ­ಕಾರ ಇಲ್ಲವೇ ಆತ್ಮಾ­ನು­ಕಂಪ ಲೇಖ­ಕ­ರನ್ನು ಬಾಧಿ­ಸು­ವು­ದಿದೆ. ಇವೆ­ರ­ಡರ ನೆರಳೂ ಬೀಳ­ದಂತೆ ಬರೆ­ಯ­ಹೊ­ರ­ಟಾಗ ಅದು ವರ­ದಿ­ಯಾ­ಗುವ ಅಪಾ­ಯವೂ ಇದೆ. ಆದರೆ ರಂಗ­ಸ್ವಾಮಿ ತಮ್ಮೂ­ರನ್ನೂ ಸಾಧ್ಯ­ವಾ­ದಷ್ಟೂ ನಿರು­ದ್ವಿ­ಗ್ನ­ವಾಗಿ ನಿರು­ಮ್ಮ­ಳ­ವಾಗಿ ನೋಡಿ­ದ್ದಾರೆ. ತಾವೂ ಕೂಡ ಅದೇ ಹಳ್ಳಿಯ ಒಂದು ಭಾಗ ಎಂಬಂತೆ ಅನು­ಭ­ವಿ­ಸಿ­ದ್ದನ್ನು ಬರೆ­ದಿ­ದ್ದಾರೆ.

**­*­*­**

ಹಿಂದ­ಣ­ವರು ತಿಳಿ­ದಿದ್ದ ಆತ್ಮೀಯ ತೃಪ್ತಿ, ಆಧ್ಯಾ­ತ್ಮಿಕ ಶಾಂತಿಯೇ ಮುಖ್ಯ­ಲ­ಕ್ಪ­ಣ­ವಾದ ನಾಗ­ರಿ­ಕ­ತೆಯು ಈಗ ಇರ­ಲಿಲ್ಲ. ಮೊದಲ ಕಾಲ­ದ­ವರು ಒಬ್ಬೊ­ಬ್ಬ­ರಿ­ದ್ದ­ರಲ್ಲ ಅವರು ಮಂಡಿ­ಯಿಂದ ಮೇಲೆ ದಟ್ಟಿ ಸುತ್ತಿ­ದ್ದರು. ಆದ­ರದು ಸ್ವಚ್ಛ­ವಾ­ಗಿತ್ತು. ಅವರ ಮೈಕಟ್ಟು ತೇರಿನ ಹೂರ್ಜಿ ಹಗ್ಗ­ದಂತೆ ಗಟ್ಟಿ­ಯಾ­ಗಿಯೂ ವಿಭ­ಕ್ತ­ವಾ­ಗಿಯೂ ಪುಷ್ಟ­ವಾ­ಗಿಯೂ ಇತ್ತು. ಮುಖ­ದಲ್ಲಿ ಆರ್ಯ­ಜ­ನಾಂಗ ಸೂಚ­ಕ­ವಾದ ಗಂಧ­ವಿ­ಭೂತಿ ನಾಮದ ಚಿನ್ಹೆ­ಗಳು ಅವರ ಅಂತ­ಸ್ತೃ­ಪ್ತಿ­ಯನ್ನು ತುಂಬಿ­ಕೊಂಡ ಮುಖ­ಕುಂ­ಭ­ಕ್ಕೊ­ತ್ತಿದ ಮುದ್ರೆ­ಯಂತೆ ಕಾಣು­ತ್ತಿ­ದ್ದವು. ಒಟ್ಟಿನ ಮೇಲೆ ಸರಳ ಜೀವನ ದೇಹ­ಪ­ಟುತ್ವ, ಶುಚಿತ್ವ ಸಾಮಾ­ನ್ಯ­ವಾಗಿ ಇಹ­ಪ­ರ­ಗಳ ಜ್ಞಾನ ಇವೆಲ್ಲ ಹಳೇ ನಾಗ­ರಿ­ಕ­ತೆಯ ಹಳ್ಳಿ­ಗನ ಲಕ್ಪ­ಣ­ಗ­ಳಾ­ಗಿ­ದ್ದಿತು. ಇತ್ತೀ­ಚೆಗೆ ಘನ­ಗಾ­ಬ­ರಿಯ ನಾಗ­ರಿ­ಕತೆ ಬಂದಿದೆ.
ಅರ್ಧ ಶತ­ಮಾ­ನಕ್ಕೆ ಹಿಂದೆ ಕೂಲಿ ಮಠ­ಗ­ಳಿ­ದ್ದವು. ಆಗ ಜೈಮಿನಿ ಭಾರತ, ಅಮ­ರ­ಕೋಶ, ರಾಮಾ­ಯಣ, ಅಡ್ಡ, ಹಾಗ, ಮುಪ್ಪಾ­ಗದ ಲೆಕ್ಕ­ಗಳು ಇವೆಲ್ಲಾ ಬಳ­ಕೆ­ಯ­ಲ್ಲಿ­ದ್ದವು. ಆಗಿನ ಕಾಲದ ಹಳ­ಬರು ಅನೇ­ಕ­ವಾಗಿ ಬಾಯಲ್ಲಿ ಹೇಳು­ತ್ತಿ­ದ್ದರು. ಇತ್ತೀ­ಚೆಗೆ ನೂತನ ರೀತಿಯ ಪಾಠ­ಶಾಲೆ ಬಂದಿದೆ. ಸಮು­ದ್ರದ ಏರಿ­ಳಿ­ತ­ದಂತೆ ಒಂದು ಸಲ ಅತ್ಯು­ನ್ನತ ಸ್ಥಿತಿಗೆ ಬರು­ತ್ತದೆ.
ಬ್ರಾಹ್ಮ­ಣರ ಮನೆ ನಾಲ್ಕೈದು ಮಾತ್ರ­ವೆಂದು ಹೇಳಿ­ದೆ­ಯಷ್ಟೇ. ಇವರು ಸ್ನಾನ ಜಪ ದೇವ­ರ­ಪೂ­ಜೆ­ಯಲ್ಲೇ ವಿಶೇಷ ಆಸ­ಕ್ತ­ರಾ­ಗಿ­ದ್ದರು. ಶ್ರುತಿ­ಸ್ಮೃ­ತಿ­ಗಳ ವಿಚಾ­ರ­ದಲ್ಲಿ ಸಂದೇಹ ಬಂದರೆ ಮಸೂ­ರಿಗೆ ಹೋಗಿ ಪಂಡಿ­ತ­ರಿಂದ ಸರಿ­ಯಾದ ವಿಷಯ ತಿಳಿ­ದು­ಕೊಂಡು ಬರು­ತ್ತಿ­ದ್ದರು. ಅಕ­ಸ್ಮಾತ್ತು ಯಾರಾ­ದರೂ ತಪ್ಪು ಮಾಡಿ­ದರೆ ಇಬ್ಬರು ಬ್ರಾಹ್ಮ­ಣರು ವಿಧಿ­ಸಿದ ತೀರ್ಮಾ­ನ­ವನ್ನು ಒಪ್ಪಿ­ಕೊಂಡು ತಪ್ಪಿ­ನಿಂದ ಬಿಡು­ಗ­ಡೆ­ಯಾ­ಗ­ಬೇ­ಕಿತ್ತು. ಮದುವೆ ಸಮ­ಯ­ದಲ್ಲಿ ಮತ­ತ್ರಯ, ಸ್ಥಳ, ಪರ­ಸ್ಥಳ, ಕಾವೇರಿ ಸಂಧ್ಯಾ­ಮಂ­ಟಪ ಮುಂತಾ­ದ­ವು­ಗ­ಳಿಗೆ ತಾಂಬೂ­ಲ­ವೆ­ತ್ತು­ತ್ತಿ­ದ್ದರು. ಕಾವೇರಿ ಸಂಧ್ಯಾ­ಮಂ­ಟ­ಪದ ತಾಂಬೂ­ಲ­ವನ್ನು ಯಾಕೆ ಎತ್ತ­ಬೇ­ಕೆಂಬ ಚರ್ಚೆ ಪ್ರತಿ ಮದು­ವೆ­ಯಲ್ಲೂ ಇತ್ತು. ಒಂದು ಸಲ ಪುರೋ­ಹಿ­ತ­ರಿಗೆ ತಾಂಬೂಲ ಕೊಡು­ವು­ದನ್ನು ಮರೆ­ತರು. ` ಓಹೋ ಬ್ರಹ­ಸ್ಪತಿ ಪೀಠಕ್ಕೆ ಅವ­ಮಾ­ನ­ವಾಗಿ ಹೋಯ್ತು' ಎಂದು ಪುರೋ­ಹಿ­ತರು ಆಗಲೇ ಮೂಟೆ ಹೆಗ­ಲಿಗೆ ಹಾಕಿ­ದ್ದರು. ಅವ­ರನ್ನು ಸಮಾ­ಧಾನ ಮಾಡುವ ಹೊತ್ತಿಗೆ ಸಾಕಾಗಿ ಹೋಯ್ತು.

**­*­*­**

ನಾಸ್ಟಾ­ಲ್ಜಿಯ ಯಾರೆಷ್ಟೇ ಕೆಟ್ಟದು ಎಂದರೂ ಅದ­ರಿಂದ ತಪ್ಪಿ­ಸಿ­ಕೊ­ಳ್ಳು­ವುದು ಕಷ್ಟ. ರಂಗ­ಸ್ವಾಮಿ ಪುಸ್ತ­ಕ­ವನ್ನು ಓದುತ್ತಾ ಇದ್ದರೆ ಕಾಲದ ಕಾಲು­ವೆ­ಯಲ್ಲಿ ಹಿಂದಕ್ಕೆ ಪ್ರಯಾಣ ಮಾಡಿ­ದಂತೆ ಭಾಸ­ವಾ­ಗು­ತ್ತದೆ. ಬೆಂಗ­ಳೂ­ರಿನ ಜನ­ಜಂ­ಗುಳಿ, ಟೀವಿ, ಸಿನಿಮಾ, ಮೆಜೆ­ಸ್ಟಿ­ಕ್ಕಿನ ಗದ್ದಲ, ಕ್ರಿಕೆ್ ಮ್ಯಾಚು ಎಲ್ಲ­ವನ್ನೂ ಮರೆ­ತು­ಬಿ­ಡ­ಬೇಕು ಅನ್ನಿ­ಸು­ತ್ತದೆ. ಊರ ತುಂಬ ದನ­ಕ­ರು­ಗಳು, ಗಾಳಿ ಮಳೆ ಬಿಸಿ­ಲಿಗೆ ಜಪ್ಪಯ್ಯ ಎನ್ನದೆ ನಿಂತ ಮಾವಿನ ತೋಪು, ಆಷಾ­ಢದ ಗಾಳಿಗೆ ಮನೆ­ಯೊ­ಳಗೆ ನುಗ್ಗಿ­ಬ­ರುವ ಕಸ­ಕಡ್ಡಿ ಮರಳು ಮಣ್ಣು, ಬೇಸ­ಗೆ­ಯಲ್ಲೂ ತಣ್ಣ­ಗಿ­ರುವ ಹೊಳೆ, ಚಪ್ಪಲಿ ಹಾಕದ ಕಾಲಿಗೆ ಹಿತ­ವಾಗಿ ಒದ­ಗುವ ಹಳ್ಳಿಯ ನೆಲ, ಮುದ್ದೆ, ಅನ್ನ, ಸಾರು, ಚಟ್ನಿಯ ಊಟ. ಜಗ­ಲಿ­ಯಲ್ಲಿ ಗಾಳಿಗೆ ಕಾಯುತ್ತಾ ಮಲಗಿ ಸುಖಿ­ಸುವ ಅಪ­ರಾಹ್ಣ, ಶಾಲೆ­ಯಲ್ಲಿ ಕನ್ನ­ಡ­ದಲ್ಲಿ ಪಾಠ ಓದುತ್ತಾ ಕನ್ನಡ ಹಾಡು ಹೇಳುವ ಮಕ್ಕಳು, ಹಬ್ಬ ಬಂದಾಗ ಹೊಸ ಬಟ್ಟೆ ತೊಟ್ಟು ಕುಣಿ­ಯುವ ಮಕ್ಕಳು, ಹೊಳೆ­ದಂ­ಡೆ­ಯಲ್ಲಿ ಗುಟ್ಟಾಗಿ ಜಿನು­ಗುವ ಪ್ರೀತಿ, ಧೋ ಎಂದು ಸುರಿ­ಯವ ಮಳೆಗೆ ಸೋರುವ ಮನೆ­ಯೊ­ಳಗೆ ಆಡುವ ಆಟ...
ನಾಗ­ರಿ­ಕತೆ ಎಲ್ಲ­ವನ್ನೂ ಮರೆ­ಸು­ತ್ತದೆ. ಹಳ್ಳಿ­ಗ­ಳಲ್ಲೇ ಉಳಿ­ದು­ಬಿ­ಟ್ಟ­ವ­ರಿಗೆ ಇವು ಲಕ್ಪು­ರಿ­ಯಲ್ಲ. ಆದರೆ ನಗ­ರಕ್ಕೆ ಬಂದು ಬೀರು­ಬಾ­ರು­ಗಳ, ಕ್ರೆಡಿಟ್ ಕಾರ್ಡು­ಗಳ, ಏಸಿ ರೂಮು­ಗಳ, ಚಿಕ್ ಬಿರಿ­ಯಾ­ನಿ­ಗಳ ಲೋಕಕ್ಕೆ ಸಂದ­ವ­ರಿಗೆ ಹಳ್ಳಿಯ ಕಷ್ಟ­ಕಾ­ರ್ಪ­ಣ್ಯದ ದಿನ­ಗಳ ನೆನಪೇ ಒಂದು ಲಕ್ಪುರಿ. ಆದರೆ ಅಂಥ ವ್ಯಕ್ತಿ ಕೊಂಚ ಸೃಜ­ನ­ಶೀ­ಲನೂ ಮಾನ­ವೀ­ಯನೂ ಆಗಿ­ದ್ದರೆ ನೆನ­ಪು­ಗ­ಳಲ್ಲೇ ಆತ ಮರು­ಹುಟ್ಟು ಪಡೆ­ಯ­ಬಲ್ಲ ಕೂಡ.
ಹಾಗೆ ಮರು­ಹು­ಟ್ಟಿಗೆ ಕಾರ­ಣ­ವಾ­ಗುವ ಶಕ್ತಿ ಅರ್ಚಕ ರಂಗ­ಸ್ವಾ­ಮಿ­ಯ­ವರ ಕೃತಿ­ಗಿದೆ. ಎಲ್ಲಾ­ದರೂ ಸಿಕ್ಕರೆ ಬಿಡದೆ ಓದಿ.
**­*­**
ಬಂಡೀ­ಹ­ಳ್ಳಿಯ ಮಾತು­ಗಳು ಹೇಗಿ­ರು­ತ್ತವೆ ಅನ್ನು­ವು­ದ­ಕ್ಕೊಂದು ಉದಾ­ಹ­ರಣೆ ತಗೊಳ್ಳಿ;
ವಾದಿ- ಇದೋ ನೀವು ಹತ್ತೂ ಜನ ಸೇರಿ­ದ್ದೀರಿ. ನಾನು ಬಡವೆ, ತಿರ­ಕೊಂಡು ತಿಂಬೋಳು. ನನ್ನ ಕೋಳೀನ ನೆನ್ನೆ ರಾತ್ರಿ ಇವ­ರಿ­ಬ್ಬರೂ ಸೇರಿ ಮುರ್ದವ್ರೆ. ನ್ಯಾಯಾನ ನೀವೇ ಪರಿ­ಹ­ರಿಸಿ.
ಪ್ರತಿ­ವಾ­ದಿ­ಗಳು- ನಾನಲ್ಲ, ದೇವ್ರಾಣೆ, ನನ್ನಾಣೆ, ನಿಮ್ಮಾಣೆ ನಾವಲ್ಲ.
ಮುಖಂ­ಡರು ಕಾಗ­ದ­ವನ್ನು ತರಿಸಿ `ನೋಡೀ ಕೆಟ್ಹೋ­ಗ್ತೀರಿ, ಬ್ಯಾಡೀ, ಬ್ಯಾಡೀ, ಪೊಲೀ­ಸ್ರಿಗೆ ಅರ್ಜಿ ಕೊಡ್ತೀವಿ, ನಿಜಾ ಹೇಳ್ರೀ'
ಪ್ರತಿ­ವಾ­ದಿ­ಗಳು (ಮೆ­ತ್ತಗೆ)- ನಾವು ಬತ್ತಾ ಹರ್ಡಿದ್ದೋ, ಮೇಯೋಕೆ ಕೋಳಿ­ಗಳು ಬಂದೊ, ದೊಣ್ಣೇಲಿ ಹಿಂಗಂದೊ ನೆಗೆದು ಬಿದ್ಹೋದೋ. ಹೊತ್ತಾ­ರೀಕೆ ಕೊಡೋನೆ ಅಂತ ರಾತ್ರಿ ಮನೇಲಿ ಮಡ­ಗಿದ್ದೊ.
ಮುಖಂ­ಡರು ನಾನಲ್ಲ ನಾನಲ್ಲ ಅಂತ ಸುಳ್ಳು ಹೇಳಿ­ದ್ದ­ಕ್ಕಾಗಿ ನಾಲ್ಕಾಣೆ ಜುಲ್ಮಾನೆ ವಿಧಿಸಿ ನಾಲ್ಕಾ­ಣೆ­ಯನ್ನೂ ಕೋಳಿ­ಗ­ಳನ್ನೂ ವಾದಿಗೆ ಕೊಡಿಸಿ ಉಳಿದ ನಾಲ್ಕಾ­ಣೆ­ಯನ್ನು ಊರೊ­ಟ್ಟಿನ ಹಣಕ್ಕೆ ಸೇರಿ­ಸಿ­ದರು.
ಸಭಿ­ಕ­ರ­ಲ್ಲೊಬ್ಬ- ಹೋಗ್ರಯ್ಯ. ಎಂತಾ ನ್ಯಾಯ ಹೇಳಿದ್ರಿ. ಅವ­ರಿ­ಬ್ಬರ ಮೇಲೂ ಕೋಳಿ ಹೊರ್ಸಿ ಊರೆಲ್ಲ ಮೆರ­ವ­ಣಿಗೆ ಮಾಡಿ­ಸೋದು ಬಿಟ್ಟು ಜುಲ್ಮಾ­ನೆ­ಯಂತೆ ಜುಲ್ಮಾನೆ.
ಮುಖಂ­ಡರು- ಓಹೋ.. ಇಲ್ಲಿ ಸೇರಿರೋ ಜನವೇ ಊರೆಲ್ಲಾ ಆಯ್ತು. ಇನ್ನು ತಿರುಗಿ ಬೇರೆ ಮಾನಾ ಹೋಗ­ಬೇಕೋ
.

**­*­*­**

ಇದನ್ನು ಓದಿದ ನಂತರ ವಿವ­ರಿ­ಸು­ವು­ದಕ್ಕೆ ಹೋಗ­ಬಾ­ರದು. ಅದು ಅಧಿ­ಕ­ಪ್ರ­ಸಂ­ಗ­ವಾ­ಗು­ತ್ತದೆ.

1 comment:

sritri said...

" ಒಂದು ಸಲ ಪುರೋ­ಹಿ­ತ­ರಿಗೆ ತಾಂಬೂಲ ಕೊಡು­ವು­ದನ್ನು ಮರೆ­ತರು... ".... ಈ ಪ್ರಸಂಗ ಓದಿ, ನಮ್ಮ ಮದುವೆಯಲ್ಲಿಯೂ ಇದೇ ತಾಂಬೂಲದ ವಿಷಯವಾಗಿ ನಡೆದ ರಣ -ರಾದ್ಧಾಂತಗಳ ನೆನಪಾಗಿ ಜೋರಾಗಿ ನಕ್ಕು ಬಿಟ್ಟೆ :))