Saturday, April 7, 2007

ಚಾರ್ಮಾಡಿ ಘಾಟಿಯ ತುದಿಯಲ್ಲಿ ಪರಿಸರದ ಕತೆಯಿಲ್ಲನಾನು ಬೆಂಗಳೂರಿನಿಂದ ನಮ್ಮೂರಾದ ಉಪ್ಪಿನಂಗಡಿಗೆ ಹೋಗುವಾಗೆಲ್ಲ ನೇರವಾದ ಶಿರಾಡಿ ಘಾಟಿಯ ಹಾದಿ ಬಿಟ್ಟು ಒಂದೋ ಚಾರ್ಮಾಡಿ ಘಾಟಿ ಅಥವಾ ಬಿಸಲೆ ಘಾಟಿಯ ಮೂಲಕ ಹೋಗುತ್ತೇನೆ. ಹಾಗೆ ಸುತ್ತಿ ಬಳಸಿ ಹೋಗುವುದಕ್ಕಿದ್ದ ಕಾರಣಗಳು ಅನೇಕ- ಬಿಸಲೆ ಘಾಟಿಯ ನಿರ್ಜನ ಹಾದಿಯ ಆಕರ್ಷಣೆ, ದಾರಿಯಲ್ಲಿ ಮಳೆಗೋ ಗಾಳಿಗೋ ಬಿದ್ದ ಮರದಿಂದಾಗಿ ಪ್ರಯಾಣ ನಿಲುಗಡೆಯಾಗಿ, ಕಾಡಿನಲ್ಲೊಂದು ರಾತ್ರಿ ಕಳೆಯುವ ಅವಕಾಶವಾಗಲಿ ಅನ್ನುವ ಆಸೆ, ಆ ಪ್ರದೇಶದಲ್ಲಿ ಆಗೀಗ ರಸ್ತೆಗೆ ಅಡ್ಡವಾಗಿ ಸಿಗುವ ಆನೆಹಿಂಡು ಕಣ್ಣಿಗೆ ಬಿದ್ದೀತೆಂಬ ದುರಾಸೆ.
ಹಾಗೇ ಚಾರ್ಮಾಡಿ ಘಾಟಿಯ ಕಡಿದಾದ ತಿರುವುಗಳೆಂದರೆ ನನಗೆ ಪ್ರೀತಿ. ಅದಕ್ಕಿಂತ ಪ್ರೀತಿಯೆಂದರೆ ಮೂಡಿಗೆರೆಯಲ್ಲಿ ಒಂದಷ್ಟು ಹೊತ್ತು ಉಳಿದು, ತೇಜಸ್ವಿಯವರ ಮನೆಯಲ್ಲಿ ಗಡದ್ದು ಊಟ ಹೊಡದು ಹೋಗುವ ಆಶೆ. ಜೊತೆಗೇ ಅವರೊಂದಿಗೆ ಮಾತಾಡಿ ಒಂದಷ್ಟು ಹೊಸತನ ತುಂಬಿಕೊಳ್ಳುವ ಬಯಕೆ. ಅವರು ಸಿಗದೇ ಹೋದರೆ ಕೊಟ್ಟಿಗೆ ಹಾರದ ನೀರುದೋಸೆ, ಕಕ್ಕಿಂಜೆಯ ವಿಚಿತ್ರ ವ್ಯಾಮೋಹ ಕೂಡ ಸಾಕಷ್ಟು ರೋಚಕವಾಗೇ ಕಾಣುತ್ತಿತ್ತು. ಹ್ಯಾಂಡ್ ಪೋಸ್ಟಿನ ಕಡೆಗೆ ಕಾರು ತಿರುಗಿಸಿ, ಹಳದಿ ಬಣ್ಣ ಬಳಿದ ತೇಜಸ್ವಿಯವರ ತೋಟದ ಗೇಟು ತೆಗೆದು ಕೆಳಗಿಳಿದರೆ ಅನತಿ ದೂರಕ್ಕೇ ಅವರ ಮನೆ.
ಶಿರಾಡಿ, ಬಿಸಲೆ, ಸಂಪಾಜೆ, ಚಾರ್ಮಾಡಿ ಘಾಟಿಯನ್ನೆಲ್ಲ ಆವರಿಸಿದ ಕಾಡುಗಳ ಹಾಗೆ ತೇಜಸ್ವಿ ಕೂಡ ಪ್ರತಿಸಾರಿಯೂ ಹೊಸಹೊಸದಾಗೇ ಕಾಣಿಸುತ್ತಿದ್ದರು. ಮೊದಲ ಬಾರಿ ಹೋದಾಗ ಅವರ ಮುಂದೆ ಅಷ್ಟಗಲದ ಫೋಟೋಗಳಿದ್ದವು. ಅವನ್ನೆಲ್ಲ ಹೇಗೆ ತಾನು ಒಂದೇ ಫ್ರೇಮಿನಲ್ಲಿ ಬರುವ ಹಾಗೆ ಮಾಡಿದೆ ಅನ್ನುವುದನ್ನು ತೇಜಸ್ವಿ ಅರ್ಧಗಂಟೆ ವಿವರಿಸಿದ್ದರು. ಎರಡನೇ ಸಾರಿ ಹೋದಾಗ ಹಗಲು, ಅವರ ಮನೆಹಿಂದಿನ ಕೊಳದಲ್ಲಿ ಜೋಡಿ ಹಂಸಗಳಿದ್ದವು. ಮತ್ತೊಮ್ಮೆ ಹೋದಾಗ ತೇಜಸ್ವಿ ಅದೆಲ್ಲಿಂದಲೋ ಒಂದು ಲಕ್ಷ ರುಪಾಯಿ ಕೊಟ್ಟು ಹೊಸ ಡಿಜಿಟಲ್ ಕೆಮರಾ ತರಿಸಿದ್ದರು. ಅದರಲ್ಲಿ ಒಂದು ಸೆಕೆಂಡಿಗೆ ಐವತ್ತೋ ಅರುವತ್ತೋ ಫೋಟೋ ಕ್ಲಿಕ್ಕಿಸಬಹುದು ಎಂದೂ ಪ್ರತಿ ಫೋಟೊ ಕೂಡ ಅದೆಷ್ಟೋ ಹೆಚ್ಚಿನ ರೆಸಲ್ಯೂಷನ್ನಿನಲ್ಲಿ ರೆಕಾರ್ಡ್ ಆಗುತ್ತದೆಂದೂ ಆರ್ಡಿನರಿ ಕೆಮರಾದಲ್ಲಾದರೆ ಒಂದು ಫೋಟೊ ಕ್ಲಿಕ್ಕಿಸಿ ಮತ್ತೊಂದು ಕ್ಲಿಕ್ಕಿಸುವುದಕ್ಕೆ ಒಂದಷ್ಟು ಹೆಚ್ಚು ಸಮಯ ಬೇಕಾಗುತ್ತದೆಂದೂ ವಿವರಿಸುದ್ದರು. ಬೆಂಗಳೂರಿನಲ್ಲಿ, ಸೋ ಕಾಲ್ಡ್ ಐಟಿ ಸಿಟಿಯಲ್ಲಿ ಕೂತ ನಾನು ಕೂಡ ಆಧುನಿಕ ತಂತ್ರಜ್ಞಾನದ ಸರಕುಗಳನ್ನು ನೋಡಿದ್ದು ತೇಜಸ್ವಿ ಮನೆಯಲ್ಲಿಯೇ. ನಾನು ಮೊದಲ ಸಲ ಇಂಟರ್ ನೆಟ್ಟಿಗೆ ಕಾಲಿಟ್ಟದ್ದೂ ಅವರ ಮನೆಯಲ್ಲೇ.


ಹತ್ತು ಹನ್ನೆರಡು ವರುಷದ ಹಿಂದೆಯೇ ಅವರು ಕಂಪ್ಯೂಟರಿನಲ್ಲಿ ಕನ್ನಡ ಬರೆಯುತ್ತಾ ಆ ಲೇಖನವನ್ನೂ ಅದರ ಫಾಂಟುಗಳನ್ನೂ ಕಳುಹಿಸಿಕೊಡುತ್ತಾ ಅದನ್ನು ಹೇಗೆ ಡೌನ್ ಲೋಡ್ ಮಾಡಿ ಬಳಸಿಕೊಳ್ಳಬೇಕು ಎಂದು ವಿವರಿಸುತ್ತಾ ನಮ್ಮ ಅಜ್ಞಾನವನ್ನು ನಯವಾಗಿ ಗೇಲಿ ಮಾಡುತ್ತಿದ್ದವರು.
ನನಗೆ ತೇಜಸ್ವಿಯವರ ಪ್ರೀತಿ ಮತ್ತು ಸ್ನೇಹ ಸಿಗುವಂತೆ ಮಾಡಿದವರು ಮಿತ್ರರಾದ ರವಿ ಬೆಳಗೆರೆ. ಆಗಷ್ಟೇ ಲಂಕೇಶ್ -ತೇಜಸ್ವಿ ನಡುವಿನ ಸ್ನೇಹ ಹಳಸಿಹೋಗಿತ್ತು. ಕುವೆಂಪು ರಾಮಾಯಣ ಹಸ್ತಪ್ರತಿ ವಿಚಾರದಲ್ಲಿ ತೇಜಸ್ವಿಯವರನ್ನು ಲಂಕೇಶ್ ಏನೇನೋ ಅಂದಿದ್ದರು. ಆ ಹೊತ್ತಲ್ಲಿ ಅದರ ಸತ್ಯಾಸತ್ಯತೆ ತಿಳಿದುಕೊಂಡು ಬಾ ಎಂದು ರವಿ ನನ್ನನ್ನು ಕಳುಹಿಸಿಕೊಟ್ಟಿದ್ದರು.
ನಾನು ಮೂಡಿಗೆರೆಯ ಅವರ ಮನೆಗೆ ಕಾಲಿಟ್ಟಾಗ ರಾತ್ರಿ ಹತ್ತೂವರೆ. ಅಪರಾತ್ರಿ ಎರಡೂವರೆಯ ತನಕ ತೇಜಸ್ವಿ ನನಗೆ ಹಸ್ತಪ್ರತಿಯನ್ನು ಮುದ್ರಿಸಿದ ತಂತ್ರಜ್ಞಾನ ವಿವರಿಸಿದ್ದರು. ಆರು ಗಂಟೆಗೆ ಹೊರಟುಬಿಡಬೇಕು ಎಂದು ನಾನು ಪೇಜರ್ ಅಲಾರಾಂ ಇಟ್ಟು ಮಲಗಿದ್ದೆ. ಪಕ್ಕದ ಕುರ್ಚಿಯಲ್ಲಿ ತೇಜಸ್ಲಿ ಕೂಡ ಕೂತೇ ನಿದ್ದೆ ಹೋಗಿದ್ದರು.
ಬೆಳಗ್ಗೆ ಅವರು ನನ್ನನ್ನು ಅಲ್ಲಾಡಿಸಿ ಎಬ್ಬಿಸಿದಾಗ ಎಂಟು ಗಂಟೆ. ಪತ್ರಿಕೆ ಎರಡು ಗಂಟೆ ತಡವಾಗಿ ಬರುತ್ತದೆ ಅನ್ನುವ ಗಾಬರಿಯಲ್ಲಿ ನಾನು ಅಲ್ಲಿಂದ ಟೀ ಕೂಡ ಕುಡಿಯದೆ ಜಿಗಿದು ಓಡಿದ್ದೆ.
ತೇಜಸ್ವಿಯವರ ಕೃಷ್ಣೇಗೌಡನ ಆನೆ ಕತೆಯನ್ನು ರಾಜೇಂದ್ರ ಸಿಂಗ್ ಬಾಬು ಸಿನಿಮಾ ಮಾಡಲು ಹೊರಟಾಗ ಅದರ ಚಿತ್ರಕತೆಯ ಹೊಣೆ ಹೊತ್ತದ್ದು ನಾನು ಮತ್ತು ಉದಯ ಮರಕಿಣಿ. ಅದಕ್ಕಾಗಿ ಒಂದೆರಡು ಬಾರಿ ಅವರ ಮನೆಗೆ ಅಲೆದಾಡಿದೆ. ನನಗೆ ತೋರಿಸಲೇ ಬೇಡ, ಆದರೆ ಡಬ್ಬಾದಲ್ಲಿ ಉಳಿಯುವ ಸಿನಿಮಾ ಮಾತ್ರ ಮಾಡಬೇಡ. ನನ್ನ ಬೇರೆ ಕತೆಯ ಭಾಗಗಳನ್ನು ಬೇಕಿದ್ದರೂ ಬಳಸಿಕೋ ಎಂದಿದ್ದರು. ನೀವೇನೇ ಸುಡುಗಾಡು ಕಮರ್ಷಿಯಲ್ ಅಂತೀರಲ್ಲ ಹಾಗಿರಬೇಕು ಅಂದಿದ್ದರು. ಆಮೇಲೊಂದು ದಿನ ಕೃಷ್ಣೇಗೌಡನ ಆನೆ ಚಿತ್ರದಲ್ಲಿ ಜಗ್ಗೇಶ್ ನಟಿಸುತ್ತಾರೆ ಅಂದಾಗ ಆನೆ ಪಾತ್ರಕ್ಕೆ ಅವನೇ ಒಳ್ಳೇ ಆಯ್ಕೆ ಅಂತ ಗೇಲಿ ಮಾಡಿದ್ದರು. ಕೃಷ್ಣೇಗೌಡನ ಪಾತ್ರ ಮಾಡುತ್ತಾನೆ ಜಗ್ಗೇಶ್ ಅಂದಾಗ ಮನಸಾರೆ ನಕ್ಕಿದ್ದರು.
ಆಗ ನಾನು ಕೂಡ ತುಂಬ ದಪ್ಪಗಿದ್ದೆ, ಗೆಳೆಯ ಮರಕಿಣಿ ತೆಳ್ಳಗಿದ್ದರು. ನಮ್ಮಿಬ್ಬರನ್ನೂ ನೋಡಿದವರೇ ತೇಜಸ್ವಿ ನೀನೇ ಆನೆ , ಮರಕಿಣಿ ಮಾವುತ ಅಂತ ಮತ್ತೊಂದು ಸುತ್ತು ನಕ್ಕು ನಮ್ಮನ್ನೂ ನಗಿಸಿದ್ದರು.
ಈ ಮಧ್ಯೆ ಸುಂದರನಾಥ ಸುವರ್ಣ ಕೇವಲ ಒಂದು ಕ್ಯಾಮರಾ ಮತ್ತು ಆನೆ ಮಾತ್ರ ಬಳಸಿಕೊಂಡು ಅತಿ ಕಡಿಮೆ ಬಜೆಟ್ಟಿನಲ್ಲಿ ಕೃಷ್ಣೇಗೌಡನ ಆನೆ ಸಿನಿಮಾ ಮಾಡಲು ಮುಂದಾಗಿದ್ದರು. ಅದಕ್ಕೂ ಒಪ್ಪಿದ್ದರು ತೇಜಸ್ವಿ. ನಾವು ಚೌಕಾಸಿ ಮಾಡಿ, ಇಡೀ ಸಿನಿಮದ ಬಜೆಟ್ಟೇ ಎರಡೋ ಮೂರೋ ಲಕ್ಷ ಎಂದು ಸುಳ್ಳು ಹೇಳಿದ್ದನ್ನೂ ನಂಬಿದಂತೆ ನಟಿಸಿದ್ದರು ಅವರು.
ಅವರಿಗೆ ತುಂಬ ಭರವಸೆ ಇದ್ದದ್ದು ಜುಗಾರಿ ಕ್ರಾಸ್ ಚಿತ್ರದಲ್ಲಿ. ಅದಕ್ಕೆ ಗೆಳೆಯರಾದ ಸೂರಿ ರಚಿಸಿದ ಚಿತ್ರಕತೆಯಿಂದ ಥ್ರಿಲ್ಲಾಗಿ ಹೋಗಿದ್ದರು ತೇಜಸ್ವಿ. ಅದು ಕೊನೆಗೂ ಸಿನಿಮಾ ಆಗಲಿಲ್ಲ. ಆಮೇಲೆ ಕೋಡ್ಲು ರಾಮಕೃಷ್ಣ ಅದನ್ನು ಮಲೇಶಿಯದಲ್ಲಿ ಚಿತ್ರಿಸುತ್ತೇನೆ ಅಂದಾಗ ತೇಜಸ್ವಿ ಗಹಗಹಿಸಿದ್ದರು. ಈ ಸಿನಿಮಾದವರು ಎಲ್ಲೆಲ್ಲ ದುಡ್ಡು ಕಳೀತಾರೆ ಮಾರಾಯ ಅಂದಿದ್ದರು.
ಇವೆಲ್ಲ ಇತ್ತೀಚಿನ ನೆನಪುಗಳಾದರೆ, ತೇಜಸ್ವಿಯವರನ್ನು ಮೊದಲ ಸಲ ಕಂಡದ್ದು ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ. ಅಲ್ಲಿಗೆ ಯಾವುದೋ ಭಾಷಣಕ್ಕೆ ಬಂದಿದ್ದ ತೇಜಸ್ವಿಯನ್ನು ಮಾತಾಡಿಸಲು ಭಯವಾಗಿ ನಾನು ಮತ್ತು ಗೆಳೆಯ ಗೋಪಾಲಕೃಷ್ಣ ಕುಂಟಿನಿ ಅವರು ಏಕಾಂತದಲ್ಲಿರುವ ಹೊತ್ತಿಗೆ ಕಾಯುತ್ತಿದ್ದೆವು. ಕೊನೆಗೂ ಅವರು ತಮ್ಮ ಕಾರಿನ ಹತ್ತಿರ ನಮ್ಮ ಕೈಗೆ ಸಿಕ್ಕಿಬಿದ್ದರು. ಅವರ ಪ್ರಸಿದ್ಧ ಸಿಟ್ಟಿನ ಪರಿಚಯ ಇದ್ದ ನಾನು ಮಾತಿನ ಮಲ್ಲ ಗೋಪಿಯನ್ನು ಮುಂದಕ್ಕೆ ಬಿಟ್ಟೆ. ಗೋಪಿ ಅವರ ಹತ್ತಿರ ಹೋಗಿ ತಾವು ತೇಜಸ್ನಿಯವರಲ್ವೇ ಅಂತ ಹೆದರುತ್ತಲೇ ಕೇಳಿದ್ದ. ತೇಜಸ್ವಿ ತಮ್ಮ ಕೈಲಿದ್ದ ಕಾರಿನ ಕೀಯನ್ನು ಥಟ್ಟನೆ ಎತ್ತರಕ್ಕೆ ಎಸೆದು ಕ್ಯಾಚ್ ಹಿಡಿದು ಹೌದೂ ಅಂದಿದ್ದರು. ಅಲ್ಲಿಗೆ ಮಾತು ಮುಗಿದಿತ್ತು.
ತೇಜಸ್ವಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ನಮ್ಮೂರಿಗೂ ಕೆಲಸಕ್ಕೆ ಬರುತ್ತಿದ್ದರು. ಘಟ್ಟದಿಂದ ಮೇಲೆ ಕೆಳಗೆ ಅವರ ಸವಾರಿ ಓಡಾಡುತ್ತಿದ್ದದ್ದು ತೀರಾ ಸಾಮಾನ್ಯ. ಅವರ ಪೈಕಿ ರಾಮಣ್ಣ ಎಂಬ ಮೇಸ್ತ್ರಿಯೊಬ್ಬ ತೇಜಸ್ವಿ ಮನೆಯಲ್ಲಿ ಕೆಲಸ ಮಾಡುತ್ತಿದ್ದವನು ನಮ್ಮೂರಿಗೆ ಬಂದಿದ್ದ. ಅವನದು ಮಂಗ ಹಿಡಿಯುವ ಕೆಲಸ. ಒಂದು ಬೋನು ಮಾಡಿ ಅದರೊಳಗೆ ಮಂಗ ಸಿಕ್ಕಿಬೀಳುವ ಹಾಗೆ ಮಾಡಿ ಆ ಮಂಗಗಳನ್ನು ಲಾರಿಯಲ್ಲಿ ಸಾಗಿಸಿ ಬೇರೆ ಊರಿಗೆ ಬಿಟ್ಟು ಬರುವುದಕ್ಕೆ ಅವನು ಒಂದೊಂದು ಮಂಗಗಳಿಗೆ ತಲಾ ಇಪ್ಪತ್ತೈದು ರುಪಾಯಿ ಕಕ್ಕಿಸುತ್ತಿದ್ದ. ಅವನಿಗೆ ಆ ಬೋನು ಮಾಡಲು ಹೇಳಿಕೊಟ್ಟದ್ದು ತೇಜಸ್ವಿ ಅನ್ನುತ್ತಿದ್ದ. ಗೋಪಾಲಕೃಷ್ಣನ ತೋಟದಲ್ಲೇ ಐವತ್ತೋ ಅರುವತ್ತೋ ಮಂಗಗಳನ್ನು ಆತ ಹಿಡಿದಿದ್ದ.
ಆಮೇಲೆ ಸಿಕ್ಕಾಗ ತೇಜಸ್ವಿಯವರನ್ನು ಈ ಬಗ್ಗೆ ಕೇಳಿದ್ದೆ. ಓಹೋ ಅವನಾ, ಮಹಾ ಕಿಲಾಡಿ. ಇಲ್ಲಿ ಹಿಡಿದ ಮಂಗಗಳನ್ನು ಮುಂದಿನ ಊರಲ್ಲಿ ಬಿಡುತ್ತಾನೆ. ಆಮೇಲೆ ಅಲ್ಲಿಗೆ ಹೋಗಿ ಮಂಗ ಹಿಡೀತಾನೆ. ಹಾಗೆ ಅವನ ವ್ಯಾಪಾರ ಯಕ್ಷಗಾನ ಮೇಳ ಸಂಚಾರ ಹೊರಟ ಹಾಗೆ ಊರಿಂದೂರಿಗೆ ಸಾಗುತ್ತದೆ. ಒಂದು ವರುಷಕ್ಕೆ ಸರಿಯಾಗಿ ಅದೇ ಮಂಗ ನಿಮ್ಮ ತೋಟಕ್ಕೆ ವಾಪಸ್ಸು ಬರುತ್ತೆ ಕಣ್ರೀ ಅಂತ ನಕ್ಕಿದ್ದರು.


ಇನ್ನು ಮೇಲೆ ಉಪ್ಪಿನಂಗಡಿಗೆ ಹೋಗುವಾಗ ಚಾರ್ಮಾಡಿ ಘಾಟಿಯ ಮೇಲಾಗಿ ಹೋಗುವುದಕ್ಕೆ ಕಾರಣಗಳೇ ಇಲ್ಲ. ಕೊಟ್ಟಿಗೆ ಹಾರದ ನೀರುದೋಸೆ ರುಚಿ ಕಳಕೊಂಡಿದೆ. ಕಕ್ಕಿಂಜೆಯ ರಸ್ತೆಗಳಲ್ಲಿ ಆ ಹಳೆಯ ಸೆಳೆತ ಇಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಕುರುಚಲು ಗಡ್ಡದ, ತುಂಡು ಪ್ಯಾಂಟಿನ, ಗಡಸು ಮಾತಿನ, ಮೈತುಂಬ ನಗುವಿನ ತೇಜಸ್ವಿ ಇಲ್ಲ.
ಅವರಿಲ್ಲದ ಕಾಡಿಗೆ ಆಕರ್ಷಣೆಯೂ ಇಲ್ಲ.
ಫೋಟೋ- ಸ್ವತಃ ತೇಜಸ್ವಿಯವರೇ ಕಳುಹಿಸಿಕೊಟ್ಟದ್ದು. ನಾನು ಕನ್ನಡ ಪ್ರಭದಲ್ಲಿ ಅವರ ಕೆಟ್ಟ ಫೋಟೋ ಬಳಸುತ್ತಿದ್ದೆ. ಆಗೊಮ್ಮೆ ಅವರೇ ಬೈದು ಇದನ್ನಾದ್ರೂ ಹಾಕೋ ಮಾರಾಯ, ನನ್ನ ಶೇಪು ತೆಗೀತೀಯ ನೀನು ಎಂದು ಏಳೆಂಟು ಫೋಟೋ ಕಳುಹಿಸಿಕೊಟ್ಟಿದ್ದರು.

7 comments:

ಶ್ರೀವತ್ಸ ಜೋಶಿ said...

ಈಗೀಗಿನ ಕಾಟಾಚಾರದ ಶ್ರದ್ಧಾಂಜಲಿಗಳಲ್ಲಿ ಶ್ರದ್ಧೆ ಎಷ್ಟು ಆಳವಾಗಿರುತ್ತದೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಇಲ್ಲಿ ತೇಜಸ್ವಿಯವರ ಬಗ್ಗೆ ನಿಮ್ಮ ಬರಹದಲ್ಲಿ ಶ್ರದ್ಧೆಯಂತೂ ಇದ್ದೇ ಇದ್ದೆ, ಅದು ಆಳವೂ ಇದೆ! ದಿವಂಗತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ನಾವೆಲ್ಲ ಪ್ರಾರ್ಥಿಸೋಣ.

ಇಸ್ಮಾಯಿಲ್ said...

ಒಳ್ಳೆಯ ಶ್ರದ್ಧಾಂಜಲಿ.

Guru said...

ಜೋಗಿಯವರೆ,

ತೇಜಸ್ವಿಯವರು ಹೋಗಿಬಿಟ್ಟರು ಎಂದು ಹಳಹಳಿಸುವುದು ಬಿಟ್ಟು ಅವರ ನಿಮ್ಮ ತೀರ ವೈಯುಕ್ತಿಕ ಪರಿಚಯ ಹೇಳಿಕೊಂಡಿದ್ದೀರ. ಈಗ ನಮಗೆ ಸದ್ಯಕ್ಕಿದ್ದ 'ಧ್ವನಿ'ಯಿದ್ದ ಸಾಹಿತಿಗಳೆಂದರೆ ತೇಜಸ್ವಿ ಮತ್ತು ಅನಂತಮೂರ್ತಿ. ಅನಂತಮೂರ್ತಿಗಳು ನಿಮ್ಮ ಕನ್ನಡಪ್ರಭದಲ್ಲಿಯೇ 'ತೇಜಸ್ವಿಯಿರದ ಜಗತ್ತಿನಲ್ಲಿ ನಾನಿರಲಾರೆ' ಎಂದು ಹೇಳಿದ್ದು ಯಾಕೆ ಎಂದು ಅರ್ಥಮಾಡಿಕೊಳ್ಳಲು ಕಷ್ಟಪಡಬೇಕಿಲ್ಲ. ಸಾವಿನ ನೋವಿಗಿಂತ ಬದುಕಿನ ಸಂಭ್ರವನ್ನು ಆಚರಿಸಬೇಕೆಂತೆ. ತೇಜಸ್ವಿಯವರ ಸಾವಿನ ಸುದ್ದಿ ಕೇಳಿ ಕೆಲಸದಿಂದಾಗಿ ಎರಡು ರಾತ್ರಿ ನಿದ್ದೆ ಗೆಟ್ಟಿದ್ದ ನನಗೆ ಮೂರನೆ ರಾತ್ರಿಯೂ ನಿದ್ದೆ ಬಾರದಿದ್ದಾಗ ಎದ್ದು ಕೂತು ಅವರ ಪರಿಸರದ ಕಥೆಯ 'ಮಾಸ್ತಿ ಮತ್ತು ಬೈರ' ಓದಿದ ಮೇಲೆಯೇ ತೇಜಸ್ವಿ ಇನ್ನೂ ನಮ್ಮೊಂದಿಗಿದ್ದಾರೆ ಎನ್ನಿಸಿದ್ದು. ನಮ್ಮೊಂದಿಗೆ ಎಂದೂ ಇರುತ್ತಾರೆ.

ಧನ್ಯವಾದಗಳು.

ಗುರು ಕಾಗಿನೆಲೆ

Jogimane said...

ನಾನೂ ಅಷ್ಟೇ, ಕೃಷ್ಣೇಗೌಡನ ಆನೆ ಮತ್ತೊಮ್ಮೆ ಓದಿದೆ. ಯಂಗ್ಠನ ಪುಂಗಿ ಓದಿದೆ. ಮಿಲೆನಿಯಮ್ ಸೀರೀಸ್ ಕೃತಿಗಳನ್ನು ಓದಿದೆ. ಈಗ ಟೇಬಲ್ಲಿನ ಮೇಲೆ ಕನ್ನಡ ನಾಡಿನ ಹಕ್ಕಿಗಳು ಇದೆ.
ಯಾಕೋ ತೇಜಸ್ವಿ ಮತ್ತು ಮಾರ್ಕೆಸ್ ಒಂದೇ ಥರ ಅನ್ನಿಸುತ್ತೆ. ಇಂಗ್ಲಿಷಿಗೇನಾದ್ರೂ ಸರಿಯಾಗಿ ಅನುವಾದಗೊಂಡಿದ್ದರೆ ತೇಜಸ್ವಿ ಕೂಡ ..
ಹೋಗ್ಲಿ ಬಿಡಿ, ಅದನ್ನೇ ಯಾಕೆ ಶ್ರೇಷ್ಠತೆ ಅಂತ ತಿಳೀಬೇಕು. ಅಲ್ಲವೇ..
ಜೋಗಿ

Haldodderi Sudhindra said...

’ಕನ್ನಡಪ್ರಭ’ದ ಸಾಪ್ತಾಹಿಕದಲ್ಲಿ ನಿಮ್ಮ ಕಾಮೆಂಟರಿ ಓದಿದ ದಿನವೇ ’ಅಂಕಿತ’ಕ್ಕೆ ಹೋಗಿ ’ಮಾಯಾಲೋಕ’ ತಂದಿದ್ದೆ. ಆದರೆ ಓದಿನಿಂದ ಎರಡು ದಿನ ನನ್ನನ್ನು ತಪ್ಪಿಸಿದವರು ನನ್ನ ಮಗಳು ಮೇಘನಾ ಮತ್ತು ಮಡದಿ ಸೌಮ್ಯಸುಮಾ. ಪೂಚಂತೇ ಪರಿಚಯವಾದದ್ದು ’ಉದಯವಾಣಿ’ ದೀಪಾವಳಿ ಸಂಚಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಅವರ ಚಿತ್ರ ಸಂಪುಟಗಳಿಂದ. ’ತುಷಾರ’ದಲ್ಲಿ ’ಕರ್ವಾಲೋ’ ಬರುವ ತನಕ ಅವರೊಬ್ಬ ಫೋಟೋಗ್ರಾಫರ್ ಮಾತ್ರ ಎಂದು ಭಾವಿಸಿದ್ದೆ. ‘ಅಬಚೂರಿನ ಪೋಸ್ಟಾಫೀಸ್’ ಚಲನಚಿತ್ರ ಕಂಡ ಮೇಲೆ ವೈವಿಧ್ಯಮಯ ಪೂಚಂತೇ ಪರಿಚಯವಾದರು. ಕಾಲೇಜು ಮೆಟ್ಟಿಲೇರುತ್ತಿರುವ ಸಮಯದಲ್ಲಿ ‘ಲಂಕೇಶ್ ಪತ್ರಿಕೆ’ ಬಂತು. ‘ಅಣ್ಣನ ನೆನಪು’ ಸೇರಿದಂತೆ ಪೂಚಂತೇ ಅವರ ಎಲ್ಲ ಬರಹಗಳನ್ನು ಬಿಡದೇ ಓದಿದೆ. ಅವರೊಳಗಿದ್ದ ಪರಿಸರವಾದಿ, ವಿಜ್ಞಾನ ಬರಹಗಾರ, ಸಮಾಜವಾದಿ, ಕತೆಗಾರ ... ಎಲ್ಲರೂ ಪರಿಚಯವಾದರು. ತೀರಾ ಇತ್ತೀಚೆಗೆ ಕನ್ನಡ ಲಿಪಿ ತಂತ್ರಾಂಶದ ಬಗ್ಗೆ ಅವರ ನಿಲುವುಗಳನ್ನು ಅರಿಯುವ ಅವಕಾಶ ದೊರೆತಿತ್ತು. ’ಮಿಲೆನಿಯಂ’ ಸರಣಿಯ ಒಂದೆರಡು ಸಂಪುಟಗಳತ್ತ ಮಾತ್ರ ಕಣ್ಣು ಹಾಯಿಸಿದ್ದೇನೆ, ಅಷ್ಟೂ ಓದಬೇಕು, ದಿನಕ್ಕೊಂದು ಪುಟದಂತೆ.

Thank You JOGI, for this meaningful writeup.

ಪರಮೇಶ್ವರ ಗುಂಡ್ಕಲ್ said...

ಪ್ರೀತಿಯ ಜೋಗಿ,
ಬಹಳ ಸೊಗಸಾಗಿ ಬರೆದಿದ್ದೀರಿ. ಫಸ್ಟ್‌ ಪರ್ಸನ್‌ ಬರವಣಿಗೆ ಹೀಗಿರಬೇಕು ಅನ್ನುವಂತಿದೆ ನಿಮ್ಮ ಬರಹ. ಇದನ್ನು ಕನ್ನಡ ಪ್ರಭದಲ್ಲಿ ಪ್ರಕಟಿಸಿದ್ದರೆ ಚೆನ್ನಾಗಿರುತ್ತಿತ್ತು. ತೇಜಸ್ವಿಯವರು ಹೋದ ಮರುದಿನ ನೀವು ಕನ್ನಡ ಪ್ರಭದಲ್ಲಿ ಬರೆದದ್ದಕ್ಕಿಂತ ಇದು ಚೆನ್ನಾಗಿದೆ.
ತೇಜಸ್ವಿಯವರ ಮಾತುಗಳಲ್ಲಿ ಅದೇನೋ ಸುಡುಗಾಡು ಕಮರ್ಷಿಯಲ್‌ ಸಿನಿಮಾದ ಥರ ಇರಬೇಕು ಎಂಬ ಸಾಲು ಇಷ್ಟವಾಯಿತು. ನಿಜ. ಆರ್ಟ್‌ ಸಿನಿಮಾಗಳ ಗ್ರಾಮರ್‌ಗಿಂತ ಕಮರ್ಷಿಯಲ್‌ ಸಿನಿಮಾಗಳ ಗ್ರಾಮರ್‌ ನನಗೆ ಯಾವಾಗಲೂ ಕಷ್ಟದ್ದು ಅನಿಸುತ್ತದೆ.
ಹೀಗೇ ಒಳ್ಳೊಳ್ಳೆಯ ಬರಹಗಳನ್ನು ಕೊಡುತ್ತಾ ಇರಿ. ಧನ್ಯವಾದಗಳು
-ಪರಮೇಶ್ವರ ಗುಂಡ್ಕಲ್

Mallikarjuna said...

Thanks for the wonderful writeup.Please see http://www.kamat.org/network/blogs/?BlogID=3066