Friday, April 13, 2007

ಒಲಿ­ಸಿ­ಕೊಂ­ಡ­ವಳೇ ಕೊಲಿ­ಸಿ­ದಳೆ?


ನೀವು ಬೆಂಗ­ಳೂ­ರಿ­ನಿಂದ ಮಂಗ­ಳೂ­ರಿಗೆ ಹೊರ­ಟರೆ, ನಿಮ­ಗಿ­ರು­ವುದು ಎರಡೂ ಮತ್ತೊಂದು ದಾರಿ. ಹಾಸ­ನ­ದಿಂದ ಬೇಲೂರು, ಮೂಡಿ­ಗೆರೆ ಮಾರ್ಗ­ವಾಗಿ ಚಾರ್ಮುಡಿ ಘಾಟಿಯ ಮೂಲಕ ಹೋಗು­ವುದು ಒಂದು. ಹಾಸ­ನ­ದಿಂದ ನೇರ­ವಾಗಿ ಹೋಗಿ ಶಿರಾಡಿ ಘಾಟಿ ಇಳಿದು ಹೋಗು­ವುದು ಇನ್ನೊಂದು. ತೀರ ತಲೆಕೆಟ್ಟರೆ ಬಿಸಲೆ ಘಾಟಿ ಹಾದು, ಸುಬ್ರಹ್ಮಣ್ಯದ ಹತ್ತಿರ ಮತ್ತೆ ಮರಳಿ ಗುಂಡ್ಯಕ್ಕೆ ಬಂದು ಉಪ್ಪಿನಂಗಡಿ ಸೇರುವುದಕ್ಕೆ ಅಡ್ಡಿಯಿಲ್ಲ.

ಶಿರಾಡಿ ಘಾಟಿ ಇಳಿದು ನೆಲ್ಯಾ­ಡಿಗೆ ಕಾಲಿ­ಡುವ ಮೊದಲು ಅತ್ತಿತ್ತ ತಿರು­ಗಾ­ಡಿ­ದರೆ ನಿಮಗೆ ಸಿಕ್ಕುವ ಅರ­ಸಿ­ನ­ಮಕ್ಕಿ, ವಳಾಲು, ಕೊಕ್ಕಡ ಮುಂತಾದ ಊರು­ಗಳ ಆಸು­ಪಾ­ಸಿ­ನಲ್ಲಿ ಕೇರ­ಳ­ದಿಂದ ಬಂದ ಕೊಚ್ಚಿ ಕ್ರಿಶ್ಚಿ­ಯ­ನ್ನರು ರಬ್ಬರ್ ತೋಟ ಮಾಡಿ­ಕೊಂ­ಡಿ­ದ್ದಾರೆ. ಜೊತೆಗೇ ಟಾಪಿ­ಯೋಕಾ ಎಂದು ಬೆಂಗ­ಳೂ­ರಿನ ಮಂದಿ ಕರೆ­ಯುವ ಮರ­ಗೆ­ಣಸು ಬೆಳೆ­ಯು­ತ್ತಾರೆ.
ನೆಲ್ಯಾ­ಡಿ­ಯಿಂದ ಸುಮಾರು ನಲು­ವತ್ತು ಮೈಲಿ ಮುಂದಕ್ಕೆ ಮಂಗ­ಳೂ­ರಿಗೆ ಹೋಗುವ ದಾರಿ­ಯಲ್ಲಿ ಸಾಗಿ­ದರೆ ರಸ್ತೆಯ ಎರಡೂ ಬದಿ­ಯಲ್ಲಿ ನೀವು ಇಟ್ಟಿಗೆ ಗೂಡು­ಗ­ಳನ್ನು ಕಾಣ­ಬ­ಹುದು. ಅಲ್ಲೆಲ್ಲಾ ಜೇಡಿ­ಮಣ್ಣು ವಿಪು­ಲ­ವಾಗಿ ಸಿಕ್ಕು­ತ್ತಿ­ದ್ದು­ದ­ರಿಂ­ದಲೂ ಮುರ­ಕ­ಲ್ಲು­ಗ­ಳಿಗೆ ವಿಪ­ರೀತ ಬೆಲೆ ಇದ್ದು­ದ­ರಿಂ­ದಲೂ ಇಟ್ಟಿ­ಗೆ­ಗ­ಳಿಗೆ ಅಪಾರ ಬೇಡಿ­ಕೆ­ಯಿತ್ತು. ಹೀಗಾಗಿ ಹೆಜ್ಜೆ­ಗೊಂ­ದ­ರಂತೆ ಇಟ್ಟಿಗೆ ಗೂಡು­ಗಳು ಹುಟ್ಟಿ­ಕೊಂ­ಡಿ­ದ್ದವು.
ನಾನೊಮ್ಮೆ ಮಂಗ­ಳೂ­ರಿಗೆ ಹೋಗುವ ದಾರಿ­ಯಲ್ಲಿ ಅಡ್ಯಾ­ರಿನ ಬಳಿ ಇಂಥ ಇಟ್ಟಿಗೆ ಗೂಡು­ಗ­ಳನ್ನು ನೋಡಿ ಅವು­ಗಳ ಫೊಟೋ ತೆಗೆ­ಯ­ಲೆಂದು ಕಾರು ನಿಲ್ಲಿ­ಸಿದೆ. ಅಷ್ಟು ಹೊತ್ತಿ­ಗಾ­ಗಲೇ ಹಾಲೋ ಬ್ಲಾಕ್ ಎಂಬ ಹೊಸ ಥರದ ಸಿಮೆಂಟು ಇಟ್ಟಿಗೆ ಪ್ರಸಿ­ದ್ಧ­ವಾ­ಗಿತ್ತು. ಬಹ­ಳಟ್ಟು ಇಟ್ಟಿಗೆ ಗೂಡು­ಗಳು ಪಾಳು­ಬಿ­ದ್ದಿ­ದ್ದವು. ಅವು ಮಳೆ­ಗಾ­ಳಿ­ಬಿ­ಸಿ­ಲಿಗೆ ಸಿಕ್ಕಿ ವಿಚಿತ್ರ ಬಣ್ಣಕ್ಕೆ ತಿರು­ಗಿ­ದ್ದವು. ಫೋಟೋ­ಗ್ರಾ­ಫ­ರನ ಸ್ವರ್ಗ ಎನ್ನ­ಬ­ಹು­ದಾದ ಜಾಗ ಅದು.
ಅಲ್ಲಿ ತಿರು­ಗಾ­ಡು­ವಾ­ಗಲೇ ನನಗೆ ಆಗ ಅಗಾ­ಧ­ವಾದ ಇಟ್ಟಿಗೆ ಗೂಡು ಕಂಡಿದ್ದು.ಅದು ಒಂದು ದೊಡ್ಡ ಮನೆ­ಯ­ಷ್ಟಿತ್ತು. ಮೇಲ್ಗಡೆ ಮಂಗ­ಳೂರು ಹೆಂಚು ಹೊದಿ­ಸಿದ್ದ ಒಂದು ಹೆಂಚಿನ ಗೂಡೂ ಅಲ್ಲಿತ್ತು.

ಅಲ್ಲಿ ಶಿವಣ್ಣ ಹೆಂಚು ತಯಾ­ರಿ­ಸು­ತ್ತಿದ್ದ ಅಂತ ಆಮೆಲೆ ಗೊತ್ತಾ­ಯಿತು.ಪ­ಕ್ಕ­ದಲ್ಲೇ ಇದ್ದ ಮತ್ತೊಂದು ಅಗಾಧ ಗಾತ್ರದ ಇಟ್ಟಿಗೆ ಗೂಡಿ­ನೊ­ಳಗೆ ಒಣಗಿ ಕಪ್ಪಾದ, ಸುಟ್ಟು ಕರ­ಕ­ಲಾದ ಇಟ್ಟಿ­ಗೆ­ಗಳು ಅಡ್ಡಾ­ದಿ­ಡ್ಡಿ­ಯಾಗಿ ಬಿದ್ದಿ­ದ್ದವು. ಅದು ಅದನ್ನು ಯಾಕೆ ಹೇಗೆ ಪಾಳು­ಬಿ­ಟ್ಟಿ­ದ್ದಾರೆ ಅನ್ನು­ವುದು ಗೊತ್ತಾ­ಗ­ಲಿಲ್ಲ. ಅದ­ನ್ನೇಕೆ ಪಾಳು ಬಿಟ್ಟಿ­ದ್ದಾರೆ. ಅಲ್ಲಿ­ರುವ ಇಟ್ಟಿ­ಗೆ­ಗ­ಳ್ನ­ನೇಕೆ ಯಾರೂ ಬಳ­ಸು­ತ್ತಿಲ್ಲ ಎಂದು ವಿಚಾ­ರಿ­ಸಿ­ದಾ­ಗಲೇ ಅಲ್ಲಿ­ರುವ ಕೆಲ­ವರು ನನಗೆ ರಮೇ­ಶನ ಹೆಸರು ಹೇಳಿದ್ದು. ಅವನ ಮನೆಯ ವಿಳಾಸ ಕೊಟ್ಟದ್ದು.
ಆ ವಿಳಾಸ ತೆಗೆ­ದು­ಕೊಂಡು ನಾನು ರಮೇ­ಶನ ಮನೆಗೆ ಹೋದೆ. ಆತ ಕುಳ್ಳ­ಗಿನ ತೆಳ್ಳ­ಗಿನ ಹುಡುಗ. ಆಗಷ್ಟೇ ಮದು­ವೆ­ಯಾ­ಗಿದ್ದ. ಅರ­ಸೀ­ಕೆ­ರೆ­ಯ­ವ­ನಾ­ಗಿ­ದ್ದರೂ ಅಡ್ಯಾ­ರಿ­ನಲ್ಲೇ ಸೆಟ್ಲಾ­ಗಿದ್ದ. ಅವನೇ ನನಗೆ ಈ ಕತೆ ಹೇಳಿದ್ದು.
ರಮೇಶ ಹೇಳಿದ ಕತೆ

ನಾನು ಮನೆ­ಬಿಟ್ಟು ಓಡಿ­ಬಂ­ದದ್ದು ಯಾವು­ದಾ­ದರೂ ಹೊಟೆ­ಲ್­ನಲ್ಲಿ ಕೆಲಸ ಮಾಡು­ವು­ದ­ಕ್ಕೆಂದು. ಆದರೆ ನನ್ನ ಅದೃಷ್ಟ ಚೆನ್ನಾ­ಗಿತ್ತು. ಬಂದ­ವ­ನಿಗೆ ಸಿಕ್ಕಿದ್ದು ಶಿವಣ್ಣ. ಒಂದು ಸಾರಿ ಹೊಟೆ­ಲಿಗೆ ಚಾ ಕುಡಿ­ಯಲು ಬಂದಿ­ದ್ದ­ವನು, ಆ ಹೊಟೆಲ್ ಮಾಲಿ­ಕರ ಹತ್ತಿರ ನಾನು ಕೆಲ­ಸ­ಕ್ಕಾಗಿ ಅಂಗ­ಲಾ­ಚು­ತ್ತಿ­ರು­ವು­ದನ್ನು ನೋಡಿದ. ನನ್ನನ್ನು ಕರೆದು ತನ್ನ ಜೊತೆಗೆ ಕರೆ­ದೊಯ್ದ. ಆವ­ತ್ತಿ­ನಿಂದ ನನ್ನನ್ನು ತಮ್ಮನ ಹಾಗೆ ನೋಡಿ­ಕೊಂಡ. ಅವ­ನನ್ನು ನಾನು ಶಿವಣ್ಣ ಎಂದೇ ಕರೆ­ಯು­ತ್ತಿದ್ದೆ.ಆತ ನನ್ನನ್ನು ತಮ್ಮಾ ಎನ್ನು­ತ್ತಿದ್ದ.
ಶಿವ­ಣ್ಣನ ಇಟ್ಟಿಗ ಗೂಡಿ­ನಲ್ಲಿ ನಲು­ವತ್ತೋ ಐವತ್ತೋ ಮಂದಿ ಕೆಲಸ ಮಾಡಿ­ಕೊಂ­ಡಿ­ದ್ದರು. ಅವ­ರೆಲ್ಲ ದಿನ­ಗೂಲಿ ನೌಕ­ರರು. ವಾರ­ಕ್ಕೊಂದು ರಜಾ ಹಾಕಿ, ಕೊಟ್ಟ ಸಂಬ­ಳ­ವನ್ನು ಕುಡಿದು ಹಾಳು­ಮಾ­ಡು­ತ್ತಿ­ದ್ದ­ವರು. ಅವರ ಪೈಕಿ ಯಾರಿಗೂ ಅಕ್ಪರ ಜ್ಞಾನವೂ ಇರ­ಲಿಲ್ಲ. ಅಂಥ­ವರ ನಡುವೆ ನನ­ಗೊಂದು ಗೌರ­ವ­ವಾದ ಸ್ಥಾನ­ವಿತ್ತು. ನಾನು ಎಸ್ಸೆ­ಸ್ಸೆ­ಲ್ಸಿ­ವ­ರೆಗೆ ಓದಿ­ದ್ದ­ರಿಂದ ಶಿವಣ್ಣ ಅವರ ಲೆಕ್ಕ ಬರೆ­ಯುವ ಜವಾ­ಬ್ದಾ­ರಿ­ಯನ್ನು ನನಗೆ ವಹಿ­ಸಿದ್ದ.
ಇಟ್ಟಿಗೆ ಗೂಡಿಗೆ ಕೆಲ­ಸಕ್ಕೆ ಬರು­ತ್ತಿ­ದ್ದ­ವರ ಪೈಕಿ ಐತಪ್ಪ ಎನ್ನುವ ಮುದು­ಕ­ನೊ­ಬ್ಬ­ನಿದ್ದ. ಅವನು ಶಿವ­ಣ್ಣನ ಅಪ್ಪನ ಕಾಲ­ದಿಂ­ದಲೇ ಕೆಲ­ಸ­ಕ್ಕಿ­ದ್ದ­ವ­ನಂತೆ. ಸದ್ಯಕ್ಕೆ ಕೆಲಸ ಮಾಡುವ ತಾಕ­ತ್ತಿ­ಲ್ಲ­ದಿ­ದ್ದರೂ ಬಂದು ಹೋಗು­ತ್ತಿದ್ದ. ಶಿವ­ಣ್ಣನೂ ಕರು­ಣೆ­ಯಿಂದ ಅವ­ನಿಗೆ ಸಂಬಳ ಕೊಡು­ತ್ತಿದ್ದ. ಶಿವಣ್ಣ ಸಂಬಳ ಕೊಡು­ತ್ತಿ­ದ್ದದ್ದು ಐತ­ಪ್ಪನ ಮೇಲಿನ ಕರು­ಣೆ­ಯಿಂದ ಅಲ್ಲ, ಅವನ ಮಗಳು ಚಂಪಾಳ ಮೇಲಿನ ಪ್ರೀತಿ­ಯಿಂದ ಅನ್ನೋದು ನನಗೆ ಆಮೇಲೆ ಗೊತ್ತಾ­ಯಿತು.
ಶಿವಣ್ಣ ಆಕೆ­ಯನ್ನು ಮನ­ಸಾರೆ ಪ್ರೀತಿ­ಸು­ತ್ತಿದ್ದ.
ಆ ಪ್ರೇಮ­ಕ­ತೆಗೆ ಸಾಕ್ಪಿ­ಯಾ­ಗಿ­ದ್ದ­ವನು ನಾನೊ­ಬ್ಬನೇ. ಆರಂ­ಭ­ದಲ್ಲಿ ಒಬ್ಬನೇ ಅಡುಗೆ ಮಾಡಿ­ಕೊಂಡು ಊಟ ಮಾಡು­ತ್ತಿದ್ದ ಶಿವಣ್ಣ ಕ್ರಮೇಣ ಚಂಪಾಳ ಮನೆಗೆ ಊಟಕ್ಕೆ ಹೋಗ­ತೊ­ಡ­ಗಿದ. ಐತ­ಪ್ಪ­ನಿಗೆ ಆಗೀಗ ಕರೆದು ಭಕ್ಪೀಸು ಕೊಡು­ತ್ತಿದ್ದ. ಚಂಪಾ­ಳೇ­ನಾ­ದರೂ ಅತ್ತಿತ್ತ ಸುಳಿ­ದರೆ ಪುಲ­ಕಿ­ತ­ನಾ­ಗು­ತ್ತಿದ್ದ. ಅವ­ಳಿಂದ ಅದೆಂ­ಥದೋ ಒಂದು ಸಂತೋ­ಷ­ವನ್ನು ಆತ ಪಡೆ­ಯು­ತ್ತಿದ್ದ. ಚಿಕ್ಕ­ವ­ನಾದ ನನಗೆ ಅದೇನು ಅನ್ನೋದು ಗೊತ್ತಿ­ರ­ಲಿಲ್ಲ. ಅದು ಗೊತ್ತಾ­ದದ್ದು ಆ ಊರಿಗೆ ಮ್ಯಾಥ್ಯೂ ಬಂದ ನಂತರ.
ಮ್ಯಾಥ್ಯೂ ಕೇರ­ಳ­ದ­ವನು. ಗೋವಾಕ್ಕೂ ಹೋಗಿ ಬಂದಿ­ದ್ದ­ನಂತೆ. ನಿರ­ರ್ಗ­ಳ­ವಾಗಿ ಇಂಗ್ಲೀಷು ಮಾತಾ­ಡು­ತ್ತಿದ್ದ. ತುಂಬ ದಿವಿ­ನಾಗಿ ಸಿಂಗ­ರಿ­ಸಿ­ಕೊ­ಳ್ಳು­ತ್ತಿದ್ದ. ಅವನು ಪಕ್ಕ ಸುಳಿ­ದರೆ ಅದೆಂ­ಥದ್ದೋ ಪರಿ­ಮಳ ಘಮ್ಮೆ­ನು­ತ್ತಿತ್ತು. ಅದ­ಕ್ಕಿಂತ ಹೆಚ್ಚಾಗಿ ಆತ ಎಲ್ಲ­ರಂತೆ ಬೀಡಿ ಸೇದು­ತ್ತಿ­ರ­ಲಿಲ್ಲ. ಇಷ್ಟು­ದ್ದದ ಕಪ್ಪು ಸಿಗ­ರೇಟು ಸೇದು­ತ್ತಿದ್ದ. ಅದಿ­ಲ್ಲದೇ ಹೋದರೆ ಪೈಪ್ ಸೇದು­ತ್ತಿದ್ದ. ಅಡ್ಯಾ­ರಿನ ಉರಿ­ಬಿ­ಸಿ­ಲಿಗೂ ಜಗ್ಗದೆ ಕಲ್ಲು ಕಟ್ಟೆಯ ಮೇಲೆ ಕುಳಿ­ತು­ಕೊಂಡು ಆತ ಪೈ್ ಸೇದುತ್ತಾ ಚಹಾ ಕುಡಿ­ಯು­ವು­ದನ್ನು ನಾನೂ ಅನೇಕ ಸಲ ಬೆರ­ಗಿ­ನಿಂದ ನೋಡಿದ್ದೆ.
ಆತ ಆ ಊರಿಗೆ ಬಂದದ್ದು ಒಂದು ತೋಟದ ಮಾಲಿ­ಕ­ನಾಗಿ. ಅಲ್ಲೇ ಪಕ್ಕ­ದ­ಲ್ಲಿದ್ದ ತೋಟ­ವೊಂ­ದನ್ನು ಆತ ದುಬಾರಿ ಬೆಲೆ ಕೊಟ್ಟು ಕೊಂಡು­ಕೊಂ­ಡಿ­ದ್ದ­ನಂತೆ. ಆ ತೋಟಕ್ಕೆ ಹೋಗ­ಬೇ­ಕಾ­ದರೆ ನಮ್ಮ ಇಟ್ಟಿಗೆ ಗೂಡಿನ ಮೇಲೆ ಹಾದು ಹೋಗ­ಬೇ­ಕಾ­ಗಿತ್ತು. ಹಾಗೆ ಹಾದು ಹೋಗು­ವಾ­ಗ­ಲೆಲ್ಲ ಆತ ಕಣ್ಣಿಗೆ ಬೀಳು­ತ್ತಿದ್ದ. ಆರಂ­ಭ­ದಲ್ಲಿ ನಡೆ­ದು­ಕೊಂಡು ಹೋಗು­ತ್ತಿ­ದ್ದ­ವನು ಸ್ವಲ್ಪೇ ದಿನಕ್ಕೆ ಒಂದು ಬುಲೆಟ್ ಕೊಂಡು­ಕೊಂಡ. ಅದರ ಮೇಲೆ ಅವನ ಸವಾರಿ ಹೋಗು­ವು­ದನ್ನು ನಾವು ಸಖೇ­ದಾ­ಶ್ಚ­ರ್ಯ­ದಿಂದ ನೋಡುತ್ತಾ ನಿಂತಿ­ರು­ತ್ತಿ­ದ್ದೆವು.
ಈ ನಡುವೆ ಯಾಕೋ ಶಿವಣ್ಣ ಮಂಕಾ­ಗ­ತೊ­ಡ­ಗಿದ. ಅವನ ಸಮ­ಸ್ಯೆ­ಯೇ­ನೆಂ­ಬುದು ಸ್ವತಃ ನನಗೂ ತಿಳಿ­ಯು­ತ್ತಿ­ರ­ಲಿಲ್ಲ. ಕೆಲ­ಸ­ದಲ್ಲಿ ಮೊದ­ಲಿ­ನಂತೆ ಆಸ­ಕ್ತಿ­ಯಿ­ರ­ಲಿಲ್ಲ. ನಾನು ಲೆಕ್ಕದ ಪುಸ್ತಕ ಮುಂದಿ­ಟ್ಟರೆ ಮಂಕಾಗಿ ಅದನ್ನೇ ನೋಡು­ತ್ತಿದ್ದು ಸರಿ ಎನ್ನು­ತ್ತಿದ್ದ. ಮೊದ­ಲಿನ ಹಾಗೆ ಪ್ರಶ್ನೆ­ಗ­ಳನ್ನು ಕೇಳು­ತ್ತಿ­ರ­ಲಿಲ್ಲ. ಬಹುಶಃ ಆತ­ನಿಗೆ ನನ್ನ ಮೇಲೆ ಸಿಟ್ಟು ಬಂದಿ­ರ­ಬ­ಹುದು, ಅಥವಾ ನಾನು ಹಣ ನುಂಗಿ­ದ್ದೇನೆ ಎಂಬ ಗುಮಾನಿ ಇರ­ಬ­ಹುದು ಎಂಬ ಅನು­ಮಾನ ನನಗೆ ಬಂತು. ಯಾಕೆಂ­ದರೆ ಕೆಲ­ವರು ನನ್ನ ಹತ್ತಿರ ಹಾಗೆ ಮಾತಾ­ಡಿ­ದ್ದರು. ಒಳ್ಳೆ ಲಾಭ ಬರೋ ಕೆಲ­ಸಾನೇ ಹಿಡಿ­ದಿದ್ದಿ ಎನ್ನು­ತ್ತಿ­ದ್ದರು. ನನ­ಗಿಂತ ಮೊದಲು ಕೆಲ­ಸ­ಕ್ಕಿ­ದ್ದ­ವನು ಕೆಲ­ಸಕ್ಕೆ ಬಾರ­ದ­ವರ ಹೆಸ­ರೆಲ್ಲ ಸೇರಿಸಿ ಹಣ ಹೊಡೆ­ಯು­ತ್ತಿ­ದ್ದ­ನಂತೆ. ಆತ­ನಿಗೆ ನನ್ನ ಮೇಲೆ ಅಸ­ಮಾ­ಧಾ­ನ­ವಿ­ದ್ದರೆ ಒಂದು ಬಾರಿ ಅವ­ನೊ­ಡನೆ ಅದನ್ನು ಇತ್ಯರ್ಥ ಮಾಡಿ­ಕೊ­ಳ್ಳ­ಬೇಕು ಎಂದು­ಕೊಂಡೆ. ಆದರೆ ಶಿವಣ್ಣ ನನಗೆ ಒಂಟಿ­ಯಾಗಿ ಸಿಗಲೇ ಇಲ್ಲ. ಇಟ್ಟಿಗೆ ಗೂಡಿಗೆ ಬರು­ವು­ದನ್ನೂ ಕಮ್ಮಿ ಮಾಡಿದ್ದ. ಹೊಸ ಆರ್ಡ­ರು­ಗ­ಳನ್ನೂ ನಾನೇ ನಿಭಾ­ಯಿ­ಸ­ಬೇ­ಕಾ­ಗಿತ್ತು.
ಈ ಮಧ್ಯೆ ನಾನು ಒಂದೆ­ರಡು ಬಾರಿ ಚಂಪಾ­ಳನ್ನು ಮ್ಯಾಥ್ಯೂ ತನ್ನ ಬುಲೆ­ಟ್­ನಲ್ಲಿ ಕೂರಿ­ಸಿ­ಕೊಂಡು ಹೋಗು­ವು­ದನ್ನು ನೋಡಿದ್ದೆ. ಶಿವ­ಣ್ಣ­ನಿಗೆ ಇದ­ರಿಂದ ಅಸ­ಮಾ­ಧಾ­ನ­ವಾ­ಗಿ­ರ­ಬ­ಹುದು ಎಂದು­ಕೊಂಡೂ ಇದ್ದೆ. ಹೀಗೇ ಒಂದು ಮಧ್ಯಾಹ್ನ ನಾನು ಚಂಪಾ ಮತ್ತು ಮ್ಯಾಥ್ಯೂ ಅಂಟಿ­ಕೊಂಡು ಹೋಗು­ತ್ತಿ­ರು­ವು­ದನ್ನು ನೋಡು­ತ್ತಿ­ದ್ದಂತೆ ಹೆಗಲ ಮೇಲೆ ಯಾರೋ ಕೈಯಿ­ಟ್ಟಂ­ತಾ­ಯಿತು. ತಿರು­ಗಿ­ದರೆ ಶಿವಣ್ಣ ನಿಂತಿದ್ದ.ಗಂ­ಭೀ­ರ­ವಾ­ಗಿದ್ದ. ನಾನು ಏನೋ ಹೇಳ­ಬೇಕು ಅನ್ನು­ವ­ಷ್ಟ­ರಲ್ಲಿ ಅಲ್ಲಿಂದ ಹೊರ­ಟೇ­ಹೋದ.
ಆ ರಾತ್ರಿ ನಾನು ಹೇಗಾ­ದರೂ ಮಾಡಿ ಶಿವ­ಣ್ಣನ ಜೊತೆ ಮಾತಾ­ಡ­ಬೇ­ಕೆಂದು ಅವನ ರೂಮಿಗೆ ಹೋದೆ. ಬೀಗ ಹಾಕಿತ್ತು. ಐತ­ಪ್ಪನ ಮನೆಗೆ ಊಟಕ್ಕೆ ಹೋಗಿ­ರ­ಬ­ಹುದು ಎಂದು ಪಕ್ಕದ ರೂಮಿ­ನಾತ ಹೇಳಿದ. ಐತ­ಪ್ಪನ ಮನೆ ಸಮೀ­ಪಿ­ಸು­ತ್ತಿ­ದ್ದಂತೆ ಹೊರ­ಗಡೆ ನಿಲ್ಲಿ­ಸಿದ್ದ ಬುಲೆಟ್ ಕಣ್ಣಿಗೆ ಬಿತ್ತು. ಮನೆ­ಯೊ­ಳ­ಗಡೆ ಮಂದ­ಬೆ­ಳ­ಕಿತ್ತು. ನಾನು ಒಂದು ಕ್ಪಣ ಆ ಕತ್ತ­ಲಲ್ಲಿ ಅಲ್ಲೆ ನಿಂತೆ. ಒಳಗೆ ಹೋಗಲೋ ಬೇಡವೋ ಎಂಬ ಅನು­ಮಾ­ನ­ದಲ್ಲಿ ಕಾದೆ. ಅಷ್ಟು ಹೊತ್ತಿಗೆ ಬಾಗಿಲು ತೆರೆ­ಯಿತು. ಒಳ­ಗಿ­ನಿಂದ ಮ್ಯಾಥ್ಯೂ ಹೊರ­ಬಂದ. ಅವ­ನನ್ನು ತಬ್ಬಿ­ಕೊಂ­ಡಂತೆ ಚಂಪಾ ನಿಂತಿ­ದ್ದಳು. ನಾನು ಒಂದು ಕ್ಪಣ ಅದು­ರಿ­ಹೋದೆ. ಇದನ್ನು ಶಿವಣ್ಣ ನೋಡಿ­ದರೆ ಎಂದು ಭಯ­ವಾಯ್ತು.
ಚಂಪಾ ಆತ­ನನ್ನು ಬೀಳ್ಕೊಟ್ಟು ಒಳಗೆ ಹೋದಳು. ನಾನು ಅಲ್ಲೇ ಗರ­ಬ­ಡಿ­ದ­ವ­ನಂತೆ ನಿಂತಿದ್ದೆ.
ಅಷ್ಟ­ರಲ್ಲಿ ಯಾರೋ ನನ್ನನ್ನು ಜೋರಾಗಿ ಅಲು­ಗಾ­ಡಿ­ಸಿ­ದಂ­ತಾ­ಯಿತು. ಬೆಚ್ಚಿ­ಬಿದ್ದು ಹಿಂತಿ­ರು­ಗಿ­ದರೆ ಕತ್ತ­ಲ­ಲ್ಲೊಂದು ಆಕೃತಿ ಪಿಸು­ಗು­ಟ್ಟಿತು "ಯಾರು ನೀನು'. ಆ ಕತ್ತ­ಲಲ್ಲೂ ಆ ಉಡು­ಗಿದ ದನಿ ಶಿವ­ಣ್ಣ­ನದು ಅನ್ನೋದು ನನಗೆ ಗೊತ್ತಾ­ಯಿತು. ನಾನು ರಮೇಶ ಅಂದೆ. ಶಿವಣ್ಣ ಮರು­ಮಾ­ತಾ­ಡದೆ ನನ್ನ ಕೈ ಹಿಡಿದು ಅಲ್ಲಿಂದ ದರ­ದರ ಎಳೆ­ದು­ಕೊಂಡು ಹೋದ. ಕತ್ತ­ಲಲ್ಲಿ ಎಡ­ವುತ್ತಾ ಅವನ ಹಿಂದೆ ಸಾಗಿದೆ. ಸುಮಾರು ಅರ್ಧ ಮೈಲಿ ಹಾಗೆ ನಡೆ­ದಿ­ರ­ಬ­ಹುದು. ಅಲ್ಲೊಂದು ಕಡೆ ಶಿವಣ್ಣ ಕುಸಿದು ಕುಳಿತ. ನಾನೂ ಕುಳಿತೆ. ಶಿವಣ್ಣ ಮಾತಾ­ಡದೇ ಬಿಕ್ಕಿ ಬಿಕ್ಕಿ ಅಳ­ತೊ­ಡ­ಗಿದ. ತನ್ನ ಪ್ರೇಮದ ಕತೆ­ಯನ್ನು ಬಿಕ್ಕು­ತ್ತಲೇ ಹೇಳಿದ. ಚಂಪಾ ಒಳ್ಳೆ­ಯ­ವ­ಳೆಂದೂ ಆ ಮ್ಯಾಥ್ಯೂ ಆಕೆ­ಯನ್ನು ಬುಟ್ಟಿಗೆ ಹಾಕಿ­ಕೊಂ­ಡಿ­ದ್ದಾ­ನೆಂದೂ ಹಲು­ಬಿದ. ಆತ ಅಳು­ತ್ತಿ­ರು­ವು­ದನ್ನು ನೋಡಿದ ನನಗೆ ಮ್ಯಾಥ್ಯು­ವನ್ನು ಸಾಯಿ­ಸ­ಬೇ­ಕೆ­ನ್ನು­ವಷ್ಟು ಸಿಟ್ಟು ಬಂತು. ನಾನೂ ದೊಡ್ಡ­ವ­ನಾ­ಗಿ­ರ­ಬೇ­ಕಿತ್ತು ಅಂದು­ಕೊಂಡೆ.
ಅತ್ತು ಅತ್ತು ಸಮಾ­ಧಾ­ನ­ವಾದ ನಂತರ ಶಿವಣ್ಣ ಎದ್ದು ನಿಂತ. ಇನ್ನೊಂದು ವಾರ ನಾನು ಯಾರಿಗೂ ಕಾಣಿ­ಸಿ­ಕೊ­ಳ್ಳು­ವು­ದಿ­ಲ್ಲ­ವೆಂದೂ ಇಟ್ಟಿಗೆ ಗೂಡು ಮತ್ತು ಹೆಂಚಿನ ಮನೆಯ ಜವಾ­ಬ್ದಾರಿ ನನ್ನ­ದೆಂದೂ ಹೇಳಿದ. ಆತನ ಮನ­ಸ್ಸಲ್ಲಿ ಯಾವುದೋ ಯೋಜನೆ ರೂಪು­ಗೊ­ಳ್ಳು­ತ್ತಿ­ದ್ದಂ­ತಿತ್ತು.
ಅದಾದ ಮೂರ­ನೆಯ ದಿನಕ್ಕೆ ನಾನು ಒಬ್ಬನೇ ಲೆಕ್ಕ ಬರೆ­ಯುತ್ತಾ ಹೆಂಚು­ಗೂ­ಡಿನ ಪಕ್ಕ­ದ­ಲ್ಲಿ­ರುವ ಕೋಣೆ­ಯಲ್ಲಿ ಕುಳಿ­ತಿದ್ದೆ. ಶಿವಣ್ಣ ರಾತ್ರಿ­ಯೆಲ್ಲ ಕೆಲ­ಸ­ವಿ­ದ್ದಾಗ ಮಲ­ಗು­ತ್ತಿದ್ದ ಕೋಣೆ ಅದು. ಇದ್ದ­ಕ್ಕಿ­ದ್ದಂತೆ ನನ್ನ ಮುಂದೆ ಯಾರೋ ನಿಂತಂ­ತಾ­ಯಿತು. ತಲೆ­ಯೆತ್ತಿ ನೋಡಿ­ದರೆ ಶಿವಣ್ಣ. ನಾನು ತಲೆ­ಯೆತ್ತಿ ನೋಡು­ತ್ತಿ­ದ್ದಂತೆ ಆತ ಅಲ್ಲಿಂದ ತಿರುಗಿ ಹೋದ. ನಾನು ಲೆಕ್ಕದ ಪುಸ್ತಕ ಬದಿ­ಗಿಟ್ಟೆ. ಶಿವಣ್ಣ ಆ ಅಪ­ರಾತ್ರಿ ಯಾಕೆ ಬಂದ? ಬಂದ­ವನು ಯಾಕೆ ಮಾತಾ­ಡದೇ ಹೊರ­ಟು­ಹೋದ? ಆತ ನನ­ಗೇ­ನಾ­ದರೂ ಹೇಳು­ವು­ದಿತ್ತೇ? ಒಂದೂ ತೋಚದೇ ಆತ­ನನ್ನೇ ಹಿಂಬಾ­ಲಿ­ಸಿದೆ.
ಶಿವಣ್ಣ ತಿರು­ಗಿಯೂ ನೋಡದೇ ಮುಂದೆ ಮುಂದೆ ಹೋಗು­ತ್ತಿದ್ದ. ನಾನು ಅಚ್ಚ­ರಿ­ಯಿಂದ ಹಿಂಬಾ­ಲಿ­ಸಿದೆ. ಆತ ಕತ್ತ­ಲಲ್ಲಿ ನಡೆ­ಯು­ತ್ತಿ­ದ್ದ­ವನು ನನ್ನ ಕಣ್ಣ­ಮುಂ­ದಿ­ನಿಂದ ಇದ್ದ­ಕ್ಕಿ­ದ್ದಂತೆ ಮಾಯ­ವಾದ. ನಾನೂ ಅವ­ಸ­ರ­ದಲ್ಲಿ ಕೈಯಲ್ಲಿ ಟಾರ್ಚ್ ಇಲ್ಲದೆ ಹೊರ­ಟಿದ್ದೆ. ಶಿವಣ್ಣ ಎಲ್ಲಿಗೆ ಹೋದ ಅನ್ನು­ವುದೂ ತಿಳಿ­ಯ­ಲಿಲ್ಲ. ಇದ್ದ­ಕ್ಕಿ­ದ್ದಂತೆ ನನ್ನ ಸುತ್ತಲೂ ದಟ್ಟ ಕತ್ತಲೆ ಕವಿ­ದಂ­ತಾ­ಯಿತು. ನಾನು ಗಾಬ­ರಿ­ಯಲ್ಲಿ ಓಡೋಡಿ ನನ್ನ ಕೋಣೆ ತಲು­ಪಿದೆ.
ಆವ­ತ್ತಿಡೀ ನನಗೆ ನಿದ್ದೆ ಬರ­ಲಿಲ್ಲ. ಬೆಳಗ್ಗೆ ಎದ್ದ­ವನೇ ಶಿವ­ಣ್ಣನ ರೂಮಿಗೆ ಹೋದೆ. ಆತ ಅಲ್ಲಿ­ರ­ಲಿಲ್ಲ. ಮತ್ತೊಂ­ದೆ­ರಡು ಬಾರಿ ಹೋದಾ­ಗಲೂ ಶಿವಣ್ಣ ಸಿಗ­ಲಿಲ್ಲ. ಕೊನೆ­ಗೊಂದು ದಿನ ಚಂಪಾಳ ಮನೆಗೂ ಹುಡು­ಕಿ­ಕೊಂಡು ಹೋದೆ. ಆಕೆ ಯಾವ ಶಿವಣ್ಣ ಎಂದು ಸಿಟ್ಟಾಗಿ ಕೇಳಿ ಬಾಗಿಲು ಮುಚ್ಚಿ­ಕೊಂ­ಡಳು.
ಆ ರಾತ್ರಿ ನಾನು ಮತ್ತೆ ಹೆಂಚಿನ ಗೂಡಿಗೆ ಹೋದೆ. ಅಲ್ಲಿ ಒಂಟಿ­ಯಾಗಿ ಕೂತಿದ್ದೆ. ಗೂಡು ಧಗ­ಧಗ ಉರಿ­ಯು­ತ್ತಿತ್ತು. ಅಲ್ಲಿ ಸ್ವಲ್ಪ ಹೊತ್ತಿದ್ದು ಲೆಕ್ಕ ಬರೆ­ಯುವ ರೂಮಿಗೆ ಬಂದೆ.
ಆ ರಾತ್ರಿ ಮತ್ತೆ ಶಿವಣ್ಣ ಕಾಣಿ­ಸಿ­ಕೊಂಡ. ಹಿಂದಿನ ದಿನ­ದಂ­ತೆಯೇ. ಇವತ್ತು ಬಿಡ­ಬಾ­ರದು ಎಂದು­ಕೊಂಡು ಅವ­ನನ್ನೇ ಹಿಂಬಾ­ಲಿ­ಸಿದೆ. ಆತ ಹಿಂದಿನ ದಿನ­ದಂ­ತೆಯೇ ಮುಂದೆ ಮುಂದೆ ಹೋದ. ನಾನು ಕಣ್ಣಲ್ಲಿ ಕಣ್ಣಿಟ್ಟು ನೋಡು­ತ್ತಿದ್ದೆ. ನೋಡ­ನೋ­ಡು­ತ್ತಿ­ದ್ದಂ­ತೆಯೇ ಆತ ಹೆಂಚಿನ ಗೂಡಿನ ಬೆಂಕಿ­ಯೆ­ದುರು ನಿಂತ. ಅವನ ಮೈ ಎಷ್ಟು ಪಾರ­ದ­ರ್ಶ­ಕ­ವಾ­ಗಿ­ತ್ತೆಂ­ದರೆ ಅದ­ರೊ­ಳ­ಗಿಂತ ಬೆಂಕಿ ಕಾಣಿ­ಸು­ತ್ತಿತ್ತು. ನಾನು ಇನ್ನೇನು ಚೀರಿ­ಕೊ­ಳ್ಳ­ಬೇ­ಕೆ­ನ್ನು­ವ­ಷ್ಟ­ರಲ್ಲಿ ಆತ ಬೆಂಕಿಯ ಒಳಗೇ ಹೊರ­ಟು­ಹೋದ.
ನಾನು ಕುಸಿ­ದು­ಬಿದ್ದೆ.
2
ಅಷ್ಟು ಹೇಳಿ ರಮೇಶ ಕತೆ ನಿಲ್ಲಿ­ಸಿದ. ಆ ಘಟ­ನೆಯ ನಂತರ ಆತ ಒಂದು ತಿಂಗಳು ಹಾಸಿಗೆ ಹಿಡಿ­ದಿ­ದ್ದ­ನಂತೆ. ಬೆಂಕಿ ನೋಡಿ­ದಾ­ಗ­ಲೆಲ್ಲ ಅದ­ರೊ­ಳಗೆ ಯಾರೋ ಹೊಕ್ಕಿ­ದಂತೆ ಕಾಣಿ­ಸು­ತ್ತಿ­ತ್ತಂತೆ. ಶಿವಣ್ಣ ಬೆಂಕಿ­ಯೊ­ಳಗೆ ಹೋದ ಎಂದು ಆತ ಹೇಳು­ವು­ದನ್ನು ಯಾರೂ ಸೀರಿ­ಯ­ಸ್ಸಾಗಿ ತೆಗೆ­ದು­ಕೊ­ಳ್ಳ­ಲಿಲ್ಲ. ಆದರೆ ಆ ಊರಿಗೆ ಹೊಸ­ದಾಗಿ ಬಂದಿದ್ದ ಪೊಲೀಸ್ ಪೇದೆ­ಯೊಬ್ಬ ಶಿವಣ್ಣ ಮಾಯ­ವಾ­ದ­ದ್ದಕ್ಕೂ ರಮೇ­ಶನ ಮಾತಿಗೂ ಸಂಬಂಧ ಇರ­ಬ­ಹುದು ಅಂದು­ಕೊಂಡು ಆತ ರಮೇ­ಶ­ನಿಗೆ ಕಾಣಿ­ಸಿ­ಕೊಂಡ ಹೆಂಚಿನ ಗೂಡನ್ನು ಕೆದ­ಕಿ­ನೋ­ಡಿ­ದಾಗ ಅರೆ­ಸುಟ್ಟ ಮನು­ಷ್ಯರ ಎಲುಬು­ಗಳು ಸಿಕ್ಕ­ವಂತೆ.
ಮುಂದೆ ಆತ ಇಡೀ ಪ್ರಕ­ರ­ಣದ ಬೆನ್ನು­ಹತ್ತಿದ. ಮ್ಯಾಥ್ಯು ಆರೋಪಿ ಸ್ಥಾನ­ದಲ್ಲಿ ನಿಂತ. ಅಷ್ಟು ಹೊತ್ತಿ­ಗಾ­ಗಲೇ ಆತ ಆ ಊರು ಬಿಟ್ಟು ಕೇರ­ಳಕ್ಕೆ ಓಡಿ ಹೋಗಿದ್ದ.ಅ­ದಾದ ಕೆಲವು ದಿನ­ಗಳ ನಂತರ ಚಂಪಾ ಒಮ್ಮೆ ಹೆಂಚಿನ ಗೂಡಿನ ಬಳಿ ಕಾಣಿ­ಸಿ­ಕೊಂ­ಡ­ವಳು, ಆ ನಂತರ ಕಾಣೆ­ಯಾ­ದಳು. ಆಕೆ­ಯನ್ನು ಶಿವ­ಣ್ಣನ ದೆವ್ವವೇ ಕೊಂದಿ­ರ­ಬೇ­ಕೆಂದು ಭಾವಿ­ಸಿದ ಊರಿನ ಮಂದಿ ಆ ಇಟ್ಟಿಗೆ ಗೂಡಿ­ನತ್ತ ಸುಳಿ­ಯು­ವು­ದನ್ನೂ ಬಿಟ್ಟು­ಬಿ­ಟ್ಟರು.
ಈಗಲೂ ರಾತ್ರಿ ಹೊತ್ತು ಆ ಇಟ್ಟಿಗೆ ಗೂಡು ತನ್ನಿಂ­ತಾನೇ ಹತ್ತಿ ಉರಿ­ಯು­ತ್ತ­ದಂತೆ. ಅದರ ಮುಂದೆ ಶಿವಣ್ಣ ಅನಾ­ಥ­ನಂತೆ ನಿಂತಿ­ರು­ತ್ತಾ­ನಂತೆ. ಯಾರಾ­ದರೂ ನೋಡಿ­ದರೆ ಬೆಂಕಿ­ಯೊ­ಳಗೆ ನಡೆ­ದು­ಹೋ­ಗು­ತ್ತಾ­ನಂತೆ. ಒಂದೊಂದು ರಾತ್ರಿ ಅಲ್ಲಿ ಒಂದು ಗಂಡೂ ಒಂದು ಹೆಣ್ಣೂ ಜಗ­ಳ­ವಾ­ಡುವ ಶಬ್ದ ಕೇಳಿ­ಬ­ರು­ತ್ತ­ದಂತೆ.
ಬೇಕಿ­ದ್ದರೆ ನೀವೇ ನೋಡಿ ಎಂದು ಮಾರನೆ ದಿನ ಬೆಳಗ್ಗೆ ಆ ಪಾಳು­ಬಿದ್ದ ಇಟ್ಟಿಗೆ ಗೂಡಿನ ಬಳಿಗೆ ನನ್ನನ್ನು ಕರೆ­ದೊಯ್ದ ರಮೇಶ, ಆಗಷ್ಟೇ ಆರಿ­ದಂ­ತಿದ್ದ ಕೆಂಡ­ವನ್ನೂ ಇನ್ನೂ ನವಿ­ರಾ­ಗಿ­ರುವ ಬೂದಿ­ಯನ್ನೂ ತೋರಿ­ಸಿದ. ಗೂಡು ಮುಟ್ಟಿ­ನೋಡಿ ಅಂದ. ಮುಟ್ಟಿದೆ.
ಆ ಮಂಜು ಬೀಳು­ತ್ತಿ­ರುವ ಮುಂಜಾ­ನೆ­ಯಲ್ಲೂ ಆಗಷ್ಟೇ ಉರಿದು ಆರಿದ ಅಗ್ನಿ­ಕುಂ­ಡದ ಥರ ಗೂಡು ಬೆಚ್ಚ­ಗಿತ್ತು.
ನನಗೆ ಯಾಕೋ ಭಯ­ವಾ­ಯಿತು.


(ಈ ಕತೆ ನನಗೆ ಎಲ್ಲಿ ಸಿಕ್ಕಿತೋ ಗೊತ್ತಿಲ್ಲ. ಒಂದು ಅಪರಾತ್ರಿಯಲ್ಲಿ ನಾನು ಮತ್ತು ದಟ್ಸ್ ಕನ್ನಡದ ಶಾಮಸುಂದರ್ ಜೊತೆಗೆ ಕೂತುಕೊಂಡಿದ್ದಾಗ ನೆನಪಿಗೆ ಬಂತು. ಅದನ್ನು ಶಾಮ್ ಒತ್ತಾಯಿಸಿ ಬರೆಸಿಕೊಂಡರು. ಹೀಗಾಗಿ ಇದು ಶಾಮ್ ಗೆ ಅರ್ಪಣೆ)
11 comments:

ಹುಡುಕಾಟ said...

ಮೊದಲು ಓದೋವಾಗ ಸತ್ಯ ಘಟನೆ ಅಂದ್ಕೊಂಡೆ, ರಮೇಶನ ಮಾತನ್ನ ಊರ ಜನ ನಂಬಿದ್ರ, ಮ್ಯಾಥ್ಯೂ ಯಾಕೆ ಊರು ಬಿಟ್ಟು ಹೋದ ಅಂತ ಆಶ್ಚರ್ಯ ಆಯ್ತು. ಕೊನೆಗೇ ಗೊತ್ತಾಯ್ತು ಇದು ಕಥೆ ಅಂತ.

ಚೆನ್ನಾಗಿದೆ.

-ಯಜ್ಙೇಶ್

Parameshwar Gundkal said...

Jogi,
Kate bahala chennagide. Satya kate endukondu odide. Baredukondu hoda reeti ashtu khushi koduvantide. Congrats
-Parameshwar Gundkal

sritri said...

ಕಥೆ ಸಾಧಾರಣವಾಗಿದೆ. "ಜೋಗಿ ಮೊಹರು" ಈ ಕತೆಯಲ್ಲಿ ಇಲ್ಲ!

suptadeepti said...

ಈ ಕಥೆ ನಾನೂ ಕೇಳಿದ್ದೆ, ಎಲ್ಲಿ, ಯಾವಾಗ ಅನ್ನುವುದು ನೆನಪಿಲ್ಲ. ಎಲ್ಲೋ ಓದಿದ್ದು... ಯಾರ ಬರಹ, ಯಾವ ಸಂಗ್ರಹ... ಒಂದೂ ನೆನಪಿಲ್ಲ. ಭೂತ/ದೆವ್ವದ ಕಥೆಗಳೇ ಹಾಗೇನು?

VENU VINOD said...

ಪರಿಸರವನ್ನು ಕಥೆಗೆ ಬೇಕಾದ ಹಾಗೆ ಬಳಸಿಕೊಂಡ ಕಾರಣ ಸತ್ಯಕಥೆಯಂತೆಯೇ ಮೂಡಿಬಂತು. ಚೆನ್ನಾಗಿದೆ

Haldodderi Sudhindra said...

ಯಾವುದೋ ಒಂದು ಪ್ರವಾಸದನುಭವವೆಂದು ಭಾವಿಸಿದವನನ್ನು ಕಥಾಲೋಕಕ್ಕೆ ಕರೆದೊಯ್ದ ನಿಮ್ಮ ಜಾಣ್ಮೆ ಮೆಚ್ಚುವಂಥದ್ದು. Misleading Story ಎನ್ನಬಹುದೇನೊ? ಕಾರಣ ಪುರುಸೊತ್ತಿಲ್ಲ ಎಂಬ ನೆಪದೊಂದಿಗೆ ಕಥೆ ಓದದ ನನ್ನಂಥವರನ್ನು ಮತ್ತೆ ಕಥೆ ಓದುವಂತೆ ಪ್ರೇರೇಪಿಸಿದ್ದೀರಿ. ಥ್ಯಾಂಕ್ಸ್.
- ಸುಧೀ

Shiv said...

ಗಿರೀಶ್,

ಇಟ್ಟಿಗೆ ಗೂಡಿನಲ್ಲಿ ಕೆಲ್ಸ ಮಾಡೋ ಜನರ ಜೀವನದ ಕತೆ-ವ್ಯಥೆಯನ್ನು ಹೇಳೋಕೆ ಹೊರಟಿದೀರಾ ಅನಿಸಿತ್ತು..ಆದರೆ ಮುಂದೆ ಓದಿದಾಗೆ ಅಲ್ಲಿಂದ ಹಾಗೇ ಒಂದು ಕತೆಯೊಳಗೆ ಕರೆದುಕೊಂಡು ಹೋಗಿ, ಅಲ್ಲಿ ಒಂದು ಪ್ರೇಮಕತೆ ಹೇಳಿ ಅಲ್ಲಿಂದ ಸ್ಪಲ್ಪ ಹೆದರಿಸಿಕೊಂಡು ವಾಪಸ್ ತಂದುಬಿಟ್ಟಿರಿ ..

ಕತೆ ಚೆನ್ನಾಗಿತ್ತು

Anonymous said...

this reminded me a famous Japanese film. Not able to recollect the name of the film. If you have written as a story it would have been brilliant. Look at the angle, a lover, a friend and a new comer and a village immersed in poverty and struggle for life - a brilliant story for box office hit if directed well - like in Maniratnam film. For a lead heroine role, I suggest Tabhu – I like her the most !! If you searching for Mathew role let me know – I have one name in mind but not able to disclose in public forum !!

warm regards
ashok

suresh said...

ಜೋಗಿ,
ಪ್ರೇಮಕತೆಯ ಇಟ್ಟಿಗೆಗಳನ್ನು ಜೋಡಿಸಿದ ರೀತಿ ಸೊಗಸಾಗಿದೆ.
-ಸುರೇಶ್ ಕೆ.

Anonymous said...

Idu entha kathe marayre. Bhootad kathe ella yavaga bareyoke shuru madidri !
- Harish kera

dinesh said...

kathe tumba chennagide