Tuesday, April 24, 2007

ಪಯ­ಣ­ದಲಿ ಜೊತೆ­ಯಾಗಿ ನಾನಿ­ಲ್ಲವೆ?


ಪ್ರಖರ ಸಂಜೆ­ಗಳು ಅಪಾ­ಯ­ಕಾರಿ. ಅವು ಸೀದಾ ನಮ್ಮನ್ನು ಬಾಲ್ಯಕ್ಕೆ ಕೊಂಡೊ­ಯ್ಯು­ತ್ತವೆ. ಮುಂಜಾ­ನೆಯ ಮಂದ ಬೆಳಕು ಹುಟ್ಟಿ­ನಂತೆ, ಮಧ್ಯಾ­ಹ್ನದ ಸುಡು­ಸುಡು ಬಿಸಿಲು ಸಾವಿ­ನಂತೆ ನಮ್ಮನ್ನು ತಲು­ಪಿ­ದರೆ ಸಂಜೆಯ ಇಳಿ­ಬಿ­ಸಿ­ಲಿಗೋ ಹಳೆಯ ನೆನ­ಪು­ಗಳ ಹ್ಯಾಂಗೋ­ವರ್. ಒಂದು ಪ್ರಖರ ಬೆಳ­ಕಿನ ಸಂಜೆಗೆ ನಿಮ್ಮನ್ನು ಒಡ್ಡಿ­ಕೊಂಡು ನೋಡಿ ಬೇಕಿ­ದ್ದರೆ; ಜಲ­ಪಾ­ತ­ದಲ್ಲಿ ಜಾರಿ­ದಂತೆ ಕನಿಷ್ಠ ಹತ್ತು ವರುಷ ಹಿಂದಕ್ಕೆ ಹೊರಟು ಹೋಗು­ತ್ತೀರಿ. ಹಿಂದೆಂದೋ ಒಂದು ದಿನ ಇಂಥದ್ದೇ ಸಂಜೆ­ಯಲ್ಲಿ ಧ್ಯಾನಿ­ಸಿದ್ದೋ, ಪ್ರೇಮಿ­ಸಿದ್ದೋ ಬರಿದೆ ಅಡ್ಡಾ­ಡಿದ್ದೋ ನಿನ್ನೆ­ಯಷ್ಟೆ ಓದಿದ ಕವಿ­ತೆ­ಯಷ್ಟು ನಿಚ್ಚ­ಳ­ವಾಗಿ ನೆನ­ಪಾ­ಗು­ತ್ತದೆ.
ಬಹುಶಃ ಅದಕ್ಕೇ ಇರ­ಬೇಕು, ನಾವು ಬಹ­ಳಷ್ಟು ಮಂದಿ ಸಂಜೆ­ಗ­ಳನ್ನು ನಿರಾ­ಕ­ರಿ­ಸು­ತ್ತೇವೆ. ಹಳ್ಳಿ­ಗ­ಳಲ್ಲಿ ಸಂಜೆಗೂ ಮಧ್ಯಾ­ಹ್ನಕ್ಕೂ ವ್ಯತ್ಯಾ­ಸವೇ ಇರು­ವು­ದಿಲ್ಲ. ಮಲೆ­ನಾ­ಡಿ­ನ­ಲ್ಲಂತೂ ನೋಡ­ನೋ­ಡು­ತ್ತಿದ್ದ ಹಾಗೇ ಬಂಗಾ­ರದ ಸಂಜೆ ಇರು­ಳೊ­ಳಗೆ ಬಚ್ಚಿ­ಟ್ಟು­ಕೊಂ­ಡಿ­ರು­ತ್ತದೆ. ಸಂಜೆಯ ಗುಣವೇ ಅದು. ಯಾವತ್ತೂ ಅದು ನಿಮಗೆ ಇಡಿ­ಯಾಗಿ ಸಿಗು­ವು­ದಿಲ್ಲ. ಒಂದು ಒಳ್ಳೆಯ ಹವ­ಳ­ಗೆಂ­ಪಿನ ಸಂಜೆ ನಿಮ್ಮ ಕೈಸೇ­ರ­ಬೇ­ಕಿ­ದ್ದರೆ ಜನ್ಮಾಂ­ತ­ರದ ಪುಣ್ಯ ಬೇಕು.
ಇಂಥ ಸಂಜೆಯ ಬಗ್ಗೆ ಯಾರೂ ಕವಿತೆ ಬರೆ­ದಿಲ್ಲ. ಸಂಜೆಯ ರಾಗಕೆ ಬಾನು ಕೆಂಪೇ­ರಿದೆ.. ಎನ್ನುವ ಸಾಲು ಓದಿ ಆಹಾ, ಸಂಜೆಯ ಮೇಲೊಂದು ಹಾಡು ಸಿಕ್ಕಿತು ಎಂದು ಖುಷಿ­ಯಾ­ದರೆ ಅಷ್ಟ­ರಲ್ಲೇ ಅದು ಮುಸ್ಸಂ­ಜೆಯ ಹಾಡಾಗಿ ರೂಪಾಂ­ತರ ಹೊಂದು­ತ್ತದೆ-ತಿಂ­ಗಳು ಮೂಡಿ ಬೆಳ­ಕಿನ ಕೋಡಿ ಚೆಲ್ಲಾ­ಡಿದೆ! ಬೇರೆ ಕವಿ­ತೆ­ಗ­ಳನ್ನು ನೋಡಿ­ದರೆ ಸಂಜೆಯ ಬಗ್ಗೆ ಕವಿ­ತೆ­ಗ­ಳಿ­ವೆಯೇ ಹೊರತು ಸಂಜೆಯೇ ಕವಿ­ತೆ­ಯಾಗಿ ರೂಪು­ಗೊಂ­ಡಿಲ್ಲ. ಯಾಕೆ ಕವಿ­ಗ­ಳಿಗೆ ಸಂಜೆಯ ಬಗ್ಗೆ ಅಷ್ಟೊಂದು ಅವಜ್ಞೆ!
ಸಂಜೆ­ಗೊಂದು ಕನ­ಸಿನ ಗುಣ­ವಿದೆ. ಸಂಜೆ­ಗೊಂದು ನಿರ್ಲಿ­ಪ್ತ­ತೆ­ಯಿದೆ. ಅದು ಇರು­ಳಿನ ಹಾಗೆ ನಿರ್ಲ­ಜ್ಜ­ವಲ್ಲ. ಮುಂಜಾ­ನೆಯ ಹಾಗೆ ನಿಗೂ­ಢವೂ ಅಲ್ಲ. ಹಳೆಯ ಗೆಳೆ­ಯನ ಹಾಗೆ ಸಂಜೆ ಹಾಜ­ರಾ­ಗು­ತ್ತದೆ. ಅದಕ್ಕೆ ನಿಮ್ಮ ವಿಶೇಷ ಗಮನ ಬೇಕಿಲ್ಲ. ಕರೆದು ಕೂರಿ­ಸುವ ಅಗ­ತ್ಯ­ವಿಲ್ಲ, ಸತ್ಕ­ರಿ­ಸ­ಬೇ­ಕಾದ ಅವ­ಶ್ಯ­ಕ­ತೆಯೂ ಇಲ್ಲ.
ಅಂಥ ಸಂಜೆ­ಗ­ಳಲ್ಲೇ ಪೂರ್ವ­ಜನ್ಮ ನೆನ­ಪಾ­ಗು­ತ್ತದೆ. ಕಳೆದು ಹೋದ ದಿನ­ಗಳು ನೆನ­ಪಿಗೆ ಬರು­ತ್ತವೆ. ಹಳೆಯ ಪ್ರೇಮ ಕಣ್ಣೆ­ದುರು ಕುಣಿ­ಯು­ತ್ತದೆ. ಸುಮ್ಮನೆ ಒಂದು ಮುತ್ತು ಸಂಜೆಗೆ ಮೈಮ­ನ­ವ­ನ್ನೊಡ್ಡಿ ಕುಳಿ­ತು­ಕೊಳ್ಳಿ.
**­*­*­**
ಅಂಥ ಸಂಜೆ­ಯಲ್ಲೇ ಕಾಡುವ ಹಾಡು ಇದು.
ಹತ್ತು ವರು­ಷದ ಹಿಂದೆ ಮುತ್ತೂರ ತೇರಿ­ನಲಿ
ಅತ್ತಿತ್ತ ಸುಳಿ­ದ­ವರು ನೀವ­ಲ್ಲವೆ?
ಹತ್ತಿ­ರದ ಹೆಣ್ಣೆಂದು ಮತ್ತೆ ಮುತ್ತೂ­ರಿ­ನಲಿ
ಒಪ್ಪಿ ಕೈಹಿ­ಡಿ­ದ­ವರು ನೀವ­ಲ್ಲವೆ?
ಅವರ ಮದು­ವೆ­ಯಾಗಿ ಹತ್ತು ವರು­ಷ­ಗಳು ಸಂದಿವೆ. ಅದೊಂದು ಮುತ್ತು ಸಂಜೆಗೆ ಮೈಯೊಡ್ಡಿ ಕುಳಿತ ಆಕೆಗೆ ಮುತ್ತೂರ ತೇರು ನೆನ­ಪಾ­ಗು­ತ್ತದೆ, ಅಲ್ಲಿ ಅತ್ತಿತ್ತ ಸುಳಿ­ದ­ವರು ನೆನ­ಪಾ­ಗು­ತ್ತಾರೆ.
ಸಂಜೆಯ ನೆಪ­ವಿ­ಲ್ಲದೇ ಹೋದರೆ ಅದು ಯಾಕಾ­ದರೂ ನೆನ­ಪಾ­ಗ­ಬೇಕು? ಅವರು ಎದುರೇ ಕೂತಿ­ರು­ವಾಗ ಹಳೆ­ಯ­ದನ್ನು ಆಕೆ ನೆನ­ಪಿ­ಸಿ­ಕೊಂಡು ಯಾಕೆ ಸುಮ್ಮಾನ ಪಡ­ಬೇಕು. ಬೆಟ್ಟ­ಗಳ ಬೆನ್ನಿ­ನಲಿ ಬೆಟ್ಟ­ಗಲ ದಾರಿ­ಯಲಿ ಕಟ್ಟಿ­ಕೊಂಡು ಅಲೆದ ಕ್ಪಣ­ಗ­ಳನ್ನು ವರ್ತ­ಮಾ­ನದ ತಂತಿಗೆ ಯಾಕಾ­ದರೂ ತೂಗು­ಹಾ­ಕ­ಬೇಕು.
ಅವ­ನಾ­ದರೂ ಅಷ್ಟೇ; ತಿಟ್ಟಿ­ನಲಿ ಮುಂದಾಗಿ, ಕಣಿ­ವೆ­ಯಲಿ ಹಿಂದಾಗಿ ನಡೆ­ದ­ವನು. ತಿಟ್ಟು ಹತ್ತುವ ಹೊತ್ತಿಗೆ ಆಕೆಯ ಕೈಹಿ­ಡಿದು ಏರಿಸಿ, ಕಣಿ­ವೆ­ಯಲ್ಲಿ ಬೆನ್ನ­ಹಿಂ­ದಿನ ಭಯಕ್ಕೆ ಆಸ­ರೆ­ಯಾಗಿ, ಸೆರ­ಗೆ­ಳೆದು ನಿಲ್ಲಿಸಿ, ಜಡೆ­ಯೆ­ಳೆದು ನೋಯಿಸಿ, ತೊತ್ತೆಂದು ಜರೆದು, ಮುತ್ತೆಂದು ಕರೆದು ಮೊದ­ಲಿ­ರುಳ ಹೊಂಗ­ಸನ ಮುನ್ನೀರ ದಾಟಿ­ಸಿ­ದ­ವನು.
ಹತ್ತು ವರು­ಷದ ದಾಂಪ­ತ್ಯದ ಚಿತ್ರ ಇಷ್ಟು ಸೊಗ­ಸಾಗಿ ಮೂವ­ತ್ತಾರು ಸಾಲು­ಗ­ಳಲ್ಲಿ ಮೂಡಿದ್ದು ಎಂಥ ಅಚ್ಚರಿ. ಕವಿ­ತೆಯ ಬೆಡಗೇ ಅದು. ಯಾರೋ ಒಬ್ಬರು ತಮ್ಮ ಮಧುರ ದಾಂಪ­ತ್ಯದ ನೆನ­ಪನ್ನು ಸಾವಿರ ಪುಟ­ಗ­ಳಲ್ಲಿ ಬರೆ­ಯ­ಬ­ಹುದು. ಆ ಸಾವಿರ ಪುಟ­ಗಳ ಅನು­ಭವ ಅವ­ರೊ­ಬ್ಬ­ರದೇ ಆಗಿ­ರು­ತ್ತದೆ. ಆದರೆ ಇಲ್ಲಿ ಹಾಗಲ್ಲ; ಮೂವ­ತ್ತಾರು ಸಾಲು­ಗಳ ಕವಿ­ತೆ­ಯಲ್ಲಿ ಮೂಡಿದ ಅನು­ಭವ ಎಲ್ಲ­ರದ್ದೂ ಆಗಿ­ಬಿ­ಡು­ತ್ತದೆ. ಮದುವೆ ಆಗ­ದ­ವನೂ ಅದನ್ನು ಸವಿ­ಯ­ಬಲ್ಲ.
ಬಾಗಿ­ಲಿಗೆ ಬಂದ­ವರು ಬೇಗ ಬಾ ಎಂದ­ವರು
ಬಂದು­ದೇ­ಕೆಂ­ದ­ವರು ನೀವ­ಲ್ಲವೆ?
ನೋಡು ಬಾ ಎಂದ­ವರು ಬೇಡ ಹೋಗೆಂ­ದ­ವರು
ಎಂದಿಗೂ ಬಿಡ­ದ­ವರು ನೀವ­ಲ್ಲವೆ?
ಇಲ್ಲಿಯ ಕೊನೆಯ ಸಾಲನ್ನು ವರ್ತ­ಮಾ­ನಕ್ಕೆ ತಂದರೆ ವಿನಂ­ತಿ­ಯಾ­ಗು­ತ್ತದೆ; ಎಲ್ಲಿ­ದೆಯೋ ಅಲ್ಲೇ ಇಟ್ಟು ನೋಡಿ­ದರೆ ಪ್ರೀತಿ­ಯಾ­ಗು­ತ್ತದೆ. ಹಾಗೇ ಒಂದೇ ಮಾತಲ್ಲಿ ಆಸೆ ಮತ್ತು ತೃಪ್ತಿ ಎರ­ಡನ್ನೂ ಹೇಳಿ­ದ್ದಾರೆ ಕವಿ; ನೀನೇ ಸಾಕೆಂ­ದ­ವರು, ನೀನೇ ಬೇಕೆಂ­ದ­ವರು, ಚಿತ್ತ­ದಲಿ ನಿಂತ­ವರು ನೀವ­ಲ್ಲವೆ?
ಸಾಕು ಅನ್ನು­ವುದು ತೃಪ್ತಿ, ಬೇಕು ಎನ್ನು­ವುದು ದಾಹ. ಎರಡೂ ದಾಂಪ­ತ್ಯ­ದಲ್ಲಿ ಹೇಗೆ ಫಲಿ­ಸಿದೆ ನೋಡಿ.
ಆತ ತುರು­ಬಿ­ಗಿಟ್ಟ ಮಲ್ಲಿ­ಗೆ­ಯನ್ನು ಆಕೆ ನೆನ­ಪಿ­ಸಿ­ಕೊ­ಳ್ಳುವ ರೀತಿ ನೋಡಿ. ಹೂ ಮುಡಿ­ಸು­ವುದು ಗಂಡ­ಸಿಗೆ ಗೊತ್ತಿ­ಲ್ಲದ ಕೆಲಸ. ಹೆಣ್ಣಿ­ನಷ್ಟು ನಾಜೂ­ಕಾಗಿ ಆತ ಎಂದೂ ಹೂಮು­ಡಿ­ಸ­ಲಾರ; ಮಲ್ಲಿ­ಗೆಯ ದಂಡೆ­ಯನು ತುರು­ಬಿ­ನಲಿ ಗಿಡಿ­ದ­ವರು.. ಅಂತಾಳೆ ಆಕೆ.
ಹೀಗೆ ಹತ್ತು ವರು­ಷದ ದಾಂಪ­ತ್ಯದ ನೆನಪು ಕೊನೆ­ಯಲ್ಲಿ ವರ್ತ­ಮಾ­ನದ ಜಗ­ಲಿಗೆ ಬರು­ತ್ತದೆ. ಆಕೆ ಕೇಳು­ತ್ತಾಳೆ;
ಪಯ­ಣ­ದಲಿ ಜೊತೆ­ಯಾಗಿ ನಾನಿ­ಲ್ಲವೆ?
**­*­*­**
ಈ ಹಾಡಿಗೂ ಸಂಜೆಗೂ ಏನು ಸಂಬಂ­ಧವೋ ಗೊತ್ತಿಲ್ಲ. ಆದರೆ ಪ್ರತಿ ಸಂಜೆ­ಯಲ್ಲೂ ಇದು ನೆನ­ಪಾ­ಗು­ತ್ತದೆ.
ಮುಸ್ಸಂ­ಜೆಯ ಮುಂದೆ ಬೆತ್ತಲೆ ನಿಂತ ಸಂಜೆ­ಯೆಂಬ ಗರು­ಡ­ಗಂ­ಭಕ್ಕೆ ಮನ ಜೋತು­ಬೀ­ಳು­ತ್ತದೆ.
ಟಿಪ್ಪಣಿ- ಇದು ಕಾಡಬೆಳದಿಂಗಳು ಚಿತ್ರಕ್ಕೆ ಲೊಕೇಶನ್ ಹುಡುಕುವುದಕ್ಕೆ ಬಸರಿಕಟ್ಟೆಗೆ ಹೊರಟ ದಾರಿಯಲ್ಲಿ ವೀರೇಶ್ ಕೆಮರಾಕ್ಕೆ ಸೆರೆಸಿಕ್ಕ ಸಂಜೆ. ಆಮೇಲೆ ನೆಲ್ಲಿಹಡ್ಲು ನಾಗಭೂಷಣ್ ಅವರ ನೆರವಿನಿಂದ ಅದೇ ಆಸುಪಾಸಲ್ಲಿ ಶೂಟಿಂಗು ಮುಗಿಸಿದ್ದೂ ಆಯ್ತು. ಈ ಸಂಜೆ ಮರೆಯಲಾರದ ಪ್ರಖರ ಸಂಜೆಗಳಲ್ಲಿ ಒಂದು. ನೆನಪಿನಂತೆ ಹರಿವ ನದಿ. ಮನಸಿನಂತೆ ಹಬ್ಬಿದ ಸಂಜೆಬಿಸಿಲು. ಪಯಣವೋ ನಿಲುಗಡೆಯೋ ತಿಳಿಯದ ಭಾವ.

4 comments:

Anonymous said...

You reminded me of this song almost after twenty five years. It is amazing that one can possibly mean so much beyond from it.

Like the way you end the piece. BETTALE SANJE MATTU GARUDAGAMBHA - still thinking the beauty of this verse.

Nagaraj Vastarey

suptadeepti said...

ಕೆ.ಎಸ್.ನ. ಕವನಗಳ ಕಂಪು ಎಂದಿಗೂ ಮರೆಯಾಗದಂಥದ್ದು. ನಮ್ಮೂರಿನ "ಸುರಗೆ" ಹೂವಿನ ಹಾಗೆ, ಒಣಗಿ ಗರಿಗರಿಯಾಗಿದ್ದರೂ ಮತ್ತೇರಿಸುವ ಸುಗಂಧ ಪುಟ್ಟ ಸುರಗೆಯದು. ಸುಗಂಧಭರಿತ ಕವನವೊಂದರ ನೆನಪಿಗೆ ವಂದನೆಗಳು.

karthik said...

prakhara sanjegalu nijakku apayakari....nimma baraha odida ee sanjeyali nanagondu kavite huttabahude..?kayuttiddene!

Halaswamy r.s said...

‘ತಲೆಮಾರು’ ಕಾದಂಬರಿ