Monday, April 23, 2007

ಮುಚ್ಚಿದ ಮುಷ್ಟಿಯಲ್ಲಿ ಮುರಿದ ಹೆಬ್ಬೆರಳಿತ್ತು!


ವೋ.....ವ್.... ವೊವ್.. ವೊವ್.. ವೋ...ವ್..
ಆ ಅಪರಾತ್ರಿಯ ಆರ್ತನಾದಕ್ಕೆ ವಿದ್ಯಾಶಂಕರನಿಗೆ ಥಟ್ಟನೆ ಎಚ್ಚರವಾಯಿತು. ಯಾರೋ ತನ್ನ ತಲೆಯ ಹತ್ತಿರ ನಿಂತಿದ್ದಾರೆ ಅನ್ನಿಸತೊಡಗಿತು. ಮಲಗಿದಲ್ಲಿಂದ ಹೊರಳಿ ನೋಡುವುದಕ್ಕೆ ಧೈರ್ಯವಾಗಲಿಲ್ಲ. ಹೊದ್ದುಕೊಂಡಿದ್ದ ಕಂಬಳಿಯ ಒಳಗಿನಿಂದಲೇ ಕೈಗೆ ಟಾರ್ಚು ಸಿಗುತ್ತದೇನೋ ಅಂತ ತಡಕಾಡಿದ. ತಲೆಯ ಹತ್ತಿರ ಕುಳಿತ ಆಕೃತಿ ಮಿಸುಕಾಡಿದಂತೆ ಅನ್ನಿಸಿತು. ಹಾಗನ್ನಿಸುವ ಹೊತ್ತಿಗೆ ಕೈಗೆ ಟಾರ್ಚು ಸಿಕ್ಕಿತು.
ಹೊರಗೆ ಗಾಢಾಂಧಕಾರ. ಕರೆಂಟು ಹೋಗಿ ಬಹಳ ಹೊತ್ತಾಗಿತ್ತೆಂದು ಕಾಣಿಸುತ್ತದೆ. ಕತ್ತಲನ್ನೆಲ್ಲ ಯಾರೋ ತಂದು ಮನೆಯೊಳಗೆ ರಾಶಿ ಹಾಕಿದ್ದಾರೆ ಅನ್ನಿಸುವಂತಿತ್ತು. ವಿದ್ಯಾಶಂಕರನ ಕೈಗೆ ಟಾರ್ಚ್ ಲೈಟು ಸಿಗುವ ಹೊತ್ತಿಗೆ ರೆಕ್ಕೆಗಳನ್ನು ಭಯಂಕರ ಸದ್ದಿನೊಂದಿಗೆ ಫಟಫಟಿಸುತ್ತಾ ಬೃಹದಾಕಾರದ ಬಾವಲಿಯೊಂದು ಎಲ್ಲಿಗೋ ಹಾರಿಹೋಯಿತು.
ಆ ಸದ್ದಿಗೆ ವಿದ್ಯಾ ಮತ್ತೊಮ್ಮೆ ಬೆಚ್ಚಿಬಿದ್ದ.ಕೈಗೆ ಟಾರ್ಚು ಸಿಗುತ್ತಲೇ ವಿದ್ಯಾಶಂಕರ ಥಟ್ಟನೆ ಹೊದ್ದುಕೊಂಡಿದ್ದ ಕಂಬಳಿ ಕಿತ್ತೆಸೆದ. ಅದೇ ಅವನು ಮಾಡಿದ ತಪ್ಪು.
ಹೊದಿಕೆ ಕಿತ್ತೆಸೆಯುತ್ತಿದ್ದಂತೆ ಬೀದಿಯ ಕೊನೆಯಲ್ಲಿ ನಾಯಿ ಮತ್ತೊಮ್ಮೆ ವಿಕಾರವಾಗಿ ಅರಚಿತು. ನಾಯಿಗಳು ಸಾಮಾನ್ಯವಾಗಿ ಬೊಗಳುತ್ತವೆಯೇ ಹೊರತು ಊಳಿಡುವುದಿಲ್ಲ. ಹಾಗೆ ಊಳಿಡಬೇಕಿದ್ದರೆ ಅವುಗಳಿಗೂ ಭಯವಾಗಿರಬೇಕು ಮತ್ತು ಅವುಗಳ ಕಣ್ಣಿಗೆ ವಿಚಿತ್ರ ಆಕೃತಿಗಳು ಗೋಚರವಾಗಿರಬೇಕು. ಅದು ನೆನಪಾಗುತ್ತಿದ್ದಂತೆ ವಿದ್ಯಾಶಂಕರನ ರೋಮಗಳು ಸೆಟೆದುನಿಂತವು. ಏನಾದರಾಗಲಿ ಅಂದುಕೊಂಡು ಟಾರ್ಚಿನ ಸ್ವಿಚ್ಚು ಅದುಮಿದ.
ಟಾರ್ಚು ಹತ್ತಿಕೊಳ್ಳಲಿಲ್ಲ !
ಶಂಕರ ತನಗೆ ಅರಿವಿಲ್ಲದೆ ಮೆತ್ತಗೆ ಚೀರಿಕೊಂಡ. ಕತ್ತಲೆಯಲ್ಲಿ ಆ ಸ್ವರ ಕರಗಿಹೋಯಿತು. ಅದೇ ಹೊತ್ತಿಗೆ...ಅತ್ಯಂತ ಕರ್ಕಶ ಧ್ವನಿಯಲ್ಲಿ ಪಕ್ಕದಲ್ಲೇ ಯಾರೋ ನಕ್ಕಂತಾಯಿತು.
ಅದೇ ಕೊನೆ.
ಅಲ್ಲಿಂದಾಚೆ ಮೂರು ವರುಷಗಳ ಕಾಲ ವಿದ್ಯಾಶಂಕರ ನಿದ್ದೆ ಮಾಡಲಿಲ್ಲ!
ಅದೇ ಆರಂಭ!
-2-
ಅದು ಬೆಳಗಾವಿಯ ರಾಯಭಾಗ ತಾಲೂಕಿನ ಒಂದು ಹಳ್ಳಿ. ಜಲಾಲಬಾಗಕ್ಕೆ ಹತ್ತಿರವಿದ್ದ ಆ ಹಳ್ಳಿಗೆ ಹೆಸರೇ ಇರಲಿಲ್ಲ. ಅಲ್ಲಿದ್ದ ಒಂದೇ ಒಂದು ದೊಡ್ಡ ಮನೆಯೆಂದರೆ ವಿದ್ಯಾಶಂಕರನದು. ಆತ ತಕ್ಕಮಟ್ಟಿಗೆ ಅನುಕೂಲವಂತ. ಆತನ ತಾತಮುತ್ತಾತಂದಿರು ಆಗರ್ಭ ಶ್ರೀಮಂತರು. ಅವರು ಮಾಡಿಟ್ಟ ಆಸ್ತಿಯನ್ನು ಶಂಕರ ಅನುಭವಿಸುತ್ತಿದ್ದನೇ ಹೊರತು, ಆತ ಒಂದು ಚಿಕ್ಕಾಸನ್ನೂ ಸಂಪಾದಿಸುವುದಕ್ಕೆ ಹೋಗಲಿಲ್ಲ. ಅವನ ಈ ಸೋಮಾರಿ ಪ್ರವೃತ್ತಿಗೆ ಬೇಸತ್ತು ಅವನ ಹೆಂಡತಿಯೂ ತವರಿಗೆ ವಾಪಸ್ಸಾದಳು. ಆದರೆ ಅವನ ಅತೀವ ಕಾಮಲಾಲಸೆಯೇ ಹೆಂಡತಿಯನ್ನು ಮನೆಯಿಂದ ಓಡಿಸಿದೆ ಅಂತ ಆಸುಪಾಸಿನ ಜನ ಮಾತಾಡಿಕೊಳ್ಳುತ್ತಿದ್ದರು.
ಶಂಕರನಲ್ಲಿ ಅದೆಂಥ ದೈತ್ಯ ಶಕ್ತಿಯಿತ್ತೋ ಗೊತ್ತಿಲ್ಲ, ಆತ ದಿನಕ್ಕೆ ಏಳೆಂಟು ಸಾರಿ ಹೆಂಡತಿಯನ್ನು ಪ್ರೀತಿ ಮಾಡುತ್ತಿದ್ದನಂತೆ. ಅವನ ಈ ವ್ಯಸನವನ್ನು ಕೇಳಿದವರು ಆತ ವಾಮಾಚಾರಿಯಾಗಲು ಲಾಯಕ್ಕು ಎನ್ನುತ್ತಿದ್ದರು.
ಶಂಕರನಿಗೊಬ್ಬ ಮಂಕುಬಡಿದ ಅಣ್ಣನಿದ್ದ. ಹೇಳಿದ ಕೆಲಸ ಮಾಡುತ್ತಾ, ಕೆಲಸವಿಲ್ಲದಾಗ ಸದಾ ಜಗಲಿಯ ಮೇಲೆ ಕೂರುತ್ತಿದ್ದ ಆತ ಒಂದು ದಿನ ಎಲ್ಲಿಗೋ ಹೊರಟುಹೋದ. ಹೀಗಾಗಿ ಆ ವಾಡೆಯಂಥ ಮನೆಯಲ್ಲಿ ಉಳಿದವನು ಶಂಕರ ಒಬ್ಬನೇ. ಆತ ಅಲ್ಲಿಂದ ಯಾವತ್ತೂ ಹೊರಗೆ ಬಂದವನಲ್ಲ. ಯಾರ ಜೊತೆಗೂ ಬೆರೆತವನೂ ಅಲ್ಲ.
ಇದ್ದಕ್ಕಿದ್ದಂತೆ ಶಂಕರನ ಮನೆಯೊಳಗೆ ವಿಚಿತ್ರ ಘಟನೆಗಳು ನಡೆಯತೊಡಗಿದವು. ಆತ ಮಲಗಿದ ತಕ್ಷಣ ಯಾರೋ ಅವನ ಕತ್ತು ಹಿಸುಕಿದಂತಾಗುತ್ತಿತ್ತು. ಎದೆಯ ಮೇಲೆ ಕುಳಿತು ಮುಖಕ್ಕೆ ಏನನ್ನೋ ಒತ್ತಿಹಿಡಿದಂತಾಗುತ್ತಿತ್ತು. ಅದೆಲ್ಲ ಭ್ರಮೆ ಅಂದುಕೊಂಡು ಆತ ಧೈರ್ಯ ತಂದುಕೊಂಡು ನಿದ್ದೆಹೋಗಲಿಕ್ಕೆ ಯತ್ನಿಸಿ ಒಂದು ವಾರ ಕತ್ತುನೋವಿಂದ ಮಲಗಿದ್ದೂ ಆಯ್ತು.ಈ ಕತೆ ನನಗೆ ಗೊತ್ತಾದದ್ದು ನಾನು ಚಿಕ್ಕೋಡಿ ತಾಲೂಕಿನ ಬೇಡ್ಕಿಹಾಳದಲ್ಲಿರುವ ನನ್ನ ಸ್ನೇಹಿತನ ಮನೆಗೆ ಹೋದಾಗ.
ಚಿಕ್ಕೋಡಿ ರಾಯಭಾಗದ ಪಕ್ಕದ ತಾಲೂಕು. ಅಲ್ಲಿನ ಒಂದೇ ಒಂದು ಸ್ಥಳೀಯ ಪತ್ರಿಕೆಯಲ್ಲಿ ವಿದ್ಯಾಶಂಕರನ ದೆವ್ವದ ಬಂಗಲೆಯ ಸುದ್ದಿ ಬಂದಿತ್ತು. ಅಲ್ಲಿ ರಾತ್ರಿ ಹೋಗಿ ಇರುವುದಕ್ಕೆ ಯತ್ನಿಸಿ ಹೆದರಿ ಓಡಿಬಂದವರ ಕತೆಯನ್ನೂ ವರದಿಗಾರ ಬರೆದಿದ್ದ. ಅದಕ್ಕಿಂತ ಹೆಚ್ಚಾಗಿ ಬೈಲಹೊಂಗಲದಿಂದ ದೆವ್ವದ ಗುಟ್ಟು ತಿಳಿಯುವುದಕ್ಕೆ ಬಂದ ವಿಜ್ಞಾನದ ಮೇಷ್ಟ್ರು ಪರಮಶಿವಯ್ಯ ಅವರನ್ನು ದೆವ್ವ ಕತ್ತು ಹಿಸುಕಿ ಕೊಂದುಹಾಕಿದ ಕತೆಯೂ ಅಲ್ಲಿತ್ತು. ಪೋಲೀಸರು ದೆವ್ವದ ಕತೆಯನ್ನು ನಂಬದೆ ವಿದ್ಯಾಶಂಕರನ ಮೇಲೆ ಕೇಸು ಜಡಿದಿದ್ದರು.ಬೇಕಿದ್ದರೆ ಪೋಲಿಸರೇ ಒಂದು ರಾತ್ರಿ ನನ್ನ ಮನೆಯೊಳಗೆ ಇದ್ದು ನೋಡಲಿ ಎಂದು ವಿದ್ಯಾಶಂಕರ ಕೋರ್ಟಿಗೆ ಸವಾಲು ಹಾಕಿದ್ದ. ತಾನೇ ತಾನಾಗಿ ಬಂದ ವಿಜ್ಞಾನದ ಅಧ್ಯಾಪಕರು ಸತ್ತು ಬಿದ್ದಿದ್ದಕ್ಕೆ ಅವರೇ ಹೊಣೆಯೇ ಹೊರತು ತಾನಲ್ಲ ಎಂದು ಅವನ ಕಡೆಯ ವಕೀಲರು ವಾದಿಸಿದ್ದರು. ವಿದ್ಯಾಶಂಕರ ಆರೋಪ ಮುಕ್ತನಾಗುವ ಎಲ್ಲ ಸಾಧ್ಯತೆಯೂ ಇತ್ತು.
ನನ್ನ ಕುತೂಹಲಕ್ಕೆ ಕಾರಣವಾದ ಮತ್ತೊಂದು ಸಂಗತಿಯೆಂದರೆ ಆವತ್ತು ರಾತ್ರಿ ಇನ್ಸ್ ಪೆಕ್ಟರ್ ಆರ್. ಎಸ್. ಶಹಾಪೂರ ಅವರು ವಿದ್ಯಾಶಂಕರನ ಮನೆಯೊಳಗೆ ಒಂಟಿಯಾಗಿ ಕೂರುವುದಾಗಿ ಹೇಳಿಕೆ ಕೊಟ್ಟದ್ದು. ನನಗೆ ಶಹಪೂರ ಚೆನ್ನಾಗಿ ಪರಿಚಿತರು. ಮುಂಬಯಿಯಲ್ಲಿ ನಾವು ಮೂರು ವರ್ಷ ಜೊತೆಗಿದ್ದವರು. ಅದನ್ನು ಓದಿದ ತಕ್ಷಣ ನಾನು ಶಹಾಪೂರರನ್ನು ನೋಡಬೇಕೆಂದು ಇಚ್ಚಿಸಿದೆ. ನನ್ನ ಸ್ನೇಹಿತನ ಜೊತೆಗೆ ಇಬ್ಬರೂ ಜಲಾಲಭಾಗಕ್ಕೆ ಹೊರಟೆವು.
ಅಲ್ಲಿಗೆ ತಲುವುವ ಹೊತ್ತಿಗೆ ಮನೆಮುಂದೆ ದೊಡ್ಡದೊಂದು ಜನಸಂದಣಿಯೇ ನೆರೆದಿತ್ತು. ಅದೊಂದು ನೂರಿಪ್ಪತ್ತು ಗುಡಿಸಲುಗಳ ಪುಟ್ಟ ಹಳ್ಳಿ. ಅಲ್ಲಿದ್ದ ಏಕೈಕ ದೊಡ್ಡಮನೆಯಂದರೆ ವಿದ್ಯಾಶಂಕರನದ್ದು. ಆತನ ಹಿರಿಯರು ಆ ನಿರ್ಜನ ಪ್ರದೇಶದಲ್ಲಿ ಅಷ್ಟು ದೊಡ್ಡ ವಾಡೆಯಂಥ ಮನೆ ಯಾಕೆ ಕಟ್ಟಿದರು ಎಂದು ಆಶ್ಚರ್ಯಪಡುತ್ತಲೇ ನಾನು ಶಹಾಪೂರರನ್ನು ನೋಡಿದೆ.
ಅವರಿಗೆ ನನ್ನನ್ನು ನೋಡಿ ಅತೀವ ಆಶ್ಚರ್ಯವಾಯಿತು. ಜೊತೆಗೆ ಸಂತೋಷವೂ ಆಯ್ತು. ಮಾತುಕತೆಯ ನಂತರ ನಾವಿಬ್ಬರೂ ಆ ರಾತ್ರಿಯನ್ನು ಮನೆಯೊಳಗೆ ಕಳೆಯುವುದೆಂದು ತೀರ್ಮಾನಿಸಿದೆವು. ನನ್ನ ಹಾಗೂ ದೆವ್ವಗಳ ಸಂಬಂಧ ಅವರಿಗೂ ಗೊತ್ತಿತ್ತು. ನೀವು ಉಳಿದವರಂತೆ ಉಡಾಫೆಯಾಗಿ ಮಾತಾಡುವುದಿಲ್ಲ. ಗೊತ್ತಿಲ್ಲದೆ ಯಾವುದನ್ನೂ ತಳ್ಳಿಹಾಕುವುದಿಲ್ಲ ಎಂದು ಅವರು ನನ್ನ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.
ವಿದ್ಯಾಶಂಕರನ ಮನೆಯಿದ್ದದ್ದು ವಿಶಾಲವಾದ ಬಯಲಿನಂಥ ಜಾಗದಲ್ಲಿ. ಅಲ್ಲಿ ಸುತ್ತಮುತ್ತ ಒಂದೇ ಒಂದು ಮರಮಟ್ಟೂ ಇರಲಿಲ್ಲ. ಮನೆಯಿಂದ ಒಂದು ಫರ್ಲಾಂಗು ದೂರದಲ್ಲಿ ಒಂದು ಅರೆಮುಚ್ಚಿದ ಕೆರೆಯಿತ್ತು. ಅದರ ಸುತ್ತ ಕಾಡುಮರಗಳು ಬೆಳೆದಿದ್ದವು. ಕೆರೆಯ ನೀರು ಯಾರೂ ಬಳಸದೆ ಪಾಚಿಗಟ್ಟಿತ್ತು. ಅದರಾಚೆಗೆ ತುಂಬ ದೂರದಲ್ಲಿ ಗುಡಿಸಲುಗಳಿದ್ದವು.
-3-
ನಾನು ಮತ್ತು ಶಹಾಪೂರ ಮನೆಯೊಳಗೆ ಕಾಲಿಟ್ಟದ್ದು ಸಂಜೆ. ಇಬ್ಬರೂ ಇಡೀ ಮನೆಯನ್ನೊಮ್ಮೆ ಸುತ್ತಾಡಿದೆವು. ಎಲ್ಲಾದರೂ ಅನುಮಾನಾಸ್ಪದವಾದದ್ದೇನಾದರೂ ಕಾಣುತ್ತದೆಯೋ ಎಂದು ಗಮನಿಸುತ್ತಾ ಹೋದೆವು. ಕೆಲವು ಹಳೆಯ ಮನೆಗಳಲ್ಲಿ ನೆಲಮಾಳಿಗೆಗಳಿರುತ್ತವೆ. ಅವುಗಳಿಗೆ ಗುಪ್ತ ಬಾಗಿಲುಗಳಿರುತ್ತವೆ. ಅವು ಮನೆಯಲ್ಲಿ ವಾಸಮಾಡುವವರಿಗೇ ಗೊತ್ತಿರುವುದಿಲ್ಲ. ಅವುಗಳ ಒಳಗೆ ಹೆಗ್ಗಣಗಳು ಸೇರಿಕೊಂಡು ಗಲಾಟೆ ಮಾಡುವುದುಂಟು. ಹಿಂದೊಂದು ಸಾರಿ ಇಂಥದ್ದೆ ಒಂದು ದೊಡ್ಡ ಮನೆಯ ನೆಲಮಾಳಿಗೆಯಲ್ಲಿ ನಾಯಿಯೊಂದು ಸೇರಿಕೊಂಡಿತ್ತು. ರಾತ್ರಿಯೆಲ್ಲ ಅದು ಬೊಗಳುತ್ತಿರುವುದನ್ನು ಮನೆಯವರು ನಾಯಿದೆವ್ವ ಎಂದುಕೊಂಡಿದ್ದರು.
ವಿದ್ಯಾಶಂಕರನ ಮನೆಯಲ್ಲಿ ಅಂಥ ಅನುಮಾನಾಸ್ಪದ ಸಂಗತಿಗಳು ನನ್ನ ಕಣ್ಣಿಗೆ ಬೀಳಲಿಲ್ಲ. ಶಹಾಪೂರರ ಪೊಲೀಸ್ ಕಣ್ಣಿಗೂ ಬೀಳಲಿಲ್ಲ. ನಮ್ಮ ಜೊತೆಗೆ ಒಳಬಂದ ವಿದ್ಯಾಶಂಕರ ಮುಸ್ಸಂಜೆಯಾಗುತ್ತಿದ್ದಂತೆ ಹೊರಟುಹೋದ. ಕತ್ತಲು ಕವಿಯುತ್ತಿದ್ದಂತೆ ಮನೆಯೊಳಗೆ ನಾವಿಬ್ಬರೇ ಉಳಿದುಬಿಟ್ಟೆವು.ಉಸಿರುಕಟ್ಟಿದಂತಾಗುವುದಕ್ಕೆ ಏನೇನು ಕಾರಣ ಇರಬಹುದು ಎಂದು ಊಹಿಸುತ್ತಾ ಕುಳಿತೆ. ಕೆಲವು ಮನೆಗಳಲ್ಲಿ ಗಾಳಿಯ ಸಂಚಾರವಿಲ್ಲದೆ ಒಂದೊಂದು ಕೋಣೆಯಲ್ಲಿ ಉಸಿರುಗಟ್ಟಿದಂತಾಗುವುದು ಶಕ್ಯವಿತ್ತು. ಮನೆಯ ಪಕ್ಕದಲ್ಲಿ ಹುಣಸೇ ಮರವಿದ್ದರೆ ಹೀಗಾಗುವುದುಂಟು. ಹುಣಸೇ ಮರದ ಎಲೆಗಳು ರಾತ್ರಿ ಮುಚ್ಚಿಕೊಳ್ಳುವುದರಿಂದ ಅಲ್ಲಿ ಆಮ್ಲಜನಕ ಉತ್ಪತ್ತಿಯಾಗುವುದಿಲ್ಲ. ಅದಕ್ಕೆ ಹುಣಸೇ ಮರದ ಕೆಳಗೆ ರಾತ್ರಿ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದೇ ಕಾರಣಕ್ಕೆ ಹುಣಸೇ ಮರದಲ್ಲಿ ದೆವ್ವಗಳು ವಾಸಿಸುತ್ತವೆ ಎಂಬ ನಂಬಿಕೆ ಬಂದಿರಲಿಕ್ಕೂ ಸಾಕು.ಶಹಾಪೂರರಿಗೂ ಅಂಥ ಕಾರಣಗಳು ಹೊಳೆಯಲಿಲ್ಲ.
ಕತ್ತಲು ಕೋರೈಸುತ್ತಿತ್ತು.
ನಾವಿಬ್ಬರು ನಮ್ಮೊಡನೆ ತಂದಿದ್ದ ಚಪಾತಿ ತಿಂದು ಮುಗಿಸಿದೆವು. ಅದೂ ಇದೂ ಮಾತನಾಡುತ್ತಾ ಮಲಗುವ ಕೋಣೆಯಲ್ಲಿ ಕುಳಿತುಕೊಂಡೆವು. ಅಲ್ಲೊಂದು ದೊಡ್ಡ ಮಂಚವಿತ್ತು. ಅದರ ಪಕ್ಕದಲ್ಲೇ ಒಂದು ದೊಡ್ಡ ಟೇಬಲ್ಲು. ಅದರ ಮೇಲೊಂದು ಲಾಟೀನು ಇಟ್ಟುಕೊಂಡು ಇಬ್ಬರೂ ಕುಳಿತೆವು. ಉದ್ದೇಶಪೂರ್ವಕವಾಗಿಯೇ ಇಬ್ಬರೂ ನಡುರಾತ್ರಿಯಾಗುತ್ತಿದ್ದಂತೆ ಮೌನವಾಗಿರಬೇಕು ಎಂದು ತೀರ್ಮಾನಿಸಿದ್ದೆವು.
ಪ್ರಯಾಣದ ಸುಸ್ತಿಗೋ ಆ ಮೌನದಿಂದಲೋ ಏನೋ ನನಗೆ ಸಣ್ಣಗೆ ನಿದ್ದೆ ಹತ್ತಿತು. ಎಷ್ಟು ಹೊತ್ತು ನಿದ್ದೆ ಮಾಡಿದ್ದೆನೋ ಗೊತ್ತಿಲ್ಲ.ಇದ್ದಕ್ಕಿದ್ದಂತೆ ಎಚ್ಚರವಾಗಿ ಕಣ್ತೆರೆದು ನೋಡಿದರೆ ಇಡೀ ಕೋಣೆ ಕತ್ತಲಲ್ಲಿತ್ತು. ಒಂದು ಕ್ಷಣ ನನಗೇ ಭಯವಾಯ್ತು. ನಾನು ಎಲ್ಲಿದ್ದೇನೆ ಅನ್ನುವುದೇ ಗೊತ್ತಾಗಲಿಲ್ಲ. ಮೆತ್ತಗೆ ಶಹಾಪೂರ್ ಎಂದು ಉಸುರಿದೆ. ಯಾರೂ ಓಗೊಡಲಿಲ್ಲ. ಯಾರೋ ನನ್ನ ಮುಂದೆ ಕುಳಿತಿದ್ದಾರೆ ಅನ್ನುವ ವಿಲಕ್ಷಣ ಭಯವೊಂದು ನನ್ನನ್ನು ಆವರಿಸಿಬಿಟ್ಟಿತು. ಏನು ಮಾಡಿದರೂ ಅದರಿಂದ ಪಾರಾಗುವುದು ಸಾಧ್ಯವಾಗಲಿಲ್ಲ.
ದೆವ್ವದ ವಿಚಾರದಲ್ಲಿ ನಮ್ಮನ್ನು ಕಂಗೆಡಿಸುವುದು ಇಂಥ ಭಯವೇ. ಒಮ್ಮೆ ಭಯ ಹುಟ್ಟಿದರೆ ಸಾಕು ಎಲ್ಲವೂ ದೆವ್ವದ ಕೆಲಸದಂತೆಯೇ ಕಾಣತೊಡಗುತ್ತದೆ. ನನಗೆ ಆದದ್ದೂ ಅದೇ. ನಖಶಿಖಾಂತ ನಡುಗುತ್ತಾ ನಾನು ಜೋಬಿಗೆ ಕೈಹಾಕಿ ಬೆಂಕಿಪೊಟ್ಟಣ ಹೊರಗೆ ತೆಗೆಯಬೇಕು ಅನ್ನುವಷ್ಟರಲ್ಲಿ ದೂರದಲ್ಲಿ ಒಂದು ಬೆಂಕಿಯ ಕಿಡಿ ಕಂಡಂತಾಯಿತು. ಕೆಂಪಗೆ ಚುಕ್ಕಿಯಿಟ್ಟಂತೆ ಅದು ಕಾಣಿಸುತ್ತಿತ್ತು. ನಾನು ಅದುರಿಬಿದ್ದು ಜೋರಾಗಿಯೇ ಶಹಾಪೂರ್ ಎಂದು ಕೂಗಿಕೊಂಡೆ.
ಆಗ ಗೊತ್ತಾಯಿತು, ಆ ಕೆಂಪು ಬೆಂಕಿ ಶಹಾಪೂರರ ಸಿಗರೇಟಿನದು ಎಂದು. ಅವರು ಎದ್ದು ಟಾಯ್ಲೆಟ್ಟಿಗೆ ಹೋಗಿದ್ದರು. ಸಕ್ಕರೆ ಕಾಯಿಲೆಯಿಂದ ನರಳುತ್ತಿದ್ದುದರಿಂದ ತುಂಬ ಹೊತ್ತು ದೇಹಬಾಧೆ ತೀರಿಸಿಕೊಳ್ಳದೆ ಕುಳಿತಿರುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
ನಾನು ಕೂಗಿದ್ದೇ ತಡ ಹೊರಗಿಟ್ಟಿದ್ದ ಕಂದೀಲು ತೆಗೆದುಕೊಂಡು ಬಂದೇ ಬಿಟ್ಟರು. ಏನಾಯಿತು ಅಂತ ಕೇಳಿದರು.. ನೀವಿಲ್ಲಿ ಕಾಣಿಸಲಿಲ್ಲ ನೋಡಿ.. ಅದಕ್ಕೇ ಕರೆದೆ ಎಂದು ನಾನು ಸಮಾಧಾನ ಹೇಳಿದೆ.
ಅವರು ಸಿಗರೇಟಿನ ಕೊನೆಯ ದಮ್ಮೆಳೆದು ಅದನ್ನು ಪಕ್ಕಕ್ಕೆಸೆದು ಲಾಟೀನನ್ನು ಟೇಬಲ್ ಮೇಲಿಟ್ಟಿದ್ದರೋ ಇಲ್ಲವೋ, ದೂರದಲ್ಲಿ ವಿಕಾರ ಸ್ವರದಲ್ಲಿ ನಾಯಿಯೊಂದು ಊಳಿಡುವ ಸದ್ದು ಕೇಳಿಸಿತು. ಫಟಫಟಿಸುತ್ತಾ ಅನಾಥ ಪಕ್ಷಿಯೊಂದು ಅನಂತ ಆಕಾಶದಲ್ಲಿ ಹಾರಿಹೋಯಿತು. ಅದೇ ಹೊತ್ತಿಗೆ ಟೇಬಲ್ ಮೇಲಿಟ್ಟಿದ್ದ ಲಾಟೀನು ಪಕಪಕನೆ ಅಲ್ಲಾಡಿ ನಂದಿಹೋಯಿತು.
ಇದೇನ್ರೀ ಹೀಗಾಯ್ತು... ಕೇಳಿದೆ.ನನ್ನ ಮಾತು ಮುಗಿಯುವುದರೊಳಗಾಗಿ ಕಿಟಕಿಯೊಂದು ರಪ್ಪನೆ ತೆರೆದುಕೊಂಡು ಮುಚ್ಚಿಕೊಂಡಿತು.ಗಾಳಿಗಿರಬೇಕು ಅನ್ನುತ್ತಾ ಶಹಾಪೂರರು ತಮ್ಮ ಜೋಬಿನಿಂದ ಬೆಂಕಿಪೊಟ್ಟಣ ತೆಗೆದು ಕಡ್ಡಿಗೀರಿದರು.
ಹತ್ತಿಕೊಳ್ಳಲಿಲ್ಲ. ಬಹುಶಃ ಟಾಯ್ಲೆಟ್ಟಿಗೆ ಹೋದಾಗ ಅಲ್ಲಿ ಬೀಳಿಸಿದ್ದರು ಅಂತ ಕಾಣುತ್ತೆ. ನಾನು ನನ್ನ ಕೈಲಿದ್ದ ಬೆಂಕಿಪೊಟ್ಟಣದಲ್ಲಿ ದೀಪ ಹಚ್ಚಲು ಯತ್ನಿಸಿದೆ. ನನ್ನ ಬೆಂಕಿಪೊಟ್ಟಣದ ಕಡ್ಡಿಗಳೂ ಒದ್ದೆಯಾದಂತೆ ಟುಸ್ಸೆನ್ನುತ್ತಿದ್ದವು.ಅದೇ ಹೊತ್ತಿಗೆ ನನ್ನ ಮುಂದಿನ ಟೇಬಲ್ಲು ಅಲ್ಲಾಡಿತು. ಅದರ ಮೇಲಿಟ್ಟಿದ್ದ ಆರಿದ ಲಾಂದ್ರ ಟಣ್ಣೆಂದು ನೆಲಕ್ಕೆ ಬಿದ್ದು ಅದರ ಗಾಜು ಒಡೆದ ಸದ್ದು ಕೇಳಿಸಿತು.
ಶಹಾಪೂರ ನಿಧಾನ ಅಂದೆ ನಾನು. ಆ ಕಡೆಯಿಂದ ಉತ್ತರ ಬರಲಿಲ್ಲ. ಶಹಾಪೂರ ಎಲ್ಲಿದ್ದೀರಿ ಕೇಳಿದೆ. ಯಾವ ಉತ್ತರವೂ ಇಲ್ಲ.ಸುತ್ತಲೂ ಕುರುಡುಗತ್ತಲೆ. ನಾನು ನನ್ನ ಪಕ್ಕದಲ್ಲೇ ಇಟ್ಟುಕೊಂಡಿದ್ದ ಟಾರ್ಚನ್ನಾದರೂ ಉರಿಸೋಣ ಎಂದುಕೊಂಡು ಪಕ್ಕಕ್ಕೆ ಕೈಹಾಕಿದೆ. ಟಾರ್ಚು ಅಲ್ಲಿರಲಿಲ್ಲ.ಅಷ್ಟು ಹೊತ್ತಿಗೆ ನನ್ನ ಮುಂದೆ ಯಾರೋ ದೊಪ್ಪೆಂದು ಬಿದ್ದ ಸದ್ದು ಕೇಳಿಸಿತು. ನಾನು ಶಹಾಪೂರ್ ಎಲ್ಲಿದ್ದೀರಿ ಎಂದು ಕುರುಡನಂತೆ ಅರಚುತ್ತಾ, ಅಲೆಯುತ್ತಾ ತಡಕಾಡಿದೆ.
ಯಾವ ಸದ್ದೂ ಇರಲಿಲ್ಲ. ಇದ್ದಕ್ಕಿದ್ದಂತೆ ಮೂಗಿಗೆ ತಣ್ಣನೆಯ ಗಾಳಿ ಹೊಡೆದಂತಾಯಿತು. ಕಮಟು ಮಣ್ಣಿನ ವಾಸನೆ ಅಡರಿಕೊಂಡಿತು. ಅದರ ಮರುಗಳಿಗೆಯೇ ಯಾರೋ ನನ್ನ ಮೇಲೆ ಬಿದ್ದಂತಾಯಿತು. ನನ್ನ ಕತ್ತು ಅದುಮುತ್ತಿದ್ದಾರೆ ಅನ್ನಿಸಿತು. ಇದ್ಯಾಕೆ ಶಹಾಪೂರ್ ಹೀಗೆ ಮಾಡುತ್ತಿದ್ದಾರೆ ಅಂದುಕೊಂಡು ಕತ್ತನ್ನು ಬಳಸಿದ ಕೈಯನ್ನು ಬಿಗಿಯಾಗಿ ಹಿಡಿದುಕೊಂಡೆ. ಒಂದಷ್ಟು ಹೊತ್ತು ಹೋರಾಟ ನಡೆಯಿತು. ಇದ್ದಕ್ಕಿದ್ದಂತೆ ಏನೋ ಲಟಕ್ಕನೆ ಮುರಿದ ಸದ್ದು ಕೇಳಿಸಿತು. ಅದೇ ನಾನು ಕೇಳಿದ ಕೊನೆಯ ಸದ್ದು.
-4-
ಎಚ್ಚರಾಗುವ ಹೊತ್ತಿಗೆ ನಾನು ಹಾಸಿಗೆಯ ಮೇಲೆ ಮಲಗಿದ್ದೆ. ಶಹಾಪೂರ ಪಕ್ಕದಲ್ಲಿದ್ದರು. ನನ್ನ ಬಟ್ಟೆ ಪೂರ್ತಿಯಾಗಿ ಹರಿದುಹೋಗಿತ್ತು. ಕೆಸರು ಮೆತ್ತಿಕೊಂಡು ನಾನು ವಿಕಾರವಾಗಿ ಕಾಣಿಸುತ್ತಿದೆ. ನನ್ನ ಬಲ ಅಂಗೈ ಮಡಿಚಿಕೊಂಡಿತ್ತು.ಎಲ್ಲವನ್ನೂ ನೆನಪಿಸಿಕೊಳ್ಳಲಿಕ್ಕೆ ಯತ್ನಿಸುತ್ತಿದ್ದಂತೆ ಶಹಾಪೂರ್ ನನ್ನ ಕತ್ತು ಹಿಸುಕಲಿಕ್ಕೆ ಯತ್ನಿಸಿದ್ದೂ ನೆನಪಿಗೆ ಬಂತು.
ಅವರ ಮುಖ ನೋಡಿದೆ.ನೀವು ಸತ್ತೇ ಹೋಗಿದ್ದೀರಿ ಅಂತ ತಿಳ್ಕೊಂಡೆ. ನಾನು ಹೇಗೋ ರಾತ್ರಿಯೇ ಹೊರಬಿದ್ದೆ. ನಿಮ್ಮನ್ನು ಕರೆದರೂ ನೀವು ಬರಲಿಲ್ಲ. ಮನೆಯ ಚಿಲಕ ಹೊರಗಿನಿಂದ ಹಾಕಿತ್ತು. ಹಿಂದಿನ ಬಾಗಿಲು ತೆಗೆದು ಓಡಿದೆ. ಸದ್ಯ ಅಷ್ಟೇ ಆಯ್ತಲ್ಲ ಅಂದರು ಶಹಾಪೂರ.
ನಾನು ಏನೊಂದೂ ಅರ್ಥವಾಗದೇ ಪಿಳಿಪಿಳಿ ನೋಡಿದೆ. ಏನು ನಡೆಯಿತು ಅನ್ನುವುದು ಪೂರ್ತಿ ಸ್ಪಷ್ಟವಾಗಲಿಲ್ಲ. ಬಲಗೈಯಲ್ಲೇನೋ ಇದೆ ಎನ್ನಿಸಿ ಮುಷ್ಟಿ ಬಿಡಿಸಿ ನೋಡಿದರೆ ಅಲ್ಲೊಂದು ಮುರಿದ ಹೆಬ್ಬೆರಳು.
ಅಂತೂ ಅಲ್ಲಿ ದೆವ್ವವಿದೆ ಅನ್ನುವುದು ಖಚಿತವಾಯಿತು. ಹಗಲಲ್ಲಿ ಕೋಣೆಯಲ್ಲಿ ಮತ್ತಷ್ಟು ಹುಡುಕಾಟ ನಡೆಸಿದೆವು. ನೆಲದ ಮೇಲೆ ಕೆಸರ ಹೆಜ್ಜೆ ಗುರುತುಗಳು ಕಂಡವು. ಬಾಗಿಲಿಗೆ ಸಿಕ್ಕಿಕೊಂಡಿದ್ದ ಹೆಂಗಸಿನ ತಲೆಗೂದಲಿನಷ್ಟು ಉದ್ದದ, ಆದರೆ ಅಷ್ಟು ನಯವಲ್ಲದ ಕೂದಲುಗಳು ಸಿಕ್ಕಿದವು. ಈ ನಡುವೆ ನಮಗೊಂದಷ್ಟು ಮಾಹಿತಿಗಳೂ ಸಿಕ್ಕಿದವು. ಶಹಾಪೂರರು ತಮ್ಮ ಮೇಲಧಿಕಾರಿಗಳ ಜೊತೆ ಮಾತಾಡಿ, ನ್ಯಾಯಾಧೀಶರ ಜೊತೆ ಮಾತಾಡಿ ಒಂದು ತೀರ್ಮಾನಕ್ಕೆ ಬಂದರು.
-5-
ವಿದ್ಯಾಶಂಕರನ ಮನೆಯಿಂದ ಫರ್ಲಾಂಗು ದೂರದಲ್ಲಿರುವ ಕೆರೆಯಿಂದ ದೆವ್ವ ಬರುತ್ತದೆ ಅನ್ನುವುದು ನಮಗೆ ಖಚಿತವಾಗಿತ್ತು. ಆ ಪಾಳುಬಿದ್ದ ಕೆರೆಯ ಮಣ್ಣೂ ಮನೆಯೊಳಗೆ ಸಿಕ್ಕಿದ ಮಣ್ಣೂ ಒಂದೇ ಆಗಿತ್ತು. ನ್ಯಾಯಾಧೀಶರ ಸಮ್ಮುಖದಲ್ಲಿ ಕೆರೆಯನ್ನು ಅಗೆಸಿದಾಗ ಸಿಕ್ಕಿದ್ದು ಒಂದು ಅಸ್ಥಿಪಂಜರ. ಅದರ ತಲೆಕೂದಲು ಮಾತ್ರ ಉದ್ದ ಬೆಳೆದಿತ್ತು.ನೋಡಿ, ಅದರ ಬಲಗೈ ಹೆಬ್ಬೆರಳು ತುಂಡಾಗಿದೆ ಮತ್ತು ಅದು ಇಲ್ಲಿದೆ.. ಎನ್ನುತ್ತಾ ಶಹಾಪೂರರು ಆ ರಾತ್ರಿ ನನ್ನ ಕೈಗೆ ಸಿಕ್ಕಿ ತುಂಡಾದ ಹೆಬ್ಬೆರಳಿನ ಮೂಳೆಯನ್ನು ತೋರಿಸಿದರು.
ಅದು ಆ ಅಸ್ಥಿಪಂಜರದ ಹೆಬ್ಬೆರಳಿಗೆ ಸರಿಯಾಗಿ ಹೊಂದುತ್ತಿತ್ತು.
ತನಿಖೆಯ ನಂತರ ಗೊತ್ತಾದದ್ದು ಇಷ್ಟು-ವಿದ್ಯಾಶಂಕರನ ಅಣ್ಣ ಓಡಿಹೋಗಿರಲಿಲ್ಲ. ಅವನನ್ನು ವಿದ್ಯಾಶಂಕರನೇ ಕೊಲೆ ಮಾಡಿ ಆ ಕೆರೆಯಲ್ಲಿ ಹೂತುಹಾಕಿದ್ದ. ಆತ ಪೆದ್ದ ಎಂಬ ಕಾರಣಕ್ಕೆ ಅವನಿಗೆ ವಿದ್ಯಾಶಂಕರ ಮದುವೆ ಮಾಡಿರಲಿಲ್ಲ. ಆದರೆ ಆಸೆ ಕೆರಳಿದಾಗೆಲ್ಲ ಆತ ವಿದ್ಯಾಶಂಕರನ ಹೆಂಡತಿಯ ಮೇಲೇರಿ ಹೋಗುತ್ತಿದ್ದ. ಆಕೆಗೂ ಅದು ಆಪ್ಯಾಯಮಾನವಾಗಿತ್ತೋ ಏನೋ. ಒಂದು ಬಾರಿ ಅವರಿಬ್ಬರೂ ವಿದ್ಯಾಶಂಕರನ ಕೈಗೆ ಸಿಕ್ಕಿಬಿದ್ದರು. ಅಣ್ಣನನ್ನು ಆತ ಕೆರೆಯ ಬಳಿ ಒಯ್ದು ಜೀವಂತ ಸಮಾಧಿ ಮಾಡಿದ.ತನ್ನನ್ನು ಉಸಿರುಗಟ್ಟಿ ಸಾಯಿಸೋದಕ್ಕೆ ಯತ್ನಿಸಿದ ತಮ್ಮನನ್ನು ಉಸಿರುಗಟ್ಟಿ ಸಾಯಿಸೋದಕ್ಕೆ ಅಣ್ಣನ ದೆವ್ವ ಯತ್ನಿಸುತ್ತಿತ್ತು ಅನ್ನುವುದನ್ನು ನ್ಯಾಯಾಲಯ ಒಪ್ಪಲಿಲ್ಲ. ವಿಜ್ಞಾನ ಅಧ್ಯಾಪಕರ ಕೊಲೆಗೆ ವಿದ್ಯಾಶಂಕರನಿಗೆ ಶಿಕ್ಷೆಯಾಗಲಿಲ್ಲ.

ಆದರೆ ಅಣ್ಣನ ಕೊಲೆಯ ಅಪರಾಧಕ್ಕಾಗಿ ಆತನಿಗೆ ಜೀವಾವಧಿ ಶಿಕ್ಷೆಯಾಯಿತು.
ಚಿತ್ರ- ಕತೆಗಾರ ನಾಗರಾಜ ವಸ್ತಾರೆ ಸಂಗ್ರಹ. ನಾಗರಾಜ ವಸ್ತಾರೆ ಇಂಥ ಹಳೆ ಮನೆಗಳ ಬಗ್ಗೆ ಕನ್ನಡಪ್ರಭದಲ್ಲಿ -ಹಳೆಮನೆ ಕತೆ- ಎಂಬ ಸೊಗಸಾದ ಲೇಖನಮಾಲೆ ಬರೆದಿದ್ದಾರೆ. ಆರ್ಕಿಟೆಕ್ಚರ್ ಬಗ್ಗೆ ಹೀಗೂ ಬರೆಯಬಹುದಾ ಎಂದು ನಾವೆಲ್ಲ ಬೆರಗಾದ ಬರಹಗಳು ಅವು. ಅಂದಹಾಗೆ ನಾಗರಾಜ ವಸ್ತಾರೆ ಕಥಾಸಂಕಲನ -ಹಕೂನ ಮಟೂಟ- ಓದಿ. ಅವರು ಮನೆ ಕಟ್ಟುವ ಹಾಗೆ ಕತೆ ಕಟ್ಟುತ್ತಾರೆ. ಕಟ್ಟುಕತೆ ಅನ್ನುವ ಮಾತಿಗೆ ಹೊಸ ಅರ್ಥ ಬಂದಂತಿದೆ ಅಲ್ಲವೇ?

8 comments:

ಶ್ರೀವತ್ಸ ಜೋಶಿ said...

ವರ್ತಮಾನ ಪತ್ರಿಕೆಯಲ್ಲಿ ಕೆಲಸ ಮಾಡುವ ಈ ಬ್ಲಾಗಿಗರು
ಭವಿಷ್ಯದಲ್ಲೂ ಇದೇ ರೀತಿಯ ಮೈಜುಮ್ಮೆನ್ನಿಸುವ
ಭೂತದ ಕತೆಗಳನ್ನೇ ಬರೆಯುತ್ತಿರುತ್ತಾರೊ ಇಲ್ಲವೊ ಎಂಬುದು
ತ್ರಿಕಾಲಜ್ಞಾನಿಗಷ್ಟೇ ಗೊತ್ತಿರುವ ವಿಷಯವಿರಬಹುದು!

ಗಿರೀಶ್ ರಾವ್, ಎಚ್ (ಜೋಗಿ) said...

ಇನ್ನೂ ನಾಲ್ಕು ದೆವ್ವರ ಕತೆಗಳು ಮನಸ್ಸಿನಲ್ಲಿವೆ. ಆದರೆ ಅವನ್ನು ಸದ್ಯಕ್ಕೆ ಬರೆಯುವುದಿಲ್ಲ ಅನ್ನುವ ಭರವಸೆಯನ್ನು ಕೊಡುತ್ತೇನೆ.
ಯಾಕೋ ಏನೋ ದೆವ್ವ ಮೆಟ್ಟಿಕೊಂಡಿತ್ತು. ಈಗ ತಾಯಿತ ಕಟ್ಟಿಕೊಂಡಿದ್ದೇನೆ.
-ಜೋಗಿ

Anonymous said...

Looks like you treasure such stories. Nice one and don't postpone their penning!

Thanks for that note about me.
And yu know- you are one of the patrons of my `WORDLY' endeavours.

Nagaraj Vastarey

KUNTINI said...

ನೀನೂ ಉಂಟು ನಿನ್ನ ಕಥೆಯೂ ಉಂಟು.ಒಂದಂತೂ ನಿಜ ನಮಗೆಲ್ಲಾ ಬ್ಲಾಗ್ ಮೂಲಕ ಈ ರೀತಿ ಕಥೆ ಬಾಗಿಸುವ ಮೂಲಕ ಉತ್ಸಾಹ ಹುಟ್ಟಿಸಿದೆ ಮಾರಾಯ.

sritri said...

ಜೋಗಿ ಮನೆ- ದೆವ್ವದ ಮನೆಯಾಗುವುದು ತಪ್ಪಿತು. :))

Mahantesh said...

devvada mane anno title sUkta anisita ide :)-

suresh said...

ಜೋಗಿ, ತೇಜಸ್ವಿಯವರ `ಮಾಯಾಮೃಗ' ಓದಿದಾಗ ಉಂಟಾಗುವ ಅನುಭವವನ್ನೇ ನಿಮ್ಮ ಈ ಕತೆಯೂ ಕಟ್ಟಿಕೊಡುತ್ತದೆ. ತೇಜಸ್ವಿಯವರು ಅಲ್ಲಿ ಕುತೂಹಲದ ಜೊತೆ ವ್ಯಂಗ್ಯವನ್ನೇ ರಾಶಿ ಹಾಕಿದ್ದರು. ನಿಮ್ಮ ಕತೆಯಲ್ಲಿ ಕುತೂಹಲವಿದೆ, ವ್ಯಂಗ್ಯವನ್ನೂ ಮೀರಿದ ಗಾಂಭೀರ್ಯವಿದೆ. ಒಳ್ಳೆಯ ಕತೆ. ಧನ್ಯವಾದಗಳು.

-ಸುರೇಶ್ ಕೆ.

Shankaranand said...

ಪ್ರೀತಿಯ ಜೋಗಿಯವರೇ,
" ಮುಚ್ಚಿದ ಮುಷ್ಟಿಯಲ್ಲಿ ಮುರಿದ ಹೆಬ್ಬೆರಳಿತ್ತು!" ಇದೊಂದು ತುಂಬಾ ರುಚಿಕರವಾದ ಕಥೆ, ತಾವು ಬರೆಯುವಾ ಶೈಲಿ ಮನಸ್ಸಿಗೆ ತುಂಬಾ ಸಂತೋಷ ತಂದು ಕೊಟ್ಟಿತು.
ನನ್ನಲ್ಲಿ ಕತೆಗಳನ್ನು ಓದುವಾ ಹವ್ಯಾಸ ದಿನದಿನಕ್ಕೆ ಹೆಚ್ಚುತ್ತಿದೆ ಇದಕ್ಕೆ ಕಾರಣ ನಿಮ್ಮ ಬರಹ ಶೈಲಿ ಹಾಗು ಬರಹದಲ್ಲಿದ್ದ ವಿಷೆಶವಾದಂತಾ ಅಂಶ.

ಪ್ರೀತಿಯಿಂದ,
ಶಂಕರಾನಂದ ಹಿರೇಮಠ