Sunday, April 8, 2007

ಬನ್ನಿ, ಅರ್ಧರ್ಧ ಟೀ ಕುಡಿಯುವಾ....


ನಾವು, ಕರ್ನಾ­ಟ­ಕದ ಮಂದಿ, ಕಾಫಿ ಪ್ರಿಯರು. ಬಿಸಿಲ ಝಳ ಜೋರಾ­ಗಿ­ರುವ ದಕ್ಪಿಣ ಕನ್ನಡ, ಬಳ್ಳಾ­ರಿ­ಗ­ಳಲ್ಲಿ ಚಹಾ ಕುಡಿ­ಯು­ವ­ವರು ಹೆಚ್ಚಾ­ಗಿ­ದ್ದಾ­ರಾ­ದರೂ ಕಾಫಿ ಸಜ್ಜನ ಕನ್ನ­ಡಿ­ಗರ ಫ್ಯಾಮಿಲಿ ಪೇಯ! ಮೈಸೂ­ರಿ­ನಲ್ಲಿ ಟೀ ಕುಡಿ­ಯು­ವುದೇ ಅಪ­ರಾಧ. ಹಾಸ­ನ­ದಲ್ಲೋ ಚಿಕ್ಕ­ಮ­ಗ­ಳೂ­ರಲ್ಲೋ ಚಹಾ ಕುಡಿ­ಯು­ವ­ವನು ಸಜ್ಜ­ನ­ನಲ್ಲ ಎಂಬ ನಂಬಿ­ಕೆಯೇ ಇದೆ. ಚಹಾ ಕುಡಿ­ಯು­ವ­ವನು ಶ್ರಮ­ಜೀವಿ ಎಂದೂ ನಿರ್ಧಾ­ರ­ವಾಗಿ ಹೋಗಿದೆ. ಅದ್ಯಾಕೋ ಆರಂಭದಿಂ­ದಲೂ ಚಹಾಕ್ಕೆ ಉಳ್ಳ­ವರ ಮನೆಯ ಕಣ್ಮ­ಣಿ­ಯಾ­ಗುವ ಪುಣ್ಯ ಒದ­ಗಿ­ಬ­ರಲೇ ಇಲ್ಲ. ಅದೇ­ನಿ­ದ್ದರೂ ಬೀದಿ ಬದಿಯ ಕೂಸು. ತಳ್ಳು­ಗಾ­ಡಿ­ಗ­ಳಲ್ಲಿ ಮಾರು­ವು­ದಕ್ಕೆ ಅರ್ಹ­ವಾ­ದದ್ದು. ರಸ್ತೆ­ಬ­ದಿ­ಯಲ್ಲಿ ನಿಮಗೆ ಸಾಮಾ­ನ್ಯ­ವಾಗಿ ಕಾಫಿ ಸಿಗು­ವು­ದಿಲ್ಲ!


ಟೀ ಮಾಡು­ವುದು ಕಾಫಿ­ಯಷ್ಟು ಸುಲ­ಭ­ವಲ್ಲ. ಕಾಫಿ ಡಿಕಾ­ಕ್ಷ್ ಮಾಡಿ­ಟ್ಟು­ಕೊಂಡು ಹಾಲು ಬೆರೆಸಿ ಯಾವಾಗ ಬೇಕಾ­ದರೂ ಕುಡಿ­ಯ­ಬ­ಹುದು. ಆದರೆ ಟೀ ಹಾಗಲ್ಲ. ಅದನ್ನು ಚೆನ್ನಾಗಿ ಕುದಿಸಿ, ಬಿಸಿ­ಬಿ­ಸಿ­ಯಾ­ಗಿ­ರು­ವಾ­ಗಲೇ ಕುಡಿ­ಯ­ಬೇಕು. ಸ್ವಲ್ಪ ಹೊತ್ತು ಇಟ್ಟು­ಬಿ­ಟ್ಟರೂ ಅದರ ಮೇಲೊಂದು ತೆಳ್ಳ­ನೆಯ ಕೆನೆ­ಪ­ರದೆ ಕಟ್ಟಿ­ಕೊ­ಳ್ಳು­ತ್ತದೆ. ರುಚಿ­ಗೆ­ಡು­ತ್ತದೆ. ಆದರೆ ಟೀಯನ್ನು ಸಂಭಾ­ವಿ­ತರು ಧಿಕ್ಕ­ರಿ­ಸು­ವು­ದಕ್ಕೆ ಇದೊಂದೇ ಕಾರಣ ಇರ­ಲಾ­ರದು. ಅದ­ಕ್ಕೊಂದು ಧಾರ್ಮಿ­ಕ­ವಾದ, ಸಾಂಸ್ಕೃ­ತಿ­ಕ­ವಾದ, ನೈತಿ­ಕ­ವಾದ ಕಾರ­ಣವೂ ಇರ­ಬ­ಹುದೋ ಏನೋ? ಸಂಶೋ­ಧ­ಕರು ಪತ್ತೆ ಮಾಡ­ಬೇಕು.


ನೀವು ಗಮ­ನಿ­ಸಿ­ರ­ಬ­ಹುದು; ಹೆಣ್ಣು­ಮ­ಕ್ಕಳು ಸಾಮಾ­ನ್ಯ­ವಾಗಿ ಚಹಾ ಕುಡಿ­ಯು­ವು­ದಿಲ್ಲ. ಅವ­ರ­ದೇ­ನಿ­ದ್ದರೂ ಕಾಫಿ ರಾಗ. ಚಹಾ ಕುಡಿ­ಯುವ ಮಹಿ­ಳೆ­ಯರೂ ಸಾಮಾ­ನ್ಯ­ವಾಗಿ ಶ್ರಮ­ಜೀ­ವಿ­ಗಳೇ. ಹೀಗಿ­ರು­ವಾಗ ಶ್ರಮಕ್ಕೂ ಚಹಾಕ್ಕೂ ಏನಾ­ದರೂ ಸಂಬಂಧ ಇರ­ಬ­ಹುದೇ? ಅದೂ ಸಂಶೋ­ಧ­ನೆಗೆ ಅರ್ಹ ವಸ್ತು.


ಟೀ ಕುಡಿ­ಯು­ವು­ದ­ಕ್ಕೊಂದು ಧಾರ್ಮಿ­ಕ­ವಾದ ಆಧ್ಯಾ­ತ್ಮಿ­ಕ­ವಾದ ಕಾರ­ಣವೂ ಇರ­ಬ­ಹುದು ಎಂದು ಅನ್ನಿ­ಸಿ­ದ್ದಕ್ಕೆ ಕಾರಣ ಚೀನಾ ಮತ್ತು ಜಪಾ­ನಿನ ಕತೆ­ಗ­ಳಲ್ಲಿ ಬರುವ ಚಹಾದ ಪ್ರಸ್ತಾ­ಪವೂ ಇರ­ಬ­ಹುದು. ಶ್ರೀಲಂ­ಕಾ­ದಲ್ಲೂ ಚಹಾಕ್ಕೇ ಪ್ರಾಧಾನ್ಯ. ಅಚಾ­ನ­ಕ್ಕಾ­ಗಿಯೋ ಏನೋ ಬುದ್ಧ­ನಲ್ಲಿ ನಂಬಿಕೆ ಇಟ್ಟ ದೇಶ­ಗ­ಳೆಲ್ಲ ಚಹಾದ ಬಗ್ಗೆಯೂ ಪ್ರೀತಿ ಇಟ್ಟು­ಕೊಂ­ಡಿವೆ. ಅಲ್ಲಿಯ ಸಾಹಿ­ತ್ಯ­ದಲ್ಲೂ ಚಹಾದ ಪ್ರಸ್ತಾಪ ಮತ್ತೆ ಮತ್ತೆ ಬರು­ತ್ತದೆ. ಥಟ್ಟನೆ ನೆನ­ಪಾ­ಗುವ ಎರಡು ಪ್ರಸಂ­ಗ­ಗಳು ಹೀಗಿವೆ;

ಒಬ್ಬ ಗುರು. ಅವನ ಹತ್ತಿರ ಶಿಷ್ಯತ್ವ ಸ್ವೀಕ­ರಿ­ಸು­ವು­ದಕ್ಕೆ ಒಬ್ಬ ಬರು­ತ್ತಾನೆ. ಗುರು ಏನನ್ನೂ ಹೇಳಿ­ಕೊ­ಡ­ಬಾ­ರದು. ಶಿಷ್ಯ ಸ್ವಯಂ­ಸ್ಪೂ­ರ್ತಿ­ಯಿಂದ ಕಲಿ­ಯ­ಬೇಕು ಅನ್ನು­ವುದು ನಿಯಮ. ಹೀಗಾಗಿ ಶಿಷ್ಯ ಗುರು­ವಿನ ಪ್ರತಿ­ಯೊಂದು ನಡ­ವ­ಳಿ­ಕೆ­ಯನ್ನೂ ಗಮ­ನಿ­ಸುತ್ತಾ ಇರು­ತ್ತಾನೆ.
ಹೀಗಿ­ರು­ವಾಗ ಒಮ್ಮೆ ಗುರು­ವನ್ನು ನೋಡು­ವು­ದಕ್ಕೆ ಒಬ್ಬ ಶ್ರೀಮಂತ ಬರು­ತ್ತಾನೆ. ಗುರು­ವಿಗೆ ತನ್ನೆಲ್ಲ ಸಂಪ­ತ್ತನ್ನೂ ಸಮ­ರ್ಪಿ­ಸು­ವು­ದಾಗಿ ಹೇಳು­ತ್ತಾನೆ. ಆತ ಮಾತು ಶುರು­ಮಾ­ಡು­ತ್ತಿ­ದ್ದಂತೆ ಗುರು `ಇ­ವ­ನಿ­ಗೊಂದು ಕಪ್ ಟೀ ಕೊಟ್ಟು ಕಳು­ಹಿಸಿ' ಅನ್ನು­ತ್ತಾನೆ.
ಅದಾದ ಮೇಲೆ ಮತ್ತೊಬ್ಬ ನಾಸ್ತಿಕ ಬರು­ತ್ತಾನೆ. ಗುರು­ವನ್ನು ಬೈಯಲು ಶುರು­ವಿ­ಡು­ತ್ತಾನೆ. ಆತ ಮಾತು ಶುರು­ಮಾ­ಡು­ತ್ತಿ­ದ್ದಂತೆ ಗುರು `ಇ­ವ­ನಿ­ಗೊಂದು ಕಪ್ ಟೀ ಕೊಟ್ಟು ಕಳು­ಹಿಸಿ' ಅನ್ನು­ತ್ತಾನೆ.
ಆಮೇ­ಲೊ­ಬ್ಬಳು ವಿಧವೆ ಬರು­ತ್ತಾಳೆ. ಗಂಡ ತೀರಿ­ಕೊಂಡ ದುಃಖ­ದ­ಲ್ಲಿ­ದ್ದಾಳೆ. ಅವಳು ಗೋಳು ಹೇಳಿ­ಕೊ­ಳ್ಳು­ತ್ತಿ­ದ್ದಂತೆ ಗುರು ಮತ್ತೆ ಅದೇ ಮಾತು ಹೇಳು­ತ್ತಾನೆ; `ಈ­ಕೆ­ಗೊಂದು ಕಪ್ ಟೀ...'.
ಇದ­ನ್ನೆಲ್ಲ ನೋಡು­ತ್ತಿದ್ದ ಶಿಷ್ಯ­ನಿಗೆ ಚೋದ್ಯ­ವೆ­ನಿ­ಸು­ತ್ತದೆ. ಗುರು­ವನ್ನು ಕೇಳು­ತ್ತಾನೆ. ನೀವು ನಿಮ್ಮನ್ನು ನೋಡಲು ಬಂದ­ವ­ರಿ­ಗೆಲ್ಲ ಒಂದು ಕಪ್ ಟೀ ಕೊಟ್ಟು ಕಳು­ಹಿ­ಸು­ತ್ತೀ­ರಲ್ಲ. ಅವ­ರಿಗೆ ಅದ­ರಲ್ಲೇ ಸಮಾ­ಧಾನ ಸಿಕ್ಕ­ವ­ರಂತೆ ಹೊರಟು ಹೋಗು­ತ್ತಾ­ರಲ್ಲ. ಇದರ ರಹಸ್ಯ ಏನು?
ಗುರು ಹೇಳು­ತ್ತಾನೆ;
`ಯಾ­ರಲ್ಲಿ... ಈತ­ನಿ­ಗೊಂದು ಕಪ್ ಟೀ ಕೊಟ್ಟು ಕಳು­ಹಿಸಿ'.

ಇದನ್ನು ವಿವ­ರಿ­ಸಿ­ದರೆ ಕೆಡು­ತ್ತದೆ. ಇಂಥದ್ದೇ ಇನ್ನೊಂದು ಕತೆ ಕೇಳಿ;
ಗುರು­ವಿನ ಬಳಿಗೆ ಒಬ್ಬ ಶಿಷ್ಯತ್ವ ಸ್ವೀಕ­ರಿ­ಸಲು ಬರು­ತ್ತಾನೆ. ಬಂದು ತನ್ನ ಬಗ್ಗೆ ಹೇಳಿ­ಕೊ­ಳ್ಳಲು ಆರಂ­ಭಿ­ಸು­ತ್ತಾನೆ. `ಗು­ರು­ಗಳೇ.. ನಾನು ಅನೇಕ ಧರ್ಮ­ಗ್ರಂ­ಥ­ಗ­ಳನ್ನು ಓದಿ­ದ್ದೇನೆ. ಶಾಸ್ತ್ರ­ಪು­ರಾ­ಣ­ಗ­ಳನ್ನು ಅರ್ಥ­ಮಾ­ಡಿ­ಕೊಂ­ಡಿ­ದ್ದೇನೆ. ತರ್ಕ­ಶಾ­ಸ್ತ್ರ­ದಲ್ಲಿ ಪರಿ­ಣತಿ ಇದೆ. ಎಲ್ಲ­ಕ್ಕಿಂತ ಹೆಚ್ಚಾಗಿ ವೇದಾಂ­ತದ ವಿವಿಧ ಶಾಖೆ­ಗ­ಳನ್ನು ಆಳ­ವಾಗಿ ಅಧ್ಯ­ಯನ ಮಾಡಿ­ದ್ದೇನೆ.... ತಾವು ನನಗೆ ಮಹ­ತ್ತ­ರ­ವಾದ ವಿದ್ಯೆ ಕಲಿ­ಸ­ಬೇಕು. ನನ್ನನ್ನು ಜ್ಞಾನಿ­ಯಾಗಿ ಮಾಡ­ಬೇಕು'.
ಗುರು ಮಾತಾ­ಡು­ವು­ದಿಲ್ಲ. ಒಂದು ಜಾಡಿ ಚಹಾ ತರಿ­ಸು­ತ್ತಾನೆ. ಶಿಷ್ಯತ್ವ ಸ್ವೀಕ­ರಿ­ಸಲು ಬಂದ­ವನ ಮುಂದೆ ಒಂದು ಕಪ್ ಇಟ್ಟು `ಮೊ­ದಲು ಚಹಾ ಕುಡಿ. ನಂತರ ಮಾತಾ­ಡೋಣ' ಅನ್ನು­ತ್ತಾನೆ. ಶಿಷ್ಯ ನೋಡು­ತ್ತಿ­ರು­ವಂ­ತೆಯೇ ಜಾಡಿ­ಯಿಂದ ಕಪ್ಪಿಗೆ ಚಹಾ ಸುರಿ­ಯು­ತ್ತಾನೆ. ಕಪ್ ತುಂಬಿ ಚಹಾ ಹರಿ­ದು­ಹೋ­ಗು­ತ್ತಿ­ದ್ದರೂ ಸುರಿ­ಯು­ತ್ತಲೇ ಇರು­ತ್ತಾನೆ.
ಶಿಷ್ಯ ಎಚ್ಚ­ರಿ­ಸು­ತ್ತಾನೆ; ಗುರು­ಗಳೇ ಕಪ್ ತುಂಬಿ­ಹೋಗಿ ಚಹಾ ಚೆಲ್ಲು­ತ್ತಿದೆ. ಇನ್ನೂ ಸುರೀತಾ ಇದ್ದೀ­ರಲ್ಲ.
`ನೀನೂ ಅಷ್ಟೇ. ಈಗಾ­ಗಲೇ ತುಂಬಿ­ಕೊಂ­ಡಿ­ದ್ದೀಯ. ನನಗೆ ಗೊತ್ತಿ­ರು­ವು­ದನ್ನು ನಾನೆಲ್ಲಿ ತುಂಬಲಿ. ಮೊದಲು ಖಾಲಿ­ಯಾಗಿ ಬಾ. ಅಮೇಲೆ ನೋಡೋ­ಣಂತೆ'.


**­*­*­*­**


ಜಾರ್ಜ್ ಆರ್ವೆಲ್ ಹೆಸ­ರಿ­ನಲ್ಲಿ ಬರೆ­ಯು­ತ್ತಿದ್ದ ಎರಿಕ್ ಬ್ಲೇರ್ ಚಹಾದ ಬಗ್ಗೆ ಒಂದು ಕುತೂ­ಹ­ಲ­ಕರ ಪ್ರಬಂಧ ಬರೆ­ದಿ­ದ್ದಾನೆ. ಒಬ್ಬ ಲೇಖಕ ಇಂಥ ಸಂಗ­ತಿ­ಗಳ ಬಗ್ಗೆ ಬರೆ­ಯು­ತ್ತಾನೆ ಅನ್ನು­ವು­ದನ್ನು ಇವತ್ತು ನಮ್ಮಲ್ಲಿ ಊಹಿ­ಸಿ­ಕೊ­ಳ್ಳು­ವು­ದಕ್ಕೂ ಕಷ್ಟ. ಬಿಜಿ­ಎಲ್ ಸ್ವಾಮಿ, ಡಿವಿಜಿ, ಗೊರೂರು ಮುಂತಾ­ದ­ವರು ಇಂಥ ತರ­ಹೇ­ವಾರಿ ಸಂಗ­ತಿ­ಗಳ ಕುರಿತು ಬರೆ­ಯು­ತ್ತಿ­ದ್ದರು. ಲಂಕೇ­ಶರ ಟೀಕೆ ಟಿಪ್ಪ­ಣಿ­ಯಲ್ಲಿ ಅಂಥ ವೈವಿಧ್ಯ ಇತ್ತು. ಡಿ. ಆರ್. ನಾಗ­ರಾ­ಜ್ ಗೆ ಆ ಪರಿಯ ವಿಸ್ತಾರ ಸಾಧ್ಯ­ವಿತ್ತು. ಆದರೆ ಶ್ರೇಷ್ಠ­ತೆಯ ವ್ಯಸ­ನಿ­ಗ­ಳಾ­ದ­ವರು ಮತ್ತು ಸಾಹಿತ್ಯ ಎಂದರೆ ಸೃಷ್ಟಿ, ಅದೊಂದು ದೈವಿ­ಕ­ವಾದ ಕ್ರಿಯೆ ಎಂದು­ಕೊಂ­ಡ­ವರು ಕೇವಲ ಘನ­ಗಂ­ಭೀರ ಸಂಗ­ತಿ­ಗಳ ಕುರಿತು ಬರೆ­ಯುತ್ತಾ ನಿಜಕ್ಕೂ ಖುಷಿ­ಕೊ­ಡುವ ಮತ್ತು ಓದಿ­ಸಿ­ಕೊ­ಳ್ಳುವ ಇಂಥ ವಿಷ­ಯ­ಗ­ಳನ್ನು ಮುಟ್ಟು­ವು­ದಕ್ಕೂ ಹೋಗ­ಲಿಲ್ಲ.


ಆರ್ವೆಲ್ ಪ್ರಬಂ­ಧ­ವನ್ನು ಗ್ರಹಿಸಿ ಬರೆದ ಹತ್ತಾರು ಸಾಲು­ಗಳು ಇಲ್ಲಿವೆ. ಇದು ನಿಮಗೂ ಕುತೂ­ಹ­ಲ­ಕರ ಅನ್ನಿ­ಸಿ­ದರೆ ಒಂದು ಕಪ್ ಚಹಾ ಕುಡಿದು ಸಂಭ್ರ­ಮಿಸಿ.


-ಚಹಾ ಮಾಡು­ವುದು ಹೇಗೆ ಅನ್ನುವ ಬಗ್ಗೆ ಯಾರೂ ಯಾವ ಮಾಹಿ­ತಿ­ಯನ್ನೂ ನೀಡಿ­ದಂ­ತಿಲ್ಲ.ಚಹಾ ಅನೇಕ ದೇಶ­ಗಳ ನಾಗ­ರೀ­ಕ­ತೆಯ ಜೊತೆ ಬೆಳೆದು ಬಂದ ಪೇಯ. ಐರ್ಲೆಂಡ್, ಆಸ್ಟ್ರೇ­ಲಿಯಾ ಮತ್ತು ನ್ಯೂಜಿ­ಲ್ಯಾಂ­ಡು­ಗ­ಳಲ್ಲಿ ಇದಕ್ಕೆ ಯಾವುದೂ ಸರಿ­ಸಾ­ಟಿ­ಯಿಲ್ಲ ಎನ್ನು­ವು­ದರ ಜೊತೆಗೆ ಒಳ್ಳೆಯ ಚಹಾ ಮಾಡೋದು ಹ್ಯಾಗೆ ಎಂಬ ವಿಚಾ­ರದ ಕುರಿತು ಸಾಕಷ್ಟು ಕಲ­ಹವೂ ನಡೆ­ದು­ಹೋ­ಗಿದೆ.


ನಾನು ನನ್ನದೇ ಅನು­ಭ­ವ­ದಿಂದ ಒಳ್ಳೆಯ ಶ್ರೇಷ್ಠ ಚಹಾ ಮಾಡೋದು ಹೇಗೆ ಅಂತ ಕಂಡು­ಕೊಂ­ಡಿ­ದ್ದೇನೆ. ಆ ಬಗ್ಗೆ ಹನ್ನೊಂದು ಗಮ­ನಾರ್ಹ ಅಂಶ­ಗ­ಳನ್ನು ಗುರು­ತಿ­ಸಿ­ದ್ದೇನೆ. ಇವು­ಗ­ಳಲ್ಲಿ ಒಂದ­ರೆಡು ಎಲ್ಲರೂ ಒಪ್ಪ­ಬ­ಹು­ದಾದ ಸಾಮಾನ್ಯ ಹೇಳಿ­ಕೆ­ಗಳು, ನಾಲ್ಕೈ­ದಂತೂ ಖಂಡಿತಾ ವಿವಾ­ದಾ­ಸ್ಪದ ಅಂಶ­ಗಳು.


1. ಮೊದ­ಲ­ನೆ­ಯ­ದಾಗಿ ಒಳ್ಳೆಯ ಚಹಾ ಬೇಕೆಂ­ದಿ­ದ್ದರೆ ಭಾರ­ತೀಯ ಅಥವಾ ಶ್ರೀಲಂಕಾ ಮೂಲದ ಚಹಾ­ಪು­ಡಿ­ಯನ್ನೇ ಬಳ­ಸ­ಬೇಕು. ಚೀನಾದ ಟೀಪು­ಡಿಗೂ ಕೆಲವು ಹೆಗ್ಗ­ಳಿ­ಕೆ­ಗ­ಳಿವೆ ನಿಜ. ಅದು ಅಗ್ಗ, ಹಾಲು ಬೆರೆ­ಸದೇ ಕುಡಿ­ಯ­ಬ­ಹುದು ಎನ್ನು­ವು­ದರ ಹೊರ­ತಾ­ಗಿಯೂ ಚೀನಾ ಟೀಪು­ಡಿಗೆ ನಿಮ್ಮನ್ನು ಕೆರ­ಳಿ­ಸುವ ಶಕ್ತಿ­ಯಿಲ್ಲ. ಅದನ್ನು ಕುಡಿದ ನಂತರ ವಿವೇ­ಕಿ­ಯಾದೆ, ಬಲ­ಶಾ­ಲಿ­ಯಾದೆ ಅಥವಾ ಆಶಾ­ವಾ­ದಿ­ಯಾದೆ ಅಂತಂ­ದು­ಕೊ­ಳ್ಳಲು ಸಾಧ್ಯವೇ ಇಲ್ಲ. ಯಾರಾ­ದರೂ ಒಳ್ಳೆಯ ಚಹಾ ಕುಡಿದೆ ಕಣಯ್ಯಾ ಎಂದರೆ ಅದು ಇಂಡಿಯನ್ ಟೀಯೇ ಆಗಿ­ರ­ಬೇಕು.


2. ಚಹಾ­ವನ್ನು ಸಣ್ಣ ಪ್ರಮಾ­ಣ­ದಲ್ಲಿ ಮಾಡ­ಬೇಕು. ದೊಡ್ಡ ಹಂಡೆ­ಯಲ್ಲೋ ತಪ್ಪ­ಲೆ­ಯಲ್ಲೋ ಕಾಯಿ­ಸಿಟ್ಟ ಟೀಗೆ ರುಚಿ­ಯಿಲ್ಲ. ಮದು­ವೆ­ಮ­ನೆ­ಯಲ್ಲೋ, ಸಾರ್ವ­ಜ­ನಿಕ ಸಮಾ­ರಂ­ಭ­ಗ­ಳಲ್ಲೋ ಮಾಡುವ ಚಹಾ ಕಲ­ಗ­ಚ್ಚಿ­ನಂ­ತಿ­ರು­ತ್ತದೆ. ಸುಣ್ಣದ ನೀರು ಕುಡಿ­ದಂ­ತಿ­ರು­ತ್ತದೆ. ಚಹಾ ಮಾಡುವ ಪಾತ್ರೆ ಚೀನಾದ್ದೇ ಆಗಿ­ದ್ದರೆ ಒಳ್ಳೆ­ಯದು. ಸ್ಟೀಲು ಅಥವಾ ಅಲ್ಯೂ­ಮಿ­ನಿಯಂ ಪಾತ್ರೆ­ಯಲ್ಲಿ ಮಾಡೋ ಟೀಗೆ ಅಂಥ ಸ್ವಾದ ಬರು­ವು­ದಿಲ್ಲ.


3. ಟೀ ತಯಾ­ರಿ­ಸುವ ಮುಂಚೆಯೇ ಟೀಪಾ­ಟನ್ನು ಬಿಸಿ ಮಾಡಿ­ಕೊ­ಳ್ಳ­ಬೇಕು. ಬಿಸಿ­ನೀ­ರಲ್ಲಿ ಅದ್ದಿ ಬೆಚ್ಚ­ಗಾ­ಗಿ­ಸು­ವು­ದ­ಕ್ಕಿಂತ ಹಬೆಯ ಮೇಲಿಟ್ಟು ಬಿಸಿ­ಮಾ­ಡು­ವುದು ಉತ್ತಮ.


4. ಚಹಾ ಸ್ಟ್ರಾಂಗ್ ಆಗಿ­ರ­ಬೇಕು. ಒಂದು ಕಪ್ ಚಹಾಕ್ಕೆ ಒಂದು ತುಂಬಿದ ಚಮಚ ಟೀಪೌ­ಡ್ ಸರಿ. ಇಪ್ಪತ್ತು ಪೇಲವ ಚಹಾ­ಕ್ಕಿಂತ ಒಂದು ಸ್ಟ್ರಾಂಗ್ ಟೀ ಮೇಲು. ವಯ­ಸ್ಸಾ­ಗುತ್ತಾ ಹೋದ ಹಾಗೆ ಚಹಾ ಪ್ರೇಮಿ­ಗಳು ಹೆಚ್ಚು ಹೆಚ್ಚು ಸ್ಟ್ರಾಂಗ್ ಆದ ಚಹಾ ಕುಡಿ­ಯ­ವು­ದಕ್ಕೆ ಆರಂ­ಭಿ­ಸು­ತ್ತಾರೆ.


5. ಚಹಾ­ವನ್ನು ಸೋಸ­ಬಾ­ರದು. ಟೀಪಾಟ್­ನಿಂದ ನೇರ­ವಾಗಿ ಕಪ್ ಗೆ ಸುರಿ­ಯ­ಬೇಕು. ಒಂದೆ­ರಡು ಚಹಾ ಸೊಪ್ಪು ಟೀಯೊ­ಳಗೆ ಬಿದ್ದರೂ ಪ್ರಮಾ­ದ­ವೇ­ನಿಲ್ಲ. ಆದರೆ ಸೋಸು­ವು­ದಿದೆ ನೋಡಿ; ಮಹಾ­ಪ­ರಾಧ.


6. ಚಹಾ ಪಾತ್ರೆ­ಯನ್ನು ಕುದಿ­ಯುವ ನೀರಿನ ಬಳಿಗೆ ಒಯ್ಯ­ಬೇಕೇ ಹೊರತು, ಕುದಿ­ಸಿದ ನೀರನ್ನು ಚಹಾ­ಪಾ­ತ್ರೆಯ ಬಳಿಗೆ ತರ­ಕೂ­ಡದು. ಟೀಪಾ­ತ್ರೆ­ಯೊ­ಳಗೆ ಸುರಿ­ಯುವ ನೀರು ಕೊನೆಯ ಕ್ಪಣದ ತನ­ಕವೂ ಕುದಿ­ಯು­ತ್ತಲೇ ಇರ­ಬೇಕು. ಒಮ್ಮೆ ಕುದಿ­ಸಿದ ನೀರನ್ನು ಮತ್ತೆ ಕುದಿಸಿ ಬಳ­ಸ­ಬಾ­ರದು ಅನ್ನು­ವುದು ಒಂದು ಮತ. ನನ­ಗ­ದ­ರಲ್ಲಿ ನಂಬಿ­ಕೆ­ಯಿಲ್ಲ.


7. ಟೀಪಾ­ತ್ರೆಗೆ ಟೀಪುಡಿ ಹಾಕಿ ಕುದಿ­ಯುವ ನೀರು ಹಾಕಿದ ನಂತರ ಅದನ್ನು ಕದ­ಡ­ಬೇಕು. ಪಾತ್ರೆ­ಯನ್ನು ಅಲ್ಲಾ­ಡಿ­ಸಿ­ದರೂ ಸರಿಯೇ. ಆಮೇಲೆ ಚಹಾ ಎಲೆ­ಗಳು ತಳ­ದಲ್ಲಿ ನೆಲೆ­ಗೊ­ಳ್ಳಲು ಬಿಡ­ಬೇಕು.


8. ಆಳ­ವಿ­ಲ್ಲದ, ಕುಳ್ಳ­ಗಿನ ಕಪ್ಪಿನಲ್ಲಿ ಟೀ ಕುಡಿ­ಯ­ಬಾ­ರದು. ಆಳದ ಬ್ರೇಕ್ ಫಾಸ್ಟ್ ಕಪ್ ವಾಸಿ. ಇದ­ರಲ್ಲಿ ಹೆಚ್ಚು ಚಹಾ ಹಿಡಿ­ಸು­ತ್ತದೆ. ಸಣ್ಣ ಕಪ್ಪು­ಗ­ಳಲ್ಲಿ ಚಹಾ ಕುಡಿ­ಯು­ವು­ದಕ್ಕೆ ಶುರು­ಮಾ­ಡುವ ಮೊದಲೇ ಅರ್ಧ ತಣ್ಣ­ಗಾ­ಗಿ­ರು­ತ್ತದೆ.


9. ಹಾಲು ಬೆರೆ­ಸುವ ಮುನ್ನ ಕೆನೆ ತೆಗೆ­ದಿ­ರ­ಬೇಕು. ಕೆನೆ­ಯಿ­ರುವ ಹಾಲಿ­ನಿಂ­ದಾಗಿ ಚಹಾ ಅಂಟಂ­ಟಂ­ಟಾ­ಗು­ತ್ತದೆ.


10. Tea potನಿಂದ ಮೊದಲು ಟೀಯನ್ನು ಕಪ್ ಗೆ ಸುರಿ­ಯ­ಬೇಕು. ವಿವಾ­ದಾ­ತ್ಮಕ ಅಂಶ­ವೆಂ­ದರೆ ಇದೇ. ಹಲ­ವಾರು ಮಂದಿ ಮೊದಲು ಹಾಲು ಹಾಕಿ­ಕೊಂಡು ಅದರ ಮೇಲೆ ಚಹಾ ಸುರಿ­ಯ­ಬೇಕು ಎಂದು ವಾದಿ­ಸು­ತ್ತಾರೆ. ನನ್ನ ವಾದವೇ ಸರಿ ಯಾಕೆಂ­ದರೆ ಮೊದಲು ಚಹಾ ಸುರಿ­ದು­ಕೊಂ­ಡರೆ ಆಮೇಲೆ ಎಷ್ಟು ಬೇಕೋ ಅಷ್ಟು ಹಾಲು ಸುರಿ­ಯ­ಬ­ಹುದು. ಮೊದಲು ತುಂಬಾ ಹಾಲು ಸುರಿ­ದಿ­ಟ್ಟರೆ ಚಹಾ ಕೆಟ್ಟು ಹೋಗು­ತ್ತದೆ.


11. ಕೊನೆ­ಯ­ದಾಗಿ, ಎಲ್ಲ­ಕ್ಕಿಂತ ಮುಖ್ಯ­ವಾಗಿ, ರಷ್ಯನ್ ಶೈಲಿಯ ಚಹಾ­ವೊಂ­ದನ್ನು ಬಿಟ್ಟು ಉಳಿ­ದೆಲ್ಲ ಟೀಯನ್ನೂ ಸಕ್ಕರೆ ಬೆರೆ­ಸದೆ ಕುಡಿ­ಯ­ಬೇಕು. ಈ ಮಟ್ಟಿಗೆ ನಾನು ಅಲ್ಪ­ಸಂ­ಖ್ಯಾ­ತನೇ ಇರ­ಬ­ಹುದು. ಆದರೆ, ಸಕ್ಕರೆ ಬೆರೆಸಿ ಚಹಾದ ಸ್ವಾದ­ವನ್ನು ಕೆಡಿ­ಸು­ವ­ವ­ರನ್ನು ಚಹಾ­ಪ್ರಿ­ಯ­ರೆಂದು ನಾನು ಹೇಗೆ ಕರೆ­ಯಲಿ? ಚಹಾ ಕಹಿ­ಯಾ­ಗಿಯೇ ಇರ­ಬೇಕು, ಬಿಯ­ರಿ­ನಂತೆ. ಅದಕ್ಕೆ ಸಕ್ಕರೆ ಬೆರೆ­ಸಿ­ಕೊಂ­ಡಿರೋ ನೀವು ರುಚಿ­ಸು­ವುದು ಟೀಯ­ನ್ನಲ್ಲ, ಸಕ್ಕ­ರೆ­ಯನ್ನು. ಅದರ ಬದಲು ಬಿಸಿ­ನೀ­ರಿಗೆ ಸಕ್ಕರೆ ಬೆರೆಸಿ ಕುಡಿ­ಯೋದು ವಾಸಿ.


ಕೆಲ­ವರು, ತಮಗೆ ಚಹಾ ಇಷ್ಟವೇ ಇಲ್ಲ­ವೆಂದೂ, ಅದರ ಶಮ­ನ­ಕಾರಿ ಗುಣ­ಗ­ಳಿ­ಗಾಗಿ ಕುಡಿ­ಯು­ತ್ತೇ­ವೆಂದು ಹೇಳ­ಬ­ಹುದು. ಅಂಥ­ವರು ಸಕ್ಕರೆ ಬೆರೆ­ಸಿ­ಕೊಂಡೇ ಕುಡಿ­ಯಲಿ ಬಿಡಿ. ಆದರೆ, ದಾರಿ­ತ­ಪ್ಪಿದ ಚಹಾ­ಪ್ರಿ­ಯ­ರಿ­ಗೊಂದು ಕಿವಿ­ಮಾತು; ಒಮ್ಮೆ ಸಕ್ಕರೆ ಹಾಕದೆ ಚಹಾ ಕುಡಿದು ನೋಡಿ. ಮುಂದೆಂದೂ ಚಹಾ­ವನ್ನು ಸಕ್ಕರೆ ಬೆರೆಸಿ ನೀವು ಕೆಡಿ­ಸು­ವು­ದಕ್ಕೆ ಹೋಗ­ಲಾ­ರಿರಿ.


ಇಷ್ಟು ಅಂಶ­ಗಳು ಮುಖ್ಯ. ಉಳಿ­ದಂತೆ ಅತಿ­ಥಿ­ಗ­ಳಿಗೆ ಎಂಥ ಪರಿ­ಸ­ರ­ದಲ್ಲಿ ಚಹಾ ಕೊಡು­ತ್ತೀರಿ, ನೀವು ಎಂಥಾ ಪರಿ­ಸ­ರ­ದಲ್ಲಿ ಚಹಾ ಕುಡಿ­ಯು­ತ್ತೀರಿ ಅನ್ನು­ವುದೂ ಮುಖ್ಯ. ಸಾಸ­ರ್­ನಲ್ಲಿ ಚಹಾ ಕುಡಿ­ಯು­ವುದು ಅಶ್ಲೀಲ ಎಂದು ಭಾವಿ­ಸು­ವು­ದ­ರಿಂದ ಹಿಡಿದು ಚಹಾ­ಸೊ­ಪ್ಪಿನ ವರ್ತ­ನೆ­ಯಿಂ­ದಲೇ ಅತಿ­ಥಿ­ಗಳ ಆಗ­ಮನ ಕಂಡು­ಹಿ­ಡಿ­ಯುವ ನಿಗೂಢ ನಂಬಿ­ಕೆ­ಗಳೂ ನಮ್ಮ­ಲ್ಲಿವೆ. ಅದೆಲ್ಲ ನಮಗೆ ಬೇಕಾ­ಗಿಲ್ಲ.


ಆದರೆ ಒಂದಂತೂ ನಿಜ. ನೀವು ಚಹಾ ಪ್ರಿಯರೇ ಆಗಿ­ದ್ದರೆ, ಸಾಲ ಮಾಡಿ­ಯಾ­ದರೂ ನಿಮ್ಮ ಮನೆ­ಯ­ಲ್ಲಿರು ಸ್ಟೀಲು ಲೋಟ­ಗ­ಳನ್ನು ಕಟ್ಟಿ ಅಟ್ಟಕ್ಕೆ ಹಾಕಿ, ಒಂದು ಡಜ್ ಒಳ್ಳೆಯ ಚೈನಾ­ವೇರ್ ಟೀಕ­ಪ್ಪು­ಗ­ಳನ್ನು ತಂದಿ­ಟ್ಟು­ಕೊಳ್ಳಿ.
ಎಲ್ಲವೂ ಹೇಗೆ ಬದ­ಲಾ­ಗು­ತ್ತದೆ, ನೋಡಿ!


(ಅದು ಶನಿವಾರ ರಾತ್ರಿಯಾ ಭಾನುವಾರದ ಮುಂಜಾವವೋ ತಿಳಿಯದ ಸರಿಹೊತ್ತಲ್ಲಿ ನಾನು ಮತ್ತು ಗೆಳೆಯ ಡಾ. ವೆಂಕಟೇಶ ಎಂ. ರಾವ್ ಏನನ್ನೋ ಬರೆಯುತ್ತಾ ಸುಸ್ತಾಗಿ ಟೀ ಮಾಡಿಕೊಂಡು ಕುಡಿದೆವು. ಟೀಗೆ ಸಕ್ಕರೆ ಹಾಕಲಿಲ್ಲ. ಜೇನು ಮತ್ತು ಲಿಂಬೆ ಹಣ್ಣು ಸ್ಲೈಸ್ ಸೇರಿಸಿ ಕುಡಿದ ಆ ಚಹಾ ಬೆಳಗಿನ ತನಕವೂ ನಮ್ಮನ್ನು ಎಚ್ಚರವಿಟ್ಟಿತ್ತು. ಈ ಕ್ಷಣವನ್ನು ಅಮರವಾಗಿಸುವುದಕ್ಕೆ ಈ ಟೀ ಬರಹ)

21 comments:

musafir said...

ನಿಜಕ್ಕೂ ಚಹಾ ಕುಡಿದಷ್ಟೇ ಖುಷಿಯಾಯ್ತು. ನನಗೂ ಚಹಾಕ್ಕೂ ಬೆಚ್ಚನೆಯ ಗೆಳೆತನವಿದೆ. ಆದರೆ ಅದನ್ನು ಆಸ್ವಾದಿಸುವುದನ್ನೂ ಇನ್ನೂ ಕಲಿತಿಲ್ಲ. ಚೀನಿಯರು ಚಹಾವನ್ನು ಅತ್ಯಂತ ಧನ್ಯತೆಯಿಂದ ಆಸ್ವಾದಿಸುತ್ತಾರೆಂದು ಕೇಳಿದ್ದೀನಿ. ಅವರು ಕುಡಿಯುವ ರೀತಿಯೇ ಹಾಗಂತೆ. ಇರಾನಿ ಚಾಯ್ ಬಗ್ಗೆ ಕೇಳಿದ್ದೀನಿ. ಅದರೂ ರುಚಿಯೂ ಬೊಂಬಾಟ್ ಅಂತೆ. ಜೋಗಿ ಸಾರ್, ನಿಮ್ಮ ಟೀ ಟಿಪ್ಪಣಿ ಓದುವಾಗ ಟೀ ಕುಡಿಯುತ್ತಿದ್ದೀನಿ ಅನಿಸುತ್ತಿತ್ತು. ಓದಿ ಮುಗಿಸಿದ ಮೇಲೆ ಟೀ ಕುಡಿಯಬೇಕು ಅನಿಸುತ್ತಿದೆ.ಬನ್ನಿ ಅರ್ಧರ್ಧ ಟೀ ಕುಡಿಯುವಾ....

ಶ್ರೀವತ್ಸ ಜೋಶಿ said...

ಜೋಗಿ, ಬಲ್ಲೇ ಚಾ ಪರ್ಕ!

ಭಗವದ್ಗೀತೆಯಲ್ಲಿ (ಹದಿನೈದನೆಯ ಅಧ್ಯಾಯದ ಹದಿನೈದನೆಯ ಶ್ಲೋಕ)ಶ್ರೀಕೃಷ್ಣಪರಮಾತ್ಮ ಹೇಳುತ್ತಾನೆ:

ಸರ್ವಸ್ಯ'ಚಾ'ಹಂ ಹೃದಿಸನ್ನಿವಿstove
ಮತ್ತಃಸ್ಮೃತಿರ್ಜ್ಞಾನಮಪೋಹನಂ ಚ
ವೇದೈಃಶ್ಚ ಸರ್ವೈರಹಮೇವ ವೇದ್ಯೊ
ವೇದಾಂತಕೃದ್ವೇದ ವಿದೇವ'ಚಾ'ಹಂ ||

ನಾನು ಹೈದರಾಬಾದ್ ಜೀವನದಿಂದ ಲಾಗಾಯ್ತು (1992-96) ಕಾಫಿಯನ್ನು ತ್ಯಜಿಸಿ ಚಾ ಮಾತ್ರ ಕುಡಿಯುವವನು. ನನ್ನ teetotaller ವ್ಯಾಖ್ಯೆಯೇ totally tea!

ಆದರೆ ನಿಮ್ಮ ಸುಖ'ಚಹ'ಕ್ಕೆ ಹನ್ನೊಂದು ಸೂತ್ರಗಳು... ಪೈಕಿ ಕೆಲವನ್ನು ನಾನು ಒಪ್ಪುವುದಿಲ್ಲ. ಅದೇನೇ ಇರಲಿ ಬೈ-ಟು ಟೀ ಕುಡಿಯೋಣ ಬನ್ನಿ.

Jogimane said...

ಇಬ್ಬರು ಮಿತ್ರರಿಗೂ ಥ್ಯಾಂಕ್ಸ್,
ಯಾವುದೇ ರಗಳೆಯಿಲ್ಲದೇ ಮಾಡಬಹುದಾದ ಕೆಲಸ ಅಂದರೆ ಇದೇ, ಬೈಟೂ ಟೀ ಕುಡಿಯುವುದು. ಜಯಂತ ಕಾಯ್ಕಿಣಿ ಬರೆದಂತೆ - ಹಾಗೇ ಸುಮ್ಮನೆ.
ನನ್ನೊಬ್ಬ ಗೆಳೆಯ, ಶ್ರೀಲಂಕಾದ ಫಿಲ್ಮ್ ಮೇಕರ್, ಪ್ರಸನ್ನ ವಿತನಗೆ, ಒಮ್ಮೆ ಶ್ರೀಲಂಕಾದಿಂದ ಒಂದು ಟೀ ಸೊಪ್ಪು ತಂದುಕೊಟ್ಟಿದ್ದ. ಅವರಿಂದ ಮಾಡಿದ ಟೀ ಬಂಗಾರವರ್ಣದಲ್ಲಿ ಥಳಥಳಿಸುತ್ತಿತ್ತು. ಹಾಲು ಸಕ್ಕರೆ ಎರಡೂ ಹಾಕದೇ ಹೀರಬಹುದಾಗಿತ್ತು.
ಅವನು ನಿರ್ದೇಶಿಸಿದ ಸೊಗಸಾದ ಸಿನಿಮ ಆಗಸ್ಟ್ ಸನ್ ಗಿಂತ ಅವನು ಕೊಟ್ಟ ಟೀಯೇ ನೆನಪಲ್ಲಿದೆ.

ತೆಳ್ಳಗಿನ ಚಹಾದ ಬಗ್ಗೆ ಕೈಲಾಸಂ ಜೋಕ್ ಮಾಡಿದ್ದು ನೆನಪಿದೆಯಾ-
ಆಕಾಶಾತ್ ಪತಿತಂ ತೋಯಂ
ಯಥಾಗಚ್ಛತಿ ಚಾ ಗರಂ
ಅದಕ್ಕೆ ಅವರು ಹೇಳಿದ ಅರ್ಥ- ಆಕಾಶದಿಂದ ಬಿದ್ದ ನೀರೆಲ್ಲ ಈ ಚಾವನ್ನು ಸೇರಿದೆಯೋ ಎಂಬ ಹಾಗೆ..
ಇಲ್ಲಿಗೆ ಈ -ಚಾ-ಪ್ಟರ್ ಮುಗೀತು.

Haldodderi Sudhindra said...

ನಿಮ್ಮ ಲೇಖನಕ್ಕೆ ನನ್ನ ‘ತೀವ್ರ’ ಆಕ್ಷೇಪಣೆಗಳು ಶೀರ್ಷಿಕೆಯಿಂದಲೇ ಆರಂಭವಾಗುತ್ತವೆ. ಮೊದಲನೆಯದಾಗಿ ‘ಅರ್ಧರ್ಧ’ ಬಿಸಿಪಾನೀಯ ಸೇವನೆ ಸಂಸ್ಕೃತಿ ಆರಂಭವಾದದ್ದು, ‘ಚಾ’ ಅಥವಾ ‘ಛಾಯ’ ಅಥವಾ ’ಚಹಾ’ದಿಂದಲ್ಲ. It started with By-Two Coffee. ಈ ಬೈ-ಟೂ ಸಂಪ್ರದಾಯ ಆರಂಭವಾದದ್ದೇ ಬೆಂಗಳೂರಿನಲ್ಲಿ ಎಂದು ‘ಇತಿಹಾಸಕಾರರು’ ಹೇಳುತ್ತಾರೆ. ಅದರ ಹುಟ್ಟು ಬೆಂಗಳೂರಿನದಾಗಿದ್ದರೆ, ಖಂಡಿತವಾಗಿಯೂ ಅದರ ಕ್ರೆಡಿಟ್ ಕಾಫಿಯದಾಗಿರಬೇಕೇ ವಿನಃ ಟೀಯದಲ್ಲ.

ಇನ್ನು ಕಾಫಿ ಮಾಡುವುದು ಸುಲಭ, ಟೀ ಮಾಡುವುದು ಕಷ್ಟ ಎನ್ನುವ ತಂತ್ರಜ್ಞಾನದ ಪ್ರಶ್ನೆಗೆ ಬಂದರೆ, ನಿಮ್ಮ ಅಭಿಪ್ರಾಯ ಅಪ್ಪಟ ’ಕಾಫಿ ವಿರೋಧಿ’. ನೆಟ್ಟಗೆ ಟೀ ಕುಡಿಯಲು ಬರದವನೂ ಸಹಾ ಟೀ ಮಾಡಬಲ್ಲ, ಆದರೆ ಕಾಫಿ ತಯಾರಿಕೆಯೆಂಬುದು process intensive technology. ಟೀ ಸೊಪ್ಪು, ಪುಡಿ, ಡಸ್ಟು ಯಾವುದಾದರೂ ಸರಿಯೆ, ಕುದಿಯುವ ನೀರಿಗೆ (ಅಥವಾ ಹಾಲೆಂಬ ನೀರಿಗೆ) ಒಂದಷ್ಟು ಒಗೆದು ಒಂದಷ್ಟು ಕಾಲ ಬಿಟ್ಟರಾಯಿತು. ಸೋಸುಕವೊಂದರ ಮೂಲಕ ಸುರಿದಿಟ್ಟರೆ ಬಂತು ನೋಡಿ ಡಿಕಾಕ್ಷನ್. ರುಚಿಗೆ ತಕ್ಕಂತೆ ಹಾಲೊ, ಸಕ್ಕರೆಯೊ ಬೆರೆಸಿಟ್ಟರೆ ಟೀ ಸಿದ್ಧ.

ಕಾಪಿಗೆ ಪುಡಿ ಹದವಾಗಿರಬೇಕು. ಫಿಲ್ಟರ್‌ನ ಸಂದುಗಳು ಅಳತೆಗೆ ತಕ್ಕನಾಗಿರಬೇಕು. ನೀರಿನ ತಾಪಮಾನ ನಿಖರವಾಗಿರಬೇಕು. ಬಿಂದು ಬಿಂದುವಾಗಿ ಡಿಕಾಕ್ಷನ್ ಭಟ್ಟಿ ಇಳಿದಂತೆ ಕಡುಗಪ್ಪು ದ್ರವಕ್ಕೆ ಆಗತಾನೆ ಕೆನೆಗಟ್ಟಿದ ಕುದಿ ಹಾಲನ್ನು ಸರಿಯಾಗಿ ಬೆರೆಸಿ, ಸಕ್ಕರೆ ರುಚಿಗೆ ತಕ್ಕಷ್ಟು ಬೆರೆಸಿ ಲೋಟದಿಂದ ಲೋಟಕೆ ಅಳೆದೂ ಸುರಿದು ಮಾಡಿದರೆ ನೊರೆ ನೊರೆ ಕಾಫಿ ಸಿದ್ಧ.

ಬಹುಶಃ ಒಳ್ಳೆಯ ಕಾಫಿ ನಿಮ್ಮ ನಾಲಿಗೆಯ ರುಚಿಗೆ ಸಿಕ್ಕದ ಕಾರಣ, ‘ಚಾ’ಪಲ್ಯವನ್ನು ಟೀಗಷ್ಟೇ ಸೀಮಿತವಾಗಿರಿಸಿರುವಿರಿ.

ಬೈ-ಟೂ ಅಲ್ಲ, ಡಬಲ್ ಕಾಫಿ ಕುಡಿಯೋಣ ಒಮ್ಮೆ ಬನ್ನಿ.

Haldodderi Sudhindra said...

ತಮ್ಮ ‘ಚಾ’ಯಾಂಕಣದ ಬಗ್ಗೆ ಮತ್ತಷ್ಟು!

ಒಳ್ಳೆಯ ಕಾಫಿಯನ್ನು ತಯಾರಿಸಲು ಎಲ್ಲರಿಗೂ ಬರದಿರುವುದರಿಂದ, ಒಳ್ಳೆಯ ಕಾಫಿ ಸಿಗದು ಎಂದು ಖಚಿತವಾದೆಡೆಯೆಲ್ಲಾ ನಾ ಕುಡಿಯುವುದು ‘ಟೀ’. ಅಂದ ಮೇಲೆ ‘ಚಾಯಾ’ ಪ್ರಭಾವ ನನ್ನ ಮೇಲೆ ಇದ್ದೇ ಇದೆ.

‘ಚಾ’ ಎಂದಿಗೂ ರೆಡ್ ಲೇಬಲ್ (ಕಾಫಿ ಯಾವತ್ತೂ ಗ್ರೀನ್ ಲೇಬಲ್). ಈ ಕೆಂಪು ಹಣೆಪಟ್ಟಿ ಏಕಿರಬಹುದು? ಬಹುಶಃ ’ಚಾ’ಕರಿ ಮಾಡುವವರು ಹೆಚ್ಚು ಕುಡಿಯುವುದು ‘ಚಾ’ ಆಗಿರಬಹುದು. ‘ಚಾ’ ಪ್ರೇಮಿಗಳು ಕೆನ್ನಾಲಿಗೆ ಗುಂಪಿಗೆ ಸೇರಿರಲೂಬಹುದು.

ಮರೆಯುವ ಮುನ್ನ: ಇಂದು ಬೆಳಗ್ಗೆ ಲಾಲ್‍ಬಾಗಿನ ಹವಾಸಂಚಾರದ ಸಮಯದಲ್ಲಿ ಕಂಡ ‘ಟೀ’ಶರ್ಟ್ ಮೇಲೆ ಬರೆದದ್ದು ’I'm a caffeine addict, are you?'. Me too ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುವ ಹೊತ್ತಿಗೆ ಎಂ.ಟಿ.ಆರ್. ಕಡೆಯ ಬಾಗಿಲ ಬಳಿ ಬಂದಿದ್ದೆವು (ಮಡದಿಯೊಂದಿಗೆ). ಮುಂಜಾನೆಯ ಎರಡನೆಯ ಸುತ್ತಿನ ಕಾಫಿಯನ್ನು ಅಲ್ಲಿಯೇ ಸವಿದೆವೆಂದು ಒತ್ತಿ ಹೇಳಬೇಕಿಲ್ಲ!

Guru said...

ಚಾ ಬಗ್ಗೆ ನಿಮ್ಮ ಲೇಖನ ಓದಲು ಶುರುಮಾಡಿದ ತಕ್ಷಣ 'ಜಾರ್ಜ್ ಆರ್ವೆಲ್' ರನ್ನು ನೆನೆಸದಿದ್ದರೆ ಜಗಳವಾಡಿಬಿಡೋಣ ಎಂದುಕೊಂಡು ಎಲ್ಲ ಸಿದ್ಧನಾಗಿದ್ದೆ. ಅದಕ್ಕೆ ಅವಕಾಶವೇ ಕೊಡಲಿಲ್ಲ. ಜೋಗಿಮನೆಯೂ ಶ್ರೇಷ್ಠತೆಯ ವ್ಯಸನವನ್ನು ಬಿಟ್ಟು 'ಚಾ' ಕುಡಿಸುತ್ತಿದೆ. ಧನ್ಯವಾದಗಳು.

ಗುರು

Jogimane said...

ಗುರು,
ಆರ್ವೆಲ್ ಇಲ್ಲದಿದ್ದರೆ ಟೀ ಎಲ್ಲಿಂದ ಬರಬೇಕು. ಅವರೇ ಟೀ-ಚರ್.
ಅಂದ ಹಾಗೆ, ನಿಮ್ಮ ಪುಸ್ತಕ ಶಾಕುಂತಲಾದ ಬಗ್ಗೆ ಶ್ರೀರಾಮ್ ಬರೆದಿದ್ದಾರೆ. ಆವತ್ತು ಮಾತಾಡಿದ್ದಕ್ಕೆ ಮತ್ತೊಂದಷ್ಟು ಸೇರಿಕೊಂಡಿದೆ. ನಾಲ್ಕು ಜನರ ಮುಂದೆ ಮಾತಾಡಿದ್ದು ಈಗ ಲೋಕ ಶಾಕುಂತಲಾ ಆಗಿದೆ.

ಒಳ್ಳೆಯ ಒಳನೋಟಗಳಿರುವ ಲೇಖನಕ್ಕೆ ಅವರಿಗೂ ಅದನ್ನು ಸಾಧ್ಯವಾಗಿಸಿದ ನಿಮಗೂ ಥ್ಯಾಂಕ್ಸ್.

ಜೋಗಿ

Haldodderi Sudhindra said...

ಚಹಾದ ಬಗ್ಗೆ ಮಗದಷ್ಟು!

ಚಹಾ ಕೇವಲ ‘ರೆಡ್ ಲೇಬಲ್’ನಲ್ಲಿ ಮಾತ್ರ ದೊರೆಯುವುದಿಲ್ಲ. ‘ಯೆಲ್ಲೋ ಲೇಬಲ್’ ಎಂಬ ಪ್ರೀಮಿಯಂ ಚಹಾ ಕೂಡಾ ಮಾರುಕಟ್ಟೆಯಲ್ಲಿದೆ (ಮಾಹಿತಿ: ಮಡದಿ). ಅಂದ ಮೇಲೆ ಕೇವಲ ದುಡಿಯುವ ಕಾರ್ಮಿಕರಿಗಷ್ಟೇ ಅಲ್ಲ, ‘ಪೀತ’ ಪ್ರಿಯರಿಗೂ ಚಹಾ ಪ್ರಿಯ ಎಂದಾಯಿತು.

ಹಿಂದಿನ ಪ್ರತಿಕ್ರಿಯೆಗಳಲ್ಲಿ ಮಡದಿಯನ್ನು ಉಲ್ಲೇಖಿಸಿರುವುದು ಶುದ್ಧ ‘ಭಟ್ಟಂಗಿತನ’ ಎಂಬ ರೀತಿಯ ಆಕ್ಷೇಪಣೆ ವಿಚಿತ್ರಾನ್ನದ ಭಟ್ಟರಿಂದ ಬಂದಿದೆ. ಮೂಲವನ್ನು ಉಲ್ಲೇಖಿಸುವ ಮತ್ತು ಮೂಲ ಸಾಮಗ್ರಿ ಒದಗಿಸಿದವರಿಗೆ ಗೌರವ ಸಲ್ಲಿಸುವ ಲೇಖಕನ ಕರ್ತವ್ಯವನ್ನು ಮಾತ್ರ ಪರಿಪಾಲಿಸಿದ್ದೇನೆ. ‘ಕಾಫಿ ಭಕ್ತಿಯೊಂದಿಗೆ ಸತಿ ಭಕ್ತಿಯೂ ಪ್ರತಿಬಿಂಬಿತವಾಗಿತ್ತು’ ಎಂಬ ‘ಟೀ’ಕೆಗೆ ಇದೊಂದು ಟಿಪ್ಪಣಿ. http://netnota.blogspot.com

sritri said...

ಮನೆಯಲ್ಲಿ ಕಾಫಿ ಪುಡಿ ಇಲ್ಲದಿದ್ದರೆ ಮಾತ್ರ ಅನಿವಾರ್ಯವಾಗಿ ನಾನು ಟೀ ಕುಡಿಯುತ್ತೇನೆ. ಜೋಗಿ ಟೀ ಪ್ರಿಯರೆಂದು ತಿಳಿದ ಮೇಲೆ, ಅವರ ಮೇಲೆ ನನಗಿದ್ದ ಅಭಿಮಾನ ಒಂದು ಗುಟುಕು ಕಡಿಮೆಯಾಯ್ತೇನೋ ಅನ್ನಿಸುತ್ತಿದೆ.

ವಿಚಿತ್ರಾನ್ನ ಭಟ್ಟ said...

ಕಾಫಿಭಕ್ತರು ತಮ್ಮದೇ ಕಾಪಿರೈಟ್ ಎಂದುಕೊಳ್ಳಲಿಚ್ಛಿಸುತ್ತಾರಾ? ಚಾ ಬಗ್ಗೆ ಭಗವದ್ಗೀತೆಯಲ್ಲಿ ಉಲ್ಲೇಖವಿದ್ದಂತೆಯೇ ಕಾಪಿ (ಕಾಫಿ) ಬಗ್ಗೆಯೂ ಒಂದು ಸಂಸ್ಕೃತ ಶ್ಲೋಕವಿದೆ. ಕಾಫಿಮಹಿಮೆಯನ್ನು ಸಾರುವವರಿಗಾಗಿ ಅದನ್ನಿಲ್ಲಿ ಬರೆಯುತ್ತೇನೆ.

ಕಾರ್ಕೋಟಕಂಚ ದೈತ್ಯಾನಾಂ ಪೀಯೂಷಂಚ ದಿವೌಸಕೌ
ಎತಾದ್ವೈ‍ಅಕ್ಷರ ಸಂಭೂತಾ ಕಾಪೀ ಭೂಲೋಕವಾಸಿನಾಂ ||
(ಸಮುದ್ರಮಥನದ ವೇಳೆ ಹುಟ್ಟಿದ ಕಾರ್ಕೋಟಕವಿಷ ದೈತ್ಯರಿಗೂ, ಪಿಯೂಷ (ಅಮೃತ) ದೇವತೆಗಳಿಗೂ ಸಿಕ್ಕಿದರೆ, ಅವೆರಡರ ಮೊದಲಕ್ಷರಗಳಿಂದಾದ 'ಕಾಪೀ' ಭೂಲೋಕವಾಸಿಗಳ ಪೇಯವಾಯಿತು.

Anonymous said...

ಹೆಂಗಸರಿಗೆ ಟೀ ಸಲ್ಲದು!
ಹಾಗಂತ ಯಾರೋ ಹೇಳಿದ ನೆನಪು. ಅವರು ಕೊಟ್ಟ ಮಾಹಿತಿ:
ಕೃಷ್ಣಾಷ್ಟಮಿ ದಿನದ ಅರ್ಘ್ಯಮಂತ್ರದಿಂದ ಬಂದದ್ದು...
ಕೃಷ್ಣಂಚಾ ಬಲಭದ್ರಂಚಾ ವಸುದೇವಂಚಾ ದೇವಕೀ....
ಈ ಇಡೀ ಶ್ಲೋಕದಲ್ಲಿ ಎಲ್ಲೆಲ್ಲಿ ಹೆಂಗಸರ ಹೆಸರು ಬರುತ್ತದೋ ಅಲ್ಲಿ ಎಲ್ಲ ಚಾ ಇಲ್ಲಂತೆ!
ಹಾಗಾಗಿ ಅನಾದಿ ಕಾಲದಿಂದಲೂ ಚಾ ಹೆಂಗಸರಿಗೆ ಚಾ ನಿಷಿದ್ಧ!
ಗೋಪೀನಾಥ ರಾವ್
raogopi at yahoo.com

ವಿಚಿತ್ರಾನ್ನಭಟ್ಟ said...

ಗೋಪಿನಾಥರಾವ್ ಉಲ್ಲೇಖಿಸಿದ ಶ್ಲೋಕದ ಪೂರ್ಣರೂಪ ಇಲ್ಲಿದೆ (ಚಾಸಕ್ತರು ಗಮನಿಸುವುದು):

ಕೃಷ್ಣಂ ಚ ಬಲಭದ್ರಂ ಚ ವಸುದೇವಂ ಚ ದೇವಕೀಮ್
ಯಶೋದಾಂ ನಂದಗೋಪಂಚ ಸುಭದ್ರಾಂ ತತ್ರ ಪೂಜಯೇತ್ ||

ಇತಿ ಕಂಸ 'ಚಾ'ಣೂರಮರ್ದನಭಕ್ತ

ಶ್ರೀವತ್ಸ ಜೋಶಿ said...

ಒಂದು ಜಿಜ್ಞಾಸೆ:

ಕ್ರಿಕೆಟ್ (ಚಿಂತಿಸಬೇಡಿ, ಇದು ವರ್ಲ್ಡ್‌ಕಪ್ ವಿಷಯವಲ್ಲ) ಆಟವು ಬ್ರಿಟಿಷರ ಕೊಡುಗೆ. ಅವರು (ಬ್ರಿಟಿಷರು) ಚಹ ಪ್ರಿಯರು. ಹಾಗಾಗಿ ಕ್ರಿಕೆಟ್ ಟೆಸ್ಟ್ ಪಂದ್ಯದ ವೇಳೆ ಅಪರಾಹ್ನದ ಸಮಯದಲ್ಲಿ 'ಚಹ ವಿರಾಮ' ಅಂತ ಇಟ್ಟುಕೊಂಡರು. ಆದರೆ, ಒಂದು ಕಾಲದಲ್ಲಿ ಭಾರತತಂಡದಲ್ಲಿ ಕರ್ನಾಟಕದಿಂದ ಆರು ಜನ ಆಟಗಾರರಿದ್ದರು, ಕ್ಷೇತ್ರರಕ್ಷಣೆಯ ವೇಳೆ ಅವರೆಲ್ಲ ಕನ್ನಡದಲ್ಲೇ ಮಾತಾಡಿಕೊಳ್ಳುವುದು ಮಾಧ್ಯಮಗಳಲ್ಲೂ ಮೆಚ್ಚುಗೆಗಳಿಸಿತ್ತು ಎಂಬ ವಿಷಯ ನಮಗೆಲ್ಲ ಗೊತ್ತಿದೆ.

ಕರ್ನಾಟಕದ/ಕನ್ನಡಿಗರ ಪೇಯ ಕಾಫಿ ಅಂತಾದರೆ ಆ ಆರು ಜನ ಆಟಗಾರರು (ತಂಡದ ಮಟ್ಟಿಗೆ ಅವರದೇ ಮೆಜಾರಿಟಿ ಅಲ್ಲವೇ?) ಚಹವಿರಾಮವನ್ನು ಚಹವಿರಾಮವೆಂದೇ ಸ್ವೀಕರಿಸುತ್ತಿದ್ದರಾ? ಅಥವಾ ಎರಡೂ ತಂಡಗಳ ಒಟ್ಟು ಕ್ರೀಡಾಳುಗಳ ಮೆಜಾರಿ'ಟಿ'ಯ ಮುಂದೆ ಇವರ ಕಾಫಿ ಡಿಮಾಂಡ್ caught behind ಆಯ್ತಾ?

Haldodderi Sudhindra said...

ಇದರಲ್ಲಿ ಜಿಜ್ಞಾಸೆಯಿಲ್ಲ. ನಮ್ಮ ಕ್ರಿಕೆಟ್ ಆಟಗಾರರು ಕರ್ನಾಟಕದವರೆಂದಾದ ಮೇಲೆ, ಕೊಂಚವೂ ‘ಚಾ’ಕಾರವೆತ್ತದೆಯೆ ವಿರಾಮವನ್ನು ಚಹಕ್ಕಾಗಿಯೇ ಎಂದು ಖಂಡಿತವಾಗಿಯೂ ಒಪ್ಪಿಕೊಂಡಿರುತ್ತಾರೆ. ಮೆಜಾರಿ’ಟಿ’ಯಾಗಲಿ, ಮೈನಾರಿ‘ಟಿ’ಯಾಗಲಿ ನಮ್ಮ ಕನ್ನಡಿಗರದು ಪರರ ಮೆಚ್ಚಿಸುವ ಹಾಗೂ ಪರರ ನೋಯಿಸದ ಗುಣ. ಇಂಗ್ಲಿಷರಿರಲಿ, ಕೇರಳೀಯ ಅಥವಾ ಬಂಗಾಳಿಯನ್ನು ಮೆಚ್ಚಿಸಲೂ ಕರ್ನಾಟಕದ ಕ್ರಿಕೆಟ್ ಕಲಿಗಳು ಚಹವನ್ನೇ ಆಸ್ವಾದಿಸಿರಬಹುದು.

ದೇವೇಗೌಡರಾದಿಯಾಗಿ ಹೆಮ್ಮೆಯ ಕನ್ನಡಿಗರೆಲ್ಲರೂ `caught napping' - ಕಾಫಿಯಷ್ಟೇ ಅಲ್ಲ, ಕಾವೇರಿ ಡಿಮ್ಯಾಂಡಿನಲ್ಲಿಯೂ ಸಹಾ!

ಗಿರೀಶ್ ರಾವ್, ಎಚ್ (ಜೋಗಿ) said...

ಗೆಳೆಯರೇ
ಟೀ ಕುರಿತು ಇಷ್ಟೊಂದು ಚರ್ಚೆ ಆಗುತ್ತಿರೋದು ಸಂತೋಷವೇ. ಇಂಡಿಯನ್ ಎಕ್ಸ್ ಪ್ರೆಸ್ ಪಕ್ಕದಲ್ಲೊಂದು ಒಲಿಂಪಸ್ ಅನ್ನುವ ಹೋಟೆಲಿತ್ತು. ಅಲ್ಲಿ ವಿಚಿತ್ರವಾದೊಂದು ಟೀ ಸಿಗುತ್ತಿತ್ತು. ಬ್ಲಾಕ್ ಟೀ ವಿತ್ ಖೋಡೇಸ್ ರಮ್. ಅಂಥ ಕಾಂಬಿನೇಷನ್ ಎಲ್ಲಾದರೂ ಕೇಳಿದ್ದೀರಾ..
ಬ್ಲಾಕ್ ಟೀ ಮತ್ತು ರಮ್ಮು ನೋಡುವುದಕ್ಕೆ ಒಂದೇ ಥರ ಕಾಣಿಸುತ್ತೆ ಅನ್ನೋದು ಬೇರೆ ಮಾತು. ಆದರೆ ಟೀಯನ್ನು ರಮ್ ಜೊತೆ ಕುಡೀಬಹುದು ಅನ್ನೋದು ಹೊಸ ಥಿಂಕಿಂಗ್. ಇದು ನಮ್ಮ ಪ್ರೀತಿಯ ಟೀಯ ದಿಗಂತಗಳನ್ನು ವಿಸ್ತರಿಸಿದೆ ಎಂದು ನನ್ನ ನಂಬಿಕೆ.

Haldodderi Sudhindra said...

‘ಚಾಯ’ಳಿಂದ ಚರ್ಚೆ ‘ರಮ್’ಯಳತ್ತ ಉರುಳಿರುವುದು ಖುಷಿ ಕೊಡುವ ವಿಚಾರ!

ಕೇವಲ ಕುದುರೆಗಳಿಗಷ್ಟೇ ಅಲ್ಲ, ಮಿಲಿಟರಿ ಮಾಮಂದಿರಿಗೂ ‘ರಮ್’ ಒಳ್ಳೆಯ ‘ಕಿಕ್’ ಕೊಡುವ ದ್ರಾವಕ. ಇಡೀ ಇಂಡಿಯಾದ ಯಾವುದೇ ಮಿಲಿಟರಿ ನೆಲೆಗಳಿಗೆ ಹೋದರೂ ನಿಮಗೆ ಒಂದೇ ‘ರುಚಿ(?)’ಯ ಟೀ ಮತ್ತು ಒಂದೇ ಬ್ರಾಂಡಿನ ರಮ್ ಸಿಗುತ್ತದೆ. ಜನರಲ್‍ಗಳು/ಮಾರ್ಷಲ್‍ಗಳು/ಅಡ್ಮಿರಲ್‍ಗಳಿಂದ ಹಿಡಿದು ನಾಯ್ಕ್/ಸಾರ್ಜೆಂಟ್/ಸೈಲರ್‌ಗಳ ತನಕ ಒಂದೇ ಒಗರಿನ ಟೀ ಮತ್ತು ರಮ್ ಸೇವಿಸುತ್ತಾರೆ, ‘ಗಳಾಸು’ಗಳ ಆಕಾರ ಮತ್ತು ಮೌಲ್ಯಗಳಷ್ಟೇ ಬದಲಾಗಿರುತ್ತದೆ. ಸ‘ಮಜಾ’ವಾದಕ್ಕೆ ಇದಕ್ಕಿಂತ ಉತ್ತಮ ದೃಷ್ಟಾಂತ ಬೇಕೆ?

‘ರಮ್’ ಕೇವಲ ಚಹದೊಂದಿಗೆ ಮಾತ್ರವಲ್ಲ ಚಾಕೊಲೆಟ್‍ನೊಂದಿಗೂ ಸವಿಯುತ್ತಾರೆ. ರಮ್ ಹನಿಗಳನ್ನು ಹಿಡಿದಿಟ್ಟ ಚಾಕೊಲೆಟ್ ಗುಬುಟುಗಳು ರಶಿಯಾ ದೇಶದಲ್ಲಿ ಅತ್ಯಂತ ಜನಪ್ರಿಯ. ಚಾಕೊಲೆಟ್ ಹಾಗೂ ಕಾಫಿ ಪ್ರಿಯರ ನಾಡಾದ ಬ್ರೆಝಿಲ್‍ನಲ್ಲಿ ಬಿಸಿ ಚಾಕೊಲೆಟ್ ಮತ್ತು ತಣ್ಣನೆಯ ರಮ್ ಒಂದೇ ‘ಕೆಫೆ’ಯಲ್ಲಿ ಸರ್ವ್ ಮಾಡುತ್ತಾರೆ, ಅಲ್ಲಿ ಕಾಫಿ ಸಿಗುತ್ತದೆ, ಚಹಾ ಇಲ್ಲ!

Anonymous said...

ಬಹಳ ಚೆನ್ನಾಗಿ ಬರೆದಿದ್ದೀರ.

ವಾಣಿ

suresh said...

ಜೋಗಿ, `ಟೀ' ಬಗ್ಗೆ ಸುಮ್ಮಸುಮ್ಮನೆ ಏನೇನೋ ಬರೆಯುವವರಿಗಿಂತ ವಿಭಿನ್ನವಾಗಿ ಬರೆದಿದ್ದೀರಿ. ಅಭಿನಂದನೆಗಳು.

ಬೆಂಗಳೂರಿನ ಜನ ಟೀಗೂ ಕಾಫಿ ಅಂತಲೇ ಹೆಸರಿಟ್ಟುಕೊಂಡವರಂತೆ `ಬನ್ನಿ ಕಾಫಿ ಕುಡಿಯೋಣ' ಎಂದು ಹೊರಟು ಹೋಟೆಲ್ಗೆ ಹೋಗಿ ಟೀ ಕುಡಿಯುತ್ತಾರೆ. ಅಡಿಗಾಸ್ನಲ್ಲಿ ಟೋಕನ್ ತಗೊಳ್ಳುವಾಗಲೂ `ಬೈ ಟೂ ಕಾಫಿ' ಅನ್ನುತ್ತಾರೆಯೇ ವಿನಃ `ಟೀ' ಅಂತ ಅಪ್ಪಿತಪ್ಪಿ ಹೇಳೊಲ್ಲ.

ನಮ್ಮ ಆಫೀಸಿಗೆ ಒಬ್ಬ ಟೀ/ಕಾಫಿವಾಲಾ ಬರುತ್ತಾನೆ. ಹೆಸರು ರಾಮಕೃಷ್ಣ ಅಂತ. ಅವನು ಒಂದು ಫ್ಲಾಸ್ಕಿನಲ್ಲಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಟೀ ಮಾಡಿಟ್ಟುಕೊಂಡವನು ಇಲ್ಲಿ ನಮಗೆಲ್ಲ ಕೊಡುವಾಗ ಅದರಲ್ಲಿ ಸ್ವಲ್ಪ ಡಿಕಾಕ್ಷನ್ ಥರ ಗ್ಲಾಸಿಗೆ ಹಾಕಿ, ಮೇಲಿಂದ ಇನ್ನೊಂದು ಫ್ಲಾಸ್ಕಿನಲ್ಲಿದ್ದ ಬಿಸಿ ಬಿಸಿ ಸಿಹಿ ಹಾಲನ್ನು ಸುರಿಯುತ್ತಾನೆ. ಆಹಾ! ಅವನ ಟೀ ಎಂದರೆ ಅಮೃತ. ಹಾಗಾಗಿ ಅವನೇ ನಮಗೆಲ್ಲ `ಪರಮಹಂಸ!'

ಇರಲಿ, ನಮ್ಮ ಕುಂದಾಪುರದ ಕಡೆ ಹೋದರೆ ಅಲ್ಲಿ ಎಲ್ಲರೂ `ಚಾ... ಚಾ...' ಕಾಫಿ ಕುಡಿಯುವವರು ವಿರಳಾತಿವಿರಳ. ನನ್ನ ಅಣ್ಣನೊಬ್ಬನಿದ್ದಾನೆ. ತಿಂಗಳಾದ ಮಗು ಅಳಲು ಶುರು ಮಾಡಿದರೂ `ಏ, ಅದಕ್ಕೆ ಸ್ವಲ್ಪ ಚಾ ಕುಡಿಸು' ಅನ್ನುವವನು! ಅವನ ಮನೆಯಲ್ಲಿ ಮಕ್ಕಳೆಲ್ಲ `ಚಾ' ಪ್ರಿಯರೇ. ಈಗಷ್ಟೇ ಮಾತಾಡಲು ಕಲಿತಿರುವ ಮಗುವೂ ಹಾಲು ಬೇಕಾದರೆ `ಚಾ...' ಎಂದು ರಾಗವೆಳೆಯುತ್ತೆ.

ಇದಕ್ಕಿಂತ ತಮಾಷೆಯೆಂದರೆ ನನ್ನ ಮದುವೆಯ ದಿನದ್ದು. ಆವತ್ತು ನನ್ನ ಫಸ್ಟ್ ನೈಟ್. ಬೆಳಿಗ್ಗೆ ಎದ್ದು ಬಾಗಿಲು ತೆರೆದರೆ ಈ ಅಣ್ಣನೆಂಬ ಮನುಷ್ಯ ಅಲ್ಲೇ ಬಾಗಿಲ ಬಳಿ ನಿಂತುಕೊಂಡಿದ್ದಾನೆ! ಅವನ ಬಾಯಿಂದ ಬಂದಿದ್ದು ಒಂದೇ ಪ್ರಶ್ನೆ- `ಚಾ ಕೊಡ್ಲನಾ?'

ಅವನು ಯಾಕೆ `ಚಾ' ಕೇಳಿದ ಎಂಬುದಕ್ಕೆ ಸಾವಿರಾರು ಅರ್ಥಗಳು ಹೊಳೆಯುತ್ತವೆ, ಬಿಡಿ!

-ಸುರೇಶ್ ಕೆ.

ಗಿರೀಶ್ ರಾವ್, ಎಚ್ (ಜೋಗಿ) said...

ಥ್ಯಾಂಕ್ಯೂ ಸುರೇಶ್,
ನಮ್ಮೂರಲ್ಲಿ ಚಹಾದ್ದೇ ಸಾಮ್ರಾಜ್ಯ. ಚಹಾದ ಬಗ್ಗೆ ಅನೇಕಾನೇಕ ಜೋಕುಗಳಿವೆ. ಹೊಟೆಲ್ಲಿಗೆ ಬಂದು ತುಳುವಿನಲ್ಲಿ -ಚಾವುಂಡರಾಯರೇ- ಎನ್ನುವುದು ಒಂದು ಪನ್. ಅದರ ಅರ್ಥ ಚಾ ಇದೆಯಾ ರಾಯರೇ ಎಂದು.
ಯಕ್ಷಗಾನದಲ್ಲಿ ಹಾಸ್ಯ ಪಾತ್ರಧಾರಿ ಹೇಳುತ್ತಾನೆ-
ಅವನು ನನಗೆ ಹೊಡೆದ, ನನಗೆ ಅವನು ಹೊಡೆದ. ಇದನ್ನು ಹೇಗೆ ಹೇಳುತ್ತಾನೆ ಎಂದರೆ ಫಕ್ಕನೆ ಅವನು ನನಗೆ ನಾನು ಅವನಿಗೆ ಹೊಡೆದ ಅನ್ನಿಸುವಂತಿರಬೇಕು.
ಆಮೇಲೆ ಏನಾಯ್ತು. ಕೇಳ್ತಾನೆ ರಾಜ.
ಆಮೇಲೆ ನನಗೆ ಮೂರ್ಚಾ ಬಂತು. 3 ಚಹಾ ಬಂತು ಎಂಬಂತೆ.
ಅದು ಮೂರ್ಚಾ ಅಲ್ವೋ ಮೂರ್ಛೆ, ಭಾಗವತರು ತಿದ್ದುತ್ತಾರೆ.
ಅದೇ. ಅದೇ. ಆಮೇಲೆ ನಾನೇ ಚಾ ತರಿಸಿದೆ.
ಅದು ಚಾ ತರಿಸಿದ್ದಲ್ಲ, ಚೇತರಿಸಿದ್ದು ಮತ್ತೆ ಭಾಗವತರ ತಿದ್ದುಪಡಿ.
ಹೀಗೆ ಚಾ ಎಂದು ಕರೆಸಿಕೊಳ್ಳುವ ಚಹ ನಮ್ಮ ಫೇವರಿಟ್ ಸಂಗತಿ. ಆಫ್ ಕೋರ್ಸ್, ರಘುನಾಥ ಚಹ ಕೂಡ.

ಜೋಗಿ

ಜಯಂತ್ said...

ಅರ್ಧ ರಾತ್ರಿಯಲ್ಲಿ ಎಬ್ಬಿಸಿ ಟೀ ಕೊಡಿ ...ಕುಡಿದು ಮಲಗೊ ಜಾಯಮಾನ..ಈ
ಟೀ ಪುರ್‍ಆಣ.....ಸಾಕಷ್ಟು ಹಳೆಯ ಕಥೆಗಳನ್ನ ನೆನಪಿಸುತ್ತೆ..

ಈಗಲೂ ನಾವು ಹುಡುಗರು(ಸ್ನೇಹಿತರು) ಎಲ್ಲಿ ಸಿಕ್ಕರೂ ಮೊದಲು ಹುಡುಕುವ ಜಾಗ ಬೈ-ಟೂ ಟೀ..

ಮಲ್ಲು ಬೇಕರಿಗಳಿಂದ ಹಿಡಿದು ಮಸಾಲ ಟೀ ಡಬ್ಬಿ ಅಂಗಡಿಗಳವರೆಗೆ ಇದ್ದ ಕಡೆಯಲೆಲ್ಲ ಎಲ್ಲೆಲ್ಲಿ ಟೀ ಚೆನ್ನಾಗಿ ಸಿಗುತ್ತೆ ಅಂತ ಗುರ್ತು ಮಾಡ್ಕೊಂಡು ಅಲ್ಲಿಗೆ ಹೋಗುವ ಚಾಳಿ.

ನನ್ನ ಸ್ನೇಹಿತ ಪ್ರವೀಣ್ ಅಂತ.. ಅವನ ಮುಂದೆ ನನ್ನ ಟೀ ಪ್ರೇಮವೇನೂ ಅಲ್ಲ..ಅವನಿಗೆ ನಾವು ಆಗಾಗ ಹೇಳೊದು ಮದುವೆ ಮಾತುಕತೆಯಲ್ಲಿ ಅವನು ಕೇಳೋದು ಒಂದು ೨೫ ಕೆ.ಜಿ ಟೀ ಬ್ಯಾಗು ಬೇರೆ ಏನು ಇರಲಿ,ಬಿಡಲಿ.

ಮೈಸೊರಿನಲ್ಲಿ ಎಂಜಿನಿಯರಿಂಗ್ ಓದುವಾಗ ನಡೆದು ಹೋಗ್ತ ಇದ್ದದ್ದು ಇನ್ನು ನೆನಪು..ಚಾಕೊಲೇಟ್ ಟೀ,ಮಸಾಲ ಟೀ.ಆ ಟೀ ಈ ಟೀ ಅಂತ ಕಿ.ಮೀ ಗಟ್ಟಲೆ.

ಈ ಟೀ-ಲೇಖನ ತುಂಬಾ ಇಷ್ಟ ಆಯ್ತು

M.S. said...

This was totally a 'tea'ser. also enjoyed 'pun'chy and counter 'pun'chy responses. While browsing casually i got this link. hahaha from cha'ha'priye ...mala'tea'. well con'tea'nue the fun.