Sunday, January 6, 2008

ಯಾರಿಗೂ ಬೇಡವೆ ಸಿರಿ ಮಲ್ಲಿಗೆ?

ಮಾತು ಬರುವುದು ಎಂದು ಮಾತಾಡುವುದು ಬೇಡ
ಒಂದು ಮಾತಿಗೆ ಎರಡು ಅರ್ಥವುಂಟು.

ಈ ಜಗತ್ತಿನಲ್ಲಿ ಕವಿತೆ ಬರೆಯುವಷ್ಟು ಸುಲಭದ ಮತ್ತು ಐಷಾರಾಮದ ಕೆಲಸ ಮತ್ತೊಂದಿಲ್ಲ ಎಂದು ಭಾವಿಸಿರುವ ತರುಣರ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ಪರ ಬಲ್ಲ ಪ್ರತಿಯೊಬ್ಬನೂ ಒಂದಲ್ಲ ಒಂದು ಕವನವನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಬರೆದವನೇ ಆಗಿರುತ್ತಾನೆ. ಹಾಗೆ ಬರೆದ ಒಂದೇ ಕವನವನ್ನಿಟ್ಟುಕೊಂಡು ತಾನು ಕವಿ ಎಂದು ಸಾಧಿಸುವ ಹುಮ್ಮಸ್ಸು ಆತನಿಗೆ ಬಂದುಬಿಟ್ಟರೆ ಪತ್ರಿಕೆಗಳ ಸಂಪಾದಕರನ್ನು ಕಾವ್ಯಸರಸ್ವತಿಯೇ ಕಾಪಾಡಬೇಕು.
ಕವಿತೆ ಬರೆಯುವುದು ಕಷ್ಟ ಅಂತ ಇಂಥ ಕವಿಗಳನ್ನು ನಂಬಿಸಲು ಯತ್ನಿಸಿ ಸೋತವರ ಸಂಖ್ಯೆ ದೊಡ್ಡದು. ಗಮಗಮಾಗಮಾಡಿಸ್ತಾವ ಮಲ್ಲಿಗೆ, ನೀ ಹೊರಟದ್ದೀಗ ಎಲ್ಲಿಗಿ? ಅಂತ ಬೇಂದ್ರೆ ಬರೆದದ್ದು ಪದ್ಯ ಹೌದಾದರೆ ಆಟೋ ಹಿಂದೆ ಬರೆದ `ಮೈಸೂರು ಮಲ್ಲಿಗೆ, ನೀ ಹೋಗಬೇಕು ಎಲ್ಲಿಗೆ?' ಎಂದು ಬರೆದದ್ದು ಯಾಕೆ ಕವನ ಆಗುವುದಿಲ್ಲ ಎಂಬ ಘನಗಂಭೀರ ಪ್ರಶ್ನೆಯನ್ನು ಎಸೆದು ಕಂಗಾಲು ಮಾಡುವವರಿದ್ದಾರೆ. ಇಂಥವರಿಗೆ ಬೇಂದ್ರೆಯ ಕವಿತೆಯ ಕೇಂದ್ರ, ರೂಪಕ, ಸಂಕೀರ್ಣತೆ ಮತ್ತು ಸತ್ವದ ಕುರಿತು ಹೇಳುವುದರಿಂದ ಏನೇನೂ ಉಪಯೋಗವಿಲ್ಲ. ಯಾಕೆಂದರೆ ಅವರ ಪ್ರಶ್ನೆ ಅಷ್ಟು ಆಳವಾದದ್ದೇನೂ ಆಗಿರುವುದಿಲ್ಲ.
ಮೊದಲೆಲ್ಲ ಒಂದು ಲೋಕರೂಢಿಯಾದ ಅಭಿರುಚಿಯಿತ್ತು. ಇದು ಚೆನ್ನಾಗಿದೆ ಅಂತ ಹತ್ತು ಮಂದಿ ಹೇಳಿದರೆ ಅದು ಚೆನ್ನಾಗಿರುತ್ತಿತ್ತು. ಈಗ ಒಂದು ಕವಿತೆ ಚೆನ್ನಾಗಿರುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ` ಇವರ ಕಾವ್ಯವು ಶೋಷಿತ ಜನಾಂಗದ ಪ್ರತಿನಿಧಿಯಂತೆ ಕೆಲಸ ಮಾಡುತ್ತದೆ. ಹೀಗಾಗಿ ಈ ಕವಿತೆಗೊಂದು ಆಂತರಿಕ ಸೌಂದರ್ಯ ತಾನೇ ತಾನಾಗಿ ಪ್ರಾಪ್ತಿಯಾಗಿಬಿಟ್ಟಿದೆ. ಇಂಥ ಕವಿತೆಗಳು ತಮ್ಮನ್ನು ಶೋಷಿಸುವವರ ವಿರುದ್ಧ ದಂಗೆಯೇಳುವಂತೆ ಕಾಣಿಸುತ್ತವಾದ್ದರಿಂದ ಇವುಗಳನ್ನು ನಾವು ಬೇರೆಯೇ ನೆಲೆಯಲ್ಲಿ ನೋಡಬೇಕು' ಅಂತ ವಿಮರ್ಶಕನೊಬ್ಬ ಅಪ್ಪಣೆ ಕೊಡಿಸಿದರೆ ಆ ಬಗ್ಗೆ ಅಪಸ್ವರ ಎತ್ತುವ ಧೈರ್ಯ ಯಾವನಿಗೂ ಇರುವುದಿಲ್ಲ. ಒಂದು ವೇಳೆ ಯಾರಾದರೂ ಅದರ ಬಗ್ಗೆ ಮತ್ತೊಂದು ಮಾತಾಡಿದರೆ ಆತ ಪ್ರಗತಿವಿರೋಧಿ ಅನ್ನಿಸಿಕೊಳ್ಳುತ್ತಾನೆ.
ಹೋಗಲಿ, ಇಂಥ ಕವಿಗಳನ್ನು ಹಿಡಿದು ನಿಲ್ಲಿಸಿ, ನಿನ್ನ ಮೆಚ್ಚಿನ ಕವಿ ಯಾರೆಂದು ಕೇಳಿದರೆ ಅವರು ಯಾರ ಹೆಸರನ್ನೂ ಹೇಳುವುದಿಲ್ಲ. `ನಾವು ಯಾರನ್ನೂ ಓದಿಲ್ಲ. ಈ ಕವಿತೆ ಹುಟ್ಟಿದ್ದು ಜೀವನಾನುಭವದಿಂದ' ಅನ್ನುತ್ತಾರೆ. ಇಂಥ ಮಾತನ್ನು ನಾವು ಧಿಕ್ಕರಿಸುವ ಹಾಗೇ ಇಲ್ಲ. ಒಂದು ವೇಳೆ ಕಾವ್ಯಪರಂಪರೆ, ಸಾಹಿತ್ಯ ಚರಿತ್ರೆ ಮುಂತಾಗಿ ಮಾತೆತ್ತಿದರೆ ಕಾರಂತರು ಯಾರ ಕಾದಂಬರಿಯನ್ನೂ ಓದುತ್ತಿರಲಿಲ್ಲ ಗೊತ್ತೇ?, ಆದಿಕವಿ ಪಂಪ ಯಾರನ್ನು ಓದಿದ್ದ ಹೇಳಿ? ಅವನೇ ಆದಿಕವಿ ಅಂದ ಮೇಲೆ ಆತನಿಗೆ ಓದುವುದಕ್ಕಾದರೂ ಯಾರಿದ್ದರು ಎಂದು ತಮ್ಮನ್ನು ಸಾರಾಸಗಟಾಗಿ ಪಂಪನಿಗೋ ಕಾರಂತರಿಗೋ ಹೋಲಿಸಿಕೊಂಡು ಬಿಡುತ್ತಾರೆ. ಅಲ್ಲಿಗೆ ಆ ಮಾತು ಮೂಕವಾಗುತ್ತದೆ.
ಮತ್ತೆ ಕೆಲವರಿದ್ದಾರೆ; ಕವನ ಸಂಕಲನಗಳನ್ನು ಸುಂದರವಾಗಿ ಮುದ್ರಿಸಿ, ಅದಕ್ಕೊಂದು ಅಷ್ಟೇ ಸುಂದರವಾದ ಮುನ್ನುಡಿಯನ್ನೂ ಬರೆಸಿ, ಮುಖಪುಟಕ್ಕೆ ಖ್ಯಾತ ಕಲಾವಿದರಿಂದ ಚಿತ್ರ ಬರೆಸಿ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಾರೆ. ಮುನ್ನುಡಿಯಲ್ಲಿ ಆ ಕವಿತೆಯನ್ನು ಖ್ಯಾತನಾಮರು ಅನಿವಾರ್ಯವಾಗಿ ಹೊಗಳಿರುತ್ತಾರೆ. ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಅವನ್ನು ಬಿಡುಗಡೆ ಮಾಡುವವರು ಹೊಗಳಿಯೇ ಹೊಗಳುತ್ತಾರೆ. ಹಾಗೆ ಹೊಗಳಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಅಲ್ಲಿಗೆ ಆ ಕವಿತೆ ಚಿರಾಯುವಾಗುತ್ತದೆ.
ನರಸಿಂಹಸ್ವಾಮಿ ಒಂದು ಪದ್ಯ ಬರೆದು ಅದನ್ನು ಅತ್ಯಂತ ಸಂಕೋಚದಿಂದ ಡಿವಿಜಿಯವರಿಗೋ ಡಿಎಲ್ಎನ್ ಅವರಿಗೋ ತೋರಿಸುವ ಪರಿಪಾಠವಿತ್ತು. ಹಾಗೆ ತೋರಿಸುವ ಹೊತ್ತಿಗೆ ಕವಿಗೆ ಎಷ್ಟೊಂದು ಸಂಕೋಚ ಇರುತ್ತಿತ್ತು ಅನ್ನುವುದನ್ನು ಕೆ ಎಸ್ ನ, ಅಡಿಗ ಮುಂತಾದವರೆಲ್ಲ ಬರೆದುಕೊಂಡಿದ್ದಾರೆ.
ಕವಿತೆ ಬರೆಯುವುದನ್ನು ಕನಿಷ್ಠ ಇಪ್ಪತ್ತು ವರುಷ ನಿಷೇಧಿಸದೇ ಹೋದರೆ ಎಂಥ ಅಪಾಯ ಆಗಬಹುದು ಅನ್ನುವುದನ್ನು ಊಹಿಸುವುದು ಕಷ್ಟ. ಕವಿತೆಯ ಮಾನ ಮತ್ತು ಪ್ರಾಣ ಎರಡೂ ಉಳಿಯಬೇಕಿದ್ದರೆ ಮುಂದಿನ ಇಪ್ಪತ್ತು ವರುಷ ಯಾರೂ ಕವಿತೆಗಳನ್ನು ಬರೆಯಬಾರದೆಂದೂ ಬರೆದರೂ ಅವುಗಳನ್ನೂ ಪ್ರಕಟಿಸಬಾರದೆಂದೂ ಸರ್ಕಾರ ಕಾನೂನು ಮಾಡಬೇಕಿದೆ. ಎಪ್ಪತ್ತರ ದಶಕದ ತನಕ ಬಂದ ಕವಿತೆಗಳನ್ನು ನಮ್ಮ ಹಳೆಯ ಕಾವ್ಯಗಳನ್ನೂ ಮರುಮುದ್ರಿಸಿ ಓದಿಸುವ ಕೆಲಸ ಮೊದಲು ಶುರುವಾಗಬೇಕಿದೆ.
*****
ಒಂದು ಸಣ್ಣ ಉದಾಹರಣೆ; ಇವತ್ತು ಕಿವಿಗೆ ಬೀಳುತ್ತಿರುವ ಭಾವಗೀತೆಗಳನ್ನೇ ಕೇಳಿ. ಅವೆಲ್ಲವನ್ನೂ ಬರೆದವರು ಹಳೆಯ ಕಾಲದ ಕವಿಗಳು ಮತ್ತು ಹಳೆಯ ಕಾಲದ ಕವಿಗಳಂತೆ ಬರೆಯುತ್ತಿರುವ ಕೆಲವರು. ಅದು ಬಿಟ್ಟರೆ ಹೊಸಕಾವ್ಯದ ಯಾವ ಗೀತೆಯನ್ನಾದರೂ ಹಾಡಲು ಸಾಧ್ಯವೇ? ಹಾಡಲು ಸಾಧ್ಯ ಎಂದು ಹಠ ತೊಟ್ಟು ಹಾಡಿದ `ಕುರಿಗಳು ಸಾರ್ ಕುರಿಗಳು' ಗೀತೆಯನ್ನು ಅನಂತಸ್ವಾಮಿ ಬಿಟ್ಟು ಬೇರೆ ಯಾರಾದರೂ ಹಾಡಿದ್ದು ಕೇಳಿದ್ದೀರಾ? ಇವತ್ತೂ ಭಾವಗೀತೆಯೆಂದರೆ ಬೇಂದ್ರೆ, ಕುವೆಂಪು, ಕೆ ಎಸ ನ, ಭಟ್ಟ, ಅಡಿಗ, ಪುತಿನ, ಕಣವಿ, ಮಾಸ್ತಿ, ಜಿಎಸ್ಸೆಸ್.. ಅದರಾಚೆಗೀಚೆಗೆ ಬರೆದುದನ್ನು ಓದಲೂ ಸಲ್ಲ, ಹಾಡಲೂ ಸಲ್ಲ.
ಕವಿತೆ ಬರೆಯುವುದಕ್ಕೆ ಕೇವಲ ವೇದನೆಯೋ ಸಂವೇದನೆಯೋ ಇದ್ದರಷ್ಟೇ ಸಾಲದು. ಅದಕ್ಕೆ ಸ್ವರಜ್ಞಾನ, ಲಯಬದ್ಧತೆ, ಆದಿಪ್ರಾಸ, ಅಂತ್ಯಪ್ರಾಸ, ಕಿವಿಗೆ ಇಂಪಾಗಿ ಕೇಳುವಂತೆ ಬರೆಯಬಲ್ಲ ಪ್ರತಿೆ ಎಲ್ಲವೂ ಇರಬೇಕಾಗುತ್ತದೆ.
ಆದರೆ ಈಗೀಗ ಕಾವ್ಯ ಎಂಥವರ ತೊತ್ತಾಗುತ್ತಿದೆ ಎನ್ನುವುದನ್ನು ನೋಡಿದರೆ ಗಾಬರಿಯಾಗುತ್ತದೆ. ಸಿನಿಮಾರಂಗಕ್ಕೆ ಬಂದರೆ ಅಲ್ಲಿ ಪ್ರತಿಯೊಬ್ಬನೂ ಕವಿಯೇ. ಹಿಂದೆ ಪುಟ್ಟಣ್ಣ ಕಣಗಾ್, ಸಿದ್ಧಲಿಂಗಯ್ಯ, ರವಿ, ದೊರೆ-ಭಗವಾ್ ಮುಂತಾದ ನಿರ್ದೇಶಕರು ಕವಿಗಳಿಗೆ ಗೌರವ ಕೊಡುತ್ತಿದ್ದರು. ಕವಿಗಳಿಂದ ಹಾಡು ಬರೆಸುತ್ತಿದ್ದರು. ಆ ಹಾಡಿಗೆ ಅತ್ಯುತ್ತಮ ಸಂಗೀತ ನಿರ್ದೇಶಕರಿಂದ ಸ್ವರಸಂಯೋಜನೆ ಮಾಡಿಸುತ್ತಿದ್ದರು. ಹಿಂದಿಯಲ್ಲಿ ಇವತ್ತಿಗೂ ಯಾವ ನಿರ್ದೇಶಕನೂ ಹಾಡು ಬರೆಯುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ರಾ್ಗೋಪಾ್ ವರ್ಮಾ ಮಣಿರತ್ನಂ ಮುಂತಾದ ನಿರ್ದೇಶಕರೂ ಕೂಡ ಒಳ್ಳೆಯ ಗೀತರಚನಕಾರರಿಂದ ಹಾಡು ಬರೆಸುತ್ತಾರೆ. ತಮಿಳು, ತೆಲುಗಲ್ಲೂ ಯಾವ ನಿರ್ದೇಶಕನೂ ಹಾಡು ಬರೆಯುತ್ತೇನೆ ಅಂತ ಹೊರಡುವುದಿಲ್ಲ.
ಕನ್ನಡದ ದುಸ್ಥಿತಿ ನೋಡಿ; ಇಲ್ಲಿ ಪ್ರತಿಯೊಬ್ಬ ನಿರ್ದೇಶಕನೂ ಸ್ವತಃ ಗೀತರಚನಕಾರ. ಅದರಿಂದಾದ ಅಧ್ವಾನವೆಂದರೆ ಒಂದೇ ಒಂದು ಹಾಡು ಕೂಡ ಕೇಳುವಂತಿರುವುದಿಲ್ಲ. ಒಳ್ಳೆಯ ಹಾಡು ಬೇಕಿದ್ದರೆ ದಶಕಗಳ ಹಿಂದೆ ಹೋಗಬೇಕಾಗಿದೆ. ಕವಿಗಳೇ ಇಷ್ಟು ಬುದಿ್ಧಗೇಡಿಗಳಾಗಿರುವಾಗ ಕೇಳುಗರಿಗೆ ಕವಿತ್ವದ ರುಚಿ ಹೇಗೆ ದಕ್ಕೀತು. ಅಲ್ಲಿಗೆ ಒಂದು ಅಭಿರುಚಿಯೇ ಕೆಟ್ಟಂತಾಯಿತು.
*****
ಲಕ್ಪ್ಮೀಶ ಕವಿ ತನ್ನ ಕಾವ್ಯ ಹೇಗಿರಬೇಕು ಅನ್ನುವುದನ್ನು ಹೀಗೆ ಬರೆದ;
ಪಾರದೆ ಪರಾರ್ಥಮಂ ವರಯತಿಗೆ ಭಂಗಮಂ
ತಾರದೆ ನಿಜಾನ್ವಯಕ್ರಿಯೆಗಳ್ಗೆ ದೂಷಣಂ
ಬಾರದೆ ವಿಶೇಷಗುಣ ಗಣಕಲಾ ಗೌರವಂ ತೀರದೆ ದುರುಕ್ತಿಗಳ್ಗೆ
ಸೇರದೆ ಸುಮಾರ್ಗದೊ್ ನಡೆವ ಸತ್ಪುರುಷನ ಗ
ಭೀರದಶೆಯಂ ಪೋಲ್ವ ಕಾವ್ಯಪ್ರಬಂಧಮಂ
ಶಾರದೆಯ ಕರುಣದಿಂ ಪೇಳ್ವನಾಂ ದೋಷಮಂ ತೊರೆದೆಲ್ಲರುಂ ಕೇಳ್ವುದು
ಇದನ್ನು ವಿವರಿಸಿದರೆ ಕನ್ನಡ ಬಲ್ಲವರನ್ನು ಅವಮಾನಿಸಿದಂತಾಗುತ್ತದೆ.
ನೆನಪು; ಡಿವಿಜಿ ಅವರು ಕೆ ಎಸ್ ನ ಕವನ ಸಂಕಲನ ಓದಿ ಹೀಗೆ ಬರೆದರು; ಮಲ್ಲಿಗೆಯ ತೋಟದಲ್ಲಿ ನಿಂತಾಗ ಧಾರಾಳವಾಗಿ ಉಸಿರಾಡಿರೆಂದು ಕನ್ನಡಿಗರಿಗೆ ಹೇಳಬೇಕಾದ ಕಾಲ ಬೇಗ ಕಳೆದುಹೋಗಲಿ. ನಿಮ್ಮ ಮಲ್ಲಿಗೆಯ ಬಳ್ಳಿ ಎಲ್ಲಾ ಋತುಗಳಲ್ಲಿಯೂ ನಗುನಗುತಿರಲಿ.
ಇದನ್ನು ಅವರು ಬರೆದದ್ದು ಡಿಸೆಂಬರ್ 31, 1941ರಂದು. ಈಗ ಮಲ್ಲಿಗೆಯ ತೋಟ ಯಾವುದೆನ್ನುವುದೇ ಮರೆತುಹೋಗಿದೆಯಲ್ಲ.

2 comments:

apara said...

ನೀವು ಹೇಳಿದಂಥ ಪರಿಸ್ಥಿತಿ ಇರುವುದು ನಿಜ. ಆದರೆ ಬರೆಯಬೇಡಿರೆಂದು ಹೇಳುವುದು ಪರಿಹಾರ ಅಂತನ್ನಿಸುವುದಿಲ್ಲ. 'ಈಗಿನ' ಹುಡುಗರಿಗೆ ಅಡಿಗ, ಬೇಂದ್ರೆಯವರ ಕವಿತೆಗಳನ್ನು ಉದಾಹರಿಸುತ್ತಾ ಕವಿತೆಯನ್ನು ಇನ್ನಷ್ಟು ಕಗ್ಗಂಟು ಮಾಡುವುದು ಕೂಡ ಸರಿ ಎನಿಸದು. ಅವರು ಬರೆದ ಕವಿತೆಯ ಸರಿಯಾದ ಮೌಲ್ಯಮಾಪನವಾಗುವಂಥ ಪರಿಸ್ಥಿತಿ ಇದೆಯಾ ಎಂದು ಯೋಚಿಸಿ. ನಮ್ಮ ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳು ಹೆಚ್ಚು ಜವಾಬ್ದಾರಿಯಿಂದ ಇದ್ದಿದ್ದರೆ, ನಮ್ಮ ವಿಮರ್ಶಕರು ಹೊಸ ಕವಿತೆಗಳ ಬಗ್ಗೆ ಮಾತಾಡುವಂತಿದ್ದರೆ ಈ ಲೇಖನ ಅಷ್ಟು ಪ್ರಸ್ತುತವಾಗುತ್ತಿರಲಿಲ್ಲವೇನೊ. ಇದು ತಕ್ಷಣದ ಪ್ರತಿಕ್ರಿಯೆ.
~ಅಪಾರ

Vishwa said...

"ಕವಿತೆ ಬರೆಯುವುದನ್ನು ಕನಿಷ್ಠ ಇಪ್ಪತ್ತು ವರುಷ ನಿಷೇಧಿಸದೇ ಹೋದರೆ ಎಂಥ ಅಪಾಯ ಆಗಬಹುದು ಅನ್ನುವುದನ್ನು ಊಹಿಸುವುದು ಕಷ್ಟ. ಕವಿತೆಯ ಮಾನ ಮತ್ತು ಪ್ರಾಣ ಎರಡೂ ಉಳಿಯಬೇಕಿದ್ದರೆ ಮುಂದಿನ ಇಪ್ಪತ್ತು ವರುಷ ಯಾರೂ ಕವಿತೆಗಳನ್ನು ಬರೆಯಬಾರದೆಂದೂ ಬರೆದರೂ ಅವುಗಳನ್ನೂ ಪ್ರಕಟಿಸಬಾರದೆಂದೂ ಸರ್ಕಾರ ಕಾನೂನು ಮಾಡಬೇಕಿದೆ."


ನಿಜ!!ನಿಜ! ಈಚೆಗೆ ಕೆಲವು ಕವಿತೆಗಳನ್ನು ಓದಿದ ಮೇಲೆ ನಿಮ್ಮ ಮಾತಿಗೆ ಎದುರಾಡಲು ಮನಸ್ಸು ಬರುತ್ತಿಲ್ಲ.