Friday, January 25, 2008

ಕಾಗದದ ದೋಣಿ

ಅವನಿಗೆ ಹೋಮ್ ವರ್ಕ್ ಮಾಡಿಸೋದಿತ್ತು. ವಾಕಿಂಗ್ ಹೋಗೋದಾದರೆ ನೀವೊಬ್ಬರೇ ಹೋಗಿ. ಶ್ರೀನಿಥಿಯನ್ನು ಕರಕೊಂಡು ಹೋಗಬೇಡಿ ಅಂತ ಸುಮಿತ್ರೆ ತಾಕೀತು ಮಾಡಿದ್ದು ಅದು ಮೂವತ್ತಾರನೇ ಸಲ. ಶ್ರೀಕಂಠಯ್ಯ ಅವಳ ಮಾತನ್ನೂ ಆವತ್ತೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದು ದೊಡ್ಡದೊಂದು ರಾದ್ಧಾಂತಕ್ಕೆ ಕಾರಣವಾಗುತ್ತದೆ ಅನ್ನುವ ಕಲ್ಪನೆ ಅವರಿಗಿರಲೂ ಇಲ್ಲ.
ಆ ರಾದ್ಧಾಂತವಾದದ್ದು ಮೂರು ತಿಂಗಳ ನಂತರ. ಶ್ರೀನಿಧಿ ಇಂಗ್ಲಿಷ್‌ನಲ್ಲಿ ಕೇವಲ ಎಪ್ಪತ್ತೆರಡು ಅಂಕ ತೆಗೆದುಕೊಂಡಿದ್ದ. ಎಂಟು ಮಾರ್ಕ್ ಜಾಸ್ತಿ ಬಂದಿದ್ದರೆ ಅಹಲ್ಯಾಳ ಮಗಳು ಜಾನ್ಹವಿ ಕ್ಲಾಸಿಗೇ ಫಸ್ಟ್ ಬರುತ್ತಿರಲಿಲ್ಲ ಅನ್ನುವ ಸಂಗತಿ ಸುಮಿತ್ರೆಯನ್ನೂ ಹಗಲಿರುಳೂ ಬಾಧಿಸಿತು. ಮೂರು ವರುಷಗಳಿಂದ ಶ್ರೀನಿಧಿಯೇ ಕ್ಲಾಸಿಗೆ ಫಸ್ಟ್. ಈ ಸಾರಿ ಜಾನ್ಹವಿ ಮುಂದೆ ಬಂದಿದ್ದಾಳೆ. ಇನ್ನು ಅಹಲ್ಯೆ ಬಂದು ಹಂಗಿಸುತ್ತಾಳೆ. ಅವಳ ಮಾತು ಕೇಳಿಸಿಕೊಳ್ಳುತ್ತಾ ಸುಮ್ಮನೆ ಕೂರಬೇಕು ಅನ್ನುವುದು ನೆನಪಾದಂತೆ ಸುಮಿತ್ರೆಯ ರಕ್ತ ಕುದಿಯಿತು.
ಆವತ್ತು ರಾತ್ರಿ ಎರಡರಲ್ಲೊಂದು ತೀರ್ಮಾನ ಆಗಬೇಕು ಅಂತ ಸುಮಿತ್ರೆ ಹಠ ಹಿಡಿದಳು. ಶ್ರೀಧರ ಮನೆಗೆ ಬಂದು ಇನ್ನೇನು ಸುಧಾರಿಸಿಕೊಳ್ಳುವ ಹೊತ್ತಿಗೆ ಅವನ ಮುಂದೆ ಮಗಮ ಮಾರ್ಕ್ಸ್ ಕಾರ್ಡ್ ತಂದಿಟ್ಟಳು. ಪ್ರತಿಸಾರಿಯೂ ಅವಳೇ ಅದಕ್ಕೆ ಸೈನ್ ಮಾಡುತ್ತಿದ್ದದ್ದು. ನಿಮ್ಮ ಮಗನ ಸಾಧನೆ ನೋಡಿ, ನೀವೇ ಸೈನ್ ಮಾಡಿ ಅಂತ ಅದನ್ನು ಅವನ ಮುಂದಿಟ್ಟು ಮುನಿಸಿಕೊಂಡು ಅಡುಗೆ ಮನೆಯೊಳಗೆ ಕಣ್ಮರೆಯಾದಳು ಸುಮಿತ್ರೆ.
ಪರಿಸ್ಥಿತಿ ಗಂಭೀರವಾಗಿದೆ ಅಂದುಕೊಂಡ ಶ್ರೀಧರ. ಎಲ್ಲ ಸರಿಹೋಗುತ್ತೆ ಅಂದುಕೊಂಡು ಸುಮ್ಮನಾದ. ಅಷ್ಟೂ ವರುಷಗಳ ದಾಂಪತ್ಯದಲ್ಲಿ ಅವನಿಗೊಂದು ಸತ್ಯ ಅರ್ಥವಾಗಿತ್ತು. ಮನಸ್ತಾಪಗಳು ಮಾತಿನ ಹೊಸಿಲು ದಾಟದಂತೆ ನೋಡಿಕೊಳ್ಳಬೇಕು. ಮೌನ ಎಲ್ಲವನ್ನೂ ಬಗೆಹರಿಸುತ್ತದೆ.
ಆವತ್ತು ಅವನ ನಿರೀಕ್ಷೆ ಸುಳ್ಳಾಯಿತು. ರಾತ್ರಿ ಊಟಕ್ಕೆ ಕುಳಿತಾಗ ಸುಮಿತ್ರೆ ನಿರ್ಲಿಪ್ತವಾಗಿ ತನ್ನ ತೀರ್ಮಾನ ಹೇಳಿಬಿಟ್ಟಳು:
ನಾನು ನನ್ನ ಮಗನನ್ನು ರೆಸಿಡೆನ್ಶಿಯಲ್ ಸ್ಕೂಲಿಗೆ ಸೇರಿಸಬೇಕು ಅಂತ ತೀರ್ಮಾನ ಮಾಡಿದ್ದೇನೆ. ಮನೆಯಲ್ಲಿದ್ದರೆ ಅವನು ಹಾಳಾಗಿ ಹೋಗುತ್ತಾನೆ. ಕೊನೆಗೆ ನಿಮ್ಮ ತಮ್ಮನ ಹಾಗೆ ಮೆಕ್ಯಾನಿಕ್ಕೋ ನಿಮ್ಮ ಚಿಕ್ಕಪ್ಪನ ಮಗನ ಹಾಗೆ ಕಂಡಕ್ಟರ್ರೋ ಆಗುತ್ತಾನೆ. ಮಕ್ಕಳನ್ನು ಬೆಳೆಸೋದು ಓದಿಸೋದು ನಿಮ್ಮ ಕಾಲದ ಹಾಗಲ್ಲ. ಆಗ ಇಂಥ ಸ್ಪರ್ಧೆ ಇರಲಿಲ್ಲ. ಈಗ ಒಳ್ಳೆಯ ಕೆಲಸ ಇಲ್ಲದಿದ್ದರೆ ಹೆಣ್ಣೂ ಸಿಗೋಲ್ಲ. ಮದುವೆಯೂ ಆಗೋಲ್ಲ. ಮಕ್ಕಳನ್ನು ವಂಶೋದ್ಧಾರಕ ಅಂತ ಕರೆದುಕೊಂಡು ಓಡಾಡಿದರೆ ಆಗಲಿಲ್ಲ. ಮದುವೆಯೇ ಆಗದ ಮೇಲೆ ವಂಶೋದ್ಧಾರದ ಮಾತೆಲ್ಲಿಂದ ಬರಬೇಕು..
ಹೀಗೆ ಶ್ರೀಕಂಠಯ್ಯನ ಮರ್ಮಕ್ಕೆ ನಾಟುವ ಹಾಗೆ, ಪರಿಸ್ಥಿತಿ ನಿಜಕ್ಕೂ ಗಂಭೀರವಾಗಿದೆ ಎಂದು ಶ್ರೀಧರನಿಗೆ ಅರ್ಥ ಆಗುವ ಹಾಗೆ ತಣ್ಣಗಿನ ದನಿಯಲ್ಲೇ ವಿವರಿಸಿದಳು. ಅವಳು ಅಡುಗೆ ಮನೆಯಿಂದ ಡೈನಿಂಗ್ ಟೇಬಲ್ಲಿಗೆ ಓಡಾಡುತ್ತಾ, ಕೆಲವು ಮಾತುಗಳು ಸ್ಪಷ್ಟವಾಗಿ ಕೇಳಿಸುವಂತೆ, ಕೆಲವು ಅಸ್ಪಷ್ಟವಾಗಿ ತಲುಪುವಂತೆ, ಕೆಲವೊಂದನ್ನು ಗೊಣಗು ದನಿಯಲ್ಲಿ ಊಹೆಗೆ ಬಿಡುವಂತೆ ಹೇಳಿದ ಶೈಲಿ ಒಂದಷ್ಟು ನಾಟಕಗಳಲ್ಲಿ ನಟಿಸಿ ಅನುಭವವಿದ್ದ ಶ್ರೀಧರನಿಗೆ ಇಷ್ಟವಾಯಿತು.
ಆ ಮಾತುಗಳನ್ನೆಲ್ಲ ತನ್ನನ್ನೇ ಬೆರಳು ಮಾಡಿ ತೋರಿಸುತ್ತಿವೆ ಅನ್ನುವುದು ಶ್ರೀಕಂಠಯ್ಯನಿಗೆ ಅರ್ಥವಾಗಿತ್ತು. ಅದಕ್ಕೆ ತಾನು ಉತ್ತರಿಸುವ ಬದಲು ಶ್ರೀಥರ ಉತ್ತರ ಕೊಟ್ಟರೆ ಚೆನ್ನಾಗಿರುತ್ತೆ ಅಂತಲೂ ಅವನಿಗೆ ಅನ್ನಿಸಿತ್ತು. ಅಂಥ ಸಾಹಸಕ್ಕೆ ಶ್ರೀಧರ ಕೈ ಹಾಕದ್ದು ನೋಡಿ ಶ್ರೀಕಂಠಯ್ಯ ಹೇಡಿ ಮುಂಡೇದು’ ಅಂತ ಮಗನನ್ನು ಬೈದುಕೊಂಡ.
ಸುಮಿತ್ರೆ ಕೊನೆಯಲ್ಲಿ ತನ್ನ ತೀರ್ಮಾನವನ್ನೂ ಹೇಳಿದಳು. ಅವನನ್ನು ನನ್ನ ಸುಪರ್ದಿಗೆ ಬಿಡೋದಾದರೆ ಅವನು ಇದೇ ಸ್ಕೂಲಿಗೆ ಹೋಗಲಿ. ಮನೇಲೇ ಇರಲಿ. ಬೇರೆ ಯಾರೂ ಅವನ ಕಾಳಜಿ ತಗೊಳ್ಳುವುದು ಬೇಕಾಗಿಲ್ಲ. ಇದರ ಬಗ್ಗೆ ಚರ್ಚೆಯೂ ಬೇಕಿಲ್ಲ. ಯಾವುದಕ್ಕೂ ನಾಳೆ ಬೆಳಗ್ಗೆ ನಿಮ್ಮ ನಿರ್ಧಾರ ಹೇಳಿ.
ನಿರ್ಧಾರ ಆಗಲೇ ಆಗಿಹೋಗಿದೆ ಅಂತ ಶ್ರೀಧರ ಮುಖ ನೋಡಿದಾಗಲೇ ಶ್ರೀಕಂಠಯ್ಯನಿಗೆ ಗೊತ್ತಾಗಿಹೋಯಿತು. ಅವನಿಗೆ ಮಗನನ್ನು ನೋಡಿಕೊಳ್ಳುವಷ್ಟು ವ್ಯವಧಾನವೂ ಇರಲಿಲ್ಲ. ಮಗ ಏನಾದರೂ ಓದಿ ಒಂದು ಕೆಲಸ ಅಂತ ಸಿಕ್ಕಿಬಿಟ್ಟರೆ ಸಾಕು ಅನ್ನುವ ಸಣ್ಣ ಆಶೆಯೊಂದನ್ನು ಬಿಟ್ಟರೆ ಅವನು ಮತ್ತೇನನ್ನೋ ಸಾಧಿಸಬೇಕು ಅನ್ನುವ ಮಹತ್ವಾಕಾಂಕ್ಷೆಯೂ ಇರಲಿಲ್ಲ. ತಾನು ಶಾಲೆಗೆ ಹೋಗುತ್ತಿದ್ದ ದಿನಗಳು ಅವನಿಗಿನ್ನೂ ಚೆನ್ನಾಗಿ ನೆನಪಿದ್ದವು. ಆಗ ನೀನೇನು ಓದುತ್ತಿದ್ದೀಯಾ, ಕ್ಲಾಸಿಗೆ ಹೋಗಿದ್ದೆಯಾ, ಪರೀಕ್ಷೆ ಪಾಸಾದೆಯಾ ಅಂತ ಕೇಳುವವರೂ ಇರಲಿಲ್ಲ. ಸದ್ಯಕ್ಕೆ ಅವನಿಗೆ ಬೇಕಾಗಿದ್ದು ನೆಮ್ಮದಿ. ಸುಮಿತ್ರೆಯ ಭಾಷಣದಿಂದ ಪಾರಾದರೆ ಅವನಿಗೆ ಸಾಕಿತ್ತು.
-೨-
ಆವತ್ತಿನಿಂದ ಶ್ರೀಕಂಠಯ್ಯನವರ ಸಮಸ್ಯೆ ಶುರುವಾಯಿತು. ಮೊಮ್ಮಗನನ್ನು ಶ್ರೀಕಂಠಯ್ಯನ ಸಮೀಪ ಸುಳಿಯುವುದಕ್ಕೂ ಬಿಡಲಿಲ್ಲ ಸುಮಿತ್ರೆ. ಅವನಿಗೊಂದು ಟೈಮ್ ಟೇಬಲ್ಲೂ ಸಿದ್ಧವಾಯಿತು. ಬೆಳಗ್ಗೆ ಎದ್ದ ತಕ್ಷಣ ಕಿತ್ತಲೆ ಹಣ್ಣಿನ ಜ್ಯೂಸು ಒಂದು ಗಂಟೆ ಓದು. ಅರ್ಧಗಂಟೆ ಪೋಗೋ ಚಾನಲ್ಲು. ಆಮೇಲೆ ಸ್ಕೂಲು. ಸ್ಕೂಲಿನಿಂದ ಬಂದ ತಕ್ಷಣ ಸ್ವಿಮಿಂಗ್ ಕ್ಲಾಸು. ಆಮೇಲೆ ಅರ್ಧಗಂಟೆ ಆಟ. ನಂತರ ಓದು, ಹೋಮ್‌ವರ್ಕ್. ಒಂಬತ್ತು ಗಂಟೆಗೆ ಅರ್ಧಗಂಟೆ ಟೀವಿ. ನಂತರ ನಿದ್ದೆ. ಮತ್ತೊಂದು ದಿನ. ಮತ್ತದೇ ದಿನಚರಿ.
ಶ್ರೀಧರ ಆಫೀಸಿಗೆ ಹೋಗಿ ಬರುತ್ತಿದ್ದ. ಸುಮಿತ್ರೆ ಮನೆ-ಮಗ ಅಂತ ತನ್ನ ಜಗತ್ತನ್ನು ಸೃಷ್ಟಿಸಿಕೊಂಡಿದ್ದಳು. ಆ ಜಗತ್ತಿನಲ್ಲಿ ತನಗೆ ಪ್ರವೇಶವಿಲ್ಲ ಅನ್ನುವ ಭಾವನೆ ಕ್ರಮೇಣ ಮೂಡತೊಡಗಿತು. ಮನೆಯೊಳಗೇ ತಾನೊಂಥರ ಅಸ್ಪೃಶ್ಯನಾಗಿದ್ದೇನೆ ಅಂತಲೂ ಅನ್ನಿಸತೊಡಗಿತು.
ಅಂಥದ್ದೇ ಭಾವನೆ ಶ್ರೀನಿಧಿಯನ್ನೂ ಕಾಡುತ್ತಿದೆ ಅಂತ ಶ್ರೀಕಂಠಯ್ಯನಿಗೆ ಅವನ ಕಣ್ಣುಗಳನ್ನು ನೋಡಿದಾಗೆಲ್ಲ ಅನ್ನಿಸುತ್ತಿತ್ತು. ಹುಡುಗಾಟವಾಗಲೀ, ಬಾಲ್ಯದ ಬೆರಗಾಗಲೀ ಅದರಲ್ಲಿ ಕಾಣಿಸುತ್ತಿರಲಿಲ್ಲ. ಅವನೊಂದು ಯಂತ್ರದ ಥರ ದುಡಿಯುತ್ತಿದ್ದಾನಾ ಅಥವಾ ಓದುತ್ತಿದ್ದಾನಾ ಅನ್ನುವ ಗುಮಾನಿಯೂ ಮೂಡತೊಡಗಿತು. ಬಾಲಕಾರ್ಮಿಕರಿಗಿಂತ ಕಠಿಣವಾದ ಬದುಕು ಅದಾಗಿರಬಹುದೇ ಎಂಬ ಊಹೆಯಲ್ಲಿ ಅವರು ಆಗಾಗ ಮೊಮ್ಮಗನನ್ನು ಗಮನಿಸುತ್ತಾ ಅವನಲ್ಲಾಗುವ ಬದಲಾವಣೆಯನ್ನು ನೋಡುತ್ತಾ ಮರುಗುತ್ತಾ ಸುಮಿತ್ರೆಯ ಶಿಸ್ತುಬದ್ಧತೆಯ ಬಗ್ಗೆ ಸಿಟ್ಟುಗೊಳ್ಳುತ್ತಾ ಉಳಿದುಬಿಟ್ಟರು.
ಸುಮಿತ್ರೆಗಂತೂ ಇದರಿಂದ ಸಂತೋಷವಾಗಿತ್ತು. ಕೊನೆಗೂ ಮಗ ಚೆನ್ನಾಗಿ ಓದುತ್ತಿದ್ದಾನೆ. ಶಿಸ್ತುಬದ್ಧವಾಗಿ ಬದುಕುತ್ತಿದ್ದಾನೆ. ಈ ಸಾರಿ ಕ್ಲಾಸಿಗೆ ಫಸ್ಟ್ ಬರುತ್ತಿದ್ದಾನೆ ಅಂತ ಅವಳಿಗೆ ಖಾತ್ರಿಯಾಗಿತ್ತು. ಇದನ್ನು ಜಾಸ್ತಿ ದಿನ ಗಂಡನೂ ಮಾವನೂ ಉಳಿಯುವುದಕ್ಕೆ ಬಿಡುವುದಿಲ್ಲ ಅನ್ನುವ ಗುಮಾನಿಯೂ ಅವಳಿಗಿತ್ತು. ಅದನ್ನು ದಿಟ್ಟವಾಗಿ ಎದುರಿಸುವ ಸಕಲೋಪಾಯಗಳನ್ನು ಅವಳು ಯೋಚಿಸಿಕೊಂಡು ಬಿಟ್ಟಿದ್ದಳು.
ಸುಮಿತ್ರೆ ಹಿನ್ನೆಲೆಯನ್ನು ಯೋಚಿಸಿದರೆ ಅದು ಸಹಜವೆಂದೇ ಹೇಳಬೇಕು. ಅವಳು ಮದುವೆಯಾದ ಆರಂಭದಲ್ಲಿ ಸಾಕಷ್ಟು ಅವಮಾನ ಎದುರಿಸಿದ್ದಳು. ಮದುವೆಗೆ ಮುಂಚೆ ತನ್ನ ಕುಟುಂಬದಲ್ಲಿ ನೆಂಟರಿಷ್ಟರ ಕೈಯಿಂದ ಅವಳು ಸಾಕಷ್ಟು ಅವಮಾನಿತೆಯಾಗಿದ್ದಳು. ನೋಡುವುದಕ್ಕೆ ಅಷ್ಟೇನೂ ಸುಂದರಿಯಲ್ಲದ, ಅಂಥ ಅನುಕೂಲಸ್ಥೆಯೂ ಅಲ್ಲದ ಸುಮಿತ್ರೆಯೊಳಗೆ ತೀರದ ಅಸಂಖ್ಯ ಆಸೆಗಳಿದ್ದವು. ಮದುವೆಯಾದ ಮೇಲೆ ಅವನ್ನೆಲ್ಲ ತೀರಿಸಿಕೊಳ್ಳಬೇಕು ಎಂದು ಅವಳು
ಅಂದುಕೊಂಡಿದ್ದಳು.
ಆದರೆ ಅದಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ ಶ್ರೀಧರ. ಅವನೊಬ್ಬ ಅಂಥ ಮಹಾತ್ವಕಾಂಕ್ಷೆಯೇ ಇಲ್ಲದ.ಉಡಾಫೆಯ ಮನುಷ್ಯ ಅನ್ನುವುದು ಅವಳಿಗೆ ಗೊತ್ತಾಗಿಹೋಯಿತು. ಅವನ ಮೂಲಕ ತನ್ನನ್ನು ಗುರುತಿಸಿಕೊಳ್ಳುವುದು ಸಾಧ್ಯ ಇಲ್ಲ ಅನ್ನುವುದು ಅವಳಿಗೆ ಖಾತ್ರಿಯಾಗಿಬಿಟ್ಟಿತು.
ಅದೇ ಹೊತ್ತಿಗೆ ಶ್ರೀನಿಧಿ ಹುಟ್ಟಿದ್ದು. ತನ್ನ ಓರಗೆಯ ಗೆಳತಿಯರ ಸಂಬಂಧಿಕರು ತಮ್ಮ ಮಕ್ಕಳ ಬಗ್ಗೆ ಹೇಳುವುದನ್ನು ಕೇಳಿ ಕೇಳಿ ಅವಳಿಗೆ ಸಾಕಷ್ಟು ರೇಜಿಗೆ ಅನ್ನಿಸಿತ್ತು. ಹೇಗಾದರೂ ಮಾಡಿ ತನ್ನ ಸರೀಕರ ಎದುರು ತಾನೂ ಏನನ್ನಾದರೂ ಸಾಧಿಸಿ ತೋರಿಸಬೇಕು ಅನ್ನುವ ಆಸೆಯಿತ್ತು.
ಆ ಆಸೆಗೆ ಒತ್ತಾಸೆಯಾಗಿ ಒದಗಿ ಬಂದದ್ದು ಶ್ರೀನಿಧಿ. ತನ್ನ ಮಗನ ಸಾಧನೆಯ ಮೂಲಕ ತನ್ನನ್ನು ಪ್ರಕಟಪಡಿಸಿಕೊಳ್ಳಬಹುದು ಅನ್ನುವುದು ಅವಳಿಗೆ ಹೊಳೆದದ್ದು ಮೂರನೇ ಕ್ಲಾಸಿನಲ್ಲಿ ಓದುತ್ತಿರುವಾಗಲೇ ಶ್ರೀನಿಧಿ ಟೀವಿಯಲ್ಲಿ ಕಾಣಿಸಿಕೊಂಡಾಗ. ಅವನು ಟೀವಿಯೊಂದರ ಹಾಡುವ ಕಾರ್ಯಕ್ರಮದಲ್ಲಿ ಚೆನ್ನಾಗಿ ಹಾಡಿ ಮೆಚ್ಚುಗೆ ಗಳಿಸಿದ ನಂತರ ತುಂಬ ಮಂದಿ ಅವಳ ಹತ್ತಿರ ಮಾತಾಡಿದರು. ಅವಳಿಲ್ಲದಾಗಲೂ ನಮ್ಮ ಸುಮಿತ್ರೆಯ ಮಗ ಟೀವಿಲಿ ಬಂದಿದ್ದ ಅಂತ ಮಾತಾಡಿಕೊಂಡರು. ನಿನ್ನ ಮಗನ ವಿಷ್ಯಾನೇ ಮಾತಾಡ್ತಿದ್ವಿ ಅಂತ ಅನೇಕರು ಹೇಳಿದರು.
ಆವತ್ತಿನಿಂದ ಸುಮಿತ್ರೆಯ ನಿರ್ಧಾರ ಗಟ್ಟಿಯಾಯಿತು. ಶ್ರೀನಿಧಿಗೆ ಏನೇನು ಕಲಿಸಬೇಕು, ಹೇಗೆ ಅವನನ್ನು ಒಂದು ಎತ್ತರಕ್ಕೆ ಏರುವ ಹಾಗೆ ಮಾಡಬೇಕು. ಹೇಗೆ ತನ್ನ ಅವಮಾನಗಳನ್ನೆಲ್ಲ ಮೀರುವುದಕ್ಕೆ ಅವನು ಕಾರಣ ಆಗಬೇಕು ಅನ್ನುವುದನ್ನೆಲ್ಲ ಅವಳು ಲೆಕ್ಕ ಹಾಕಿದಳು. ಅದೇ ಹೊತ್ತಿಗೆ ಅವಳಿಗೆ ತಾನೂ ಬದಲಾಗಬೇಕು ಅನ್ನಿಸಿತು. ತಾನು ಗಂಭೀರೆಯಾಗಿ ಕಾಣಿಸುತ್ತಿಲ್ಲ ಅನ್ನಿಸಿತು. ಹೀಗಿದ್ದರೆ ಆಗುವುದಿಲ್ಲ ಅಂದುಕೊಂಡು ಒಂದಷ್ಟು ದುಬಾರಿ ಬೆಲೆಯ ಚೂಡಿದಾರಗಳು ಅವಳ ವಾರ್ಡ್‌ರೋಬ್ ಸೇರಿದವು. ಕಾಟನ್ ಸೀರೆಗಳು ಬಂದವು. ಮಾತಿನಲ್ಲಿ ಹದವಾಗಿ ಇಂಗ್ಲಿಷ್ ಬೆರೆತಿತು. ತಾಯಿಗೂ ಮಗನೂ ಒಂದೇ ಸಾರಿ ಮತ್ತೊಂದು ವರ್ಗದ ಪ್ರಜೆಗಳಾಗಿ ರೂಪಾಂತರ ಹೊಂದುತ್ತಿದ್ದಾರೆ ಅನ್ನುವುದು ಶ್ರೀಕಂಠಯ್ಯನಿಗೂ ಶ್ರೀಧರನಿಗೂ ಏಕಕಾಲಕ್ಕೆ ಅರಿವಾಗುತ್ತಾ ಬಂತು.
ಶ್ರೀನಿಧಿಗೆ ಅವಳು ಕೇವಲ ಓದುವುದನ್ನು ಮಾತ್ರ ಕಲಿಸಲಿಲ್ಲ. ಜೊತೆಗೇ, ಹೇಗೆ ಎಲ್ಲಿ ಯಾವಾಗ ಎಷ್ಟು ಮಾತಾಡಬೇಕು. ಹೇಗೆ ಡ್ರೆಸ್ ಹಾಕಬೇಕು, ಎಷ್ಟು ನಗಬೇಕು. ಯಾವುದರಲ್ಲಿ ಎಷ್ಟು ಆಸಕ್ತಿ ವಹಿಸಬೇಕು. ತನ್ನ ಜೊತೆಗಾರ ಹುಡುಗರಿಗಿಂತ ಹೇಗೆ ಭಿನ್ನವಾಗಿ ಕಾಣಿಸಬೇಕು ಅನ್ನುವುದನ್ನೂ ಕಲಿಸಿಕೊಟ್ಟಳು. ನೋಡ ನೋಡುತ್ತಿದ್ದ ಹಾಗೆ ಶ್ರೀನಿಧಿ ತನ್ನ ವಯಸ್ಸಿಗಿಂತ ಇಪ್ಪತ್ತು ವರುಷ ದೊಡ್ಡವನ ಕಾಣಿಸತೊಡಗಿದ.
-೩-
ಶ್ರೀನಿಧಿ ಈ ಮಧ್ಯೆ ಕಳೆದುಕೊಂಡ ಬಾಲ್ಯದ ಹುಡುಗಾಟ, ಬೆರಗು ಇವುಗಳನ್ನು ದಾಖಲಿಸುವುದು ಇಲ್ಲಿನ ಉದ್ದೇಶ ಅಲ್ಲ. ಅದು ಒಬ್ಬೊಬ್ಬರನ್ನು ಒಂದೊಂದು ಥರ ಕಾಡುತ್ತದೆ. ಮಕ್ಕಳು ನಮ್ಮ ದೇಶದಲ್ಲಿ ಇವತ್ತು ಹೆತ್ತವರ ಆಶೋತ್ತರಗಳನ್ನು ಪೂರ್ತಿ ಮಾಡುವ ಸಾಧನಗಳಂತೆ ಬಳಕೆಯಾಗುತ್ತವೆ ಅನ್ನುವುದನ್ನು ನೀವು ಒಪ್ಪುತ್ತೀರೋ ಇಲ್ಲವೋ ಗೊತ್ತಿಲ್ಲ. ಮಕ್ಕಳಿಗೆ ಚಂದದ ಬಟ್ಟೆ ಹಾಕಿ, ತಾವು ಬಾಲ್ಯದಲ್ಲಿ ಕಳೆದುಕೊಂಡ ಅನುಕೂಲಗಳು ಅವರಿಗೆ ಸಿಗುವಂತೆ ಮಾಡಿ ಸಂತೋಷಪಡುವಷ್ಟಕ್ಕೆ ಹೆತ್ತವರ ಸಂತೋಷ ಮತ್ತು ಸೆಲ್ಫ್ ಐಡೆಂಟಿಫಿಕೇಷನ್ ನಿಂತರೆ ಸಂತೋಷ. ಆದರೆ ಅದು ಮಕ್ಕಳನ್ನು ಪೂರ್ತಿಯಾಗಿ ರೂಪಿಸುವ ಮಟ್ಟಕ್ಕೆ ಬೆಳೆದರೆ ಏನಾಗುತ್ತದೆ ಅನ್ನುವುದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು.
ಈ ಕತೆಯಲ್ಲಿ ಬರುವ ತಾತ ಶ್ರೀಕಂಠಯ್ಯ ಕ್ರಮೇಣ ತಾನು ನಿರುಪಯುಕ್ತ ಅನ್ನುವ ಭಾವನೆಯನ್ನು
ಬೆಳೆಸಿಕೊಳ್ಳುತ್ತಾನೆ. ಮಗನಿಗೆ ಆಕೆ ಎಲ್ಲ ಜಾಣತನವನ್ನೂ ಕಲಿಸಿಕೊಟ್ಟಿದ್ದಾಳೆ, ಜ್ಞಾನಭಂಡಾರ ಆಗುವಂತೆ ಮಾಡಿದ್ದಾಳೆ. ಆದರೆ ಕಾಗದದ ದೋಣಿ ಮಾಡುವ ಸರಳ ಕಲೆ, ಗಾಳಿಪಟ ಹಾರಿಸುವ ಸಂತೋಷ, ಎದ್ದು ಬಿದ್ದು ಸೈಕಲ್ ಕಲಿಯುವ ಖುಷಿ ಎಲ್ಲವೂ ಅವರಿಗೆ ಎರವಾಗಿದೆ.
ಮುದುಕರಿಗೆ ತಾವು ನಿರುಪಯುಕ್ತ ಅನ್ನಿಸುವಂತೆ ಮಾಡಿದ್ದು ನಮ್ಮ ಕಾಲದ ದೊಡ್ಡ ಸೋಲು. ಅವರೊಳಗಿರುವ ಅನುಭವ, ಕಲಾವಂತಿಕೆಯನ್ನು, ಕಲ್ಪನಾಶಕ್ತಿ ಮಕ್ಕಳಿಗೆ ವರ್ಗವಾಗುತ್ತಿಲ್ಲ. ಶ್ರೀನಿಧಿಯಂಥ ಮಕ್ಕಳು ಹಿರಿಯ ಥರ ಮಾತಾಡುತ್ತಿದ್ದಾರೆ. ಹಿರಿಯರ ಮುದುಕರಂತಾಗಿದ್ದಾರೆ. ಮುದುಕರು ಬದುಕಿದ್ದೂ ಸತ್ತಿದ್ದಾರೆ.
ಈ ಸ್ಥಿತಿಯಿಂದ ಪಾರಾಗುವುದು ಹೇಗೆ?
ಒಂದು ಗುಡ್ಡದ ಮೇಲೆ ನಿಂತುಕೊಂಡು ಅಜ್ಜ ಮಾಡಿಕೊಟ್ಟ ಗಾಳಿಪಟವನ್ನು ಪುಟ್ಟ ಹುಡುಗ ಹಾರಿಸುವ ದೃಶ್ಯ, ಸಣ್ಣ ಕೊಳದಲ್ಲಿ ತಾತನ ಮಾರ್ಗದರ್ಶನದಲ್ಲಿ ಮಗು ಮಾಡಿದ ದೋಣಿಯನ್ನು ತೇಲಿಬಿಡುವ ಆಪ್ಯಾಯಮಾನ ಕ್ಷಣ, ಗಿರಿಗಿಟ್ಲೆಯನ್ನು ಗಾಳಿಗೆದುರಾಗಿ ಹಿಡಿದು ಓಡುತ್ತಿರುವ ಕಂದನ ಕಾಲನ್ನೇ ನೋಡುತ್ತಿರುವ ತಾತ..
ಈ ಮೂರು ದೃಶ್ಯಗಳನ್ನು ಸುಮ್ಮನೆ ಕಣ್ಮುಂದೆ ತಂದುಕೊಂಡು ಈ ಕತೆಯನ್ನು ಮುಗಿಸೋಣ. ಇದು ಕತೆಯಲ್ಲ ಅನ್ನಿಸಿದರೆ ನಿಮ್ಮ ಅನಿಸಿಕೆ ವಾಸ್ತವ. ವಾಸ್ತವ ಅನ್ನಿಸಿದರೆ ಅದು ದುರಂತ.

6 comments:

suptadeepti said...

"ಇದು ಕತೆಯಲ್ಲ ಅನ್ನಿಸಿದರೆ ನಿಮ್ಮ ಅನಿಸಿಕೆ ವಾಸ್ತವ. ವಾಸ್ತವ ಅನ್ನಿಸಿದರೆ ಅದು ದುರಂತ."-- ಜೋಗಿ ಸರ್, ಇಂಥ ದುರಂತಗಳನ್ನು ಕಾಣುತ್ತಲೇ, ಅನುಭವಿಸುತ್ತಲೇ ಬೆಳೆದವರ ಕಥೆ ಏನು? ಇದು ಈಗಿನ ಮಕ್ಕಳ ಕಥೆ ಮಾತ್ರವಲ್ಲ. ಎಲ್ಲ ಕಾಲಕ್ಕೂ ಇಂಥದ್ದೊಂದಿಷ್ಟು ಸ್ಯಾಂಪಲ್ಸ್ ಇದ್ದೇ ಇದ್ದವು, ಮುಂದೆಯೂ ಇರುತ್ತವೆ.

Anonymous said...

'ಮುದುಕರಿಗೆ ತಾವು ನಿರುಪಯುಕ್ತ ಅನ್ನಿಸುವಂತೆ ಮಾಡಿದ್ದು ನಮ್ಮ ಕಾಲದ ದೊಡ್ಡ ಸೋಲು
ಶ್ರೀನಿಧಿಯಂಥ ಮಕ್ಕಳು ಹಿರಿಯ ಥರ ಮಾತಾಡುತ್ತಿದ್ದಾರೆ. ಹಿರಿಯರ ಮುದುಕರಂತಾಗಿದ್ದಾರೆ. ಮುದುಕರು ಬದುಕಿದ್ದೂ ಸತ್ತಿದ್ದಾರೆ.' ಓದಿ ಭಯ ಆಯ್ತು

ವಾಸ್ತವಗಳನ್ನ ಬದಲಾಯಿಸಲು ಸಾಧ್ಯ ಅನ್ನುವ ಆಸೆ ಭ್ರಮೆ ಎನಿಸುತ್ತದ??

ಮಲ್ನಾಡ್ ಹುಡ್ಗಿ

Keshav Kulkarni said...

ಜೋಗಿ,

ನಗರ ಜೀವನದ ದುರಂತಗಳನ್ನು ನವ್ಯ್ದದ ಆಚೆ ನೋಡುತ್ತಿರುವ ಬರಹಗಾರರಲ್ಲಿ ನೀವು ಎದ್ದು ನಿಲ್ಲುತ್ತೀರಿ. ಈ ದುರಂತ ನಿಧಾನವಾಗಿ ಅಲ್ಲ, ಬಹು ವೇಗದಲ್ಲಿ ಹಳ್ಳಿಗಳಿಗೂ ವ್ಯಾಪಿಸುತ್ತಿದೆ ಎಂಬುದು ಇನ್ನೂ ದೊಡ್ಡ ದುರಂತ. ದುರಂತಗಳಿಲ್ಲದೇ ಜನರೇಷನ್ ಗಳು ಮುಂದೆ ಉರುಳುವುದೇ ಇಲ್ಲವೇನೋ?
ಕೇಶವ (www.kannada-nudi.blogspot.com)

Mayura said...

Dear Jogi,

Excellent story. You are quite true when you say that the present generation kids are being deprived from the love,affection and knowledge of their grand parents. I still fondly remember the days when we used to visit "ajji mane" it was in itself a invaluable experience. I hope the situation changes and we go back to the good old days of including our elderly citizenry in brining up the children.

D.M.Sagar said...

ಕೆಲವು ಮಾತುಗಳು ಸ್ಪಷ್ಟವಾಗಿ ಕೇಳಿಸುವಂತೆ, ಕೆಲವು ಅಸ್ಪಷ್ಟವಾಗಿ ತಲುಪುವಂತೆ, ಕೆಲವೊಂದನ್ನು ಗೊಣಗು ದನಿಯಲ್ಲಿ ಊಹೆಗೆ ಬಿಡುವಂತೆ ಹೇಳಿದ ಶೈಲಿ ಒಂದಷ್ಟು ನಾಟಕಗಳಲ್ಲಿ ನಟಿಸಿ ಅನುಭವವಿದ್ದ ಶ್ರೀಧರನಿಗೆ ಇಷ್ಟವಾಯಿತು.
- This reminded me of a character called "hade venkata" in the story "sUryana kudure" by U.R.Ananthamurthy.

Dr.D.M.Sagar

Anonymous said...

Preetiya Jogi,
Having lived in both parts of the globe, I think what has been portrayed is a very Asian [Indian, Chinese]attitude. The way the westerners bring up their children is totally different. They do have time for children, to play with them, fly kites and go for a stroll in the woods, and do bring them up quite responsibally, including making them wash their own clothes and clean yards. I am here talking about middle class and educated people like us. India has changed, very much as you have mentioned here. Even though I am tempted to come back home, I will rather stay here for my daughters sake, as she has a responsible, responsive, fear free envoronment where she can excel in studies as well as extra curricular activities, without being pressured.
We are in India creating a generation of high achievers, and robbing the children of their precious childhood. Depriving grandparents of their simple pleasures..yake? yake?