Monday, January 28, 2008

ವ್ಯರ್ಥಪ್ರಶ್ನೆಗಳ ಮರೆತುಬಿಡು ಮನವೆ ಅರ್ಥವಾದಷ್ಟೇ ಅರ್ಥ

ಹಗಲು ಉರುಳುರುಳಿ ಇರುಳು ಮೂಡುವುದು
ಬದುಕಿಗುಂಟೆ ಅರ್ಥ?
ರಾತ್ರಿ ಹೊಡಮರಳಿ ಬೆಳಗು ಅರಳುವುದು
ತವಕವೆಲ್ಲ ವ್ಯರ್ಥ!

ಮೌನಮಾಯೆಯಲಿ ಮಾತು ಬಿಡಿಹೂವು ಮಾತಿಗೇಕೆ ಅರ್ಥ?
ನುಡಿಯದಿದ್ದರೂ ಬಯಲಾಗುತಿಹುದು ನಡೆನುಡಿಯ ಸುಪ್ತ ಸ್ವಾರ್ಥ!
ಬೇಡೆವೆಂದರೂ ನಿಜವ ನುಡಿಯುತಿದೆ ತಡೆಯಿರದ ಆತ್ಮಸಾಕ್ಷಿ!
ಕಂಡುಂಡ ನೋವು ಮಂದರದಿ ಮಿಡಿಯುತಿದೆ ಮನಸು ಮೂಕಪಕ್ಷಿ!


ಜೀವ ಜೀವ ಅರಿತಾಗ ಮೂಡುವುದು ಅರ್ಥಪೂರ್ಣ ಮೌನ.
ಯಾತನೆಯ ಜೇಡ ನೇಯುತಿರೆ ಬದುಕು; ಮಾತೇ ಅರ್ಥಹೀನ
ಒಲವು ನಲಿವುಗಳ ಒಡಲಾಳದಿಂದ ಮೊಳಗೀತೆ ಹೃದಯಗೀತೆ
ಮುಖವಾಡ ಸರಿದು ನಿಜಮುಖವು ಹೊಳೆದು ಸಾಮರಸ್ಯ ಮೂಡೀತೆ?

ವ್ಯರ್ಥಪ್ರಶ್ನೆಗಳ ಮರೆತುಬಿಡು ಮನವೆ ಅರ್ಥವಾದಷ್ಟೇ ಅರ್ಥ
ಅರ್ಥಮಾಡಿಸಲಿಕ್ಕೆ ಕಾದು ಕೂತಿದ್ದಾನೆ ಪ್ರಶ್ನೆಗಳ ಸೃಷ್ಟಿಕರ್ತ.

ಟಿಪ್ಪಣಿ-
ಯಾವತ್ತೋ ಬರೆದಿಟ್ಟಿದ್ದ ನಾಗರಹೊಳೆ ಪ್ರವಾಸದ ಲೇಖನಕ್ಕಾಗಿ ನನ್ನ ಡೆಸ್ಕ್ ಟಾಪ್ ಜಾಲಾಡುತ್ತಿದ್ದೆ. ಆ ಲೇಖನಕ್ಕೆ ಮೌನಮಾಯೆಯ ನಡುವೆ ರಾಗಗಳ ನೆರಳು ಅಂತ ಹೆಸರು ಕೊಟ್ಟಿದ್ದೆ ಅಂತ ನೆನಪು. ಅದನ್ನು ಹುಡುಕುತ್ತಿರುವ ಹೊತ್ತಿಗೆ ಈ ಹದಿನಾಲ್ಕು ಸಾಲುಗಳು ಸಿಕ್ಕವು.
ಇಷ್ಟು ಕೆಟ್ಟ ಕವಿತೆಯನ್ನು ನಾನ್ಯಾಕೆ ಬರೆದಿಟ್ಟುಕೊಂಡೆ. ಯಾರ ಕವಿತೆ ಇದು ಎಂದು ಮೂರು ವಾರ ಯೋಚಿಸುತ್ತಿದ್ದೆ. ಗೆಳೆಯರನ್ನೂ ಕೇಳಿ ನೋಡಿದೆ. ಯಾರಿಗೂ ಓದಿದ ನೆನಪಿರಲಿಲ್ಲ. ಇವತ್ತು ಬೆಳಗ್ಗೆ ಜ್ಯೋತಿ ಇದು ನೀವೇ ಬರೆದದ್ದಲ್ವಾ ಅಂತ ನೆನಪಿಸಿದಳು.
ಕವಿತೆ ಹೇಗಿರಬಾರದು ಅನ್ನುವುದಕ್ಕೆ ಮಾದರಿಯಾಗಿ ಇದನ್ನಿಲ್ಲಿ ಕೊಡುತ್ತಿದ್ದೇನೆ. ಇದೊಂಥರ ಪ್ರಾಕ್ಟಿಕಲ್ ಕ್ರಿಟಿಸಿಸಮ್ಮು. ನೋಡಿರಿ, ಓದಿರಿ, ಆನಂದಿಸಿರಿ ಮತ್ತು ಅನುಭವಿಸಿರಿ.
-ಜೋಗಿ

6 comments:

ಅರುಣ್ ಮಣಿಪಾಲ್ said...

ನಂಗ್ಯಾಕೋ ನೀವ್ ಇದನ್ನು ಬರೆದಿದ್ದೀರಿ ಅನ್ನವುದನ್ನು ಒಪ್ಪಲಾಗುತ್ತಿಲ್ಲ..ನಿಮ್ಮ ಹೆಂಡತಿಗೆ ಸರಿಯಾಗಿ ನೆನಪಿದೆ ತಾನೆ...? :-)

Anonymous said...

ಹತ್ತೋ ಹನ್ನೆರಡೋ ವರುಷದ ಹಿಂದೆ ಬರೆದಿರಬೇಕು. ಈಗಲೂ ಇಷ್ಟೇ ಅಥವಾ ಇದಕ್ಕಿಂತ ಕೆಟ್ಟದಾಗಿ ಪದ್ಯ ಬರೀಬಲ್ಲೆ ಅನ್ನುವ ನಂಬಿಕೆ ಇದೆ. ಇತ್ತೀಚೆಗೆ ರವಿ ಬೆಳಗೆರೆ ಜೊತೆ ಮಾತಾಡುತ್ತಿದ್ದಾಗ ಕಾವ್ಯದ ಪ್ರಸ್ತಾಪ ಬಂತು. ಅದು ಹೇಗೆ ವಿಶಿಷ್ಟವಾದ ಪ್ರಕಾರ, ಗದ್ಯಕ್ಕಿಂತ ಹೇಗೆ ವಿಭಿನ್ನ, ನಾವು ಪದ್ಯವನ್ನು ಪ್ರೀತಿಸುವವರು, ಗದ್ಯ ಬರೆಯುವವರು ಕವಿತೆಯ ಸಹವಾಸಕ್ಕೆ ಯಾಕೆ ಹೋಗಬಾರದು ಅಂತೆಲ್ಲ ಮಾತಾಡಿಕೊಂಡೆವು. ಕವಿಯಾಗುವುದು ಒಂದು ಯೋಗ. ಬೇಂದ್ರೆ ಅಡಿಗ ನರಸಿಂಹಸ್ವಾಮಿ ಕಂಬಾರ ಚಿತ್ತಾಲ ಸಿದ್ದಲಿಂಗಯ್ಯ ಮುಂತಾದವರನ್ನು ಓದಿದ ಮೇಲೂ ಕವಿತೆಗೆ ಬರೆಯಬೇಕು ಅನ್ನಿಸಬೇಕಿದ್ದರೆ ಎಷ್ಟು ಧೈರ್ಯ ಇರಬೇಕು ಅಲ್ವೇ.
-ಜೋಗಿ

mahen said...

ಜೊಗಿಯವರೆ,
ನೀವು ಹೇಳಿದ್ದಕ್ಕೆ, ಈ ಕವಿತೆ ಕೆಟ್ಟದ್ದಿರಬಹುದೇನೊ ಅಂತ ತಿಳಿದು, ಅದೇ ದೃಷ್ಟಿಯಲ್ಲಿ ನೋಡೊಹಾಗಾಯಿತು. ಇಲ್ಲದೇ ಇದ್ದರೆ ನನ್ನಂತಹವರಿಗೆ "ಅರ್ಥವಾದಷ್ಟೇ ಅರ್ಥ"
ಧನ್ಯವಾದ.
ಮಹೇಂದ್ರ ಸಿಂಹ.
http://flickr.com/photos/mahendraphotography/2203035195/

Anonymous said...

ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
ವಿಳಾಸ: http://nagenagaaridotcom.wordpress.com/

ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

ನಗೆ ಸಾಮ್ರಾಟ್

Sagar said...

Dear Jogi,
It would have helped a layman like me, if you had mentioned/explained why this poem is so bad in quality?

Thanks
Dr.D.M.Sagar (Original)
Canada

'ಸವೀ' Sahana said...

Dear Jogi,

you really have guts yar -
first to say that the poem is badly written...and then asking us to read it by putting it on your blog!!