Sunday, January 13, 2008

ನಾಲ್ಕು ಮೊಳ ಕನಕಾಂಬರ ಮತ್ತು ಹೆದ್ದಾರಿ ಹಾಸಿದ ರಾಮಚರಿತ


ಭಾರತೀಪ್ರಿಯರ `ಮೋಚಿ' ಅನ್ನುವ ಕತೆ ಓದಿದ್ದು ನೆನಪಿದೆಯಾ? ಪ್ರಗತಿಶೀಲರ ಕಾಲದ ಕತೆ ಅದು. ಅದನ್ನು ಮತ್ತೆ ಓದುತ್ತಿದ್ದರೆ ಇವತ್ತು ಹಲವಾರು ಪ್ರಶ್ನೆಗಳು ಮೂಡುತ್ತವೆ. ಆ ಪ್ರಶ್ನೆಗಳತ್ತ ಗಮನ ಹರಿಸುವ ಮೊದಲು ಕತೆಯ ಒಂದು ತುಣುಕು;
ಕಥಾನಾಯಕ ಹಿಂದಿನ ದಿನ ರಾತ್ರಿ ರಾಚ ಎಂಬ ಮೋಚಿಯ ಬಳಿಗೆ ಹೋಗಿ ಚಪ್ಪಲಿ ಹೊಲಿಸಿಕೊಂಡು ಬಂದಿದ್ದಾನೆ. ರಾತ್ರಿಯೆಲ್ಲ ಕಥಾನಾಯಕನಿಗೆ ಅವನದೇ ಕನಸು. ಕನಸಲ್ಲಿ ಆತ ಕನವರಿಸಿಕೊಳ್ಳುವುದನ್ನು ಕಂಡು ಹೆಂಡತಿ ಏನೆಂದು ಕೇಳುತ್ತಾಳೆ. ಕಥಾನಾಯಕ ಏನೂ ಹೇಳುವುದಿಲ್ಲ. ಮುಂದೆ ಕತೆ ಹೀಗೆ ಸಾಗುತ್ತದೆ.
`ಕಮಲು ಸುಮ್ಮನೆ ಮಲಗಿಕೊಂಡಳು. ನನಗೆ ಪುನಃ ನಿದ್ದೆ ಹತ್ತಲಿಲ್ಲ. ಹಾಗೇ ಕಣ್ಣುಮುಚ್ಚಿಕೊಂಡೆ. ಹಿಂದಿನ ಸಂಜೆ ನಾನು ಜೋಡು ಹೊಲಿಸುವುದಕ್ಕೆ ಹೋದದ್ದು ಥಟ್ಟನೆ ನೆನಪಿಗೆ ಬಂದಿತು. ನಾನು ಹೋಗುತ್ತಿದ್ದಾಗ ದಾರಿಯಲ್ಲಿ ಮೋಚಿಯೊಬ್ಬನು ಕೆಲಸವಿಲ್ಲದೆ ಕುಳಿತು ತನ್ನ ಸಣ್ಣ ಹಾರೆಗಳನ್ನು ಒಂದಕ್ಕೊಂದು ಬಡಿದು ತಾಳದಂತೆ ಕುಟ್ಟುತ್ತಾ ಅದೇನೋ ಕುರುಕಲು ಪದ ಹೇಳಿಕೊಳ್ಳುತ್ತಿದ್ದದ್ದು; ನನ್ನನ್ನು ಕಂಡು ಹಾರೆಗಳನ್ನು ಕೆಳಗಿಟ್ಟು -`ಬನ್ನಿ ಮಾಸಾಮಿ' ಎಂದದ್ದು; ಕಡೆಗೆ ನಾನು ಕೊಟ್ಟ ಅರ್ಧಾಣೆಯಲ್ಲೇ ತೃಪ್ತನಾದದ್ದು... ಎಲ್ಲಾ ಜ್ಞಾಪಕಕ್ಕೆ ಬಂದಿತು.
ತಲೆಯೆತ್ತಿ ಅವಳ ಮುಖವನ್ನೇ ನೋಡಿದೆ. ನನ್ನನ್ನು ಮಾತಾಡಿಸಿದಾಗ ಅರಳಿದ್ದ ನಗೆಮುಗುಳು ಇನ್ನೂ ಅವಳ ತುಟಿಯ ಮೇಲೆ ಲಾಸ್ಯವಾಡುತ್ತಿರುವಂತಿತ್ತು. ದೂರ ಸರಿದು ಒಂದು ಪಕ್ಕಕ್ಕೆ ತಿರುಗಿ ಕಣ್ಣುಮುಚ್ಚಿಕೊಂಡೆ. ಅದೇ ಚಿತ್ರ; ತಾಳ ಕುಟ್ಟುತ್ತಿದ್ದ, ಕೆದರಿದ ತಲೆಯ, ಬಿಸಿಲಿನಿಂದ ಬೆಂದ ಮುಖದ ರಾಚ! ಅವನದೇ ನಗುಮೊಗ. ಪುನಃ ನನ್ನನ್ನೇ ನೋಡುತ್ತಾ `ಬನ್ನಿ ಮಾಸಾಮಿ' ಎಂದ ಹಾಗಾಯಿತು.
ರಾಚ ತನ್ನ ಮನೆಯಲ್ಲಿ- ಮುರುಕು ಗುಡಿಸಲಿನಲ್ಲಿ- ಮಲಗಿರಬಹುದಲ್ಲವೆ? ಅವನು, ಅವನ ಹೆಂಡಕಿ, ಅವನ ಮಕ್ಕಳು? ನನ್ನ ಹಾಗೆ? ಛೇ, ಎಲ್ಲಿಯ ಸಾಮ್ಯ? ನಾನೆಲ್ಲಿ-ಅವನೆಲ್ಲಿ? ಜೋಡು ಹೊಲಿಯುವ ರಾಚ ಅವನು... ಇಲ್ಲಿ ನಾನು- ನನ್ನವಳು. ಸೊಗಸಾದ ಮನೆ; ಮೆತ್ತನೆಯ ಹಾಸಿಗೆ; ಬೇಕು ಬೇಕಾದ ಪದಾರ್ಥಗಳು. ಇದು ಅವನಿಗಿಲ್ಲ- ಇಲ್ಲ; ಹೌದು- ಅವನ ಕರ್ಮ. ನಾನೆಂಥ ಹುಚ್ಚ! ಅವನು ಯಾರು? ನಾನು ಯಾರು? ಬಡತನ ... ಬಡತನ.. ಅವನು ಕೇಳಿಕೊಂಡು ಬಂದದ್ದು... ಅವನ ಜೀವನ ಅದು.. ಕೇವಲ ವಿಧಿಲಿಖಿತ. ಆದರೂ... ಆದರೂ... ಇದೇನು? ನನ್ನ ಕಣ್ಣಿಂದ ನೀರು! ಕಂಬನಿಯನ್ನು ಚಿಮ್ಮಿದೆ. ಬಗೆ ಹರಿಯಲಿಲ್ಲ.'
ಮಾರನೆಯ ದಿನ ನಾಯಕ ಮತ್ತೆ ಮೋಚಿಯ ಹತ್ತಿರ ಹೋಗುತ್ತಾನೆ. ಮತ್ತೆ ಚಪ್ಪಲಿ ಹೊಲಿಯಲು ಹೇಳುತ್ತಾನೆ.
`ಐ.. ಇದ್ಯಾನಾ ಬುದ್ಧಿ... ನೆನ್ನಿ ವೊಲ್ದಿದ್ದಲ್ವಾ?' ಕೇಳುತ್ತಾನೆ ಮೋಚಿ.
`ಇವತ್ತೂ ಹೊಲಿ' ಅನ್ನುತ್ತಾನೆ ನಾಯಕ.ಚಪ್ಪಲಿ ಹೊಲಿದಾದ ನಂತರ ` ಏನು ಕೊಡ್ಬೇಕೋ' ಕೇಳ್ತಾನೆ.
`ಯಾನೂ ಬೇಡ ಬುದ್ದೀ' ಅಂತಾನೆ ಮೋಚಿ.
ಮುಂದೆ ಕತೆಯಲ್ಲಿ ಇನ್ನೇನೇನೋ ನಡೆಯುತ್ತದೆ. ಮೋಚಿಯ ಮನೆಗೆ ನಾಯಕ ಹೋಗುತ್ತಾನೆ. ಮೋಚಿಗೆ ನಾಕೈದು ಮಕ್ಕಳಿವೆ. ಹೆಂಡತಿ ತೀರಿಕೊಂಡಿದ್ದಾಳೆ. ಅವನಿಗೆ ದುಡ್ಡು ಕೊಡಲು ಮುಂದಾಗುತ್ತಾನೆ. ಮೋಚಿ ನಿರಾಕರಿಸಿ ನಾಳೆ ತಗೊಳ್ಳುವುದಾಗಿ ಹೇಳುತ್ತಾನೆ. ನಾಳೆ ಹೋಗುವ ಹೊತ್ತಿಗೆ ಅಲ್ಲಿ ಮೋಚಿ ಇರುವುದಿಲ್ಲ. ಅವನು ಜಾಗ ಖಾಲಿ ಮಾಡಿಕೊಂಡು ಬೇರೆ ಕಡೆಗೆ ಹೋಗಿರುತ್ತಾನೆ. ನಾಯಕ ಆ ರಾತ್ರಿ ಯೋಚಿಸುತ್ತಾನೆ;
`ನಾನೆಂಥ ಹುಚ್ಚ! ಅವನ ಕೈ ಹಿಡಿದೆತ್ತಬೇಕೆಂದು ಬಗೆದೆ. ಅವನ ದಾರಿದ್ರದ ಅಳಲನ್ನು ತಣಿಸುವುದಕ್ಕೆ ತವಕಗೊಂಡೆ. ನಾನು ಯಾರು ಅದನ್ನು ಮಾಡುವುದಕ್ಕೆ? ನನ್ನಿಂದ ತನಗೆ ತೊಂದರೆಯಾಗಬಹುದೆಂದು ಅವನು ಭಾವಿಸಿದನೆ? ನನ್ನ ಉಪಕಾರದ ಹೊರೆ ಅವನಿಗೆ ಬೇಡವಾಯಿತು. ಅವನದು ನಿಸ್ವಾರ್ಥ ಜೀವನ. ದುಡಿದು ಹೊಟ್ಟೆ ಹೊರೆಯುವ ಬಗೆ; ನೊಂದು ನೋವನ್ನು ನುಂಗಿಕೊಳ್ಳುವ ಸ್ವಭಾವ. ಅವನ ಬಗೆಗೆ ನಾನು ತುಂಬ ವ್ಯತಿರಿಕ್ತವಾಗಿ ನಡೆದೆ. ನನ್ನಿಂದ ಅವನು ಆ ಸ್ಥಳವನ್ನು ಬಿಟ್ಟು ಹೊರಟುಹೋದ. ಎಲ್ಲಿಗೆ?
******
ಈಗ ಇನ್ನೊಂದು ಕತೆ ತೆಗೆದುಕೊಳ್ಳೋಣ. ಲಂಕೇಶರ `ಗಿಳಿಯು ಪಂಜರದೊಳಿಲ್ಲ'. ನವ್ಯ ತಲೆಮಾರಿನ ಕತೆ. ಈ ಕತೆಯಲ್ಲಿ ನಾಯಕ ಕ್ಷೌರಿಕನ ಬಳಿಗೆ ಹೋಗುತ್ತಾನೆ. ಕ್ಪೌರಿಕನ ಹತ್ತಿರ ಅವನ ಸುಖ-ದುಃಖಗಳನ್ನು ತಿಳಿದುಕೊಳ್ಳುತ್ತಾನೆ. ಮತ್ತೊಂದು ದಿನ ನಾಯಕನ ಹತ್ತಿರ ಕ್ಪೌರಿಕ ತನ್ನವರ್ಯಾರಿಗೋ ಅಸೌಖ್ಯ ಎಂದು ಹೇಳಿ ಸ್ವಲ್ಪ ಹಣ ಕೇಳುತ್ತಾನೆ. ನಾಯಕನಿಗೆ ಅವನ ಬಗ್ಗೆ ಅನುಮಾನ. ದುಡ್ಡು ಕೊಟ್ಟರೆ ಆತ ಮೋಸ ಮಾಡುತ್ತಾನೇನೋ ಎಂಬ ಅಪನಂಬಿಕೆ. ಆದರೆ ಹಾಗಂತ ಹೇಳೋದಕ್ಕೆ ಹಿಂಜರಿಕೆ. ತನ್ನನ್ನು ಆತ ತಪ್ಪು ತಿಳಿಯಬಹುದು ಎಂಬ ಭಯ. ಆತನಿಂದ ಹೇಗಾದರೂ ತಪ್ಪಿಸಿಕೊಳ್ಳುವ ಸಲುವಾಗಿ ನಾಯಕ ಮನೆಗೆ ಬಾ ಕೊಡ್ತೀನಿ ಅನ್ನುತ್ತಾನೆ. ಆತ ಮನೆಗೆ ಬರಲಿಕ್ಕಿಲ್ಲ ಎಂಬ ಧೈರ್ಯ ನಾಯಕನಿಗೆ.
ಆದರೆ ಆತ ಮನೆಗೂ ಬರುತ್ತಾನೆ. ಆತ ಬಂದಿದ್ದು ಗೊತ್ತಾಗುತ್ತಿದ್ದಂತೆ ನಾಯಕ ಮನೆಯೊಳಗೆ ಅಡಗಿ ಕುಳಿತು `ಅವರಿಲ್ಲ' ಎಂದು ಹೇಳಿಸುತ್ತಾನೆ. ಬಂದಾತ ನಿರಾಶೆಯಿಂದ ಮರಳುತ್ತಾನೆ. ಇದಾಗಿ ತುಂಬ ದಿನಗಳ ನಂತರ ಪಾಪಪ್ರಜ್ಞೆಯಿಂದ ನರಳುತ್ತಾ ನಾಯಕ ಆತನ ಅಂಗಡಿಯತ್ತ ಹೋದಾಗ ಅದು ಬಾಗಿಲು ಹಾಕಿದೆ. ಅವನು ಎಲ್ಲಿಗೋ ಹೊರಟುಹೋದ ಎಂದು ಯಾರೋ ಹೇಳುತ್ತಾರೆ.
*******
ಈ ಎರಡೂ ಕತೆಗಳನ್ನು ಒಂದರ ಮುಂದೆ ಒಂದನ್ನಿಟ್ಟು ನೋಡಿದಾಗ ಎರಡು ಕಾಲಘಟ್ಟದ ಮನಸ್ಥಿತಿಗಳು ಸ್ಪಷ್ಟವಾಗುತ್ತವೆ. ಅವು ಆಯಾ ಕಾಲಘಟ್ಟದಲ್ಲಿ ಇಡೀ ಸಮಾಜ ತಳೆದ ನಿಲುವು ಆಗಿರಬಹುದು, ಆಗಿಲ್ಲದೆಯೂ ಇರಬಹುದು. ಆದರೆ ಸಾಹಿತ್ಯದಲ್ಲಿ ಪ್ರತಿಬಿಂಬಿತವಾದ ನಿಲುವುಗಳಂತೂ ಹೌದು.
ಭಾರತೀಪ್ರಿಯರ ಕತೆಯಲ್ಲಿ ಮೋಚಿಯ ಕಷ್ಟಕಾರ್ಪರ್ಣ್ಯಗಳನ್ನು ಕಂಡು ಮನಕರಗಿ ಆತನಿಗೆ ನೆರವಾಗಲು ನಾಯಕ ತಾನೇ ಮುಂದಾಗುತ್ತಾನೆ. ಆದರೆ ಅಂಥ ಸಹಾಯ ತನಗೆ ಬೇಕಿಲ್ಲ ಎಂದು ಸ್ವಾಭಿಮಾನದಿಂದಲೋ ಎಂಬಂತೆ ಮೋಚಿ ಬೇರೆ ಕಡೆಗೆ ಹೊರಟು ಹೋಗುತ್ತಾನೆ. ಈ ಕತೆಯ ನಾಯಕನಿಗೆ ಆತನನ್ನು ಉದಾ್ಧರ ಮಾಡುವ ಆಸೆ. ತಾನು ಅವನಿಗೆ ಸಹಾಯ ಮಾಡಲಾಗಲಿಲ್ಲವಲ್ಲ ಎಂಬ ಪಾಪಪ್ರಜ್ಞೆ. ಅವನು ಮುರುಕು ಗುಡಿಸಲಲ್ಲಿರುವಾಗ ತಾನು ಸುಪ್ಪತ್ತಿಗೆಯ ಮೇಲೆ ಹೇಗಿರಲಿ ಎಂಬ ಪ್ರಶ್ನೆ.
ಅದೇ ಲಂಕೇಶರ ಕತೆಗೆ ಬಂದಾಗ ನಾಯಕ ಬದಲಾಗಿದ್ದಾನೆ. ಅವನಿಗೆ ಕ್ಪೌರಿಕನ ಸ್ಥಿತಿಯ ಬಗ್ಗೆ ಮಾಹಿತಿ ಬೇಕು. ಆದರೆ ಅವನ ಕಷ್ಟಗಳಿಗೆ ನೆರವಾಗುವುದು ಬೇಕಿಲ್ಲ. ಜೊತೆಗೆ ಕ್ಪೌರಿಕನ ಪ್ರಾಮಾಣಿಕತೆಯ ಬಗ್ಗೆಯೇ ನಾಯಕನಿಗೆ ಅನುಮಾನ. ಮೊದಲ ಕತೆಯಲ್ಲಿ ನಾಯಕನೇ ಹಣ ಕೊಡಲು ಮುಂದಾದಾಗ ಮೋಚಿ ನಿರಾಕರಿಸುತ್ತಾನೆ. ಎರಡನೆಯ ಕತೆಯಲ್ಲೇ ಕ್ಪೌರಿಕ ಹಣ ಕೇಳಿದಾಗ ನಾಯಕ ಕೊಡದೇ ಜಾರಿಕೊಳ್ಳುತ್ತಾನೆ.
ತುಂಬ ಸ್ಪಷ್ಟವಾಗಿದೆ ವ್ಯತ್ಯಾಸ. ಆದರೆ ಆಳದಲ್ಲಿ ಎರಡೂ ಕತೆ ಧ್ವನಿಸುವುದು ಒಂದೇ ಭಾವವನ್ನು. ಹಣ ಕೊಡಲು ಬಯಸಿ ಕೊಡಲಾಗದೇ ಭಾರತೀಪ್ರಿಯ ನಾಯಕ ಅನುಭವಿಸುವ ಪಾಪಪ್ರಜ್ಞೆಯೂ, ಹಣ ಕೊಡಲಿಷ್ಟವಿಲ್ಲದೇ ಕ್ಪೌರಿಕ ಕಣ್ಮರೆಯಾದಾಗ ಪಾಪಪ್ರಜ್ಞೆ ಅನುಭವಿಸುವ ಲಂಕೇಶರ ನಾಯಕನೂ ಅಂತರಾಳದಲ್ಲೇ ಒಬ್ಬನೆ. ಆದರೆ ಭಾರತೀಪ್ರಿಯರ ನಾಯಕನಲ್ಲಿರುವ ಉದಾತ್ತ ಮನೋಭಾವ ನಮಗೀಗ ಪೊಳ್ಳು ಅನ್ನಿಸುತ್ತದೆ. ಲಂಕೇಶರ ನಾಯಕ ಅನುಮಾನ ಸಹಜ ಅನ್ನಿಸುತ್ತದೆ. ಮೊದಲನೆಯದು ಆದರ್ಶ, ಎರಡನೆಯದು ವಾಸ್ತವ. ಭಾರತೀಪ್ರಿಯರದ್ದು ವೇದಿಕೆಯ ಮೇಲಿನ ಮಾತು; ಲಂಕೇಶರದ್ದು ಅಂತರಂಗದ ಮಾತು. ಸಾರ್ವಜನಿಕವಾಗಿ ಮಾತಾಡುವ ಹೊತ್ತಿಗೆ ಭಾರತೀಪ್ರಿಯರ ನಿಲುವು ಚಪ್ಪಾಳೆ ಗಿಟ್ಟಿಸಿಕೊಳ್ಳಬಲ್ಲದು. ಖಾಸಗಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದಾಗ ಲಂಕೇಶರ ನಾಯಕನಂತೆ ನಾವೆಲ್ಲ ವರ್ತಿಸಬಹುದು.
ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇಕು. ಲಂಕೇಶರ ಕತೆಯ ಕ್ಪೌರಿಕನಿಗೆ ಈ ಘಟನೆಯ ನಂತರ ಮಾನವೀಯತೆಯ ಕುರಿತಾದ ನಂಬಿಕೆ ಹೊರಟುಹೋಗಬಹುದು. ಆದರೆ ಭಾರತೀಪ್ರಿಯರ ನಾಯಕ ತನ್ನ ಕರ್ತೃತ್ವ ಶಕ್ತಿಯ ಬಗೆಗಿನ ನಂಬಿಕೆಯನ್ನೇ ಕಳೆದುಕೊಳ್ಳಬಹುದು. ಹಿಂದಿನ ರಾತ್ರಿ ಹೊಲಿದ ಚಪ್ಪಲಿಯನ್ನೇ ಮತ್ತೆ ಹೊಲಿ ಅಂತ ನಾಯಕ ಕೊಟ್ಟಾಗ ಆತನಿಗೆ ಥಟ್ಟನೆ ಅನ್ನಿಸುವುದು; ನಾನು ಹೊಲಿದದ್ದು ಸರಿಯಾಗಿಲ್ಲ. ಈ ಅಳುಕಲ್ಲೇ ಆತ ಮತ್ತೊಮ್ಮೆ ಹೊಲಿಯುತ್ತಾನೆ. ತನ್ನ ಕೆಲಸದಲ್ಲಿ ಏನೋ ದೋಷವಿತ್ತು ಎಂದು ಆತ ಭಾವಿಸುವುದರಿಂದ ಎರಡನೆಯ ಸಾರಿ ಆತ ಹಣ ತೆಗೆದುಕೊಳ್ಳಲೂ ಹಿಂಜರಿಯುತ್ತಾನೆ. ಅವನಿಗೆ ತನ್ನ ನೈಪುಣ್ಯತೆಯ ಬಗೆಗಿನ ಆತ್ಮವಿಶ್ವಾಸವೇ ಹೊರಟುಹೋದರೂ ಆಶ್ಚರ್ಯವಿಲ್ಲ.
ಮೋಚಿಯ ನಷ್ಟ ದೊಡ್ಡದಾ? ಇಲ್ಲ, ಕ್ಪೌರಿಕನದ್ದಾ? ಒಂದು ವೇಳೆ ಕತೆಯ ಅಂತ್ಯವನ್ನು ಕೊಂಚ ಬದಲಾಯಿಸಿ ನೋಡಿದರೆ ಏನಾಗುತ್ತದೆ? ಮೋಚಿ ನಾಯಕ ಕೊಟ್ಟ ಹಣವನ್ನು ತೆಗೆದುಕೊಂಡಿದ್ದರೆ ಅವನ ಸ್ಥಿತಿ ಬದಲಾಗುತ್ತಿತ್ತಾ?
ಇಲ್ಲ.
ಬದಲಾಗುತ್ತಿದ್ದದ್ದು ನಾಯಕನ ಸ್ಥಿತಿ. ಆತನ ಪಾಪಪ್ರಜ್ಞೆ ಕೊಂಚ ಕಡಿಮೆಯಾಗುತ್ತಿತ್ತು. ತನ್ನ ಐಷಾರಾಮವನ್ನು ಆತ ಇನ್ನಷ್ಟು ಮುಕ್ತ ಸ್ಥಿತಿಯಲ್ಲಿ ಅನುಭವಿಸಬಹುದಾಗಿತ್ತು. ತಾನು ಒಬ್ಬ ಬಡವನಿಗೆ ನೆರವಾದೆ ಎನ್ನುವುದು ಅವನು ಸಮಾನತೆಯಿಂದ ಮತ್ತಷ್ಟು ದೂರ ಸರಿಯುವುದಕ್ಕೊಂದು ನೆಪವಾಗುತ್ತಿತ್ತು. `ಅವನಿಗೆ ಹತ್ತು ರುಪಾಯಿ ಕೊಟ್ಟಿದ್ದೇನೆ. ನಾನೀಗ ನೂರು ರುಪಾಯಿಯನ್ನು ಹೊಂದಬಹುದು' ಎಂಬ ವಿಚಿತ್ರ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಅವನಲ್ಲಿ ಮೂಡಿಸುತ್ತಿತ್ತು.
ಲಂಕೇಶರ ನಾಯಕನೂ ಅಷ್ಟೇ. ಆತನೇನಾದರೂ ಕ್ಪೌರಿಕನಿಗೆ ಹಣ ಕೊಟ್ಟಿದ್ದರೆ ಆತ ಅದನ್ನು ಮರಳಿಸದೇ ಇದ್ದಿದ್ದರೆ ಆ ನಾಯಕ ಮಾನವೀಯತೆಯಲ್ಲಿ ನಂಬಿಕೆ ಕಳಕೊಳ್ಳುತ್ತಿದ್ದ. `ಅವನಿಗೆ ಸಹಾಯ ಮಾಡಲಾಗಲಿಲ್ಲವಲ್ಲ' ಎಂಬ ಪಾಪಪ್ರಜ್ಞೆ, `ಅವನಿಗೆ ನೆರವಾದೆ' ಎನ್ನುವ ಅಹಂಕಾರಕ್ಕಿಂತ ದೊಡ್ಡದು ಮತ್ತು ಮುಖ್ಯವಾದದ್ದು. ಮೋಚಿಯ ನಾಯಕ ಒಬ್ಬನ ಕಷ್ಟಕ್ಕೆ ಮಿಡಿಯುವ ಮೂಲಕ ತನ್ನೆಲ್ಲ ಪಾಪವನ್ನೂ ನೀಗಿಕೊಂಡರೆ, ಲಂಕೇಶರ ನಾಯಕ ಒಬ್ಬನಿಗೆ ನೆರವಾಗದೇ ಉಳಿಯುವ ಮೂಲಕ ಮತ್ತಷ್ಟು ಪಾಪಪ್ರಜ್ಞೆ ತುಂಬಿಕೊಳ್ಳುತ್ತಾನೆ.
*****
ಸಾಹಿತ್ಯದಲ್ಲಿ ಶ್ರೇಷ್ಠತೆಯ ಪ್ರಶ್ನೆ ಬಂದಾಗ, ಮನುಷ್ಯನ ಪರಿಪೂರ್ಣತೆಯ ಪ್ರಶ್ನೆ ಬಂದಾಗ ಥಟ್ಟನೆ ನೆನಪಾಗುವುದು ಈ ಎರಡು ಕತೆಗಳು. ನಮ್ಮ ಶ್ರೇಣಿಕೃತ ಸಮಾಜ ಹೇಗಿದೆಯೆಂದರೆ ಮೇಲುಸ್ತರದಲ್ಲಿರುವ ಒಬ್ಬ ವ್ಯಕ್ತಿಗೆ ಅತ್ಯಂತ ಆಪ್ತ ಎನ್ನಿಸುವ ಸಾಹಿತ್ಯ, ಕೆಳಸ್ತರದಲ್ಲಿರುವ ಒಬ್ಬ ವ್ಯಕ್ತಿಗೆ ತಟ್ಟದೆಯೇ ಇರಬಹುದು. ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? ಎನ್ನುವ ತುಡಿತ ಮೇಲುವರ್ಗದ ಮನುಷ್ಯನಿಗೆ ಸಹಜ. ಕೆಳವರ್ಗದವನಿಗೆ? ಆತ ಪುರುಷೋತ್ತಮನಾಗುವ ಮೊದಲು ಮನುಷ್ಯನಾಗಬೇಕಿದೆ. ಶ್ರೇಷ್ಠನಾಗುವ ಮೊದಲು ಸಮಾನನಾಗಬೇಕಿದೆ. ಒಬ್ಬ ಮೋಚಿಗೆ ಅನ್ನಿಸಿದ್ದೇ ಒಬ್ಬ ಬೂಟು ತೊಟ್ಟವನಿಗೂ ಅನ್ನಿಸಬೇಕಾದರೆ ಆಗ ಸಮಾಜ ಹೇಗಿರಬೇಕು ಎಂಬುದನ್ನು ಯೋಚಿಸಬೇಕು. ಒಳ್ಳೆಯ ಬಟ್ಟೆ ತೊಡಬೇಕು ಎನ್ನುವುದು ಕೆಟ್ಟ ಯೋಚನೆಯೇನಲ್ಲ. ಆದರೆ ಬಟ್ಟೆಯನ್ನೇ ತೊಡದವನಿಗೆ ಒಳ್ಳೆಯ ಬಟ್ಟೆ ಮುಖ್ಯವಲ್ಲ; ಬಟ್ಟೆ ಮುಖ್ಯ.
ನಮ್ಮ ಸಣ್ಣಪುಟ್ಟ ಕೆಲಸಗಳನ್ನೂ ಆಧುನಿಕತೆ ಕಸಿದುಕೊಳ್ಳುತ್ತಿದೆ. ಹೆದ್ದಾರಿಗಳ ಪಕ್ಕದಲ್ಲಿ ನಸುಕಿನಲ್ಲಿ ಮೂರು ಮೊಳ ಕನಕಾಂಬರ ಹೂವನ್ನು ಯಮವೇಗದಿಂದ ಹಾದುಹೋಗುವ ವಿದೇಶಿ ಕಾರುಗಳ ಮುಂದೆ ಹಿಡಿದು ಮೊಳ ಒಂದಕ್ಕೆ ಒಂದು ರುಪಾಯಿಯಂತೆ ಮಾರುವ ಪುಟ್ಟ ಹುಡುಗಿಯ ಚಿತ್ರ ನಮ್ಮ ಕಣ್ಮುಂದೆ ಮತ್ತೆ ಮತ್ತೆ ಸುಳಿಯುತ್ತದೆ. ಹಾಗೆ ಎಷ್ಟು ಹೂಮಾಲೆಗಳನ್ನು ಮಾರಿದರೆ ಆಕೆ ಒಂದು ವಿದೇಶಿ ಕಾರು ಕೊಳ್ಳಬಹುದು?
ಈ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಆ ಪುಟ್ಟ ಹುಡುಗಿಯ ಕೈಯಲ್ಲಿರುವ ಕನಕಾಂಬರದ ಮಾಲೆಗೂ ಅವಳು ನಿಂತುಕೊಂಡಿರುವ ಆ ಮುಂಜಾವದ ಇಬ್ಬನಿಗೂ ಬೆಲೆ ಕಟ್ಟಲಿಕ್ಕಾಗುವುದಿಲ್ಲ ಅಂತ ನಾವು ಮಾತಾಡಿಕೊಳ್ಳುತ್ತೇವೆ.
ಆದರೆ ಇಬ್ಬನಿಯೂ ಹೂವೂ ಅದ್ಭುತ ಅನ್ನಿಸುವುದು ಕಾರಲ್ಲಿ ಬೆಚ್ಚಗೆ ಕುಳಿತಿರುವಾಗಲೇ! ಅದನ್ನು ಮಾರುವ ಹುಡುಗಿಗೆ ಅದು ಅನ್ನ, ಬಟ್ಟೆ, ಪುಸ್ತಕ.
ಮಧ್ಯಾಹ್ನದ ಒಳಗೆ ಮಾರಾಟವಾಗದೇ ಹೋದರೆ ಮತ್ತೊಂದು ದಿನದ ಪುಷ್ಕಳ ಉಪವಾಸ.

5 comments:

suptadeepti said...

ಜೋಗಿ ಸರ್, ಕೊನೆಯ ಭಾಗ ಗಾಢವಾಗಿ ತಟ್ಟಿತು. ಇಂಥ ವಿಷಯಗಳನ್ನು ಅದೆಷ್ಟು ಬಾರಿ ಯೋಚಿಸಿದ್ದೇನೋ? ನಮ್ಮ ನೆಲೆಯಲ್ಲಿ ಅದಕ್ಕೆ ಪರಿಹಾರವಿದೆಯೆ? ಹೂ ಮಾರುವ ಪುಟ್ಟ ಪಾರ್ವತಿಯೇ ಕಣ್ಣಲ್ಲಿ ಕೂರುತ್ತಾಳೆ.

ashok shettar said...

Dear Jogi,
The analysis comparing Bharatisuta's Mochi and Lankesh's Giliyu Panjaradolilla was interesting though certain points seemed a little too farfetched.Why should the idealism of the hero in Mochi seem hollow? Or why should it be thought of as idealism at all?Conversely why should be the attitude of the hero in Giliyu..deemed as realistic?The distinction could as well be the reflection of standards of our own times.Nonetheless, it was a novel attempt at getting into the psychology of the characters involved.

SURI said...

ಜೋಗಿ,
ನಿಮ್ಮ ಮೊಳ ಉದ್ದದ ಹೂ ಮಾಲೆ ಮಾರುವ ಹುಡುಗಿಯ ಸಾಲುಗಳನ್ನು ಓದುವಾಗ ತೇಜಸ್ವಿಯವರ ನೆನಪು ಬಂದೇ ಬರುತ್ತದೆ. ಜುಗಾರಿ ಕ್ರಾಸ್ ಚಿತ್ರಕಥೆ ಮಾಡುವಾಗ ಆ ಪುಟ್ಟ ಹುಡುಗಿ ನನಗೆ ಉದ್ದಕ್ಕೂ ಕಾಡಿದ್ದಳು. ಎಂತಹ ವಿಪರ್ಯಾಸ ನೋಡಿ. ಮಾತೇ ಬಾರದ ಹುಡುಗಿ ಹೆದ್ದಾರಿ ಬದಿಯಲ್ಲಿ ಹೂ ಮಾರಲು ನಿಲ್ಲುತ್ತಾಳೆ. ಹುಟ್ಟು ಮೂಕಿ ದೇವಮ್ಮ, ಆಕೆಯ ತಾಯಿ, ದೇವಪುರದ ಪೇಟೆಯಲ್ಲಿ ಬುಟ್ಟಿ ಮಾರಲು ಕೂರುತ್ತಾಳೆ. ಇಬ್ಬರ ವ್ಯಾಪಾರಕ್ಕೆ ಮಾತು ಮುಖ್ಯ. ಆದರೆ ಇಬ್ಬರಿಗೂ ಮಾತೇ ಬರೋಲ್ಲ. ಎರಡೂ ಬೆಂದ, ಬಸವಳಿದ ಜೀವಗಳು. ಒಂದು ಹಣ್ಣಾಗಿ ಹೋದ ಜೀವ. ಇನ್ನೊಂದು ಹಣ್ಣಾಗಲು ಹಾತೊರೆಯುತ್ತಿರುವಂತಹ ಜೀವ. ತೇಜಸ್ವಿಯವರು ನಮಗೆ ಹತ್ತಿರವಾಗುವುದೇ ಇಲ್ಲಿ. ಯಾಕೋ ನಿಮಗೆ ಹೇಳಬೇಕೆನಿಸಿತು. ಸೂರಿ.

Anonymous said...

ಈ ಪುಟದ ಆರಂಭದಲ್ಲಿ ನಿಂತಿರುವ ಬಾಲಕಿಯ ಚಿತ್ರ ನೋಡಿದ ಕೂಡಲೇ ದೇವಪುರದ ದೇವಮ್ಮ (ತೇಜಸ್ವಿಯವರ 'ಜುಗಾರಿ ಕ್ರಾಸ್') ನೆನಪಾಯಿತು.
- ಆತೀಪಿ, ಗುಲ್ಬರ್ಗ

Arun said...

"ಬಟ್ಟೆಯೆ ತೊಡದವನಿಗೆ ಒಳ್ಳೆಯ ಬಟ್ಟೆ ಮುಖ್ಯವಲ್ಲ ಬಟ್ಟೆ ಮುಖ್ಯ":-)....
ಯಾಕೋ ಕನ್ನಡದ ನಟ ನಿರ್ದೇಶಕ ಉಪೇಂದ್ರನ ನೆನಪಾಯ್ತು...:-)