Friday, January 11, 2008

ನೋಡಿ ಸ್ವಾಮಿ, ನಾವಿರೋದೆ ಹೀಗೆ...

ನೀವು, ಭಾರತೀಯರು, ಪರವಾಗಿಲ್ಲ. ದಿನಕ್ಕೆ ಕನಿಷ್ಠ ಐದು ಮೆಗಾ ಸೀರಿಯ್ ನೋಡುತ್ತೀರಿ. ಒಂದೋ ಎರಡೋ ಸಿನಿಮಾ ನೋಡುತ್ತೀರಿ. ಇದರ ಮಧ್ಯೆ ಸಾಕಷ್ಟು ಹರಟುತ್ತೀರಿ. ಏನನ್ನು ಬೇರೆಯವರ ಹತ್ತಿರ ಹೇಳಿಕೊಳ್ಳಬಾರದೋ ಅದನ್ನೆಲ್ಲ ಹೇಳಿಕೊಳ್ಳುತ್ತೀರಿ. ನಿಮಗೆ ಅಪಾರವಾದ ಬಿಡುವಿದೆ. ಭಾರತೀಯ ಮಹಿಳೆಯಷ್ಟು ಸುಖಿ ಬೇರೆ ಯಾರೂ ಇಲ್ಲ.'
ಹೀಗೊಂದು ಟಿಪ್ಪಣಿ ಬರೆದಾಕೆ ಐರ್ಲೆಂಡಿನ ಅಂಕಣಗಾರ್ತಿ. ಆಕೆ ಇದನ್ನು ಅಗಾಧವಾದ ಸಿಟ್ಟಿನಿಂದ ಮತ್ತು ಅಸಹನೆಯಿಂದ ಬರೆದಿದ್ದಾಳೆ. ಅವಳ ಮುಖ್ಯ ವಾದ ಇಷ್ಟೇ. ಭಾರತೀಯ ಮಹಿಳೆಯರು ಸೋಮಾರಿಗಳು. ಗಂಡಸರು ಮಹಿಳೆಯರಿಗಿಂತಲೂ ಸೋಮಾರಿಗಳು. ಇಬ್ಬರಿಗೂ ಅಂಥ ಗುರಿಯೇನಿಲ್ಲ. ಇಬ್ಬರೂ ನಾಳೆಯ ಬಗ್ಗೆ ಚಿಂತಿಸುವುದೇ ಇಲ್ಲ. ಒಂದು ದಿನ ಕೆಲಸ ಮಾಡಿ ಮೂರು ದಿನ ಊಟ ಮಾಡುತ್ತಾರೆ. ನಾಲ್ಕನೆಯ ದಿನ ಮತ್ತೆ ಕೆಲಸ ಸಿಕ್ಕೇ ಸಿಗುತ್ತದೆಂದು ಕಾಯುತ್ತಾರೆ. ಸಿಗದಿದ್ದರೆ ಉಪವಾಸ ಇರುವುದಕ್ಕೂ ಗೊತ್ತಿದೆ. ಯಾರೊಬ್ಬರಿಗೂ ಕೈಲಿ ದುಡ್ಡಿಲ್ಲದೆ ಉಪವಾಸ ಇರುವ ಸ್ಥಿತಿಯ ಬಗ್ಗೆ ಕೆಟ್ಟೆನಿಸುವುದೂ ಇಲ್ಲ. ಅವರನ್ನು ನೋಡುತ್ತಾ ಇರುವವರಿಗೆ ಅವರ ಬಗ್ಗೆ ಸಿಟ್ಟು ಬರುವುದೂ ಇಲ್ಲ. ಅವರಿಗೆ ಯಾರೂ ಬುದ್ಧಿ ಹೇಳುವುದಕ್ಕೂ ಹೋಗುವುದಿಲ್ಲ.
ಆ ಅಂಕಣಗಾರ್ತಿಗೆ ಈ ಮನಸ್ಥಿತಿ ಗೊತ್ತಾದದ್ದು ಆಕೆ ಭಾರತದಲ್ಲಿ ಉಳಿದುಕೊಂಡ ಹದಿನಾರು ತಿಂಗಳ ಅವಧಿಯಲ್ಲಿ ಮನೆಕೆಲಸಕ್ಕೆ ಬರುತ್ತಿದ್ದ ಮಹಿಳೆಯ ಮೂಲಕ. ಆಕೆ ಭಾರತಕ್ಕೆ ಬಂದದ್ದು ಕಾದಂಬರಿ ಬರೆಯುವುದಕ್ಕೆ. ಆದರೆ ಇವತ್ತಿಗೆ ಬೇಕಾದ ಕಾದಂಬರಿ ಬರೆಯುವ ವಸ್ತು ಭಾರತದಲ್ಲೇ ಇಲ್ಲ ಅನ್ನಿಸಿ ವಾಪಸ್ಸು ಮರಳಿದಳಂತೆ. ಕೊನೆಗೆ ಆಕೆ ಬರೆದದ್ದು ಭಾರತದ ಬಗ್ಗೆ ಒಂದು ಸುದೀರ್ಘ ಟಿಪ್ಪಣಿ.
ಆಕೆ ಈ ಮನಸ್ಥಿತಿಯನ್ನು ಭಾರತೀಯ ತತ್ವಶಾಸ್ತ್ರದ ಪರಿಣಾಮ ಎನ್ನುತ್ತಾಳೆ.ಅಮೆರಿಕಾದ ಮಂದಿಗೊಂದು ತಮ್ಮದೇ ಆತ ತಾತ್ವಿಕತೆಯಿಲ್ಲ, ಪುರಾಣವಿಲ್ಲ, ತಮ್ಮ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಯಾವುದೇ ಪೂಜಾರ್ಹ ಗ್ರಂಥಗಳ ಆಧಾರವಿಲ್ಲ. ಹೀಗಾಗಿ ಅವರು ಕಷ್ಟಪಟ್ಟು ದುಡಿಯುತ್ತಾರೆ. ದುಡಿಯದೇ ಹೋದರೆ, ಆ ಮೂಲಕ ಬಡವರಾದರೆ ಅವರನ್ನು ಉಳಿದವರು ಅನುಕಂಪದಿಂದ ನೋಡುವುದಿಲ್ಲ, ಬದಲಾಗಿ ಅಸಹ್ಯಪಡುತ್ತಾರೆ. ಅದೇ ಭಾರತದಲ್ಲಿ ಬಡವರ ಬಗ್ಗೆ ಯಾರಿಗೂ ಅಸಹ್ಯವಿಲ್ಲ; ಬದಲಾಗಿ ಅನನ್ಯವಾದ ಅನುಕಂಪವಿದೆ. ಭಿಕ್ಪೆ ಬೇಡುವ ಕೈಗೆ ಐವತ್ತು ಪೈಸೆ ಹಾಕದೇ ಹೋದರೆ ಭಾರತೀಯರು ದಿನವಿಡೀ ಪಶ್ಚಾತ್ತಾಪದಿಂದ ಬೇಯುತ್ತಾರೆ. ಊಟ ಮಾಡಿ ಹೊರಗೆ ಬರುತ್ತಿದ್ದಂತೆ ಹೊಟೆಲ್ಲಿನ ಹೊರಗಡೆ ಭಿಕ್ಪುಕರು ಆರ್ತನಾದದೊಂದಿಗೆ ಎದುರಾಗುತ್ತಾರೆ. ಅವರಿಗೆ ಭಿಕ್ಪೆ ಹಾಕದೇ ಹೋದರೆ ತಿಂದ ಅನ್ನ ಅಜೀರ್ಣವಾಗುತ್ತದೋ ಎಂಬ ಅಪರಾಧೀ ಪ್ರಜ್ಞೆ ಭಾರತೀಯರನ್ನು ಕಾಡುತ್ತದೆ. ಹೀಗೆ ಪ್ರತಿಯೊಬ್ಬರೂ ಇನ್ನೊಬ್ಬರ ದೈನೇಸಿ ಸ್ಥಿತಿಗೆ ತಾವೂ ಕಾರಣರೇನೋ ಎಂಬಂತೆ ಭಾವಿಸಿ ವರ್ತಿಸುತ್ತಾರೆ.
ಈ ವಿಶ್ಲೇಷಣೆ ಕೇಳುವುದಕ್ಕೆ ನಿಜಕ್ಕೆ ಹತ್ತಿರವಿದ್ದಂತಿದೆ. ಅಷ್ಟೇ ಅಲ್ಲ, ಆಕೆಯ ಟಿಪ್ಪಣಿಯಲ್ಲಿನ ವಿವರಗಳು ನಮ್ಮ ದೈನಂದಿನ ಬದುಕಿನ ವರ್ತನೆಗಳನ್ನೆಲ್ಲ ಒಂದೊಂದಾಗಿ ಪರಿಶೀಲಿಸುವಂತಿದೆ. ಇಲ್ಲಿನ ಪ್ರತಿಯೊಬ್ಬರೂ ಕನಸುಗಾರರು. ಬಡತನ ಆತ್ಮಾನುಕಂಪ ಮತ್ತು ದೈನ್ಯ ತುಂಬಿ ತುಳುಕುತ್ತಿರುವ ತಮಿಳುನಾಡಿನ ಬಡವರು ಕಾಣುವಂಥ ಕನಸನ್ನು ಬೇರೆ ಯಾರೂ ಕಾಣಲು ಸಾಧ್ಯವಿಲ್ಲ. ತಮ್ಮನ್ನು ಆಳುವವರು ದೇವರೆಂದು ಅವರು ಈಗಲೂ ನಂಬಿದ್ದಾರೆ. ಒಂದಲ್ಲ ಒಂದು ದಿನ ತಮ್ಮ ಬದುಕೂ ಹಟಾತ್ತಾಗಿ ಬದಲಾಗುತ್ತದೆ ಎಂದುಕೊಂಡಿದ್ದಾರೆ. ತೀರಾ ಕೆಳಗಿನಿಂದ ತುಂಬ ಎತ್ತರಕ್ಕೆ ಏರಿದ ವ್ಯಕ್ತಿಯ ಉದಾಹರಣೆಯೇ ಅವರಿಗೆ ಸ್ಪೂರ್ತಿಯಾಗುತ್ತದೆ. ಅಂಥ ಬದಲಾವಣೆಯ ಹಿಂದಿರುವ ಶ್ರಮವನ್ನು ಗುರುತಿಸುವುದಿಲ್ಲ ಅವರು, ಬರೀ ಗ್ರಾಫನ್ನಷ್ಟೇ ನೋಡುತ್ತಾರೆ.
ಇನ್ನೊಂದು ರಾಜ್ಯದಲ್ಲಿ ಮತ್ತೊಂದು ಮೆಂಟಾಲಿಟಿಯಿದೆ. ಶ್ರೀಮಂತರನ್ನು ಬಡವರೆಲ್ಲ ಗೇಲಿ ಮಾಡುತ್ತಾ ಜೀವಿಸುತ್ತಾರೆ; ಶ್ರೀಮಂತರು ಕೋಟ್ಯಂತರ ರುಪಾಯಿ ಖರ್ಚು ಮಾಡಿ ಮದುವೆ ಮಾಡುತ್ತಾರೆ. ಮೂರೇ ತಿಂಗಳಲ್ಲಿ ಗಂಡ-ಹೆಂಡತಿ ಬೇರಾಗಿರುತ್ತಾರೆ. ಹೊತ್ತಿಗೆ ಸಾವಿರ ರುಪಾಯಿ ಖರ್ಚುಮಾಡಿ ತಿಂಡಿ ತಿನ್ನುತ್ತಾರೆ; ಮುಂಜಾನೆ ಎದ್ದು ಅದನ್ನು ಕರಗಿಸೋದಕ್ಕೆ ಜಾಗಿಂ್ ಹೊರಡುತ್ತಾರೆ. ತುಂಬ ಕ್ಲೀ್ ಆಗಿರಬೇಕು ಎಂದು ಮಣ್ಣಿನ ಮೇಲೆ ಕಾಲಿಡುವುದೇ ಇಲ್ಲ; ಆದರೆ ವಾರಕ್ಕೊಮ್ಮೆ ಹೋಗಿ ಮೈಗೆಲ್ಲ ಮಣ್ಣು ಮೆತ್ತಿಕೊಂಡು ಥೆರಪಿ ಮಾಡಿಸಿಕೊಳ್ಳುತ್ತಾರೆ. ತಮ್ಮ ಭಾಷೆಯ ಕತೆಗಳನ್ನು ಓದುವುದಿಲ್ಲ, ಸಿನಿಮಾಗಳನ್ನೂ ನೋಡುವುದಿಲ್ಲ. ಆದರೆ ಅದಕ್ಕಿಂತ ಕಳಪೆಯಾದ ಇಂಗ್ಲಿ್ ಧಾರಾವಾಹಿಗಳು ನೋಡಿ ಪೆಕರು ಪೆಕರಾಗಿ ನಗುತ್ತಿರುತ್ತಾರೆ. ಇಂಗ್ಲಿ್ ಮಾತಾಡುವುದು ಗೌರವ ಎಂದು ಭಾವಿಸುತ್ತಾರೆ. ಆದರೆ ಕಕ್ಕಸ್ಸಿನಲ್ಲಿ ಕೂತಾಗ ಮಾತೃಭಾಷೆಯಲ್ಲಿ ದೇವರ ಸ್ಮರಣೆ ಮಾಡುತ್ತಾರೆ.
ಹೀಗೆ ಗೇಲಿ ಮಾಡುವ ಮೂಲಕವೇ ಭಾರತದ ಬಡವರು ತಮ್ಮ ಆರೋಗ್ಯ ಕಾಪಾಡಿಕೊಂಡಿದ್ದಾರೆ ಎನ್ನುವ ಅಂಶವೂ ಆಕೆಯ ಟಿಪ್ಪಣಿಯಲ್ಲಿದೆ. ಡ್ರೀ್‌ಸ ಅ್ಲಿಮಿಟೆ್ ಎನ್ನುವುದು ಭಾರತೀಯರ ಮೂಲಚಿಂತವೆ. ಆಂಧ್ರಪ್ರದೇಶಕ್ಕೋ ಮಹಾರಾಷ್ಟ್ರಕ್ಕೋ ಹೋಗಿ ನೋಡಿದರೆ ಅಲ್ಲಿನ ಮಂದಿ ಕಾಣುವ ಕನಸು ಎಷ್ಟು ಸಿನಿಮೀಯ ಅನ್ನುವುದು ಗೊತ್ತಾಗುತ್ತದೆ. ಸಿನಿಮಾಗಳಲ್ಲಿ ತೀರ ಬಡವನಾದ ನಾಯಕ, ಇದ್ದಕ್ಕಿದ್ದಂತೆ ಶ್ರೀಮಂತ ಹುಡುಗಿಯ ಜೊತೆ ಆಸ್ಟ್ರೇಲಿಯಾದಲ್ಲಿ ಕುಣಿದು ಕುಪ್ಪಳಿಸುವುದು ಕೂಡ ಭಾರತದ ಕನಸುಗಳಲ್ಲಿ ಒಂದು. ಅದಕ್ಕಿಂತ ದೊಡ್ಡ ಕನಸೆಂದರೆ ಬಡವ ಶ್ರೀಮಂತಳನ್ನು ಮದುವೆಯಾಗುವುದು. ಮತ್ತು ಆ ನಂತರ ಆ ಶ್ರೀಮಂತ ಹೆಂಗಸನ್ನು ಪಳಗಿಸಿ ಆಕೆಯೂ ಬಡತನವನ್ನು ಒಪ್ಪಿಕೊಳ್ಳುವಂತೆ ಮಾಡುವುದು.
ಅಂದರೆ ನಮ್ಮ ಒಟ್ಟಾರೆ ಆಶಯ ಏನು? ಶ್ರೀಮಂತರು ಬಡವರಾಗಬೇಕು ಎನ್ನುವುದೇ, ಬಡವರು ಶ್ರೀಮಂತರಾಗಬೇಕು ಎನ್ನುವುದೇ. ಎಲ್ಲರೂ ಸಮಾನರಾಗಬೇಕೇ ಎನ್ನುವುದೇ. ಯಾವುದೇ ಒಂದು ಸಿನಿಮಾದಲ್ಲೋ ಧಾರಾವಾಹಿಯಲ್ಲೋ ಕತೆಯಲ್ಲೋ ಒಬ್ಬ ಬಡವ ಶ್ರೀಮಂತನಾಗುತ್ತಾನೆ, ರ್ರೀಮಂತ ಹುಡುಗಿಯನ್ನು ಮದುವೆಯಾಗುತ್ತಾನೆ. ಆಕೆಯನ್ನು ಬಡವಳನ್ನಾಗಿ ಮಾಡುತ್ತಾನೆ. ಒಳ್ಳೆಯ ಊಟ ಮಾಡುತ್ತಿದ್ದ ಆಕೆಗೆ ಒಣರೊಟ್ಟಿ ತಿನ್ನಿಸುತ್ತಾನೆ, ಒಳ್ಳೆಯ ಉಡುಪು ತೊಡುತ್ತಿದ್ದ ಆಕೆ ಹರಿದ ಬಟ್ಟೆ ತೊಡುತ್ತಾಳೆ. ಪ್ರೇಕ್ಪಕರಿಗೆ ಖುಷಿಯಾಗುತ್ತದೆ. ಅಂದರೆ ಎತ್ತರದಲ್ಲಿದ್ದವರು ತಮ್ಮ ಮಟ್ಟಕ್ಕೆ ಇಳಿದು ಬರಬೇಕು ಅನ್ನುವುದೇ ಭಾರತದ ಮನಸ್ಥಿತಿ.
ಹೀಗೆ ಆಕೆಯ ವಾದ ಸಾಗುತ್ತದೆ. ಇದನ್ನು ಕುತೂಹಲಕ್ಕಾಗಿಯಾದರೂ ಒಂದಷ್ಟು extentionಗಳ ಜೊತೆ ನೋಡುತ್ತಾ ಹೋಗಬಹುದು.
ಭಾರತೀಯ ಸಾಹಿತ್ಯ, ಪುರಾಣ ಮತ್ತು ಜಾನಪದ ಕತೆಗಳ ಒಳಹೊರಗನ್ನೂ ಈಕೆ ಜಾಲಾಡಿದ್ದಾಳೆ. ಇವತ್ತು ಪ್ರಸಾರವಾಗುವ ಧಾರಾವಾಹಿಗಳಿಂದ ಹಿಡಿದು, ಜಾನಪದ ಕತೆಗಳಲ್ಲಿ ಬರುವ ವಿವರಗಳ ತನಕ ಎಲ್ಲದರಲ್ಲೂ ವಿಧಿಯಾಟದ ಬಗ್ಗೆ ಎಲ್ಲರಿಗೂ ನಂಬಿಕೆ. ಮನುಷ್ಯಪ್ರಯತ್ನದ ಬಗ್ಗೆ ಅಂಥ ಗೌರವವೇನಿಲ್ಲ. ಶ್ರೀಮಂತಿಕೆ, ಐಷಾರಾಮದ ಕುರಿತು ಒಂದು ರೀತಿಯ ಹೇವರಿಕೆ. ಐಷಾರಾಮ ಮತ್ತು ಸುಖ ಮನುಷ್ಯನನ್ನು ಕೆಟ್ಟವನ್ನಾಗಿಯೂ ಮೋಕ್ಪದೂರನನ್ನಾಗಿಯೂ ಮಾಡುತ್ತದೆ ಎಂಬ ನಂಬಿಕೆ. ಹೀಗಾಗಿ ಒಳ್ಳೆಯ ಮನೆ, ಕೈತುಂಬ ದುಡ್ಡು, ಸುಂದರ ಹೆಂಡತಿ, ಒಳ್ಳೆಯ ಸಂಸಾರ ಇರುವ ಮನುಷ್ಯ ಇಲ್ಲಿ ಸುಖಿಯಲ್ಲ. ತಾನೇನೋ ಮಾಡಬಾರದ್ದನ್ನು ಮಾಡಿದ್ದೇನೋ ಎಂಬಂತೆ ಚಡಪಡಿಸುತ್ತಿರುತ್ತಾನೆ. ಅದೇ ಹೀನಾಯ ಸ್ಥಿತಿಯಲ್ಲಿರುವವನು ನೆಮ್ಮದಿಯಾಗಿರುತ್ತಾನೆ.
ಇದು ಸರಿಯಾ ತಪ್ಪಾ ಅನ್ನುವುದಾಗಲೀ, ಆಕೆ ಯೋಚಿಸಿದ್ದು ನಮ್ಮ ನಡವಳಿಕೆಗೆ ಹೊಂದುತ್ತದೆಯೋ ಇಲ್ಲವೋ ಅನ್ನುವುದಾಗಲೀ ಮುಖ್ಯವಲ್ಲ. ಇಂಥ ವಿಶ್ಲೇಷಣೆಗಳು ನಮ್ಮನ್ನು ಒಮ್ಮೆ ತಿರುಗಿ ನೋಡುವಂತೆ ಮಾಡುವುದಿಲ್ಲವೇ? ನಮ್ಮ ವರ್ತನೆ ಮತ್ತು ಚಿಂತನೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುವುದಿಲ್ಲವೇ? ಹಾಗೆ ನೋಡಿದರೆ ಆಕೆ ಯೋಚಿಸಿದ್ದೆಲ್ಲ ಸುಳ್ಳಿರಬಹುದು. ಭಾರತೀಯರು ತಮ್ಮ ತಮಾಷೆ ಮಾಡುವ ಗುಣದಿಂದಲೇ ಅಪಾರವಾದ ಮನೋಶಕ್ತಿಯನ್ನು ಪಡಕೊಂಡಿರಬಹುದು. ತಮ್ಮ ನಿರ್ಲಕ್ಷ್ಯ ಮತ್ತು ಉಡಾಫೆಯಿಂದಲೇ ಬದುಕನ್ನು ಅರ್ಥಮಾಡಿಕೊಂಡಿರಬಹುದು. ತಮ್ಮ ದೈನ್ಯ ಮತ್ತು ಕನಸು ಕಾಣುವ ಗುಣದಿಂದಲೇ ಎಲ್ಲವನ್ನೂ ಮೀರುವ ಯತ್ನ ಮಾಡಿರಬಹುದು. ಪುರಾಣಗಳ ಥರ ಎಲ್ಲವನ್ನೂ ಸೃಷ್ಟಿಸಿಕೊಳ್ಳುತ್ತಾ ನಾಶ ಮಾಡುತ್ತಾ ಬದುಕುತ್ತಿರಬಹುದು.
ಯಾರಿಗೆ ಗೊತ್ತು?
ನಮ್ಮ ಶಕ್ತಿ ನಮ್ಮ ಬಡತನದಲ್ಲೂ ದಾಹದಲ್ಲೂ ನಿರಾಕರಣೆಯಲ್ಲೂ ಅನುಕಂಪದಲ್ಲೂ ಅಡಗಿರಬಹುದು.

8 comments:

Anonymous said...

ಐರ್ಲೆಂಡಿನ ಕನ್ನಡಕದಲ್ಲಿ ಭಾರತವನ್ನ ನೋಡಿ ತಿಳಿಯೋಕೆ ಸಾಧ್ಯವಾ?
ಒಮ್ಮೆ ಮೂಲ ಲೇಖನ ಓದಬೇಕಲ್ಲ? ಅದರ ಲಿಂಕ್ ಇದ್ದರೆ ಕೊಡ್ತೀರಾ please?

- ಚೇತನಾ ತೀರ್ಥಹಳ್ಳಿ.

Anonymous said...

ಇದೇ ನಿಟ್ಟಿನಲ್ಲಿ ಬರೆದಿರುವ ಪುಸ್ತಕಗಳು ವಿ. ಎಸ್. ನೈಪಾಲನ ’An area of darkness' ಮತ್ತು ಸುಖೇತು ಮೆಹತಾನ ’Maximum city'
ಒಮ್ಮೆ ಓದಿ ನೋಡಿ.

ನೈಪಾಲ ಮೂರನೇ ತಲೆಮಾರಿನ ಭಾರತೀಯ. ಸುಖೇತು ಮೆಹತಾ ನ್ಯೂಯಾರ್ಕಿಗೆ ಬಂದಾಗ ಆತನಿಗೆ ಹದಿನಾಕು ವರ್ಷ. ಅವರು ಒಂದು ಮಟ್ಟದಲ್ಲಿ ಭಾರತೀಯರಾಗಿಯೇ ಭಾರತವನ್ನು ನೋಡಿದರು.

ನೀವು ಹೇಳಿದ ಹಾಗೆ ಇಂಥ ವಿಶ್ಲೇಷಣೆಗಳು ನಮ್ಮನ್ನು ಒಮ್ಮೆ ತಿರುಗಿ ನೋಡುವಂತೆ ಮಾತ್ರ ಮಾಡಬೇಕು.

ಗುರುಪ್ರಸಾದ

ವಿಕ್ರಮ ಹತ್ವಾರ said...

ಒಪ್ತೀನಿ ಒಪ್ಪಲ್ಲ ಒಪ್ತೀನಿ ಒಪ್ಪಲ್ಲ...
ಇಂಥ ವಿಶ್ಲೇಷಣೆಗಳ ಸಮಸ್ಯೆಯೂ ಇದೇ . ಗಮ್ಮತ್ತೂ ಇದೇ.
ಬಡತನ ನಮ್ಮ ಶಕ್ತಿಯಾಗಿದ್ದ ಕಾಲ ಮುಗಿದುಹೋಯಿತು ಅನಿಸುತ್ತೆ. ಆದ್ದರಿಂದಲೇ ಭಯವಾಗುತ್ತೆ.
ಎಂದಿನಂತೆ ನಿಮಗೊಂದು ಸಲಾಂ!!

suptadeepti said...

ತಪ್ಪು-ಒಪ್ಪುಗಳಿಗಿಂತ, ಹೆಗಲು ಮುಟ್ಟಿಕೊಳ್ಳುವುದಕ್ಕಿಂತ ಹೆಚ್ಚಿನದೇನನ್ನೂ ಮಾಡಬೇಕಾಗಿಯೇ ಇಲ್ಲವೆ ಇಂಥ ಬರಹಗಳಿಗೆ? ಯಾಕೆ ಮಾಡಬೇಕು? ಏನೆಲ್ಲ ಪ್ರಶ್ನೆಗಳನ್ನು ಹುಟ್ಟಿಸುತ್ತವೆ ಇಂಥ ಲೇಖನಗಳು? ನಮಗೂ ಕನ್ನಡಕಗಳಿವೆಯಲ್ಲ!

Keshav Kulkarni said...

ಜೋಗಿ,

ಗುರುಪ್ರಸಾದ್ ಬರೆದಿರುವಂತೆ ಇಂಥ ವಿಶ್ಲೇಷಣೆಗಳು ನಾವು ಒಮ್ಮೆ ತಿರುಗಿ ನೋಡುವಂತೆ ಮಾತ್ರ ಮಾಡಬೇಕು, ಅದಕ್ಕಿಂತ ಹೆಚ್ಚಿನ ಪರಿಣಾಮ ನಮಗೆ ಒಳ್ಳೆಯದಲ್ಲ. ಚಿಕ್ಕ ವಯಸ್ಸಿನಲ್ಲಿ ಅಥವಾ ಹಸಿಹದಯದಲ್ಲಿ ಪಾಶ್ಚಾತ್ಯ ದೇಶಗಳಿಗೆ ಬಂದ ಮೊದಲ ಜನರೇಶನ್ ಭಾರತೀಯಯರಿಗೇ ಭಾರತ ವಿಚಿತ್ರವಾಗಿ ವಿಕಾರವಾಗಿ ಕಾಣಬೇಕಾದರೆ, ಇನ್ನು ಎರಡನೇ ಮೂರನೇ ತಲೆಮಾರಿನ ಭಾರತೀಯರಿಗೆ, ಐರ್ಲಂಡಿನ ಜನಕ್ಕೆ ಹೇಗೆ ಕಾಣಬಹುದೆಂದು ಇಲ್ಲಿ ಸಾಲು ಸಾಲಾಗಿ ಸಿಗುವ ಟ್ರೆವೆಲ್ ಪುಸ್ತಕಗಳನ್ನು ಓದಿದರೆ ಗೊತ್ತಾಗುತ್ತದೆ.

ಕೇಶವ

Arun said...

ಬರೇ ಹದಿನಾರು ತಿಂಗಳು ಭಾರತದಲ್ಲಿದ್ದು ಇಲ್ಲೇ ಹುಟ್ಟಿ ಬೆಳೆದ ನಮಗೆ ಅರ್ಥವಾಗದ ಇಂತದ್ದೊಂದು ಸೂಕ್ಷ್ಮವನ್ನು ಹೀಗೆ ಸಾರ ಸಗಾಟಾಗಿ "ಇದು ಇಷ್ಠೇ" ಅಂಥ ನಿರ್ಧಾರಕ್ಕೆ ಬರುವುದು ಸರಿಯಾ ಸರ್..? ಇದ್ದ ಹದಿನಾರು ತಿಂಗಳಲ್ಲಿ ಅವಳೆಷ್ಟು ಮಂದಿ ಭಾರತೀಯರನ್ನು ನೋಡಿರಬಹುದು..? ಎಷ್ಟು ದೇವಸ್ಥಾನ,ಎಷ್ಟು ಶುದ್ದ ಭಾರತೀಯ ಮನೆಗಳನ್ನು ನೋಡಿರಬಹುದು..? ಅವಳ ಗ್ರಹಿಕೆಗೆ ನಿಲುಕಿದ್ದಷ್ಟನ್ನೆ ಹಿಡಿದು ಪೂರ್ತಿ ಪಾಶ್ಚಾತ್ಯ ಪ್ರಪಂಚದಲ್ಲಿ ಭಾರತದ ಬಗ್ಗೆ ತನ್ನ ಮೂಗಿನ ನೇರಕ್ಕೆ ಬರದು ರಾಡಿಯಾಗಿಸುತ್ತಿರುವುದಕ್ಕೆ ಏನು ಮಾಡುವುದು ..?

Anonymous said...

A fixed vision is always dangerous. It is like a standing water, easily prone to development of unwanted algae. On this ground, her observations should make us think in those directions as well.

It is always good to know what others think about ourselves, neednot buy them fully, though.

D.M.Sagar,Dr.

Anonymous said...

ಐಷಾರಾಮ ಮತ್ತು ಸುಖ ಮನುಷ್ಯನನ್ನು ಕೆಟ್ಟವನ್ನಾಗಿಯೂ ಮೋಕ್ಪದೂರನನ್ನಾಗಿಯೂ ಮಾಡುತ್ತದೆ ಎಂಬ ನಂಬಿಕೆ.:)
she is so right:)
.. atleast what's in this extracted piece.
You simply cannot deny that a keen and sensitive mind can get under a culture's skin in 16 months.
-S