Monday, January 14, 2008

ಕೊನೆಯ ಮಾತುಗಳು ಅವನಿಗೆ ಕೇಳಿಸಲಿಲ್ಲ!

ನನಗೊಂದು ಮನೆ ಬೇಕು. ಊರಿಂದ ಹೊರಗಿದ್ದಷ್ಟೂ ವಾಸಿ, ಆದರೆ ತೀರ ದೂರ ಬೇಡ. ಫೋನ್ ಮಾಡಿದರೆ ಡಾಕ್ಟರ್ ಅರ್ಧಗಂಟೆಯಲ್ಲಿ ಬರುವಂತಿರಬೇಕು. ನಾನೊಬ್ಬನೇ ವಾಸ ಮಾಡುತ್ತೇನಾದ್ದರಿಂದ ತುಂಬ ಹೊರಗಿದ್ದರೆ ಕಳ್ಳರ ಕಾಟ. ಊರೊಳಗಿನ ಗದ್ದಲವೂ ನನಗೆ ಹಿಡಿಸುವುದಿಲ್ಲ. ಅಂಥ ಮನೆಯಿದ್ದರೆ ನೋಡಿ’
ಇಲ್ಲಿ ಮನೆ ಬಾಡಿಗೆಗೆ, ಕ್ರಯಕ್ಕೆ, ಭೋಗ್ಯಕ್ಕೆ ದೊರೆಯುತ್ತದೆ ಅನುಭವ ಬೋರ್ಡು ತಗಲಿಸಿಕೊಂಡ ಆಫೀಸಿನ ಒಳಗೆ ಕುಳಿತಿದ್ದ ಕೃಷ್ಣಮೂರ್ತಿಯ ಹತ್ತಿರ ನಲುವತ್ತು ದಾಟಿದ ಚಕ್ರಪಾಣಿ ಹೀಗೆ ವಿವರಿಸುತ್ತಿರುವ ಹೊತ್ತಿಗೆ ಕೃಷ್ಣಮೂರ್ತಿಯ ಮನಸ್ಸು ತನ್ನ ಪಟ್ಟಿಯಲ್ಲಿರುವ ಮನೆಗಳಿಗೆಲ್ಲ ಮರುಭೇಟಿ ನೀಡುತ್ತಿತ್ತು. ಎದುರಿಗೆ ಕುಳಿತ ಅಪರಿಚಿತ ಚಕ್ರಪಾಣಿಯನ್ನು ಕೃಷ್ಣಮೂರ್ತಿ ಮತ್ತೊಮ್ಮೆ ನೋಡಿದ. ತೆಳ್ಳಗೆ, ಎತ್ತರಕ್ಕಿದ್ದ ಆತ ಅರ್ಧಕ್ಕೇ ಕೆಲಸ ಬಿಟ್ಟು ಬಂದ ಸೈನಿಕನ ಥರ ಕಾಣಿಸುತ್ತಿದ್ದ. ಕಣ್ಣುಗಳಲ್ಲಿ ನಿಶ್ಚಲತೆಯಿತ್ತು. ಮಾತು ಸ್ಪಷ್ಟವಾಗಿತ್ತು. ಯಾವುದನ್ನೂ ಎರಡನೆಯ ಸಾರಿ ಹೇಳಲಾರೆ ಎನ್ನುವ ಸ್ಪಷ್ಟತೆಯೂ ಇತ್ತು.
ಭದ್ರಾವತಿಯಂಥ ಊರಲ್ಲಿ ಅವನು ಯಾಕೆ ಮನೆ ಹುಡುಕುತ್ತಿದ್ದಾನೆ ಅನ್ನುವ ಪ್ರಶ್ನೆಗೆ ಮಾತ್ರ ಕೃಷ್ಣಮೂರ್ತಿಗೆ ಉತ್ತರ ಸಿಕ್ಕಿರಲಿಲ್ಲ. ಅದಕ್ಕೂ ತನಗೂ ಸಂಬಂಧವಿಲ್ಲ ಅಂದುಕೊಂಡು ಆತ ತನ್ನ ಕರಾರುಗಳನ್ನೂ ಸ್ಪಷ್ಟವಾಗಿ ಹೇಳಿದ.
ಮನೆ ತೋರಿಸುತ್ತೇನೆ. ಮೂರು ಮನೆಗಳನ್ನು ತೋರಿಸುವುದಕ್ಕೆ ನೀವು ಹಣ ಕೊಡ?ಕಾಗಿಲ್ಲ. ಆದರೆ ನನ್ನ ಸ್ಕೂಟರಿಗೆ ಪೆಟ್ರೋಲು ಹಾಕಬೇಕು. ಮೂರು ಮನೆಗಳೂ ಇಷ್ಟವಾಗದೇ ಹೋದರೆ ಮತ್ತೊಂದಷ್ಟು ಮನೆ ತೋರಿಸುತ್ತೇನೆ. ಪ್ರತಿಮನೆಗೆ ನೂರು ರುಪಾಯಿ ಕೊಡಬೇಕಾಗುತ್ತದೆ. ನನ್ನ ಕಮಿಷನ್ ಎರಡು ಪರ್ಸೆಂಟ್’.
ಒಪ್ಪಿದೆ. ಪೆಟ್ರೋಲು ಚಾರ್ಜು ಕೊಡುವ ಪ್ರಶ್ನೆಯಿಲ್ಲ. ನನ್ನ ಕಾರಿನಲ್ಲೇ ಹೋಗೋಣ’ ಅಂದ ಚಕ್ರಪಾಣಿ. ಅಲ್ಲಿಗೆ ಮಾತು ಮುಗಿಯಿತು.
ಆವತ್ತು ಸಂಜೆಯಿಂದಲೇ ಮನೆಗಳ ಬೇಟೆ ಶುರುವಾಯಿತು. ಚಕ್ರಪಾಣಿಯ ಕಾರಿನ ಮುಂದಿನ ಸೀಟಲ್ಲಿ ಕುಳಿತುಕೊಂಡು, ಆತ ಒಂದರ ಮೇಲೊಂದರಂತೆ ಸೇದುತ್ತಿದ್ದ ಸಿಗರೇಟಿನ ಹೊಗೆಗೆ ಮುಖ ಕಿವುಚಿಕೊಳ್ಳುತ್ತಾ ಕೃಷ್ಣಮೂರ್ತಿ ಆತನಿಗೆ ಆವತ್ತು ಎರಡು ಮನೆಗಳನ್ನು ತೋರಿಸಿದ. ಚಕ್ರಪಾಣಿಯ ಮುಖದಲ್ಲಿ ತೃಪ್ತಿಯ ಕುರುಹು ಕಾಣಿಸಲಿಲ್ಲ. ಹೀಗೆ ಒಂದು ವಾರದಲ್ಲಿ ಕೃಷ್ಣಮೂರ್ತಿ ತನಗೆ ಗೊತ್ತಿರುವ ಹದಿನೇಳು ಮನೆಗಳನ್ನು ತೋರಿಸಿದಾಗಲೂ ಚಕ್ರಪಾಣಿ ಯಾವುದನ್ನೂ ಇಷ್ಟಪಡಲಿಲ್ಲ. ಇಷ್ಟಪಡದೇ ಇರುವುದಕ್ಕೆ ಕಾರಣಗಳನ್ನೂ ಕೊಡಲಿಲ್ಲ ಆತ.
ಆತ ಮನೆ ಕೊಳ್ಳಲಿಕ್ಕೇ ಬಂದಿದ್ದಾನಾ? ಅವನಿಗೆಂಥ ಮನೆ ಬೇಕು ಅನುಭವ ಅನುಮಾನ ಮತ್ತು ಪ್ರಶ್ನೆ ಕೃಷ್ಣಮೂರ್ತಿಯ ಮನಸ್ಸಿನಲ್ಲಿ ಏಳನೆಯ ಸಂಜೆ ಉದ್ಭವವಾಯಿತು. ಅದನಿ?ಗ ಕೇಳಿಯೇ ಬಿಡ?ಕು ಅನು?ವ ನಿರ್ಧಾರ ಕೃಷ್ಣಮೂರ್ತಿಯ ಮನಸ್ಸಿನಲ್ಲಿ ಹರಳುಗಟ್ಟುವ ಹೊತ್ತಿಗೆ ಅವರು ಕಡೂರು-ಭದ್ರಾವತಿ ರಸ್ತೆಯಲ್ಲಿ ವಾಪಸ್ಸು ಬರುತ್ತಿದ್ದರು. ಕೃಷ್ಣಮೂರ್ತಿ ಬಾಯಿತೆರೆಯಬೇಕು ಅನುವವಷ್ಟರಲ್ಲಿ ಚಕ್ರಪಾಣಿ ಕಾರು ನಿಲ್ಲಿಸಿದ. ಕೃಷ್ಣಮೂರ್ತಿಯ ಕಣ್ಣಲ್ಲಿ ಮೂಡಿದ ಪ್ರಶ್ನಾರ್ಥಕ ಚಿನ್ಹೆ ಮಾತಾಗುವ ಮುಂಚೆಯೇ ಎಡಕ್ಕೆ ಕೈ ತೋರಿಸಿ ಕೇಳಿದ: ಇಂಥ ಮನೆ ಬೇಕು ನನಗೆ’.
ಅವನು ಕೈ ತೋರಿಸಿದ ಮನೆಯತ್ತ ನೋಡಿದ ಕೃಷ್ಣಮೂರ್ತಿ. ಅದೊಂದು ಹಳೆಯ ಕಾಲದ ಮನೆ. ಕೃಷ್ಣಮೂರ್ತಿಗೆ ಗೊತ್ತಿದ್ದದ್ದೇ. ಅರ್ಧ ಎಕರೆ ಜಾಗದಲ್ಲಿ ಕಟ್ಟಿದ್ದ ದೊಡ್ಡ ಮನೆ ಅದು. ಮನೆಗೆ ಸುತ್ತಲೂ ಮರದ ಬೇಲಿಯಿತ್ತು. ಅದು ಗೆದ್ದಲು ಹಿಡಿದು ಕುಂಬಾಗಿತ್ತು. ಮನೆ ಕೂಡ ಸುಸ್ಥಿತಿಯಲ್ಲಿರಲಿಲ್ಲ. ಆ ಮನೆಯೂ ಕೃಷ್ಣಮೂರ್ತಿಯ ಪಟ್ಟಿಯಲ್ಲಿತ್ತು. ಕೃಷ್ಣಮೂರ್ತಿ ಒಬ್ಬನೇ ಅಲ್ಲ, ಭದ್ರಾವತಿಯ ಎಲ್ಲಾ ರಿಯಲ್ ಎಸ್ಟೇಟ್ ಏಜಂಟರ ಪಟ್ಟಿಯಲ್ಲೂ ಆ ಮನೆಯಿತ್ತು. ಆದರೆ ಅವನು ಅದನು? ಇದುವರೆಗೂ ಯಾರಿಗೂ ತೋರಿಸಿರಲಿಲ್ಲ.
ಆ ಮನೆ ನಿಮಗೆ ಆಗೋದಿಲ್ಲ ಬಿಡಿ’ ಅಂದ ಕೃಷ್ಣಮೂರ್ತಿ. ಯಾಕೆ ಅನ್ನುವ ಪ್ರಶ್ನೆ ಚಕ್ರಪಾಣಿಯ ಹುಬ್ಬಿನಲ್ಲಿ ಪ್ರತ್ಯಕ್ಷವಾಯಿತು.
ಅಯ್ಯೋ ಬಿಡಿ ಸಾರ್. ಅದು ಸುಭದ್ರಮ್ಮ ಎಂಬ ಮುದುಕಿಯ ಮನೆ. ಅದನ್ನವಳು ಮಾರಬೇಕು ಅಂತಿದ್ದಾಳೆ. ಭದ್ರಾವತಿಯ ಎಲ್ಲಾ ಎಸ್ಟೇಟ್ ಏಜಂಟರಿಗೂ ಹೇಳಿದ್ದಾಳೆ. ತಲೆ ಕೆಟ್ಟ ಘಾಟಿ ಮುದುಕಿ ಅದು. ಮೂವತ್ತು ಲಕ್ಷ ಹೇಳ್ತಿದ್ದಾಳೆ. ಆ ಮನೆಯನ್ನು ನೀವು ಹತ್ತು ಲಕ್ಷಕ್ಕೂ ತೆಗೆದುಕೊಳ್ಳೋದಿಲ್ಲ’ ಅಂದ ಕೃಷ್ಣಮೂರ್ತಿ.
ಆಕೆ ಎಷ್ಟಾದರೂ ಹೇಳಲಿ. ಮಾರಬೇಕು ಅಂದುಕೊಂಡಿದ್ದರೆ ಮಾತುಕತೆಗೆ ಕೂತು ರೇಟು ನಿಗದಿ ಮಾಡೋಣಂತೆ’ ಅಂದ ಚಕ್ರಪಾಣಿ. ಚೌಕಾಸಿ ಇಲ್ಲ ಅಂದುಬಿಟ್ಟಿದ್ದಾಳೆ ಅವಳು. ಹೇಳಿದ್ನಲ್ಲ. ಒಂಥರ ತಿಕ್ಕಲು ಅವಳು. ಮೂವತ್ತು ಲಕ್ಷಕ್ಕಿಂತ ನೂರು ರುಪಾಯಿ ಕಡಿಮೆಗೂ ಒಪ್ಪೋಲ್ಲ ಆಕೆ’ ಅಂದ ಕೃಷ್ಣಮೂರ್ತಿ. ಅದನ್ನು ತೋರಿಸುವ ಆಸಕ್ತಿಯೇ ಅವನಿಗೆ ಇರಲಿಲ್ಲ.
ಬನ್ನಿ, ಮಾತಾಡೋಣ. ಮನೆ ಚೆನ್ನಾಗಿದೆ. ನನಗಿಂತ ಹಳೆಯ ಮನೆಯೇ ಇಷ್ಟ’ ಎಂದು ಚಕ್ರಪಾಣಿ ಮನೆಯನ್ನೊಮ್ಮೆ ನೋಡಿದ. ಹಳೇ ಕಾಲದ, ಬಂಗಲೆಯಂಥ ಮನೆ. ಮಹಡಿ, ಬಿಸಿಲುಮಚ್ಚು ಎಲ್ಲವೂ ಇದ್ದ ಆ ಮನೆ ಒಂದು ಕಾಲದಲ್ಲಿ ಯಾರೋ ಬ್ರಿಟಿಷ್ ಅಧಿಕಾರಿಗೆ ಸೇರಿದ್ದ ಮನೆಯಾಗಿರಬೇಕು ಅಂದುಕೊಂಡ ಚಕ್ರಪಾಣಿ. ರಿಪೇರಿ ಮಾಡಿಸಿದರೆ ಅದೊಂದು ಕಲಾತ್ಮಕವಾದ ಮನೆಯಾಗುವುದರಲ್ಲಿ ಸಂದೇಹವೇ ಇಲ್ಲ’ ಎಂದು ಕೃಷ್ಣಮೂರ್ತಿಯ ಮುಖ ನೋಡಿದ. ಬನ್ನಿ, ಮಾತಾಡೋಣ’ ಎಂದು ಕರೆದ.
ಕೃಷ್ಣಮೂರ್ತಿ ಸುತರಾಂ ಒಪ್ಪಲಿಲ್ಲ. ನಾನು ಆ ಮುದುಕಿ ಮುಖ ನೋಡೋದಕ್ಕೂ ಇಷ್ಟಪಡೋಲ್ಲ. ಬೇಕಿದ್ದರೆ ನೀವು ಮಾತಾಡಿಕೊಂಡು ಬನ್ನಿ. ಅದರಿಂದ ಬರುವ ಕಮಿಷನ್ನೂ ನನಗೆ ಬೇಕಾಗಿಲ್ಲ’ ಅಂದ ಕೃಷ್ಣಮೂರ್ತಿ. ಆ ಮುದುಕಿ ಮನೆ ಮಾರುವುದಿಲ್ಲ ಅನ್ನುವುದು ಅವನಿಗೆ ಖಾತ್ರಿಯಾಗಿತ್ತು.
******
ಮಾರನೇ ದಿನ ಹತ್ತು ಗಂಟೆಗೆ ಚಕ್ರಪಾಣಿ, ಸುಭದ್ರಮ್ಮ ಮುಂದೆ ಕೂತಿದ್ದ. ಸುಭದ್ರಮ್ಮ ಘಾಟಿ, ಹಠಮಾರಿ ಅನ್ನುವುದು ಅವಳ ನಿಲುವಿನಿಂದಲೇ ಚಕ್ರಪಾಣಿಗೆ ಅರ್ಥವಾಯಿತು. ಮನೆ ಕೊಳ್ಳಲು ಬಂದಿದ್ದೇನೆ ಅಂತ ಹೇಳಿದ ತಕ್ಷಣ ಆಕೆ ಕೇಳಿದ್ದು ಬೆಲೆ ಎಷ್ಟೆಂದು ಗೊತ್ತಲ್ಲ’ ಎಂದು. ತಲೆಯಾಡಿಸಿ ಒಳಗೆ ಬಂದಿದ್ದ ಚಕ್ರಪಾಣಿ.
ಸುಭದ್ರಮ್ಮ ಮಾತಾಡಿದಳು. ಚೌಕಾಸಿ ಮಾಡುವುದಾದರೆ ಮಾತಾಡುವ ಅಗತ್ಯ ಇಲ್ಲ. ನಾನು ಮನೆಯನ್ನು ತೋರಿಸುವುದೂ ಇಲ್ಲ. ಕಂತಾಗಿ ಹಣ ಕೊಡುತ್ತೇನೆ, ಒಪ್ಪಂದ ಮಾಡಿಕೊಳ್ಳೋಣ ಅಂತಾದರೆ ನನಗೆ ಆಸಕ್ತಿಯಿಲ್ಲ. ಮೂವತ್ತು ಲಕ್ಷ ಕೊಟ್ಟು ಮನೆ ಕೊಂಡುಕೊಳ್ಳ?ಕು ಅಷ್ಟೇ’.
ಚಕ್ರಪಾಣಿ ತನೆ?ಲ್ಲ ಚಾಕಚಕ್ಯತೆಯನ್ನೂ ಬಳಸುತ್ತಾ ಮಾತಿಗಿಳಿದ. ನಾನೊಬ್ಬನೇ ಇರೋದು, ಹೆಂಡತಿ ತೀರಿಕೊಂಡಳು ಮಕ್ಕಳು ವಿದೇಶದಲ್ಲಿದ್ದಾರೆ. ಒಂಟಿತನ ಕಿತ್ತು ತಿನ್ನುತ್ತಿದೆ. ಕೊನೆಯ ವರುಷಗಳನ್ನು ಹೀಗೆ ಪರವೂರಲ್ಲಿ
ಕಳೆಯುವ ಆಶೆ’ ಎಂದು ಕೊಂಚ ಭಾವನಾತ್ಮಕವಾಗಿ ಮಾತಾಡಿದ. ಆದ್ದರಿಂದ ಬೆಲೆ ಕಡಿಮೆ ಮಾಡಿಕೊಳ್ಳಿ ಅಂದ.
ಸುಭದ್ರಪ್ಪ ಅದ್ಯಾವುದಕ್ಕೂ ಜಗ್ಗಲಿಲ್ಲ. ಚೌಕಾಸಿ ಮಾಡುವುದಾದರೆ ನೀವಿನ್ನು ಹೊರಡಬಹುದು’ ಎಂದು ಎದ್ದು ನಿಂತಳು. ಅವಳ ಮೇಲೆ ಕೆಂಡಾಮಂಡಲ ಸಿಟ್ಟು ಬಂತು ಚಕ್ರಪಾಣಿಗೆ. ಆದರೆ ಮನೆ ಅವನಿಗೆ ಇಷ್ಟವಾಗಿತ್ತು. ತನ್ನ ಮೊಂಡು ಹಠ ಅವಳು ಬಿಡುವುದಿಲ್ಲ ಅನ್ನುವುದೂ ಖಾತ್ರಿಯಾಯಿತು. ಸರಿ, ಒಪ್ಪಿಗೆ’ ಅಂದುಬಿಟ್ಟ ಚಕ್ರಪಾಣಿ. ಸುಭದ್ರಮ್ಮನ ಮುಖದಲ್ಲಿ ಮಂದಹಾಸ ಸುಳಿಯಿತು. ಮಾತಿನ ವರಸೆಯೇ ?ದಲಾಯಿತು.
ಕೂತ್ಕೊಳ್ಳಿ. ಮೂವತ್ತು ಲಕ್ಷ. ಒಂದೇ ಸಾರಿ ಕೊಡಬೇಕು, ಒಪ್ಪಿಗೆ ತಾನೇ’ ಅಂತ ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಕೇಳಿದಳು ಸುಭದ್ರಮ್ಮ. ಮಾತು ಕೊಟ್ಟ ಮೇಲೆ ಮುಗೀತು. ಈ ವಾರವೇ ವ್ಯವಹಾರ ಮುಗಿಸೋಣ’ ಎನ್ನುತ್ತಾ ಚಕ್ರಪಾಣಿ ಒಂದು ಲಕ್ಷ ರುಪಾಯಿ ಅವಳ ಮುಂದಿಟ್ಟ.
ದುಡ್ಡು ನೋಡುತ್ತಲೇ ಸುಭದ್ರಮ್ಮನ ಮುಖ ಅರಳಿತು. ತಾನು ನೋಡಿದ ಗಂಟು ಮುಖದ ಮುದುಕಿ ಇವಳೇನಾ ಎಂದು ಚಕ್ರಪಾಣಿ ಅಚ್ಚರಿಪಡುವಷ್ಟು ಆಕೆ ಬದಲಾದಳು. ಇರಿ, ಕಾಫಿ ತರ್ತೀನಿ’ ಅಂದಳು. ಕಾಫಿ ಬೇಡ, ತುಂಬ ಸೆಕೆ. ಲಿಂಬೆ ಪಾನಕ ತರುತ್ತೇನೆ’ ಎಂದು ಎದ್ದು ಹೋದಳು.
ಚಕ್ರಪಾಣಿ ಮನೆಯನ್ನೊಮ್ಮೆ ಗಮನಿಸಿದ. ದೊಡ್ಡ ಮನೆ, ಸಣ್ಣಸಣ್ಣ ರೂಮುಗಳು. ಎಷ್ಟೋ ಕೋಣೆಗಳ ಬಾಗಿಲು ತೆಗೆಯದೇ ಯಾವುದೋ ಕಾಲವಾದಂತಿತ್ತು. ಎದ್ದು ಗೋಡೆಯ ಪಕ್ಕಕ್ಕಿದ್ದ ಮೇಜಿನ ಮೇಲೆ ಕೈಯಿಟ್ಟ. ಮೇಜು ಕಿರುಗುಟ್ಟಿತು. ಚಕ್ರಪಾಣಿ ಕೈಗೆ ಧೂಳು ಮೆತ್ತಿಕೊಂಡಿತ್ತು. ಈ ಮನೆಗೆ ಮೂವತ್ತು ಲಕ್ಷ ಕೊಟ್ಟದ್ದು ಗೊತ್ತಾದರೆ ಎಲ್ಲರೂ ತನ್ನ ಅವಿವೇಕವನ್ನು ಎಷ್ಟು ಆಡಿಕೊಂಡು ನಗಬಹುದು ಎಂದು ಯೋಚಿಸುತ್ತದ್ದಂತೆ ಮುದುಕಿ ಪಾನಕದೊಂದಿಗೆ ಪ್ರತ್ಯಕ್ಷವಾದಳು.
*****
ಸುಡುಬೇಸಗೆಯ ನಡು ಹೊತ್ತಲ್ಲಿ ತಣ್ಣಗಿನ ಪಾನಕ ಹೀರಿ ಸುಖಿಸುತ್ತಾ ಚಕ್ರಪಾಣಿ ಅವಳ ಮುಖ ನೋಡಿದ. ಸುಭದ್ರಮ್ಮ ಮತ್ತೆ ಮುಗುಳ್ನಕ್ಕಳು.
ಈ ಮನೆಗೆ ಮೂವತ್ತು ಲಕ್ಷ ದುಬಾರಿ ಅಂತ ನನಗೆ ಗೊತ್ತಿದೆ. ಇದನ್ನು ಯಾರೂ ಕೊಳ್ಳುವುದಕ್ಕೆ ಬರುವುದಿಲ್ಲ ಅನ್ನುವುದೂ ನನಗೆ ಗೊತ್ತಿತ್ತು. ನನಗೆ ಈ ಮನೆಯನ್ನು ಮಾರುವುದಕ್ಕೆ ಮನಸ್ಸಿರಲಿಲ್ಲ. ಅದಕ್ಕೆ ಅಷ್ಟೊಂದು ಬೆಲೆ ಹೇಳುತ್ತಿದ್ದೆ. ಈ ಮನೆಯ ಜೊತೆ ನನ್ನ ನೆನಪುಗಳಿವೆ’ ಅಂದಳು ಸುಭದ್ರಮ್ಮ. ಚಕ್ರಪಾಣಿ ಕುತೂಹಲದಿಂದ ಕೇಳಿಸಿಕೊಂಡ.
ನಾನೊಬ್ಬಳೇ ಕಳೆದ ಹನ್ನೊಂದು ವರುಷಗಳಿಂದ ಈ ಮನೆಯಲ್ಲಿದ್ದೇನೆ. ನನ್ನ ಮಗ ಒಂಬತ್ತು ವರುಷದ ಹಿಂದೆ ಮನೆಬಿಟ್ಟು ಹೋದ. ಪೋಲಿ ಬಿದ್ದು ಹೋಗಿದ್ದ. ಎಲ್ಲಿಗೆ ಹೋಗಿದ್ದನೋ ಗೊತ್ತಿಲ್ಲ, ಒಂಭತ್ತು ವರುಷದ ಹಿಂದೆ ಮರಳಿ ಬಂದ’ ಮುದುಕಿ ಕಣ್ಣೊರೆಸಿಕೊಂಡಳು. ಚಕ್ರಪಾಣಿ ಸುಮ್ಮನಿದ್ದ. ಮಗ ಎಲ್ಲಿದ್ದಾನೆ ಈಗ ಎಂಬ ಪ್ರಶ್ನೆಯೊಂದಿಗೆ ಅವನ ಕಣ್ಣುಗಳು ಮನೆಯನ್ನೊಮ್ಮೆ ಸ್ಕಾನ್ ಮಾಡಿದವು.
ಅವನಿಲ್ಲ. ಮನೆಗೆ ಬರುವ ಹೊತ್ತಿಗೆ ಅವನೊಂದಿಗೆ ಒಂದು ದೊಡ್ಡ ಚೀಲ ಇತ್ತು. ಅದರಲ್ಲೇನಿದೆ ಅಂತ ನಾನು ಕೇಳುವುದಕ್ಕೆ ಹೋಗಲಿಲ್ಲ. ಅಂತೂ ವಾಪಸ್ಸು ಬಂದನಲ್ಲ ಅನ್ನೋ ಸಂತೋಷದಲ್ಲಿ ನಾನಿದ್ದೆ. ಆದರೆ ಆ ಸಂತೋಷ ತುಂಬ ದಿನ ಉಳಿಯಲಿಲ್ಲ.’ ಮುದುಕಿ ಕಣ್ಣೊರೆಸಿಕೊಂಡಳು.
ಏನಾಯ್ತು’ ಚಕ್ರಪಾಣಿ ಕೇಳಿದ.
ಮಗ ಮನೆಗೆ ಬಂದ ನಾಲ್ಕನೆಯ ರಾತ್ರಿ ಒಬ್ಬ ಅಪರಿಚಿತ ಮನೆಗೆ ಬಂದ. ನನ್ನ ಮಗ ಅವನನ್ನು ಕರೆದುಕೊಂಡು ಕೋಣೆಗೆ ಹೋದ. ಒಳಗೆ ಇಬ್ಬರೂ ಏರುದನಿಯಲ್ಲಿ ಮಾತಾಡುವುದು ಕೇಳಿಸಿತು. ಆ ಮಾತು ಕ್ರಮೇಣ ತಾರಕಸ್ಥಾಯಿಗೆ ಹೋಯಿತು. ಆ ಧ್ವನಿ ನಿಂತದ್ದು ಗುಂಡಿನ ಸದ್ದಿನಿಂದ. ನಾನು ಮಲಗುವ ಕೋಣೆಯಿಂದ ಎದ್ದು ಬಂದು ನೋಡುವ
ಹೊತ್ತಿಗೆ ನನ್ನ ಮಗನ ಕೋಣೆಯ ಬಾಗಿಲು ತೆರೆದಿತ್ತು. ಅಪರಿಚಿತ ಮಾಯವಾಗಿದ್ದ. ನನ್ನ ಮಗ ಸತ್ತು ಬಿದ್ದಿದ್ದ’
ಅಯ್ಯೋ ದೇವರೇ’ ಚಕ್ರಪಾಣಿ ಅಯಾಚಿತವಾಗಿ ಉಸುರಿದ.
ಪೊಲೀಸರು ಬಂದರು. ತನಿಖೆ ನಡೆಸಿದರು. ನನ್ನ ಮಗ ತನ್ನ ಗೆಳೆಯನ ಜೊತೆ ಸೇರಿ ರಾಜಮನೆತನಕ್ಕೆ ಸೇರಿದ ಮುದುಕಿಯೊಬ್ಬಳನ್ನು ಕೊಂದು ಅವಳ ಖಜಾನೆಯಿಂದ ಹತ್ತು ಕೋಟಿ ಬೆಲೆ ಬಾಳುವ ಬಂಗಾರ ದೋಚಿದ್ದರು ಅನ್ನುವುದು ಗೊತ್ತಾಯಿತು. ಆವತ್ತು ಬಂದವನು ಅವರಲ್ಲೊಬ್ಬ. ಇಬ್ಬರಿಗೂ ಹಂಚಿಕೆ ವಿಚಾರದಲ್ಲಿ ಜಗಳ ಆಗಿ ನನ್ನ ಮಗನನ್ನು ಕೊಂದಿದ್ದ ಅವನು. ಅವನಿನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಅವನು ಕದ್ದ ಬಂಗಾರದೊಂದಿಗೆ ಓಡಿ ಹೋಗಿದ್ದಾನೆ ಅಂತ ಪೊಲೀಸರು ಅಂದುಕೊಂಡಿದ್ದಾರೆ. ಆದರೆ ನನ್ನ ಮಗ ಆ ಬಂಗಾರವನ್ನು ಈ ಮನೆಯಲ್ಲೇ ಎಲ್ಲೋ ಅಡಗಿಸಿಟ್ಟಿದ್ದಾನೆ ಅಂತ ನನಗೆ ಗೊತ್ತಿತ್ತು. ಅದೆಲ್ಲಿದೆ ಅಂತ ನನಗೆ ಗೊತ್ತಿಲ್ಲ. ನಾನು ಹುಡುಕುವುದಕ್ಕೂ ಹೋಗಲಿಲ್ಲ. ಆದರೆ ಈ ಮನೆಯೊಳಗೇ ಇದೆ ಅನ್ನುವುದರಲ್ಲಿ ಅನುಮಾನ ಇಲ್ಲ’.
ಚಕ್ರಪಾಣಿ ಕಣ್ಣು ಕುತೂಹಲದಿಂದ ಕಿರಿದಾದವು. ಕತೆ ಕೇಳಿ ಅವನು ಸುಸ್ತಾದಂತೆ ಕಾಣಿಸಿದ. ಏನೋ ಹೇಳಲು ಯತ್ನಿಸಿದ. ಮಾತು ಹೊರಬರಲಿಲ್ಲ.
ಆ ಸತ್ಯ ನನ್ನ ಮಗನನ್ನು ಕೊಂದ ಅಪರಿಚಿತನಿಗೂ ಗೊತ್ತು. ಅವನು ಒಂದಲ್ಲ ಒಂದು ದಿನ ಅದನ್ನು ಹುಡುಕಿಕೊಂಡು ಇಲ್ಲಿಗೆ ಬರುತ್ತಾನೆ ಅನುವುದು ನನಗೆ ಗೊತ್ತಿತ್ತು. ಅದಕ್ಕೆ ಈ ಮನೆಗೆ ಯಾರೂ ಕೊಳ್ಳಲಾಗದಷ್ಟು ಬೆಲೆ ಇಟ್ಟಿದ್ದೆ. ಹತ್ತು ಕೋಟಿ ಬಂಗಾರ ಇರುವ ವಿಚಾರ ಗೊತ್ತಿರುವ ಆ ಕೊಲೆಗಾರ ಇದನ್ನು ಕೊಳ್ಳುತ್ತಾನೆ ಅನ್ನುವುದರಲ್ಲಿ ನನಗೆ ಅನುಮಾನವೇ ಇರಲಿಲ್ಲ’
ಚಕ್ರಪಾಣಿ ಕುರ್ಚಿಯಲ್ಲಿ ಹಿಂದಕ್ಕೆ ಒರಗಿದ. ಯಾಕೋ ತಲೆ ಸುತ್ತಿದಂತಾಯಿತು. ಮುದುಕಿ ಅಸ್ಪಷ್ಟವಾಗಿ ಕಾಣಿಸತೊಡಗಿದಳು. ತುಟಿ ಮರಗಟ್ಟಿದಂತಾಗಿ ನಿಧಾನವಾಗಿ ಕೈಯೆತ್ತಿ ತುಟಿ ಸವರಿಕೊಂಡ. ನೀರು, ದಾಹ’ ಅಂದ.
ಮುದುಕಿ ನಕ್ಕಳು.
ನೀನೀಗ ಬಂದಿದ್ದೀಯಾ. ನನ್ನ ಮಗನನ್ನು ಕೊಂದವನ ಮೇಲೆ ನಾನು ಸೇಡು ತೀರಿಸಿಕೊಳ್ಳಬೇಕಾಗಿತ್ತು. ತೀರಿಸಿಕೊಂಡೆ. ನೀನೀಗ ಕುಡಿದ ಪಾನಕದಲ್ಲಿ ವಿಷ ಬೆರೆಸಿದ್ದೆ’ ಅಂದಳು.
ಚಕ್ರಪಾಣಿಗೆ ಕೊನೆಯ ಮಾತುಗಳು ಕೇಳಿಸಲಿಲ್ಲ.

ಟಿಪ್ಪಣಿ
ಇದನ್ನು ಬರೆದ ಇಂಗ್ಲಿಷ್ ಕತೆಗಾರನ ಹೆಸರು ನೆನಪಿಲ್ಲ. ಇದನು? ಸುಮೂರು ಇಪ್ಪತೈದು ವರುಷಗಳ ಹಿಂದೆಯೇ ಯಾರೋ ಕನ್ನಡಕ್ಕೆ ಅನುವಾದಿಸಿದ್ದರು.

7 comments:

Anonymous said...

ಪ್ರಿಯ ಜೋಗಿ ಸರ್,
ಬಹುಶಃ 20 ವರ್ಷಗಳ ಹಿಂದೆ ಅನಿಸುತ್ತೆ. ನನ್ನ ತಂತೆ ತರಿಸುತ್ತಿದ್ದ 'ಮಯೂರ'ದಲ್ಲಿ ಈ ಕಥೆಯನ್ನು ಓದಿದ ನೆನಪು... ಸ್ನೇಹಿತ ಆರ್.ವಿ.ಕಟ್ಟೀಮನಿ (ತಡಕಲ್) ಅವರೊಂದಿಗೆ ಹೀಗೆಯೇ ಮಾತನಾಡುತ್ತಿದ್ದಾಗ ಅವರು ಈ ಕಥೆಯನ್ನು ಪ್ರಸ್ತಾಪ ಮಾಡಿ, ಸಾರಾಂಶ ಹೇಳಿದ್ದರು. ಅವರಿಗೂ ಕಥೆಗಾರನ ಹೆಸರು ಗೊತ್ತಿರಲಿಲ್ಲ.
ನಂತರ ಇದೇ ವಸ್ತು ಇಟ್ಟುಕೊಂಡು ತುಸು ಪರಿವರ್ತಿಸಿ ಕಥೆಯೊಂದನ್ನು ಕಟ್ಟೀಮನಿ ಬರೆದರು. ಅದು 'ಸಂಯುಕ್ತ ಕರ್ನಾಟಕ'ದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಯಿತು. ಅಚ್ಚರಿ ಎಂದರೆ ಓದುಗರೊಬ್ಬರು ಪತ್ರ ಬರೆದು, ಇದೇ ತೆರನಾದ ಇಂಗ್ಲಿಷ್ ಕಥೆಯ ಅನುವಾದ ಹಿಂದೊಮ್ಮೆ ಪ್ರಕಟವಾಗಿದೆ ಎಂದು ಹೇಳಿ, ಅದರ ಸಾರಾಂಶವನ್ನು ಒಂದು ಪುಟದಲ್ಲಿ ವಿವರಿಸಿದ್ದರು!
ನೀವು ಬರೆದ ಕಥೆ ಓದಿದಾಗ ಇದೆಲ್ಲ ನೆನಪಾಯಿತು.
ಥ್ಯಾಂಕ್ಸ್
- ಆತೀಪಿ, ಗುಲ್ಬರ್ಗ

ಎಂ ಎಸ್ ತಿಪ್ಪಾರ said...

tumba chennagide sir...

Arun said...

:-)

ಶಾಂತಲಾ ಭಂಡಿ said...
This comment has been removed by the author.
ಶಾಂತಲಾ ಭಂಡಿ said...

ಪ್ರೀತಿಯ ಜೋಗಿ ಅವರೆ...

ಕತೆ ಮನದಲ್ಲಿ ಉಸಿರಾಡದೆ ನಿಂತುಬಿಟ್ಟಿತು. ಪ್ರಶ್ನೆಗಳು ಕಾಡಿದವು.ಕೊಲೆಗಾರನಿಗೇ ಶಿಕ್ಷೆಯಾಯ್ತಾ ಅಥ್ವಾ ಅಮಾಯಕನಿಗಾ? ಉತ್ತರ ಸಿಗದೆ ನಿಮ್ಮ ಮೊರೆ ಹೊಕ್ಕಿದೆ.

ನೀವು ಓದಿದ ಒಳ್ಳೆಯ ಕಥೆಯನ್ನು ಎಂದಿನಂತೆ ಸುಂದರವಾಗಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

NADIPREETI said...

ಪ್ರಿಯ ಜೋಗಿ
ಕಥೆ ಇಷ್ಟವಾಯ್ತು. ನಿರೂಪಣೆ ಸಹ ಸೂಪರ್. ಒಳ್ಳೆ ಕಥೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.

ರವಿ ಅಜ್ಜೀಪುರ

Seema said...

ಪ್ರಿಯ ಜೋಗಿ ಅವರೇ,
ನಮಸ್ಕಾರ. ಕಥೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು.
ಮುದುಕಿ ಹಿಂದೆ ಮುಂದೆ ವಿಚಾರ ಮಾಡದೇ ವಿಷ ಹಾಕಿಬಿಟ್ಟಳೇನೋ.
ಯಾರಿಗೋ ಬೀಳಬೇಕಾಗಿದ್ದ ವಿಷ ಇನ್ಯಾರಿಗೋ ಬಿತ್ತಾ ಎಂಬ ಅನುಮಾನ ಕಾಡುತ್ತಿದೆ.
ಉಹೂಂ... ಎಷ್ಟು ವಿಚಾರ ಮಾಡಿದರೂ ಬಗೆಹರಿಯುತ್ತಿಲ್ಲ.