Friday, January 11, 2008

ಮೊನ್ನೆ ಆಕಸ್ಮಿಕವಾಗಿ ಆಕಾಶ ಕಣ್ಣಿಗೆ ಬಿದ್ದು..

ಆಕಾಶ ನೋಡುವುದಕ್ಕೆ ನೂಕುನುಗ್ಗಲೇ ಎನ್ನುವ ಗಾದೆಯೊಂದು ಚಾಲ್ತಿಯಲ್ಲಿದೆ. ಅದರ ಅರ್ಥ ಆಕಾಶ ವಿಶಾಲವಾಗಿದೆಯೆಂದೋ ಅದನ್ನು ನೋಡುವುದೂ ಅಂಥ ವಿಶೇಷ ಅಲ್ಲವೆಂದೂ ಆಕಾಶವನ್ನು ಯಾರು ಯಾವಾಗ ಬೇಕಾದರೂ ನೋಡಬಹುದೆಂದೂ ಇರಬಹುದು. ಈ ಮಾತಿನಲ್ಲಿ ಆಕಾಶದ ಬಗ್ಗೆ ನಮಗೆಷ್ಟು ಕೀಳುಭಾವನೆ ಇದೆ ಅನ್ನುವುದೂ ಗೊತ್ತಾಗುತ್ತದೆ. ಆಕಾಶ ನೋಡುವುದು ನಮ್ಮ ಮಟ್ಟಿಗೆ ಒಂದು ಅರ್ಥಹೀನ ಕ್ರಿಯೆ. ತಲೆಯೆತ್ತಿ ನೋಡಿದರೆ ಆಕಾಶ ಕಾಣುತ್ತದೆ ಎಂಬಲ್ಲಿಗೆ ಮುಗೀತು.
ಆಕಾಶ ಒಂದು ಬೋಧಿವೃಕ್ಪ. ನನಗೆ ಸುದ್ದಿ ಕೊಡೋದು ಆ ಆಕಾಶ ಅನ್ನುವ ಅರ್ಥ ಬರುವ ಸಾಲೊಂದನ್ನು ತಮಿಳು ಚಿತ್ರಕವಿ ವೈರಮುತ್ತು ಬರೆದಿದ್ದರು. ನಾವು ಏನೂ ಹೊಳೆಯದಿದ್ದಾಗ ಆಕಾಶ ನೋಡುತ್ತೇವೆ. ಗೊತ್ತಿಲ್ಲದ ಪ್ರಶ್ನೆ ಎದುರಾದಾಗ ಆಕಾಶ ನೋಡುತ್ತೇವೆ. ಗೊತ್ತಿಲ್ಲದ ವ್ಯಕ್ತಿಯಾದ ದೇವರ ಪ್ರಸ್ತಾಪ ಬಂದಾಗ ಆಕಾಶ ನೋಡುತ್ತೇವೆ. ಹೀಗಾಗಿ ಆಕಾಶ ಎನ್ನುವುದು ನಮ್ಮ ಪಾಲಿಗೆ ಗೊತ್ತಿಲ್ಲದ ಎಲ್ಲದಕ್ಕೂ ಉತ್ತರ ಸಿಗುವ ಇ್ಫಾರ್ಮೇಶ್ ಸೆಂಟ್; ಮಾಹಿತಿ ಕೇಂದ್ರ ಇರಬಹುದೇ?
ನಾವು ಆಕಾಶವನ್ನು ತುಂಬ ಕಡೆಗಣಿಸುತ್ತೇವೆ ಅನ್ನುವುದಂತೂ ನಿಜ. ಸದಾ ತಲೆಮೇಲಿರುತ್ತೆ ಅನ್ನುವ ಉಡಾಫೆ. ಯಾವತ್ತೂ ಕಳಚಿಬೀಳೋದಿಲ್ಲ ಅನ್ನುವ ಅಭಯ. ನನ್ನೊಬ್ಬದೇನಲ್ಲವಲ್ಲ ಎಂಬ ನಿರ್ಲಕ್ಪ್ಯ.ಯಾರಪ್ಪನ ಸೊತ್ತೂ ಅಲ್ಲವಲ್ಲ ಎಂಬ ಧೈರ್ಯ. ಯಾವಾಗ ಬೇಕಾದರೂ ನೋಡ್ಕೋಬಹುದು ಅನ್ನುವ ನಿರಾಳ. ಇವೆಲ್ಲ ಸೇರಿ ನಮ್ಮನ್ನು ಆಕಾಶ ನೋಡುವುದಕ್ಕೆ ಅವಕಾಶ ಮಾಡಿಕೊಡುವುದೇ ಇಲ್ಲ. ಬೆಂಗಳೂರಿನಂಥ ಊರುಗಳಲ್ಲಿ ಆಕಾಶ ನೋಡುವುದಕ್ಕೆಂದೇ ನೆಹರೂ ಪ್ಲಾನಟೇರಿಯಮ್ಮಿಗೆ ಹೋಗುವವರಿದ್ದಾರೆ. ಕಣ್ಣೆತ್ತಿ ನೋಡಿದರೆ ಕಾಣುವುದಕ್ಕೆ ತಾರಾಲಯಕ್ಕೆ ಯಾಕೆ ಹೋಗಬೇಕು. ತಾರಮ್ಮಯ್ಯ ತಂದು ತೋರಮ್ಮಯ್ಯ ಅಂತ ಆಕಾಶವನ್ನು ಯಾರಾದರೂ ತೋರಬೇಕೇ?
ಆಕಾಶದ ಬಗ್ಗೆ ಯಾರು ಏನೇನು ಬರೆದಿದ್ದಾರೆ ಅಂತ ಹುಡುಕಿದರೆ ಸಿಕ್ಕಿದ್ದು ಕೆಲವೇ ಕೆಲವು ಪ್ರಾಸಂಗಿಕ ಉಲ್ಲೇಖಗಳು ಮಾತ್ರ. ಖಗೋಲ ವಿಜ್ಞಾನಿಗಳಿಗೆ ಆಕಾಶ ಮುಗಿಯದ ಪ್ರಶ್ನೆಗಳ ಸರಮಾಲೆ. ಕವಿಗಳಿಗೆ ಆಕಾಶ ಕವಿಸಮಯ. ವಿಜ್ಞಾನಿಗಳು ಮತ್ತು ಕವಿಗಳನ್ನು ಬಿಟ್ಟರೆ ಎಲ್ಲವನ್ನೂ ಬೆರಗಿನಿಂದ ನೋಡುವವರು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲವೇನೋ ಅನ್ನಿಸುತ್ತದೆ. ಇವರಿಬ್ಬರ ನಡುವೆ ಒಂದೇ ಒಂದು ವ್ಯತ್ಯಾಸವೆಂದರೆ ಕವಿಗಳು ಬೆರಗು ಹುಟ್ಟಿಸುತ್ತಾರೆ; ವಿಜ್ಞಾನಿಗಳು ಬೆರಗು ಕಳೆದು ಬೆತ್ತಲಾಗಿಸುತ್ತಾರೆ. `ಬಾನಿನಲ್ಲಿ ಒಂಟಿತಾರೆ, ಸೋನೆ ಸುರಿವ ಇರುಳ ಮೋರೆ, ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ' ಎಂದು ಲಕ್ಪ್ಮೀನಾರಾಯಣ ಭಟ್ಟರು ಬರೆದ ಸೊಗಸಾಗ ಗೀತೆ ವಿಜ್ಞಾನಿಯ ಕೈಗೆ ಸಿಕ್ಕರೆ ಬಾನು, ಒಂಟಿತಾರೆ, ಸೋನೆ, ಇರುಳು, ನೀರೆ ಎಲ್ಲವೂ ವ್ಯಾಖ್ಯಾನಕ್ಕೆ ಒಳಗಾಗಿ ಚಿಂದಿಯಾಗುತ್ತದೆ. ವಿಜ್ಞಾನಿಯ ಪಾಲಿಗೆ ಚಂದ್ರಮಂಚವೂ ಇಲ್ಲ, ಚಕೋರವೂ ಇಲ್ಲ, ಚಾತಕ ಪಕ್ಪಿಯೂ ಇಲ್ಲ. ಬೆರಗು ಉಳಿಯಬೇಕಿದ್ದರೆ ಅಜ್ಞಾನಿಯಾಗಿರುವುದೇ ವಾಸಿ.
ಮತ್ತೆ ಆಕಾಶಕ್ಕೆ ಬಂದರೆ ಅದನ್ನು ಇನ್ನಿಲ್ಲದಂತೆ ಬಳಸಿಕೊಂಡದ್ದು ಸಿನಿಮಾ ಸಾಹಿತಿಗಳು. ಒಂದು ಕಾಲದಲ್ಲಿ ಆಕಾಶ ಎಂಬ ಪದವಿಲ್ಲದೆ ಚಿತ್ರಗೀತೆಗಳು ಮುಗಿಯುತ್ತಿರಲಿಲ್ಲ;ಶುರುವಾಗುತ್ತಿರಲಿಲ್ಲ. ಹೆಣ್ಣಿನ ಕೈಬಿಡುವುದಿಲ್ಲ ಅನ್ನುವುದಕ್ಕೂ ಆಕಾಶದ ಹೋಲಿಕೆ, ಪ್ರೇಯಸಿ ಆಕಾಶದೀಪ, ಮದುವೆಯಾಗುವ ಹುಡುಗಿ ಆಕಾಶದಿಂದ ಧರೆಗಿಳಿದ ರಂಭೆ, ಪ್ರಿಯಕರ ಆಕಾಶದಲ್ಲಿರುವ ರವಿ.. ಹೀಗೆ ಮಾತು ಮಾತಿಗೆ ಆಕಾಶದ ಪ್ರಸ್ತಾಪ. ಬಹುಶಃ ಪ್ರೇಮಿಗಳಂಥ ಆಕಾಶಕಾಯ ಮತ್ತೊಂದಿಲ್ಲ!
ಕನ್ನಡ ಕವಿಗಳೂ ಆಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಕಾಡಮೂಲಕವೆ ಪಥ ಆಗಸಕ್ಕೆ, ಧ್ರುವನಕ್ಪತ್ರಕ್ಕೆ ಅನ್ನುವ ಅಡಿಗರ ಸಾಲು ನಮ್ಮ ಕಷ್ಟಕಾರ್ಪಣ್ಯದ ಹಾದಿ ಕೊನೆಗೆ ಶ್ರೇಷ್ಠತೆಯತ್ತ ನಮ್ಮನ್ನು ಒಯ್ಯುವುದರ ಕುರಿತಾಗಿತ್ತು.ಕೆಎ್ನರಸಿಂಹಸ್ವಾಮಿಯವರಂತೂ ಆಕಾಶಕ್ಕೇ ಕಣ್ಣುನೆಟ್ಟು ಕೂತವರ ಹಾಗೆ ಪ್ರತಿಯೊಂದು ಕವಿತೆಯಲ್ಲೂ ಆಕಾಶವನ್ನೇ ತಂದರು. ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಾಗ ರಾಯರು ಮಾವನ ಮನೆಗೆ ಬರುತ್ತಾರೆ. ಕೋಟಿಕಂಗಳ ಥಳಥಳಿಪ ತಾರೆಯಲಿ ಸ್ವಪ್ನ ಸುಂದರಿ ಕಾಣಿಸುತ್ತಾಳೆ. ಅವರಿಗೆ ಕಂಡ ಮೋಡಗಳಲ್ಲೂ ಪ್ರೇಮಪಲ್ಲವಿ;
ಶ್ರೀಕೃಷ್ಣನಂತೊಂದು ಮುಗಿಲು
ರಾಧೆಯಂತಿನ್ನೊಂದು ಮುಗಿಲು
ಹೊಳೆದಾರಿ ಕಾಯುವ ಮುಗಿಲು
ಜರತಾರಿ ಸೆರಗಿನ ಮುಗಿಲು
ಕೆನ್ನೆ ಕೆಂಪಾದೊಂದು ಮುಗಿಲು ಎಲ್ಲಿ
ಇನ್ನೊಂದು ಮುತ್ತೆನುವ ಮುಗಿಲು!
ಈ ಜಗತ್ತಿಗೆ ಎಲ್ಲವನ್ನೂ ಕೊಡುವುದು ಆಕಾಶವೇ ಅಲ್ಲವೇ? ಅಲ್ಲಿಂದಲೆ ಬೆಳಕು, ಅಲ್ಲಿಂದಲೆ ಬಿಸುಪು, ಅಲ್ಲಿಂದಲೇ ಗಾಳಿ, ಅಲ್ಲಿಂದಲೇ ಮಳೆ. ಆಕಾಶಕ್ಕೆ ಮುಖಮಾಡಿ ಎದ್ದರಷ್ಟೇ ಬೆಳೆ. ಇಷ್ಟೆಲ್ಲ ಕೊಡುವ ಆಕಾಶವೋ ಪರಮ ಉದಾರಿ. ಅದು ಯಾವತ್ತೂ ಏನನ್ನೂ ತನ್ನಲ್ಲಿ ಇಟ್ಟುಕೊಂಡದ್ದಿಲ್ಲ. ಬೆಳಗ್ಗೆ ಬಿಸಿಲನ್ನೂ ರಾತ್ರಿ ತಂಬೆಳಕನ್ನೂ ಕೊಡುತ್ತ ಬಂದಿದೆ; ಆಕಾಶದಂಥ ಮುಕ್ತ ಮನಸ್ಸು ಮತ್ತೊಂದಿಲ್ಲ. ಅಲ್ಲಿ ನೀವು ಏನನ್ನೂ ಬಚ್ಚಿಡಲಾರಿರಿ. ಎಂಥ ಜಿಪುಣನೂ ದುಡ್ಡನ್ನು ಹುಗಿದಿಡುವುದು ಈ ನೆಲದೊಳಗೇ!
****
ಆಕಾಶದಲ್ಲೇನಿದೆ ವೈವಿಧ್ಯ ಎಂದು ಕೇಳಬೇಡಿ. ಆಕಾಶಕ್ಕೋ ಕ್ಪಣಕೊಂದು ಬಣ್ಣ. ಸಂಜೆಗೆಂಪಿನ ಆಕಾಶ, ಶಿಶಿರದ ನೀಲಾಕಾಶ, ಆಷಾಢದ ಬರಿ ಆಕಾಶ, ಶ್ರಾವಣದ ಕಪ್ಪು ಮೋಡ ಮುಂಗುರುಳ ಆಕಾಶ, ಬೆಳಗಿನ ಸ್ತಬ್ದ ಆಕಾಶ, ಸಂಜೆಯ ಮುಗ್ದ ಆಕಾಶ, ಮಧ್ಯಾಹ್ನದ ಕ್ರೂರ ಆಕಾಶ, ರಾತ್ರಿಯ ನಿಗೂಢ ಆಕಾಶ- ಹೀಗೆ ಆಕಾಶಕ್ಕೆ ಹಲವು ಮುಖಗಳು. ಕಂಡವರಿಗಷ್ಟೇ ಕಂಡೀತು,ಆದರೆ ಎಲ್ಲರಿಗೂ ಉಂಟು ಕಾಣುವುದಕ್ಕೆ ಅವಕಾಶ.
ಹಾಗೆ ನೋಡಿದರೆ ಆವತ್ತಿನ ನಮ್ಮ ಭಾವಲಹರಿಯನ್ನು ನಿಯಂತ್ರಿಸುವುದು ಆಕಾಶವೇ. ಆಕಾಶ ಮೋಜ ಕವಿದುಕೊಂಡು ಬಿಮ್ಮಗಿದ್ದರೆ ಮನಸ್ಸೂ ಬಿಮ್ಮಗೆ ಇದ್ದುಬಿಡುತ್ತದೆ. ಆಕಾಶ ನೀಲಿಯಾಗಿ ಥಳಥಳಿಸುತ್ತಿದ್ದರೆ, ಮನಸ್ಸೂ ಪ್ರಫುಲ್ಲವಾಗಿರುತ್ತದೆ. ಅಲ್ಲಲ್ಲಿ ಮೋಡಗಳು ತೇಲುತ್ತಾ ಆಕಾಶ ಕಡಲಿನ ಹಾಗಿದ್ದರೆ ಮನಸ್ಸು ಹಾಯಿಹಡಗಿನ ಹಾಗೆ ತೇಲುತ್ತದೆ. ದಿಗಿಲಿಲ್ಲದ ಆಕಾಶದಲ್ಲಿ ಮನ ಮುಗಿಲಾಗುತ್ತದೆ.
ನಾವು ಆಕಾಶ ನೋಡದೆ ಅದೆಷ್ಟು ವರುಷಗಳಾದವೋ ಏನೋ? ಆಕಾಶ ನೋಡುವುದಕ್ಕೂ ನಮಗೆ ವ್ಯವಧಾನವಿಲ್ಲ. ಆಗೀಗ ಆಕಾಶದಲ್ಲಿ ಹಾರುವ ವಿಮಾನವನ್ನು ನೋಡುತ್ತೇವೆ; ಆಗೀಗ ನಾವೇ ಆಕಾಶಕ್ಕೆ ಹಾರುತ್ತೇವೆ. ಗಗನಗಾಮಿಯಾದವನಿಗೆ ಆಕಾಶ ಖಂಡಿತಾ ಕಾಣುವುದಿಲ್ಲ. ಯಾಕೆಂದರೆ ಅವನೂ ಆಕಾಶದ ಒಂದು ಭಾಗವಾಗಿಬಿಡುತ್ತಾನೆ.
ಆದರೆ ಆಕಾಶದಿಂದ ಬಂದಿಳಿಯುವ ಅನ್ಯಗ್ರಹ ಜೀವಿಗಳ ಕತೆಯಿಂದ ಹಿಡಿದು ಆಕಾಶದಲ್ಲಿ ನಿಂತುಕೊಂಡು ಪುಷ್ಪವೃಷ್ಟಿಗೈಯುತ್ತಿದ್ದ ದೇವತೆಗಳ ತನಕ, ಈ ಆಕಾಶವನ್ನು ನಮ್ಮ ಇತಿಹಾಸಪುರಾಣಕತೆಗಳು ಆವರಿಸಿಕೊಂಡಿವೆ. ಇವತ್ತಿಗೂ ಸತ್ತವನು ಮೇಲೆ ಹೋದ ಅನ್ನುತ್ತಾರೆ. ದೇವರೆಲ್ಲಿದ್ದಾನೆ ಅಂದರೆ ಆಕಾಶ ತೋರಿಸುತ್ತಾರೆ. ಆಕಾಶದ ಬೀದಿಯಲ್ಲಿ ನಿತ್ಯ ಸಂಚರಿಸುವ ಸೂರ್ಯ, ಚಂದ್ರರಿದ್ದಾರೆ. ಆಕಾಶ ಮಳೆಗಾಲದಲ್ಲಿ ಮುನಿಸಿಕೊಂಡ ಪ್ರೇಯಸಿಯ ಹಾಗೆ, ಬೇಸಿಗೆಯಲ್ಲಿ ದುಷ್ಟ ಯಜಮಾನನ ಹಾಗೆ, ಮಳೆಗಾಲದಲ್ಲಿ ಸೋರುವ ಛತ್ರಿಯ ಹಾಗೆ, ಕಾರ್ತೀಕದಲ್ಲಿ ದೀಪ ಹಚ್ಚಿಟ್ಟ ಅಂಗಳದ ಹಾಗೆ ಭಾಸವಾಗುತ್ತದೆ. ನಾವೂ ಆಕಾಶದ ಒಂದು ಭಾಗವಾಗಬೇಕು ಅನ್ನಿಸುತ್ತದೆ.
ಅನಂತ ಅವಕಾಶಕ್ಕೆ ಸ್ಕೈ ಈ್ ದಿ ಲಿಮಿ್ ಅಂತಾರೆ. ಅದು ಸರಿಯಾದ ಉಪಮೆ ಹೌದೋ ಅಲ್ಲವೋ ಗೊತ್ತಿಲ್ಲ. ಯಾಕೆಂದರೆ ನಮ್ಮ ನಮ್ಮ ಆಕಾಶ ನಮ್ಮದು. ಎಲ್ಲಾ ಆಕಾಶವೂ ನಮ್ಮದಾಗುತ್ತದೆ ಅನ್ನುವ ನಂಬಿಕೆಯೂ ಇರಕೂಡದು. ನಮ್ಮ ಹುಟ್ಟಿದೂರಿನ ಆಕಾಶಕ್ಕಾಗಿ ಮುಂದೊಂದು ದಿನ ಮತ್ತೊಂದೂರಲ್ಲಿ ಹುಡುಕಿದರೆ ಸಿಕ್ಕೀತು ಅನ್ನುವ ಭರವಸೆಯಿಲ್ಲ.
ಆಕಾಶ ಎಲ್ಲಾ ಕಡೆ ಒಂದೇ ಥರ ಅನ್ನುತ್ತಾರೆ. ಅದೂ ಸುಳ್ಳು. ನೀವು ಬಾಲ್ಯದಲ್ಲಿ ಕಂಡ ಆಕಾಶ, ಈಗ ನಿಮಗೆ ಕಾಣದು. ನಮ್ಮೂರಲ್ಲಿ ಸ್ಕೂಲಿಗೆ ಹೋಗುತ್ತಾ ತಲೆಯೆತ್ತಿ ನೋಡಿದಾಗ ಕಂಡ ಆಕಾಶಕ್ಕಾಗಿ ಹುಡುಕುತ್ತಲೇ ಇದ್ದೇನೆ. ಅದು ಮತ್ತೆಲ್ಲೂ ಕಾಣಿಸಿಲ್ಲ. ಆದರೆ ಆಕಾಶಕ್ಕೆ ಸಾವಿಲ್ಲ ಅನ್ನುತ್ತಾರೆ. ಸತ್ತವರು ಮೇಲಕ್ಕೆ ಹೋಗುತ್ತಾರೆ ಅಂದ ಮೇಲೆ ಆಕಾಶವೇ ಸತ್ತರೆ ಅದೆಲ್ಲಿಗೆ ಹೋಗಬೇಕು ಹೇಳಿ?
ಒಂದೇ ಒಂದು ಪ್ರಶ್ನೆ; ನಮ್ಮ ಬಾಲ್ಯದ ಆಕಾಶ ಈಗ ಕಾಣುವುದಿಲ್ಲ ಅನ್ನೋದಂತೂ ನಿಜ. ಕಣ್ಮರೆಯಾದದ್ದು ಆಕಾಶವೋ ಅದನ್ನು ನೋಡುವ ಮನಸ್ಸೋ? ಮನವಿಲ್ಲದರನ್ನು ಆಕಾಶವಾದರೂ ಏನು ಮಾಡೀತು?
ಮನೆಯ ಕಿಟಕಿಯಿಂದ ಕಾಣುವ ತೇಪೆ ಆಕಾಶ ನೋಡುತ್ತಾ ಅದನ್ನು ನಮ್ಮೊಳಗೆ ಆವಾಹಿಸಿಕೊಳ್ಳಲು ಯತ್ನಿಸುತ್ತಾ ಬದುಕು ಸಾಗುತ್ತದೆ. ಆಕಾಶ ಉಚಿತವಾದ್ದರಿಂದ ತೇಪೆ ಆಕಾಶವೇ ಯಾಕೆ ಬೇಕು. ಇಡೀ ಆಕಾಶವನ್ನು ತುಂಬಿಕೊಳ್ಳೋಣ. ಆಗ ಮಂಜಾಗಿ, ಈಗ ಮಳೆಯಾಗಿ, ಮತ್ತೊಮ್ಮೆ ಹಿತವಾದ ಬಿಸಿಲ ಹೂಮಳೆಯಾಗಿ ನಮ್ಮೆಡೆಗೆ ಇಳಿದು ಬರುವ ಆಕಾಶದ ಎತ್ತರಕ್ಕೆ ಒಮ್ಮೆಯಾದರೂ ಏರುವುದು ಹೇಗೆ?
ಆಕಾಶಕ್ಕೆ ಏಣಿ ಹಾಕೋಕೆ ಸಾಧ್ಯವೇ ಅಂತಾರೆ! ಮನಸ್ಸಿದ್ದರೆ ಮಾರ್ಗವಿದೆ.

7 comments:

suptadeepti said...

ಹೌದು, ಆಕಾಶಕ್ಕೆ ಏಣಿ ಹಾಕೋಕೆ ಸಾಧ್ಯವಿಲ್ಲ. ಅದು ಬೇಕಾಗಿಯೂ ಇಲ್ಲ, ಅಲ್ಲವೆ? ನೋಡುವ ಕಣ್ಣಿರಲು, ಅರ್ಥೈಸುವ ಮನಸ್ಸಿರಲು ಬೇರೇನು ಬೇಕು! ಒಳ್ಳೆಯ ಬರಹ.

Anonymous said...

ನಮ್ಮ ಬಾಲ್ಯದ ಆಕಾಶ ಈಗ ಕಾಣುವುದಿಲ್ಲ ಅನ್ನೋದಂತೂ ನಿಜ. ಕಣ್ಮರೆಯಾದದ್ದು ಆಕಾಶವೋ ಅದನ್ನು ನೋಡುವ ಮನಸ್ಸೋ? ಇಷ್ಟವಾದ ಸಾಲುಗಳು

permanence of art nd impermanence of reality...ಅಲ್ಲವ?

Malnadhudgi

Arun said...

ಆಕಾಶವೆ ಬೀಳಲಿ ಮೇಲೆ
ನಾನೆಂದು ನಿನ್ನವನು.....
ಈ ಹಾಡು ನಿಮ್ಮ ಬರಹದಿಂದ ಬಿಟ್ಟು ಹೋಗಿದೆ ಸಾರ್.
ಚೆಂದದ ಬರಹದ ಜೊತೆಗೆ ಅದೂ ಇದ್ದರೆ ಇನ್ನೂ ಚೆನ್ನಾಗಿತಿರುತಿತ್ತೇನೋ.:-)

Anonymous said...

Aakashada bagge istondu naanu yochisiye iralilla... First Class baraha ... :)
-Suma.

Srusti said...

ಬೆರಗು ಉಳಿಯಬೇಕಿದ್ದರೆ ಅಜ್ಞಾನಿಯಾಗಿರುವುದೇ ವಾಸಿ
.....ಇದಂತೂ ನೂರಕ್ಕೆ ನೂರರಸ್ಟು ಸತ್ಯ!

ತುಂಬ ಚೆನ್ನಾಗಿದೆ.

ವಿನೋದ್

malli said...

SIR,
monne aakasha kannige biddu alla annisutte, monne aakasha manssige bandu aaga bahudittu.

janu....... kaalamlli odidde matte matte odbeku anta aa sangranu tandu itkondidini.
jogi maneyallu akashada nenapu.
santosha tandiddu sullalla.
anda hage sherlak homesna ondu ghatane nenapige bantu.

aakashdashtu dodda hrudayavantikege namanagalu.

malli said...

SIR,
monne aakasha kannige biddu alla annisutte, monne aakasha manssige bandu aaga bahudittu.

janu....... kaalamlli odidde matte matte odbeku anta aa sangranu tandu itkondidini.
jogi maneyallu akashada nenapu.
santosha tandiddu sullalla.
anda hage sherlak homesna ondu ghatane nenapige bantu.

aakashdashtu dodda hrudayavantikege namanagalu.