Thursday, January 17, 2008

ದಂಗೆಯ ಮುಂಚಿನ ದಿನಗಳು

ಕ್ರಾಂತಿಯೆಂಬುದು ಸಹಜ.
ಪ್ರತಿಯೊಬ್ಬನೊಳಗೂ ದಿನದಿನ ಕ್ಪಣಕ್ಪಣ ಕ್ರಾಂತಿಯಾಗುತ್ತಲೇ ಇರುತ್ತದೆ. ಕ್ರಾಂತಿ ಎಂದರೆ ಸಾಮಾನ್ಯ ಅರ್ಥದಲ್ಲಿ ಕ್ರಮಿಸುವುದು ಅಂದರೆ ನಡೆಯುವುದು. ವಿಶೇಷಾರ್ಥದಲ್ಲಿ ದಾಟುವುದು, ಮೀರುವುದು, ಅತಿಕ್ರಮಿಸುವುದು. ಕ್ರಾಂತಿಯ ಮೂಲಗುಣ ಉಲ್ಲಂಘನೆ.
ಇಂಥ ಉಲ್ಲಂಘನೆ ನಮ್ಮೊಳಗೂ ಆಗಾಗ ಆಗುತ್ತಲೇ ಇರುತ್ತದೆ. ಎಲ್ಲ ಬದಲಾವಣೆಗೂ ಈ ಉಲ್ಲಂಘನೆಯೇ ಕಾರಣ. ಅದಕ್ಕೊಂದು ಕತೆಯೂ ಮಹಾಭಾರತದಲ್ಲಿದೆ. ಒಮ್ಮೆ ವೃತ್ರ ಎಂಬಾತನನ್ನು ನಿಷ್ಕಾರಣವಾಗಿ ಕೊಂದನೆಂಬ ಕಾರಣಕ್ಕೆ ಇಂದ್ರ ತನ್ನ ಪದವಿ ಕಳೆದುಕೊಳ್ಳುತ್ತಾನೆ. ದೇವತೆಗಳಿಗೂ ಇಂದ್ರನನ್ನು ನೋಡಿ ನೋಡಿ ಬೇಜಾರಾಗಿತ್ತೆಂದು ಕಾಣುತ್ತದೆ. ಆಗಾಗ ಇಂಥ ಅಪದ್ಧಗಳನ್ನು ಮಾಡುತ್ತಲೇ ಇರುವ, ರಾಕ್ಷಸರಿಂದ ಹೊಡೆತ ತಿಂದು ಓಡಿಹೋಗುವ ದೇವೇಂದ್ರನ ಸಹವಾಸವೇ ಬೇಡ ಅಂದುಕೊಂಡು ಅವರೆಲ್ಲರೂ ಭೂಲೋಕದಲ್ಲಿರುವ ನಹುಷನನ್ನು ರಾಜನನ್ನಾಗಿ ಮಾಡಲು ನಿರ್ಧರಿಸುತ್ತಾರೆ. ಅವನ ಹತ್ತಿರ ಹೋಗಿ ತಮ್ಮ ಬೇಡಿಕೆಯನ್ನೂ ಮುಂದಿಡುತ್ತಾರೆ.
ಮೊದಲು ನಹುಷ ಅದಕ್ಕೆ ಒಪ್ಪುವುದಿಲ್ಲ. ನಾನು ಆ ಸ್ಥಾನಕ್ಕೆ ಅನರ್ಹ ಅನ್ನುತ್ತಾನೆ. ಆದರೆ ದೇವತೆಗಳು ಆತನ ಮನವೊಲಿಸಿ ದೇವಲೋಕದ ಪಟ್ಟಕ್ಕೇರಿಸುತ್ತಾರೆ. ಅಲ್ಲಿಂದ ಅವನು ತನ್ನೊಳಗಿನ ಮಾತುಗಳನ್ನೇ ಉಲ್ಲಂಘಿಸುತ್ತಾ ಹೋಗುತ್ತಾನೆ.
ತಾನು ದೇವಲೋಕದ ಅಪತಿ ಅನ್ನುವ ಅಹಂಕಾರ ಮತ್ತು ಉಡಾಫೆ ನಿಧಾನವಾಗಿ ವಿನಯ ಮತ್ತು ವಿಧೇಯತೆಯನ್ನು ಉಲ್ಲಂಘಿಸುತ್ತದೆ. ನಹುಷನ ಒಳಗೊಂದು ಕ್ರಾಂತಿಯಾಗುತ್ತದೆ. ನಾನು ದೇವೇಂದ್ರನಾದರೆ ದೇವೇಂದ್ರನ ಹೆಂಡತಿ ನನಗೂ ಹೆಂಡತಿಯಾಗಬೇಕಲ್ಲ ಎಂಬ ವಿಚಿತ್ರ ತರ್ಕ ಅವನನ್ನು ಒಮ್ಮೆ ಬೆಚ್ಚಿಬೀಳಿಸುತ್ತದೆ. ಇಂದ್ರನ ಹೆಂಡತಿ ಶಚೀದೇವಿಯನ್ನು ನನ್ನ ಅಂತಃಪುರಕ್ಕೆ ಕಳುಹಿಸಿ ಅನ್ನುತ್ತಾನೆ ನಹುಷ.
ನಹುಷ ಶಾಶ್ವತವಾಗಿ ಇಂದ್ರನಾಗಿರಲು ಸಾಧ್ಯವಿಲ್ಲ ಅನ್ನುವ ಸತ್ಯ ಶಚೀದೇವಿಗೆ ಗೊತ್ತಿತ್ತು ಅಂತ ಕಾಣುತ್ತದೆ. ಆಕೆ ನಹುಷನ ಆಹ್ವಾನವನ್ನು ನಿರಾಕರಿಸುತ್ತಾಳೆ. ಗುರು ಬ್ರಹಸ್ಪತಿಯಲ್ಲಿಗೆ ಓಡಿ ಹೋಗಿ ರಕ್ಪಣೆ ಕೋರುತ್ತಾಳೆ. ಬ್ರಹಸ್ಪತಿ ಆಕೆಗೆ ಅಭಯ ನೀಡಿ ಇಲ್ಲೇ ಇರು, ನಿನ್ನ ಗಂಡ ವಾಪಸ್ಸು ಬರುತ್ತಾನೆ ಅಂತ ಭರವಸೆ ಕೊಡುತ್ತಾನೆ.
ಶಚೀದೇವಿ ಒಪ್ಪದೇ ಇದ್ದದ್ದು ಕೇಳಿ ನಹುಷ ಸಿಟ್ಟಲ್ಲಿ ಧಗಧಗಿಸುತ್ತಾನೆ. ಎಲ್ಲರನ್ನೂ ನಾಶ ಮಾಡುವುದಾಗಿ ಕೂಗಾಡುತ್ತಾನೆ. ಶಚೀ ಬೇರೊಬ್ಬನ ಹೆಂಡತಿ. ನೀನು ಬಯಸೋದು ತಪ್ಪು ಅನ್ನುವ ಮಾತು ಅವನಿಗೆ ಪಥ್ಯವಾಗುವುದಿಲ್ಲ. ಇಂದ್ರನ ಸ್ವಭಾವ ಮತ್ತು ಕಾರ್ಯಾಚರಣೆಗಳನ್ನು ಬಲ್ಲ ನಹುಷನ ಪ್ರಕಾರ ದೇವೇಂದ್ರ ಕೂಡ ಯಾರನ್ನೂ ಪರಸತಿ ಎಂದು ಕಂಡವನಲ್ಲ. ಒಂದು ಉದಾಹರಣೆ; ಅಹಲ್ಯಾ.
`ನಿಮ್ಮ ಇಂದ್ರ ಪರಸ್ತ್ರೀ ಹಿಂದೆ ಬಿದ್ದಾಗ ನೀವು ಎಂದಾದರೂ ಅದು ತಪ್ಪು ಅಂತ ಹೇಳಿದ್ದಿರಾ? ನನಗೇಕೆ ಉಪದೇಶ ಮಾಡುತ್ತೀರಿ. ಪರಸ್ತ್ರೀ ಅಂದ ಮೇಲೆ ಯಾರ ಹೆಂಡತಿಯಾದರೇನಂತೆ. ಶಚೀದೇವಿ ಬಂದು ಅವಳನ್ನು ಒಪ್ಪಿಸಿಕೊಳ್ಳಲಿ. ಅಥವಾ..'
ಆಗ ಬ್ರಹಸ್ಪತಿ ಆಕೆಗೊಂದು ಉಪಾಯ ಹೇಳಿಕೊಡುತ್ತಾನೆ; ನಹುಷನ ಹತ್ತಿರ ಕಾಲಾವಕಾಶ ಕೇಳು' ಅನ್ನುತ್ತಾನೆ. ಅಂತೆಯೇ ಶಚೀದೇವಿ ನಹುಷನ ಮುಂದೆ ನಿಂತು `ನನ್ನ ಗಂಡ ಎಲ್ಲಿದ್ದಾನೆ? ಬದುಕಿದ್ದಾನೋ ಸತ್ತಿದ್ದಾನೋ ತಿಳಕೊಳ್ಳಬೇಕು. ಅವನು ಸತ್ತಿದ್ದಾನೆ ಅಂತ ಗೊತ್ತಾದರೆ ಯಾವ ಪಾಪಪ್ರಜ್ಞೆಯೂ ಇಲ್ಲದೆ ನಿನ್ನನ್ನು ಸೇರುತ್ತೇನೆ. ಅವನಿಗಾಗಿ ಹುಡುಕಾಟ ನಡೆಸುವುದಕ್ಕೆ ಅವಕಾಶ ಕೊಡು' ಅನ್ನುತ್ತಾಳೆ. ಅವನು ಅನುಮತಿ ಕೊಟ್ಟು ಕಳುಹಿಸುತ್ತಾನೆ.
ಇದೇ ಹೊತ್ತಿಗೆ ದೇವೇಂದ್ರ ಒಂದು ತಾವರೆಯ ದಂಟಿನೊಳಗೆ ಸೂಕ್ಪ್ಮರೂಪದಲ್ಲಿ ಅಡಗಿಕೊಂಡಿರುತ್ತಾನೆ. ಅವನನ್ನು ಶಚೀದೇವಿ ಕಂಡಾಗ ಆತ ಹೇಳುತ್ತಾನೆ; `ಅವನ ಆಹ್ವಾನವನ್ನು ಒಪ್ಪಿಕೋ. ಆದರೆ ನಿನ್ನ ಮನೆಗೆ ಬರುವಾಗ ಸಪ್ತರ್ಷಿಗಳು ಹೊತ್ತ ಪಲ್ಲಕಿಯ ಮೇಲೆ ಬರಬೇಕೆಂದು ಆಜ್ಞಾಪಿಸು. ನಹುಷ ನಾಶವಾಗುತ್ತಾನೆ.'
ಒಂದು ಅಪವಿತ್ರ ಸಂಗಮಕ್ಕೆ ಋಷಿಗಳೇ ಸಾರಥಿಯಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಶಚೀದೇವಿ ಹೇಳುತ್ತಾಳೆ; ನೀನು ನನ್ನ ಪಾಲಿಗೆ ತ್ರಿಮೂರ್ತಿಗಳಿಗಿಂತ ದೊಡ್ಡವನು. ಸಪ್ತರ್ಷಿಗಳು ಹೊರುವ ಪಲ್ಲಕಿಯಲ್ಲಿ ಆಗಮಿಸಿದರೆ ಅದರ ಸಂಭ್ರಮವೇ ಬೇರೆ. ಹಾಗೇ ಬಾ'.
ನಹುಷ ಸಪ್ತರ್ಷಿಗಳನ್ನು ಕರೆಸುತ್ತಾನೆ. ಋಷಿಗಳು ಅವನನ್ನು ಹೊತ್ತುಕೊಂಡು ಹೊರಡುತ್ತಾರೆ. ಈ ಅನಾಹುತವನ್ನು ಜಗತ್ತು ನಿಬ್ಬೆರಗಾಗಿ ನೋಡುತ್ತದೆ. ಆದರೆ ಇದಕ್ಕಿಂತಲೂ ಭೀಕರವಾದದ್ದೊಂದು ಘಟನೆ ನಡೆಯುತ್ತದೆ.
ಅದೇ ನಿಜವಾದ ಉಲ್ಲಂಘನೆ!
ಶಚೀದೇವಿಯನ್ನು ಆದಷ್ಟೂ ಬೇಗ ಸೇರುವ ಆತುರದಲ್ಲಿರುವ ನಹುಷ ಎಲ್ಲರಿಗಿಂತ ಮುಂದೆ ನಿಧಾನವಾಗಿ ನಡೆಯುತ್ತಿದ್ದ ಅಗಸ್ತ್ಯಮುನಿಯನ್ನು ಪಾದದಿಂದ ತಿವಿದು `ಸರ್ಪ... ಸರ್ಪ' ಎನ್ನುತ್ತಾನೆ. ಸರ್ಪ ಅಂದರೆ ಬೇಗ ಸರಿ ಅನ್ನುವ ಅರ್ಥವೂ ಇದೆ. ಸಿಟ್ಟಿಗೆದ್ದ ಅಗಸ್ತ್ಯ `ನೀನು ಸರ್ಪವಾಗು' ಎಂದು ಶಪಿಸುತ್ತಾನೆ.
ಅಲ್ಲಿಗೆ ನಹುಷನ ಪತನವಾಗುತ್ತದೆ. ಆತ ಬೃಹದಾಕಾರದ ಹೆಬ್ಬಾವಾಗಿ ಕಾಡಿನತ್ತ ಹರಿದುಹೋಗುತ್ತಾನೆ.
ಈ ಕತೆಯನ್ನು ಉಪಲವ್ಯನಗರದಲ್ಲಿ ಶಲ್ಯ ಧರ್ಮರಾಯನಿಗೆ ಹೇಳುತ್ತಾನೆ. ಧರ್ಮರಾಯನೂ ದ್ರೌಪದಿಯೂ ರಾಜ್ಯ ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಇಂದ್ರನಂಥವರಿಗೇ ಹೀಗಾಗಿತ್ತು. ಆದರೆ ಎಲ್ಲವೂ ಸುಖಾಂತವಾಯಿತು. ನಿಮ್ಮ ವಿಚಾರದಲ್ಲೂ ಹಾಗೇ ಆಗುತ್ತದೆ ಅನ್ನುತ್ತಾನೆ ಶಲ್ಯ. ನಹುಷನ ಹಾಗೆ ಧುರ್ಯೋಧನ ಕೂಡ ನಾಶವಾಗಿ ಹೋಗುತ್ತಾನೆ ಅಂತ ಶಾಪ ಹಾಕಿ ಹೊರಡುತ್ತಾನೆ ಶಲ್ಯ.
ಅಷ್ಟು ಹೇಳಿದ ನಂತರ ಆತ ಧುರ್ಯೋಧನನ ಪರವಾಗಿ ಯುದ್ಧ ಮಾಡುತ್ತಾನೆ!
ಈ ಕತೆಗೂ ಮಹಾಭಾರತಕ್ಕೂ ಇನ್ನೊಂದು ಸಂಬಂಧವೂ ಇದೆ. ವನವಾಸದಲ್ಲಿದ್ದ ಭೀಮನನ್ನು ಇದೇ ಹೆಬ್ಬಾವಾಗಿ ಬಿದ್ದಿದ್ದ ನಹುಷ ಸುತ್ತುಹಾಕಿ ಕೊನೆಗೆ ಧರ್ಮರಾಯ ಅದರ ಪ್ರಶ್ನೆಗಳಿಗೆ ಉತ್ತರಿಸಿ ಭೀಮನನ್ನು ಬಿಡಿಸುತ್ತಾನೆ. ಅದು ಯಕ್ಪಪ್ರಶ್ನೆಯಂಥ ಮತ್ತೊಂದು ಕತೆ.

3 comments:

ಟೀನಾ said...

ಜೋಗಿಯವರೆ,
ಈ ಕಥೇನ ನಾನು ಪುಟ್ಟವಳಿರೋವಾಗ ಓದಿದ್ದು. ನನ್ನ ಮನೆಯ ಲೇಜೀ ಮಧ್ಯಾಹ್ನಗಳ ನೆನಪು ತಂದುಕೊಡ್ತು ಇದು. ಆದ್ರೆ ನಾನು ಇದನ್ನ ಆಗ್ ಗ್ರಹಿಸ್ಕೊಂಡಿದ್ದು ಶಚೀದೇವಿಯ ಪಾಯಿಂಟ್ ಆಫ್ ವ್ಯೂನಿಂದ. ಅಲ್ಲ ಈ ಇಂದ್ರಂಗೆ ಅಷ್ಟೊಳ್ಳೆ ಹೆಂಡ್ತೀನ ಬಿಟ್ಟು ಯಾವ್ದೋ ಹೂವೊಳಗೆ ಬಚ್ಚಿಟ್ಕೊಳ್ಳೋಕೇನಾಗಿತ್ತು ಅನ್ಕೊಂಡಿದ್ದೆ. ಈ ಪಾಲಿಟಿಕ್ಸು ತಲೆಗೆ ಹೋಗಿರ್ಲಿಲ್ಲ. ಈಗ ನೆನಪಾಗಿ ನಗು ಬಂತು.
-ಟೀನಾ.

Arun said...

:-)

Anonymous said...

ದೇವ ಜನರ ರಾಜಕೀಯ ಬಹಳ ರುಚಿಕಟ್ಟಾಗಿರುತ್ತೆ! ದೇವುಡು ಅವರ ‘ಮಹಾ ಕ್ಷತ್ರಿಯ’ ಕಟ್ಟಿಕೊಡುವ ನಹುಷನ ಚಿತ್ರಣವೇ ಬೇರೆ. ಎಲ್ಲವೂ ಅವರವರ ಭಾವಕ್ಕೆ... ಅವರವರ ಭಕುತಿಗೆ!

ನಹುಷ ಇಂದ್ರನಾದ ಕಥೆ ನಂಗೆ ತೀರ ಮೆಚ್ಚು. ಬೇರೆಯೇ ಕಾರಣಕ್ಕೆ

- ಚೇತನಾ ತೀರ್ಥಹಳ್ಳಿ