Wednesday, January 9, 2008

ಕನ್ನಡ ಕುವರಿಯ ಮುಡಿಗೆ ಕೆಂಡಸಂಪಿಗೆ..

ಆಗ ನಾವು ಉಪ್ಪಿನಂಗಡಿಯಲ್ಲಿದ್ದೆವು.
ಅದೇ ಹೊತ್ತಿಗೆ ಕೈಗೆ ಸಿಕ್ಕಿದ್ದು ರಶೀದರ ಹಾಲು ಕುಡಿದ ಹುಡುಗಾ ಕಥಾಸಂಕಲನ. ಅದನ್ನು ಮೊದಲು ಸಂಪಾದಿಸಿದ್ದು ಗೆಳೆಯ ಅಶ್ರಫ್. ಅದೆಲ್ಲಿಂದ ತಂದನೋ ಗೊತ್ತಿಲ್ಲ. ಓದಿ ನನ್ನ ಕೈಗೆ ಕೊಟ್ಟ. ನಾನು ಓದಿ ಖುಷಿಪಟ್ಟು ಅದನ್ನು ಯಾರಿಗೂ ಕೊಡುವುದಿಲ್ಲ ಎಂದು ಹೇಳಿ ನಮ್ಮಲ್ಲೇ ಜಗಳವಾಗಿ ಝೆರಾಕ್ಸು ಮಾಡಿಸಿ ಎಲ್ಲರೂ ಓದಿ ರಶೀದನ್ನು ಆರಾಧಿಸಲು ಆರಂಭಿಸುವ ಹೊತ್ತಿಗೆ ರಶೀದ್ ಮತ್ತೆ ಮಾಯವಾದರು.
ಆಮೇಲೆ ಅವರು ಕಾಣಿಸಿಕೊಂಡದ್ದು ಲಂಕೇಶ್ ಪತ್ರಿಕೆಯಲ್ಲಿ. ಆಗ ಅವರು ನೇಪಾಳದಲ್ಲೋ ಶಿಲ್ಲಾಂಗಿನಲ್ಲೋ ಇದ್ದರು. ಅಲ್ಲಿಂದ ಲಂಕೇಶರಿಗೆ ಪತ್ರ ಬರೆಯುತ್ತಿದ್ದರು.ಕೊನೆಕೊನೆಗೆ ಅದು ಕಣ್ಮರೆಯಾಗುತ್ತಾ ರಶೀದ್ ಮತ್ತೆ ಮಾಯವಾದರು. ಅದಾದ ನಂತರ ಅವರ ಧ್ವನಿ ಕೇಳಿಸಿದ್ದು ಮೈಸೂರು ಆಕಾಶವಾಣಿಯಲ್ಲಿ. ಅದರ ಜೊತೆಜೊತೆಗೇ ಮೈಸೂರು ಪೋಸ್ಟ್ ಬ್ಲಾಗಿನಲ್ಲಿ.
ಇದೀಗ ರಶೀದ್ ಆಕಾಶವಾಣಿ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಕೆಂಡಸಂಪಿಗೆ ಎನ್ನುವ -ವೆಬ್ ಪತ್ರಿಕೆ- ಆರಂಭಿಸಿದ್ದಾರೆ. ಅನೇಕ ಬ್ಲಾಗಿಗರಿಂದ, ಬರೆಯುವುದನ್ನು ಬಿಟ್ಟಿದ್ದ ಅನೇಕ ಸೋಮಾರಿಗಳಿಂದ ಬರೆಸಿದ್ದಾರೆ.
ಸಿಂಧು, ಶ್ರೀರಾಮ್, ಚೇತನಾ ಹೀಗೆ ಈಗಾಗಲೇ ಬ್ಲಾಗ್ ಮತ್ತು ಬರಹಗಳಿಂದ ಪರಿಚಯವಾಗಿರುವ ಮೆಚ್ಚಿನ ಹೆಸರುಗಳ ಜೊತಗೇ ಒಂದು ಅಚ್ಚರಿಯನ್ನೂ ಕೊಟ್ಟಿದ್ದಾರೆ ರಶೀದ್.
ಅದು ರಾಜೇಶ್ವರಿ ತೇಜಸ್ವಿಯವರ ಬರಹ. ಅವರ ಮನೆಗೆ ಸುಮಾರು ಹದಿನೈದು ಸಲವಾದರೂ ಹೋಗಿರಬಹುದು ನಾನು. ಯಾವತ್ತೂ ಅವರು ಬರೆಯಬಹುದು ಎಂದು ಯೋಚಿಸಿರಲೇ ಇಲ್ಲ. ಕಾಫಿ ಗಿಡದಲ್ಲಿ ಅರಳಿರುವ ಹೂವಿನ ಹಾಗೆ, ಮುದ ಕೊಡುವ ಈ ಬರಹದ ಒಂದು ತುಣುಕು ಇಲ್ಲಿದೆ. ಇದು ಸಣ್ಣ ಸ್ಯಾಂಪಲ್ ಅಷ್ಟೇ. ಪೂರ್ತಿ ಬರಹಕ್ಕೆ ಕೆಂಡಸಂಪಿಗೆ ಮುಡಿಯಿರಿ.

ಬೆಳಿಗ್ಗೆ ಹೂವಿನ ಮೇಲೆ ಮಳೆ ಬಂತೆಂದರೆ ನಮಗೆ ಚಿಂತೆ

ಒಂದು ಕಾಲದಲ್ಲಿ ತರುಣರಿಗೆ ಕಾಫಿ ತೋಟದವರ ಅಳಿಯನಾಗುವುದೇ ಹೆಬ್ಬಯಕೆ. ಅಥವಾ ಇವರ ಮನೆಯಂಗಳದಲ್ಲಿ ಬೆಳೆದ ಮಗಳನ್ನು ಸೊಸೆ ಮಾಡಿಕೊಳ್ಳುವುದೆಂದರೆ ಬಯಲು ಸೀಮೆ ಕಡೆಯವರಿಗೆ ಹಿರಿಹಿರಿ ಹಿಗ್ಗು. ಈಗ ಸ್ವಲ್ಪ ಪರಿಸ್ಥಿತಿ ಬದಲಾಯಿಸಿದೆ. ಎಲ್ಲರ ಆರ್ಥಿಕ ಸ್ಥಿತಿ ಬದಲಿಸಿದಂತೆ. ಮುಳ್ಳಯ್ಯನ ಗಿರಿ ಚಂದ್ರದ್ರೋಣ ಪರ್ವತದ ತಪ್ಪಲಿನ (ಬಾಬಾ ಬುಡನ್‌ಗಿರಿ) ಕಡೆಯಿಂದಲೂ ಬೇಲೂರಿನ ಕಡೆಯಿಂದಲೂ ಮೂಡಿಗೆರೆಗೆ ಬಂದು ಹ್ಯಾಂಡ್‌ಪೋಸ್ಟ್‌ನಲ್ಲಿ ಹಾಯ್ದು ಕುದುರೆಮುಖ ತಲುಪುವವರೆಗೂ ಉದ್ದಕ್ಕೂ ಕಾಣಸಿಗುವುದು ಕಾಫಿತೋಟವೇ. ಸಾಮಾನ್ಯವಾಗಿ ಏಪ್ರಿಲ್ , ಮೇನಲ್ಲಿ ಹೂವಿನ ಮಳೆ ಆಗುತ್ತೆ.ಈ ಮಳೆ ತೋಟದ ಮಾಲೀಕನನ್ನು ಆಡಿಸುತ್ತೆ ಕುಣಿಸುತ್ತೆ. ಒಳ್ಳೆ ಮಳೆ ಅಂದರೆ ಅಂದಾಜು ಒಂದು ಇಂಚು ಮಳೆಯಾದರೆ ಹೂ ಚೆನ್ನಾಗಿ ಅರಳುವ ನಿರೀಕ್ಷೆ ಇದ್ದರೂ ಸಾಕು ಬ್ಯಾಂಕಿನ ಮುಂದೆ ಕ್ಯೂ ದೊಡ್ಡದಂತೆ, ಹೊಸ ಮಾಡಲ್‌ಕಾರು ಕೊಳ್ಳಲೋ ಬದಲಿಸಲೋ ಹವಣಿಕೆಯಲ್ಲಿರುತ್ತಾರೆ. ಎಲ್ಲರಿಗೂ ಗೊತ್ತಿರುವ ವಿಷಯ ಮದುವೆ ಮಾರ್ಕೆಟ್ಟೂ ಕುದುರುತ್ತೆಂದು. ರಸ್ತೆಯಲ್ಲಿ ಸಿಕ್ಕಿದವರೆಲ್ಲಾ ನಿಮಗೆಷ್ಟಾತು ಮಳೆಯೆಂದು ವಿಚಾರ ವಿನಿಮಯ ಮಾಡಿಕೊಳ್ಳುವವರೆ.ಈ ಹೂಮಳೆ ಬಂದು ಎಂಟು ಹತ್ತು ದಿನಗಳ ನಂತರ ಕಾಫಿ ಹೂ ಅರಳುತ್ತೆ. ಈಗ ನೋಡಿ ತೋಟದ ಗತ್ತೇ ಬೇರೆ. ಇದರ ಸೊಬಗು ಬಲು ಚೆಂದ. ಇಡೀ ನಾಡೇ ಸೊಬಗನ್ನು ಸೂಸುತ್ತಿರುತ್ತೆ. ಇದರ ಸುವಾಸನೆ ಹಿನ್ನೆಲೆ ತಂಬೂರಿ ಶ್ರುತಿಯಂತೆ ಎಲ್ಲೆಲ್ಲೂ ವಾತಾವರಣವೇ ಅದಾಗುತ್ತೆ. ಪಚೇಂದ್ರಿಯಕ್ಕೇ ಸಂತೋಷ ಕೊಡುತ್ತೆ. ಇದು ರಮಣೀಯ ದೃಶ್ಯ. ಕುವೆಂಪು ಅವರು ಹೇಳಿದಂತೆ ‘ಅದ್ಭುತ ! ಹೂವಿನ ಚೆಲುವನ್ನು ಕಣ್ಣು ನೋಡಿ ಪೂರೈಸಲಾಗುವುದಿಲ್ಲ. ಹೂವಿನ ಕಡಲಿನ ಮಧ್ಯೆ ತೇಲಾಡಿ ಆ ಸೌಂದರ್ಯದಲ್ಲಿ ಓಲಾಡಿ ಆ ವೈಭವವನ್ನು ಅನುಭವಿಸಿಯೇ ಸವಿಯಬೇಕು !’ ಕಾಫಿ ಹೂ ಅರಳಿದಾಗ ಮುಂಜಾನೆಯಲ್ಲಿ ಮಧು ಹೀರಲು ಬರುವ ಜೇನಿನ ಜೇಂಕಾರಕ್ಕೆ ಓಂಕಾರವಾಗಿ ಬೇರೊಂದು ಲೋಕವೇ ತೆರೆದುಕೊಳ್ಳುತ್ತೆ. ಜೇನು ಮುತ್ತುವುದು ಪರಾಗ ಸ್ಪರ್ಶಕ್ಕೆ ಅತಿಮುಖ್ಯವಾದದ್ದು.
ಈ ಸಮಯದಲ್ಲೇನಾದರೂ ಬೆಳಿಗ್ಗೆ ಹೂವಿನ ಮೇಲೆ ಮಳೆ ಬಂತೆಂದರೆ ನಮಗೆ ಚಿಂತೆ ಆವರಿಸುವುದೇ ಸೈ. ಆ ವರ್ಷದ ಇಳುವರಿ ಕಡಿಮೆಯಾಗುತ್ತೆನ್ನುವುದು ನಮ್ಮ ಅನುಭವವೇ ಆಗಿದೆ. ಈ ಹೂವಿನ ಜೇನು ತೆಳ್ಳಗೆ ನೀರಿನಂತೆ ಇರುತ್ತೆ. ಹೂವಿನ ಗಾಢ ಪರಿಮಳವೂ ಇರುತ್ತೆ. ತಿನ್ನಲು ನೆಕ್ಕಲು ಬಲು ರುಚಿ. ಬನ್ನಿ ಒಮ್ಮೆಯಾದರೂ ಅನುಭವಿಸಿ ಆನಂದಿಸಿರಿ ಈ ಅದ್ಭುತವನ್ನು.
4 comments:

ಮಹೇಶ ಎಸ್ ಎಲ್ said...

ರಷೀದ್ ರ ಕೆಂಡಸಂಪಿಗೆ ನಿಜಕ್ಕೂ ಅದ್ಭುತವಾಗಿದೆ

Anonymous said...

ಏನ್ ಸಾರ್... ಕೆಂಡಸಂಪಿಗೆ ಅಂತೇಳಿ ಮೊಟ್ಟೆ ಸಂಪಿಗೆ ಫೋಟೋ ಹಾಕಿದೀರಾ? ಇಲ್ಲಿರೋದು ಬಿಳಿಯ ಉರುಟಾದ ಸಂಪಿಗೆ ಜಾತಿಯ, ಆದರೆ ಕೆಂಡಸಂಪಿಗೆಯ ವಾಸನೆ ಇಲ್ದಿರೋ ಮೊಟ್ಟೇಸಂಪಿಗೆ.... ನಮ್ಗೆ ಕೆಂಡಸಂಪಿಗೇನೇ ಬೇಕು. ಅದ್ರದ್ದೇ ಚಿತ್ರ ಹಾಕಿ ಸಾರ್

Anonymous said...

ಕೆಂಡ ಸಂಪಿಗೆ ಚಿತ್ರ ಎಲ್ಲಾರೂ ಸಿಕ್ಕರೆ ಕಳುಹಿಸಿಕೊಡಿ.
-ಜೋಗಿ

mysoorininda said...

nangoo beku kalisi

rasheed