Sunday, January 6, 2008

ಆರೋಗ್ಯವೇ ಭಾಗ್ಯ ಅನ್ನುವ ಹಳೆಯ ಸಾಲುಗಳನ್ನು ನಿರಾಕರಿಸುತ್ತಾ..

ಕಾಯಿಲೆ ಬಿದ್ದಾಗ ಸಿಗುವಷ್ಟು ಅನುಭವ ನಮಗೆ ಮತ್ತೆಲ್ಲೂ ಸಿಗುವುದಿಲ್ಲ ಅನ್ನುವ ರಾಬರ್ಟ್ ಲಿಂಡ್‌ನ ಮಾತಲ್ಲಿ ನನಗೆ ಪೂರ್ತಿ ನಂಬಿಕೆಯಿದೆ. ಜ್ವರವೋ, ನೆಗಡಿಯೋ ಆಗಿ ಬಿದ್ದುಕೊಂಡಿದ್ದಾಗ ಆಗುವ ಅನುಭವಗಳಂತೂ ಅನುಭವಾತೀತ. ಆಗಂತೂ ಪರತತ್ವದ ಸಕಲ ಸಿದ್ಧಾಂತವೂ ಅರ್ಥವಾಗಿ ಹೋಗುತ್ತದೆ. ದೈವಿಕವಾದ ಅನುಭವಗಳೂ ಆಗುತ್ತವೆ. ಇದ್ದಕ್ಕಿದ್ದಂತೆ ಬುದ್ಧ ನೆನಪಾಗಿ ಆಶೆಯೇ ದುಃಖಕ್ಕೆ ಮೂಲ ಅನ್ನುವುದು ಕಣ್ಣಿಗೆ ಕಟ್ಟುತ್ತದೆ. ಮಹಾತ್ಮ ಗಾಂಧಿ ಕಾಯಿಲೆಗಳ ಬಗ್ಗೆ ಮಾತಾಡಿದ್ದನ್ನು ನೆನಪಿಸಿಕೊಳ್ಳುತ್ತೇವೆ. ನಮ್ಮ ದುರಭ್ಯಾಸಗಳೂ ದೇಹದ ಬಗ್ಗೆ ಯಾರ್‍ಯಾರೋ ಹೇಳಿದ ಮಾತುಗಳೂ ಸಾವಿನ ಕುರಿತ ಅಸಂಖ್ಯ ಕೊಟೇಶನ್ನುಗಳೂ ನೆನಪಿಗೆ ಬರುತ್ತವೆ. ಕಾಯಿಲೆ ನಮ್ಮನ್ನು ಜ್ಞಾನಿಯನ್ನಾಗಿ ಮಾಡಿಬಿಡುತ್ತದೆ. ಬಹುಶಃ ನಮಗೆ ಜ್ಞಾನೋದಯವಾಗುವುದು ಸಾವು ಬದುಕುಗಳ ಹೊಸಿಲಲ್ಲಿ ಮಲಗಿದ್ದಾಗಲೇ.
ಸಾವು ನಿಧಾನವಾಗಿ ಬರುವುದು ಬೇರೆ, ಇದ್ದಕ್ಕಿದ್ದ ಹಾಗೆ ಬಂದು ಹೋಗುವುದು ಬೇರೆ. ಕೆಲವೊಮ್ಮೆ ಸಾವೆಂಬ ಮೋಹಿನಿ ನಮ್ಮ ಕಣ್ಮುಂದೆಯೇ ಸಾಗಿಹೋಗಿ, ಆಕೆಯ ಸೆರಗಷ್ಟೇ ನಮ್ಮನ್ನು ಸ್ಪರ್ಶಿಸಿರುತ್ತದೆ. ಆಕೆ ಹಾಕಿಕೊಂಡ ಅತ್ತರಿನ ಗಮಗಮವಷ್ಟೇ ನಮ್ಮ ಮೂಗಿಗೆ ತಾಕಿರುತ್ತದೆ. ಅಷ್ಟೇ ಸಾಕು, ಈ ಜೀವಕ್ಕೆ ಎಂಬಂತೆ ನಾವು ಮತ್ತೊಂದಷ್ಟು ದಿನ ಅತ್ಯಂತ ನಿಸ್ಪೃಹರಾಗಿ ಮಾತಾಡಲು ಯತ್ನಿಸುತ್ತೇವೆ. ಕಣ್ಣೆದುರಿಗೇ ಇದ್ದ ಜೀವವೊಂದು ಕಣ್ಮರೆಯಾಗಿ ಹೋದಾಗ ಸೃಷ್ಟಿಯಾಗುವ ಶೂನ್ಯದಲ್ಲಿ ಬದುಕಿರುವ ಜೀವ ತನ್ನನ್ನು ತಿದ್ದಿಕೊಳ್ಳಲು ಯತ್ನಿಸುವುದು ಕೂಡ ಒಂದು ರೀತಿಯಲ್ಲಿ ವಿಪರ್ಯಾಸವೇ.
ಕಾಯಿಲೆ ಬಿದ್ದುಕೊಂಡಿದ್ದಾಗ ಕಣ್ಣಮುಂದೆ ಅಷ್ಟೂ ವರುಷಗಳ ಬದುಕು ಮೆರವಣಿಗೆ ಹೊರಡುತ್ತದೆ. ಕಳೆದ ಕೆಲವು ವರುಷಗಳನ್ನು ಅರ್ಥಪೂರ್ಣವಾಗಿ ಬದುಕಬಹುದಿತ್ತಲ್ಲ ಅನ್ನಿಸುವುದಕ್ಕೆ ಶುರುವಾಗುತ್ತದೆ. ಇನ್ನಾದರೂ ಒಳ್ಳೆಯ ಬದುಕನ್ನು ಬದುಕಬೇಕು ಅನ್ನುವ ಪ್ರಜ್ಞೆ ಮೊಳೆಯುತ್ತದೆ. ಅದನ್ನು ನಮ್ಮವರು ಸ್ಮಶಾನ ವೈರಾಗ್ಯ ಎಂದು ಕರೆದು ಒಂದೇ ಮಾತಲ್ಲಿ ತಳ್ಳಿ ಹಾಕಿದ್ದಾರೆ. ಆದರೆ ಒಂದು ಕ್ಷಣ ಬಂದುಹೋಗುವ ವೈರಾಗ್ಯ ಕೂಡ ಬದುಕನ್ನು ಅಷ್ಟರ ಮಟ್ಟಿಗೆ ಬದಲಾಯಿಸುತ್ತದೆ ಎಂದು ಯಾಕೆ ನಂಬಬಾರದು. ಸಾವು, ವೃದ್ದಾಪ್ಯ ಮತ್ತು ರುಜಿನವನ್ನು ಕಂಡ ಸಿದ್ಧಾರ್ಥ ಅದರಿಂದ ಪಾರಾಗಲು ಹೊರಟು ತಥಾಗತನಾದದ್ದು ಒಂದು ಕತೆ. ಗೆಲುವಿನ ಉತ್ತುಂಗದಲ್ಲಿದ್ದಾಗ ಅದರ ಅಪ್ರಯೋಜಕತೆಯನ್ನೂ ಸೋಲಿನ ಅವಮಾನವನ್ನೂ ಏಕಕಾಲಕ್ಕೆ ಅನುಭವಿಸಿದವನು ಬಾಹುಬಲಿ. ಸೋತವನಿಗೆ ಯಾವತ್ತೂ ಜ್ಞಾನೋದಯ ಆಗುವುದಿಲ್ಲ ಅನ್ನುವುದು ಅಲ್ಲಿಗೆ ಶತಸ್ಸಿದ್ಧ. ಸೋತವನಿಗೆ ಆಗುವ ಜ್ಞಾನೋದಯವನ್ನು ಕನ್ನಡ ಸಿನಿಮಾ ಬಿಟ್ಟರೆ ಬೇರೆ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಕನ್ನಡ ಸಿನಿಮಾ ಮತ್ತು ಹಳೆಯ ನಾಟಕಗಳಲ್ಲಿ ಮಾತ್ರ ಸೋತ ಖಳನಾಯಕ- ನಾನು ಸೋತುಬಿಟ್ಟೆ ಕಣೋ, ನಂಗೀಗ ಬುದ್ಧಿ ಬಂತು. ನನ್ನ ಕ್ಷಮಿಸಿಬಿಡು ಅಂತಾನೆ. ಅಂಥ ಜ್ಞಾನೋದಯದ ಬಗ್ಗೆ ನಮ್ಮಲ್ಲಿ ಗೌರವ ಇಲ್ಲ.
ನೋವುಗಳ ಪೈಕಿ ನಮ್ಮನ್ನು ಅತ್ಯಂತ ಸುಲಭವಾಗಿ ಮೋಕ್ಷಗಾಮಿಗಳನ್ನಾಗಿಸುವುದು ಹಲ್ಲುನೋವು. ಹಲ್ಲು ಜ್ಞಾನಕೇಂದ್ರಕ್ಕೂ ಬುದ್ಧಿಕೇಂದ್ರಕ್ಕೂ ಭಾವಕೇಂದ್ರಕ್ಕೂ ಹತ್ತಿರದಲ್ಲೇ ಇರುವುದರಿಂದ ಅದರ ಪರಿಣಾಮ ತುಸು ಹೆಚ್ಚೇ ಇರುತ್ತದೆ. ಹಲ್ಲು ನೋವಿನಿಂದ ನರಳುವ ವ್ಯಕ್ತಿಗೆ ಅವನು ತುಂಬ ಮೆಚ್ಚುವಂಥ ಸಂಗತಿಗಳ ಬಗ್ಗೆ ಹೇಳಿ ನೋಡಿ. ಐಶ್ವರ್ಯ ರೈ, ಜಾಮೂನು, ಮಸಾಲೆದೋಸೆ, ಕೋಟ್ಯಂತರ ರುಪಾಯಿ ಆಸ್ತಿ ಎಲ್ಲವನ್ನೂ ಆತ ಒಂದೇ ಏಟಿಗೆ ತಿರಸ್ಕರಿಸಬಲ್ಲ. ಎಂಥದೇ ಐಹಿಕ ಆಮಿಷಗಳನ್ನು ಪಕ್ಕಕ್ಕೆ ಸರಿಸಬಲ್ಲ. ಅದು ನಿಜವಾದ ಜ್ಞಾನೋದಯದ ಸ್ಥಿತಿ.
ಹಾಗಂತ ಅದೇ ಹಲ್ಲುನೋವು ಶಾಶ್ವತವಾಗಿದ್ದರೆ ಆತ ಜ್ಞಾನಿಯಾಗುತ್ತಾನಾ? ಖಂಡಿತಾ ಇಲ್ಲ. ನೋವು ಅಭ್ಯಾಸವಾದರೆ ಆತ ಸಿನಿಕನಾಗುತ್ತಾನೆ. ನೋವಿನ ಜೊತೆಗೇ ಬದುಕುವುದಕ್ಕೆ ಆರಂಭಿಸುತ್ತಾನೆ. ಅಶ್ವತ್ಥಾಮನ ಹಾಗೆ ಹುಣ್ಣನ್ನಿಟ್ಟುಕೊಂಡು ಬದುಕುವುದನ್ನು ಅಭ್ಯಾಸ ಮಾಡಿಕೊಂಡವನಿಗೂ ಜ್ಞಾನೋದಯ ಸ್ಥಿತಿ ಲಭಿಸುವುದಿಲ್ಲ. ಸಿದ್ಧಾರ್ಥ ಅಪರೂಪಕ್ಕೊಮ್ಮೆ ಸಾವುನೋವುಗಳನ್ನು ಕಂಡದ್ದರಿಂದ ಅದರಿಂದ ಪಾರಾಗುವುದಕ್ಕೆ ನೋಡಿದ. ಅದರ ನಡುವೆಯೇ ಬದುಕುತ್ತಿರುವವನಿಗೆ ಆ ಪರಿಣಾಮ ಅಷ್ಟೊಂದು ಗಾಢವಾಗಿರುವುದಿಲ್ಲ.
ಜಗತ್ತಿನಲ್ಲಿ ಎರಡೇ ಥರದ ಮಂದಿ; ನೋವುಳ್ಳವರು ಮತ್ತು ನೋವಿಲ್ಲದವರು. ಅವರಲ್ಲೂ ಎರಡು ಥರದ ಜನ; ನೋವನ್ನು ತೋರಿಸುವವರು, ತೋರಿಸದೇ ಇರುವವರು. ನೋವನ್ನು ತೋರಿಸದೇ ಓಡಾಡುವವರ ಬಗ್ಗೆ ಅನುಕಂಪ ಇಟ್ಟುಕೊಳ್ಳೋಣ. ಸಣ್ಣ ನೋವಾದಾಗಲೂ ಹಾಹಾಕಾರ ಮಾಡಿ, ರಂಪ ಎಬ್ಬಿಸಿ, ಗಲಾಟೆ ಮಾಡಿ, ಇಡೀ ನಾಡಿಗೇ ತನ್ನ ನೋವು ತಿಳಿಯುವಂತೆ ಮಾಡುವ ಮಂದಿ ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಒಂದು ಶತಮಾನಗಳ ಕಾಲ ಒಬ್ಬ ವ್ಯಕ್ತಿಯ ಕಾಯಿಲೆಗಳ ಬಗ್ಗೆ ಓದುತ್ತಾ ಕನ್ನಡ ಮನಸ್ಸು ಪ್ರಬುದ್ಧಗೊಂಡದ್ದು ನಿಮಗೆ ಗೊತ್ತಿದೆ. ಆ ನೋವು ಸಾಹಿತ್ಯವೂ ಇತಿಹಾಸವೂ ಆಗಿರಲಿಲ್ಲ ಅನ್ನುವುದೂ ಗಮನಾರ್ಹ.
ನೋವುಗಳನ್ನು ಅತ್ಯಂತ ನಿಕೃಷ್ಟವಾಗಿ ನೋಡುವವರು ವೈದ್ಯರು. ಅವರ ಪಾಲಿಗೆ ಯಾವ ನೋವೂ ನೋವೇ ಅಲ್ಲ. ನೋವಿನ ಮೂಲಕ ನಾವು ಮತ್ತೊಂದು ಸ್ಥಿತಿಗೆ ತಲುಪುವುದು ಅವರಿಗೆ ಇಷ್ಟವಿಲ್ಲ. ನೀವು ಅತ್ಯಂತ ಭಯಾನಕವಾದ ನೋವಿನಿಂದ ನರಳುತ್ತಿದ್ದರೂ ಕೂಡ ವೈದ್ಯರು ನಸುನಗುತ್ತಾ ಆ ಗಾಯವನ್ನು ವೀಕ್ಷಿಸುತ್ತಾರೆ. ಪರವಾಗಿಲ್ಲ, ಇದು ಎಷ್ಟೋ ಬೆಟರ್ರು ಅನ್ನುತ್ತಾರೆ. ಅಂದರೆ ಅದಕ್ಕಿಂತಲೂ ಹೀನಾಯವಾದ ನೋವಿನ ಸ್ಥಿತಿಯೊಂದಿದೆ. ಅದಕ್ಕೆ ಹೋಲಿಸಿದರೆ ಇದು ವಾಸಿ ಅನ್ನುವುದು ಅವರ ಮಾತಿನ ಅರ್ಥ ಎಂದು ನಾವು ಭಾವಿಸುತ್ತೇವೆ. ಆದರೆ ಯಥಾರ್ಥದಲ್ಲಿ ಆ ಮಾತು ಅವರ ಜ್ಞಾನಕ್ಕೆ ಸಂಬಂಧಿಸಿದ್ದಾಗಿರುತ್ತೆ ಅಂತ ಇತ್ತೀಚೆಗೆ ಅರಿವಾಗಿದೆ.
ರೋಗಿಗಳನ್ನು ನೋಡುವುದಕ್ಕೆ ಬರುವವರು ಕೂಡ ತತ್ವಜ್ಞಾನಿಗಳೇ ಆಗಿಬಿಡುತ್ತಾರೆ ಅನ್ನುವುದು ವಿಶೇಷ. ಜ್ಞಾನ ಹೇಗೆ ಜ್ಞಾನವನ್ನೇ ತನ್ನ ಸುತ್ತ ಪಸರಿಸುತ್ತದೆ ಅನ್ನುವುದಕ್ಕೆ ಅದೊಂದು ಉದಾಹರಣೆ. ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕಾ ಬರುತ್ತವೆ? ಅನ್ನುವ ತೀರಾ ಸಾಮಾನ್ಯವಾದ ಸತ್ವಪೂರ್ಣ ಹೇಳಿಕೆಯಿಂದ ಹಿಡಿದು, ಇದನ್ನು ನೀನು ಮೀರಬಲ್ಲೆ ಕಣಯ್ಯಾ ಎಂದು ಆತ್ಮವಿಶ್ವಾಸವನ್ನು ತುಂಬುವವರ ತನಕ ಎಲ್ಲರೂ ಆ ಕ್ಷಣಕ್ಕೆ ಬುದ್ಧರೇ. ಮತ್ತೆ ಕೆಲವರು ಉದಾಹರಣೆ ಮತ್ತು ತೌಲನಿಕ ಅಧ್ಯಯನಗಳ ಮೂಲಕ ನಿಮ್ಮನ್ನು ಸಾಂತ್ವನಗೊಳಿಸುವುದುಂಟು. ಬೀಪಿ ೧೨೦/೧೮೦ ಅಂಥ ಹೇಳಿದ ತಕ್ಷಣ, ಇದ್ಯಾವ ಮಹಾ ಬಿಡಿ. ಕೇಶವರಾಯರಿಗೆ ೧೬೦/೨೦೦ ಆಗಿತ್ತು ಅಂದುಬಿಡುತ್ತಾರೆ. ಅದರಿಂದ ಸಮಾಧಾನಿಗಳಾಗಬೇಡಿ. ಕೇಶವರಾಯರು ಏನಾದರು ಅಂತ ಕೇಳಿನೋಡಿ; ಮಾರನೇ ದಿನ ಸತ್ತುಹೋದರು ಅಂತ ಸಂತಾಪಸೂಚಕ ದನಿಯಲ್ಲಿ ಹೇಳುತ್ತಾರೆ. ಇದು ಮತ್ತೊಂದು ರೀತಿಯ ವೇದಾಂತ.
ಆಲನಹಳ್ಳಿ ಕೃಷ್ಣ ತೀರಿಕೊಂಡಾಗ, ತೇಜಸ್ವಿಯವರು ನಮ್ಮದೆಲ್ಲ ಗ್ಯಾರಂಟಿ ಪಿರಿಯಡ್ ಆಗಿಹೋಗಿದೆ’ ಅನ್ನುವ ಅರ್ಥದಲ್ಲಿ ಬರೆದಿದ್ದರು. ಓರಗೆಯ ಮಂದಿ ತೀರಿಕೊಂಡಾಗ ತುಂಬ ಕಂಗಾಲಾದವರಿದ್ದಾರೆ. ಓರಗೆಯ ಮಂದಿ ಕಾಯಿಲೆ ಬಿದ್ದಾಗ ಹುಷಾರಾದವರಿದ್ದಾರೆ. ಆದರೆ ತುಂಬ ಚಿಕ್ಕ ವಯಸ್ಸಿನ ಗೆಳೆಯರ ಸಾವು ಮನಸ್ಸಿನಲ್ಲಿ ಬೇರೆಯೇ ಥರದ ಪರಿಣಾಮವನ್ನು ಮೂಡಿಸುತ್ತದೆ. ಅಲ್ಲಿ ನಮ್ಮನ್ನು ಉಳಿಸಿಕೊಳ್ಳಬೇಕು ಅನ್ನುವ ಎಚ್ಚರಕ್ಕಿಂತ ಹೆಚ್ಚಾಗಿ, ಸಾವೆಂಬ ಪರಕೀಯ ಯಾವ ಸುಳಿವನ್ನೂ ಕೊಡದೇ ಬಂದೆರಗುವ ಕೌರ್ಯದ ಕುರಿತ ಸಿಟ್ಟೇ ತುಂಬಿರುತ್ತದೆ.
ನಮ್ಮ ದುಶ್ಚಟಗಳನ್ನು ಸಮರ್ಥಿಸಿಕೊಳ್ಳಲು ನಾವು ಬೇರೆಯವರ ಸಾವನ್ನು ಉದಾಹರಣೆಯನ್ನಾಗಿ
ಬಳಸುವುದುಂಟು. ಯಾರಾದರೂ ಹೃದಯಾಘಾತದಿಂದ ತೀರಿಕೊಂಡ ಸುದ್ದಿ ಬಂದಾಗ ಎದುರಾಗುವ ಮೊದಲ ಪ್ರಶ್ನೆ. ಆತ ಸಿಗರೇಟು ಸೇದುತ್ತಿದ್ನಾ?’ ಹೌದು’ ಅಂದರೆ ಸಿಗರೇಟು ಸೇದುವವರಿಗೆ ಕೊಂಚ ಬೇಸರವಾಗುತ್ತೆ. ಇಲ್ಲ ಅಂದುಬಿಟ್ಟರೆ ಅವರು ಮತ್ತೊಂದು ಸಿಗರೇಟು ಹಚ್ಚಿಕೊಳ್ಳುತ್ತಾರೆ. ನೋಡಿದ್ರಾ? ಸಾವಿಗೆ ಕಾರಣವೇ ಬೇಕಿಲ್ಲ. ಅದು ಸುಮ್ಸುಮ್ನೆ ಬರಬಹುದು ಅನ್ನುತ್ತಾರೆ. ನಮ್ಮ ಶಿಸ್ತಿರದ ಜೀವನಕ್ಕೊಂದು ಸಮರ್ಥನೆ ಸಿಗುತ್ತದೆ.
ಶಿಸ್ತಿರದ ಜೀವನ ಅನ್ನುವುದು ಕೂಡ ಒಂದು ತಪ್ಪು ಪರಿಕಲ್ಪನೆ. ತುಂಬ ಶಿಸ್ತಿನಿಂದ ಬದುಕುವ ಮನುಷ್ಯನನ್ನೂ ಕಾಯಿಲೆಗಳು ಕಾಡಬಹುದು. ಸಾವು ಸೆಳೆದೊಯ್ಯಬಹುದು. ಸಾವು ಮತ್ತು ಕಾಯಿಲೆಯ ವಿಚಾರದಲ್ಲಿ ಯಾವುದೇ ಕಾನೂನುಗಳೂ ಅನ್ವಯಗೊಳ್ಳುವುದಿಲ್ಲ.

ಕಾಯಿಲೆ ಬಿದ್ದವರನ್ನು ನೋಡಲು ಹೋದಾಗ ತುಂಬ ಸೆನ್ಸಿಬಲ್ ಆದವರು ಆಡಬಹುದಾದ ಒಂದೇ ಮಾತು; ಇವತ್ತು ಪರವಾಗಿಲ್ಲ, ತುಂಬ ಸುಧಾರಿಸಿದ್ದೀಯ. ದಪ್ಪಗಿರುವವರನ್ನು ಕಂಡಾಗ ತೆಳ್ಳಗಿರುವವವರು ಆಡುವ ಸುಳ್ಳು ಮಾತು; ಏನ್ರೀ, ಒಂದು ಸುತ್ತು ತೆಳ್ಳಗಾಗಿದ್ದೀರಿ’ಯಂತೆ ಇದು ಕೂಡ ಆಪ್ಯಾಯಮಾನ.
ಕಾಯಿಲೆ ಬಿದ್ದ ವೈದ್ಯರನ್ನು ನೋಡುವುದೆಂದರೆ ನನಗೆ ಸಂಕಟ. ಯಾಕೆಂದರೆ ಅವರಿಗೆ ತಾವೇಕೆ ಕಾಯಿಲೆ ಬಿದ್ದಿದ್ದೇವೆ ಅನ್ನುವುದು ಸ್ಪಷ್ಟವಾಗಿ ಗೊತ್ತಿರುತ್ತದೆ. ಬೇರೆಯವರನ್ನು ನಿಮಗೇನೂ ಆಗಿಲ್ಲ, ಸುಮ್ನಿರಿ ಅಂತ ಹೇಳಿ ನಂಬಿಸುವ ಹಾಗೆ ವೈದ್ಯರು ತಮ್ಮನ್ನೇ ನಂಬಿಸಿಕೊಳ್ಳಲಾರರು. ನಾವೂ ಕೂಡ ಅವರನ್ನು ನೋಡುವುದಕ್ಕೆ ಹೋದಾಗ ಬೇಗ ವಾಸಿಯಾಗುತ್ತೆ ಅಂತ ಹೇಳೋ ಹಾಗಿರಲ್ಲ. ಏನು ಹೇಳಿದರೂ ಅದು ಸುಳ್ಳೆಂದು ಅವರಿಗೂ ನಮಗೂ ಗೊತ್ತಿರುತ್ತೆ. ನಾವು ಸುಳ್ಳು ಹೇಳುತ್ತಿದ್ದೇವೆ ಅನ್ನೋದು ಅವರಿಗೆ ಗೊತ್ತಿದೆ ಅನ್ನೋದು ನಮಗೂ ಗೊತ್ತಿರುತ್ತೆ. ಅದು ನಮಗೆ ಗೊತ್ತಿದೆ ಅನ್ನೋದು ಅವರಿಗೂ ಗೊತ್ತಿರತ್ತೆ. ಹೀಗೊಂದು ಸುಳ್ಳಿನ ಪ್ರಪಂಚದಲ್ಲಿ ಆದರ್ಶ ದಂಪತಿಗಳಂತೆ ಬಾಳುವುದು ಕಷ್ಟವೇ ಸರಿ.
ಕತೆಗಾರ ಸುರೇಂದ್ರನಾಥ್ ಅವರ ಒಂದು ಕತೆಯಲ್ಲಿ ಪೃಷ್ಟದಲ್ಲಿ ಕುರು ಎದ್ದ ವ್ಯಕ್ತಿಯೊಬ್ಬ ಅದನ್ನು ಹೆಂಡತಿಗೆ ಕೂಡ ತೋರಿಸುವುದಕ್ಕೆ ಸಂಕೋಚಗೊಂಡು ತೊಳಲಾಡುವ ಸನ್ನಿವೇಶ ಬರುತ್ತದೆ. ಕೊನೆಗೆ ಅದನ್ನು ಹೆಂಡತಿಯೇ ಹಿಚುಕಿ ಹಾಕಿ ಅವರನ್ನು ನೋವು ಮತ್ತು ಸಂಕಟದಿಂದ ವಿಮುಕ್ತಳನ್ನಾಗಿಸುತ್ತಾಳೆ. ಈ ರೂಪಕ ನನಗೆ ತುಂಬ ಮೆಚ್ಚುಗೆಯಾದ ಮೆಟಫರ್‌ಗಳಲ್ಲೊಂದು. ಅದು ಕೇವಲ ಕುರುವಷ್ಟೇ ಆಗಿರಬೇಕಿಲ್ಲ; ಮನಸ್ಸಿಗೆ ಸಂಬಂಧಿಸಿದ್ದೋ, ಉದ್ಯೋಗಕ್ಕೆ ಸಂಬಂಧಿಸಿದ್ದೋ, ಬದುಕಿಗೆ ಸಂಬಂಧಿಸಿದ್ದೋ ಆಗಿರಬಹುದು. ಎಷ್ಟೋ ಕಾಯಿಲೆಗಳಿಗೆ ಔಷಧಿ ಬೇಕಾಗಿಲ್ಲ, ಅದು ಪಕ್ಕದಲ್ಲೇ ಇರುತ್ತದೆ ಅನ್ನುವುದನ್ನೂ ಈ ಸಾಲು ಹೇಳುತ್ತದೆ ಅನ್ನುವುದು ಈಗ ಅಸ್ಪಷ್ಟವಾಗಿ ಹೊಳೆಯುತ್ತಿದೆ.
ವಾಕಿಂಗು, ಎಕ್ಸರ್‌ಸೈಜು ಎಲ್ಲಾ ರೋಗಕ್ಕೂ ಮದ್ದು ಅನ್ನುತ್ತಾರೆ. ಆದರೆ ಅದಕ್ಕಿಂತ ಸುಲಭವಾದ ಔಷಧಿ ಮಾತ್ರೆ ಅನ್ನುವ ಗೆಳೆಯರಿದ್ದಾರೆ. ಒಬ್ಬ ಬರಹಗಾರನನ್ನು ಯಾವ ಓದುಗ ಕೂಡ ನೀನು ಆರೋಗ್ಯವಾಗಿದ್ದೀಯಾ? ಹೇರ್‌ಕಟ್ ಮಾಡಿಸಿಕೊಂಡಿದ್ದೀಯಾ? ಒಳ್ಳೇ ಚಪ್ಪಲಿ ಹಾಕಿದ್ದೀಯಾ?’ ಅಂತ ಕೇಳುವುದಿಲ್ಲ. ನೀನು ಚೆನ್ನಾಗಿ ಬರೀತೀಯಾ ಅಂತಷ್ಟೇ ಕೇಳುತ್ತಾರೆ. ಒದ್ದಾಡಿಯೋ, ಕಷ್ಟಪಟ್ಟೋ ಆತ ಚೆನ್ನಾಗಿ ಬರೆಯಬೇಕು. ಆಗಲೇ ಓದುಗರ ಕಣ್ಣಲ್ಲಿ ಅವನು ಅಪ್ಪಟ ಆರೋಗ್ಯವಂತನಂತೆ ಕಾಣಿಸುತ್ತಾನೆ.

5 comments:

Shanmukharaja M said...

ನೈಜ ಸಂಗತಿಗಳನ್ನ ಚೆನ್ನಾಗಿ ಬರೆದಿದ್ದೀರ. ಓದಿ ಕುಶಿಯಾಯಿತು.

ಸುಧನ್ವಾ said...

articles about physical health and mental health!
i enjoyed.

apara said...

its very good. liked it
~apara

ಮಹೇಶ ಎಸ್ ಎಲ್ said...
This comment has been removed by the author.
ಮಹೇಶ ಎಸ್ ಎಲ್ said...
This comment has been removed by the author.