Tuesday, January 29, 2008

ಕವಿತೆಯನ್ನು ಮನೆ ತುಂಬಿಸಿಕೊಳ್ಳುವುದು ಹೇಗೆ?

ಕಾವ್ಯದ ಮೇಲೆ ನನಗೇನೂ ಸಿಟ್ಟಿಲ್ಲ. ಆದರೆ ಕವಿತೆ ಅರ್ಥವಾಗೋಲ್ಲ ಕಣ್ರೀ. ಕೆಲವು ಕವಿತೆಗಳಂತೂ ತುಂಬ ಕಷ್ಟ ಕೊಡುತ್ತವೆ. ಓದಿದರೆ ಮನಸ್ಸಲ್ಲಿ ಉಳಿಯುವುದಿಲ್ಲ ಎಂದು ಹೇಳುವವರಿದ್ದಾರೆ. ಅಂಥವರು ಕೂಡ ಕವಿತೆಗಳನ್ನು ವಿವರಿಸಿ ಹೇಳಿದರೆ ಓದಿ ಸಂತೋಷಪಡುತ್ತಾರೆ. ಆದರೆ ಹಾಗೆ ವಿವರಿಸಿ ಹೇಳುವುದು ಕೂಡ ಸುಲಭವಲ್ಲ. ವಿವರಿಸಿದಾಗ ಅರ್ಥವಾಗುವ ಕವಿತೆಯೇ ಬೇರೆ, ನಿಜದ ಕವಿತೆಯೇ ಬೇರೆ. ಅದೊಂದು ರೀತಿಯ ಜ್ಞಾನೋದಯದ ಹಾಗೆ ಅನ್ನುವವರೂ ಇದ್ದಾರೆ.
ಅಂತೂ ಕವಿತೆ ಅವರವರಿಗೆ ಅರ್ಥವಾಗಬೇಕು ಅನ್ನುವುದಂತೂ ಸತ್ಯ. ಹೀಗಾಗಿ ಅಂಡರ್‌ಸ್ಟಾಂಡಿಂಗ್ ಪೊಯೆಟ್ರಿ’ಯಂಥ ಪುಸ್ತಕಗಳು ಒಂದು ಹಂತದ ತನಕ ಮಾತ್ರ ನಮ್ಮನ್ನು ಕೈ ಹಿಡಿದು ನಡೆಸಬಲ್ಲವು. ಕೇವಲ, ವಿಮರ್ಶೆಗಳನ್ನು ನಂಬಿಕೊಂಡರೆ ಅವು ಹೆಚ್ಚಿನ ಸಂದರ್ಭದಲ್ಲಿ ದಾರಿತಪ್ಪಿಸುತ್ತವೆ ಅದಕ್ಕಿಂತ ದೊಡ್ಡ ಅಪಾಯವೆಂದರೆ ವಿಮರ್ಶೆಗಳು ವಿಮರ್ಶಕನ ಒಳನೋಟ, ಗ್ರಹಿಕೆ ಮತ್ತು ಅನುಭೂತಿಗೆ ಬಂದಿ. ಕವಿತೆಯ ಸಂಪೂರ್ಣ ರಸಾಸ್ವಾದನೆ ಓದುಗನಿಗೇ ಆಗಬೇಕು. ಇಂಥದ್ದೊಂದು ತಿಂಡಿ ರುಚಿಯಾಗಿದೆ ಎಂದು ಹೇಳಬಲ್ಲ ಶಕ್ತಿ ವಿಮರ್ಶಕನಿದೆ. ಆದರೆ ಅದನ್ನು ಸವಿಯುವ ಶಕ್ತಿ ಓದುಗನಿಗೆ ಇರಬೇಕಾಗುತ್ತದೆ. ಮತ್ತು ಓದುಗನ ಅಭಿರುಚಿಗೆ ತಕ್ಕಂತೆ ಕವಿತೆ ಆತನಿಗೆ ಅರ್ಥವಾಗುತ್ತಾ ಹೋಗುತ್ತದೆ.
ಕುವೆಂಪು ಬರೆದ ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು’ ಸಾಲನ್ನು ಅಪ್ಪಟ ವ್ಯವಹಾರಸ್ಥನಿಗೋ ಮನೆ ಕಟ್ಟುವ ಕಂಟ್ರಾಕ್ಟರನಿಗೋ ಹೇಳಿನೋಡಿ. ಅವನಿಗೆ ಕಾವ್ಯದ ಕುರಿತು ಯಾವ ಪ್ರೀತಿಯೂ ಇಲ್ಲದಿದ್ದಾಗ ಈ ಸಾಲುಗಳು ರುಚಿಸುವುದಕ್ಕೇ ಸಾಧ್ಯವಿಲ್ಲ. ಮನೆ ಕಟ್ಟುವುದು ಅವನ ವೃತ್ತಿಯೇ ಆದ್ದರಿಂದ ಮನೆಯನೆಂದೂ ಕಟ್ಟದಿರು ಅನ್ನುವುದು ಅವನ ವ್ಯಾವಹಾರಿಕ ಜಗತ್ತಿಗೆ ವಿರುದ್ಧವಾದ ಹೇಳಿಕೆ ಅಂತ ಅನ್ನಿಸಬಹುದು. ಹೋಗುವೆನು ನಾ, ಹೋಗುವೆನು ನಾ, ನನ್ನ ಒಲುಮೆಯ ಗೂಡಿಗೆ, ಮಳೆಯ ನಾಡಿಗೆ, ಮಳೆಯ ಬೀಡಿಗೆ’ ಎಂದು ಕುವೆಂಪು ಮೈಸೂರಿನಲ್ಲಿ ಕುಳಿತು ಬರೆದದ್ದನ್ನು ಓದಿದವನು ಇನ್ನೂ ಅಲ್ಲಿಗೆ ಅವರು ಹೋಗೇ ಇಲ್ವಲ್ಲ’ ಎಂದು ಟೀಕೆ ಮಾಡಬಹುದು. ಅದನ್ನು ಓದಿದ ಇಂಗ್ಲಿಷ್ ಪತ್ರಕರ್ತ ಕುವೆಂಪು ಮರಳಿ ಮಲೆನಾಡಿಗೆ ಹೋಗಲಿದ್ದಾರೆ ಎಂದು ವರದಿ ಮಾಡಬಹುದು.
ಆದರೆ, ಕವಿ ತನ್ನ ಭಾವಯಾನದಲ್ಲಿ ತನ್ನೂರಿಗೆ ಮರಳಿರುತ್ತಾನೆ. ಕವಿತೆ ಜರುಗುವುದೇ ಮನಸ್ಸಿನ ಅಂಗಳದಲ್ಲಿ ಅನ್ನುವುದನ್ನು ಕಲ್ಪಿಸಿಕೊಳ್ಳದ ಹೊರತು ಕವಿತೆ ಅರ್ಥಪೂರ್ಣವೂ ಆಪ್ತವೂ ಆಗುವುದಕ್ಕೆ ಸಾಧ್ಯವಿಲ್ಲ. ಕವಿತೆ ಹೇಳಿಕೆಯಲ್ಲ, ಹೇಳಿಕೆಯಾಗಬಾರದು ಕೂಡ. ಹೇಳಿಕೆಯಾಗಿ ಮೇಲ್ನೋಟಕ್ಕೆ ಕಾಣಿಸುವುದು ಕೂಡ, ಎಲ್ಲೋ ನಮ್ಮನ್ನು ತಾಕಿದರೆ ಕವಿತೆಯಾಗುತ್ತದೆ. ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು, ಅಂಥ ಪುರುಷೋತ್ತಮನ ಆ ರೂಪರೇಖೆ ಎಂಬಲ್ಲಿಯ ಪ್ರಶ್ನೆ ಕೂಡ ಕಾವ್ಯವಾಗುತ್ತಲ್ಲ ಹಾಗೆ.
ಹಾಗಿದ್ದರೆ ಕವಿತೆಯನ್ನು ಓದುವುದು ಹೇಗೆ? ಎಲ್ಲಿಂದ ಆರಂಭಿಸಬೇಕು? ನಮ್ಮೊಳಗಿನ ಭಾವಬಿಂದು ಮತ್ತು ಕವಿತೆಯ ಭಾವಸ್ಪುರಣದ ಬಿಂದು ಸಂಧಿಸುವ ಕ್ಷಣ ಯಾವುದು?
ಆನಂದಕಂದರ ಒಂದು ಸರಳ ಪದ್ಯವನ್ನು ತೆಗೆದುಕೊಳ್ಳಿ.
ನಮ್ಮ ಹಳ್ಳಿಯೂರ ನಮಗ ಪಾಡ
ಯಾತಕವ್ವಾ ಹುಬ್ಬಳ್ಳಿ ಧಾರವಾಡ
ಊರಮುಂದ ತಿಳಿನೀರಿನ ಹಳ್ಳ
ಬೇವು ಮಾವು ಹುಲಗಲ ಮರಚೆಳ್ಳ
ದಂಡಿಗುಂಟ ನೋಡು ನೆಳ್ಳನೆಳ್ಳ
ನೀರ ತರುವಾಗ ಗೆಣತ್ಯಾರ ಜೋಡ
ಯಾತಕ್ಕವ್ವಾ ಹುಬ್ಬಳ್ಳಿ ಧಾರ್‍ವಾಡ

ಯಾವುದೋ ಒಂದು ಹಳ್ಳಿಯಲ್ಲಿ ಕುಳಿತು ಹುಬ್ಬಳ್ಳಿಗೋ ಧಾರವಾಡಕ್ಕೋ ಹೋಗಲಾರದವನ ಆಲಾಪ ಅಲ್ಲ ಇದು. ಹುಬ್ಬಳ್ಳಿಗೆ ಹೋದವನಿಗೂ ಇಷ್ಟವಾಗುವಂಥ, ಹುಬ್ಬಳ್ಳಿಗೆ ಹೋಗಬೇಕು ಅಂದುಕೊಂಡಿರುವವನಿಗೂ, ಹುಬ್ಬಳ್ಳಿ ಧಾರವಾಡಕ್ಕೆ ಸಂಬಂಧವೇ ಇರದವನಿಗೂ ಆಪ್ತವಾಗುವ ಸಾಲುಗಳಿವು. ಹುಬ್ಬಳ್ಳಿ ಅಂತಿದ್ದದ್ದು ಇಂಗಳದಾಳದಲ್ಲಿ ಕೂತು ಕವಿತೆ ಓದುವವನ ಪಾಲಿಗೆ ಚಿತ್ರದುರ್ಗ ಎಂದೇ ಭಾಸವಾಗುತ್ತದೆ. ಉಪ್ಪಿನಂಗಡಿಯ ಹುಡುಗಿಗೆ ಅದು ಮಂಗಳೂರೋ ಬೆಂಗಳೂರೋ ಆಗಬಹುದು. ಹೀಗೆ ಅವರವರ ಭಾವಕ್ಕೆ, ಅನುಭವಕ್ಕೆ ತಕ್ಕಂತೆ ಕವಿತೆ ಅವರವರೊಳಗೇ ಬೆಳೆಯುತ್ತಾ ಹೋಗುತ್ತದೆ, ಅರ್ಥ ಬಿಚ್ಚಿಡುತ್ತಾ ಹೋಗುತ್ತದೆ. ಹೀಗಾಗಿ ಕವಿತೆ ನಮ್ಮ ನಮ್ಮ ಹೊಟ್ಟೆನೋವಿನ ಹಾಗೆ. ನಮ್ಮನಮ್ಮ ದಾಹದ ಹಾಗೆ. ನೀರು ನಾವೇ ಕುಡಿಯಬೇಕು.
ಇಷ್ಟಾದರೂ ಕೆಲವರು ಕವಿತೆ ಅರ್ಥವಾಗುವುದಿಲ್ಲ ಅನ್ನುತ್ತಾರೆ. ಅದರಲ್ಲಿ ಕತೆಯಿಲ್ಲ ಅನ್ನುತ್ತಾರೆ. ಇನ್ನೊಬ್ಬರಿಗೆ ಹೇಳಲಾಗುವುದಿಲ್ಲ ಅಂತಾರೆ. ಅದಕ್ಕೂ ಕಾರಣಗಳಿವೆ. ಮೊನ್ನೆ ಮೊನ್ನೆ ಮುಖ್ಯಮಂತ್ರಿ ಇನ್ ಲವ್’ ಚಿತ್ರಕ್ಕೆ ಜಯಂತ ಕಾಯ್ಕಿಣಿ ಬರೆದ ಹಾಡೊಂದರ ಸಾಲೆರಡು ಹೀಗಿದೆ: ತಂಗಾಳಿಯಲ್ಲಿ ಎಂಥ ಮಳೆಯ ಮುನ್ಸೂಚನೆ, ಸಿಗಬಾರದಿತ್ತೆ ನೀನು ಸ್ವಲ್ಪ ಬೇಗನೆ.
ತೀರ ಸರಳ ಸಾಲುಗಳು ಅನ್ನಿಸುವ ಇವು ಅವರವರ ಮನೋಭಾವಕ್ಕೆ ತಕ್ಕಂತೆ ಬದುಕಿನ ಅರ್ಥವನ್ನೇ ಹಿಡಿದಿಟ್ಟಂತ ಸಾಲುಗಳಾಗಿಯೂ ಕೇಳಿಸಬಹುದು. ಆ ಹುಡುಗಿ ಪ್ರೀತಿಸುತ್ತಾಳೆ ಅನ್ನುವುದು ಅವನಿಗೆ ಅರ್ಥವಾದ ಗಳಿಗೆ, ಆ ಹುಡುಗನಿಗೆ ತಾನೆಂದರೆ ಇಷ್ಟ ಎಂದು ಅವಳಿಗೆ ಅರ್ಥವಾದ ಕ್ಷಣ ಈ ಸಾಲಿನೊಳಕ್ಕೆ ಝಗ್ಗನೆ ವಿದ್ಯುತ್ ಹರಿಯುತ್ತದೆ. ತಣ್ಣನೆ ಗಾಳಿ ಬೀಸಿದಾಗ ಎಲ್ಲೋ ಮಳೆ ಬಂದಿರಬೇಕು ಅಂತ ನಮ್ಮಮ್ಮನೋ ನಮ್ಮಜ್ಜಿಯೋ ಹೇಳಿದ ಮಾತು ಹೀಗೆ ಪ್ರೀತಿಗೆ ಅನ್ವಯವಾದಾಗ ಆಗುವ ಆನಂದವನ್ನು ಊಹಿಸಿಕೊಳ್ಳಿ. ಪ್ರಕೃತಿಯನ್ನು ಬಿಟ್ಟು ಕವಿತೆ ಇರಲಾರದು, ಇರಬಾರದು. ಹಾಗೆ ಸಿಗಬಾರದಿತ್ತೇ ನೀನು ಸ್ವಲ್ಪ ಬೇಗನೇ ಅನ್ನುವ ಮಾತು ಕೂಡ ಆ ಕ್ಷಣದ ಅನುಭೂತಿಗೆ ಯಾರೋ ಕೊಟ್ಟ ಅಪೂರ್ವ ಮಾತಾಗಿ ನಮ್ಮನ್ನು ತಾಕುತ್ತದೆ.
ಕವಿತೆಯೊಳಗೆ ಕತೆ ಇರುವುದಿಲ್ಲ. ಕೆನೆಯಿರುತ್ತದೆ. ಮಳೆಗಾಲದ ಆರಂಭದಲ್ಲಿ ಬಿತ್ತಿದ ಬತ್ತ, ಸುಗ್ಗಿಯ ಹೊತ್ತಿಗೆ ಕಾಳುಗಟ್ಟುವ ಹಾಗೆ ಕವಿತೆ ಕೂಡ. ಮದುವೆಯ ಚಂದದ ಕ್ಷಣಗಳನ್ನು ಫೋಟೋ ಹಿಡಿದಿಡುವ ಹಾಗೆ ಅಥವಾ ಗಂಡನ ಮನೆಗೆ ಹೊರಟ ಅವಳು ತಿರುಗಿ ನೋಡುವ ಪರಿಯನ್ನು ಕಲಾವಿದನೊಬ್ಬ ಸೆರೆಹಿಡಿದ ಹಾಗೆ ಕವಿತೆ ಒಂದು ಒಂದು ಘಳಿಗೆಯನ್ನು ಒಂದು ಕ್ಷಣವನ್ನು ಹಿಡಿದು ನಿಲ್ಲಿಸುತ್ತದೆ. ಆ ಕ್ಷಣ ಕಾಲದ ಸವಾಲುಗಳನ್ನು, ಸವೆತಗಳನ್ನು, ಏರುಪೇರುಗಳನ್ನು ದಾಟಿ ಚಿರಾಯುವಾಗುತ್ತದೆ.
ತೊಟ್ಟಿಲ ಹೊತ್ಕೊಂಡು ತವರ್‍ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು
ತವರೂರ ತಿಟ್ಹತ್ತಿ ತಿರುಗಿ ನೋಡ್ಯಾಳ
ಎಂಬ ಜನಪದ ಗೀತೆಯನ್ನೇ ನೋಡಿ. ಆ ಭಾವ ಇವತ್ತಿನ ಯುಗದಲ್ಲೂ ತವರಿಂದ ಗಂಡನ ಮನೆಗೆ ಹೊರಟ ಹೆಣ್ಣನ್ನು ಒಂದರೆಕ್ಷಣ ಕಾಡದೇ ಹೋದರೆ ಕವಿತೆಯೇ ಸುಳ್ಳು, ಕವಿ ಬರೆದದ್ದೇ ಸುಳ್ಳು. ನಾವು ಓದಿದ್ದೇ ಸುಳ್ಳು. ಕವಿತೆಗೆ ಮನಸೋತದ್ದೇ ಸುಳ್ಳು.
ಹಾಗಿದ್ದರೆ ಕವಿತೆಯನ್ನು ಮನತುಂಬಿಸಿಕೊಳ್ಳುವುದು ಹೇಗೆ?
ಅದೀಗ ಕಷ್ಟದ ಕೆಲಸ. ಕವಿತೆಯನ್ನು ಹಾಡುವ ಮೂಲಕ ಮನತುಂಬಿಸಿಕೊಳ್ಳಬಹುದು ಅನ್ನುವವರಿದ್ದಾರೆ. ಆದರೆ ಎಷ್ಟೋ ಮಂದಿ ಹಾಡುವಾಗಲೂ, ಕೇಳಿಸಿಕೊಳ್ಳುವಾಗಲೂ ಅದರ ಸಾಹಿತ್ಯದ ಕಡೆ ಗಮನ ಕೊಡುವುದಿಲ್ಲ. ಎಷ್ಟೋ ಮಂದಿ ಪದಗಳನ್ನು ತಪ್ಪಾಗಿ ಉಚ್ಚರಿಸುವುದನ್ನು ನೀವೂ ಕೇಳಿರುತ್ತೀರಿ. ಅಷ್ಟಕ್ಕೂ ಪದಗಳು ಕರಗತವಾದರೆ, ಕಂಠಗತವಾದರೆ ಕವಿತೆಯನ್ನು ವಶಪಡಿಸಿಕೊಂಡ ಹಾಗೇನೂ ಅಲ್ಲ. ಯಾಕೆಂದರೆ ಕವಿತೆ ಪದಗಳಲ್ಲಿ ಅವಿತಿರುತ್ತದೆ. ಪ್ರೀತಿಯೆಂಬುದು ಅವಳಲ್ಲಿ ಅವಿತುಕೊಂಡ ಹಾಗೆ. ಅವಳನ್ನು ಅಪಹರಿಸಿಕೊಂಡು ಬಂದು ಅಶೋಕವನದಲ್ಲಿ ಬಂಧಿಸಿಟ್ಟರೆ ಅವಳ ಪ್ರೀತಿಯೂ ವಶವಾಗುತ್ತದೆ ಎಂದು ಭಾವಿಸಬೇಕಿಲ್ಲ.
ಹಾಗಿದ್ದರೆ, ಕವಿತೆಯನ್ನು ಒಲಿಸಿಕೊಳ್ಳುವುದು ಹೇಗೆ?
ಅದಕ್ಕೊಂದು ಮನಸ್ಥಿತಿ ಬೇಕಾಗುತ್ತದೆ. ಆ ಮನಸ್ಥಿತಿ ಧ್ಯಾನಕ್ಕೆ, ಪ್ರೀತಿಗೆ, ಭಕ್ತಿಗೆ ಸಮಾನವಾದದ್ದು ಎಂದು ಹೇಳಿ ಗೊಂದಲಗೊಳಿಸುವುದು ಬೇಡ. ಅದೊಂದು ರೀತಿಯಲ್ಲಿ ಸ್ನೇಹಿತನನ್ನೋ ಗೆಳತಿಯನ್ನೋ ಅರ್ಥಮಾಡಿಕೊಂಡಂತೆ. ಅವರ ಮನಸ್ಸಿನಲ್ಲೇನಿದೆ ಅನ್ನುವುದನ್ನು ಹೇಳದೇ ಅರ್ಥ ಮಾಡಿಕೊಂಡಂತೆ. ಕವಿತೆ ಹೇಳದೇ ಎಷ್ಟನ್ನೋ ಹೇಳುತ್ತಿರುತ್ತದೆ. ಹೇಳಿಯೋ ಎಷ್ಟನ್ನೋ ಮುಚ್ಚಿಟ್ಟಿರುತ್ತದೆ. ವೀಣೆಯೊಳಗೆ ಅಸಂಖ್ಯ ರಾಗಗಳು ಅಡಗಿರುವಂತೆ. ಮೀಟುವವರು ಮೀಟಿದರಷ್ಟೇ ಅದು ಹೊಮ್ಮುತ್ತದೆ.
ಕವಿತೆಯನ್ನು ಗಟ್ಟಿಯಾಗಿ ಓದಿಕೊಳ್ಳುವುದು ಅದನ್ನು ವಶಪಡಿಸಿಕೊಳ್ಳುವ ಮೊದಲ ವಿಧಾನ ಅಂತ ಅನೇಕರು ಹೇಳುತ್ತಾರೆ. ಅದು ಸುಳ್ಳಲ್ಲ. ಮಂತ್ರದ ಹಾಗೆ ಎತ್ತರದ ದನಿಯಲ್ಲಿ ಹೇಳಿಕೊಂಡಾಗ ಎಷ್ಟೋ ಸಾರಿ ಪದಗಳ ಒಳಗೆ ಅಡಗಿರುವ ಅರ್ಥಗಳು ತಾವಾಗಿಯೇ ಹೊರಹೊಮ್ಮುವುದುಂಟು. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಒಂದು ಕವಿತೆಯ ಅರ್ಥ ಕೇವಲ ಪದಗಳಲ್ಲಷ್ಟೇ ಅಡಗಿರುವುದಿಲ್ಲ. ಇಡೀ ಕವಿತೆಯೇ ಒಟ್ಟಾಗಿ ಕೆಲಸ ಮಾಡುತ್ತಾ ಒಂದು ಅರ್ಥವನ್ನು ಕಟ್ಟಿಕೊಡುತ್ತಿರುತ್ತದೆ. ನಿಸಾರರ ಕುರಿಗಳು ಸಾರ್ ಕುರಿಗಳು’ ಕವಿತೆ ಅಂಥದ್ದು. ಅದನ್ನು ಪಲ್ಲವಿ, ಚರಣಗಳಲ್ಲಿ ಓದಿ ಆನಂದಿಸುವ ಹೊತ್ತಿಗೇ ಇಡೀ ಕವಿತೆ ಕಟ್ಟಿಕೊಡುವ ಮತ್ತೊಂದು ಅರ್ಥವನ್ನು ಗ್ರಹಿಸಿಯೂ ಸಂತೋಷಪಡಬಹುದು.
ಆದರೆ, ಒಂದು ಕವಿತೆ ಸದಾ ಕಾಲ ನಮಗೆ ಸಂತೋಷ ಕೊಡಬೇಕು ಅಂತೇನೂ ಇಲ್ಲ. ಅದು ನಮ್ಮ ಭಾವನೆಗಳಿಗೆ ದನಿಯಾದಾಗ ನಮಗೆ ಅನ್ನಿಸಿದ್ದನ್ನು ಮತ್ತಷ್ಟು ಸ್ಪಷ್ಟವಾಗಿ ಹೇಳಿದಾಗ ಇಷ್ಟವಾಗುತ್ತದೆ. ಉದಾಹರಣೆಗೆ ಮೈಸೂರು ಮಲ್ಲಿಗೆಯ ಕವನಗಳನ್ನೇ ತೆಗೆದುಕೊಳ್ಳಿ. ಒಂದು ವಯೋಮಾನದಲ್ಲಿ ಬೇರೆ ಬೇರೆ ಕಾರಣಗಳಿಂದ ಇಷ್ಟವಾಗುವ ಕವಿತೆಗಳವು. ಕ್ರಮೇಣ ಅವು ಹಳೆಯ ಗೆಳೆಯನ ಹಾಗೆ ಆಪ್ತವಾಗುತ್ತವೆ. ನಮ್ಮ ಜೊತೆಗೆ ಬೆಚ್ಚಗಿರುತ್ತವೆ.
ಇಷ್ಟಾದರೂ ಕವಿತೆಯನ್ನು ಅರ್ಥಮಾಡಿಕೊಳ್ಳುವುದು ಹೇಗೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರುವುದಿಲ್ಲ. ಬೈರನ್ ಹೇಳುತ್ತಾನೆ. ರಹಸ್ಯವಾಗಿ ಭೇಟಿಯಾದ ಹಳೆಯ ಗೆಳತಿಯನ್ನು ಎಷ್ಟೋ ದಿನಗಳ ನಂತರ ಭೇಟಿಯಾದಾಗ ಹೇಗೆ ಸ್ವಾಗತಿಸಲಿ? ಮೌನ ಮತ್ತು ಕಣ್ಣೀರಿನ ಜೊತೆಗೆ!
ಹಳೆಯ ಕವಿತೆಗಳನ್ನು ಕೂಡ ಹಾಗೇ ಮತ್ತೆ ಮತ್ತೆ ಎದುರುಗೊಳ್ಳುತ್ತಿರಬೇಕು; ಕಣ್ಣೀರು ಮತ್ತು ಮೌನದೊಂದಿಗೆ. ಅವನು ಅರ್ಥಮಾಡಿಕೊಳ್ಳಬೇಕಾದದ್ದೂ ಹಾಗೆಯೇ, ಕಣ್ಣೀರು ಮತ್ತು ಮೌನದೊಂದಿಗೆ.
(ಪವಿತ್ರಾ ಪ್ರಿಯಭಾಷಿಣಿಯ ನಕ್ಷತ್ರಕ್ಕೆ ಪಾತಿ ಕವನ ಸಂಕಲನದ ಬಿಡುಗಡೆಯ ಸಂದರ್ಭದಲ್ಲಿ ಆಡಬೇಕು ಅಂದುಕೊಂಡಿದ್ದ ಮಾತುಗಳಿವು)

14 comments:

Anonymous said...

ಕವಿತೆ ನಮ್ಮ ನಮ್ಮ ಹೊಟ್ಟೆನೋವಿನ ಹಾಗೆ. ನಮ್ಮನಮ್ಮ ದಾಹದ ಹಾಗೆ. ನೀರು ನಾವೇ ಕುಡಿಯಬೇಕು.

ತುಂಬ ನಿಜ ಅನ್ನಿಸಿದ ಸಾಲುಗಳು...

ಮಲ್ನಾಡ್ ಹುಡ್ಗಿ

ಅರುಣ್ ಮಣಿಪಾಲ್ said...
This comment has been removed by the author.
ಅರುಣ್ ಮಣಿಪಾಲ್ said...

ರಹಸ್ಯವಾಗಿ ಭೇಟಿಯಾದ ಹಳೆಯ ಗೆಳತಿಯನ್ನು ಎಷ್ಟೋ ದಿನಗಳ ನಂತರ ಭೇಟಿಯಾದಾಗ ಹೇಗೆ ಸ್ವಾಗತಿಸಲಿ? ಮೌನ ಮತ್ತು ಕಣ್ಣೀರಿನ ಜೊತೆಗೆ!
...ಅಬ್ಬಾ..! ಇನ್ನೂ ನಿಮ್ಮ ತಲೆಯೊಳಗೆ ಏನೇನೆಲ್ಲ ಉಂಟು ಮಾರಾಯರೆ...:-)

ವಿಕ್ರಮ ಹತ್ವಾರ said...

ಈಗ್ಲೆ ಓಡಿ ಬಂದು ಒಂದು ಹಗ್ ಕೊಡಬೇಕು ಅನ್ಸುತ್ತೆ!!

ಸುಧನ್ವಾ said...

ನಮ್ಮ ಬಹುತೇಕ ಹಿರಿಯರು ಮಾಡಬೇಕಾಗಿದ್ದ ಈ ತರಹದ ಬರವಣಿಗೆ ಬೇರ್‍ಯಾವ ಬ್ಲಾಗ್‌ನಲ್ಲಾಗಲಿ, ಪತ್ರಿಕೆಗಳಲ್ಲಾಗಲಿ ಬರುತ್ತಿಲ್ಲ. ನೀವೊಬ್ಬರಾದರೂ ಈ ಕೆಲಸ ಮಾಡುತ್ತಿದ್ದೀರಲ್ಲ, ಜಯವಾಗಲಿ.

Anonymous said...

jogi..

beautiful..

Guru

suptadeepti said...

ಕವಿತೆಯ ಬಗ್ಗೆ ಇಂಥ ನವಿರುಭಾವ ನಿಮಗಿರುವುದಕ್ಕೆ ಧನ್ಯವಾದಗಳು, ಜೋಗಿ ಸರ್.

sritri said...

ಈ ಲೇಖನ ತುಂಬಾ ಇಷ್ಟ ಆಯಿತು. ಜೋಗಿ ಮನೆಗೆ ಬಂದರೆ ಒಳ್ಳೆಯ ಊಟ ಗ್ಯಾರಂಟಿ !

autumn nightingale said...

ಚೆನ್ನಾಗಿದೆ...

ವಿನಾಯಕ ಭಟ್ಟ said...

ನಿಮ್ಮ ಬ್ಲಾಗಂಬರಿ "ನದಿಯ ನೆನಪಿನ ಹಂಗು" ಓದಲು ಶುರುಮಾಡಿದ್ದೇನೆ. ನಿಮಗೆ ನದಿಯ ಹಂಗಾದರೆ ನನಗೆ ಅದನ್ನು ಓದುವ ಹಂಗು. ಓದಿದ ಮೇಲೆ ಅದರದ್ದೇ ಗುಂಗು.

Lakshmi S said...

ವೀಣೆಯೊಳಗೆ ಅಸಂಖ್ಯ ರಾಗಗಳು ಅಡಗಿರುವಂತೆ. ಮೀಟುವವರು ಮೀಟಿದರಷ್ಟೇ ಅದು ಹೊಮ್ಮುತ್ತದೆ.

ಸತ್ಯ !! ಅಕ್ಷರಶಃ ಸತ್ಯ !! ಕವಿತೆಗಳು ಎಲ್ಲರ ಅವಗಾಹನೆಗೆ ದೊರೆಯುವಂಥದ್ದಲ್ಲ. ಅಭಿಪ್ರಾಯಗಳ ಸರಳ ಅಭಿವ್ಯಕ್ತಿಯ ನಿಮ್ಮ ಈ ಕಲೆಗೆ ನಾನು fan Sir !!

shashismiles said...

ಜೋಗಿಯವರೆ,
ಈಗಷ್ಟೆ ನಿಮ್ಮ ಪೋಸ್ಟು ಓದಿ ದಂಗಾಗಿ ಕುಳಿತಿದ್ದೇನೆ. ಎಲ್ಲ ಬ್ಲಾಗಿನ ಮಹಿಮೆ! ಪವಿತ್ರಾ ಪ್ರಿಯಭಾಷಿಣಿ ನನ್ನ ಅತ್ಯಂತ ಪ್ರೀತಿಯ ಗೆಳತಿ. ನಾವಿಬ್ಬರು ಕುವೆಂಪು ಯೂನಿವರ್ಸಿಟಿಯ ಅದೆಷ್ಟೋ ಇರುಳುಗಳನ್ನ ಕವಿತೆ ಬರೆದುಕೊಂಡು, ಮುಸಿಮುಸಿ ನಗಾಡಿಕೊಂಡು ಕಳೆದಿದ್ದುಂಟು. ಇನ್ನೇನು ಕಳೆದೇ ಹೋದಳು ಅಂದುಕೊಂಡುಬಿಟ್ಟಿದ್ದವಳ ಹೆಸರನ್ನ ಹೇಳಿ ಅದೆಷ್ಟು ಖುಶಿ ಕೊಟ್ಟಿದೀರ ನಿಮಗೆ ತಿಳಿಯದು! ಅವಳಿಗೆ ನನ್ನ ನೆನಪು ನೀಡಿ. ಇಷ್ಟೇ ನಾನು ಕೇಳಿಕೊಳ್ಳುವುದು.
ಥ್ಯಾಂಕ್ಸ್ ಅ ಮಿಲಿಯನ್!
-ಟೀನಾ.

deva said...

jogi sir it is simply ossssammmm!!!!!

deva said...

jogi sir it is simply ossssammmm!!!!!