ನೀವು ಎಂದಾದರೂ ಮಡಿಕೇರಿಯಿಂದ ಸುಳ್ಯ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಹೋಗಿದ್ದರೆ ನಾನು ಹೇಳುವುದು ನಿಮಗೆ ಕಣ್ಣಿಗೆ ಕಟ್ಟಿದಂತೆ ಅರ್ಥವಾಗುತ್ತದೆ. ಈ ಪ್ರದೇಶಗಳಲ್ಲಿ ನೀವು ಓಡಾಡಿದವರು ಆಗಿರದೇ ಇದ್ದರೂ ಕಾಡಿನ ನಿಬಿಢತೆಯ ಪರಿಚಯ ಇದ್ದವರೂ ಇದನ್ನು ಗ್ರಹಿಸುವುದು ಕಷ್ಟವಾಗಲಿಕ್ಕಿಲ್ಲ ಎನ್ನುವುದು ನನ್ನ ಭಾವನೆ.
ಮಡಿಕೇರಿಯಿಂದ ಸಂಪಾಜೆ ಘಾಟಿರಸ್ತೆಯ ಮೂಲಕ ನೀವು ಸುಲಭವಾಗಿ ಸುಳ್ಯ ತಲುಪಬಹುದು. ಸುಳ್ಯದಿಂದ ನೆಲ್ಲೂರು ಕೆಮ್ರಾಜೆ, ಗುತ್ತಿಗಾರು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಹೋಗುವ ಹಾದಿಯಲ್ಲಿ ದಟ್ಟವಾದ ಕಾಡು ಸಿಗುತ್ತದೆ. ಇವತ್ತು ಈ ಕಾಡಿನ ನಡುವೆ ಸಾಕಷ್ಟು ಮನೆಗಳೂ ಅಡಕೆ ತೋಟಗಳೂ ಕಾಣಿಸುತ್ತವೆಯಾದರೂ ಸುಮಾರು ಐವತ್ತು ವರುಷಗಳ ಹಿಂದೆ ಇಲ್ಲಿ ಅಷ್ಟಾಗಿ ಮನೆಗಳಿರಲಿಲ್ಲ. ಮಳೆಗಾಲದಲ್ಲಿ ಬಿಡದೇ ಸುರಿಯುವ ಮಳೆ, ಬೇಸಗೆಯಲ್ಲಿ ಥರಥರ ಒಣಗಿಸಿ ತರಗೆಲೆ ಮಾಡುವ ಬಿಸಿಲು ಮತ್ತು ಮಳೆಗಾಲ ಶುರುವಾದೊಡನೆ ಅಮರಿಕೊಳ್ಳುತ್ತಿದ್ದ ಮಲೇರಿಯಾ ಈ ಪ್ರದೇಶವನ್ನು ವಾಸಿಸಲು ಅಪಾಯಕಾರಿಯನ್ನಾಗಿ ಮಾಡಿದ್ದವು. ಚಳಿಗಾಲದಲ್ಲಂತೂ ಹತ್ತು ಗಂಟೆಯ ತನಕ ಮಂಜು ದಟ್ಟೈಸಿಕೊಂಡಿರುತ್ತಿತ್ತು.
ಈ ಪ್ರದೇಶಗಳಲ್ಲಿ ಅನೇಕ ಬುಡಕಟ್ಟುಗಳಿಗೆ ಸೇರಿದವರು ವಾಸಿಸುತ್ತಿದ್ದರು. ಇವರು ಯಾವ ಬುಡಕಟ್ಟಿಗೆ ಸೇರಿದವರು ಅನ್ನುವುದು ಈಗ ಯಾರಿಗೂ ನೆನಪಿಲ್ಲ. ಕರ್ರಗೆ ಬಿಳಿಚಿಕೊಂಡಿರುತ್ತಿದ್ದ ಇವರು ಆ ಕಾಡಿನ ಕ್ರೌರ್ಯಕ್ಕೆ ಸಿಕ್ಕಿ ಬದುಕಿ ಉಳಿದದ್ದೇ ಒಂದು ಪವಾಡ. ಇವರು ಬೇಸಾಯಗಾರರಲ್ಲ. ಮಾಡುವುದಕ್ಕೆ ಉದ್ಯೋಗವೂ ಇರಲಿಲ್ಲ. ಬಿದಿರಿನ ಬುಟ್ಟಿ ಹೆಣೆಯುವುದೂ ಇವರಿಗೆ ಗೊತ್ತಿರಲಿಲ್ಲ. ಹೀಗಾಗಿ ಇವರ ಆಹಾರವೆಂದರೆ ಕಾಡು ಪ್ರಾಣಿಗಳು ಮತ್ತು ಗೆಡ್ಡೆಗೆಣಸು.
ಅದು ಹೇಗೋ ಏನೋ ಈ ಬುಡಕಟ್ಟಿಗೆ ಸೇರಿದ ಗಂಡಸರು ಕರ್ರಗೆ ಪೀಚಲು ಪೀಚಲಾಗಿದ್ದರೆ, ಹೆಂಗಸರು ಮಾತ್ರ ಮೈಕೈ ತುಂಬಿಕೊಂಡು ಕಂಗೊಳಿಸುತ್ತಿದ್ದರು. ಕಾಡಿನಲ್ಲಿ ಅವರನ್ನು ಥಟ್ಟನೆ ಕಂಡರೆ ಬೇಲೂರು ಹಳೆಬೀಡಿನ ಶಿಲ್ಪಕನ್ನಿಕೆಯರಿಗೆ ಜೀವ ಬಂದು ತಿರುಗಾಡುತ್ತಿರುವಂತೆ ಕಾಣಿಸುತ್ತಿದ್ದರು ಎಂದೂ ಅನೇಕರು ಬರೆದಿದ್ದಾರೆ.
ಈ ಪ್ರದೇಶಗಳಲ್ಲಿ ಹಿಂಸ್ರಪಶುಗಳ ಕಾಟವೇನೂ ಇರಲಿಲ್ಲ. ಕಾಡಿನಲ್ಲಿ ಜಿಂಕೆ, ಮೊಲ, ಕಡವೆ, ಕಾಡೆಮ್ಮೆಗಳ ಸಂತತಿ ವಿಪುಲವಾಗಿತ್ತು. ಹೀಗಾಗಿ ಹುಲಿ, ಚಿರತೆ, ತೋಳ ಮತ್ತು ಕಿರುಬಗಳಿಗೆ ಆಹಾರಕ್ಕೇನೂ ಕೊರತೆಯಿರಲಿಲ್ಲ. ಆದ್ದರಿಂದ ಅವುಗಳು ಕಾಡಿನಲ್ಲೇ ಅಲೆದಾಡಿಕೊಂಡಿರುತ್ತಿದ್ದ ಈ ಬುಡಕಟ್ಟು ಜನಾಂಗದ ಮಂದಿಗೆ ಯಾವ ತೊಂದರೆಯನ್ನೂ ಮಾಡುತ್ತಿರಲಿಲ್ಲ. ಅಕಸ್ಮಾತ್ ಕಾಡಿನಲ್ಲಿ ಹುಲಿಯೊಂದು ಎದುರಾದರೆ ಇವರೂ ಅಂಜಿ ಓಡುತ್ತಿದ್ದಿಲ್ಲ. ಹುಲಿಯೇ ಮನುಷ್ಯರನ್ನು ಕಂಡ ಸಂಕೋಚದಲ್ಲಿ ತೆಪ್ಪಗೆ ಹೊರಟುಹೋಗುತ್ತಿತ್ತು.
******
ಇಂಥ ನಿರ್ಭಯದ ಕಾಡು ಇದ್ದಕ್ಕಿದ್ದಂತೆ ಎಲ್ಲರ ಗಮನ ಸೆಳೆಯುವುದಕ್ಕೆ ಕಾರಣ ಸ್ವಾತಂತ್ರ ಬಂದದ್ದೇ ಇರಬೇಕು. ಆಗಷ್ಟೇ ಪಂಚವಾರ್ಷಿಕ ಯೋಜನೆಗಳು ಶುರುವಾಗಿದ್ದವು. ಕೃಷಿಗೆ ಆದ್ಯತೆ ಕೊಡಬೇಕೆಂದು ಸರ್ಕಾರ ಹೇಳಲಾರಂಭಿಸಿತ್ತು. ಅದರ ಜೊತೆಗೇ ಹೈನುಗಾರಿಕೆಯ ಕುರಿತೂ ಬೇರೆ ಬೇರೆ ರಾಷ್ಟ್ರಗಳ ಉದಾಹರಣೆಯನ್ನು ಮುಂದಿಟ್ಟು ಅನೇಕರು ಮಾತಾಡತೊಡಗಿದ್ದರು. ಹೈನುಗಾರಿಕೆ ಭಾರತದಂಥ ಕೃಷಿಪ್ರದಾನ ರಾಷ್ಟ್ರದಲ್ಲಿ ಅತ್ಯಂತ ಲಾಭದಾಯಕ ಉದ್ಯಮ ಎಂದು ಜನ ನಂಬತೊಡಗಿದ್ದರು. ಅದೇ ಸುಮಾರಿಗೆ ಸುಳ್ಯದಲ್ಲೂ ಅನೇಕರು ಹೆಚ್ಚಿನ ಸಂಖ್ಯೆಯಲ್ಲಿ ಹಸುಗಳನ್ನೂ ಎಮ್ಮೆಗಳನ್ನೂ ಸಾಕುತ್ತಾ ಹೈನುಗಾರಿಕೆಯನ್ನು ದೊಡ್ಡ ಮಟ್ಟದಲ್ಲೇ ಆರಂಭಿಸಿದ್ದರು.
ಅಂಥವರ ಪೈಕಿ ಕೇನ್ಯ ರಾಮಣ್ಣ ಶೆಟ್ಟರೂ ಒಬ್ಬರು.
ಅವರು ಬ್ರಿಟಿ್ ಅಧಿಪತ್ಯದಲ್ಲಿ ಉದ್ಯೋಗದಲ್ಲಿದ್ದವರು. ಗಾಂಧೀಜಿಯ ಕರೆಗೆ ಓಗೊಟ್ಟು ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೃಷಿಕರಾದವರು. ಹೈನುಗಾರಿಕೆಯ ಕುರಿತು ಅವರ ಆಸಕ್ತಿ ಕುದುರುತ್ತಿದ್ದಂತೆ ಹಾಸನಕ್ಕೆ ಹೋಗಿ ಹತ್ತೆಂಟು ಎಮ್ಮೆಗಳನ್ನೂ ಸುಬ್ರಹ್ಮಣ್ಯದ ಆಸುಪಾಸಿನಿಂದ ಹತ್ತಿಪ್ಪತ್ತು ಹಸುಗಳನ್ನೂ ಕೊಂಡುತಂದು ದೊಡ್ಡ ಮಟ್ಟದಲ್ಲಿ ಹಾಲು ಉತ್ಪಾದನೆ ಆರಂಭಿಸಿಯೇ ಬಿಟ್ಟರು.
ಅವರ ಸಮಸ್ಯೆ ಶುರುವಾದದ್ದೇ ಆಗ.
ಹಾಲು ಉತ್ಪಾದನೆಯೇನೋ ದೊಡ್ಡ ಮಟ್ಟದಲ್ಲೇ ಆಯಿತು. ಕೊಂಡು ತಂದ ದನಗಳಿಂದ ದಿನಕ್ಕೆ ನೂರು ನೂರೈವತ್ತು ಲೀಟರ್ ಹಾಲು ದೊರಕತೊಡಗಿತು. ಆದರೆ ಆ ಹಾಲನ್ನು ಏನು ಮಾಡುವುದು ಅನ್ನುವ ಪ್ರಶ್ನೆಗೆ ಸರ್ಕಾರದ ಹತ್ತಿರ ತಕ್ಪಣ ಉತ್ತರವಿರಲಿಲ್ಲ.
ಸರ್ಕಾರ ಹೈನುಗಾರಿಕೆ ಆರಂಭಿಸಿ ಎಂದು ಘೋಷಣೆ ಕೊಟ್ಟಿತ್ತೇ ವಿನಾ ಯಾರಾದರೊಬ್ಬರು ಅದನ್ನು ತಕ್ಪಣವೇ ಕಾರ್ಯರೂಪಕ್ಕೆ ತರುತ್ತಾರೆ ಎಂದು ಊಹಿಸಿರಲೇ ಇಲ್ಲ. ಯಾರಾದರೊಬ್ಬರು ಯಾವುದೋ ಒಂದು ಮೂಲೆಯಲ್ಲಿ ಹೈನುಗಾರಿಕೆ ಆರಂಭಿಸಿದರೆ ಆ ಹಾಲನ್ನು ಕೊಂಡುಕೊಂಡು ಸರ್ಕಾರ ಕೂಡ ಏನೂ ಮಾಡುವ ಹಾಗಿರಲಿಲ್ಲ. ಆಗಿನ್ನೂ ಕ್ಪೀರಕ್ರಾಂತಿಯ ಕನಸೂ ಸರ್ಕಾರಕ್ಕೆ ಬಿದ್ದಿರಲಿಲ್ಲ.
ರಾಮಣ್ಣ ಶೆಟ್ಟರು ಆಗ ನಿಜಕ್ಕೂ ಹತಾಶರಾದರು. ಕೊಂಡು ತಂದ ಜಾನುವಾರುಗಳನ್ನು ಸುಮ್ಮನೆ ಸಾಕುವುದು ಅವರಿಗಂತೂ ಸಾಧ್ಯವಿರಲಿಲ್ಲ. ಆಗೆಲ್ಲ ಈಗಿನಂತೆ ಹಾಲು ಸ್ಥಳೀಯವಾಗಿ ಮಾರಾಟವಾಗುತ್ತಲೂ ಇರಲಿಲ್ಲ. ಪ್ರತಿಯೊಂದು ಮನೆಯಲ್ಲೂ ಒಂದೊ ಎರಡೋ ಕರಾವು ಇದ್ದೇ ಇರುತ್ತಿತ್ತು. ಒಂದು ವೇಳೆ ಒಂದೆರಡು ಮನೆಗಳಿಗೆ ಹಾಲುಬೇಕಿದ್ದರೂ ಅದನ್ನು ಕೊಂಡುಹೋಗಿ ಕೊಡುವುದು ತುಂಬ ದುಬಾರಿಯಾಗುತ್ತಿತ್ತು. ಹೀಗಾಗಿ ರಾಮಣ್ಣ ಶೆಟ್ಟರು ಹಸುಗಳನ್ನೆಲ್ಲ ಮಾರುವುದಕ್ಕೆ ನಿಶ್ಟಯಿಸಿದರು. ಆದರೆ ಅವರು ಕೊಂಡ ಅರ್ಧಬೆಲೆಗೂ ಅವುಗಳನ್ನು ಕೊಳ್ಳುವವರು ಅವರಿಗೆ ಸಿಗಲಿಲ್ಲ. ರಾಮಣ್ಣ ಶೆಟ್ಟರ ಕ್ಷೀರಕ್ರಾಂತಿ ಆ ಪ್ರದೇಶದಲ್ಲೆಲ್ಲಾ ಪ್ರಚಾರವಾಗಿತ್ತು.
ಆಗ ಅವರಿಗೆ ಹೊಳೆದ ಉಪಾಯವೆಂದರೆ ಹಸುಗಳನ್ನೆಲ್ಲ ಒಯ್ದು ಗುತ್ತಿಗಾರಿಗೋ ಎಡಮಂಗಲಕ್ಕೋ ಕೊಲ್ಲಮೊಗ್ರುವಿಗೋ ಸಮೀಪವಿರುವ ಹುಲ್ಲುಗಾವಲಿನಲ್ಲಿ ಬಿಟ್ಟುಬಿಡುವುದು. ಅಲ್ಲಿ ಯಥೇಚ್ಛವಾಗಿ ದನಗಳಿಗೆ ಮೇವು ಸಿಗುವುದಂತೂ ಖಾತ್ರಿ. ಅಲ್ಲೊಂದು ಗೋಮಾಳವನ್ನು ಕಟ್ಟಿ ಸುತ್ತಲೂ ಬೇಲಿಹಾಕಿಸಿ ಬಿಟ್ಟುಬಿಟ್ಟರೆ ಹಸುಗಳೂ ಎಮ್ಮೆಗಳೂ ಖರ್ಚಿಲ್ಲದೇ ಮೇವು ತಿಂದುಕೊಂಡು ಇರುತ್ತವೆ. ಅವುಗಳ ವಂಶಾಭಿವೃದ್ಧಿಯೂ ಆಗುತ್ತದೆ. ಮುಂದೆ ಸರ್ಕಾರದ ಯೋಚನೆ ಕೈಗೆಟುಕುವಂತಾದಾಗ ಅವುಗಳನ್ನು ವಾಪಸ್ಸು ಹೊಡೆದುಕೊಂಡು ಬಂದರಾಯಿತು.
ಈ ಯೋಚನೆ ಬಂದಿದ್ದೇ ತಡ ರಾಮಣ್ಣ ಗೌಡರು ಗುತ್ತಿಗಾರಿನ ಕಡೆಗೆ ಪಯಣ ಬೆಳೆಸಿದರು. ಸುಳ್ಯದಿಂದ ಸುಮಾರು ಮೂವತ್ತು ಮೈಲಿ ದೂರದಲ್ಲಿ ಅವರಿಗೊಂದು ಸೊಗಸಾದ ಹುಲ್ಲುಗಾವಲು ಕಂಡಿತು. ಅದರ ಆಸುಪಾಸಿನಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಆರೆಂಟು ಮನೆಗಳಿದ್ದವು. ಆ ಜಾಗದ ಪಕ್ಕದಲ್ಲೇ ಸಣ್ಣದೊಂದು ತೊರೆಯೂ ಹರಿಯುತ್ತಿತ್ತು. ಅಲ್ಲೇ ತನ್ನ ಗೋವುಗಳನ್ನು ಸಾಕುತ್ತಿದ್ದರೆ ಮುಂದೊಂದು ದಿನ ಆ ಜಾಗವೂ ತನ್ನದಾಗುತ್ತದೆ ಎಂಬ ದುರಾಸೆಯೂ ಶೆಟ್ಟರನ್ನು ಕಾಡಿರಬೇಕು. ಬುಡಕಟ್ಟು ಜನಾಂಗಕ್ಕೆ ಸೇರಿದ ಕೊಲ್ಲಿ ಎಂಬವನನ್ನು ಸಂಬಳಕ್ಕೆ ಗೊತ್ತುಮಾಡಿಕೊಂಡು ಅಲ್ಲೊಂದು ವಿಶಾಲವಾದ ಹುಲ್ಲುಗಾವಲಿಗೆ ಬೇಲಿ ಹಾಕಿಸಿ. ಮಳೆ ಬಂದಾಗ ದನಗಳಿಗೆ ನಿಲ್ಲುವುದಕ್ಕೊಂದು ವಿಶಾಲವಾದ ಚಪ್ಪರ ಹಾಕಿಸಿಕೊಟ್ಟು ರಾಮಣ್ಣಗೌಡರು ತಮ್ಮ ಎಮ್ಮೆ ಮತ್ತು ಹಸುಗಳನ್ನು ಆ ಗೋಮಾಳಕ್ಕೆ ತಂದೇಬಿಟ್ಟರು.
ಅದು ಸುಮಾರು ಹತ್ತೆಕರೆ ವಿಸ್ತಾರದ ಗೋಮಾಳ. ಅದಕ್ಕೆ ಬೇಲಿ ಹಾಕಿಸುವುದಕ್ಕೇ ಅವರಿಗೆ ಸುಮಾರು ಖರ್ಚಾಗಿತ್ತು. ಹಸುಗಳನ್ನು ಸಾಕುವುದಕ್ಕಿಂತ ಹೆಚ್ಚಾಗಿ ಅವರನ್ನು ಆಕರ್ಷಿಸಿದ್ದು ಆ ಜಾಗವನ್ನು ತಾವು ಹೊಡೆದುಕೊಳ್ಳಬಹುದು ಎಂಬ ದುರಾಸೆ.
ಹೀಗೆ ಅಲ್ಲಿಗೆ ತಮ್ಮ ಜಾನುವಾರುಗಳನ್ನು ತಂದುಬಿಟ್ಟ ರಾಮಣ್ಣ ಶೆಟ್ಟರು ಅದರ ಉಸ್ತುವಾರಿಯನ್ನು ತಮ್ಮ ಏಕೈಕ ಮಗನಾದ ಸುಬ್ಬಣ್ಣ ಶೆಟ್ಟಿಗೆ ಒಪ್ಪಿಸಿದರು.
ಎಡವಟ್ಟಾದದ್ದು ಅಲ್ಲೇ.
*****
ಸುಬ್ಬಣ್ಣ ಶೆಟ್ಟಿ ಮೆಟ್ರಿಕತನಕ ಓದಿದ್ದ. ಮುಂದೆಯೂ ಓದುವ ಆಸೆಯಿಟ್ಟುಕೊಂಡಿದ್ದ. ಮಂಗಳೂರಿಗೆ ಹೋಗಿ ಓದು ಮುಂದುವರಿಸಿದರೆ ತನ್ನ ಉಕ್ಕುತ್ತಿರುವ ಯೌವನಕ್ಕೂ ನ್ಯಾಯ ಸಲ್ಲಿಸಬಹುದು ಎಂಬ ಸಣ್ಣ ಆಸೆ ಇಟ್ಟುಕೊಂಡಿದ್ದ ಸುಬ್ಬಣ್ಣನನ್ನು ರಾಮಣ್ಣ ಶೆಟ್ಟರು ಬೈದು ಕೃಷಿಕಾಯಕಕ್ಕೆ ನೂಕಿದ್ದರು. ಓದಿ ಮಗ ಯಾರ ಚಾಕರಿಯನ್ನೂ ಮಾಡಬೇಕಾಗಿಲ್ಲ ಎನ್ನುವುದು ಅವರ ಆಲೋಚನೆಯಾಗಿತ್ತು. ಒಲ್ಲದ ಮನಸ್ಸಿನಿಂದ ಗದ್ದೆ, ತೆಂಗಿನತೋಟ ನೋಡಿಕೊಳ್ಳುತ್ತಿದ್ದ ಸುಬ್ಬಣ್ಣಶೆಟ್ಟಿಯನ್ನು ಕರೆದು ರಾಮಣ್ಣ ಶೆಟ್ಟರು ಗುತ್ತಿಗಾರು ಸಮೀಪದ ಗೋಮಾಳವನ್ನು ನೋಡಿಕೊಳ್ಳಬೇಕೆಂದು ತಾಕೀತು ಮಾಡಿದರು. ತಿಂಗಳಿಗೆ ಒಂದು ಸಲವಾದರೂ ಅಲ್ಲಿಗೆ ಹೋಗಿ ಬರಬೇಕೆಂದು ಕಟ್ಟುನಿಟ್ಟಾಗಿ ಆಜ್ಞಾಪಿಸಿದರು.
ರಾಮಣ್ಣ ಶೆಟ್ಟರ ಹತ್ತಿರ ಒಂದು ಹಳೆಯ ಮಿಲಿಟ್ರಿ ಜೀಪಿತ್ತು. ಅದನ್ನವರು ತೀರಾ ಕಡಿಮೆ ಬೆಲೆಗೆ ಕೊಂಡುಕೊಂಡಿದ್ದರು. ಅದು ಟ್ರಾಕ್ಟರ್ನಷ್ಟೇ ವೇಗವಾಗಿ ಓಡುತ್ತಿತ್ತು. ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿತ್ತು. ಆಗೆಲ್ಲ ಅದನ್ನು ತಳ್ಳಿ ಸ್ಟಾರ್ಟ್ ಮಾಡಬೇಕಾಗುತ್ತಿತ್ತು. ಹೀಗಾಗಿ ಅದಕ್ಕೊಬ್ಬ ಡ್ರೈವರ್ನನ್ನೂ ಶೆಟ್ಟರು ನೇಮಿಸಿದ್ದರು. ಸುಬ್ಬಣ್ಣ ಶೆಟ್ಟಿ ಆ ಜೀಪಿನಲ್ಲಿ ತಿಂಗಳಿಗೊಮ್ಮೆ ಗೋಮಾಳಕ್ಕೆ ಹೋಗಿ ಬರಬೇಕಾಗಿತ್ತು. ಅವನ ಜೀವನದಲ್ಲಿ ಅತ್ಯಂತ ನಿಷ್ಪ್ರಯೋಜಕ ಕೆಲಸವೆಂದರೆ ಅದು ಎಂದು ಸುಬ್ಬಣ್ಣ ರೈ ಅಂದುಕೊಂಡಿದ್ದ. ಹತ್ತಾರು ಬಾರಿ ರಾಮಣ್ಣ ಶೆಟ್ಟರಿಂದ ಹೇಳಿಸಿಕೊಳ್ಳದೇ ಆತ ಅತ್ತ ಕಡೆ ತಲೆಹಾಕುತ್ತಿರಲಿಲ್ಲ. ಇಂಥ ಮಗನನ್ನು ಹೇಗಪ್ಪಾ ದಾರಿಗೆ ತರುವುದು ಎಂದು ಯೋಚಿಸುತ್ತಿದ್ದ ರಾಮಣ್ಣ ರೈಗಳಿಗೆ ಕತ್ತಲಕಾಡಿನ ನಡುವೆ ಬೆಳಕಿನ ಕೋಲಿನಂತೆ ಕಾಣಿಸಿದ್ದು ಸುಬ್ಬಣ್ಣ ಶೆಟ್ಟಿಯ ಬದಲಾದ ವರ್ತನೆ.
*****
ಸುಬ್ಬಣ್ಣ ಇದ್ದಕ್ಕಿದ್ದಂತೆ ತಿಂಗಳಿಗೆರಡು ಸಾರಿ ಗೋಮಾಳಕ್ಕೆ ಹೋಗಿಬರಲು ಆರಂಭಿಸಿದ್ದ. ಹೋದವನು ಒಂದೆರಡು ದಿನ ಅಲ್ಲೇ ಇದ್ದುಬಿಡುತ್ತಿದ್ದ. ವಾಪಸ್ಸು ಬರುವಾಗ ಮತ್ತಷ್ಟು ಉತ್ಸಾಹದಿಂದ ನಳನಳಿಸುತ್ತಿದ್ದ. ಅಂತೂ ಮಗನಿಗೆ ಹಳ್ಳಿಯ ಹುಚ್ಚು ಹತ್ತಿತು, ಇನ್ನು ಪರವಾಗಿಲ್ಲ ಅಂದುಕೊಂಡು ರಾಮಣ್ಣ ಶೆಟ್ಟರು ತಮ್ಮ ಮಗನ ಬದಲಾದ ವರ್ತನೆಯನ್ನು ಕಂಡಕಂಡವರ ಹತ್ತಿರ ಹೇಳಿಕೊಂಡು ಹೆಮ್ಮೆ ಪಟ್ಟುಕೊಂಡರು.
ಸುಬ್ಬಣ್ಣ ಬದಲಾದದ್ದಕ್ಕೆ ಕಾರಣವಿತ್ತು. ಗೋಮಾಳ ನೋಡಿಕೊಳ್ಳಲು ರಾಮಣ್ಣಶೆಟ್ಟರು ನೇಮಿಸಿದ ಕೊಲ್ಲಿ ಎಂಬ ಬುಡಕಟ್ಟು ಜನಾಂಗದ ವಯೋವೃದ್ದನಿಗೊಬ್ಬಳು ಸುಂದರಿ ಮಗಳಿದ್ದಳು. ಆ ಜನಾಂಗದ ಎಲ್ಲರಿಗಿಂತ ಒಂದು ಕೈ ಮಿಗಿಲು ಅನ್ನಿಸುವಷ್ಟು ಆಕೆ ಮೈಕೈ ತುಂಬಿಕೊಂಡು ಕಂಗೊಳಿಸುತ್ತಿದ್ದಳು. ಸುಬ್ಬಣ್ಣ ಶೆಟ್ಟಿ ಅವಳಿಗೆ ಮೈಮರೆತಿದ್ದ. ಕೊಲ್ಲಿಯನ್ನು ಯಾವುದೋ ಕೆಲಸಕ್ಕೆ ಕಳಿಸಿಯೋ, ಆಕೆಯನ್ನು ಜೀಪಿನಲ್ಲಿ ಕಾಡಿನ ಮತ್ತೊಂದು ಮೂಲೆಗೆ ಕರೆದೊಯ್ದೋ ಸುಬ್ಬಣ್ಣ ಆಕೆಯ ಜೊತೆ ಚಕ್ಕಂದವಾಡತೊಡಗಿದ್ದ. ಆಕೆಯೂ ಹಳ್ಳಿಯಿಂದ ಪಾರಾಗಿ ಪಟ್ಟಣ ಸೇರುವುದಕ್ಕೆ ಇದೊಂದು ಅಪೂರ್ವ ಅವಕಾಶ ಎಂದುಕೊಂಡು ಆತನನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಳು.
ಈ ಮಧ್ಯೆ ಮಗನ ಕಾಡಿನ ನಿಷ್ಠೆಯನ್ನು ಅಪಾರ್ಥ ಮಾಡಿಕೊಂಡ ಶೆಟ್ಟರು ಅವನಿಗೊಂದು ಮದುವೆ ಗೊತ್ತುಮಾಡಿದರು. ಸುಬ್ಬಣ್ಣ ಅದನ್ನೂ ವಿರೋಧಿಸಲಿಲ್ಲ. ಕಾಡಿನಲ್ಲೊಂದು ನಾಡಿನಲ್ಲೊಂದು ಹೆಣ್ಣು ಸಿಕ್ಕರೆ ತನ್ನ ವಂಚಿತ ನಗರಜೀವನದ ವೈವಿಧ್ಯಮಯ ಆಸೆಗಳನ್ನು ಪೂರೈಸಿಕೊಳ್ಳಬಹುದು ಎಂದು ಅವನಿಗೂ ಅನ್ನಿಸತೊಡಗಿತ್ತು. ಅದಕ್ಕೆ ತಕ್ಕಂತೆ ನಿರ್ವಿಘ್ನವಾಗಿ ಅವನ ಮದುವೆಯೂ ನಡೆದುಹೋಯಿತು. ತಿಂಗಳಿಗೆ ನಾಲ್ಕು ಬಾರಿ ಕೊಲ್ಲಿಯ ಮಗಳನ್ನು ಭೇಟಿಯಾಗುತ್ತಿದ್ದ ಸುಬ್ಬಣ್ಣ ಈಗೀಗ ತಿಂಗಳಿಗೆರಡು ಭೇಟಿಗೆ ತೃಪ್ತನಾದ.
ಈ ಮಧ್ಯೆ ಮತ್ತೊಂದು ಅನಾಹುತ ಸಂಭವಿಸಿತು. ಕೊಲ್ಲಿಯ ಮಗಳು ಗರ್ಭಿಣಿಯಾಗಿದ್ದಳು. ಅದನ್ನು ಕಂಡುಹಿಡಿದವಳು ಕೊಲ್ಲಿಯಲ್ಲ. ಅವನ ಹೆಂಡತಿ ಎಂದೋ ತೀರಿಕೊಂಡಿದ್ದಳು. ಆದರೆ ಆ ಮನೆಗೆ ಆಗಾಗ ಬಂದುಹೋಗುತ್ತಿದ್ದ ಪಕ್ಕದ ಹಾಡಿಯ ಕೊಲ್ಲಿಯ ಚಿಕ್ಕಮ್ಮ ಕೊಲ್ಲಿಗೆ ಈ ಆಘಾತಕಾರಿ ಸುದ್ದಿಯನ್ನು ತಿಳಿಸಿದಳು.
ಅವರ ಜನಾಂಗದಲ್ಲಿ ಅದು ಅಂಥ ಅಪರಾಧವೇನೂ ಆಗಿರಲಿಲ್ಲ. ಆದ್ದರಿಂದ ಕೊಲ್ಲಿ ಮಗಳನ್ನು ಗದರುವುದಕ್ಕೇನೂ ಹೋಗಲಿಲ್ಲ. ಬದಲಾಗಿ ಮಗಳನ್ನಿಟ್ಟುಕೊಂಡು ವ್ಯಾಪಾರ ಮಾಡಲು ನಿರ್ಧರಿಸಿದ. ಮುಂದಿನ ಸಾರಿ ಸುಬ್ಬಣ್ಣ ಶೆಟ್ಟಿ ಬಂದಾಗ ಏನು ಮಾಡಬೇಕೆಂದು ಮಗಳಿಗೆ ತಿಳಿಸಿಹೇಳಿದ.
ಮಗಳು ಅಪ್ಪನ ಮಾತನ್ನು ಮೀರಲಿಲ್ಲ. ಸುಬ್ಬಣ್ಣ ಶೆಟ್ಟಿಗೆ ತಾನು ಗರ್ಭಿಣಿಯಾದ ಸಂಗತಿಯನ್ನು ತಿಳಿಸಿದಳು. ತಮ್ಮ ಬುಡಕಟ್ಟಿನ ಸಂಪ್ರದಾಯದ ಪ್ರಕಾರ ತನ್ನನ್ನು ಕೂಡಿಕೆ ಮಾಡಿಕೊಳ್ಳಬೇಕೆಂದಳು. ಆವತ್ತು ಆಕೆಯಿಂದ ಅದು ಹೇಗೋ ತಪ್ಪಿಸಿಕೊಂಡು ಸುಬ್ಬಣ್ಣ ಶೆಟ್ಟಿ ಒಂದೇ ಉಸಿರಲ್ಲಿ ಸುಳ್ಯಕ್ಕೆ ಕಾಲುಕಿತ್ತ. ಮತ್ತೆಂದೂ ಗೋಮಾಳದ ಕಡೆಗೆ ತಲೆಹಾಕದಿರಲು ನಿರ್ಧರಿಸಿದ.
ರಾಮಣ್ಣ ಶೆಟ್ಟರಿಗೆ ಇದು ಮತ್ತೊಂದು ಸಮಸ್ಯೆಯಾಗಿ ಕಂಡಿತು. ಮದುವೆ ಮಾಡಿದ ತಕ್ಪಣ ಮಗ ಹೆಂಡತಿಯ ಗುಲಾಮನಾಗಿ ಕರ್ತವ್ಯವಿಮುಖನಾದ ಎಂದವರು ಭಾವಿಸಿದರು. ಮಗನನ್ನು ಮತ್ತೆ ಮತ್ತೆ ಮಾಳದ ಕಡೆ ಹೋಗುವಂತೆ ಒತ್ತಾಯಿಸಿದರು. ಅವನು ಹೋಗದಿದ್ದರೇ ತಾನೇ ಹೋಗುವುದಾಗಿ ಬೆದರಿಕೆ ಹಾಕಿದರು.
ಈ ಮಧ್ಯೆ ಇನ್ನೊಂದು ಅಪಾಯ ಎದುರಾಯಿತು. ಕೊಲ್ಲಿ ಮತ್ತು ಅವನ ಮಗಳು ಒಂದು ದಿನ ರಾಮಣ್ಣ ಶೆಟ್ಟರ ಮನೆಯಂಗಳದಲ್ಲಿ ಪ್ರತ್ಯಕ್ಪರಾದರು. ಆವತ್ತು ಅದೃಷ್ಟವಶಾತ್ ರಾಮಣ್ಣ ಶೆಟ್ಟರು ಮನೆಯಲ್ಲಿರಲಿಲ್ಲ. ಸುಬ್ಬಣ್ಣ ಶೆಟ್ಟಿಯ ಹೆಂಡತಿ ತವರಿಗೆ ಹೋಗಿದ್ದಳು. ತಕ್ಪಣ ಸುಬ್ಬಣ್ಣ ಶೆಟ್ಟಿ ಕೊಲ್ಲಿಯ ಕೈಗೊಂದಷ್ಟು ದುಡ್ಡು ತುರುಕಿ ಮುಂದಿನವಾರವೇ ಬಂದು ಮಗಳಿಗೊಂದು ಗತಿ ಕಾಣಿಸುವುದಾಗಿ ಹೇಳಿದ. ಇಷ್ಟು ದಪ್ಪ ಹೊಟ್ಟೆ ಹೊತ್ತುಕೊಂಡು ಅವನ ಕಣ್ಣಿಗೆ ಒಂದಿಡೀ ಸಮಸ್ಯೆಯಂತೆ ಕಾಣಿಸುತ್ತಿದ್ದ ಕೊಲ್ಲಿಯ ಮಗಳನ್ನೂ ಕರೆದು ಏನೋ ಉಸುರಿದ.
******
ಇದಾದ ಮೇಲೆ ಘಟನೆಗಳು ವೇಗವಾಗಿ ನಡೆದವು. ಒಂದು ವಾರದಲ್ಲಿ ಗೋಮಾಳಕ್ಕೆ ಬರುವುದಾಗಿ ಹೇಳಿದ ಸುಬ್ಬಣ್ಣ ರೈ ಮಾರನೇ ದಿನವೇ ಅಲ್ಲಿಗೆ ಜೀಪಿನಲ್ಲಿ ಹೋದ. ಅಲ್ಲಿ ಅಪ್ಪನಿಗೂ ಹೇಳದೇ ತನಗಾಗಿ ಕಾಯುತ್ತಾ ಕೂತಿದ್ದ ಕೊಲ್ಲಿಯ ಮಗಳನ್ನು ಜೀಪಿಗೆ ಹತ್ತಿಸಿಕೊಂಡು ಮರಳಿ ಬರುವ ದಾರಿಯಲ್ಲಿ ಅವಳ ಕತ್ತು ಹಿಸುಕಿ ಕೊಂದ. ಸುಬ್ಬಣ್ಣ ಶೆಟ್ಟಿಯೂ ಜೀಪು ಡ್ರೈವರ್ ಗುರುವಪ್ಪನೂ ಅವಳ ಹೆಣವನ್ನು ಹಾದಿಯಲ್ಲಿ ಸಿಗುವ ಕೆರೆಯೊಂದಕ್ಕೆ ಕಲ್ಲುಕಟ್ಟಿ ಎಸೆದರು.
ಇದಾದ ಒಂದು ವಾರದ ನಂತರ ಸುಬ್ಬಣ್ಣ ಶೆಟ್ಟಿ ಗೋಮಾಳಕ್ಕೆ ಹೋದ. ಮಗಳು ನಾಪತ್ತೆಯಾದ ದುಃಖದಲ್ಲಿ ಕೊಲ್ಲಿ ಕುಸಿದುಹೋಗಿದ್ದ. ಅವನಿಗೆ ಸುಬ್ಬಣ್ಣ ಶೆಟ್ಟಿಯ ಮೇಲೂ ಅನುಮಾನಗಳಿದ್ದವು. ಅದೇ ಅನುಮಾನ ಮತ್ತು ಸಿಟ್ಟಲ್ಲಿ ಆತ ಒಂದಷ್ಟು ಕೂಗಾಡಿದ. ರಾಮಣ್ಣ ರೈಯವರಿಗೆ ಇದನ್ನೆಲ್ಲ ತಿಳಿಸುವುದಾಗಿಯೂ ತನ್ನ ಮಗಳನ್ನು ಸುಬ್ಬಣ್ಣ ಶೆಟ್ಟಿಯೇ ಕಾಣೆಯಾಗಿಸಿದ್ದಾನೆಂದೂ ಅರಚಾಡಿದ. ಸುಬ್ಬಣ್ಣ ಶೆಟ್ಟಿ ಮತ್ತು ಡ್ರೈವರ್ ಸೇರಿ ಕೊಲ್ಲಿಯನ್ನು ಅವನ ಗುಡಿಸಲಲ್ಲೇ ಕೊಂದರು. ಅದು ಬೇಸಗೆಯ ಕಾಲವಾದ್ದರಿಂದ ಅವನ ಗುಡಿಸಲಿಗೆ ಬೆಂಕಿ ಹಚ್ಚಿದರು. ಕೊಲ್ಲಿಯ ಅರ್ಧಸುಟ್ಟು ಕರಕಲಾಗಿದ್ದ ಶವವನ್ನು ಮೂರು ದಿನಗಳ ನಂತರ ಅವನ ಬುಡಕಟ್ಟಿನ ಮಂದಿ ತಮ್ಮ ಶಾಸ್ತ್ರೋಕ್ತ ದಫನ್ ಮಾಡಿದರು.
ಒಂದು ಪ್ರೇಮ ಪ್ರಕರಣ ಎರಡು ಕೊಲೆಯಲ್ಲಿ ಅಂತ್ಯವಾಯಿತು.
******
ಇಲ್ಲಿಗೆ ಎಲ್ಲವೂ ಮುಗಿದುಹೋಗಬೇಕಾಗಿತ್ತು.
ಮತ್ತೆ ಆ ಪ್ರದೇಶಕ್ಕೆ ಸುಬ್ಬಣ್ಣ ಶೆಟ್ಟಿ ಕಾಲಿಡದೇ ಹೋಗಿದ್ದರೆ ಬಹುಶಃ ಮುಗಿಯುತ್ತಿತ್ತೋ ಏನೋ? ಎರಡು ಕೊಲೆಯಲ್ಲಿ ಭಾಗವಹಿಸಿದ್ದ, ಸುಬ್ಬಣ್ಣ ಶೆಟ್ಟಿಯ ಗುಟ್ಟುಗಳೆಲ್ಲ ಗೊತ್ತಿದ್ದ ಡ್ರೈವರ್ ಗುರುವಪ್ಪ ತನ್ನ ಜಾಣತನ ತೋರಿಸಲಿಕ್ಕೆ ಆರಂಭಿಸದೇ ಹೋಗಿದ್ದರೂ ಎಲ್ಲ ಮುಗಿಯುತ್ತಿತ್ತೋ ಏನೋ?
ಆದರೆ ಹಾಗಾಗಲಿಕ್ಕೆ ಇಬ್ಬರೂ ಬಿಡಲಿಲ್ಲ.
ಗುರುವಪ್ಪ ತಾನು ಬಾಯ್ಮುಚ್ಚಿಕೊಂಡಿರುವುದಕ್ಕಾಗಿ ಪ್ರತಿತಿಂಗಳೂ ಸಾವಿರ ರುಪಾಯಿಯನ್ನು ಸುಬ್ಬಣ್ಣ ಶೆಟ್ಟಿಯಿಂದ ಪೀಕಿಸತೊಡಗಿದ. ಅಷ್ಟೊಂದು ದುಡ್ಡನ್ನು ಅಪ್ಪನಿಂದ ಕೇಳುವುದು ಸಾಧ್ಯವಾಗದೇ ಸುಬ್ಬಣ್ಣ ನಾನಾ ಕಡೆ ಸಾಲ ಮಾಡಬೇಕಾಗಿ ಬಂತು. ಈ ಡ್ರೈವರ್ ಗುರುವಪ್ಪನನ್ನೂ ಮುಗಿಸಬೇಕು ಎಂದು ಆಗಾಗ ಆತನಿಗೆ ಅನ್ನಿಸಿತ್ತು. ಆದರೆ ತನಗಿಂತ ಬಲಾಢ್ಯನಂತೆ ಕಾಣುತ್ತಿದ್ದ ಆತನನ್ನು ಕೊಲ್ಲುವುದಕ್ಕೆ ಸುಬ್ಬಣ್ಣನಿಗೆ ಧೈರ್ಯ ಬಂದಿರಲಿಲ್ಲ.
ಈ ನಡುವೆ, ಕೊಲ್ಲಿಯ ಕೊಲೆ ನಡೆದು ಎಂಟು ತಿಂಗಳಾಗಿತ್ತು. ಸುಬ್ಬಣ್ಣ ಶೆಟ್ಟಿ, ತನ್ನ ಹೆಂಡತಿ ಮತ್ತು ಮೂರು ತಿಂಗಳ ಮಗುವಿನ ಜೊತೆ ಗೋಮಾಳಕ್ಕೆ ಹೋದ. ಅಲ್ಲಿ ಒಂದು ಪುಟ್ಟ ಮನೆ ಕಟ್ಟುವ ಯೋಚನೆಯೂ ಅವನಿಗೆ ಬಂದಿತ್ತು. ಒಂದಿಡೀ ದಿನ ಅಲ್ಲಿದ್ದು ಗೋಮಾಳದ ಅಂಚಲ್ಲಿ ಅಲೆದಾಡುತ್ತಾ ಗಂಡ, ಹೆಂಡತಿ ಮತ್ತು ಮಗು ವಾಪಸ್ಸು ಹೊರಡುವ ತಯಾರಿಯಲ್ಲಿದ್ದರು. ಯಥಾಪ್ರಕಾರ ಜೀಪು ಕೈಕೊಟ್ಟಿದೆಯೆಂದು ಗುರುವಪ್ಪು ರಿಪೇರಿಯಲ್ಲಿ ತೊಡಗಿಕೊಂಡಿದ್ದ. ಅದನ್ನು ಆಸಕ್ತಿಯಿಂದ ನೋಡುತ್ತಾ ಸುಬ್ಬಣ್ಣ ನಿಂತಿದ್ದ. ಹೆಂಡತಿ ಮತ್ತು ಮಗು ಅಲ್ಲೇ ಅಡ್ಡಾಡುತ್ತಾ ಅಟವಾಡುತ್ತಿದ್ದರು.
ಇದ್ದಕ್ಕಿದ್ದಂತೆ ಮಗು ಅಳತೊಡಗಿತು.
ಕಾಡಿನಲ್ಲಿ ಅಳಬಾರದು ಎನ್ನುವ ಮೂಲ ನಿಯಮ ಮಗುವಿಗಷ್ಟೇ ಅಲ್ಲ, ಸುಬ್ಬಣ್ಣನಿಗೂ ಗೊತ್ತಿರಲಿಲ್ಲ. ಅಳುವ ಮಗುವನ್ನು ಎತ್ತಿಕೊಳ್ಳಲೆಂದು ತಾಯಿ ಹತ್ತಿರ ಬರುತ್ತಿದ್ದಂತೆ ಸುಬ್ಬಣ್ಣ ತಿರುಗಿ ನೋಡಿದ. ಅವನು ಕಣ್ಮುಚ್ಚಿ ಕಣ್ತೆಗೆಯುವಷ್ಟರಲ್ಲಿ ಒಂದು ಆಕೃತಿ ಪೊದೆಯಿಂದ ಛಂಗನೆ ಜಿಗಿದು ಅವನ ಮಗುವನ್ನೂ ಹೆಂಡತಿಯನ್ನೂ ಬಾಯಲ್ಲಿ ಕಚ್ಚಿಕೊಂಡು ನೆಗೆದುಹೋಯಿತು. ಮರುಕ್ಪಣ ಅವನ ಹೆಂಡತಿ ಮತ್ತು ಮಗುವಿದ್ದ ಜಾಗದಲ್ಲಿ ಯಾರೂ ಇರಲಿಲ್ಲ. ಆತ ಗಾಬರಿಯಿಂದ ಥರ ಥರ ನಡುಗುತ್ತಾ ಹಾಹಾಕಾರ ಮಾಡುತ್ತಾ ಜೀಪನ್ನೂ ಅಲ್ಲೇ ಬಿಟ್ಟು ಡ್ರೈವರನ ಜೊತೆ ಪರಾರಿಯಾದ.
ಮಾರನೆಯ ದಿನ ರಾಮಣ್ಣ ಶೆಟ್ಟರೂ ಮಗನ ಮತ್ತು ಡ್ರೈವ್ ಜೊತೆ ಅಲ್ಲಿಗೆ ಆಗಮಿಸಿದರು. ಬುಡಕಟ್ಟು ಜನಾಂಗದವರ ಜೊತೆ ಸೇರಿ ಇಡೀ ಕಾಡನ್ನು ಜಾಲಾಡಿದರು. ಸೊಸೆಯ ಮೊಮ್ಮಗುವಿನ ಪತ್ತೆ ಹತ್ತಲಿಲ್ಲ. ಅವರು ನಿರಾಸೆಯಲ್ಲಿ ಹೊರಟು ಹೋದರು. ಸುಬ್ಬಣ್ಣ ಮತ್ತು ಡ್ರೈವರ್ ಅಲ್ಲೇ ಉಳಿದುಕೊಂಡರು.
ನಡುರಾತ್ರಿಯ ಹೊತ್ತಿಗೆ ಸುಬ್ಬಣ್ಣ ದೇಹಬಾಧೆ ತೀರಿಸಿಕೊಳ್ಳಲಿಕ್ಕೆ ಗುಡಿಸಲಿನಿಂದ ಹೊರಗೆ ಬಂದ. ಕುಳಿತುಕೊಂಡು ನಿದ್ದೆಗಣ್ಣಲ್ಲಿ ಉಚ್ಚೆಹೊಯ್ಯುತ್ತಿದ್ದವನಿಗೆ ತನ್ನಮುಂದೆ ಆಕೃತಿಯೊಂದು ನಿಂತದ್ದು ಕಾಣಿಸಿತಷ್ಟೇ. ಮರುಕ್ಪಣವೇ ಅದು ಭೀಕರವಾಗಿ ಗರ್ಜಿಸಿ ಸುಬ್ಬಣ್ಣನನ್ನು ಹೆಗಲಿಗೆ ಹಾಕಿಕೊಂಡು ಕಾಡಿನೊಳಗೆ ಓಡಿಹೋಯಿತು. ಆ ಗರ್ಜನೆಗೆ ಎದ್ದು ಕೂತ ಡ್ರೈವರ್ ಗುರುವಪ್ಪ ಉಟ್ಟಬಟ್ಟೆಯಲ್ಲೇ ಒಂದು ಎರಡು ಮಾಡಿಕೊಂಡು ಅದೇ ವಾಸಲೆಯಲ್ಲೇ ಗುಡಿಸಲಿನಿಂದ ಹೊರಬರಲಾಗದೆ ರಾತ್ರಿ ಬೆಳಗು ಮಾಡಿದ. ಬೆಳಗಾಗುತ್ತಲೇ ಭಯಗ್ರಸ್ತನಾಗಿ ಓಡಿ ಹೋಗಿ ಜೀಪು ಹತ್ತಿಕೊಂಡು ಶರವೇಗದಿಂದ ಸುಳ್ಯದ ಕಡೆ ಧಾವಿಸಿದ.
ಗುತ್ತಿಗಾರು ಸುಳ್ಯದ ರಸ್ತೆಯಲ್ಲಿ ಸಿಗುವ ಕೆರೆಯೊಂದರಲ್ಲಿ ಅವನ ಜೀಪು ಮುಕ್ಕಾಲು ಭಾಗ ಮುಳುಗಿದ್ದುದನ್ನು ಮೂರು ದಿನಗಳ ನಂತರ ಯಾರೋ ನೋಡಿ ರಾಮಣ್ಣ ಶೆಟ್ಟರಿಗೆ ವರದಿ ಮಾಡಿದರು. ಅವರು ಬಂದು ಜೀಪು ಎತ್ತಿಸುವ ಹೊತ್ತಿಗೆ ಗುರುವಪ್ಪನ ಶವವನ್ನು ಕೆರೆಯ ಮೀನುಗಳು ತಿಂದು ಮುಗಿಸಿದ್ದವು.
ಗುರುವಪ್ಪ ಜೀಪಿನೊಂದಿಗೆ ಬಿದ್ದು ಸತ್ತ ಕೆರೆಯೂ ಸುಬ್ಬಣ್ಣ ಮತ್ತು ಗುರುವಪ್ಪ ಸೇರಿ ಕೊಲ್ಲಿಯ ಮಗಳನ್ನು ಕಲ್ಲುಕಟ್ಟಿ ಎಸೆದ ಕೆರೆಯೂ ಒಂದೇ ಆಗಿದ್ದದ್ದು ಮಾತ್ರ ಕಾಕತಾಳೀಯ.
*****
ಆ ಪ್ರದೇಶದಲ್ಲಿ ಮತ್ತೆಂದೂ ಹುಲಿ ಕಾಣಿಸಿಕೊಂಡದ್ದನ್ನು ಯಾರೂ ಕಾಣಲಿಲ್ಲ. ಸತ್ತ ಕೊಲ್ಲಿಯೇ ದೆವ್ವವಾಗಿ ಹುಲಿಯ ರೂಪದಲ್ಲಿ ಬಂದು ಸೇಡು ತೀರಿಸಿಕೊಂಡ ಎಂದು ಅನೇಕರು ಮಾತಾಡಿಕೊಂಡರು. ಕ್ರಮೇಣ ಈ ಸುದ್ದಿ ರಾಮಣ್ಣ ಶೆಟ್ಟರ ಕಿವಿಗೂ ಬಿತ್ತು. ಇದ್ದೊಬ್ಬ ಮಗನನ್ನು ಕಳಕೊಂಡ ದುಃಖದಲ್ಲಿ ಶೆಟ್ಟರು ಐಹಿಕ ವ್ಯಾಪಾರಗಳಲ್ಲಿ ಆಸಕ್ತಿ ಕಳಕೊಂಡು ಕೃಶರಾಗುತ್ತಾ ಬಂದರು.
ಒಂದು ದಿನ ಇದ್ದಕ್ಕಿದ್ದಂತೆ ಕಾಣೆಯಾದರು. ಅವರನ್ನು ಹುಡುಕಿಕೊಂಡು ಬಂದವರಿಗೆ ಅವರ ಮನೆಯ ಅಂಗಳದಲ್ಲಿ ಹುಲಿಯ ಹೆಜ್ಜೆಗುರುತುಗಳು ಕಾಣಿಸಿದ್ದುವಂತೆ.
ಆ ಕಾಲದ ದಿನಪತ್ರಿಕೆಗಳಲ್ಲಿ ಸುಳ್ಯದ ಮಂದಿ ಒಂದುವಾರ ಕಾಲ ಹುಲಿಭೀತಿಯಿಂದಾಗಿ ಮನೆಯಿಂದ ಹೊರಗೆ ಬರದೇ ಕಾಲಕಳೆದ ಬಗ್ಗೆ ವರದಿ ಬಂದಿದ್ದನ್ನು ಈಗಲೂ ನೂರು ಸಮೀಪಿಸುತ್ತಿರುವ ಮಂದಿ ನೆನಪಿಸಿಕೊಳ್ಳುತ್ತಾರೆ.
Friday, April 27, 2007
Subscribe to:
Post Comments (Atom)
9 comments:
Odisikondu hoythu...
chennaagide.
Very interesting story, keep it up.
ಶೆಟ್ಟಿ, ರೈ mix-up ಕಡೆ ಸ್ವಲ್ಪ ಗಮನ ಕೊಡಿ.
Story kutoohalakaariyaagide.
ಗಿರೀಶ್ ಅವರೇ,
ದೆವ್ವದ ಕತೆಗಳ ತುಂಬಾ ಸ್ಟಾಕು ಇದೆ ನಿಮ್ಮ ಹತ್ತಿರ ಅನಿಸುತ್ತೆ !
ಯಡಕುಮೇರಿ ಮಾದೇವ, ಹೆಬ್ಬ್ರೆರಳ ದೆವ್ವ..ಈಗ ಹುಲಿ ದೆವ್ವ..
ಕತೆ ಚೆನ್ನಾಗಿ ಹೇಳಿದೀರಾ..
ನಮಸ್ಕಾರ,
ಎಷ್ಟೊಂದು ಭೂತದ ಕಥೆಗಳು !! ಚೆನ್ನಾಗಿವೆ...ಇಲ್ಲಿಗೆ ತಡವಾಗಿ ಬಂದೆ ನಾನು...
ಹುಲಿ ಬಂದು ಶಾನೆ ದಿನ ಆತು. ಓಡಿಸಿ ಹುಶ್...
Kolegalu matthu huligalu. Katheyannu innu belesuttha hogi. Yaru bekadaru belesali. ondu kandishannu- innu munde koleyagali, huli tinnuvudagali nadeyakudadu.
ಪ್ರೀತಿಯ ಜೋಗಿಯವರೇ,
ಇದೊಂದು ಅದ್ಬುತ ಕತೆ, ತುಂಬ ಚೊಲೋ ಅದಾರಿ.. ನಿಮ್ಮ ವುಹೆಗಳು ಹಾಗು ಯೋಚಿಸುವಾ ರಿತಿಗಳು ಮತ್ತು ತಾವು ಬರೆಯುವ ಶೈಲಿ ಬಹಾಲ ಚೊಲೋ ಅದಾರಿ.
ಪ್ರೀತಿಯಿಂದ
ಶಂಕರಾನಂದ ಹಿರೇಮಠ
Post a Comment