
ಬೆಳಿಗ್ಗೆ ಹೂವಿನ ಮೇಲೆ ಮಳೆ ಬಂತೆಂದರೆ ನಮಗೆ ಚಿಂತೆ
ಒಂದು ಕಾಲದಲ್ಲಿ ತರುಣರಿಗೆ ಕಾಫಿ ತೋಟದವರ ಅಳಿಯನಾಗುವುದೇ ಹೆಬ್ಬಯಕೆ. ಅಥವಾ ಇವರ ಮನೆಯಂಗಳದಲ್ಲಿ ಬೆಳೆದ ಮಗಳನ್ನು ಸೊಸೆ ಮಾಡಿಕೊಳ್ಳುವುದೆಂದರೆ ಬಯಲು ಸೀಮೆ ಕಡೆಯವರಿಗೆ ಹಿರಿಹಿರಿ ಹಿಗ್ಗು. ಈಗ ಸ್ವಲ್ಪ ಪರಿಸ್ಥಿತಿ ಬದಲಾಯಿಸಿದೆ. ಎಲ್ಲರ ಆರ್ಥಿಕ ಸ್ಥಿತಿ ಬದಲಿಸಿದಂತೆ. ಮುಳ್ಳಯ್ಯನ ಗಿರಿ ಚಂದ್ರದ್ರೋಣ ಪರ್ವತದ ತಪ್ಪಲಿನ (ಬಾಬಾ ಬುಡನ್ಗಿರಿ) ಕಡೆಯಿಂದಲೂ ಬೇಲೂರಿನ ಕಡೆಯಿಂದಲೂ ಮೂಡಿಗೆರೆಗೆ ಬಂದು ಹ್ಯಾಂಡ್ಪೋಸ್ಟ್ನಲ್ಲಿ ಹಾಯ್ದು ಕುದುರೆಮುಖ ತಲುಪುವವರೆಗೂ ಉದ್ದಕ್ಕೂ ಕಾಣಸಿಗುವುದು ಕಾಫಿತೋಟವೇ. ಸಾಮಾನ್ಯವಾಗಿ ಏಪ್ರಿಲ್ , ಮೇನಲ್ಲಿ ಹೂವಿನ ಮಳೆ ಆಗುತ್ತೆ.ಈ ಮಳೆ ತೋಟದ ಮಾಲೀಕನನ್ನು ಆಡಿಸುತ್ತೆ ಕುಣಿಸುತ್ತೆ. ಒಳ್ಳೆ ಮಳೆ ಅಂದರೆ ಅಂದಾಜು ಒಂದು ಇಂಚು ಮಳೆಯಾದರೆ ಹೂ ಚೆನ್ನಾಗಿ ಅರಳುವ ನಿರೀಕ್ಷೆ ಇದ್ದರೂ ಸಾಕು ಬ್ಯಾಂಕಿನ ಮುಂದೆ ಕ್ಯೂ ದೊಡ್ಡದಂತೆ, ಹೊಸ ಮಾಡಲ್ಕಾರು ಕೊಳ್ಳಲೋ ಬದಲಿಸಲೋ ಹವಣಿಕೆಯಲ್ಲಿರುತ್ತಾರೆ. ಎಲ್ಲರಿಗೂ ಗೊತ್ತಿರುವ ವಿಷಯ ಮದುವೆ ಮಾರ್ಕೆಟ್ಟೂ ಕುದುರುತ್ತೆಂದು. ರಸ್ತೆಯಲ್ಲಿ ಸಿಕ್ಕಿದವರೆಲ್ಲಾ ನಿಮಗೆಷ್ಟಾತು ಮಳೆಯೆಂದು ವಿಚಾರ ವಿನಿಮಯ ಮಾಡಿಕೊಳ್ಳುವವರೆ.ಈ ಹೂಮಳೆ ಬಂದು ಎಂಟು ಹತ್ತು ದಿನಗಳ ನಂತರ ಕಾಫಿ ಹೂ ಅರಳುತ್ತೆ. ಈಗ ನೋಡಿ ತೋಟದ ಗತ್ತೇ ಬೇರೆ. ಇದರ ಸೊಬಗು ಬಲು ಚೆಂದ. ಇಡೀ ನಾಡೇ ಸೊಬಗನ್ನು ಸೂಸುತ್ತಿರುತ್ತೆ. ಇದರ ಸುವಾಸನೆ ಹಿನ್ನೆಲೆ ತಂಬೂರಿ ಶ್ರುತಿಯಂತೆ ಎಲ್ಲೆಲ್ಲೂ ವಾತಾವರಣವೇ ಅದಾಗುತ್ತೆ. ಪಚೇಂದ್ರಿಯಕ್ಕೇ ಸಂತೋಷ ಕೊಡುತ್ತೆ. ಇದು ರಮಣೀಯ ದೃಶ್ಯ. ಕುವೆಂಪು ಅವರು ಹೇಳಿದಂತೆ ‘ಅದ್ಭುತ ! ಹೂವಿನ ಚೆಲುವನ್ನು ಕಣ್ಣು ನೋಡಿ ಪೂರೈಸಲಾಗುವುದಿಲ್ಲ. ಹೂವಿನ ಕಡಲಿನ ಮಧ್ಯೆ ತೇಲಾಡಿ ಆ ಸೌಂದರ್ಯದಲ್ಲಿ ಓಲಾಡಿ ಆ ವೈಭವವನ್ನು ಅನುಭವಿಸಿಯೇ ಸವಿಯಬೇಕು !’ ಕಾಫಿ ಹೂ ಅರಳಿದಾಗ ಮುಂಜಾನೆಯಲ್ಲಿ ಮಧು ಹೀರಲು ಬರುವ ಜೇನಿನ ಜೇಂಕಾರಕ್ಕೆ ಓಂಕಾರವಾಗಿ ಬೇರೊಂದು ಲೋಕವೇ ತೆರೆದುಕೊಳ್ಳುತ್ತೆ. ಜೇನು ಮುತ್ತುವುದು ಪರಾಗ ಸ್ಪರ್ಶಕ್ಕೆ ಅತಿಮುಖ್ಯವಾದದ್ದು.
ಈ ಸಮಯದಲ್ಲೇನಾದರೂ ಬೆಳಿಗ್ಗೆ ಹೂವಿನ ಮೇಲೆ ಮಳೆ ಬಂತೆಂದರೆ ನಮಗೆ ಚಿಂತೆ ಆವರಿಸುವುದೇ ಸೈ. ಆ ವರ್ಷದ ಇಳುವರಿ ಕಡಿಮೆಯಾಗುತ್ತೆನ್ನುವುದು ನಮ್ಮ ಅನುಭವವೇ ಆಗಿದೆ. ಈ ಹೂವಿನ ಜೇನು ತೆಳ್ಳಗೆ ನೀರಿನಂತೆ ಇರುತ್ತೆ. ಹೂವಿನ ಗಾಢ ಪರಿಮಳವೂ ಇರುತ್ತೆ. ತಿನ್ನಲು ನೆಕ್ಕಲು ಬಲು ರುಚಿ. ಬನ್ನಿ ಒಮ್ಮೆಯಾದರೂ ಅನುಭವಿಸಿ ಆನಂದಿಸಿರಿ ಈ ಅದ್ಭುತವನ್ನು.
4 comments:
ರಷೀದ್ ರ ಕೆಂಡಸಂಪಿಗೆ ನಿಜಕ್ಕೂ ಅದ್ಭುತವಾಗಿದೆ
ಏನ್ ಸಾರ್... ಕೆಂಡಸಂಪಿಗೆ ಅಂತೇಳಿ ಮೊಟ್ಟೆ ಸಂಪಿಗೆ ಫೋಟೋ ಹಾಕಿದೀರಾ? ಇಲ್ಲಿರೋದು ಬಿಳಿಯ ಉರುಟಾದ ಸಂಪಿಗೆ ಜಾತಿಯ, ಆದರೆ ಕೆಂಡಸಂಪಿಗೆಯ ವಾಸನೆ ಇಲ್ದಿರೋ ಮೊಟ್ಟೇಸಂಪಿಗೆ.... ನಮ್ಗೆ ಕೆಂಡಸಂಪಿಗೇನೇ ಬೇಕು. ಅದ್ರದ್ದೇ ಚಿತ್ರ ಹಾಕಿ ಸಾರ್
ಕೆಂಡ ಸಂಪಿಗೆ ಚಿತ್ರ ಎಲ್ಲಾರೂ ಸಿಕ್ಕರೆ ಕಳುಹಿಸಿಕೊಡಿ.
-ಜೋಗಿ
nangoo beku kalisi
rasheed
Post a Comment